ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಹತ್ತು ಪ್ರಶ್ನೆ, ಹತ್ತು ತೊಡಕು!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 155

ರಂಜನಿಗೂ ಮಕ್ಕಳಿಗೂ ಒಂದಿಷ್ಟು ಸಮಾಧಾನ ಹೇಳಿ ತಡ ಸಂಜೆ ಪೋಲೀಸ್ ಸ್ಟೇಷನ್ ಗೆ ಹೋದೆ. ಅಲ್ಲಿ ಇನ್ಸ್ ಪೆಕ್ಟರ್ ಶ್ರೀನಿವಾಸ್ ಹಾಗೂ ಸಬ್ ಇನ್ಸ್ ಪೆಕ್ಟರ್ ರಹೀಮ್—ಇಬ್ಬರೂ ಉಪಸ್ಥಿತರಿದ್ದರು. ನಾನು ಹೋಗುತ್ತಿದ್ದಂತೆ ಪ್ರೀತಿಯಿಂದ ಸ್ವಾಗತಿಸಿದರು. “ನೋಡಿ, ಕಲಾವಿದರೂ ಪೋಲೀಸ್ ಠಾಣೆ ಮೆಟ್ಟಿಲು ಹತ್ತೋ ಹಾಗೆ ಆಗಿಹೋಯ್ತು..ಚಿಂತೆ ಮಾಡಬೇಡಿ ಸರ್..ನಮ್ಮ ದೊಡ್ಡ ಸಾಹೇಬರೂ ಫೋನ್ ಮಾಡಿ ನಿಮ್ಮ ಕೇಸ್ ನ್ನ ಸ್ವಲ್ಪ ಗಮನಿಸಿಕೊಳ್ಳಿ ಅಂತ ಹೇಳಿದರು…ಅವರು ಹೇಳದಿದ್ದರೂ ನಮ್ಮ ಕೆಲಸ ನಾವು ಮಾಡೇ ಮಾಡ್ತೀವಿ ಸರ್ ..ಬನ್ನಿ, ಕೂತುಕೊಳ್ಳಿ ” ಎಂದು ಸ್ವಾಗತಿಸಿದರು. ನನ್ನ ಜೊತೆಗೆ ಬಂದಿದ್ದ ನಮ್ಮ ಡ್ರೈವರ್ ಇಬ್ರಾಹಿಂ ಬಾಗಿಲಲ್ಲೇ ನಿಂತುಕೊಂಡ. ಠಾಣೆಗೆ ಬರುವ ಮೊದಲು ಆತ್ಮೀಯ ಗೆಳೆಯ ಟಿ.ಎನ್. ಸೀತಾರಾಂ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೆ.

ಬಹುಶಃ ಅವರೇ ವರಿಷ್ಠಾಧಿಕಾರಿಗಳಿಗೆ ಫೋನ್ ಮಾಡಿ ನನಗೆ ಕೊಂಚ ಸಹಾಯ ಮಾಡಲು ಹೇಳಿದ್ದಿರಬೇಕು ಅನ್ನುವುದು ಇನ್ಸ್ ಪೆಕ್ಟರ್ ಅವರ ಮಾತಿನಿಂದ ಸ್ಪಷ್ಟವಾಯಿತು. ನಂತರ ಶ್ರೀನಿವಾಸ್ ಹಾಗೂ ರಹೀಮ್ ಇಬ್ಬರೂ ನಮ್ಮ ಮನೆಯ ಕಳ್ತನದ ಪ್ರಸಂಗದಲ್ಲಿದ್ದ ಒಳತೊಡಕುಗಳನ್ನು ವಿವರವಾಗಿ ಬಿಡಿಸಿ ಹೇಳಿದರು: ” ಕಳ್ಳತನವಾಗಿದೆ ಎಂಬುದಕ್ಕೆ ನಿಮ್ಮ ಹೇಳಿಕೆಗಳ ಸಿವಾಯಿ ಬೇರೆ ಯಾವುದೇ ಕುರುಹುಗಳು ಮನೆಯಲ್ಲಿ ಕಾಣುತ್ತಿಲ್ಲ. ಯಾವ ಸಾಕ್ಷಿ, ಆಧಾರ, ಸುಳಿವುಗಳೂ ಇಲ್ಲದೆ ನಾವು ಕಳ್ಳರನ್ನು ಪತ್ತೆ ಹಿಡಿಯುವುದಾದರೂ ಹೇಗೆ? ಕಳ್ಳತನ ಯಾವ ದಿನ ನಡೆದಿರಬಹುದು ಅನ್ನುವುದೂ ನಿಮಗೆ ತಿಳಿಯದು. ಅಂದಮೇಲೆ ಕತ್ತಲಲ್ಲಿ ನಾವು ಬಾಣ ಬಿಡುವುದಾದರೂ ಹೇಗೆ? ಈಗಿರುವುದು ಒಂದೇ ದಾರಿ: ನೀವು ಇಂಥವರ ಮೇಲೆ ಅನುಮಾನ ಇದೆ ಎಂದು ಹೇಳಿ..ನಾವು ವಿಚಾರಿಸಿ ಬಾಯಿ ಬಿಡಿಸುತ್ತೇವೆ” ಎಂದು ನುಡಿದು ತುಸು ದೂರದಲ್ಲಿ ನಿಂತಿದ್ದ ಇಬ್ರಾಹಿಂನನ್ನು ತೋರಿಸಿ, “ನಿಮ್ಮ ಡ್ರೈವರ್ ಹೇಗೆ? ಅವನಿಂದಲೇ ಶುರು ಮಾಡೋಣವೇ?” ಎಂದರು ಶ್ರೀನಿವಾಸ್. ನಾನು ಖಚಿತ ದನಿಯಲ್ಲಿ, “ಬೇಡಿ ಸರ್..ಅವನು ನನ್ನ ತಮ್ಮನ ಹಾಗಿದಾನೆ.. ತುಂಬಾ ನಂಬಿಕಸ್ಥ..ದೇವರು ಧರ್ಮದಲ್ಲಿ ತುಂಬಾ ನಂಬಿಕೆ ಭಕ್ತಿ ಇರುವಂಥವನು..ಅವನು ಹೀಗೆ ಮಾಡೋದಕ್ಕೆ ಸಾಧ್ಯವೇ ಇಲ್ಲ” ಎಂದೆ ನಾನು. “ಸರಿ ಹಾಗಾದ್ರೆ. ನಿಮ್ಮ ಮನೆಗೆ ಕೆಲಸಕ್ಕೆ ಬರೋವ್ರು ಯಾರು? ಅವರನ್ನು ಒಂದ್ಸಲ ಕರೆಸಿ ವಿಚಾರಿಸಲೇ” ಎಂದು ರಹೀಮ್ ಕೇಳಿದರು. ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದವರು ಲಲಿತಮ್ಮ ಎಂಬ ಹಿರಿಯ ಹೆಂಗಸು. ಆಕೆಯೂ ತುಂಬಾ ನಂಬಿಕಸ್ಥ ಹೆಣ್ಣುಮಗಳು.

ಮನೆಯಲ್ಲಿ ಆಕೆ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು ಈ ಅವಧಿಯಲ್ಲಿ ಒಂದೇ ಒಂದು ಗುಂಡುಸೂಜಿ ಯಾ ಚಮಚವೂ ಕಳುವಾಗಿರಲಿಲ್ಲ! ಎಷ್ಟೋ ಬಾರಿ ಆಕೆಯೊಬ್ಬಳನ್ನೇ ಮನೆಯಲ್ಲಿ ಕೆಲಸ ಮಾಡಲು ಬಿಟ್ಟು ತಾಸು ಅರೆತಾಸು ನಾವು ಹೊರಗೆ ಹೋಗಿದ್ದಾಗಲೂ ಸಹಾ ಯಾವ ಅನಾಹುತವೂ ಆಗಿರಲಿಲ್ಲ! ಅಂತಹ ಹೆಂಗಸನ್ನು ವಿಚಾರಣೆಗೆ ಒಳಪಡಿಸುವುದೇ? ಛೆ ಛೆ! ಖಂಡಿತ ಬೇಡಿ ಎಂದುಬಿಟ್ಟೆ. ಕೊನೆಗೆ ಶ್ರೀನಿವಾಸ್ ಅವರು, “ನೀವು ಊರಿಗೆ ಹೋಗಿದ್ದ ಸಮಯದಲ್ಲಿ ನಿಮ್ಮ ಮಗನ ಗೆಳೆಯರು ನಾಲ್ಕೈದು ಜನ ನಿಮ್ಮ ಮನೆಯಲ್ಲೇ ಒಂದು ರಾತ್ರಿ ಉಳಿದಿದ್ದರಂತೆ. ಅವರನ್ನಂತೂ ಕರೆಸಲೇಬೇಕಾಗುತ್ತೆ ಸರ್” ಎಂದರು.

ನನಗೆ ಜಂಘಾಬಲವೇ ಉಡುಗಿಹೋಯಿತು! ನನ್ನ ಮಗ ಅನಿರುದ್ಧನ ಜೀವದ ಗೆಳೆಯರವರು..ನಮಗೂ ಕೂಡಾ ಅವರೆಲ್ಲರ ಪರಿಚಯವೂ ಚೆನ್ನಾಗಿಯೇ ಇತ್ತು. ಕೇಳಿ ಕೇಳಿ ನನ್ನ ಕೈಲಿ ಬಿಸಿಬೇಳೆಭಾತ್ ಮಾಡಿಸಿಕೊಂಡು ತಿನ್ನುತ್ತಿದ್ದ ಮುಗ್ಧ ಹುಡುಗರು ಅವರು. ಅಂಥವರನ್ನು ಠಾಣೆಗೇನಾದರೂ ಕರೆಸಿದರೆ ಅನಿರುದ್ಧನ ಮನಸ್ಥಿತಿ ಏನಾಗಬೇಡ! ಹಾಗೆ ಕರೆಸಲು ನಮಗಾದರೂ ಮನಸ್ಸು ಹೇಗೆ ಬಂದೀತು!? “ಕಳ್ಳರು ಸಿಗದಿದ್ದರೂ ಚಿಂತೆಯಿಲ್ಲ ಸರ್..ಹುಡುಗರನ್ನೆಲ್ಲಾ ವಿಚಾರಣೆಗೆ ಕರೆಸಲೇ ಬೇಡಿ..ಅವರಾರೂ ಹಾಗೆಲ್ಲಾ ಕನಸಿನಲ್ಲೂ ಯೋಚಿಸುವವರಲ್ಲ” ಎಂದು ನಾನು ಖಡಾಖಂಡಿತವಾಗಿ ಹೇಳಿಬಿಟ್ಟೆ. ಅಧಿಕಾರಿಗಳಿಬ್ಬರಿಗೂ ತುಂಬಾ ಬೇಸರವಾಗಿಹೋಯಿತು.

“ನೀವು ಯಾರನ್ನೂ ವಿಚಾರಿಸುವುದೇ ಬೇಡ ಎಂದರೆ ನಾವು ಮುಂದಿನ ಹೆಜ್ಜೆ ಇಡುವುದಾದರೂ ಹೇಗೆ ಸರ್? ಕೊನೆಯ ಪಕ್ಷ ನಿಮ್ಮ ಮನೆ ಕೆಲಸದಾಕೆಯನ್ನು ವಿಚಾರಿಸಲು ಅವಕಾಶ ಕೊಡಿ..ಯಾವ ಹುತ್ತದಲ್ಲಿ ಯಾವ ಹಾವಿರುತ್ತದೋ ಬಲ್ಲವರಾರು? ಸಿಕ್ಕಿಬೀಳುವ ತನಕ ಎಲ್ಲರೂ ಸಭ್ಯಸ್ತರೇ! ಕಳ್ತನ ಸಾಬೀತಾಗುವವರೆಗೂ ಎಲ್ಲರೂ ಪ್ರಾಮಾಣಿಕರೇ! ಇಂಥ ಬಹಳಷ್ಟು ಪ್ರಸಂಗಗಳಲ್ಲಿ ಮನೆ ಕೆಲಸದವರು ಸಿಕ್ಕಿಬಿದ್ದು ತಪ್ಪೊಪ್ಪಿಕೊಂಡಿದ್ದಾರೆ ಸರ್” ಎಂದೆಲ್ಲಾ ಹೇಳಿದ ಮೇಲೆ ನಿರ್ವಾಹವಿಲ್ಲದೇ ಒಪ್ಪಿಕೊಂಡು ಮನೆಯ ಕಡೆ ಹೊರಟೆ.ಮನೆಯಲ್ಲಿ ರಂಜನಿ ಸಾಕಷ್ಟು ಗೆಲುವಾಗಿರಲು ಪ್ರಯತ್ನಿಸುತ್ತಿದ್ದರೂ ಹೇಳಿಕೊಳ್ಳುವಂಥ ಯಶಸ್ಸೇನೂ ಅವಳಿಗೆ ದೊರೆತಿರಲಿಲ್ಲ! ಒಟ್ಟಾರೆ ಒಂದು ವಿಷಾದದ, ಖಿನ್ನತೆಯ ವಾತಾವರಣ ಮನೆಯಲ್ಲಿ. ಮಲಗಿದರೆ ಕಣ್ಣಿಗೆ ನಿದ್ದೆ ಎಲ್ಲಿ ಹತ್ತಬೇಕು? ಬೆಳಿಗ್ಗೆ ಬೇಗ ಶೂಟಿಂಗ್ ಗೆ ಬೇರೆ ಹೊರಡಬೇಕು. ಈ ಚಿಂತೆಯ ಭಾರದಲ್ಲಿ ನನಗೇ ಡ್ರೈವ್ ಮಾಡಿಕೊಂಡು ಹೋಗುವುದು ಅಸಾಧ್ಯವೆನಿಸಿ ಕಾರ್ ಕಳಿಸಲು ಮ್ಯಾನೇಜರ್ ಗೆ ಹೇಳಿಬಿಟ್ಟೆ. ಹೆಚ್ಚುಕಡಿಮೆ ಒಂದು ತಾಸಿನ ಪ್ರಯಾಣ. ಅಷ್ಟು ಹೊತ್ತೂ ಕಳ್ಳತನದ ಸಾಧ್ಯಾಸಾಧ್ಯತೆಗಳ ಕುರಿತಾಗಿ ಚಿಂತಿಸಬಹುದಲ್ಲಾ!

ಮರುದಿನ ಬೆಳಿಗ್ಗೆಯೇ ನಮ್ಮ ಮನೆಯ ಕೆಲಸದಾಕೆ ಲಲಿತಮ್ಮ ಅವರನ್ನು ಸ್ಟೇಷನ್ ಗೆ ಕರೆಸಿದರು. ನಾನು ಶೂಟಿಂಗ್ ಮುಗಿಸಿಕೊಂಡು ನೇರ ಸ್ಟೇಷನ್ ಗೇ ಹೋದರೆ ಲಲಿತಮ್ಮ ಅಲ್ಲಿಯೇ ಒಂದು ಮೂಲೆಯಲ್ಲಿ ಕುಳಿತಿದ್ದರು. ನನ್ನನ್ನು ನೋಡಿದವರೇ, “ಏನಯ್ಯಾ, ನನ್ನ ಮೇಲೇ ಕಂಪಲೇಂಟ್ ಕೊಟ್ಟುಬಿಟ್ರಾ?” ಎಂದು ಬಹಳ ಸಂಕಟದಿಂದ ನುಡಿದರು. ನನಗೆ ನೇರ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವಷ್ಟು ಧೈರ್ಯವಿರಲಿಲ್ಲ. “ಕಂಪಲೇಂಟ್ ಕೊಟ್ಟಿಲ್ಲ ಲಲಿತಮ್ಮ, ಇಂಥ ಪ್ರಸಂಗಗಳಲ್ಲಿ ಹೀಗೆ ವಿಚಾರಣೆ ನಡೆಸೋದು ಪೋಲೀಸರ ಕ್ರಮ ಅಷ್ಟೇ” ಎಂದು ನುಡಿದು ಪಕ್ಕಕ್ಕೆ ಸರಿದೆ. ಅದೇ ವೇಳೆಗೆ ಠಾಣೆಯ ದಫೇದಾರರೊಬ್ಬರು ಲಲಿತಮ್ಮನವರ ಬಳಿ ಬಂದು, “ಒಳ್ಳೇಮಾತಲ್ಲಿ ಕಳ್ತನ ಮಾಡಿದ್ದು ಒಪ್ಪಿಕೊಂಡುಬಿಡಿ ಲಲಿತಮ್ಮಾ..ಇಲ್ಲದಿದ್ದರೆ ನಮ್ಮ ಸಾವಾಸ ನಿಮಗ್ಗೊತ್ತಿಲ್ಲ ..ಏರೋ ಪ್ಲೇನ್ ಹತ್ತಿಸಿಬಿಡ್ತೀವಿ ಅಷ್ಟೇ” ಎಂದು ಗದರಿದ. ಲಲಿತಮ್ಮ ಪರಮಶಾಂತಿಯಿಂದ ಉತ್ತರಿಸಿದರು: “ಅಯ್ಯಾ..ನೀವು ಏರೋಪ್ಲೇನಾದರೂ ಹತ್ತಿಸಿ, ಹೆಲಿಕಾಪ್ಟರಾದರೂ ಹತ್ತಿಸಿ.

ನನಗೇನೂ ಗೊತ್ತಿಲ್ರಯ್ಯಾ..ನಿಮ್ಮ ಏರೋಪ್ಲೇನ್ ಭಯಕ್ಕೆ ಕದ್ದಿದೀನಿ ಅಂತ ಒಪ್ಕೊಂಡ್ರೆ ನಾಳೆ ಚಿನ್ನ ಎಲ್ಲಿಟ್ಟಿದೀಯಾ ತೋರ್ಸು ಅಂತೀರಾ! ಅಷ್ಟು ಚಿನ್ನ ನಾನೆಲ್ಲಿಂದ ತರ್ಲಯ್ಯಾ? ನಂಗೇನೂ ಗೊತ್ತಿಲ್ಲ ಕಣ್ರಯ್ಯಾ..ಹೂ ಕಟ್ಟಿ ಮಾರೋದು ಗೊತ್ತು ನಂಗೆ..ಮನೇಲಿ ಪಾತ್ರೆ ಬೆಳಗೋದು ಗೊತ್ತು ನಂಗೆ..ಮನೆ ಕಸ ಗುಡ್ಸಿ ಸಾರ್ಸೋದು ಗೊತ್ತು ನಂಗೆ..ಚಿನ್ನ ಬೆಳ್ಳಿ ಗುಡಿಸಿಕೊಂಡು ಹೋಗೋದು ಶಿವನಾಣೆ ನಂಗೆ ಗೊತ್ತಿಲ್ರಯ್ಯಾ”. ಅವರ ಮಾತಿನ ಖಚಿತತೆ, ಅವರ ಮುಖದಲ್ಲಿದ್ದ ದೃಢತೆ-ಮುಗ್ಧತೆಗಳನ್ನು ಕಂಡು ‘ಈಕೆ ಕಳ್ಳತನ ಮಾಡಲು ಸಾಧ್ಯವಿಲ್ಲ’ ಎನ್ನುವುದು ಪೋಲೀಸರಿಗೂ ಖಾತ್ರಿಯಾಗಿಹೋಯಿತು. “ಆಯ್ತು,ನೀವು ಮನೇಗೆ ಹೋಗ್ರಮ್ಮಾ. ಬೇಕಾದ್ರೆ ಹೇಳಿಕಳಿಸ್ತೀವಿ..ಬರಬೇಕು” ಎಂದು ಹೇಳಿ ಕಳಿಸಿದರು. ನಾನೂ ಲಲಿತಮ್ಮನವರ ಜೊತೆ ಹೊರಗೆ ಬಂದು ,”ಏನಾದರೂ ತೊಂದರೆ ಕೊಟ್ರಾ ಲಲಿತಮ್ಮ?” ಎಂದು ಕೇಳಿದೆ. “ಇಲ್ಲಯ್ಯಾ..ತೊಂದರೆ ಏನೂ ಕೊಡ್ಲಿಲ್ಲ. ಅಲ್ಲೇ ಒಂದು ಕಡೆ ಸುಮ್ಮನೆ ಕೂರಿಸಿದ್ರು. ತಿಂಡಿ,ಕಾಫಿ,ಊಟ ಎಲ್ಲಾ ತರಿಸಿಕೊಟ್ರು. ನನ್ನ ಜೊತೆಗೆ ಇನ್ನೂ ನಾಕೈದು ಜನ ಕೂತಿದ್ರಲ್ಲಾ, ಅವರಿಗೆಲ್ಲಾ ತುಂಬಾ ರೇಗೋರು. ಬಯ್ಯೋರು. ಒಂದಿಬ್ಬರನ್ನ ಲಾಕಪ್ ರೂಮ್ ಒಳಗೆ ಕರಕೊಂಡು ಹೋಗಿ ಚೆನ್ನಾಗಿ ಹೊಡೆದ್ರು. ಆಮೇಲೆ ಆಚೆಗೆ ಬಂದು ನನ್ನ ಮುಖಾನೇ ನೋಡುದ್ರು.

ನಾನು ಕಮಕ್ ಕಿಮಕ್ ಅನ್ನಲಿಲ್ಲ. ಸುಮ್ಮನೆ ಒಂದ್ಸಲಾ ನಕ್ಕು ಮುಖ ತಿರುಗಿಸಿಕೊಂಡೆ..ಅಷ್ಟೆ ಕಣ್ರಯ್ಯಾ..ನೀವು ಬರೋ ತನಾ ಕುಂತಲ್ಲೇ ಕುಂತಿದ್ದೆ” ಅಂದರು ಲಲಿತಮ್ಮ ಸಪ್ಪೆದನಿಯಲ್ಲಿ. “ತಪ್ಪು ತಿಳೀಬೇಡಿ ಲಲಿತಮ್ಮಾ..ಇದೆಲ್ಲಾ ಪೋಲೀಸರು ಮಾಮೂಲಾಗಿ ಮಾಡಲೇಬೇಕಾಗುತ್ತೆ” ಎಂದೆ ನಾನು. “ಅದು ಸರಿ ಅಯ್ಯಾ..ಅವ್ರು ಅವರ ಕೆಲ್ಸ ಮಾಡ್ತಾರೆ ದಿಟ…ಆದ್ರೆ ಮನೆಗೆ ಬಂದು ಕರಕೊಂಡು ಬಂದ್ರಲ್ಲಾ, ಓಣೀಲಿ ಅಕ್ಕ ಪಕ್ಕದೋರೆಲ್ಲಾ ನೋಡ್ತಿದ್ರಲ್ಲಾ, ಶಾನೆ ಕಷ್ಟ ಆಗೋಯ್ತು” ಎನ್ನುತ್ತಾ ಕಣ್ಣೊರೆಸಿಕೊಂಡರು. ಏನು ಹೇಳಲೂ ತೋಚಲಿಲ್ಲ ನನಗೆ. ಹಾಗೇ ಮಾತಾಡದೆ ನಿಂತಿದ್ದೆ. ಅವರೇ ಮೌನ ಮುರಿದು,”ನಾಳೇಂದ ಕೆಲ್ಸಕ್ಕೆ ಬರಲೋ ಬೇಡವೋ ಅಯ್ಯಾ?” ಎಂದರು. “ಖಂಡಿತ ಬನ್ನಿ ಲಲಿತಮ್ಮಾ. ನೀವು ಬರದಿದ್ರೆ ನಮ್ಮ ಮನಸ್ಸಿಗೆ ತುಂಬಾ ಕಷ್ಟ ಆಗಿಬಿಡುತ್ತೆ..ಮನಸ್ನಲ್ಲಿ ಏನೂ ಇಟ್ಟುಕೊಳ್ಳದೆ ಮಾಮೂಲಾಗಿ ಬಂದುಬಿಡಿ..ನಿಜವಾಗಲೂ ಹೇಳ್ತಿದೀನಿ—sorry ಲಲಿತಮ್ಮ” ಎಂದೆ. ಮೌನವಾಗಿ ತಲೆಯಾಡಿಸಿದರು. ನಾನೇ ಲಲಿತಮ್ಮನವರನ್ನು ಆಟೋ ಹತ್ತಿಸಿ ಕೈಗೆ ಇನ್ನೂರು ರೂಪಾಯಿ ಕೊಟ್ಟು ಮನೆಗೆ ಕಳಿಸಿಕೊಟ್ಟು ಠಾಣೆಯೊಳಗೆ ಹೋದೆ.

ಒಳಗೆ ಹೋದವನಿಗೆ ಇನ್ಸ್ ಪೆಕ್ಟರ್ ಶ್ರೀನಿವಾಸ ಅವರು ಖಚಿತ ಧ್ವನಿಯಲ್ಲಿ ಹೇಳಿಬಿಟ್ಟರು: ” ನೋಡಿ ಪ್ರಭುಗಳೇ, ಯಾವುದೇ lead ಇಲ್ಲದೆ ನಾವು ಮುಂದುವರಿಯೋದಕ್ಕೆ ಸಾಧ್ಯವೇ ಇಲ್ಲ. ಒಂದು ರೀತೀಲಿ we are at the dead end! ಇಲ್ಲಿ ಅನುಮಾನ ಪಡಬಹುದಾದ ವ್ಯಕ್ತಿ ಒಬ್ಬರೇ ಇರೋದು: ನೀವು! ನೀವು ಕಳ್ತನ ಆಗಿದೆ ಅಂದಿದ್ದಕ್ಕೆ ನಾವೂ ನಂಬಬೇಕೇ ಹೊರತು no other clues or evidence. ಯಾರು ಕದ್ದಿದಾರೆ ಅನ್ನೋದು ಒತ್ತಟ್ಟಿಗಿರಲಿ, ಯಾವಾಗ ಕಳ್ತನ ಆಯ್ತು ಅಂತ ಕೂಡಾ ಗೊತ್ತಿಲ್ಲ ನಿಮಗೆ! ನೀವಿಲ್ಲದಾಗ ಯಾರಾದರೂ ಮನೇಗೆ ಬಂದಿರಬಹುದಾ ಅಂದರೆ ಅದಕ್ಕೂ ಖಚಿತವಾಗಿ ಏನೂ ಉತ್ತರ ಕೊಡ್ತಿಲ್ಲ ನೀವು. ಇಂಥಾ ಪರಿಸ್ಥಿತೀಲಿ ನಾವೇನು ಮಾಡೋಕಾಗುತ್ತೆ ಹೇಳಿ? ಈಗ ಹೇಗೆ ಮುಂದುವರೀಬೇಕು ಅಂತ ನೀವು ಹೇಳಿದರೆ ನಾವು ಹಾಗೇ ಮಾಡ್ತೀವಿ. The ball is in your court!” ಎಂದು ಹೇಳಿ ನಕ್ಕರು. ಅವರ ಮಾತಿಗೆ ನನಗೂ ನಗು ಬಂದಿತು. “ಆಯಿತು ಸರ್ , ಮತ್ತೆ ಬಂದು ನಿಮ್ಮನ್ನು ಕಾಣ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟೆ.ರಾತ್ರಿಯೆಲ್ಲಾ ಮತ್ತದೇ ಗುಂಗು…ನಾವಿಲ್ಲದಾಗ ಮನೇಗೆ ಯಾರು ಬಂದಿರಬಹುದು? ಹಾಗೆ ಬರೋ ಅವಕಾಶವಾದರೂ ಏನಿದೆ? ರಂಜನಿಯ ಹತ್ತಿರ ಹೀಗೆ ಕೇಳಿದಾಗ ಏನೋ ಯೋಚಿಸುತ್ತಾ ಕಾಲು ಚಾಚಿದ್ದವಳು ಧಿಗ್ಗನೆದ್ದು ಕುಳಿತಳು! ಅವಳ ಬಾಯಿಂದ ಉದ್ಗಾರ ಹೊರಟಿತು: ಶಾಹೀನ್!!! ನಮ್ಮ ಮನೆಯ ಒಳಾಂಗಣ ವಿನ್ಯಾಸ ಮಾಡಿಕೊಟ್ಟವರು ಸಂಪತ್ ಎಂದು ಹಿಂದಿನ ಪುಟಗಳಲ್ಲಿ ಹೇಳಿದ್ದೇನೆ. ಅವರ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವರೇ ಈ ಶಾಹೀನ್ ಎಂಬ ಮಹಿಳೆ. ಆಕೆಯೂ ತುಂಬಾ ಸಂಭಾವಿತೆ. ಅವರ ಕೆಲಸವೆಲ್ಲಾ ಮುಗಿದ ಮೇಲೂ ಆಗಾಗ್ಗೆ ಮನೆಗೆ ಬರುತ್ತಿದ್ದರು..ಅಗತ್ಯ ಸಂದರ್ಭಗಳಲ್ಲಿ ರಂಜನಿಗೆ ನೆರವಾಗುತ್ತಿದ್ದರು. ಆಕೆ ಹೇಗೆ ನಾವಿಲ್ಲದಾಗ ಮನೆಯೊಳಗೆ ಬರಲು ಸಾಧ್ಯ? ಎಂದು ನಾನು ಕೇಳಿದೆ.

ರಂಜನಿ ಹೇಳಿದ್ದನ್ನು ಕ್ರೋಢೀಕರಿಸಿಕೊಂಡು ಮತ್ತೂ ಕೆಲ ವಿವರಗಳೊಂದಿಗೆ ಈ ಪ್ರಸಂಗವನ್ನು ವಿವರಿಸುತ್ತೇನೆ: ನಮ್ಮ ಮನೆಯ ಮುಂಬಾಗಿಲಿನ ಡೋರ್ ಲಾಕ್ ಗೆ ನಾಲ್ಕು ಕೀಲಿ ಕೈಗಳಿದ್ದವು. ನಾವು ನಾಲ್ವರೂ ಒಂದೊಂದು ಬೀಗದ ಕೈಯನ್ನು ನಮ್ಮ ಬಳಿ ಇರಿಸಿಕೊಂಡಿದ್ದೆವು. ಒಬ್ಬೊಬ್ಬರದು ಒಂದೊಂದು ಸಮಯದ ಓಡಾಟವಾದ್ದರಿಂದ ಈ ರೀತಿಯ ವ್ಯವಸ್ಥೆಯಾಗಿತ್ತು. ಒಮ್ಮೆ ಅನಿರುದ್ಧ ಸ್ನೇಹಿತರ ಮನೆಯಿಂದ ಬರುವಾಗ ತನ್ನ ಬಳಿ ಇದ್ದ ಬೀಗದ ಕೈ ಅನ್ನು ಕಳೆದುಕೊಂಡುಬಿಟ್ಟ. ಒಂದು ದಿನ ನಾನು ಶೂಟಿಂಗ್ ಗೆ, ರಾಧಿಕಾ ಕೆಲಸಕ್ಕೆ ಹೊರಟುಹೋಗಿದ್ದೇವೆ ನಮ್ಮ ನಮ್ಮ ಬೀಗದ ಕೈಗಳೊಂದಿಗೆ; ಅನಿರುದ್ಧನೂ ಕಾಲೇಜ್ ಗೆ ಹೋಗಿದ್ದಾನೆ; ರಂಜನಿ ಕಾಲೇಜಿಗೆ ಹೋಗುವಾಗ ತನ್ನ ಬಳಿ ಇದ್ದ ಬೀಗದ ಕೈ ಅನ್ನು ಸೆಕ್ಯೂರಿಟಿಯವರ ಹತ್ತಿರ ಕೊಟ್ಟು ಹೋಗಿದ್ದಾಳೆ, ಅನಿರುದ್ಧ ಬಂದಾಗ ಕೊಡಲೆಂದು. ಹಾಗೆ ಹೊರಟವಳಿಗೆ ಮಾರ್ಗಮಧ್ಯದಲ್ಲಿ ಥಟ್ಟನೆ ಅನುಮಾನ ಬಂದುಬಿಟ್ಟಿದೆ: ಹೊರಡುವ ಗಡಿಬಿಡಿಯಲ್ಲಿ ಗ್ಯಾಸ್ ಬಂದ್ ಮಾಡಿದ್ದೇನೋ ಇಲ್ಲವೋ ಎಂದು! ಮನೆಗೆ ಬಂದು ಪರಿಶೀಲಿಸಿಕೊಂಡು ಹೋಗುವಷ್ಟು ಸಮಯವಿಲ್ಲ, ಕಾಲೇಜ್ ಗೆ ಮುಕ್ಕಾಲು ದೂರ ಬಂದಾಗಿದೆ ! ತಕ್ಷಣ ಅವಳಿಗೆ ನೆನಪಾದದ್ದು ಶಾಹೀನ್ ಹೆಸರು! ಆಕೆಯ ಫೋನ್ ನಂಬರ್ ಕೂಡಾ ಅವಳ ಬಳಿ ಇದ್ದಿತಾದ್ದರಿಂದ ಒಡನೆಯೇ ಶಾಹೀನ್ ಗೆ ಫೋನ್ ಮಾಡಿ, “ನಿಮ್ಮಿಂದ ಒಂದು ಸಹಾಯ ಆಗಬೇಕು. ಸೆಕ್ಯೂರಿಟಿಯವರ ಬಳಿ ನಮ್ಮ ಮನೆಯ ಕೀ ಇದೆ. ನಾನು ಫೋನ್ ಮಾಡಿ ನಿಮಗೆ ಕೀ ಕೊಡುವಂತೆ ಸೆಕ್ಯೂರಿಟಿಯವರಿಗೆ ಹೇಳುತ್ತೇನೆ; ನೀವು ಮೇಲೆ ಹೋಗಿ ಗ್ಯಾಸ್ ಆಫ್ ಆಗಿದೆಯಾ ಅಂತ ಚೆಕ್ ಮಾಡಿಕೊಂಡು ಮತ್ತೆ ಕೀ ಅನ್ನು ಸೆಕ್ಯುರಿಟಿ ಅವರಿಗೆ ಕೊಟ್ಟು ಹೋಗುವಿರಾ ಪ್ಲೀಸ್? ” ಎಂದು ಕೇಳಿಕೊಂಡಿದ್ದಾಳೆ. ಶಾಹೀನ್ ಹಾಗೆಯೇ ನಡೆದುಕೊಂಡಿದ್ದಾರೆ. ಅಂದರೆ ನಾವಿಲ್ಲದ ಹೊತ್ತಿನಲ್ಲಿ ಮನೆಗೆ ಅವರ ಪ್ರವೇಶವಾಗಿದೆ! ನಮ್ಮ ಅಪಾರ್ಟ್ ಮೆಂಟ್ ನಲ್ಲಿ c c tv ಸೌಲಭ್ಯವಿದೆ; ಆದರೆ ಬ್ಲಾಕ್ ನಲ್ಲಿ ನಮ್ಮ ಮನೆಯ ಮುಂಭಾಗದ ಆವರಣದಲ್ಲಿ , ಅಂದರೆ ಲಿಫ್ಟ್ ಏರಿಯಾದಲ್ಲಿ ಆ ಸೌಕರ್ಯವಿಲ್ಲ. ಹಾಗಾಗಿ ನಮ್ಮ ಮನೆಗೆ ಯಾರು ಬಂದರೆಂದು ತಿಳಿದುಕೊಳ್ಳುವುದು ಸಾಧ್ಯವೇ ಇಲ್ಲ.

ಒಟ್ಟಾರೆ ನಮ್ಮ ಬ್ಲಾಕ್ ಗೆ ಯಾರು ಪ್ರವೇಶಿಸಿದರು ಎಂದು ಮಾತ್ರ ತಿಳಿದುಕೊಳ್ಳಬಹುದು. ಹಾಗಾಗಿ ಶಾಹೀನ್ ಎಷ್ಟು ಹೊತ್ತಿಗೆ ನಮ್ಮ ಬ್ಲಾಕ್ ಗೆ ಬಂದರು—ಎಷ್ಟು ಹೊತ್ತಿಗೆ ಹೋದರು ಎಂದಾದರೂ ತಿಳಿದುಕೊಳ್ಳೋಣವೆಂದರೆ ರಂಜನಿಗೆ ಆ ಘಟನೆ ಯಾವತ್ತು ನಡೆಯಿತೆಂಬುದು ನೆನಪಿಗೆ ಬರುತ್ತಿಲ್ಲ! ಥತ್! ಒಂದು ಲೀಡ್ ಸಿಕ್ಕಿತೆಂದರೆ ಅದರ ಜೊತೆಗೆ ಹತ್ತು ಪ್ರಶ್ನೆ, ಹತ್ತು ತೊಡಕು!!!

‍ಲೇಖಕರು Admin

21 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading