ಶ್ರೀನಿವಾಸ ಪ್ರಭು ಅಂಕಣ – ಬೆಂಚ್ ಮೇಲೆ ಕುಳಿತು ನಾನು ಕ್ಷಣಗಣನೆ ಆರಂಭಿಸಿದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

77

ಒಂದು ಕ್ಷಣ ನನ್ನ ಕಿವಿಗಳನ್ನು ನನಗೇ ನಂಬಲಾಗಲಿಲ್ಲ. ನಮ್ಮದು ಮಾಲೀಕರ ಮನೆಯ ಹಿಂಭಾಗದಲ್ಲಿದ್ದ ಒಂದು ಪುಟ್ಟ ಗೂಡಿನಂತಹ ಮನೆ! ಅಲ್ಲಿ ಮನೆಯಿರುವುದೇ ಯಾರ ಅರಿವಿಗೂ ಬಾರದಂತೆ ಇದ್ದ ಆ ಗೂಡನ್ನು ಕಳ್ಳರು ಪತ್ತೆ ಹಚ್ಚಿದ್ದಾದರೂ ಹೇಗೆ? ಅಲ್ಲಿ ಏನಾದರೂ ಅಮೂಲ್ಯ ಒಡವೆ ವಸ್ತುಗಳು ದೊರಕಬಹುದೆಂಬ ಭ್ರಮೆಯಾದರೂ ಅವರಿಗೆ ಬಂದದ್ದು ಹೇಗೆ?! ಹೀಗೆಲ್ಲಾ ಯೋಚಿಸುತ್ತಲೇ ಅಕ್ಕನೊಡನೆ ಮನೆಯತ್ತ ಹೊರಟೆ. ಅಲ್ಲಿ ಹೋಗಿ ನೋಡಿದರೆ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹೋಗಿತ್ತು.ಮನೆಯ ತುಂಬಾ ಬಟ್ಟೆಬರೆ..ಪದಾರ್ಥಗಳು..ಪಾತ್ರೆ ಪಡಗಗಳು ಹರಡಿಹೋಗಿದ್ದವು. ಕತ್ತಲಲ್ಲೇ ಬೇಕಾದ್ದನ್ನು ಹೆಕ್ಕಿಕೊಳ್ಳಬೇಕಾದ ಅಗತ್ಯವಿದ್ದುದರಿಂದ ಕಳ್ಳರು ಹಾಗೆ ಹರಡಿರಬಹುದೆಂದು ನನ್ನ ಪತ್ತೇದಾರಿ ಬುದ್ಧಿ ಯೋಚಿಸತೊಡಗಿತ್ತು! ಅದುವರೆಗೆ ಓದಿದ್ದ ಶೆರ್ಲಾಕ್ ಹೋಮ್ಸ್ ಕಥೆಗಳ ಪ್ರಭಾವ! ಅಕ್ಕ ದುಃಖಿಸುತ್ತಲೇ ಹೇಳಿದಳು: “ಏನೇನು ಕಳ್ಳತನ ಆಗಿದೆ ಅಂತ ನೋಡಿ ಗುರ್ತು ಮಾಡಿಕೋ..ಪೋಲೀಸ್ ಕಂಪ್ಲೇಂಟ್ ಕೊಡೋಕೆ ಅನುಕೂಲವಾಗುತ್ತೆ.”

ವಾಸ್ತವವಾಗಿ ಹಾಗೆ ಗುರುತು ಹಾಕಿಕೊಂಡು ದೂರು ದಾಖಲಿಸುವಂತಹ ಯಾವ ಮಹಾ ಬೆಲೆ ಬಾಳುವ ವಸ್ತುಗಳೂ ಮನೆಯಲ್ಲಿ ಇರಲೇ ಇಲ್ಲ. ಇದ್ದ ಚೂರುಪಾರು ಚಿನ್ನ ರಂಜನಿಯ ಮೈಮೇಲೇ ಇತ್ತು. ದೇವರ ಗೂಡಿನಲ್ಲಿದ್ದ ಒಂದೆರಡು ಸೊಡಲುಗಳು, ಮಂಗಳಾರತಿ ತಟ್ಟೆ ಬಿಟ್ಟರೆ ಮತ್ತಾವ ಬೆಳ್ಳಿ ಪದಾರ್ಥಗಳೂ ಇರಲಿಲ್ಲ. ಇದ್ದದ್ದೆಲ್ಲಾ ಒಂದೆರಡು ಸೂಟ್ ಕೇಸ್ ಗಳಲ್ಲಿ ತುಂಬಿಟ್ಟುಕೊಂಡಿದ್ದ (ಆ ಮನೆಯಲ್ಲಿ ಬಟ್ಟೆಗಳನ್ನಿಡಲು ಅಲ್ಮೆರಾಗಳಿರಲಿಲ್ಲ) ಒಂದಷ್ಟು ಸೀರೆಗಳು.. ಪ್ಯಾಂಟ್ ಷರ್ಟುಗಳು.. ಅಡುಗೆಗೆ ಅತ್ಯಗತ್ಯವಾಗಿ ಬೇಕಿದ್ದ ಕೆಲ ಪಾತ್ರೆಗಳು..ನಾನು ಬಹಳ ಆಸೆಪಟ್ಟು ಕಂತಿನ ಮೇಲೆ ಖರೀದಿಸಿದ್ದ ಫಿಲಿಪ್ಸ್ ಕಂಪನಿಯ ಎರಡು ಕ್ಯಾಸೆಟ್ ಗಳ ಟ್ಯಾಂಡೆಮ್ ಟೇಪ್ ರೆಕಾರ್ಡರ್ ಅಷ್ಟೇ. ಮನೆಯಿಂದ ಕಳುವಾಗಿದ್ದದ್ದೂ ಅದಷ್ಟೇ. ಅಕ್ಕ ಒಂದಿಷ್ಟು ಬುದ್ಧಿ—ಸಮಾಧಾನ ಹೇಳಿ ಮನೆಗೆ ಹೋದಳು. ರಂಜನಿಯ ತಾಯಿಯ ಮನೆಯಲ್ಲಿ ಫೋನ್ ಇರಲಿಲ್ಲವಾದ್ದರಿಂದ ಅವರ ಪಕ್ಕದ ಮನೆಗೆ ಫೋನ್ ಮಾಡಿ ಕಳ್ಳತನದ ಸುದ್ದಿ ಮುಟ್ಟಿಸಿದೆ. ರಂಜನಿಯೂ ಅಣ್ಣ ಬಾಬು ಅವರೊಂದಿಗೆ ಗಾಬರಿಯಿಂದ ಧಾವಿಸಿ ಬಂದಳು. ಒಂದಷ್ಟು ಹೊತ್ತು ಪೇಚಾಡಿಕೊಂಡು ಬಾಬು ಅವರ ಬುದ್ಧಿವಾದಗಳನ್ನೂ ಸಾವಕಾಶವಾಗಿ ಕೇಳಿಸಿಕೊಂಡು ನಂತರ ಕಳುವಾದ ವಸ್ತುಗಳನ್ನು ಪಟ್ಟಿಮಾಡಿ ಬರೆದುಕೊಂಡು ಏನಾದರಾಗಲಿ ಎಂದು ಸಂಬಂಧಪಟ್ಟ ಪೋಲೀಸ್ ಠಾಣೆಗೆ ಹೋಗಿ, ‘ರಂಜನಿಯ 20—25 ಸೀರೆಗಳು, ಟೇಪ್ ರೆಕಾರ್ಡರ್ ಹಾಗೂ ಒಂದೆರಡು ಬೆಳ್ಳಿ ಪದಾರ್ಥಗಳು ಕಳುವಾಗಿವೆ’ಯೆಂದು ದೂರು ದಾಖಲಿಸಿ ಬಂದೆವು.

ಅದೊಂದೆರಡು ದಿನಗಳು ಒಂದು ರೀತಿಯ ವಿಚಿತ್ರ ಮನಸ್ಥಿತಿ. ಆಫೀಸಿಗೆ ಹೋಗಲು ಮನಸ್ಸಿಲ್ಲ..ಕಳ್ಳತನವಾದ ಆ ಮನೆಯಲ್ಲಿ ಇರಲೂ ಸಾಧ್ಯವಾಗುತ್ತಿಲ್ಲ. ಇಬ್ಬರೂ ಆಫೀಸು—ಕಾಲೇಜುಗಳಿಗೆ ರಜೆ ಹಾಕಿ ಎರಡುದಿನ ವಿಷಾದಯೋಗದಲ್ಲಿ ಕಾಲ ದೂಡಿದೆವು! ರಂಜನಿಗಂತೂ ನಾವಿಲ್ಲದ ಹೊತ್ತಿನಲ್ಲಿ ಯಾರೋ ಅಪರಿಚಿತರು ನಮ್ಮ ವಲಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆನ್ನುವ ಸಂಗತಿಯನ್ನು ಅರಗಿಸಿಕೊಳ್ಳುವುದೇ ದುಸ್ಸಾಧ್ಯವಾಗಿಬಿಟ್ಟಿತ್ತು. ರಾತ್ರಿ ಆ ಮನೆಯಲ್ಲಿ ಮಲಗಿದರೂ ಕಣ್ಣಿಗೆ ನಿದ್ದೆ ಹತ್ತದು. ಕಳ್ಳರು ಬಂದು ಬಾಗಿಲು ಒಡೆದು ಒಳ ನುಗ್ಗಿದಂತೆ..ನಮಗೆ ಹಿಂಸಿಸಿ ಮನೆ ದೋಚಿದಂತೆ ಭ್ರಮೆ… ಇದರ ಜತೆಗೆ ಆಪ್ತೇಷ್ಟರ —ಗೆಳೆಯರ ಬುದ್ಧಿವಾದದ ಮುಸುಕಿನ ಟೀಕೆ—ಆಕ್ಷೇಪಣೆ: “ಯಾರಾದರೂ ಈ ಕಾಲದಲ್ಲಿ ಹೀಗೆ ಮನೇಗೆ ಬೀಗ ಹಾಕಿಕೊಂಡು ಹೋಗೋದುಂಟೇ? ಪ್ರಭುಗೇನೋ ಜವಾಬ್ದಾರಿ ಇಲ್ಲ.. ಸ್ನೇಹಿತನ ಮದುವೆ ಅಂತ ಇಸ್ಪೀಟ್ ತಟ್ಟೋಕೆ ಹೋದ..ನಿನಗಾದ್ರೂ ಬುದ್ಧಿ ಇರೋದು ಬೇಡ್ವಾ ರಂಜನಿ? ನೀನಾದ್ರೂ ಮನೇಲೇ ಇರಬಾರದಿತ್ತಾ? ಸಧ್ಯ ಮನೇಲೇನೂ ಜಾಸ್ತಿ ಚಿನ್ನ ಇರಲಿಲ್ಲ ಪುಣ್ಯ..ಜಾಸ್ತಿ ಒಡವೆ ನಗ ನಾಣ್ಯ ತುಂಬಿಟ್ಟುಕೊಂಡಿದ್ರೆ ಎಲ್ಲಾ ಕಳ್ಳರ ಪಾಲಾಗ್ತಿತ್ತಾ? ನಿಮಗಳಿಗೆ ಯಾವಾಗ ಬುದ್ಧಿ ಬರುತ್ತೋ ಕಾಣೆ” ಹೀಗೆ ಒಂದಲ್ಲಾ ಒಂದು ಕುಹಕ—ವ್ಯಂಗ್ಯದ ಮಾತು ಕೇಳಿ ಬರುತ್ತಲೇ ಇತ್ತು. ಅಂಥದೊಂದು ಮಾತು ತೂರಿ ಬಂದಾಗ ಪೊನ್ನಮ್ಮನವರು, “ಸಧ್ಯ!ಕಳ್ಳರು ಬಂದಾಗ ನನ್ನ ಮಗಳು ಆ ಮನೇಲಿರಲಿಲ್ಲವಲ್ಲಾ, ಅದೇ ಪುಣ್ಯ ಅಂತ ಈಗಷ್ಟೇ ದೇವ್ರಿಗೆ ತುಪ್ಪದ ದೀಪ ಹಚ್ಚಿ ಬಂದಿದೀನ್ರಮ್ಮಾ!ಯಾವ ಒಡವೆ ಆಭರಣ ಎಲ್ಲಿ ಹಾಳು ಬಿದ್ದುಹೋದ್ರೂ ನನಗೆ ಚಿಂತೆ ಇಲ್ಲ.. ಈ ನನ್ನ ಒಡವೆ ಭದ್ರವಾಗಿದೆಯಲ್ಲಾ..ಅಷ್ಟು ಸಾಕು ನನಗೆ” ಎನ್ನುತ್ತಾ ರಂಜನಿಯನ್ನು ಕಟ್ಟಿಕೊಂಡು ಅವಳ ತಲೆ ನೇವರಿಸಿದ ಚಿತ್ರ ಇನ್ನೂ ನನ್ನ ಕಣ್ಣ ಮುಂದೆ ಹಾಗೇ ನಿಂತಿದೆ!

ಮತ್ತೂ ಒಂದು ವಿಷಯವನ್ನು ಇಲ್ಲಿ ಹಂಚಿಕೊಳ್ಳಬೇಕು:
ಮನಸ್ಸು ಹೀಗೆ ವಿಧವಿಧದ ಚಿಂತೆಯಲ್ಲಿ ಮುಳುಗಿದ್ದಾಗಲೇ ಇದ್ದಕ್ಕಿದ್ದ ಹಾಗೆ ಹಿಂದಿನ ದಿನ ಇಸ್ಪೀಟ್ ಆಟದ ಹೊತ್ತಿನಲ್ಲಿ ನಾನು ಅನುಭವಿಸಿದ ಸಂಕಟ ನೆನಪಿಗೆ ನುಗ್ಗಿಬಂತು! ಅರೆ! ಏನಿದರ ಅರ್ಥ? ಹಿಂದಿನ ರಾತ್ರಿ ನಾನು ಅನುಭವಿಸಿದ ತಳಮಳ—ಯಾತನೆ—ಸಂಕಟಗಳು ಹಾಗಾದರೆ ವಿನಾಕಾರಣದ್ದಲ್ಲವೇ? ಮಧ್ಯರಾತ್ರಿ ಎರಡು ಮೂರು ಗಂಟೆಯ ಸುಮಾರಿಗೆ ಕಳ್ಳತನವಾಗಿರಬಹುದು.. ಅದೇ ಸಮಯದಲ್ಲೇ ನಾನು ಆ ತೆರನಾದ ಯಾತನೆಯನ್ನು ಅನುಭವಿಸಿರುವುದು! ಇವೆರಡಕ್ಕೂ ಇರುವ—ಇದ್ದಿರಬಹುದಾದ ಸಂಬಂಧವಾದರೂ ಏನು!? ಈಗ ಬಹಳವಾಗಿ ಚಾಲ್ತಿಯಲ್ಲಿರುವ, “ಯೂನಿವರ್ಸ್ ನಮ್ಮ ಮಾತುಗಳನ್ನಾಲಿಸುತ್ತದೆ..ಯೂನಿವರ್ಸ್ ನಮಗೆ ಸೂಚನೆಗಳನ್ನು ನೀಡುತ್ತದೆ” ಎನ್ನುವಂತಹ ಮಾತುಗಳೇ ನನಗೆ ಆಗ ಅನುಭವ ರೂಪದಲ್ಲಿ ಮುಟ್ಟಿತ್ತೇ ಅಥವಾ ಅದೆಲ್ಲಾ ಕಾಕತಾಳೀಯವೇ?”ಕಣ್ಣರಿಯದಿದ್ದೊಡೇಂ ಕರುಳರಿಯದೇ” ಎಂಬ ಕವಿವಾಣಿಯ ವ್ಯಾಖ್ಯಾನವೇ ನನ್ನೀ ಅನುಭವ?! ಹೀಗೆ ನೂರೆಂಟು ಯೋಚನೆಗಳ ಕೂಪದಲ್ಲಿ ನಾನು ಮುಳುಗೇಳುತ್ತಿದ್ದಾಗಲೇ ನಮ್ಮ ಆ ಪುಟ್ಟ ಗೂಡಿಗೆ ಇಬ್ಬರು ಪೋಲೀಸರ ಆಗಮನವಾಯಿತು. ದೂರು ದಾಖಲಾದ ಬಳಿಕ ನಡೆಯುವ ಮಾಮೂಲು ಪ್ರಕ್ರಿಯೆಗಳ ಅಂಗವಾಗಿ ಬಂದಿದ್ದ ಅವರಿಗೆ ನಮ್ಮ ಮನೆಯನ್ನು ನೋಡಿಯೇ ಮೊದಲು ಸೋಜಿಗ! ಕಳ್ಳತನದ ವಿವರಗಳನ್ನು ಕೇಳಿದ ಮೇಲಂತೂ ಅವರಿಗಾದ ನಿರಾಸೆ ಅಷ್ಟಿಷ್ಟಲ್ಲ! ಈ ಘನಕ್ಕೆ ದೊಡ್ಡದಾಗಿ ದೂರು ಬೇರೆ ನೀಡಬೇಕಿತ್ತೇ ಎಂಬ ಭಾವ ಅವರ ಕರುಣಾಜನಕ ನೋಟದಲ್ಲಿ ಇಣುಕಿದಂತೆ ಭಾಸವಾಗಿ ನನಗೆ ಮುಜುಗರವೇ ಆಯಿತು! ಅವರಿಗೆ ಸಮಾಧಾನವೋ ಸಂತಸವೋ ಆಗಬೇಕಿದ್ದರೆ ದೊಡ್ಡ ಮೌಲ್ಯದ ಒಡವೆ ವಸ್ತುಗಳ ಕಳ್ಳತನವಾಗಬೇಕಿತ್ತೋ ಏನೊ..ಅಂತೂ ಪರಮ ನಿರಾಸೆ ಅತಿ ಪರಮ ಉದಾಸೀನದಿಂದ ಕೆಲ ಪ್ರಶ್ನೆಗಳ ಔಪಚಾರಿಕ ತನಿಖೆ ಮುಗಿಸಿ ಅವರು ಹೊರಟುಹೋದರು. ಅಂದೇ ಮಧ್ಯಾಹ್ನ ನಮ್ಮ ಮನೆಗೆ ಆ ವಿಭಾಗದ ಸರ್ಕಲ್ ಇನ್ಸ್ ಪೆಕ್ಟರ್ ಇಬ್ರಾಹಿಂ ಅವರ ಆಗಮನವಾಯಿತು! ವಿಷಯ ಏನೆಂದರೆ ನಮ್ಮ ಮನೆಯಲ್ಲಿ ಕಳ್ಳತನವಾದ ಸುದ್ದಿ ತಿಳಿದ ನಮ್ಮ ಕೇಂದ್ರದ ನಿರ್ದೇಶಕ ಗುರುನಾಥ್ ಅವರು ಕಮೀಷನರ್ ಅವರಿಗೇ ಫೋನ್ ಮಾಡಿ ನನಗೆ ನೆರವಾಗಲು ಕೇಳಿಕೊಂಡಿದ್ದರು! ಆಗ ದೂರದರ್ಶನವೊಂದೇ ಮಾಧ್ಯಮ ಕ್ಷೇತ್ರದಲ್ಲಿ ಏಕಚಕ್ರಾಧಿಪತಿಯಾಗಿ ಮೆರೆಯುತ್ತಿದ್ದುದರಿಂದ ಎಲ್ಲ ಸರ್ಕಾರೀ ವಿಭಾಗಗಳವರಿಗೂ ಅವರವರದೇ ಕಾರಣಗಳಿಗಾಗಿ ದೂರದರ್ಶನ ತುಂಬಾ ಅಗತ್ಯವಾಗಿದ್ದ ವಿಭಾಗವೂ ಆಗಿತ್ತು ಅನ್ನಿ. ಅಂತಹ ದೂರದರ್ಶನಕೇಂದ್ರದ ಅಧಿಕಾರಿಯ ಮನೆಯಲ್ಲಿ ಕಳ್ಳತನವಾಗಿದೆಯೆಂದರೆ ಹುಡುಗಾಟವೇ! ಹಾಗಾಗಿ ವರಿಷ್ಠರ ಆದೇಶದ ಮೇರೆಗೆ ಸ್ವತಃ ಸರ್ಕಲ್ ಇನ್ಸ್ ಪೆಕ್ಟರ್ ಅವರೇ ಮಾಹಿತಿ ಸಂಗ್ರಹಕ್ಕಾಗಿ ನಮ್ಮ ಮನೆಗೇ ಬಂದುಬಿಟ್ಟಿದ್ದಾರೆ! ನಮ್ಮ ಮನೆಯಲ್ಲಿದ್ದದ್ದೋ ಎರಡು ಗಾದ್ರೆಜ್ ಕುರ್ಚಿಗಳು ಹಾಗೂ ಒಂದು ದೊಡ್ಡ ಚಾಪೆ. ರಂಜನಿ ಮಾಡಿಕೊಟ್ಟ ಕಾಫಿಯನ್ನು ಗುಟುಕರಿಸುತ್ತಾ ಸಾಹೇಬರು ಒಂದಷ್ಟು ಹೊತ್ತು ನಮ್ಮೊಂದಿಗೆ ಲೋಕಾಭಿರಾಮವಾಗಿ ಮಾತಾಡಿಕೊಂಡು ಎಲ್ಲಾ ವಿವರಗಳನ್ನೂ ಪಡೆದುಕೊಂಡು, “ಚಿಂತಿಸಬೇಡಿ..ಇನ್ನು ಮುಂದೆ ಈ ಭಾಗದಲ್ಲಿ ಹೀಗಾಗದ ಹಾಗೆ ರಾತ್ರಿ ಬೀಟ್ ವ್ಯವಸ್ಥೆ ಮಾಡುತ್ತೇವೆ..ನಿಮ್ಮ ಅದೃಷ್ಟ ಚೆನ್ನಾಗಿದ್ದು ಅವನ ಅದೃಷ್ಟ ಖೊಟ್ಟಿಯಾಗಿದ್ರೆ ಕಳ್ಳ ಸಿಕ್ಕಿಹಾಕಿಕೋತಾನೆ..ಚಿಂತೆ ಮಾಡಬೇಡಿ” ಎಂದು ಸಮಾಧಾನ ಹೇಳಿ ಹೊರಟುಹೋದರು.

ಇದಾದ ಎರಡು ದಿನಕ್ಕೆ ರಂಜನಿಯನ್ನು ಕಾಲೇಜಿಗೆ ಬಿಟ್ಟು ನಾನು ಆಫೀಸಿಗೆ ಹೋಗಿ ತಲುಪುತ್ತಿದ್ದಂತೆಯೇ ಪೋಲಿಸ್ ಸ್ಟೇಷನ್ ನಿಂದ ಫೋನ್ ನಲ್ಲಿ ವರ್ತಮಾನ ಬಂತು:”ಕಳ್ಳ ಸಿಕ್ಕಿಹಾಕಿಕೊಂಡಿದ್ದಾನೆ!ಈಗಲೇ ಸ್ಟೇಷನ್ ಗೆ ಬಂದು ನಿಮ್ಮ ವಸ್ತುಗಳನ್ನು ಗುರುತಿಸಿ ದೃಢೀಕರಿಸಿ!”

ಕಳೆದುಕೊಂಡಿದ್ದು ಹೆಚ್ಚಿರಲಿಲ್ಲವಾದರೂ ಸಿಕ್ಕಿದ ಸಂಭ್ರಮದಲ್ಲಿ ರಂಜನಿಯನ್ನೂ ಕಾಲೇಜ್ ನಿಂದ ಕರೆದುಕೊಂಡು ಸೀದಾ ಪೋಲೀಸ್ ಸ್ಟೇಷನ್ ಗೆ ಹೋದೆ. ಒಳಹೋಗುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದ್ದು ಇನ್ಸ್ ಪೆಕ್ಟರ್ ಸಾಹೇಬರ ಟೇಬಲ್ ಮೇಲೆ ವಿರಾಜಮಾನವಾಗಿದ್ದ ನನ್ನ ಟ್ಯಾಂಡೆಮ್ ಟೇಪ್ ರೆಕಾರ್ಡರ್! ಅಲ್ಲೇ ಸರಳುಗಳ ಹಿಂದೆ ಮೂಲೆಯಲ್ಲಿ ಮುದುರಿ ಕುಳಿತಿದ್ದ ಒಬ್ಬ ಯುವಕನೇ ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದೆಂದು ಒಬ್ಬ ಕಾನ್ಸ್ ಟೇಬಲ್ ತೋರಿಸಿದ.23-24ರ ಹರಯದ ಯುವಕನ ಮುಖದ ಮೇಲೆ ಮಿನುಗುತ್ತಿದ್ದ ಅಮಾಯಕತೆಯನ್ನು ನೋಡಿದರೆ,’ಈ ಮುಗ್ಧ ಹುಡುಗ ಕಳ್ಳತನ ಮಾಡಲು ಸಾಧ್ಯವೇ?’ ಎಂದು ಎಂಥವರಿಗೂ ಅನುಮಾನ ಬರುವಂತಿತ್ತು.ದಿಟ್ಟಿಸಿ ನೋಡುತ್ತೇನೆ:ಆ ಹುಡುಗನ ಮೈಮೇಲೆ ಕಂಗೊಳಿಸುತ್ತಿದ್ದ ಜರ್ಕಿನ್ ನನ್ನದೇ!

ಟೇಪ್ ರಿಕಾರ್ಡರ್ , ಕೊಂಚ ನಜ್ಜಾಗಿದ್ದ ಬೆಳ್ಳಿ ಪದಾರ್ಥಗಳು,ಗಂಟುಕಟ್ಟಿದ ಸ್ಥಿತಿಯಲ್ಲಿದ್ದ ರಂಜನಿಯ ಕೆಲ ಸೀರೆಗಳು ಅವನಿಂದ ಪೋಲೀಸರು ವಶಪಡಿಸಿಕೊಂಡ ನಮ್ಮ ವಸ್ತುಗಳು. ಒಂದಷ್ಟು ಸೀರೆಗಳನ್ನು 10—15 ರೂಪಾಯಿಗೊಂದರಂತೆ ಅಲ್ಲೇ ಇದ್ದ ಸ್ಲಮ್ ನ ಹೆಂಗಸರಿಗೆ ಮಾರಿಬಿಟ್ಟಿದ್ದನಂತೆ.”ನೀವು ಹೂಂ ಅಂದರೆ ಹೋಗಿ ಒದ್ದು ವಾಪಸ್ ಕಿತ್ತುಕೊಂಡು ಬರ್ತೀವಿ ಸಾರ್ ಸೀರೆಗಳನ್ನ” ಎಂದೊಬ್ಬ p c ಆರ್ಭಟಿಸಿದ. ದಯವಿಟ್ಟು ಹಾಗೆ ಮಾಡಬೇಡಪ್ಪಾ ಎಂದು ಅವನನ್ನು ಬೇಡಿಕೊಂಡು ನಮ್ಮ ವಸ್ತುಗಳೊಂದಿಗೆ ಮನೆಗೆ ಮರಳುವುದರೊಂದಿಗೆ ಕಳ್ಳತನದ ಪ್ರಸಂಗಕ್ಕೆ ಸುಖಾಂತ್ಯವೇ ದೊರಕಿದರೂ ಕಳ್ಳ ಹೊಕ್ಕ ಆ ಮನೆಯಲ್ಲಿ ವಾಸ್ತವ್ಯ ಮುಂದುವರಿಸಲು ನಮಗೇಕೋ ಮನಸ್ಸಾಗಲಿಲ್ಲ. ಹಾಗಾಗಿ ಒಂದೇ ತಿಂಗಳಿಗೆ ಜಯನಗರದ ಆ ಮನೆಯನ್ನು ಬಿಟ್ಟು ರಾಜಾಜಿನಗರದಲ್ಲಿ ನಮ್ಮ ಮಾವನವರ ಮನೆಯ ಪಕ್ಕದ ರಸ್ತೆಯಲ್ಲೇ ಇದ್ದ ಹೆಚ್ಚು ಅನುಕೂಲಕರ ಮನೆಯೊಂದಕ್ಕೆ ನಮ್ಮ ವಾಸ್ತವ್ಯವನ್ನು ಬದಲಾಯಿಸಿದೆವು.ನಮ್ಮ ಸಹಬಾಳ್ವೆ ಹೆಚ್ಚು ನೆಮ್ಮದಿ—ಸುಖಗಳನ್ನು ಕಂಡದ್ದು,ನಮ್ಮ ದಾಂಪತ್ಯದ ಕನಸುಗಳು ಗರಿಯೊಡೆದದ್ದು ಆ ಮನೆಯಲ್ಲೇ ಅನ್ನಬೇಕು!

ರಂಜನಿಗೆ ಮಕ್ಕಳೆಂದರೆ ಪ್ರಾಣ.ಎಲ್ಲಿ ಯಾವ ಪುಟ್ಟ ಕೂಸನ್ನು ನೋಡಿದರೂ ಅದನ್ನು ಮುದ್ದಿಸದೇ ಬರುವವಳೇ ಅಲ್ಲ ಅವಳು! ಅಂತೆಯೇ ತನ್ನ ಒಡಲಲ್ಲಿ ಕುಡಿಯೊಡೆಯುವ ಕಂದನಿಗಾಗಿ ಕಾತರದಿಂದ ಕಾಯುತ್ತಿದ್ದಳು ಕೂಡಾ. ನನಗೂ ಮಕ್ಕಳೆಂದರೆ ಅಕ್ಕರೆಯೇ. ಅಣ್ಣಯ್ಯನ ಮಗಳು ಮಾಧವಿಯನ್ನು ಅದೆಷ್ಟೋ ದಿನ ಹೆಗಲ ಮೇಲೆ ಹಾಕಿಕೊಂಡು ಜೋಗುಳ ಹಾಡುತ್ತಾ ಮಲಗಿಸುವಾಗ ಆ ಮಧುರಾತಿ ಮಧುರ ಸುಖವನ್ನು ಅನುಭವಿಸಿದ್ದೇನೆ. ನಮ್ಮದೇ ಕನಸಿನ ಕೂಸು ರಂಜನಿಯ ಗರ್ಭದಲ್ಲಿ ಕುಡಿಯೊಡೆದಿರುವ ಪರಮ ಸಂತೋಷದ ಸುದ್ದಿಯನ್ನು ನಮಗೆ ನೀಡಿದವರು ನಮ್ಮ ಹತ್ತಿರದ ಬಂಧುಗಳೂ ಆಗಿದ್ದ ಪ್ರಖ್ಯಾತ ಗೈನಕಾಲಜಿಸ್ಟ್ ಡಾ॥ವಿಜಯಲಕ್ಷ್ಮಿಯವರು.ನನಗಿನ್ನೂ ನೆನಪಿದೆ: ಡಾಕ್ಟ್ರ ಬಳಿ ತಪಾಸಣೆಗೆ ಕರೆದುಕೊಂಡು ಹೋಗುವಾಗ ರಸ್ತೆಗಳಲ್ಲಿ ಉಬ್ಬು ತಗ್ಗು ಗಳನ್ನೂ ಲೆಕ್ಕಿಸದೇ ಹಾರುತ್ತಿದ್ದ ನನ್ನ ರಾಜದೂತ ಬೈಕ್, ಸಂತಸದ ಸುದ್ದಿಯೊಂದಿಗೆ ಮರಳಿ ಬರುವಾಗ ಆಮೆಗತಿಯಲ್ಲಿ ಚಲಿಸುತ್ತಿತ್ತು! ಒಡಲೊಳಗೆ ಚಿಗುರಿರುವ ಬೊಮ್ಮಟೆಗೆ ಒಂದಿಷ್ಟೂ ಗಾಬರಿಯಾಗಬಾರದಲ್ಲಾ! ಅರೆ!ನಾನು ತಂದೆಯಾಗುತ್ತಿದ್ದೇನೆ! ಸಂಭ್ರಮ..ಸಂತಸ..ಕಾತರ..ನಿರೀಕ್ಷೆ..ಎಚ್ಚರ..ಹೊಣೆ..ಎಲ್ಲವೂ ಬೆರೆತ ಆ ಸಮ್ಮಿಶ್ರ ಭಾವಲಹರಿಯನ್ನು ಪ್ರಪ್ರಥಮ ಬಾರಿಗೆ ಬದುಕಿನಲ್ಲಿ ಅನುಭವಿಸುವುದಿದೆಯಲ್ಲಾ, ಅದೊಂದು ಅತ್ಯಂತ ಸಾರ್ಥಕ ಕ್ಷಣ! ರಂಜನಿಯಂತೂ ರೆಕ್ಕೆ ಕಟ್ಟಿಕೊಂಡು ಹಾರುವುದೊಂದೇ ಬಾಕಿ! ತನ್ನ ಒಡಲ ಕುಡಿಗಳನ್ನು ಹೇಗೆ ಪೋಷಿಸಿ ಧರೆಗಿಳಿಸಿ ಬೆಳೆಸಬೇಕೆಂಬುದೆಲ್ಲವನ್ನೂ ಪೂರ್ವಭಾವಿಯಾಗಿಯೇ ಯೋಚಿಸಿ ಆ ಕನಸುಗಳ ಸಾಕ್ಷಾತ್ಕಾರಕ್ಕೆ ಹಂಬಲಿಸುತ್ತಿದ್ದವಳು ಅವಳು.

ಆ ನಂತರದ ಹಲ ತಿಂಗಳುಗಳು ಒಂದು ರೀತಿಯ ತಪಸ್ಸಿನ ಆಚರಣೆಯಂತೆ ಕಳೆದುಹೋಯಿತು. ಹೆರಿಗೆಯ ಸಮಯ ಹತ್ತಿರಕ್ಕೆ ಬರುತ್ತಿದೆ..ಒಂದು ದಿನ ಹೀಗಾಯಿತು: ನಾನು ಆಫೀಸ್ ನಿಂದ ಮನೆಗೆ ಮರಳಿ ಬಂದಾಗ ರಂಜನಿ ಅವರ ಅಮ್ಮನ ಮನೆಯ ಹೊರಭಾಗದ ಮೆಟ್ಟಿಲ ಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು.ಮಧ್ಯಾಹ್ನದಿಂದ ಏಕೋ ಮಗುವಿನ ಚಲನವಲನ ಒಳಗೆ ಅನುಭವಕ್ಕೆ ಬರುತ್ತಿಲ್ಲ ಅನ್ನುವುದು ಅವಳ ಚಿಂತೆಯ ಕಾರಣವಾಗಿತ್ತು.ಕೆಲವೊಮ್ಮೆ ಹಾಗಾಗುವುದುಂಟು..ಚಿಂತಿಸಬೇಡ ಎಂದು ಅಮ್ಮಂದಿರು ಸಾಂತ್ವನ ಹೇಳಿದ್ದರೂ ಅವಳಿಗೇನೊ ಚಿಂತೆ ಕಾಡುತ್ತಲೇ ಇತ್ತು.ನಾನು ಬರುವುದನ್ನೇ ಕಾಯುತ್ತಾ ಕುಳಿತಿದ್ದವಳು ನಾನು ಬಂದೊಡನೆ, ನಡೀರಿ..ಈಗಲೇ ಒಂದು ಸಲ ಚೆಕಪ್ ಮಾಡಿಸಿಕೊಂಡು ಬಂದು ಬಿಡೋಣ’ ಎಂದವಳೇ ಅರೆಕ್ಷಣವೂ ತಡಮಾಡದೇ ನನ್ನ ಜತೆಗೆ ಆಸ್ಪತ್ರೆಗೆ ಹೊರಟೇಬಿಟ್ಟಳು. ರಂಜನಿಯನ್ನು ಪರೀಕ್ಷಿಸಿದ ಡಾಕ್ಟರ್ ಅವರು, “ಸ್ವಲ್ಪ ತೊಂದರೆ ಆಗಿರುವಂತಿದೆ..ಹೊಕ್ಕಳ ಬಳ್ಳಿ ಕೂಸಿನ ತಲೆಯಡಿಗೆ ಸಿಕ್ಕಿಕೊಂಡಂತಿದೆ..ಆದಷ್ಟು ಬೇಗ ಸಿಜೇ಼ರಿಯನ್ ಮಾಡಿಬಿಡೋಣ” ಎಂದಾಗ ನಮಗೆ ಉಸಿರೇ ನಿಂತುಹೋದಂತಾಯಿತು.

ಮತ್ತೊಂದು ಕ್ಷಣವೂ ತಡಮಾಡದೇ ಅಂದೇ ಸತ್ತೂರ್ ನರ್ಸಿಂಗ್ ಹೋಮ್ ನಲ್ಲಿ ರಂಜನಿಯನ್ನು ಕರೆದುಕೊಂಡು ಹೋಗಿ ಸೇರಿಸಿದೆ.ಡಾ॥ವಿಜಯಲಕ್ಷ್ಮಿಯವರು ಅಂದೇ ರಾತ್ರಿ 10—11ರ ಸುಮಾರಿಗೆ ಸಿಜೇ಼ರಿಯನ್ ಆಪರೇಷನ್ ಮಾಡುವುದಾಗಿ ತಿಳಿಸಿದರು.ವಿಷಯ ತಿಳಿಯುತ್ತಿದ್ದಂತೆ ಅಣ್ಣಯ್ಯ—ಅತ್ತಿಗೆ ಆಸ್ಪತ್ರೆಗೆ ಧಾವಿಸಿ ಬಂದರು.ಅಮ್ಮ—ಅಣ್ಣ,ಅಕ್ಕಂದಿರ ನಿರಂತರ ಪ್ರಾರ್ಥನೆಯೂ ಒಂದು ಬದಿಗೆ ಸಾಗಿತ್ತು.ರಾತ್ರಿ ಹತ್ತು ಹತ್ತೂವರೆಯ ಆಜುಬಾಜು..ನನಗೋ ನಿಂತಲ್ಲಿ ನಿಲ್ಲಲಾಗುತ್ತಿಲ್ಲ ಕೂತಲ್ಲಿ ಕೂರಲಾಗುತ್ತಿಲ್ಲ..ಏನೋ ತಳಮಳ..ಆತಂಕ..ಅಣ್ಣಯ್ಯ—ಅತ್ತಿಗೆ, ‘ಎಲ್ಲಾ ಸರಿಯಾಗಿ ಆಗುತ್ತದೆ..ಚಿಂತಿಸಬೇಡ’ ಎಂದು ಸಮಾಧಾನ ಹೇಳುತ್ತಲೇ ಇದ್ದಾರೆ..ರಂಜನಿಯ ಅಮ್ಮ ಪೊನ್ನಮ್ಮ..ತಂಗಿ ಪದ್ಮಿನಿ ಮತ್ತೊಂದೆಡೆ ರಂಜನಿಗೆ ಧೈರ್ಯ ತುಂಬುತ್ತಿದ್ದಾರೆ..

ಅದೇ ವೇಳೆಗೆ ಒಬ್ಬ ದಾದಿ ಬಂದು, “ಡಾಕ್ಟ್ರು ಬಂದಿದಾರೆ..ಆಪರೇಷನ್ ಗೆ ಕರಕೊಂಡು ಹೋಗೋಕೆ ರೆಡಿ ಮಾಡಬೇಕು” ಎನ್ನುತ್ತಾ ರಂಜನಿಯನ್ನು ಒಳಗೆ ಕರೆದುಕೊಂಡು ಹೋದಳು. ಮತ್ತೇನೂ ಮಾಡಲು ತೋಚದೆ ನಾನು ಅಲ್ಲೇ ಇದ್ದ ಬೆಂಚ್ ಮೇಲೆ ಕುಳಿತೆ. ಅಣ್ಣಯ್ಯ ಪಕ್ಕದಲ್ಲೇ ಕುಳಿತು ಧೈರ್ಯ ತುಂಬುತ್ತಿದ್ದ.ಪೊನ್ನಮ್ಮ—ಪದ್ಮಿನಿಯರೂ ಒಂದು ಬದಿಯಲ್ಲಿ ಆತಂಕದಲ್ಲೇ ನಿಂತಿದ್ದರು. ಕೆಲ ನಿಮಿಷಗಳಲ್ಲೇ ರಂಜನಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೊರಟರು.ಒಬ್ಬ ನರ್ಸ್ ನನ್ನ ಬಳಿ ಬಂದು ಒಂದು ಪಟ್ಟಿಯನ್ನು ಕೊಟ್ಟು’ಈಗಲೇ ಹೋಗಿ ಈ ಔಷಧಿಗಳನ್ನು ತಂದುಬಿಡಿ’ ಎಂದಳು. ಅವಳೊಡನೆ ಮಾತಾಡಿ ತಿರುಗುವಷ್ಟರಲ್ಲಿ ರಂಜನಿ ಮಲಗಿದ್ದ ಸ್ಟ್ರೆಚರ್ ಮುಂದೆ ಸಾಗಿಬಿಟ್ಟಿತ್ತು.ಅರೆ! ಒಂದು ಶುಭಹಾರೈಕೆಯನ್ನೂ ಹೇಳದೇ OT ಗೆ ಕಳಿಸಿಬಿಡುವುದೇ? ಅಷ್ಟರಲ್ಲೇ ರಂಜನಿಯ ಕೂಗು ಕೇಳಿಸಿತು: “ಪ್ರಭೂಜೀ”. ಒಡನೆಯೇ ಅತ್ತ ಓಡಿದೆ.ಮಲಗಿದ್ದ ರಂಜನಿಯ ಮುಖದಲ್ಲಿ ಒಂದು ಬಗೆಯ ಅಸಹಾಯಕತೆ..ಭಯ..ಆತಂಕ ಹೊಡೆದುಕಾಣುತ್ತಿತ್ತು. ಕಂದನ ಬರವಿನ ಸಂಭ್ರಮವನ್ನೂ ಮೀರಿದ ಆ ಅವಳ ಆತಂಕದ ಆರ್ದ್ರ ನೋಟ ನನ್ನನ್ನು ವಿಚಲಿತನನ್ನಾಗಿ ಮಾಡಿಬಿಟ್ಟಿತು. ಕೂಸಿಗೆ ತೊಂದರೆಯಾಗಿದೆ ಎಂದು ವೈದ್ಯರು ಹೇಳಿರುವುದರಿಂದ ಏನಾಗುವುದೋ ಎಂಬ ಭಯ..ಮರಳಿ ಬಂದು ಎಲ್ಲರನ್ನೂ ನೋಡುತ್ತೇನೋ ಇಲ್ಲವೋ ಎಂಬ ಶಂಕೆ.. ಕಣ್ಣಂಚಿನಲ್ಲಿ ಹೆಪ್ಪುಗಟ್ಟಿ ನಿಂತಿದ್ದ ಕಂಬನಿ..!ದೇವಾ..ದೇವಾ.. ಎಲ್ಲ ನೋವುಗಳೂ ಮಡುಗಟ್ಟಿಕೊಂಡಂತಿದ್ದ ರಂಜನಿಯ ಆ ಅಸಹಾಯಕ ಆರ್ದ್ರ ನೋಟವನ್ನು ನೆನೆದರೆ ಈಗಲುಲೂ ಕಣ್ಣು ಮಂಜಾಗುತ್ತದೆ. ಅದೇ ವೇಳೆಗೆ ಆಪರೇಷನ್ ನಡೆಸಲು ಸನ್ನದ್ಧರಾಗಿ ಬಂದ ಡಾಕ್ಕರ್ ವಿಜಯಲಕ್ಷ್ಮಿಯವರು ನನ್ನನ್ನು ನೋಡಿ, “ಏನು ಪ್ರಭೂ? ಒಳಗೆ ಬರ್ತೀರಾ? Woul you like to witness the coming of your baby”? ಎಂದರು. “ಅಯ್ಯೋ! ಸಾಧ್ಯವೇ ಇಲ್ಲ ಡಾಕ್ಟ್ರೇ..ನನಗೆ ಅಷ್ಟು ಧೈರ್ಯ ಇಲ್ಲ..pl take care of my wife and child” ಎಂದು ಕಣ್ತುಂಬಿಕೊಂಡು ನುಡಿದೆ. “dont worry..ಎಲ್ಲಾ smooth ಆಗಿ ಆಗುತ್ತೆ..she is in safe hands” ಎಂದು ಆಶ್ವಾಸನೆ ನೀಡಿ ವಿಜಯಲಕ್ಷ್ಮಿಯವರು OT ಯತ್ತ ಹೆಜ್ಜೆ ಹಾಕಿದರು.

ನಾನು ರಂಜನಿಯ ಬಳಿ ಹೋಗಿ ಅವಳ ಕೈಹಿಡಿದು ಮೃದುವಾಗಿ ಅದುಮಿ ‘all the best!ಸಿಹಿ ಸುದ್ದಿಗಾಗಿ ಇಲ್ಲೇ ಕಾಯ್ತಾ ಕೂತಿರ್ತೇನೆ’ ಎಂದೆ. ಒಮ್ಮೆ ಮೃದುವಾಗಿ ನಕ್ಕು ‘thank you’ ಎಂದು ರಂಜನಿ ಉಸುರುತ್ತಿದ್ದಂತೆ ಸ್ಟ್ರೆಚರ್ ಅನ್ನು OT ಯತ್ತ ತಳ್ಳಿಕೊಂಡು ಹೊರಟರು. ಆವರಣದಲ್ಲಿದ್ದ ಬೆಂಚ್ ಮೇಲೆ ಕುಳಿತು ನಾನು ಕ್ಷಣಗಣನೆ ಆರಂಭಿಸಿದೆ. ಕಾಲ ಎಷ್ಟೇ ಬದಲಾಗಲಿ, ಸೌಕರ್ಯಗಳು ಎಷ್ಟೇ ಹೆಚ್ಚಾಗಲಿ, ಹೆರಿಗೆಯೆಂದರೆ ಹೆಣ್ಣಿಗೆ ಮರುಹುಟ್ಟೇ ಸರಿ ಎನ್ನುವ ಚಿಂತನೆ ಕಾಡುತ್ತಿತ್ತು. ಆವರಣದಲ್ಲಿದ್ದ ಗಡಿಯಾರದಲ್ಲಿ ಆಗ 10.30. ನಿಮಿಷಗಳು ಉರುಳುತ್ತಿದ್ದವು..

ಟಿಕ್ ಟಿಕ್ ಟಿಕ್ ಟಿಕ್ ..

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: