ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 160
ಇದೆಂಥಾ ಕಾಕತಾಳೀಯ ನೋಡಿ: ಸ್ಮೈಲ್ ಪ್ಲೀಸ್ ಚಿತ್ರದ ಶೂಟಿಂಗ್ ಶುರುವಾದ ದಿನ ನಮ್ಮ ಮನೆಯಲ್ಲಿ ಆದ ಕಳ್ಳತನದ ವಿಷಯ ಬೆಳಕಿಗೆ ಬಂದದ್ದು; ಕಳ್ಳತನ ಪತ್ತೆಯಾದ ಮಾರನೆಯ ದಿನ ಚಿತ್ರದ ಶೂಟಿಂಗ್ ಮುಕ್ತಾಯ! ನಮ್ಮ ತಂಡದವರಿಗೆಲ್ಲಾ ಖುಷಿಯೋ ಖುಷಿ! “ಶೂಟಿಂಗ್ ಶುರುವಾದ ದಿನವೇ ಹೀಗಾಯ್ತಲ್ಲಾ ಅಂತ ತುಂಬಾ ಬೇಜಾರಾಗಿಬಿಟ್ಟಿತ್ತು ಸರ್..ಸಧ್ಯ, ಎಲ್ಲಾ ಸುಖಾಂತವಾಯಿತು! ಶೂಟಿಂಗೂ ಯಾವ ಸಮಸ್ಯೇನೂ ಆಗದೆ ಸರಾಗವಾಗಿ ನಡೀತು..ನಿಮ್ಮ ಚಿನ್ನಾನೂ ಮರಳಿ ಸಿಕ್ತು!” ಎಂದು ನಿರ್ದೇಶಕ ರಘು ಸಮರ್ಥ ಸಂತಸ ವ್ಯಕ್ತ ಪಡಿಸಿದರು. ನಾನು ತಂಡದ ಎಲ್ಲರಿಗೂ ಸಿಹಿ ತರಿಸಿಕೊಟ್ಟು ಸಂಭ್ರಮಿಸಿದೆ.
ಕಳ್ಳತನಕ್ಕೆ ಸಂಬಂಧಿಸಿದ ಮುಂದಿನ ಬೆಳವಣಿಗೆಗಳನ್ನು ಇಲ್ಲೇ ಹೇಳಿ ಮುಗಿಸಿಬಿಡುತ್ತೇನೆ. ಇಬ್ರಾಹಿಂನನ್ನು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತಂತೆ. ಅವನ ಕಡೆಯ ವಕೀಲರೊಬ್ಬರು ಒಮ್ಮೆ ನನಗೆ ಫೋನ್ ಮಾಡಿ ಕೇಸ್ ವಾಪಸ್ ಪಡೆಯಲು ಸಾಧ್ಯವೇ ಎಂದು ವಿಚಾರಿಸಿದರು. “ಪೋಲೀಸರು ನನಗೆ ಯಾವ ರೀತಿಯಲ್ಲಿ ಮುಂದುವರಿಯಲು ಸೂಚಿಸುತ್ತಾರೋ ನಾನು ಹಾಗೆಯೇ ನಡೆದುಕೊಳ್ಳುತ್ತೇನೆ..ನಾನೇ ಸ್ವತಂತ್ರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ” ಎಂದು ನಾನು ಖಡಾಖಂಡಿತವಾಗಿ ಹೇಳಿಬಿಟ್ಟೆ.
ನಂತರ ಸುಮಾರು ದಿನ ಕೇಸ್ ನಡೆಯಿತಂತೆ. ನಾವು ಹೆಚ್ಚಿಗೆ ಕೋರ್ಟ್ ಗೆ ಅಲೆಯಬೇಕಾದ ಪ್ರಸಂಗವೇನೂ ಬರಲಿಲ್ಲ. ಇಬ್ರಾಹಿಂಗೆ ಬೇಲ್ ಸಿಕ್ಕಿತೋ ಇಲ್ಲವೋ ಎಂಬುದು ಕೂಡಾ ನಮಗೆ ತಿಳಿಯಲಿಲ್ಲ. ತಿಳಿದುಕೊಳ್ಳಲು ನಾನೂ ಉತ್ಸುಕತೆ ತೋರಲಿಲ್ಲವೆನ್ನಿ! ಒಂದೆರಡು ವರ್ಷಗಳೇ ಉರುಳಿದ್ದಿರಬಹುದು; ಪೋಲೀಸ್ ಠಾಣೆಯಿಂದ ನನಗೆ ಕರೆ ಬಂದಿತು: “ಮುಂದಿನ ವಾರ ನೀವು ಕೋರ್ಟ್ ಗೆ ಬರಬೇಕಾಗುತ್ತೆ ಸರ್. ಈಗ ನೀವು ಒಂದು ನಿರ್ಧಾರ ಮಾಡಬೇಕು: ಅವನಿಗೆ ಶಿಕ್ಷೆ ಆಗಲೇಬೇಕು ಅಂತ ನೀವು ತೀರ್ಮಾನ ಮಾಡಿದ್ದರೆ ಕೇಸ್ ಮುಂದುವರಿಯುತ್ತೆ. ನೀವೇನಾದರೂ ಅವನಿಗೆ ಕ್ಷಮಾದಾನ ಮಾಡೋದಕ್ಕೆ ಒಪ್ಪಿಕೊಂಡ್ರೆ ಅವನು ರಿಲೀಸ್ ಆಗ್ತಾನೆ. ನಿರ್ಧಾರ ನಿಮ್ಮದು” ಎಂದರು ರಹೀಂ ಸಾಹೇಬರು. “ನಿಮಗೆ ಹಿನ್ನಡೆಯಾಗುವಂತಹ ಪ್ರಸಂಗವಿಲ್ಲದಿದ್ದರೆ, ನಿಮಗೆ ಯಾವುದೇ ಮುಜುಗರ —ತೊಂದರೆ ಆಗದಿದ್ದರೆ ಕ್ಷಮಾದಾನ ಮಾಡಲು ನಮಗೆ ಯಾವ ಅಭ್ಯಂತರವೂ ಇಲ್ಲ ಸರ್” ಎಂದೆ ನಾನು. “ನಮಗೆ ಯಾವುದೇ ಸಮಸ್ಯೆ ಇಲ್ಲ ಸರ್..ಹೇಗೂ ಅವನು ತಪ್ಪು ಒಪ್ಪಿಕೊಂಡಿದಾನೆ. ಸಾಕಷ್ಟು ಒದೇನೂ ತಿಂದಿದಾನೆ, ಶಿಕ್ಷೇನೂ ಅನುಭವಿಸಿದಾನೆ. ಮೇಲಾಗಿ ಕಳ್ಳತನ ಕಸುಬಲ್ಲ ಅವನಿಗೆ. ವೀಕ್ ಮೊಮೆಂಟಲ್ಲಿ ದುಡುಕಿಬಿಟ್ಟಿದಾನೆ ಅಷ್ಟೇ. ಮಕ್ಕಳೊಂದಿಗ..ಬದುಕಿಕೊಳ್ಳಲಿ ಬಿಡಿ..ನೀವು ಕ್ಷಮಾದಾನಕ್ಕೆ ಒಪ್ಪಿದ್ದು ನಮಗೂ ಸರಿ ಅನ್ನಿಸಿದೆ..ಚಿಂತೆ ಮಾಡಬೇಡಿ” ಎಂದರು ರಹೀಂ.
ಇದಾದ ಒಂದು ವಾರಕ್ಕೆ ಕೋರ್ಟ್ ನಿಂದ ನಮಗೆ ಹಾಜರಾಗಲು ಆದೇಶ ಬಂದಿತು. ನಮ್ಮ ಪೋಲೀಸ್ ಅಧಿಕಾರಿಗಳು ಕೋರ್ಟ್ ನ ಕಾರ್ಯವೈಖರಿಯ ಬಗ್ಗೆ, ನಾವು ನಡೆದುಕೊಳ್ಳಬೇಕಾದ ರೀತಿಯ ಬಗ್ಗೆ, ಹೇಳಬೇಕಾದ ಮಾತುಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಿದರು. ನಿಗದಿತ ದಿನದಂದು ರಂಜನಿಯೊಂದಿಗೆ ನಾನು ಕೋರ್ಟ್ ಗೆ ಹೋದೆ. ನಮ್ಮ ಠಾಣೆಯ ಪೋಲೀಸರೂ ಬಂದಿದ್ದರು. ಅಲ್ಲಿ ಹೆಚ್ಚೇನೂ ಕಾಯಬೇಕಾಗಿ ಬರಲಿಲ್ಲ. ಎಷ್ಟೋ ದಿನಗಳ ನಂತರ ನೋಡಿದ್ದರಿಂದ ಫಕ್ಕನೆ ಇಬ್ರಾಹಿಂನ ಗುರುತೇ ಸಿಗಲಿಲ್ಲ! ಮುಖದ ಮೇಲೆ ಹುಲುಸಾಗಿ ಬೆಳೆದುಬಿಟ್ಟಿದ್ದ ಗಡ್ಡವೂ ಕಾರಣವಿದ್ದಿರಬಹುದು. ಅಂದು ಜಡ್ಜ್ ಸ್ಥಾನದಲ್ಲಿದ್ದವರು ಒಬ್ಬ ಮಹಿಳೆ. ಒಂದಷ್ಟು ಪ್ರಶ್ನೆಗಳನ್ನು ಕೇಳಿ ನಮ್ಮ ಉತ್ತರ—ಒಪ್ಪಿಗೆಗಳನ್ನು ಪಡೆದು ಇಬ್ರಾಹಿಂನನ್ನು ಸೂಕ್ತ ಎಚ್ಚರಿಕೆಗಳೊಂದಿಗೆ ಬಿಡುಗಡೆ ಮಾಡಲಾಯಿತು. ನ್ಯಾಯಾಧೀಶರಿಗೆ ನಮಸ್ಕರಿಸಿ ನಾನೂ ರಂಜನಿಯೂ ಹೊರಬಂದರೆ ಅಲ್ಲಿ ಇಬ್ರಾಹಿಂ ತನ್ನ ವಕೀಲರೊಂದಿಗೆ ನಿಂತಿದ್ದ. ಮುಖದಲ್ಲಿ ನೋವು—ಪಶ್ಚಾತ್ತಾಪ ಮಡುಗಟ್ಟಿತ್ತು. ಅವನ ವಕೀಲರು ನಮಗೆ ಕೈಮುಗಿದು,”ತುಂಬಾ ಉಪಕಾರ ಆಯ್ತು ಸರ್..ಬಡವ ಬದುಕಿಕೊಂಡ” ಎಂದವರೇ ಅವನತ್ತ ತಿರುಗಿ,”ಏನುಮುಖ ನೋಡಿಕೊಂಡು ನಿಂತಿದೀಯಾ! ಕಾಲಿಗೆ ಬಿದ್ದು ಕ್ಷಮಾಪಣೆ ಕೇಳ್ಕೋ..ನಾಲಾಯಕ್ ನನ್ಮಗನೇ..” ಎಂದು ಗದರಿದರು. ಒಡನೆಯೇ ಇಬ್ರಾಹಿಂ ನಮ್ಮ ಕಾಲಿಗೆ ಬೀಳಲು ಬಂದ. ನಮಗೆ ತೀರಾ ಮುಜುಗರವಾಗಿಹೋಯಿತು.”ಅದೆಲ್ಲಾ ಏನೂ ಬೇಡಪ್ಪಾ..ಆದದ್ದು ಆಗಿಹೋಯ್ತು..ನಿನ್ನಿಂದಾಗಿ ಸುಮಾರು ದಿನ ನಾವೂ ಸಂಕಟ ಅನುಭವಿಸಿದಿವಿ..ಮುದ್ದಾದ ಮಕ್ಕಳಿದಾರೆ..ಇನ್ನು ಮುಂದಾದರೂ ಸರಿಯಾದ ದಾರೀಲಿ ನಡೆದು ಚೆನ್ನಾಗಿ ಬದುಕು ಕಟ್ಟಿಕೋ” ಎಂದು ರಂಜನಿ ಕಿವಿಮಾತು ಹೇಳಿದಳು. ಅದೇ ವೇಳೆಗೆ ನ್ಯಾಯಾಧೀಶರ ಸಹಾಯಕನೊಬ್ಬ ಬಂದು,”ಮೇಡಂ ಕರೀತಿದಾರೆ..ಅವರ ಛೇಂಬರ್ ಗೆ ಬರಬೇಕಂತೆ” ಎಂದ. ಅವನ ಜೊತೆಯಲ್ಲೇ ಜಡ್ಜ್ ಅವರ ಕೊಠಡಿಗೆ ಹೋದೆವು. ನನ್ನ ಹಲವಾರು ಧಾರಾವಾಹಿ-ಚಿತ್ರಗಳನ್ನು ನೋಡಿದ್ದ ಮೇಡಂ ಅವರು ಉಭಯ ಕುಶಲೋಪರಿಗೆ ನಮ್ಮನ್ನು ಕರೆದಿದ್ದರು. “ಕೇಸ್ ಕ್ಲೋಸ್ ಆಯ್ತಲ್ಲಾ, ಹಾಗಾಗಿ ನಿಮಗೆ ಬರೋಕೆ ಹೇಳಿದೆ.ಇಲ್ಲದಿದ್ದರೆ ಆಗ್ತಿರಲಿಲ್ಲ. ನಿಮ್ಮ ಅಭಿನಯ ನಮ್ಮ ಮನೇಲಿ ಎಲ್ಲರಿಗೂ ತುಂಬಾ ಇಷ್ಟ..ಅದನ್ನ ಮುಖತಃ ಹೇಳೋದಕ್ಕೆ ಅವಕಾಶ ಬರುತ್ತೆ ಅಂತ ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ” ಎಂದು ನನ್ನ ಕೆಲ ಧಾರಾವಾಹಿಗಳನ್ನು ಹೆಸರಿಸಿ ಮೆಚ್ಚಿ ಮಾತಾಡಿ ಕಾಫಿ ತರಿಸಿಕೊಟ್ಟರು ಜಡ್ಜ್ ಮೇಡಂ. ಅವರೊಂದಿಗೆ ತುಸು ಹೊತ್ತು ಲೋಕಾಭಿರಾಮವಾಗಿ ಮಾತಾಡಿ ಅವರಿಂದ ಬೀಳ್ಕೊಂಡು ನಮ್ಮ ಠಾಣೆಯ ಪೋಲೀಸರಿಗೂ ಧನ್ಯವಾದಗಳನ್ನು ಹೇಳಿ ಅಲ್ಲಿಂದ ಹೊರಟೆವು. ಈಗ ನಮ್ಮ ಮನೆಯ ಕಳ್ಳತನದ ಕೇಸ್ ಗೆ ಖಚಿತವಾಗಿ ಮುಕ್ತಾಯದ ಮುದ್ರೆ ಬಿದ್ದಿತ್ತು!
ಸ್ಮೈಲ್ ಪ್ಲೀಸ್ ಚಿತ್ರ ಮುಗಿಯುತ್ತಿದ್ದಂತೆ ನಾನು ತೊಡಗಿಕೊಂಡ ಮುಖ್ಯ ಚಿತ್ರ—”ಮೇಲ್ಕೋಟೆ ಮಂಜ”. ಜಗ್ಗೇಶ್ ಅವರು ನಾಯಕ ನಟರು, ಅವರೇ ನಿರ್ದೇಶಕರೂ ಕೂಡಾ. ಆ ಚಿತ್ರದಲ್ಲಿ ನನ್ನದು ಜಗ್ಗೇಶರ ತಂದೆಯ ಪಾತ್ರ. ಒಂದು ವರ್ಷದ ಹಿಂದೆ ಇರಬೇಕು, ಜಗ್ಗೇಶ್ ಅವರೊಂದಿಗೆ ‘ಸಾಫ್ಟ್ ವೇರ್ ಗಂಡ ‘ ಅನ್ನುವ ಚಿತ್ರದಲ್ಲಿ ಅಭಿನಯಿಸಿದ್ದೆ. ಆಗಲೇ ಜಗ್ಗೇಶ್ ಅವರು, “ಮುಂದಿನ ವರ್ಷ ಒಂದು ಪಿಕ್ಚರ್ ಮಾಡ್ತಿದೀನಿ..ನಾನೇ ಡೈರೆಕ್ಟ್ರು! ನಿಮಗೆ ಒಳ್ಳೇ ಪಾತ್ರ ಇದೆ..ಹೇಳ್ತೀನಿ” ಅಂದಿದ್ದರು. ನಿಜಕ್ಕೂ ಒಳ್ಳೆಯ ಪಾತ್ರವನ್ನೇ ನೀಡಿದ್ದರು ಜಗ್ಗೇಶ್. ಉಡಾಳ ಮಗನ ಪ್ರಾಮಾಣಿಕ ಶಿಕ್ಷಕ ತಂದೆಯ ಪಾತ್ರ ನನ್ನದು. ಅನೇಕ ಭಾವನಾತ್ಮಕ ಸನ್ನಿವೇಶಗಳಿದ್ದು ಅಭಿನಯಕ್ಕೆ ವಿಪುಲ ಅವಕಾಶವಿತ್ತು. ಪ್ರತಿಭಾವಂತ ನಟಿ ಚಂದ್ರಕಲಾ ಮೋಹನ್ ಅವರು ನನ್ನ ಪತ್ನಿಯ ಪಾತ್ರ ನಿರ್ವಹಿಸಿದ್ದರು.ಮುಖ್ಯ ದೃಶ್ಯಗಳ ಜೊತೆಗೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಸಮಯವೂ ಹೆಚ್ಚಿದ್ದುದರಿಂದ ಒಂದು ರೀತಿಯಲ್ಲಿ ತೃಪ್ತಿ ಕೊಟ್ಟ ಪಾತ್ರ ಇದು ಎಂದೇ ಹೇಳಬೇಕು. ಸ್ಮೈಲ್ ಪ್ಲೀಸ್ ಹಾಗೂ ಮೇಲ್ಕೋಟೆ ಮಂಜ—ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾದದ್ದೊಂದು ಸಂತಸದ ಸಂಗತಿ ನನಗೆ! ಮೇಲ್ಕೋಟೆ ಮಂಜ ನರ್ತಕಿ ಚಿತ್ರಮಂದಿರದಲ್ಲಿ, ಸ್ಮೈಲ್ ಪ್ಲೀಸ್ ಚಿತ್ರ ಸಂತೋಷ್ ಚಿತ್ರಮಂದಿರದಲ್ಲಿ! ಅಂದು ಬೆಳಿಗ್ಗೆ ಚಿತ್ರಮಂದಿರಗಳ ಹೊರ ಆವರಣದಲ್ಲಿ ಇಬ್ಬರೂ ನಾಯಕ ನಟರ ಅಭಿಮಾನಿಗಳ ಸಂಭ್ರಮವೋ ಸಂಭ್ರಮ! ನಾನು ತುಸು ಹೊತ್ತು ನರ್ತಕಿಯಲ್ಲಿ, ತುಸು ಹೊತ್ತು ಸಂತೋಷ್ ನಲ್ಲಿ ಚಿತ್ರಗಳನ್ನು ನೋಡುತ್ತಾ ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದೆ. ನನ್ನ ಕೆಲ ಭಾವನಾತ್ಮಕ ದೃಶ್ಯಗಳಿಗೆ ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದುದು ಅರಿವಿಗೆ ಬರುತ್ತಿತ್ತು. ಈ ಚಿತ್ರಗಳು ಹಿಟ್ ಆಗಿಬಿಟ್ಟಿದ್ದರೆ ನಟನಾಗಿ ನನಗೆ ಅವಕಾಶಗಳು ಹೆಚ್ಚು ದೊರೆತು ತನ್ಮೂಲಕ ಸಂಭಾವನೆಯೂ ಒಂದು ಮಟ್ಟ ಮೇಲೇರುತ್ತಿತ್ತು! ಚಿತ್ರರಂಗದ ಲೆಕ್ಕಾಚಾರಗಳೇ ಹಾಗಲ್ಲವೇ! ಗೆದ್ದ ಎತ್ತಿನ ಬಾಲ ಹಿಡಿದು ಜೈಕಾರ ಹಾಕುವುದು! ಇಷ್ಟೇ ಅಲ್ಲ, ನಟ ನಟಿಯರಿಗೆ, ವಿಶೇಷವಾಗಿ ನಾಯಕ ನಾಯಕಿಯರಿಗೆ ಅವರ ಚಿತ್ರಗಳು ಸತತವಾಗಿ ಸೋತಾಗ ‘ಐರನ್ ಲೆಗ್’ (ದುರದೃಷ್ಟದವರು!) , ಮೂರ್ನಾಲ್ಕು ಚಿತ್ರಗಳು ಯಶಸ್ವಿಯಾದಾಗ ‘ ಗೋಲ್ಡನ್ ಲೆಗ್’ ಇತ್ಯಾದಿಯಾಗಿ ನಾಮಕರಣ ಮಾಡಿ ಅವರ ವೃತ್ತಿ ಬದುಕಿನ ಗ್ರಾಫ್ ಅನ್ನು ನಿರ್ಧರಿಸುವ ರೀತಿಯಲ್ಲಿ ಶರಾ ಬರೆದುಬಿಡುತ್ತಾರೆ! ನಮ್ಮಂಥವರಿಗೆ ಅಷ್ಟು ಕಠಿಣ ರೀತಿಯ ‘ನಾಮಕರಣ’ ಸಲ್ಲುವುದಿಲ್ಲವಾದರೂ ಯಶಸ್ವೀ ಚಿತ್ರಗಳ ಪೋಷಕ ನಟ ನಟಿಯರಿಗೆ ನಿರಾಯಾಸವಾಗಿ ಹೆಚ್ಚಿನ ಅವಕಾಶ-ಸಂಭಾವನೆಗಳು ಲಭಿಸಿಬಿಡುತ್ತವೆ. ನಾನು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ ಮೇಲಿನ ಎರಡೂ ಚಿತ್ರಗಳು ದುರದೃಷ್ಟವಶಾತ್ ಗಲ್ಲಾಪೆಟ್ಟಿಗೆಯಲ್ಲಿ ವಿಶೇಷ ಸದ್ದು ಮಾಡಲಿಲ್ಲ. ತತ್ಪರಿಣಾಮವಾಗಿ ನನಗೆ ಬೇಡಿಕೆಯೂ (ವಿಶೇಷವಾಗಿ) ಹೆಚ್ಚಲಿಲ್ಲ..ಸಂಭಾವನೆಯಲ್ಲೂ ಜಿಗಿತ ಕಾಣಲಿಲ್ಲ! ಸಧ್ಯ, ಐರನ್ ಲೆಗ್ ಗುಂಪಿಗೂ ಸೇರ್ಪಡೆಯಾಗಲಿಲ್ಲ ಅನ್ನುವುದೇ ಸಮಾಧಾನ! ಕಬ್ಬಿಣವೂ ಆಗದೆ, ಚಿನ್ನವೂ ಆಗದೆ ಹಿತ್ತಾಳೆಯ ಕಾಲುಗಳೊಂದಿಗೆ ಮಧ್ಯಲಯದಲ್ಲಿ ವೃತ್ತಿ ಬದುಕಿನ ಬಂಡಿ ಸಾಗುತ್ತಿದೆ!
ಇದೇ ವೇಳೆಯಲ್ಲಿ ಇನ್ನೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೆನಾದರೂ ಅವು ಯಾವುವೂ ಅಂಥ ಮಹತ್ವದ ಪಾತ್ರಗಳೂ ಅಲ್ಲ , ಮಹತ್ವದ ಚಿತ್ರಗಳು ಮೊದಲೇ ಅಲ್ಲ. ಎಷ್ಟೋ ಚಿತ್ರಗಳ ಹೆಸರು ಕೂಡಾ ನೆನಪಿನಿಂದ ಜಾರಿಹೋಗಿದೆ. ಆದರೂ ಆಗಾಗ್ಗೆ ಬರುತ್ತಿದ್ದ ಇಂಥ ಅವಕಾಶಗಳೇ ವೃತ್ತಿ ಬದುಕನ್ನು ಚಲಾವಣೆಯಲ್ಲಿ, ಸಂಸಾರವನ್ನು ಸರಾಗ ಚಾಲನೆಯಲ್ಲಿ ಇಟ್ಟದ್ದು ಎಂಬುದಂತೂ ಸತ್ಯ. ಧಾರಾವಾಹಿಗಳಲ್ಲಿ ಅವಕಾಶಗಳು ಸಾಕಷ್ಟು ಕ್ಷೀಣಿಸಿಬಿಟ್ಟಿದ್ದವು. ವಾಹಿನಿಗಳ ನಡುವಿನ ಪಾರಮ್ಯದ ಪೈಪೋಟಿಯಲ್ಲಿ, ಟಿ ಆರ್ ಪಿ ಗುಮ್ಮನ ಹಾವಳಿಯಲ್ಲಿ, ವಾಹಿನಿಗಳು ಹೇರುತ್ತಿದ್ದ ಒತ್ತಡಗಳಲ್ಲಿ ನಿರ್ಮಾಪಕರು ಬಸವಳಿದು ಹೋಗಿದ್ದರು. ಆದರೂ ಏನನ್ನೂ ನಿಲ್ಲಿಸುವಂತೆಯೂ ಇರಲಿಲ್ಲ..ಪ್ರಶ್ನಿಸುವುದಂತೂ ಇರಲೇ ಇಲ್ಲ! ಈ ಆಡಳಿತಾತ್ಮಕ ಬದಲಾವಣೆಗಳಿಂದ ಹಾಗೂ ಹೊಸ ಹೊಸ ನಿಯಮಾವಳಿಗಳಿಂದ ಕಲಾವಿದರಿಗೂ ಚೆನ್ನಾಗಿಯೇ ಬಿಸಿ ತಟ್ಟಿತೆನ್ನಬೇಕು. ಒಂದು ವಾಹಿನಿಯಲ್ಲಿ ಒಬ್ಬ ಕಲಾವಿದ ಒಂದು ಧಾರಾವಾಹಿಯಲ್ಲಿ ಮಾತ್ರ ಅಭಿನಯಿಸಬೇಕು ಎಂಬುದೊಂದು ನಿಯಮ; ಬೇರೆ ವಾಹಿನಿಗಳಲ್ಲಿ ಅದೇ ಸಮಯದಲ್ಲಿ ಅಭಿನಯಿಸುತ್ತಿದ್ದರೆ ಮತ್ತೆ ಒಂದು ರೀತಿಯ ದೂರೀಕರಣ! ‘ಪ್ರಕಾಶ’ಕ್ಕಿಂತ ‘ಸ್ವಗತ’ಗಳಲ್ಲಿ ಒಳಗೊಳಗೇ ಈ ಎಲ್ಲಾ ಲೆಕ್ಕಾಚಾರಗಳ ನಡೆಗಳು ರೂಪುಗೊಳ್ಳುತ್ತಿದ್ದವು. ಅದೇನಾದರೂ ಆಗಲಿ ಅಂದರೆ ಮುಖ್ಯ ಕಲಾವಿದರೆಲ್ಲರೂ ವಾಹಿನಿಗಳ ಅಧಿಕಾರಿಗಳ ಸಮಕ್ಷಮದಲ್ಲಿ ಅಭಿನಯ ಪರೀಕ್ಷೆಗೆ ಹೋಗಬೇಕು! ಹೊಸ ಕಲಾವಿದರ ವಿಷಯದಲ್ಲಿ ಹೀಗೆ ಪರೀಕ್ಷೆಗೆ ಒಳಪಡಿಸಿ ಅವರ ಸಾಮರ್ಥ್ಯವನ್ನು ಅರಿಯಲು ಕ್ರಮ ತೆಗೆದುಕೊಳ್ಳುವುದು ಅರ್ಥವಾಗುತ್ತದಾದರೂ ಎಷ್ಟೋ ಅಧಿಕಾರಿಗಳು ಭುವಿಯಲ್ಲಿ ಅವತರಿಸುವುದಕ್ಕೂ ಮುನ್ನವೇ ನಟನಾವೃತ್ತಿಯಲ್ಲಿ ತೊಡಗಿಕೊಂಡು ನೂರಾರು ಧಾರಾವಾಹಿಯ ಕಂತುಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿರುವ ಅನುಭವೀ ನಟ ನಟಿಯರನ್ನೂ ಪರೀಕ್ಷೆಗೆ ಬನ್ನಿ ಅನ್ನುವುದು ನನಗೇಕೋ ವೈಯಕ್ತಿಕವಾಗಿ ಇಷ್ಟವಾಗಲಿಲ್ಲ. ನಾನು ಈ ತರಹದ ಪರೀಕ್ಷೆಗೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟೆ. ಪರೀಕ್ಷೆಗಳನ್ನು ನಡೆಸುವುದು ತಪ್ಪಲ್ಲ, ಆದರೆ ಯಾರು-ಯಾರ ಸಾಮರ್ಥ್ಯದ ಪರೀಕ್ಷೆ ನಡೆಸುತ್ತಾರೆ ಎನ್ನುವುದು ಮುಖ್ಯ. ಯಾವುದಾದರೂ ಐತಿಹಾಸಿಕ ಅಥವಾ ಪೌರಾಣಿಕ ಧಾರಾವಾಹಿಗಳನ್ನು ಮಾಡುತ್ತಿದ್ದರಾದರೂ ಇಂಥ ವಿವಿಧ ಪರೀಕ್ಷೆಗಳ ಅಗತ್ಯವಿದೆ ಎನ್ನಬಹುದು; ಆದರೆ ಅದೇ ಚರ್ವಿತಚರ್ವಣ ಸವತಿಯರ-ತಾಳಿಗಳ ತಿಕ್ಕಾಟದ ಕಥೆಗಳ ದೀರ್ಘಾತಿದೀರ್ಘ ಪುನರಾವರ್ತನೆಯ ಪ್ರಕ್ರಿಯೆಯಲ್ಲಿ, ತೀರಾ ಹೊಸಬರನ್ನು ಹೊರತುಪಡಿಸಿ, ಇಂಥ ಪರೀಕ್ಷೆಗಳ ಅಗತ್ಯ ನನಗೆ ಕಾಣಿಸಲಿಲ್ಲ. ಅವಕಾಶಗಳು ಕಡಿಮೆಯಾದರೂ ನಾನು ನನ್ನ ನಿಲುವನ್ನು ಬಿಟ್ಟುಕೊಡಲಿಲ್ಲ; ರಾಜಿ ಮಾಡಿಕೊಳ್ಳಲಿಲ್ಲ. ನಿಮಗೆ ನಿಮ್ಮದೇ ಕಾರಣಗಳಿರಬಹುದು..ತರ್ಕಗಳಿರಬಹುದು; ನನಗೂ ನನ್ನ ಕಾರಣಗಳಿವೆ, ನನ್ನ ಸಿದ್ಧಾಂತಗಳಿವೆ, ಅಷ್ಟೇ!! ಒಬ್ಬ ಕಿರಿಯ ಅಧಿಕಾರಿ ನನ್ನ ನಿಲುವನ್ನು ಪ್ರಶ್ನಿಸುವ ಧಾಟಿಯಲ್ಲಿ, ‘ನಿಮ್ಮನ್ನು ಆಡಿಷನ್ ಗೆ ಕರೆಯುವ ಅಧಿಕಾರ ನಮಗಿಲ್ಲವೇ ಸರ್?’ ಎಂದು ಕೇಳಿದ್ದರು. ನಾನು ಸೌಮ್ಯವಾಗಿಯೇ ಉತ್ತರಿಸಿದ್ದೆ: “ಅಧಿಕಾರವಿದೆ, ಯಾರು ಇಲ್ಲವೆಂದಿದ್ದಾರೆ? ಇಲ್ಲಿರುವುದು ಅಧಿಕಾರದ ಪ್ರಶ್ನೆಯಲ್ಲ, ಅರ್ಹತೆಯ ಪ್ರಶ್ನೆ! ನನ್ನ ಪರೀಕ್ಷಕ ನನಗಿಂತ ಹೆಚ್ಚು ಜಾಣನಾಗಿರಬೇಕು, ಸಮರ್ಥನಾಗಿರಬೇಕು, ಪ್ರತಿಭಾವಂತನಾಗಿರಬೇಕು. ಆಗ ಯಾವ ಮುಜುಗರವೂ ಇಲ್ಲದೆ ಪರೀಕ್ಷೆಗೆ ಒಡ್ಡಿಕೊಳ್ಳುತ್ತೇನೆ. ಅಂಥ ಪ್ರಸಂಗ ಬಂದಾಗ ನೋಡಿಕೊಳ್ಳೋಣ”.
ನನ್ನ ಮಾತು ಆ ಕಿರಿಯ ಅಧಿಕಾರಿಯನ್ನು ಕೆರಳಿಸಿತ್ತು. ಮತ್ತೂ ಚರ್ಚೆ ಮುಂದುವರಿಸುವ ಪ್ರಯತ್ನ ಮಾಡಿದರು. “ಕ್ಷಮಿಸಿ..ನನಗೆ ಚರ್ಚೆಯಲ್ಲಿ ಆಸಕ್ತಿಯಿಲ್ಲ. ನಾನಾಗಿ ನಿಮ್ಮ ಬಳಿ ಅವಕಾಶವನ್ನು ಕೇಳಿಕೊಂಡು ಬಂದಾಗ ನೀವು ಹೇಳಿದ ಎಲ್ಲಾ ಪರೀಕ್ಷೆಗೂ ಒಳಪಡುತ್ತೇನೆ. ಈಗ ನೀವು ಕೇಳಿಕೊಂಡು ಬಂದಿದ್ದೀರಿ…ಪರೀಕ್ಷೆಗೆ ಬನ್ನಿ ಎನ್ನುತ್ತಿದ್ದೀರಿ..ಗಟ್ಟಿದನಿಯಲ್ಲಿ ಹೇಳುತ್ತೇನೆ: ಇಲ್ಲ ಇಲ್ಲ ಇಲ್ಲ!!”.
ಆ “ಇಲ್ಲ” ಎಂಬ ನನ್ನ ಕೂಗು ಇನ್ನೂ ಪ್ರತಿಧ್ವನಿಸುತ್ತಲೇ ಇದೆ!
ಇಷ್ಟಾಗಿಯೂ ಕೆಲ ಪ್ರಾಮಾಣಿಕ, ಪ್ರಜ್ಞಾವಂತ ಹಿರಿಯ ಅಧಿಕಾರಿಗಳ ಒತ್ತಾಸೆಯ ಕಾರಣವಾಗಿ ಆಗಾಗ್ಗೆ ಒಂದೊಂದು ಧಾರಾವಾಹಿಯಲ್ಲಿ ಅಭಿನಯಿಸುತ್ತಿರುತ್ತೇನೆ. ರಾಜಿಯ ಮಾತು ಮಾತ್ರ ಯಾವ ಕಾರಣಕ್ಕೂ ಇಲ್ಲ! ಹಿಂದೆ ಯಾರೋ ಹೇಳಿದ್ದ ಮಾತು:
“ಹಸಿವಾಯಿತು ಎಂದು ಹುಲಿ ಹುಲ್ಲು ತಿನ್ನುತ್ತದೆಯೇ?”.






0 Comments