ಶ್ರೀನಿವಾಸ ಪ್ರಭು ಅಂಕಣ: ಹರಡಿಕೊಂಡ  ʻನಾದಲೋಕ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 105

ಹೆಬ್ಬೂರಿನಿಂದ ಮರಳಿದ ಮೇಲೆ ಮರು ದಿನವೇ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡು ಹೋಗಿ ನಿರ್ದೇಶಕರಿಗೆ ನೀಡಿದೆ. ಪತ್ರವನ್ನೋದಿದ ನಿರ್ದೇಶಕ ಶ್ರೀನಿವಾಸ್ ಅವರು ವಿಶೇಷವಾಗಿ ಪ್ರತಿಕ್ರಿಯಿಸದೇ ಹೋದದ್ದು ಕೊಂಚ ಸೋಜಿಗವೆನ್ನಿಸಿತು. ಅದುವರೆಗೆ ವಿಷಯ ತಿಳಿದ ಬಹುತೇಕ ಗೆಳೆಯರು, “ಇನ್ನೊಮ್ಮೆ ಯೋಚನೆ ಮಾಡು… ದುಡುಕಬೇಡ… ಸರ್ಕಾರಿ ನೌಕರಿ… ಬೇಕೆಂದಾಗ ಸಿಗೋ  ಅಂಥದಲ್ಲ…” ಇತ್ಯಾದಿಯಾಗಿ ಸಲಹೆ ನೀಡಿದ್ದುಂಟು. ನಮ್ಮ ನಿರ್ದೇಶಕರು ಮಾತ್ರ ಬಲು ತಣ್ಣನೆಯ ಪ್ರತಿಕ್ರಿಯೆಯನ್ನು ನೀಡಿದಂತೆ ನನಗೆ ಭಾಸವಾಯಿತು. ನನ್ನ ಮೇಲೆ ಬಂದಿದ್ದ ಮೂಗರ್ಜಿಗಳನ್ನು ಅಗತ್ಯಕ್ಕಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿದರೋ…? ಅಥವಾ ರಾಜೀನಾಮೆ ನೀಡುವುದೇ ನನ್ನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೆಂದು ಅವರೂ ಭಾವಿಸಿದರೋ? ಕಾಣೆ…” ನಾಳೆಯೇ ದೆಹಲಿಗೆ ಕಳಿಸಿಬಿಡುತ್ತೇನೆ… ಸರಿಯೇ?” ಎಂದರು. “ಕಳಿಸಿಬಿಡಿ ಸರ್… ಮನಸ್ಸು ಬದಲಾಯಿಸೋ ಪ್ರಶ್ನೇನೇ ಇಲ್ಲ” ಎಂದು ಖಡಾಖಂಡಿತವಾಗಿ ನುಡಿದು ಅಲ್ಲಿಂದ ಹೊರಟುಬಿಟ್ಟೆ.

ಆಚೆ ಬಂದ ಕ್ಷಣದಿಂದಲೇ ಸಂಕೋಲೆಗಳನ್ನು ಕಳಚಿಕೊಂಡು ಬಿಡುಗಡೆ ಹೊಂದಿ ಬಂದಂತೆ ಅನ್ನಿಸತೊಡಗಿತು… ಇನ್ನು ಯಾವ ಮೇಲಧಿಕಾರಿಗೂ ಯಾವ ಉತ್ತರ – ಸಮಜಾಯಿಷಿಗಳನ್ನೂ ಕೊಡುವ ಅಗತ್ಯವಿಲ್ಲ! ನಾನೇ ನನ್ನ ಯಜಮಾನ! ಪಂಜರದೊಳಗಿನ ಸುರಕ್ಷತೆಗಿಂತ ಬಟಾಬಯಲಿನ ಅಭದ್ರತೆಯೇ ಹೆಚ್ಚು ಆಕರ್ಷಕ ಅನ್ನಿಸತೊಡಗಿತು! ಅದು 1997ನೇ ಇಸವಿ ಡಿಸೆಂಬರ್ ತಿಂಗಳ ಕೊನೆಯ ವಾರ ಎಂದು ಕಾಣುತ್ತದೆ… ಬಹುಶಃ ಹೊಸ ವರ್ಷದ ಆಗಮನದ ವೇಳೆಗೆ ನನ್ನ ಸ್ವಾತಂತ್ರ್ಯಕ್ಕೆ ಅಂಗೀಕಾರ ಮುದ್ರೆ ಬಿದ್ದು ದೆಹಲಿಯಿಂದ ಆದೇಶ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಅನಂತರ ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕು… ಧಾರಾವಾಹಿ – ಚಲನಚಿತ್ರಗಳಲ್ಲಿ ನಟನೆಯ ಅವಕಾಶಗಳಿಗೆ ಕೊರತೆ ಇರಲಾರದು ಎಂಬುದು ನನ್ನ ನಂಬಿಕೆಯಾಗಿತ್ತು. ಅಂದೇ ಸಂಜೆ ನನ್ನ ನಂಬಿಕೆ ಸುಳ್ಳಲ್ಲ ಎಂದು ನಿರೂಪಿಸುವಂತಹ ಸಂಗತಿ ನಡೆಯಿತು!

ಸಂಜೆ ಸುಮಾರು ಆರು ಗಂಟೆಯ ಸಮಯ… ನನ್ನ ಮೊಬೈಲ್ ರಿಂಗಣಿಸಿತು. ಆಗಷ್ಟೇ ಮೊಬೈಲ್ ಯುಗ ಆರಂಭವಾಗಿತ್ತು… ಮನೆಗಳಲ್ಲಿರುವ ಕಾರ್ಡ್‌ಲೆಸ್ ಫೋನ್‌ನಷ್ಟೇ ಗಾತ್ರವಿದ್ದ ಒಂದು ಮೊಬೈಲ್ ಅನ್ನು ಸಂವಹನಗಳಿಗೆ ಅನುಕೂಲವಾಗಲೆಂದು 5000 ರೂಪಾಯಿಗಳಿಗೆ ಮಿತ್ರರೊಬ್ಬರಿಂದ ಖರೀದಿಸಿದ್ದೆ. ಅಂದು ಸಂಜೆ ಫೋನ್ ಮಾಡಿದವರು ಒಬ್ಬ ಪ್ರೊಡಕ್ಷನ್ ಮ್ಯಾನೇಜರ್. ಹಾಗೆ ನೋಡಿದರೆ ಈ ಮ್ಯಾನೇಜರ್‌ಗಳ ಕರೆಗಾಗಿಯೇ ಕಲಾವಿದರು – ತಂತ್ರಜ್ಞರು ಕಾಯುವುದು ಎಂದರೂ ಅತಿಶಯೋಕ್ತಿಯಲ್ಲ! ನನಗೆ ಫೋನ್ ಮಾಡಿದ ಮ್ಯಾನೇಜರ್… ವಿಶ್ವ ಇರಬೇಕು ಅವರ ಹೆಸರು… ಹೀಗೆ ಕೇಳಿದರು: “ಸರ್ ನೀವು ಜಾಬ್ ಬಿಟ್ಟುಬಿಟ್ರಿ ಅಂತ ಕೇಳಿದೆ… ನಿಜಾನಾ?”. “ಹೌದು ಸರ್… ನೂರಕ್ಕೆ ನೂರು ಸತ್ಯ” ಎಂದೆ ನಾನು. “ಹಾಗಾದರೆ ಉದಯ ಟಿವಿಗೆ ಒಂದು ಪತ್ತೇದಾರಿ ಸೀರಿಯಲ್ ಮಾಡ್ತೀದೀವಿ… ಅದರಲ್ಲಿ ನೀವು ಇನ್‌ಸ್ಪೆಕ್ಟರ್‌ ಪಾತ್ರ ಮಾಡಬಹುದಾ ಸರ್?” ಎಂದರು ವಿಶ್ವ!

ಅರೆ! ಇದೇನಿದು! ಇನ್ನೂ ಅಧಿಕೃತವಾಗಿ ನಾನು ಬಿಡುಗಡೆಯ ಭಾಗ್ಯವನ್ನು ಹೊಂದಿಯೇ ಇಲ್ಲ… ಆಗಲೇ ಅವಕಾಶ ಅರಸಿಕೊಂಡು ಬಂದಿದೆ! ಬೇಡ ಅನ್ನುವುದುಂಟೆ? “ಖಂಡಿತ ಮಾಡ್ತೀನಿ ವಿಶ್ವ… ಶೂಟಿಂಗ್ ಯಾವತ್ತು?” ಎಂದೆ. “ನಾಳೇನೇ ನೀವು ಬೇಕು ಸರ್… ಆಗುತ್ತಾ?” ಎಂದ ವಿಶ್ವ. ನಾಳೆ! ಅಂದರೆ ರಾಜೀನಾಮೆಯ ಅಂಗೀಕಾರಕ್ಕೆ ಮೊದಲೇ ಹೊರಗಿನ ನಿರ್ಮಾಪಕರ ಧಾರಾವಾಹಿಯಲ್ಲಿ ಅಭಿನಯಿಸಬೇಕು… ಅದು ಒಂದೆರಡು ದಿನಗಳಲ್ಲಿಯೇ ಪ್ರಸಾರವೂ ಆಗಿಬಿಡುತ್ತದೆ… ಆಮೇಲೆ ಇನ್ನು ಏನು ಮಾಡಿದರೂ ನನ್ನ ನಿರ್ಧಾರವನ್ನು ನಾನು ಬದಲಿಸುವಂತೆಯೇ ಇಲ್ಲ! ʻನನ್ನ ರಾಜೀನಾಮೆ ಮರಳಿ ಪಡೆಯುತ್ತೇನೆ… ಕ್ಷಮಿಸಿ ಸಹಕರಿಸಿ” ಎಂದು ಮೇಲಧಿಕಾರಿಗಳನ್ನು ಕೇಳುವಂತೆಯೇ ಇಲ್ಲ! ಒಂದು ರೀತಿಯಲ್ಲಿ ಒಳ್ಳೆಯದೇ… “ಆಗಲಿ ವಿಶ್ವ… ನಾನು ನಾಳೆ ಚಿತ್ರೀಕರಣಕ್ಕೆ ಬರಲು ತಯಾರಿದ್ದೇನೆ” ಎಂದೆ! “ಫೈನ್ ಸರ್… ಇನ್ನೊಂದು ವಿಷಯ ಹೇಳಬೇಕು ನಿಮಗೆ… ಈ ಧಾರಾವಾಹಿಯ ನಿರ್ದೇಶಕರು ಜಗತ್ ಬಾಬು” ಎಂದ ವಿಶ್ವ! ಜಗತ್ ಬಾಬು! ಯಾರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ನನ್ನನ್ನು ಸಿಬಿಐ ಬಲೆಗೆ ಕೆಡವಲು ಯೋಜನೆ ಹಾಕಿದ್ದರೋ, ಆ ತಂಡದ ಒಬ್ಬ ಪ್ರಮುಖ ಸದಸ್ಯ ಜಗತ್ ಬಾಬು!

ಇದೆಂಥಾ ವಿಚಿತ್ರ ಸನ್ನಿವೇಶ! ಹೋಗಿ ಹೋಗಿ ನನ್ನ ಮೇಲೆ ಕತ್ತಿ ಮಸೆಯುತ್ತಿರುವ ಶತ್ರುಪಕ್ಷದವನ ಧಾರಾವಾಹಿಯಲ್ಲಿ ನಾನು  ಅಭಿನಯಿಸುವುದೇ! ಅಸಲಿಗೆ ಅವರಿಗೂ ನಾನು ಅಭಿನಯಿಸಲು ಒಪ್ಪುತ್ತೇನೆಂಬ ನಂಬಿಕೆ ಇರಲಿಲ್ಲ! ಜಗತ್ ಬಾಬುವಿಗೆ ನನ್ನ ಹೆಸರನ್ನು ವಿಶ್ವ ಸೂಚಿಸಿದಾಗ, “ಬಿಡಿ… ನಾನು ಡೈರೆಕ್ಟ್ ಮಾಡ್ತಿದೀನಿ ಅಂತ ಗೊತ್ತಾದ್ರೆ ಅವರು ಪಾರ್ಟ್ ಮಾಡೊಕೆ ಖಂಡಿತ ಒಪ್ಪೊಲ್ಲ ರೀ… ಬೇಕಾದ್ರೆ ಪ್ರಯತ್ನ ಪಟ್ಟು ನೋಡಿ” ಅಂತ ಜಗತ್ ಬಾಬುವೇ ಹೇಳಿದ್ದನೆಂದು ವಿಶ್ವ ಬಾಯಿಬಿಟ್ಟ. ನಾನು ಕೆಲಕ್ಷಣ ಯೋಚಿಸಿದೆ. ಅನಾಯಾಸವಾಗಿ ಹುಡುಕಿಕೊಂಡು ಬಂದಿರುವ ಮೊಟ್ಟಮೊದಲ ಅವಕಾಶವನ್ನು ತಿರಸ್ಕರಿಸುವುದು ಜಾಣತನವಲ್ಲ ಎಂದು ಒಳಮನಸ್ಸು ಹೇಳಿತು. ʻಇದು ಇನ್ನು ಮೇಲೆ ನನ್ನ ವೃತ್ತಿ; ನನ್ನ ಗಮನ ವೃತ್ತಿಬದುಕನ್ನು ಕಟ್ಟಿಕೊಳ್ಳುವುದರ ಮೇಲೆ ಹಾಗೂ ನಾನು ನಿರ್ವಹಿಸುವ ಪಾತ್ರದ ಮೇಲಷ್ಟೇ ಇರಬೇಕು; ಉಳಿದೆಲ್ಲ ವಿಚಾರಗಳೂ ಗೌಣʼ ಎಂದು ವಿವೇಕ ಹೇಳಿತು. “ತೊಂದರೆ ಇಲ್ಲ ವಿಶ್ವ… ಯಾರು ನಿರ್ದೇಶಕರಾದರೂ ನನಗೇನೂ ಬಾಧಕವಿಲ್ಲ… ನಾನು ಅಭಿನಯಿಸುತ್ತೇನೆ” ಎಂದು ಹೇಳಿಬಿಟ್ಟೆ!

ಬಹುಶಃ ವಿಶ್ವನಿಗೆ ಪೂರ್ವಕಥೆಯ ಪರಿಚಯ ಇದ್ದಿರಲಿಕ್ಕಿಲ್ಲ, ಮರುದಿನದ ಶೂಟಿಂಗ್ ವಿವರಗಳನ್ನು ನೀಡಿ ಸಂಭಾವನೆ ನಿಗದಿ ಮಾಡಿ ಫೋನ್ ಕೆಳಗಿಟ್ಟ. ಮರುದಿನ ಬೆಳಿಗ್ಗೆ ಬೇಗನೇ ಸಿದ್ಧವಾಗಿ ಬೈಕ್ ಹತ್ತಿ ಶೂಟಿಂಗ್‌ಗೆ ಹೊರಟೆ. ಹೊಸ ವೃತ್ತಿಯಲ್ಲಿ ಮೊದಲ ದಿನ… ಅದೂ ಶತ್ರುಪಾಳಯಕ್ಕೇ ಹೋಗುತ್ತಿದ್ದೇನೆ! ಹೇಗಿರುತ್ತದೋ ಅಲ್ಲಿಯ ವಾತಾವರಣ… ಯಾವ ಬಗೆಯ ಸ್ವಾಗತ ದೊರೆಯುತ್ತದೋ… ಹೀಗೆ ನೂರು ಯೋಚನೆಗಳು ದಾರಿಯುದ್ದಕ್ಕೂ ಕಾಡುತ್ತಿದ್ದವು. ನಾನು ದಾರಿಯಲ್ಲಿರುವಾಗಲೇ ಮೂರು ಬಾರಿ ಫೋನ್ ಮಾಡಿ ʻಬರುತ್ತಿದ್ದೀರಿ ತಾನೇ?ʼ ಎಂದು ಆತಂಕದಿಂದಲೇ ವಿಚಾರಿಸಿಕೊಂಡಿದ್ದ ವಿಶ್ವ! ಸಣ್ಣದಾಗಿ ಸೇಡು ತೀರಿಸಿಕೊಳ್ಳಲು ಶೂಟಿಂಗ್‌ಗೆ ಬರದೇ ಕೈಕೊಟ್ಟುಬಿಟ್ಟರೆ ಎಂಬ ಭಯ ಜಗತ್ ಬಾಬುವನ್ನು ಕಾಡುತ್ತಿದ್ದಿರಲೂ ಬಹುದು! ನಾನು ಶೂಟಿಂಗ್ ಜಾಗ ತಲುಪಿದಾಗ ʻಸದ್ಯ ಬಂದರಲ್ಲಾʼ ಎಂದು ಅವರು ಸಮಾಧಾನದ ನಿಟ್ಟುಸಿರು ಬಿಟ್ಟದ್ದು ಕೊಂಚ ಜೋರಾಗಿಯೇ ಕೇಳಿಸಿತು! ಹೋದಾಗ ಒಮ್ಮೆ ಸ್ವಾಗತಿಸಿ ಔಪಚಾರಿಕವಾಗಿ ಎರಡು ಮಾತಾಡಿದ್ದು ಬಿಟ್ಟರೆ, ಚಿತ್ರೀಕರಣದ ಬಹ್ವಂಶ ಜಗತ್ ಬಾಬು ನನಗೆ ಮುಖಾಮುಖಿಯಾಗಲೇ ಇಲ್ಲ. ಅವನ ಸಹಾಯಕರ ಮುಖಾಂತರವೇ ಅಗತ್ಯ ಸೂಚನೆ – ಸಲಹೆಗಳನ್ನು ರವಾನಿಸುತ್ತಿದ್ದ. ಅಂತೂ ಯಾವ ಅನಿರೀಕ್ಷಿತ ನಾಟಕೀಯ ಘಟನೆಗಳೂ ನಡೆಯದೆ ಎರಡು ದಿನಗಳ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿತು.

ಹೀಗೆ ವಿಧ್ಯುಕ್ತ ರಾಜೀನಾಮೆಯ ಮುನ್ನವೇ ನನ್ನ ನಟನಾವೃತ್ತಿಯ ಬದುಕು ಸಾಪ್ತಾಹಿಕ ಪತ್ತೇದಾರಿ ಧಾರಾವಾಹಿಯಿಂದ  ಆರಂಭವಾಗಿಯೇಬಿಟ್ಟಿತು! 1998ನೇ ಇಸವಿ, ಒಂದನೆಯ ತಾರೀಕು ಗುರುವಾರ, ʻಅಂದಿನಿಂದಲೇ ನನ್ನ ರಾಜೀನಾಮೆ ಅಂಗೀಕೃತವಾಗಿದೆʼಯೆಂದು ದೆಹಲಿ ದೊರೆಗಳು ಸಂದೇಶ ಕಳಿಸಿದರು. ಅಂದೇ ನಾನು ಅಭಿನಯಿಸಿದ ಧಾರಾವಾಹಿಯ ಕಂತು ಕೂಡಾ ಪ್ರಸಾರವಾದದ್ದು ಮತ್ತೊಂದು ಕಾಕತಾಳೀಯವೇ ಸರಿ!

ದೂರದರ್ಶನವನ್ನು ಬಿಡುವ ಕೆಲದಿನಗಳ ಮೊದಲು ಒಂದು ದಿನ ನನ್ನ ಸಹೋದ್ಯೋಗಿಯಾಗಿದ್ದ ಲಲಿತಾ ಅವರು ನನ್ನ ಬಳಿ ಬಂದು, “ಪ್ರಭು ಅವರೇ, ನಿಮ್ಮ ಹತ್ರ ಒಂದು ವಿಷಯ ಮಾತಾಡಬೇಕಿತ್ತು” ಅಂದರು. ನಾನು ರಾಜೀನಾಮೆ ನೀಡುತ್ತಿರುವ ವಿಷಯ ತಿಳಿದು ಆ ಕುರಿತು ತಮ್ಮ ಸಲಹೆ ನೀಡಲು ಬಂದಿದ್ದಾರೇನೋ ಎಂದು ಮನಸ್ಸಿನಲ್ಲೇ ಅಂದುಕೊಂಡು ʻಹೇಳಿ ಲಲಿತಾʼ ಎಂದೆ. ನನ್ನ ನಿರೀಕ್ಷೆ – ಊಹೆ ಸಂಪೂರ್ಣ ತಪ್ಪಾಗಿತ್ತು! ʻನೀವು ಶ್ಯಾಮಲಾ ಭಾವೆ ಅವರ ಹೆಸರು ಕೇಳಿದಿರಾ ಪ್ರಭು?ʼ ಎಂದರು ಲಲಿತಾ. “ಓಹೋ! ಬರೀ ಹೆಸರಷ್ಟೇ ಅಲ್ಲ, ಅವರ ಅನೇಕ ಹಾಡುಗಳನ್ನೂ ಕೇಳಿ ಸಂತೋಷ ಪಟ್ಟಿದ್ದೇನೆ! ಹೇಳಿ ಏನು ವಿಷಯ?” ಎಂದೆ ನಾನು.

“ಶ್ಯಾಮಲಾ ದೀದಿ ಈಗ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷರಾಗಿದಾರೆ… ಅವರು ಸಂಗೀತಕ್ಕೆ ಸಂಬಂಧಪಟ್ಟ ಹಾಗೆ ಒಂದು ಸೀರಿಯಲ್ ಅನ್ನು ದೂರದರ್ಶನಕ್ಕಾಗಿ ಮಾಡಬೇಕು ಅಂತಿದ್ದಾರೆ. ನೀವು ತಾಂತ್ರಿಕ ನಿರ್ದೇಶಕರಾಗಿ ಅವರಿಗೆ ಸಹಾಯ ಮಾಡೋದಕ್ಕಾಗುತ್ತಾ? ನೀವು ಕೆಲಸ ಬಿಡ್ತಿದೀರಿ ಅಂತ ಗೊತ್ತಾಯ್ತು… ಅದಕ್ಕೇ ಈಗಾಗಲೇ ನಿಮ್ಮ ಬಗ್ಗೆ ಅವರಿಗೆ ತಿಳಿಸಿದ್ದೇನೆ. ನಿಮಗೆ ಒಪ್ಪಿಗೆ ಇದ್ದರೆ ಇವತ್ತೇ ಹೋಗಿ ಮಾತಾಡಿಕೊಂಡು ಬರಬಹುದು. ಇಲ್ಲೇ – ಶೇಷಾದ್ರಿಪುರಂ ನೆಹರು ಸರ್ಕಲ್‌ನಲ್ಲಿ ಅವರ ಸರಸ್ವತಿ ಸಂಗೀತ ವಿದ್ಯಾಲಯ ಇರೋದು” ಎಂದರು ಲಲಿತಾ. “ಖಂಡಿತ ಈ project ಮಾಡಿಕೊಡ್ತೀನಿ ಲಲಿತಾ… ನನಗೂ ಸಂಗೀತದಲ್ಲಿ ವಿಪರೀತ ಆಸಕ್ತಿ… ಇಂಥ ಸುವರ್ಣಾವಕಾಶ ನನ್ನ ಪಾಲಿಗೆ ಒದಗಿ ಬಂದಿರೋದು ನನ್ನ ಅದೃಷ್ಟˌ… ನನ್ನ ಹೆಸರನ್ನ ಅವರಿಗೆ ಸೂಚಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು” ಎಂದು ಲಲಿತಾ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿ ಅಲ್ಲಿಂದ ಹೊರಟೆ.

ವಾಸ್ತವವಾಗಿ ನನಗೆ ಎಳಮೆಯಿಂದಲೂ ಸಂಗೀತವೆಂದರೆ ಹುಚ್ಚು! ಕ್ರಮಬದ್ಧವಾಗಿ ಸಂಗೀತಾಭ್ಯಾಸ ಮಾಡಬೇಕೆಂದು ಹಲವಾರು ಸಲ ಅಂದುಕೊಂಡಿದ್ದರೂ ಏನೇನೋ ಕಾರಣಗಳಿಂದಾಗಿ ಆಸೆ ಕೈಗೂಡಿರಲಿಲ್ಲ. ರಂಜನಿಗೂ ಸಂಗೀತದಲ್ಲಿ ತುಂಬಾ ಆಸಕ್ತಿ ಇದ್ದುದಷ್ಟೇ ಅಲ್ಲ, ಸೀನಿಯರ್ ಹಂತದವರೆಗೆ ವೀಣೆಯನ್ನೂ ಕಲಿತಿದ್ದಳು. ನಾವಿಬ್ಬರೂ ಶಾಸ್ತ್ರೀಯ ಸಂಗೀತವನ್ನು ಕಲಿಯಬೇಕೆಂದು ಹಂಬಲಿಸಿ ಗುರುಗಳ ಬಳಿ ಪಾಠಕ್ಕೆ ಸೇರಿದ್ದೂ ಉಂಟು. ರಾಜಾಜಿನಗರದಲ್ಲಿ ಮಾವನವರ ಮನೆಯ ಸಮೀಪವೇ ಇದ್ದ ಬೆಳಕವಾಡಿ ಅಯ್ಯಂಗಾರ್ (ಆಕಾಶವಾಣಿ ಕಲಾವಿದೆ ಬಿ.ಆರ್. ಗೀತಾ ಅವರ ತಂದೆ) ನಮ್ಮ ಪ್ರಥಮ ಸಂಗೀತದ ಗುರುಗಳು. ಆದರೆ ಪ್ರಾಥಮಿಕ ಹಂತದ ಪಾಠಗಳು ಮುಗಿಯುವ ವೇಳೆಗೆ ಅವರು ಮನೆ ಬದಲಿಸಿ ದೂರ ಹೊರಟುಹೋದದ್ದರಿಂದ ಪಾಠ ಅರ್ಧಕ್ಕೇ ನಿಂತು ಹೋಯಿತು. ಹೀಗೇ ಇನ್ನೂ ಒಂದೆರಡು ಅನುಭವಗಳಾಗಿ ನಿರಾಶರಾಗಿ ಸಂಗೀತ ಕಲೆ ನಮಗೆ ಪ್ರಾಪ್ತಿಯಿಲ್ಲ ಎಂದುಕೊಂಡು ತೆಪ್ಪಗಾಗಿಬಿಟ್ಟಿದ್ದೆವು. ಈಗ ಲಲಿತಾ ಅವರ ಮುಖೇನ ಶ್ಯಾಮಲಾ ಭಾವೆ ಅವರ ಪರಿಚಯವಾಗುತ್ತಿದೆ… ಉಭಯ ಗಾನ ವಿದುಷಿ ಬಿರುದಾಂಕಿತರಾದ ಪ್ರಸಿದ್ಧ ಗಾಯಕಿ ಶ್ಯಾಮಲಾ ಭಾವೆ ಅವರೇ ಒಂದು ವೇಳೆ ನಮಗೆ ಗುರುಗಳಾಗಲು ಒಪ್ಪಿಕೊಂಡುಬಿಟ್ಟರೆ! ಈ ಒಂದು ಆಲೋಚನೆಯೇ ನನಗೆ  ರೋಮಾಂಚನವನ್ನುಂಟು ಮಾಡಿಬಿಟ್ಟಿತು!

ಅಂದೇ ಮಧ್ಯಾಹ್ನ ಸರಸ್ವತಿ ಸಂಗೀತ ವಿದ್ಯಾಲಯಕ್ಕೆ ಹೋಗಿ ಶ್ಯಾಮಲಾ ಭಾವೆಯವರನ್ನು ಭೇಟಿಯಾದೆ. ಮನೆಗೆ ಹೊಂದಿಕೊಂಡೇ ಹೊರಭಾಗಕ್ಕೆ ಇದ್ದ ಒಂದು ದೊಡ್ಡ ಹಜಾರ… ಅಲ್ಲಿ ಮಧ್ಯಭಾಗದಲ್ಲಿ ಸರಸ್ವತಿಯ ಶ್ವೇತವರ್ಣದ ಅಪೂರ್ವ ವಿಗ್ರಹ.. .ಒಂದು ಬದಿಗೆ ಪುಟ್ಟ ಕುರ್ಚಿ… ಅದರ ಮುಂದೆ ಪುಟ್ಟ ಪೀಠದ ಮೇಲೊಂದು ಪುಟ್ಟ ಹಾರ್ಮೋನಿಯಂ… ಕೋಣೆಯ ತುಂಬಾ ಒಪ್ಪವಾಗಿ ಜೋಡಿಸಿಟ್ಟ ವಿವಿಧ ವಾದ್ಯಗಳು… ಅನೇಕಾನೇಕ ಪ್ರಶಸ್ತಿ ಫಲಕಗಳು… ಸ್ಮರಣಿಕೆಗಳು… ಕಲಾಕೃತಿಗಳಂತೆಯೇ ಭಾಸವಾಗುತ್ತಿದ್ದ ಕೆತ್ತನೆಯ ಆಸನಗಳು… ಅದೊಂದು ಅಪೂರ್ವ ಸಂಗ್ರಹಾಲಯದಂತೆ, ಒಂದು ಪುಟ್ಟ ಗುಡಿಯಂತೆ ಭಾಸವಾಗುತ್ತಿತ್ತಲ್ಲದೆ ಮೈಮನಗಳನ್ನು ಅರಳಿಸಿ ಶಾಂತಗೊಳಿಸುವ ಧನಾತ್ಮಕ ಭಾವಲಹರಿಯೇ ಅಲ್ಲಿ ಝೇಂಕರಿಸುತ್ತಿತ್ತು. ಅಲ್ಲಿ ಕುಳಿತು ಆ ಸೊಬಗನ್ನು ಕಣ್ಮನ ತುಂಬಿಕೊಳ್ಳುತ್ತಿದ್ದಂತೆಯೇ ಶ್ಯಾಮಲಾ ಭಾವೆಯವರು ಕೋಣೆಯೊಳ ಬಂದರು. ಜೊತೆಯಲ್ಲಿ ಪರಮಾಪ್ತ ಶಿಷ್ಯ ವಾಗೀಶ್ ಭಟ್ ಹಾಗೂ ನಿರಂತರ ರಕ್ಷಾಕವಚ ಸ್ವಾಮಿ ಅಣ್ಣ! ಎದ್ದು ಸಂಗೀತ ಸರಸ್ವತಿಗೆ ನಮಸ್ಕರಿಸಿ”, ನಾನು ಶ್ರೀನಿವಾಸಪ್ರಭು ಅಂತ. ದೂರದರ್ಶನ ಕೇಂದ್ರದ ಲಲಿತಾ ಅವರು ನಿಮ್ಮನ್ನ ಭೇಟಿ ಮಾಡೋದಕ್ಕೆ ಹೇಳಿದರು ಮೇಡಂ” ಎಂದೆ. “ಭಾಳ ಸಂತೋಷಾಪ್ಪಾ… ಒಂದು ಮಾತು ಮೊದಲೇ ಹೇಳಿಬಿಡ್ತೀನಿ… ಇಲ್ಲಿಗೆ ಬರೋರೆಲ್ಲರೂ ನನ್ನನ್ನ ʻಅಕ್ಕʼ ಅಂತಾನೋ, ʻದೀದೀʼ ಅಂತಾನೋ ಕರೀತಾರೆ… ಆಯ್ಕೆ ನಿಮ್ಮದು” ಎಂದು ಆತ್ಮೀಯವಾಗಿ ನುಡಿದರು. ಆ ಆಪ್ತತೆಗೆ ವಾತ್ಸಲ್ಯಕ್ಕೆ ಮಾರುಹೋದ ನಾನು, “ಆಗಲಿ ಅಕ್ಕಾ” ಎಂದೆ. ಅದು ಆ ಅಕ್ಕನೊಂದಿಗಿನ ಪ್ರಪ್ರಥಮ ಭೇಟಿ… ಮುಂದಿನ ಎರಡು ದಶಕಗಳ ನಮ್ಮ  ಮಧುರ ಬಾಂಧವ್ಯದ ಮುನ್ನುಡಿ! ತಾವು ಮಾಡಬೇಕೆಂದುಕೊಂಡಿದ್ದ ಕಾರ್ಯಕ್ರಮದ ರೂಪುರೇಷೆಗಳೆಲ್ಲವನ್ನೂ ಶ್ಯಾಮಲಕ್ಕ ಹಂತಹಂತವಾಗಿ ವಿವರಿಸಿದರು.

ಸಂಗೀತದ ಪ್ರಾಥಮಿಕ ಹಂತದಿಂದ ಮೊದಲುಗೊಂಡು ಪ್ರೌಢ ಹಂತದವರೆಗಿನ ಎಲ್ಲಾ ಸಂಗತಿಗಳನ್ನೂ ಗುರುಮುಖೇನ ಶಿಷ್ಯರಿಗೆ ಕಲಿಸುವ ಒಂದು ವಿನ್ಯಾಸದಲ್ಲಿ ಕಾರ್ಯಕ್ರಮ ಮಾಲಿಕೆಯನ್ನು ರೂಪಿಸುವುದು ಅವರ ಯೋಜನೆಯಾಗಿತ್ತು. ಇದರ ಜೊತೆಗೆ ವಿವಿಧ ರಾಗಗಳನ್ನೂ ಅವುಗಳ ಗುಣ ವಿಶೇಷ, ವೈಶಿಷ್ಟ್ಯಗಳನ್ನೂ ಪರಿಚಯಿಸುತ್ತಾ ಆಯಾ ರಾಗದ ಒಂದೊಂದು ಕೃತಿಯನ್ನೂ ಪ್ರಸ್ತುತಪಡಿಸುವುದು ಮಾಲಿಕೆಯ ಇನ್ನೊಂದು ಹಂತವಾಗಿತ್ತು. ಎಲ್ಲವನ್ನೂ ಕಾರ್ಯಗತಗೊಳಿಸುವ ಕುರಿತಾಗಿ ಸುದೀರ್ಘವಾಗಿ ಚರ್ಚಿಸಿ ಕಾರ್ಯಕ್ರಮದ ಒಂದು ನೀಲಿನಕ್ಷೆಯನ್ನು ಸಿದ್ಧಪಡಿಸಿದೆವು. ಮಾಲಿಕೆಗೆ ಏನೆಂದು ಹೆಸರಿಡುವುದು? ಎಂದು ಯೋಚಿಸುತ್ತಿದ್ದಾಗಲೇ ಥಟ್ಟನೆ ʻನಾದಲೋಕʼ ಎಂಬ ಹೆಸರು ನನ್ನ ಮನಸ್ಸಿಗೆ ನುಗ್ಗಿಬಂತು… ಅಷ್ಟೇ ಅಲ್ಲ, ಎಲ್ಲರ ಅನುಮೋದನೆಯನ್ನೂ ಪಡೆದುಕೊಂಡುಬಿಟ್ಟಿತು ಕೂಡಾ! ಮುಂದಿನ ವಾರದಿಂದಲೇ ಚಿತ್ರೀಕರಣ ನಡೆಸುವುದೆಂದು ತೀರ್ಮಾನವೂ ಆಗಿಹೋಯಿತು. ಅಲ್ಲಿಂದ ಹೊರಡುವ ಮುನ್ನ ಮೆಲ್ಲಗೆ, “ಅಕ್ಕಾ, ನಿಮ್ಮನ್ನೊಂದು ಮಾತು ಕೇಳಲೇ?” ಎಂದೆ. “ಅಯ್ಯೋ ಕೇಳೀಪ್ಪಾ… ಸಂಕೋಚ ಬೇಡ” ಅಂದರು ಅಕ್ಕ. “ನಾವೂ ನಿಮ್ಮ ಬಳಿ ಸಂಗೀತ ಕಲಿಯೋದಕ್ಕೆ ಸೇರಬಹುದೇ?” ಎಂದು ನಾನು ಮುಗಿಸುವುದಕ್ಕೂ ಮುನ್ನವೇ ಅಕ್ಕ, “ಇದನ್ನ ಕೇಳೋದಕ್ಕೆ ಇಷ್ಟು ಸಂಕೋಚವೇ! ನನ್ನ ಜನ್ಮವಾಗಿರೋದೇ ಸಂಗೀತ ಕಲಿಸೋಕೆ! ಈಗಲೇ ತಂಬೂರಿ ಮೀಟ್ತೀರೇನು?” ಎಂದರು ಅಕ್ಕ! “ಅಯ್ಯಯ್ಯೋ! ಇವತ್ತು ಬೇಡ ಅಕ್ಕಾ, ನನ್ನ ಹೆಂಡತೀಗೂ ಸಂಗೀತದಲ್ಲಿ ತುಂಬಾ ಆಸಕ್ತಿ… ಇಬ್ರೂ ನಾಳೇಂದ ಬರ್ತೀವಿ” ಎಂದು ನುಡಿದು ಅಕ್ಕನಿಗೆ ನಮಸ್ಕರಿಸಿ ಅಲ್ಲಿಂದ ಹೊರಟೆ .ಈ ಅಕ್ಕನೊಂದಿಗಿನದು ಕೇವಲ ಒಂದು ದಿನದ ಪರಿಚಯ ಎಂದು ಕ್ಷಣದಮಟ್ಟಿಗೂ ಅನ್ನಿಸಲಿಲ್ಲ! ಎಷ್ಟೋ ದಿನಗಳಿಂದ… ವರ್ಷಗಳಿಂದ ಅವರನ್ನು ಬಲ್ಲೆನೆಂಬಂತಹ ಭಾವ!

ಮನೆಗೆ ಹೋದವನೇ ರಂಜನಿಯನ್ನು  ಕರೆದು, “ನಿನಗೊಂದು ಭಾರೀ ಒಳ್ಳೇ ಸುದ್ದಿ ಕೊಡಬೇಕು” ಎಂದು ಸಂಭ್ರಮದಿಂದ ಕೂಗಿದೆ. “ಏನ್ರೀ ಅದು”? ಎಂದು ಕುತೂಹಲದಿಂದ ರಂಜನಿ ಕೇಳಿದಳು. “ನಾಳೆಯಿಂದ ನಾವು ಮತ್ತೆ ಸಂಗೀತದ ವಿದ್ಯಾರ್ಥಿಗಳು! ಈ ಸಲ ನಮ್ಮ ಗುರು ಯಾರು ಗೊತ್ತಾ? ವಿಶ್ವವಿಖ್ಯಾತ ಗಾಯಕಿ  ಉಭಯಗಾನ ವಿದುಷಿ ಶ್ಯಾಮಲಾ ಭಾವೆ!” ಎಂದಾಗ ರಂಜನಿ ಖುಷಿಯಿಂದ ಕುಣಿಯುವುದೊಂದೇ ಬಾಕಿ! ಮರುದಿನದಿಂದಲೇ ಶ್ಯಾಮಲಕ್ಕನಲ್ಲಿ ನಮ್ಮ ಶಿಷ್ಯವೃತ್ತಿ ಆರಂಭವಾಗಿಯೇ ಹೋಯಿತು!

ಒಂದು ಕಡೆ ಸಂಗೀತಾಭ್ಯಾಸ… ಮತ್ತೊಂದು ಕಡೆ ʻನಾದಲೋಕʼ ಧಾರಾವಾಹಿಯ ಚಿತ್ರೀಕರಣ… ಮಗುದೊಂದೆಡೆ ಮನೆಯಲ್ಲಿ ಪುಟಾಣಿಗಳ ಲಾಲನೆ ಪಾಲನೆ… ಹೀಗೆ ದೂರದರ್ಶನದ ಕೆಲಸ ಬಿಟ್ಟ ನಂತರದ ದಿನಗಳು ಆನಂದದಿಂದಲೇ ಉರುಳುತ್ತಿದ್ದವು. ಒಮ್ಮೆ ನಿಸರ್ಗದ ನಡುವೆ ಶ್ಯಾಮಲಕ್ಕನ ರಾಗಾಲಾಪನೆಯ ದೃಶ್ಯಗಳನ್ನು ಚಿತ್ರೀಕರಿಸುವ ವಿಚಾರ ತಲೆಗೆ ಹೊಕ್ಕಿಬಿಟ್ಟಿತು! ಸರಿ, ಒಂದು ಪುಟ್ಟ ವ್ಯಾನ್ ಮಾಡಿಕೊಂಡು ನಾನು, ಶ್ಯಾಮಲಕ್ಕ, ವಾಗೀಶ್ ಭಟ್ ಹಾಗೂ ಸ್ವಾಮಿ ಅಣ್ಣ ತಾಂತ್ರಿಕ ತಂಡದೊಂದಿಗೆ ಹೊರಟೇಬಿಟ್ಟೆವು! ಮಂಗಳೂರಿನ ಗುಂಟ ದಾರಿಯುದ್ದಕ್ಕೂ ಹೊಳೆ – ತೊರೆಗಳ ದಡದಲ್ಲಿ, ದಟ್ಟಕಾಡಿನ ಸೆರಗಿನಲ್ಲಿ ಅಲ್ಲಲ್ಲಿ ಶ್ಯಾಮಲಕ್ಕನನ್ನು ಕೂರಿಸಿ  ಹೊಳೆ ಝರಿಗಳ ಸಹಜ ಶ್ರುತಿಯೊಂದಿಗೆ ಯಮನ್, ದುರ್ಗಾ, ಭೈರವ್ ಮುಂತಾದ ಹಲವಾರು ರಾಗ ಸಂಚಾರಗಳನ್ನೂ ರಾಗಾಲಾಪಗಳನ್ನೂ ಮೋಹಕ ಕೃತಿಗಳನ್ನೂ ಅಕ್ಕನ ಸಿರಿಕಂಠದಲ್ಲಿ ಹಾಡಿಸಿ ಚಿತ್ರೀಕರಿಸಿಕೊಳ್ಳುತ್ತಾ ಸಾಗಿದ್ದೊಂದು ಅಪೂರ್ವ ಅನುಭವ.

ಬೆಂಗಳೂರಿನ ಅಕ್ಕನ ಮನೆಯಂತೂ ಒಂದು ಪುಟ್ಟ ಮ್ಯೂಸಿಯಂ ಎಂದೇ ಹೇಳಬೇಕು! ಜತನದಿಂದ ಹೆಜ್ಜೆಯಿರಿಸಬೇಕೆನಿಸುವಷ್ಟು ಮನೆಯ ಹಜಾರದ ತುಂಬ ಕಿಕ್ಕಿರಿದಿರುವ ಅಪರೂಪದ ಕಲಾಕೃತಿಗಳು… ಮನೋಹರ ವಿನ್ಯಾಸದ ಆಸನಗಳು… ಅವುಗಳ ನಡುವೆಯೇ ಅಕ್ಕನ ವಿಶ್ರಾಂತಿ ಸ್ಥಳ! ಎಷ್ಟೋ ದಿನ ಅಲ್ಲಿಯೇ ಅಕ್ಕ ನಮಗೆ ಸಂಗೀತ ಪಾಠ ಹೇಳಿಕೊಟ್ಟದ್ದುಂಟು! ʻನುಡಿದು ಬೇಸತ್ತಾಗ ದುಡಿದುಡಿದು ಸತ್ತಾಗ…ʼ ʻಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ…ʼ ʻಸಾಧು ಸಜ್ಜನರೊಳು ಇರುವುದೇ ಹಬ್ಬ…ʼ ʻರಂಗ ಬಾರೋ ಪಾಂಡುರಂಗ ಬಾರೋ…ʼ ʻಹೊರಸುತ್ತು ಪ್ರಾಕಾರವಾ ಸುತ್ತಿ ಬರುವೆ…ʼಇವೇ ಮೊದಲಾದ ಅನೇಕಾನೇಕ ಕೃತಿಗಳನ್ನು ಅಕ್ಕ ನಮಗೆ ಹೇಳಿಕೊಟ್ಟರು. ಒಮ್ಮೆ ಅಕ್ಕ ಪಾಠ ಹೇಳಿಕೊಟ್ಟರೆಂದರೆ ಮುಗಿಯಿತು, ಜನ್ಮಕ್ಕೆ ಮರೆಯುವಂಥದಲ್ಲ! ಅಂಥ ಅನನ್ಯ ಅಪರೂಪದ ಶಿಕ್ಷಣಶೈಲಿ ಅಕ್ಕನದು!

ʻನಾದಲೋಕʼ ಧಾರಾವಾಹಿಯೂ ಸಹಾ ದೂರದರ್ಶನದಲ್ಲಿ ಪ್ರಸಾರವಾಗಿ ವೀಕ್ಷಕರ ಮೆಚ್ಚುಗೆ ಗಳಿಸಿತು. ಈ ಮೂಲಕ ನಮಗೆ ಪರಿಚಿತರಾದ ಶ್ಯಾಮಲಕ್ಕ ನಮಗೆ ಅದೆಷ್ಟು ಹತ್ತಿರದವರಾಗಿಬಿಟ್ಟರೆಂದರೆ ನಾವೂ ಅವರ ಕುಟುಂಬದ ಭಾಗವೆನ್ನುವಂತೆಯೇ ಆಗಿಬಿಟ್ಟೆವು!

‍ಲೇಖಕರು avadhi

July 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: