ಶ್ರೀನಿವಾಸ ಪ್ರಭು ಅಂಕಣ- ಮಸುಕಾಗಿಯೇ ಉಳಿದ ‘ಅಣ್ಣ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

3

ಕೊಣನೂರು ಮಸುಕು ಚಿತ್ರಗಳು

ಜೀರುಂಡೆ ಸಾಹಸ ನಡೆದ ದಿನವೇ ಸಂಜೆಯ ವೇಳೆಗೆ ಅಮ್ಮ ವಿಜಯಕ್ಕನನ್ನು ಕರೆದುಕೊಂಡು ದಿಢೀರ್ ಎಂದು ಬಂದಿಳಿದರು! ಅವರು ಬರುವ ಸೂಚನೆಯನ್ನೇನೂ ಮೊದಲೇ ಕೊಟ್ಟಿರಲಿಲ್ಲ.

ಚಿಕ್ಕಜ್ಜ-ಚಿಕ್ಕಜ್ಜರಿಗೆ ಆಶ್ಚರ್ಯವೋ ಆಶ್ಚರ್ಯ. ‘ಇದೇನೇ ರುಕ್ಕಾ, ಇದ್ದಕ್ಕಿದ್ದ ಹಾಗೆ ಹೀಗೆ ಬಂದು ಇಳೀತಿದೀಯಾ! ಎಲ್ಲಾ ಸರಿಯಾಗಿದೆ ತಾನೇ?’ ಎಂದು ಸಂಭ್ರಮ-ಆತಂಕಗಳೆರಡೂ ಬೆರೆತ ದನಿಯಲ್ಲಿ ಚಿಕ್ಕಜ್ಜ ಕೇಳಿದರು. ‘ಹ್ಞೂ ಚಿಕ್ಕಪ್ಪಾ, ಎಲ್ಲಾ ಸರಿಯಾಗಿದೆ. ಚಿಂತೆ ಮಾಡಬೇಡಿ. ಯಾಕೋ ಮನಸ್ಸಿಗೆ ಒಂಥರಾ ಆತಂಕ ಆಗ್ತಿತ್ತು.. ಒಂದ್ಸಲಾ ಪ್ರಭೂನ ನೋಡಿಕೊಂಡು ಹೋಗಬೇಕು ಅಂತ ತುಂಬಾ ಅನ್ನಿಸ್ತು… ವಿಜಯನ್ನೂ ಕರಕೊಂಡು ಬಂದುಬಿಟ್ಟೆ’ ಅಂದರು ಅಮ್ಮ.

ನನಗೋ- ಅಮ್ಮ, ಅಕ್ಕ ಇಬ್ಬರೂ ಬಂದ ಸಂಭ್ರಮ ಖುಷಿ ಒಂದು ಕಡೆಯಾದರೆ, ನನ್ನ ಇಂದಿನ ಜೀರುಂಡೆ ಸಾಹಸದ ಬಗ್ಗೆ ಎಲ್ಲಿ ಚಿಕ್ಕಜ್ಜ ಅಮ್ಮನಿಗೆ ಹೇಳಿ ಬಿಡುತ್ತಾರೋ ಎಂಬ ಅಂಜಿಕೆ ಮತ್ತೊಂದೆಡೆ ಕಾಡುತ್ತಿತ್ತು. ಅಮ್ಮ ಬೈಯುತ್ತಾರೆ ಎನ್ನುವುದಕ್ಕಿಂತ ತುಂಬಾ ಆತಂಕಪಟ್ಟುಕೊಂಡು ಸಂಕಟಪಡುತ್ತಾರೆ ಅನ್ನುವ ಚಿಂತೆ ಹೆಚ್ಚು ಕಾಡುತ್ತಿತ್ತು. ಅವರ ಸ್ವಭಾವವೇ ಹಾಗೆ. ಚೂರು ಹೆಚ್ಚುಕಮ್ಮಿಯಾದರೂ-ಅದರಲ್ಲೂ ಮಕ್ಕಳ ವಿಷಯದಲ್ಲಿ- ಅವರಿಗೆ ತಡೆಯುವುದಿಲ್ಲ. ಕಣ್ಣಂಚಿನಲ್ಲಿ ನೀರು ಧುಮುಕಿಯೇ ಬಿಡುತ್ತದೆ.

ನನ್ನ ಅದೃಷ್ಟ-ಚಿಕ್ಕಜ್ಜ ನನ್ನ ಸಾಹಸದ ಮಾತು ತೆಗೆಯಲಿಲ್ಲ. ಆದರೂ ಮರುದಿನ ಅಮ್ಮ-ಅಕ್ಕ ಹೊರಡುವವರೆಗೂ ನನ್ನ ಆತಂಕ ಮಾತ್ರ ಕಮ್ಮಿಯಾಗಲಿಲ್ಲ. ಅಂದು ರಾತ್ರಿ ಚಿಕ್ಕ-ಚಿಕ್ಕಜ್ಜ-ಮ್ಮ ತುಂಬಾ ಹೊತ್ತಿನ ತನಕ ಮಾತಾಡುತ್ತಿದ್ದರು. ವಿಜಯಕ್ಕ ಅಮ್ಮನಿಗೆ ಒರಗಿಕೊಂಡು ಕೂತು ತನ್ಮಯತೆಯಿಂದ ಆಲಿಸುತ್ತಿದ್ದಳು.

ನಾನೂ ಒಂದು ಮೂಲೆಯಲ್ಲಿ ಕುಳಿತು ತುಸು ಆತಂಕ-ತುಸು ಕುತೂಹಲದಿಂದ ಅವರ ಮಾತುಗಳನ್ನು ಆಲಿಸುತ್ತಿದ್ದೆ. ಅವರ ಮಾತು-ಕತೆಯ ಮುಖ್ಯ ಕೇಂದ್ರ ನನ್ನ ತಂದೆಯವರಾಗಿದ್ದರು. ಆ ಸಂವಾದದ ಒಟ್ಟು ಸಾರಾಂಶವನನು ಕ್ರೋಢೀಕರಿಸಿಕೊಂಡು ಹೇಳಿದರೆ ಬಹುಶಃ ನನ್ನ ತಂದೆಯವರ ವ್ಯಕ್ತಿತ್ವದ ಅನಾವರಣಕ್ಕೆ ಒಂದು ಪುಟ್ಟ ಪೀಠಿಕೆಯಾಗಬಹುದು. ಆಗ ನನ್ನ ತಿಳುವಳಿಕೆಗೆ ಗ್ರಾಹ್ಯವಾದದ್ದು ಹಾಗೂ ನಂತರದ ದಿನಗಳಲ್ಲಿ ಮತ್ತಷ್ಟನ್ನು ಕೇಳಿ ದೃಢಪಡಿಸಿಕೊಂಡದ್ದು- ಎಲ್ಲವನ್ನೂ ಸಂಕ್ಷಿಪ್ತವಾಗಿ ಅಡಕಗೊಳಿಸಿ ಹೇಳಲು ಯತ್ನಿಸುತ್ತೇನೆ.

ತಂದೆಯವರ ವಿದ್ಯೆಯ ಹಂಬಲದ ಬಗ್ಗೆ ಈಗಾಗಲೇ ಒಮ್ಮೆ ಪ್ರಸ್ತಾಪ ಮಾಡಿದ್ದೇನೆ. ತಾವಷ್ಟೇ ಅಲ್ಲ, ತಮ್ಮ ಪತ್ನಿ-ಮಕ್ಕಳು ಎಲ್ಲರೂ ವಿದ್ಯಾವಂತರಾಗಬೇಕು, ಸಾಹಿತ್ಯವನ್ನು ಓದಬೇಕು, ಜ್ಞಾನಾರ್ಜನೆ ಮಾಡಬೇಕು ಅನ್ನುವುದು ಅವರ ಕನಸಾಗಿತ್ತು. ಶ್ರೇಷ್ಠ ವಿದ್ವಾಂಸರಾಗಿದ್ದ ತಮ್ಮ ಭಾವ ನಾಗಪ್ಪ ಶಾಸ್ತ್ರಿಗಳಿಂದ ಸಂಸ್ಕೃತ ಅಧ್ಯಯನವನ್ನು ಪ್ರಾರಂಭಿಸಿದ್ದ ತಂದೆಯವರು ಚಿಕ್ಕ ವಯಸ್ಸಿಗೇ ಸಂಸ್ಕೃತ-ಹಿಂದಿ ಭಾಷೆಗಳಲ್ಲಿ ಸಾಕಷ್ಟು ಪಾಂಡಿತ್ಯವನ್ನು ಗಳಿಸಿಕೊಂಡಿದ್ದರು. ಆದರೆ ಒಂದೆಡೆ ಸ್ಥಿರವಾಗಿ ನೆಲೆ ನಿಂತು ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುವ ಪ್ರವೃತ್ತಿಯಾಗಲೀ ಸ್ಥಿರಚಿತ್ತವಾಗಲೀ ಅವರಿಗಿರಲಿಲ್ಲ.

ಒಂದು ವೃತ್ತಿಯಿಂದ ಇನ್ನೊಂದಕ್ಕೆ… ಅದರಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇದ್ದ ಅವರನ್ನು ಏನೋ ಒಂದು ಅತೃಪ್ತಿ-ತಹತಹ ಕಾಡುತ್ತಲೇ ಇತ್ತು. (ಡಾ.ಸಿ.ಎನ್.ರಾಮಚಂದ್ರನ್‌ ಅವರು ಗುರುತಿಸಿದ ಹಾಗೆ ಅದು ಒಂದು ತರಹದ intellectual dissatisfaction.. ಬೌದ್ಧಿಕ ಅತೃಪ್ತಿ.) ಹಿಂದಿ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ- ಪ್ರೇಮವನ್ನು ಹೊಂದಿದ್ದ ಅವರು ಆ ಕಾಲದಲ್ಲೇ ಅತ್ಯುತ್ಸಾಹದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಒಂದು ಹಿಂದಿ ನಾಟಕದ ಸ್ಫೂರ್ತಿಯಿಂದ fashion ಅನ್ನುವ ನಾಟಕವನ್ನು ಬರೆದಿದ್ದರಂತೆ. ಫ್ಯಾಷನ್‌ ಮೋಹಕ್ಕೆ ಸಿಲುಕಿ ತನ್ನ ಮನೆಯ ಶಾಂತಿ-ನೆಮ್ಮದಿಗಳನ್ನು ಹಾಳು ಮಾಡಿಕೊಳ್ಳುವ ಹುಡುಗಿಯೊಬ್ಬಳ ಕಥೆ ಆ ನಾಟಕದಲ್ಲಿತ್ತು. ಹಾಗೆಯೇ ಸಂಪ್ರದಾಯ-ಪರಂಪರೆ-ಧರ್ಮಗಳನ್ನು ಅನುಸರಿಸಿಕೊಂಡು ನಡೆಯುವ ಹೆಣ್ಣುಮಗಳು ಹೇಗೆ ಮನೆಯ ಬೆಳಕಾಗುತ್ತಾಳೆ ಎಂಬ ಸಂದೇಶ ಚಿತ್ರವು ಆ ನಾಟಕದಲ್ಲಿತ್ತು.

ಮನೆಯವರ ಇಚ್ಛೆಗೆ ವಿರುದ್ಧವಾಗಿ ಬಂಡೆದ್ದು ಪ್ರೀತಿಸುವವರ ಸಂಕಷ್ಟ-ಬವಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಅವರು ಬರೆದ ಮೂರು ಕಥೆಗಳ ಸಂಗ್ರಹವೇ ‘ಪ್ರೇಮ ತ್ರಿವೇಣಿ’. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಆರಾಧ್ಯ ದೈವವೇ ಆಗಿದ್ದ ಆದಿಶಂಕರಾಚಾರ್ಯರ ಕುರಿತು ಪೂರ್ಣಪ್ರಮಾಣದ ಒಂದು ನಾಟಕವನ್ನೇ ರಚಿಸಿದ್ದರಂತೆ! ಅದನ್ನು ರಂಗಕ್ಕೆ ತರುವ ಆಸಕ್ತಿಯು ಇತ್ತು ಅವರಿಗೆ. ಆದರೆ ನಾಟಕವನ್ನು ಓದಿದ ಅವರ ಮಿತ್ರ ಮಂಡಳಿಯವರು, ‘ಮತ್ತೊಂದು ಸಮುದಾಯವನ್ನು ಗೇಲಿಮಾಡುವಂಥ ದೃಶ್ಯಗಳು ನಾಟಕದಲ್ಲಿರುವುದರಿಂದ ಅನಗತ್ಯ ವಿವಾದಗಳಿಗೆ ತುತ್ತಾಗುವ ಅಪಾಯವಿದೆ; ಅದರಂತೆ ಇದನ್ನು ಇಲ್ಲಿಗೆ ಬಿಟ್ಟು ಬಿಡಿ’ ಎಂದು ತಿಳಿ ಹೇಳಿದರಂತೆ.

ಆದಿಶಂಕರರು ರಂಗದ ಮೇಲೆ ಆಗ ರಾರಾಜಿಸದೇ ಹೋದರೂ ಚಿಕ್ಕಮಗಳೂರಿನಲ್ಲಿದ್ದಾಗ ಫ್ಯಾಷನ್‌ ನಾಟಕವನ್ನು ರಂಗದ ಮೇಲೆ ಯಶಸ್ವಿಯಾಗಿ ಪ್ರದರ್ಶಿಸಿದ್ದರಂತೆ. ಅಷ್ಟೇ ಅಲ್ಲದೆ ಗೆಳೆಯರ ಗುಂಪು ಕಟ್ಟಿಕೊಂಡು ಕೆಲವರು ಪೌರಾಣಿಕ ನಾಟಕಗಳನ್ನು ರಂಗಕ್ಕೆ ಅಳವಡಿಸಿಕೊಂಡು ಅವರೂ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರಂತೆ. ಯಾವುದೇ ಕೆಲಸ ಯಾವುದೇ ಚಟುವಟಿಕೆ ಆಗಲಿ ಅದರಲ್ಲಿ ಅತ್ಯಂತ ಉತ್ಸಾಹದಿಂದ, ಉತ್ಕಟತೆಯಿಂದ, ತನ್ಮಯತೆಯಿಂದ ತೊಡಗಿಕೊಳ್ಳುವುದು ಅವರ ಪ್ರಧಾನ ಗುಣವಾಗಿತ್ತು.  

ಅವರ ಮೊದಲ ಪತ್ನಿಯ ಹೆಸರು ಜಯ ಅಪರೂಪದ ಸುಂದರಿಯಾಗಿದ್ದ ಅವರದು ಸರಳ ಸೌಜನ್ಯಯುತ ನಡವಳಿಕೆ.. ಮುಖದಲ್ಲಿ ಮಾಸದ ನಗು. ನಮ್ಮ ತಂದೆಯವರಿಗೋ ಮಡದಿ ಎಂದರೆ ಉಸಿರು. ಆದರೆ ಅದಾವ ಕೆಟ್ಟ ಕಣ್ಣುಗಳು ತಾಗಿದವೋ, ಅವರಿಬ್ಬರ ಒಡನಾಟ ಬಹುಕಾಲ ಬಾಳಲಿಲ್ಲ. ಚೊಚ್ಚಲ ಹೆರಿಗೆಯಲ್ಲಿ ಅದೆಂಥದೋ ಸನ್ನಿಗೆ ತುತ್ತಾಗಿ ತಾಯಿ-ಮಗು ಇಬ್ಬರೂ ತೀರಿಕೊಂಡು ಬಿಟ್ಟರು. ತಂದೆಯವರ ತೊಡೆಯ ಮೇಲೆ ತಲೆ ಇಟ್ಟುಕೊಂಡು ಮಲಗಿದ್ದಂತೆಯೇ ಕಣ್ಮುಚ್ಚಿಕೊಂಡರಂತೆ.

ಸೂಕ್ಷ್ಮ ಮನಸ್ಸಿನ ಸಂವೇದನಾಶೀಲ ಪ್ರಕೃತಿಯ ತಂದೆಯವರಿಗೆ ಇಷ್ಟು ದೊಡ್ಡ ಆಘಾತವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಯಿತು. ‘ನನಗೆ ಈ ಸಂಸಾರದ ಬಂಧನಗಳ ಸಹವಾಸವೇ ಬೇಡ.. ಈ ಯಾತನೆ- ತಳಮಳಗಳ ಹೊರೆ ಹೊತ್ತುಕೊಂಡು ಬವಣೆ ಪಡುವುದಕ್ಕಿಂತ ನಾನು ನನ್ನ ಬದುಕನ್ನು ರಾಷ್ಟ್ರಸೇವೆಗೆ ಮುಡಿಪಾಗಿಟ್ಟು ಬಿಡುತ್ತೇನೆ’ ಎಂದವರೇ ಸೇವಾದಳವನ್ನು ಸೇರಿ ಅಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಬಿಟ್ಟರಂತೆ. ನಂತರದ ದಿನಗಳಲ್ಲಿ ನಮ್ಮ ಚಿಕ್ಕಜ್ಜ ಶಾಮರಾಯರು ಹಾಗೂ ಕೊಣನೂರಿನ ಮತ್ತೂ ಕೆಲ ಹಿರಿಯರು ಸೇರಿ ಅವರಿಗೆ ಬುದ್ಧಿ ಹೇಳಿ ಬಹು ಕಷ್ಟದಿಂದ ಅವರ ಮನಸ್ಸನ್ನು ಲೌಕಿಕ ಬದುಕಿನ ಕಡೆಗೆ ತಿರುಗಿಸಿದರಂತೆ. ಅವರೆಲ್ಲರ ಪ್ರಯತ್ನದ ಫಲವಾಗಿಯೇ ತಂದೆಯವರು ಎರಡನೇ ಮದುವೆಗೆ ಒಪ್ಪಿಕೊಂಡಿದ್ದು; ಕಟ್ಟೇಪುರದ ಹಿರಿಯಣ್ಣಯ್ಯನವರ ಸುಪುತ್ರಿ ರುಕ್ಮಿಣಿಯನ್ನು ಮದುವೆಯಾದದ್ದು.

ಬಾಲ್ಯದಲ್ಲಿ ನನ್ನನ್ನು ಬೆಳೆಸಿದ ನನ್ನ ಚಿಕ್ಕಜ್ಜ ಶಾಮರಾಯರೇ ನನ್ನ ತಾಯಿ ರುಕ್ಮಿಣಿಯನ್ನೂ ಬೆಳೆಸಿದ್ದು. ಕೊಣನೂರಿನಲ್ಲಿ ತನ್ನ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತಿದ್ದ ಅಮ್ಮ ಅಲ್ಲೇ ಶಾಲೆಗೂ ಹೋಗುತ್ತಿದ್ದರು. ಶಾಲೆಗೆ ಹೋಗುತ್ತಿದ್ದ ವಯಸ್ಸಿನಲ್ಲೇ ಮದುವೆಯಾದರೂ, ತಂದೆಯವರ ವಿದ್ಯಾಭ್ಯಾಸದ ಹಂಬಲ ಎಷ್ಟಿತ್ತೆಂದರೆ ತಮ್ಮ ಪತ್ನಿಯನ್ನು ಶಾಲೆಯಿಂದ ಬಿಡಿಸಲಿಲ್ಲ. ಅಮ್ಮ SSLC ಮುಗಿಸಿದ ಮೇಲೆ ಮನೆಯಲ್ಲೇ ತಂದೆಯವರಿಂದ ಹಿಂದಿ ಪಾಠ ಶುರುವಾಯಿತು. ತಮ್ಮ ಮೊದಲ ಕೂಸಿಗೆ ‘ಜಯದೊಡ್ಡಮ್ಮನ ಆಶೀರ್ವಾದ ಸ್ಥಿರವಾಗಿರಲಿ-ಶ್ರೀರಕ್ಷೆಯಾಗಿರಲಿ’ ಎಂಬ ಕಾರಣಕ್ಕೆ ವಿಜಯಲಕ್ಷ್ಮಿ ಎಂದು ನಾಮಕರಣ ಮಾಡಿದರು ತಂದೆಯವರು.

ಎರಡು ವರ್ಷಗಳ ನಂತರ ಎರಡನೆಯ ಹೆರಿಗೆಗೆಂದು ಅಮ್ಮ ಕಟ್ಟೇಪುರಕ್ಕೆ ಹೊರಡುವ ವೇಳೆಗಾಗಲೇ ಅಮ್ಮ ಹಿಂದಿಯ ಪ್ರಾಥಮಿಕ ಪರೀಕ್ಷೆಗಳನ್ನೆಲ್ಲಾ  ಮುಗಿಸಿ ವಿಶಾರದ ಹಂತಕ್ಕೆ ಬಂದು ಮುಟ್ಟಿದ್ದರು. ತಂದೆಯವರು ಎರಡು ದಿನಕ್ಕೊಮ್ಮೆಯಾದರೂ ಕಟ್ಟೆಯ ಮೇಲೆ ಹೊಳೆ ದಾಟಿಕೊಂಡು ಕೊಣನೂರಿನಿಂದ ಕಟ್ಟೇಪುರಕ್ಕೆ ಹೋಗಿ ಅಮ್ಮನಿಗೆ ಹಿಂದಿ ಪಾಠ ಹೇಳಿಕೊಟ್ಟು ರಾತ್ರಿಗೆ ಮರಳುತ್ತಿದ್ದರಂತೆ. ಆ ಸಂದರ್ಭದಲ್ಲಿಯೇ ರಾಜು (ಡಾ.ಸಿ.ಎನ್.ರಾಮಚಂದ್ರನ್)‌ ನಮ್ಮ ತಂದೆಯವರ ಆಶ್ರಯದಲ್ಲಿ ಕೊಣನೂರಿನಲ್ಲೇ ಓದುತ್ತಿದ್ದರು.

‘ನಾನು ಎಷ್ಟೋ ಸಲ ಕಿಟ್ಟಣ್ಣನ (ನಮ್ಮ ತಂದೆ) ಜೊತೆ ಹೊಳೆ ದಾಟಿಕೊಂಡು ಕಟ್ಟೇಪುರಕ್ಕೆ ಹೋಗಿ ಪಾಠ ಕೇಳಿಕೊಂಡು ಬರುತ್ತಿದ್ದೆ’ ಎಂದು ಪ್ರೀತಿಯಿಂದ ನೆನೆಸಿಕೊಳ್ಳುತ್ತಾರೆ ರಾಜು. ತಂದೆಯವರಿಗೆ ಕಲಿಸಲು ಎಷ್ಟು ಉತ್ಸಾಹವಿತ್ತೋ ಅಮ್ಮನಿಗೆ ಕಲಿಯುವುದರಲ್ಲಿ ಅಷ್ಟೇ ಆಸಕ್ತಿ ಇತ್ತು’. ಹೀಗಾಗಿ ಬಸಿರು ಬಾಣಂತನಗಳ ಸಮಯದಲ್ಲಿ ನಿಷ್ಠೆಯಿಂದ ಅಭ್ಯಾಸ ಮಾಡಿ ಹಿಂದಿ ವಿಶಾರದ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದರು. ಅಮ್ಮನ ವಿಶಾರದದ ಯಶಸ್ವಿ ಮುಹೂರ್ತಕ್ಕೆ ಹೊಂದಿಕೊಂಡಂತೆಯೇ ನಮ್ಮ ಮನೆಯ ‘ಶಾರದೆ’ ನಳಿನಿ ಜನಿಸಿದ್ದು.

ತಂದೆಯವರ ಕೊಣನೂರಿನ ಸಮೀಪದಲ್ಲೇ ಒಂದು ತೋಟವನ್ನು ಮಾಡಿದ್ದರಂತೆ. ಯಾಕೋ ಅದು ಅವರಿಗೆ ಒಗ್ಗಿಬರದೆ ಮತ್ತೆ ಮಾಸ್ತರ್‌ ಗಿರಿಗೆ ಮರಳಿದರು. ಆ ಶಿಕ್ಷಣ ಕ್ಷೇತ್ರದಲ್ಲೂ ತಾಂಡವವಾಡುತ್ತಿದ್ದ ಪಕ್ಷಪಾತ-ಜಾತೀಯತೆ-ರಾಜಕೀಯಗಳನ್ನು ಕಂಡು ಸಿಡಿಮಿಡಿಗೊಳ್ಳುತ್ತಿದ್ದರು… ಚಡಪಡಿಸುತ್ತಿದ್ದರು. ಕೊನೆಗೆ ತೀರಾ ರೋಸಿ ಹೋದ ಮೇಲೆ ‘ನಿಮ್ಮ ಸಹವಾಸವೇ ಬೇಡ’ ಎಂದು ಕೆಲಸಕ್ಕೆ ಎಳ್ಳು ನೀರು ಬಿಟ್ಟು ಸ್ವತಂತ್ರವಾಗಿ ಅಂಗಡಿ ವ್ಯಾಪಾರ ಶುರು ಮಾಡಿದರು.

ಹೀಗೆ ಚಿಕ್ಕಜ್ಜ, ಚಿಕ್ಕ ಹಾಗೂ ಅಮ್ಮ ಅಂದು ರಾತ್ರಿ ಬಹಳ ಹೊತ್ತಿನ ತನಕ ಕಳೆದ ದಿನಗಳನ್ನು ನೆನೆಸಿಕೊಳ್ಳುತ್ತಾ, ನಡುನಡುವೆ ಒಮ್ಮೆ ನಗುತ್ತಾ, ಮತ್ತೊಮ್ಮೆ ಕಣ್ಣೀರು ಮಿಡಿಯುತ್ತಾ ಮಾತನಾಡುತ್ತಲೇ ಇದ್ದರು. ಮೂಕ ಪ್ರೇಕ್ಷಕನಂತೆ ಕುಳಿತು ಆಲಿಸುತ್ತಿದ್ದ ನಾನು ಕೇಳಿದ್ದೆಲ್ಲವನ್ನೂ ಅರ್ಥಮಾಡಿಕೊಳ್ಳುವ ಯತ್ನ ನಡೆಸಿದ್ದೆ. ಅದುವರೆಗೆ ದೂರದಲ್ಲೆಲ್ಲೋ ಮಸುಕು ಮಸುಕಾಗಿಯೇ ಉಳಿದಿದ್ದ ‘ಅಣ್ಣ’ನ ಒಂದು ಸ್ಪಷ್ಟರೂಪ ನಿಧಾನವಾಗಿ ಮನಸ್ಸಿನಲ್ಲಿ ಕಟ್ಟಿಕೊಳ್ಳತೊಡಗಿತು.

‍ಲೇಖಕರು Avadhi

June 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. G.N.Ranganatha Rao

    Dear Srinivasa Prabhu,
    It is quite interesting to know that your father was an ardent Theatre Lover. So Theatre is not an accident for you.It is in your blood.With it you brought some laurels to Kannada.
    G.N.Ranganatha Rao

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: