ಶ್ರೀನಿವಾಸ ಪ್ರಭು ಅಂಕಣ: ಮಗ್ ನಿಂದ ನೆಗೆದು ಆತ್ಮಹತ್ಯೆಗೆ ಯತ್ನಿಸಿದ ಮೀನು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 115
———————
ಈ ಸಮಯದಲ್ಲಿಯೇ ಒಂದು ಸ್ವಂತ ಗೂಡು ಮಾಡಿಕೊಳ್ಳುವ ವಿಚಾರವಾಗಿ ನಾವು ಆಲೋಚಿಸತೊಡಗಿದ್ದು. ರಂಜನಿಯಂತೂ ಬಹು ದಿನಗಳಿಂದಲೂ,’ ಪುಟ್ಟದಾದರೂ ಸರಿ, ನಮ್ಮದೇ ಒಂದು ಮನೆ ಮಾಡಿಕೊಳ್ಳಬೇಕೆಂ’ದು ಹಂಬಲಿಸುತ್ತಿದ್ದಳು. ವಾಸ್ತವವಾಗಿ ನಾನೇ ಆ ಕಡೆಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ನಾವು ಆ ವಿಚಾರವಾಗಿ ಯೋಚಿಸುತ್ತಿದ್ದೇವೆಂಬುದು ತಿಳಿದ ತಕ್ಷಣ ನಮ್ಮ ಮನೆಯವನೇ ಆಗಿಹೋಗಿದ್ದ ತಿಮ್ಮಣ್ಣ ಗೌಡ ಒಳ್ಳೆಯ ನಿವೇಶನವನ್ನು ಹುಡುಕುವ ಕೆಲಸ ಆರಂಭಿಸಿಯೇ ಬಿಟ್ಟ! ಬಸವೇಶ್ವರ ನಗರದಲ್ಲಿಯೇ, ಶಂಕರಮಠದಿಂದ ತುಸು ದೂರದಲ್ಲಿಯೇ ಒಂದು ಪುಟ್ಟ ನಿವೇಶನ ನಮಗಾಗಿ ಕಾಯುತ್ತಿತ್ತು! ನಾಗರಾಜರಾವ್ ಎಂಬುವವರಿಗೆ ಸೇರಿದ್ದು ಆ ನಿವೇಶನ.

ರಂಗಭೂಮಿಯ ಗೆಳೆಯರಾದ ನೀಲಿ ಅವರಿಗೆ ಈ ನಾಗರಾಜ ರಾವ್ ಅವರು ತುಂಬಾ ಬೇಕಾದವರು. ಒಂದು ಸಂಜೆ ಗಾಲ್ಫ್ ಕ್ಲಬ್ ನಲ್ಲಿ ಅವರನ್ನು ಭೇಟಿಯಾಗಿ ಸೈಟ್ ವಿಚಾರವಾಗಿ ಮಾತಾಡಿದೆವು. ಸಹೃದಯರೂ ಕಲಾಪ್ರೇಮಿಗಳೂ ಆಗಿದ್ದ ನಾಗರಾಜರಾಯರು ತುಂಬಾ ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದ್ದಷ್ಟೇ ಅಲ್ಲ, “ನೀವು ಬೆಲೆಯ ವಿಷಯದಲ್ಲಿ ಚೌಕಾಸಿ ಮಾಡಲು ನಾನು ಅವಕಾಶವನ್ನೇ ಕೊಡುವುದಿಲ್ಲ…ಕಲಾವಿದರು ಅಂದರೆ ನನಗೆ ವಿಶೇಷ ಅಭಿಮಾನ..ಅನೇಕ ಧಾರಾವಾಹಿಗಳಲ್ಲಿ ಸಿನೆಮಾಗಳಲ್ಲಿ ನಿಮ್ಮ ಅಭಿನಯ ನೋಡಿ ಮೆಚ್ಚಿಕೊಂಡಿದ್ದೇನೆ.. ಹಾಗಾಗಿ ನಾನೇ ಈ ಹಿಂದೆ ಹೇಳಿದ ಬೆಲೆಗಿಂತ ಒಂದು ಲಕ್ಷ ಕಡಿಮೆ ಮಾಡಿಕೊಂಡು ಬಿಡುತ್ತೇನೆ” ಎಂದುಬಿಟ್ಟರು! ಬಹುಶಃ ಕಲಾವಿದರು ತಮ್ಮ ಬದುಕಿನಲ್ಲಿ ಗಳಿಸಿಕೊಳ್ಳುವ ಬಹು ದೊಡ್ಡ ಆಸ್ತಿಯೆಂದರೆ ಸಹೃದಯರ ಇಂಥ ಪ್ರೀತಿ ವಿಶ್ವಾಸಗಳೇ ಎಂದು ತೋರುತ್ತದೆ! ನಾವೂ ಸಹಾ ಮತ್ತೇನೂ ಚರ್ಚೆಗೆ ಇಳಿಯದೆ ರಾಯರಿಗೆ ಧನ್ಯವಾದಗಳನ್ನರ್ಪಿಸಿ ಅಲ್ಲಿಂದ ಹೊರಟೆವು.

ಮೂರ್ತಿ ಭಾವನವರು ತಮ್ಮ ಶಿಷ್ಯ ವಾಸುದೇವ್ ಎಂಬುವವರಿಗೆ ನಮ್ಮ ಮನೆಯನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ಒಪ್ಪಿಸಿದರು. ಅವರೇ ಮನೆಯ ವಿನ್ಯಾಸವನ್ನು ಸೊಗಸಾಗಿ ರೂಪಿಸಿಕೊಟ್ಟರು ಕೂಡಾ. ಒಂದು ಶುಭ ಮುಹೂರ್ತದಲ್ಲಿ ನಮ್ಮ ಮನೆಯ ನಿರ್ಮಾಣ ಕಾರ್ಯ ಆರಂಭವಾಗಿಯೇ ಬಿಟ್ಟಿತು. ಮನೆಯನ್ನು ಕಟ್ಟಲು ಸಾಲವನ್ನು ನೀಡಿ ಸಹಕರಿಸಿದವರು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಕ್ಯಾಂಪಸ್ ನಲ್ಲಿದ್ದ ಕೆನರಾ ಬ್ಯಾಂಕ್ ಶಾಖೆ ಹಾಗೂ ಅಲ್ಲಿ ಮ್ಯಾನೇಜರ್ ಆಗಿದ್ದ ರಾಮಣ್ಣ ಅವರು. ಅಲ್ಲಿಂದ ಮುಂದಿನ ನಾಲ್ಕಾರು ತಿಂಗಳುಗಳು ಬಲು ಸಂಭ್ರಮದ ದಿನಗಳು! ರಂಜನಿಯಂತೂ ಬಿಡುವಾದಾಗಲೆಲ್ಲಾ ಮಕ್ಕಳೊಂದಿಗೆ ಸೈಟ್ ಬಳಿಗೆ ಹೋಗಿ ನಿರ್ಮಾಣ ಕಾರ್ಯದ ಪ್ರತಿ ಹಂತವನ್ನೂ ಪರಿಶೀಲಿಸುತ್ತಾ ಸಂಭ್ರಮಿಸುತ್ತಿದ್ದಳು. ಮೂರ್ತಿ ಭಾವನವರ ಮೇಲ್ವಾಚಾರಣೆಯಲ್ಲಿ, ವಾಸುದೇವ್ ಅವರ ನೇತೃತ್ವದಲ್ಲಿ ನಮ್ಮ ಪುಟ್ಟ ಕನಸಿನ ಅರಮನೆ ಸಿದ್ಧವಾಗಿಯೇ ಹೋಯಿತು.

ಒಂದು ಸುಮುಹೂರ್ತದಲ್ಲಿ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮವೂ ನಿಗದಿಯಾಗಿಹೋಯಿತು. ಸಾಂಪ್ರದಾಯಿಕವಾಗಿ ಆಗಬೇಕಾಗಿದ್ದ ಮಂಗಳ ಕಾರ್ಯಗಳನ್ನು ಒಂದುಶುಭ ದಿನದಂದು ಮುಗಿಸಿ ಗುರು ಹಿರಿಯರ ಆಶೀರ್ವಾದ ಪಡೆದು ಮತ್ತೊಂದು ದಿನ ಬಂಧು ಮಿತ್ರರನ್ನೆಲ್ಲಾ ಆಹ್ವಾನಿಸಿ ಒಂದು ಔತಣ ಕೂಟವನ್ನು ಏರ್ಪಡಿಸಿದ್ದೆವು.

ಮರೆತಿದ್ದೆ:

ಈ ವೇಳೆಗಾಗಲೇ—ಕೆಲ ವರ್ಷಗಳಿಂದಲೇ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಂಡು ಬಣ್ಣ ಬಣ್ಣದ ಚಂದದ ಮೀನುಗಳನ್ನು ತಂದು ಅದರಲ್ಲಿ ಬಿಟ್ಟು ಸಾಕುವ ಹವ್ಯಾಸ ಶುರುವಾಗಿತ್ತು. ಈ ಹವ್ಯಾಸ ಆರಂಭವಾದದ್ದು ಕಲಾವಿದ ಮಿತ್ರ ಪ್ರಮೋದನಿಂದ. ಪ್ರಮೋದ ತನ್ನ ಮನೆಯ ಮಹಡಿಯ ಮೇಲ್ಭಾಗದಲ್ಲಿ ನಾಲ್ಕಾರು ಚಿಕ್ಕ ಚಿಕ್ಕ ಟ್ಯಾಂಕ್ ಗಳನ್ನು ಕಟ್ಟಿಸಿ ಬಗೆಬಗೆಯ ಜಾತಿಯ ಮೀನುಗಳ ಸಂತಾನೋತ್ಪತ್ತಿ ನಡೆಸುತ್ತಿದ್ದ! ಅಕಸ್ಮಾತ್ ಈ ವಿಷಯ ನನ್ನ ಅರಿವಿಗೆ ಬಂದದ್ದೇ ತಡ, ಮೀನು ಮನ ಹೊಕ್ಕಿಬಿಟ್ಟಿತು! ಮರುದಿನವೇ ಅಕ್ವೇರಿಯಂ ಖರೀದಿಸಿ ತಂದು ಒಂದಷ್ಟು ಮೀನುಗಳನ್ನು ಪ್ರಮೋದನಿಂದ ಪಡೆದು ತಂದು ಅದರಲ್ಲಿ ಬಿಟ್ಟೆ.

ಈ ನನ್ನ ಮೀನು ಸಾಕುವ ಆಸೆಗೆ ನೀರೆರೆದು ಪೋಷಿಸಿದವನು ಮತ್ತೊಬ್ಬ ಕಲಾವಿದ ಮಿತ್ರ, ಹ್ಯೂಮರ್ ಕ್ಲಬ್ ನ ಸದಸ್ಯ ಕೆ.ಆರ್.ನಾಗಭೂಷಣ. ನಾವಿಬ್ಬರೂ ಪ್ರತಿ ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ರಸಲ್ ಮಾರ್ಕೆಟ್ ಗೆ ಹೋಗಿಬಿಡುತ್ತಿದ್ದೆವು. ಚೆನ್ನೈನಿಂದ ರವಾನೆಯಾಗಿ ಬರುತ್ತಿದ್ದ ಬಗೆಬಗೆಯ ಮೀನುಗಳ ಪೇಟಿಗಳು ರಸಲ್ ಮಾರ್ಕೆಟ್ ನ ಮುಂಭಾಗದಲ್ಲಿ ಬಂದಿಳಿಯುತ್ತಿದ್ದುದು ಭಾನುವಾರ ಬೆಳಿಗ್ಗೆ 8 ಗಂಟೆಗೆ. ತಡವಾಗಿ ಹೋದರೆ ಬೇಕಾದ ಒಳ್ಳೊಳ್ಳೆಯ ಮೀನುಗಳು ಸಿಗದೇ ಹೋಗಿಬಿಟ್ಟರೆ ಎಂಬ ಭಯ! ಕೆಲ ಜಾತಿಯ ಮೀನುಗಳಿಗಂತೂ ವಿಪರೀತ ಬೆಲೆ. ಆದರೂ ನಾನು ಬಿಡುತ್ತಿರಲಿಲ್ಲ! ಒಟ್ಟಿನಲ್ಲಿ ನಮ್ಮ ಅಕ್ವೇರಿಯಂ ವರ್ಣರಂಜಿತ ಮೀನುಗಳಿಂದ ತುಂಬಿ ಆಕರ್ಷಣೀಯವಾಗಿರಬೇಕು, ಅಷ್ಟೇ! ಎರಡು ಮೂರು ಅಕ್ವೇರಿಯಂಗಳನ್ನಿಟ್ಟುಕೊಂಡು,ಪರಸ್ಪರ ಹೊಂದಿಕೊಂಡು ಇರುವ ಜಾತಿಯ ಮೀನುಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟದ್ದೂ ಉಂಟು! ಗಂಟೆಗಟ್ಟಲೆ ಕೂತು ಅಕ್ವೇರಿಯಂಗಳನ್ನು ಚಂದದ ಕಲ್ಲು—ಆಟಿಕೆಗಳಿಂದ, ನೀರಿನಲ್ಲೇ ಬೆಳೆಯುವ ವಿಶೇಷ ಗಿಡಗಳಿಂದ ಸಿಂಗರಿಸುತ್ತಿದ್ದೆ. ನನಗೆ ಮೀನು ತಿನ್ನುವ ಅಭ್ಯಾಸವಿಲ್ಲದಿದ್ದರೂ ಈ ಅಲಂಕಾರಿಕ ಮೀನುಗಳು ಮಾತ್ರ ನನ್ನ ಸಾಕಷ್ಟು ಸಮಯವನ್ನೂ ಹಣವನ್ನೂ ತಿಂದು ಹಾಕಿವೆ!

ಒಂದು ಸ್ವಾರಸ್ಯಕರ ಮತ್ಸ್ಯಪ್ರಸಂಗ ನೆನಪಾಗುತ್ತಿದೆ:

ಒಮ್ಮೆ ಅಕ್ವೇರಿಯಂನಲ್ಲಿದ್ದ ಒಂದು ಮೀನು ಯಾಕೋ ಸಪ್ಪಗಿದ್ದಂತೆ ನನಗೆ ಭಾಸವಾಗಿಬಿಟ್ಟಿತು. ಲವಲವಿಕೆಯೇ ಇಲ್ಲದೆ ಮೂಲೆಯೊಂದರಲ್ಲಿ ಚಿಂತಾಕ್ರಾಂತವಾಗಿ ಒರಗಿದ್ದ ಆ ಮೀನನ್ನು ನೋಡಿ, ‘ಅದರ ಆರೋಗ್ಯ ಸರಿಯಿಲ್ಲ’ ಎನ್ನಿಸಿಬಿಟ್ಟಿತು. ಸಾಧಾರಣವಾಗಿ ಹುಷಾರು ತಪ್ಪಿದರೆ ಮೀನುಗಳು ಹಾಗೆ ಚಟುವಟಿಕೆಯಿಲ್ಲದೇ ಸಪ್ಪಗಾಗಿಬಿಡುವುದುಂಟು. ಒಂದು ವೇಳೆ ಅದಕ್ಕೆ ಏನಾದರೂ ಸಾಂಕ್ರಾಮಿಕ ಜಡ್ಡು ತಗುಲಿದ್ದರೆ ಉಳಿದ ಮೀನುಗಳಿಗೂ ಅದು ಹರಡುವ ಅಪಾಯವಿದೆ ಎಂಬ ಯೋಚನೆ ಮನಸ್ಸಿಗೆ ಬಂತು. ಕೂಡಲೇ ನೆಟ್ ನ ನೆರವಿನಿಂದ ಆ ಮೀನನ್ನು ಹೊರತೆಗೆದು ಒಂದು ಮಗ್ ನಲ್ಲಿ ಹಾಕಿ ಒಂದೆರಡು ಹನಿ ಔಷಧವನ್ನೂ ಹಾಕಿ ಸಮಾಧಾನದಿಂದ ನನ್ನ ಕೆಲಸಕ್ಕೆ ಹೊರಟೆ. ಅಂದು ಸಂಜೆ ಗೆಳೆಯರೊಂದಿಗೆ ಪಾರ್ಟಿ ಇದ್ದುದರಿಂದ ಬರುವುದು ತಡವಾಗುತ್ತದೆಂದು ರಂಜನಿಗೆ ಹೇಳಿಯೇ ಹೊರಟಿದ್ದೆ.

ರಾತ್ರಿ ಸುಮಾರು 10 ಗಂಟೆಯ ಸಮಯ.. ಪಾರ್ಟಿಗೆ ನಿಧಾನವಾಗಿ ರಂಗೇರುತ್ತಿತ್ತು. ಆಗಲೇ ನನ್ನ ಮೊಬೈಲ್ ರಿಂಗಣಿಸಿತು.. ಅದು ರಂಜನಿಯ ಕರೆ. ಕರೆಯನ್ನು ಸ್ವೀಕರಿಸುತ್ತಿದ್ದಂತೆ ರಂಜನಿಯ ಬಿಕ್ಕುದನಿ ಕೇಳಿ ಅಕ್ಷರಶಃ ನಡುಗಿಬಿಟ್ಟೆ.. ಏನು ಅನಾಹುತವಾಗಿಬಿಟ್ಟಿದೆಯೋ ಎಂಬ ಗಾಬರಿಯಿಂದ. “ಸಮಾಧಾನ ಮಾಡಿಕೊಂಡು ಏನಾಗಿದೆ ಅಂತ ಸರಿಯಾಗಿ ಹೇಳು” ಎಂದು ಕೊಂಚ ಏರುದನಿಯಲ್ಲೇ ನಾನು ಕೇಳಿದಾಗ ರಂಜನಿ ಅಳುತ್ತಳುತ್ತಲೇ ನುಡಿದಳು: “ನೀವು ಮಗ್ ನಲ್ಲಿ ಹಾಕಿಟ್ಟಿದ್ದ ಮೀನು ಹಾರಿ ಕೆಳಕ್ಕೆ ಬಿದ್ದುಬಿಟ್ಟಿದೆ.. ಒದ್ದಾಡ್ತಿದೆ.. ನೀವು ಈ ತಕ್ಷಣ ಹೊರಟು ಬನ್ನಿ.. ಅದರ ಒದ್ದಾಟ ನನ್ನ ಕೈಲಿ ನೋಡೋಕಾಗ್ತಿಲ್ಲ”!!

‘ನೀನೇ ಕೈಲಿ ಎತ್ತಿ ಮತ್ತೆ ನೀರಿಗೆ ಬಿಡಬಾರದೇ’ ಎಂದು ನಾನಂದರೆ, “ಅಯ್ಯೋ! ಅಷ್ಟು ದೊಡ್ಡ ಮೀನು ನಂಗೆ ಕೈಲಿ ಹಿಡಿಯೋಕಾಗಲ್ಲ.. ಅದೊಂಥರಾ ಜಾರುತ್ತೆ ಬೇರೆ… ನೀವು ತಕ್ಷಣಾನೇ ಹೊರಟುಬಂದುಬಿಡಿ.. ನಂಗೆ ತುಂಬಾ ಭಯ ಆಗ್ತಿದೆ” ಎಂದು ಮತ್ತೊಮ್ಮೆ ಬಿಕ್ಕಿ ಫೋನ್ ಇಟ್ಟುಬಿಟ್ಟಳು ರಂಜನಿ.

ಅಯ್ಯೋ! ಪಾರ್ಟಿ ಇರುವ ಇಂದೇ ಹೀಗಾಗಬೇಕೇ! ಆ ಮೀನಿಗೇಕೆ ಮಗ್ ನಿಂದ ನೆಗೆದು ಆತ್ಮಹತ್ಯೆ ಮಾಡಿಕೊಳ್ಳುವಂಥಾ ದುರ್ಬುದ್ಧಿ ಬಂದಿತು? ಅಥವಾ ನಾನು ಪಾರ್ಟಿಯಲ್ಲಿರುವ ಸಮಯವನ್ನೇ ನೋಡಿಕೊಂಡು ಇಂಥದೊಂದು ಪ್ರಯತ್ನ ಮಾಡಿರುವ ಆ ಮೀನು ರಂಜನಿಯ ಜತೆ ಶಾಮೀಲಾಗಿರಬಹುದೇ ನನ್ನನ್ನು ಬೇಗ ಮನೆಗೆ ಕರೆಸಿಕೊಳ್ಳಲು! ಹೀಗೇ ಯೋಚಿಸುತ್ತಿರುವಾಗಲೇ ಮತ್ತೆ ಫೋನ್ ರಿಂಗಣಿಸಿತು! ಮತ್ತದೇ ರಂಜನಿಯ ಬಿಕ್ಕುದನಿ..”ಹೊರಟ್ರಾ?” ಎಂಬ ವಿಚಾರಣೆ! ಕನಿಷ್ಠ ಅರ್ಧ ತಾಸಿನ ಹಾದಿ.. ಬರುವವರೆಗೂ ಆ ಮೀನು ಜೀವ ಹಿಡಿದುಕೊಂಡು ಕಾಯುತ್ತಿರುತ್ತದೆಯೇ? ಅದರ ಆತ್ಮಕ್ಕೆ ಶಾಂತಿ ಕೋರುವುದೇ ಒಳ್ಳೆಯದೇನೋ ಎಂದು ನಾನೆಂದರೆ ರಂಜನಿಗೆ ಸಿಟ್ಟೇ ಬಂದುಬಿಟ್ಟಿತು! “ಇಷ್ಟೂ ಅವುಗಳ ಬಗ್ಗೆ ದಯೆ—ಕಾಳಜಿ ಇಲ್ಲದಿದ್ದರೆ ಸಾಕಬೇಕು ಯಾಕೋ? ಅದೆಲ್ಲಾ ನಂಗೊತ್ತಿಲ್ಲ..ಈ ಕೂಡಲೇ ಹೊರಟುಬನ್ನಿ” ಎಂದು ರೇಗಿದವಳೇ ಫೋನ್ ಇಟ್ಟುಬಿಟ್ಟಳು. ವಿಧಿಯಿಲ್ಲದೆ ನಾನು ಗೆಳೆಯರಿಗೆ ಈ ಮತ್ಸ್ಯ ಪುರಾಣವನ್ನೇನೂ ಹೇಳಹೋಗದೇ “ತುರ್ತಾಗಿ ಹೋಗಬೇಕಾಗಿದೆ” ಎಂದಷ್ಟೇ ಹೇಳಿ ಅಲ್ಲಿಂದ ಹೊರಟೆ.

ರಾತ್ರಿಯ ವೇಳೆಯಾದ್ದರಿಂದ ಹೆಚ್ಚು ವಾಹನ ಸಂಚಾರವಿರದೇ ಬೇಗನೇ ಮನೆ ತಲುಪಿದೆ. ಬೇಗಬೇಗನೇ ಒಳಗೆ ಹೋಗಿ ನೋಡಿದರೆ ಮೀನು ನೆಲದ ಮೇಲೆ ಚಲನೆಯೇ ಇಲ್ಲದೆ ಮೂರ್ಛಾವಸ್ಥೆಯಲ್ಲಿ ಬಿದ್ದಿತ್ತು. ಮೂರ್ಛೆಯೋ ಮುಕ್ತಿಯೋ ತಿಳಿಯದೆ ಏನಾದರಾಗಲಿ ಎಂದು ಕೈಲಿ ಹಿಡಿದು ಎತ್ತಿಕೊಂಡು ಮತ್ತೆ ಮಗ್ ಗೆ ಹಾಕಿದೆ. ಒಂದು ಕ್ಷಣ ಏನೂ ಚಲನೆಯಿಲ್ಲದೆ ತೇಲುತ್ತಿದ್ದ ಮೀನು ಇದ್ದಕ್ಕಿದ್ದಂತೆ ಎಚ್ಚತ್ತುಕೊಂಡು ಓಡಾಡಲಾರಂಭಿಸಿಬಿಟ್ಟಿತು! ರಂಜನಿಯಂತೂ ಖುಷಿಯಿಂದ ಕಿರುಚಿಯೇ ಬಿಟ್ಟಳು! ಸತ್ಯವಾಗಿ ಹೇಳುತ್ತೇನೆ—ಆ ಮೀನು ಬದುಕಿ ಉಳಿಯುತ್ತದೆನ್ನುವ ನಂಬಿಕೆ ನನಗಂತೂ ಸಾಸಿವೆ ಕಾಳಿನಷ್ಟೂ ಇರಲಿಲ್ಲ. ಒಂದರ್ಥದಲ್ಲಿ ರಂಜನಿಯ ಹಠವೇ ಅದಕ್ಕೆ ಮರು ಜನ್ಮ ನೀಡಿದ್ದು! ಅದಾದ ಮೇಲೆ ಆ ಮೀನನ್ನು ಅಕ್ವೇರಿಯಂಗೇ ವರ್ಗಾಯಿಸಿಬಿಟ್ಟೆ. ರಿವರ್ ಶಾರ್ಕ್ ಜಾತಿಯ ಕಂದು—ಕೆಂಪು ಬಣ್ಣ ಮಿಶ್ರಿತ ಆ ಮೀನು ಈ ಘಟನೆಯಾದ ಬಳಿಕ ಬರೋಬ್ಬರಿ ಎರಡು ವರ್ಷ ಆರೋಗ್ಯವಾಗಿ ಬದುಕಿತ್ತು!

ಮರುದಿನ ರಂಜನಿ ಕಾಲೇಜಿನಲ್ಲಿ ಈ ಮತ್ಸ್ಯ ಪ್ರಸಂಗವನ್ನು ತನ್ನ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಳಂತೆ.
ಯುವ ಕವಿ ಭರತ್ ರಂಗೇಗೌಡ (ಪ್ರಸಿದ್ಧ ಕವಿ ಡಾ॥ದೊಡ್ಡರಂಗೇಗೌಡರ ಸುಪುತ್ರ) ಕೂಡಾ ರಂಜನಿಯ ಸಹೋದ್ಯೋಗಿಯಾಗಿದ್ದವರು. ಈ ಮೀನು ಕಥೆಯನ್ನು ಕೇಳಿ ಸ್ಫೂರ್ತಿಗೊಂಡು, ಕೆಳಗೆ ಬಿದ್ದ ಮೀನಿನ ಮಿಡುಕಾಟವನ್ನೂ ಅದನ್ನು ನೋಡಿ ವ್ಯಾಕುಲಗೊಂಡ ರಂಜನಿಯ ತೊಳಲಾಟವನ್ನೂ ಕೇಂದ್ರವಾಗಿಟ್ಟುಕೊಂಡು ಒಂದು ಚಂದದ ಕವಿತೆಯನ್ನೇ ಬರೆದುಬಿಟ್ಟಿದ್ದರು!

ಇರಲಿ. ಮರಳಿ ಹೊಸ ಮನೆಗೆ ಬರುತ್ತೇನೆ.

ಹೊಸಮನೆಯಲ್ಲಿ ಒಂದು ದೊಡ್ಡ ಅಕ್ವೇರಿಯಂ ಇಟ್ಟುಕೊಳ್ಳಬೇಕೆಂಬುದು ನನ್ನ ಕನಸಾಗಿತ್ತು. ಅಮೆರಿಕೆಯಲ್ಲಿರುವ ನನ್ನ ತಂಗಿ ಪದ್ಮಿನಿ ತನ್ನ ಮನೆಯ ಹಜಾರದಲ್ಲಿ ‘ವಾಲ್ ಟು ವಾಲ್’ ಅಕ್ವೇರಿಯಂ ಅನ್ನು ಅಳವಡಿಸಿದ್ದಳು. ಅಷ್ಟು ದೊಡ್ಡದಾಗಿ ಅಳವಡಿಸಲು ನಮ್ಮ ಹೊಸ ಮನೆಯ ವಿನ್ಯಾಸದಲ್ಲಿ ಅವಕಾಶವಿರದಿದ್ದರೂ ಹಜಾರದಲ್ಲಿದ್ದ ಹಿಂಬದಿಯ ಎರಡು ದೊಡ್ಡ ಕಂಬಗಳ ನಡುವಿನ ಸುಮಾರು ಆರು ಅಡಿಯಷ್ಟು ಜಾಗದಲ್ಲಿ ನಾಲ್ಕು ಅಡಿ ಎತ್ತರದ ಅಕ್ವೇರಿಯಂ ಅನ್ನು ಅಳವಡಿಸಲು ನಾನು ಯೋಜಿಸಿದೆ. ಮುಂಭಾಗಕ್ಕೆ ಮಾತ್ರ ದಪ್ಪ ಗಾಜು; ಉಳಿದ ಮೂರು ಬದಿಗಳಿಗೂ ಇಟ್ಟಿಗೆಯ ಗೋಡೆ. ಅಲ್ಲಿಗೆ ನೀರಿನ ವ್ಯವಸ್ಥೆಗಾಗಿ ಒಂದು ಪ್ರತ್ಯೇಕ ಪೈಪ್ ಅನ್ನೇ ಎಳೆಸಿ ನೇರ ಅಕ್ವೇರಿಯಂಗೆ ನೀರು ಬೀಳುವಂತೆ ಒಂದು ನಲ್ಲಿಯನ್ನೂ ಹಾಕಿಸಿಬಿಟ್ಟಿದ್ದೆ.

ಇನ್ನು ಅಕ್ವೇರಿಯಂನಲ್ಲಿ ಬಿಡಲು ಅಪರೂಪದಲ್ಲಿ ಅಪರೂಪದ ಮೀನುಗಳು ಬೇಕಲ್ಲಾ..ಅವನ್ನು ತರಲು ಚೆನ್ನೈಗೇ ಹೋಗಿಬಿಡುವುದೆಂದು ತೀರ್ಮಾನಿಸಿದೆ! ಆಪ್ತ ಸಹಾಯಕ ಪ್ರಕಾಶನನ್ನೂ ಜತೆ ಮಾಡಿಕೊಂಡು ನನ್ನ ಹಸಿರು ಬಣ್ಣದ ಮಾರುತಿ 800 ಕಾರ್ ನಲ್ಲಿ ಒಂದು ಸುಂದರ ಬೆಳಗಿನ ಜಾವದಲ್ಲಿ ಚೆನ್ನೈನತ್ತ ಪ್ರಯಾಣ ಬೆಳೆಸಿಯೇ ಬಿಟ್ಟೆ! ಇಲ್ಲೂ ಒಂದು ಪುಟ್ಟ ಎಡವಟ್ಟು ಮಾಡಿಕೊಂಡೆ: ಅದು ಹೇಗೋ ಚೆನ್ನೈಗೆ ಹೋಗಬೇಕಾದರೆ ಸೇಲಂ ಮಾರ್ಗವಾಗಿಯೇ ಹೋಗಬೇಕು ಎಂಬುದು ನನ್ನ ತಲೆಯಲ್ಲಿ ಭದ್ರವಾಗಿ ಕೂತುಬಿಟ್ಟಿತ್ತು. ಅದೆಷ್ಟು ಬಲವಾಗಿ ಆ ಭಾವನೆ ಬೇರೂರಿತ್ತೆಂದರೆ ಒಬ್ಬರನ್ನು ಕೇಳಿ ಖಚಿತ ಪಡಿಸಿಕೊಳ್ಳಬೇಕೆಂದೂ ನನಗನ್ನಿಸಲಿಲ್ಲ! ಜೊತೆಗಿದ್ದ ಪ್ರಕಾಶನೋ ಇಂಥ ವಿಚಾರಗಳಲ್ಲಿ ನನ್ನನ್ನು ಮೀರಿಸಿದ ಜಾಣ! ಸೇಲಂ ತಲುಪಿ ಅರ್ಧ ದೂರ ದಾಟಿಯಾಯಿತೆಂದು ಸಂಭ್ರಮಿಸುತ್ತಿರುವಾಗಲೇ ‘ಚೆನ್ನೈ 350 ಕಿ ಮೀ’ ಎಂಬ ಫಲಕ ಕಣ್ಣಿಗೆ ಬಿದ್ದು ಒಂದು ಸಲ ಮೈ ನಡುಗಿತು!

ಅಯ್ಯೋ! ಹೀಗೂ ಮೋಸ ಹೋಗುವುದುಂಟೇ? ಇದರ ಮೇಲೆ ಈ ಅಚಾತುರ್ಯಕ್ಕಾಗಿ ಬೇರೆ ಯಾರನ್ನೂ ದೂಷಿಸುವಂತೆಯೂ ಇಲ್ಲ! ಅನುಭವಿಸಬೇಕು ಅಷ್ಟೇ! “ಯಾರಿಗೂ ಇಂಥದೊಂದು ಪಡಿಪಾಟಲಾಯಿತು ಎಂದು ಹೇಳಬೇಡ..ನಮ್ಮ ದಡ್ಡತನವನ್ನು ನಾವೇ ಸಾರಿಕೊಂಡಂತಾಗುತ್ತದೆ” ಎಂದು ಪ್ರಕಾಶನನ್ನು ಎಚ್ಚರಿಸಿ ಚೆನ್ನೈ ದಾರಿಯಲ್ಲಿ ಹೊರಟೆ. ಸಂಜೆ 7 ಗಂಟೆಯಾಗಿತ್ತು ಚೆನ್ನೈ ತಲುಪಿದಾಗ! ಅಲ್ಲಿ ಮಿತ್ರರು ಹೇಳಿದ್ದ ಮೀನು ಮಾರ್ಕೆಟ್ ಅನ್ನು ಹುಡುಕಿಕೊಂಡು ಹೋಗಿ ತಲುಪಿದಾಗ ಅಲ್ಲಿ ಬಹು ದೊಡ್ಡ ನಿರಾಸೆ ಕಾದಿತ್ತು: ಯಾವ ವಿಶೇಷ ಮೀನುಗಳೂ ಅಲ್ಲಿ ಕಣ್ಣಿಗೆ ಬೀಳಲೇ ಇಲ್ಲ. ಅಲ್ಲಿದ್ದ ಎಲ್ಲಾ ಜಾತಿಯ ಮೀನುಗಳೂ ಬೆಂಗಳೂರಿನಲ್ಲಿಯೇ ಆರಾಮವಾಗಿ ಸಿಗುತ್ತಿದ್ದವು. ಅಷ್ಟು ದೂರ ಒದ್ದಾಡಿಕೊಂಡು ‘ದಾರಿ ತಪ್ಪಿದ ಮಕ್ಕಳಾಗಿ’ ಬೇರೆ ಬಂದು ಸೇರಿದ್ದ ತಪ್ಪಿಗಾಗಿ ಒಂದಷ್ಟು ಮೀನುಗಳನ್ನೂ ಬಣ್ಣಬಣ್ಣದ ಕಲ್ಲುಗಳನ್ನೂ ಖರೀದಿಸಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬೆಂಗಳೂರಿನತ್ತ ಮುಖ ಮಾಡಿದೆವು. ಈ ಬಾರಿ ಮಾತ್ರ ಬೆಂಗಳೂರಿಗೆ ಸರಿಯಾದ ದಾರಿ
ಯಾವುದೆಂದು ಕೇಳಿ ಖಾತ್ರಿ ಪಡಿಸಿಕೊಳ್ಳಲು ಮರೆಯಲಿಲ್ಲ!

ಡಿಸೆಂಬರ್ 30/ 2021 ನಮ್ಮ ಹೊಸ ಮನೆಗೆ ಔತಣಕೂಟಕ್ಕಾಗಿ ಬಂಧು ಮಿತ್ರರನ್ನೆಲ್ಲಾ ಆಹ್ವಾನಿಸಿದ್ದೆವು. 29 ನೆಯ ತಾರೀಖು ಅಕ್ವೇರಿಯಂ ನಿರ್ಮಾಣದ ಕಾರ್ಯ ಮುಗಿದು ಆ ದೊಡ್ಡ ಟ್ಯಾಂಕ್ ಗೆ ನೀರು ತುಂಬಿಸಿ ಒಳಗೆ ಒಂದಷ್ಟು ವಿನ್ಯಾಸದ ಕಲ್ಲುಗಳನ್ನೂ ವಿಶೇಷ ಗಿಡಗಳನ್ನೂ ಜೋಡಿಸಿಟ್ಟೆವು. ನೀರು ಕೊಂಚ ತಿಳಿಯಾದ ಮೇಲೆ ಮೀನುಗಳನ್ನು ಅಕ್ವೇರಿಯಂಗೆ ಬಿಡುವುದೆಂಬುದು ನನ್ನ ಆಲೋಚನೆಯಾಗಿತ್ತು. 29 ರ ರಾತ್ರಿ ಬಿ ಇ ಎಂ ಎಲ್ ಬಡಾವಣೆಯ ‘ಅಕ್ಕ ತಂಗಿ’ಯರ ಮನೆಯಲ್ಲಿ (ಮೂವರು ಅಕ್ಕ ತಂಗಿಯರು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದುದರಿಂದ ಆ ಮನೆಗೆ ಆ ಹೆಸರು ಪ್ರಾಪ್ತವಾಗಿತ್ತು!) ಮಲಗಿದ್ದ ನನಗಾಗಲೀ ರಂಜನಿಗಾಗಲೀ ಮರುದಿನದ ಹೊಸ ಮನೆಯ ಗೃಹ ಪ್ರವೇಶದ ಸಂಭ್ರಮದ ಕನವರಿಕೆಯಲ್ಲಿ ನಿದ್ದೆಯಾದರೂ ಹೇಗೆ ಹತ್ತಬೇಕು? ಹಾಗೇ ಇರುಳು ಕಳೆದು ಮರುದಿನದ ಬೆಳಗು ಮೂಡಿಯೇಬಿಟ್ಟಿತು.

ಇನ್ನೇನು ಎದ್ದು ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ಹೊರಡಬೇಕು, ಅಷ್ಟರಲ್ಲಿ ಮನೆಯ ಫೋನ್ ರಿಂಗಣಿಸಿತು. ಫೋನ್ ಮಾಡಿದ್ದವನು ನಮ್ಮ ಹೊಸ ಮನೆಯ ವಾಚ್ ಮನ್ ಮುತ್ತು. ಮುತ್ತು ಕೊಟ್ಟ ಸುದ್ದಿ ಮಾತ್ರ ಮುತ್ತಿನಂಥದ್ದಾಗಿರಲಿಲ್ಲ…ಭಾರೀ ಆಘಾತಕಾರಿಯೇ ಆಗಿತ್ತು! ಅಂದು ಬೆಳಗಿನ ಜಾವದಲ್ಲಿಯೇ ಅಕ್ವೇರಿಯಂನ ಮುಂಭಾಗದ ಗಾಜು ಫಳಾರ್ ಎಂದು ದೊಡ್ಡ ಸದ್ದಿನೊಂದಿಗೆ ಒಡೆದುಬಿದ್ದಿದೆ! ಹಜಾರದ ಆವರಣ ಸಂಪೂರ್ಣವಾಗಿ ಜಲಾವೃತವಾಗಿಬಿಟ್ಟಿದೆ! ಸುಮಾರು ಎರಡು ತಾಸಿನಿಂದಲೂ ಮುತ್ತು ಹಾಗೂ ಅವನ ಪತ್ನಿ ನೀರನ್ನು ತೆಗೆದುಹಾಕುವ ಕೆಲಸದಲ್ಲಿ ತೊಡಗಿದ್ದಾರೆ! ಸುದ್ದಿ ಕೇಳುತ್ತಿದ್ದಂತೆ ನಾನೂ ರಂಜನಿಯೂ ಗರ ಬಡಿದವರಂತಾಗಿಬಿಟ್ಟೆವು. ಛೆ! ಗೃಹ ಪ್ರವೇಶದ ದಿನವೇ ಇಂತಹದೊಂದು ಅನಾಹುತವಾಗಬೇಕೇ? ಅಥವಾ ಮುಂಬರುವ ಯಾವುದೋ ಅಶುಭದ ಸಂಕೇತಸೂಚಕ ಅಪಶಕುನವೋ ಈ ಘಟನೆ? ಆತಂಕದ ಕ್ಷಣಗಳಲ್ಲಿ ಬೇಡದ ಯೋಚನೆಗಳೇ ಹೆಚ್ಚಾಗಿ ಬಂದು ಕಾಡುತ್ತವೆನ್ನುವುದು ಎಂಥಾ ಪರಮ ಸತ್ಯ ಎಂಬುದು ನಮಗೆ ಮನವರಿಕೆಯಾದ ಮತ್ತೊಂದು ಸಂದರ್ಭ ಅದು!

ಕೂಡಲೇ ಹೊಸ ಮನೆಯತ್ತ ಧಾವಿಸಿದೆವು. ಪಾಪ, ಅದು ತನಕ ನೀರು ಬಸಿದು ಬಸಿದು ತೆಗೆದುಹಾಕಿ ಹೈರಣಾಗಿಹೋಗಿದ್ದರು ಮುತ್ತು ದಂಪತಿಗಳು. ಸಧ್ಯ, ಅತಿಥಿಗಳು ಬರುವುದಕ್ಕೆ ಇನ್ನೂ ಮೂರು ನಾಲ್ಕು ತಾಸುಗಳಷ್ಟು ಸಮಯಾವಕಾಶವಿತ್ತು. ಕೂಡಲೇ ಕಾರ್ಯೋನ್ಮುಖರಾಗಿ ಅಕ್ವೇರಿಯಂನ ಉಳಿದಿದ್ದ ಗಾಜಿನ ತುಣುಕುಗಳನ್ನೆಲ್ಲಾ ತೆಗೆದು ಹಾಕಿ ಆ ಜಾಗದಲ್ಲಿ ಒಂದಷ್ಟು ಹೂ ಕುಂಡಗಳನ್ನಿರಿಸಿ ಸಿಂಗರಿಸಿ ಸಿದ್ಧಪಡಿಸಿದೆವು. ಸಧ್ಯ, ಅನಾಹುತವೊಂದು ಘಟಿಸಿದ್ದ ಕುರುಹೂ ಬಂದ ಅತಿಥಿಗಳಿಗೆ ಸಿಗುವಂತಿರಲಿಲ್ಲ ಅನ್ನುವುದೇ ಸಮಾಧಾನದ ಸಂಗತಿಯಾಗಿತ್ತು. ಅಂದಿನ ಸಮಾರಂಭ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಬಂದ ಅತಿಥಿಗಳೆಲ್ಲಾ ನಮ್ಮ ಹೊಸ ಮನೆಯ ವಿನ್ಯಾಸದ ಕಲಾವಂತಿಕೆಯನ್ನು ಬಹುವಾಗಿ ಮೆಚ್ಚಿಕೊಂಡರು. ನಮ್ಮ ಆತ್ಮೀಯ ಮಿತ್ರರೇ ಆದ ಅಡಿಗರು ಅತ್ಯಂತ ರುಚಿಕಟ್ಟಾದ ಅಡುಗೆಯ ವ್ಯವಸ್ಥೆಯನ್ನು ಮಾಡಿದ್ದರು.

ಅಂದು ಸಂಜೆ ಹಾಗೇ ಲೋಕಾಭಿರಾಮವಾಗಿ ಅಂದಿನ ಸಮಾರಂಭದ ಯಶಸ್ಸನ್ನು ಮೆಲುಕುಹಾಕುತ್ತಾ ಕುಳಿತಿದ್ದಾಗ ಮತ್ತೆ ಬೆಳಗಿನ ಅಕ್ವೇರಿಯಂ ಪ್ರಸಂಗ ಧುತ್ತೆಂದು ನೆನಪಿಗೆ ನುಗ್ಗಿ ಬಂತು. ಅಕ್ವೇರಿಯಂ ಸಿದ್ಧವಾಗಿ ಮೀನುಗಳನ್ನೂ ಅದರಲ್ಲಿ ಬಿಟ್ಟುಬಿಟ್ಟಿದ್ದರೆ ಮನೆಗೆ ಮತ್ತಷ್ಟು ವಿಶೇಷ ಕಳೆ ಬಂದಿರುತ್ತಿತ್ತು ಎಂದು ನಾನು ಹಲುಬಿದರೆ ರಂಜನಿ, “ಹೋಗಲಿ ಬಿಡಿ…ಆಗುವುದೆಲ್ಲಾ ಒಳ್ಳೆಯದೇ ಆಗಿದೆ” ಎನ್ನಬೇಕೇ! ನಾನು ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ. ರಂಜನಿ ದೃಢವಾದ ದನಿಯಲ್ಲಿ ನುಡಿದಳು: “ಹೌದು ಪ್ರಭೂಜೀ…ನೀವೇ ಯೋಚನೆ ಮಾಡಿ….ಒಂದು ವೇಳೆ ಅಕ್ವೇರಿಯಂಗೆ ಮೀನುಗಳನ್ನೆಲ್ಲಾ ಬಿಟ್ಟು, ಅತಿಥಿಗಳೆಲ್ಲಾ ಬಂದು ಅದೇ ಹಜಾರದಲ್ಲಿ ಕುಳಿತಿರೋವಾಗ ಏನಾದರೂ ಅಕ್ವೇರಿಯಂ ಒಡೆದು ಬಿದ್ದಿದ್ದರೆ ಎಂಥ ದೊಡ್ಡ ಅನಾಹುತ ಆಗ್ತಿತ್ತು ಅಂತ ನೀವೇ ಒಂದ್ಸಲ ಊಹಿಸಿಕೊಂಡು ನೋಡಿ! ಮಕ್ಕಳು ಮರಿ ಏನಾದರೂ ಅಕ್ವೇರಿಯಂ ಮುಂದೆ ನಿಂತಿದ್ದಾಗ ಏನಾದರೂ ಅದು ಸೀಳಿಕೊಂಡು ಬಿಟ್ಟಿದ್ದಿದ್ರೆ?…”

ರಂಜನಿಯ ಮುಂದಿನ ಮಾತುಗಳನ್ನು ಮುಚ್ಚಿಹಾಕುವಷ್ಟು ಜೋರಾಗಿ ನನ್ನ ಎದೆ ಹೊಡೆದುಕೊಳ್ಳುತ್ತಿತ್ತು! ಈಗಲೂ ಒಮ್ಮೊಮ್ಮೆ ಆಗಬಹುದಾಗಿದ್ದ ಅನಾಹುತವನ್ನು ನೆನೆದು ಒಂದೊಂದು ಎದೆಬಡಿತ ನಿಂತುಬಿಡುತ್ತದೆ!!!

‍ಲೇಖಕರು avadhi

October 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: