ಯಲ್ಲಪ್ಪ ಎಮ್ ಮರ್ಚೇಡ್ ಓದಿದ ‘ಮಿಠಾಯಿ ಮಾಮ’

‘ಮಿಠಾಯಿ ಮಾಮ’ ಕವಿತೆ ಸವಿಯೋಣ ಬಾ ತಮ್ಮ

ಯಲ್ಲಪ್ಪ ಎಮ್ ಮರ್ಚೇಡ್

ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ತಣಿಸಿ, ಕುಣಿಸಿ, ಅವರ ಕುತೂಹಲವನ್ನು ಕೇರಳಿಸಿ ಅರಳಿಸಿ, ಅವರ ಭಾವನೆಗಳಿಗೆ ರೆಕ್ಕೆ ಕಟ್ಟಿ, ಗಾಳಿಯಲ್ಲಿ ತೇಲಾಡುವಂತೆ, ಅವರ ಮನಸ್ಸು ಸಂತುಷ್ಟಗೊಳಿಸುವುದಲ್ಲದೇ, ಅವರನ್ನು ಮಾನಸಿಕವಾಗಿ ದೈಹಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹೋಗುವಂತೆ ಇರುವ ಸಾಹಿತ್ಯ.

ಕನ್ನಡ ಸಾಹಿತ್ಯ ಲೋಕದೊಳಗೆ ಹಲವಾರು ಹಿರಿಯ ಸಾಹಿತಿಗಳು ಮಕ್ಕಳಿಗಾಗಿ ಬರೆದಿರುವಂತಹ ಕವಿಗಳನ್ನು ಸಹ ಕಾಣಬಹುದು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಸೋಂಪುರದವರದಾ ಶಿಕ್ಷಕರು, ಕವಿಗಳು, ವಚನಕಾರರು, ಮಕ್ಕಳ ಸಾಹಿತಿಯು ಆಗಿರುವ ಶ್ರೀ ವೀರೇಶ ಬ ಕುರಿ ಸೋಂಪುರ ರವರು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾವ್ಯ ಪ್ರಕಾರದ ರಚನೆಯ 2ನೇ ಕೃತಿ “ಮಿಠಾಯಿ ಮಾಮ” ಎನ್ನುವ ಕವನ ಸಂಕಲನ ಸುಮಾರು 60 ಚಿಣ್ಣರಿಗಾಗಿ ರಚಿಸಿದ ಕವಿತೆಗಳ ಗುಚ್ಛ, ಈ ಕೃತಿಗೆ ಶ್ರೀಮತಿ ಅರುಣ ನರೇಂದ್ರ ಅವರ ಬೆನ್ನುಡಿ, ಶಿಕ್ಷಕರು ಮಕ್ಕಳ ಸಾಹಿತಿಗಳು ಆದ ಅಶೋಕ್ ವಿ ಬಳ್ಳಾ ರವರ ಮುನ್ನುಡಿಯಲ್ಲಿ ಹೊರಬಂದ ಕೃತಿಯೇ “ಮಿಠಾಯಿ ಮಾಮ”. ಮಕ್ಕಳಿಗಾಗಿ ರಚಿಸಿದ ಈ ಕೃತಿಯು ಮಿಠಾಯಿ ತಿಂದಷ್ಟೇ ರುಚಿ ನೀಡುವ ಮಕ್ಕಳ ಕವಿತೆಗಳು ಮಕ್ಕಳನ್ನು ಬರ ಸೆಳೆದಿದೆ.

ಕವಿ ವೀರೇಶ್ ಕುರಿ ರವರ ರಚನೆಯ ಈ ಕೃತಿಯಲ್ಲಿ ಒಂದಷ್ಟು ಮಿಠಾಯಿ ಎನ್ನುವ ಕವಿತೆಗಳನ್ನು ಸವಿಯೋಣ ಬನ್ನಿ…
ಇವರ ಒಂದು ಕವಿತೆ ‘ನಾನು ಆಗುವೆ ಗಾಂಧಿ’ ಕವಿತೆಯು ಗಾಂಧೀಜಿಯ ಸರಳತೆ ಅವರ ನಡೆ ನುಡಿ ಆಚಾರ ಮಕ್ಕಳನ್ನು ಆಕರ್ಷಣೆಗೆ ಒಳಪಡಿಸದೆ ಇರುವುದಿಲ್ಲ, ಅವರು ಧರಿಸಿದ ವಸ್ತುಗಳು ಮಕ್ಕಳ ಮನಸ್ಸು ಸೆಳೆಯದೇ ಇರಲಾರವು, ಅಂತಹ ವಸ್ತುಗಳನ್ನು ಮುಂದಿಟ್ಟುಕೊಂಡು ರಚಿಸಿದ ಈ ಕವಿತೆಯ ಸಾಲುಗಳು ಇಂತಿವೆ…

“ಅನುದಿನ ನಾನು ಅಜ್ಜನ ಮಾರ್ಗದಿ,
ನಡಿಯುವ ಆಸೆಯು ಮೊಳೆದೈತಿ
ಒಂದಿನ ನಾನು ಆಗುವೆ ಗಾಂಧಿ
ಎನ್ನುವ ಭಾವವು ಬೆಳೆದೈತಿ…!! “

-ಕವಿ ಇಲ್ಲಿ ಕವಿತೆ ಕಟ್ಟಬೇಕಾದರೆ ಮಗುವಾಗಿ ಕವಿಯಾಗಿ ಮಕ್ಕಳಂತೆಯೇ ಗಾಂಧಿಯನ್ನು ಗಮನಿಸುವ ರೀತಿ ಅಚ್ಚರಿಪಡಿಸುತ್ತದೆ. ಒಂದು ಮಗು ಗಾಂಧಿ ಮಾರ್ಗದಲ್ಲಿ ನಾನೂ ಒಂದು ದಿನ ಗಾಂಧಿಯಜ್ಜನ ಮಾರ್ಗದಲ್ಲಿ ನಡೆಯಬೇಕಲ್ಲ ಎನ್ನುವ ಆಸೆಯೊಂದು ಮನದೊಳಗೆ ಮೊಳಕೆ ಒಡೆದೈತಿ. ಆ ಮಾರ್ಗದಲ್ಲಿ ನಡೆದು ಗಾಂಧಿ ಆಗಬೇಕೆಂಬ ಭಾವವು ಮನಸಲ್ಲಿ ಬೆಳೆಯುತ್ತಿದೆ. ಎನ್ನುವ ಸಾಲುಗಳನ್ನು ಗಮನಿಸಿದಾಗ ಗಾಂಧಿ ತತ್ವಗಳು ಜಗಕ್ಕೆ ಮಾದರಿಯಲ್ಲದೆ ಮಕ್ಕಳ ಮನಸ್ಸನ್ನು ಸೆಳೆಯುತ್ತಿರುವುದು ಅಚ್ಚುಮೆಚ್ಚು. ಎಲ್ಲರಿಗೂ ಆತನ ಮಾರ್ಗಗಳು ಇಷ್ಟ ಹಾಗಾಗಿ ಮಕ್ಕಳು ಸಹ ನಾನು ಗಾಂಧಿಯಾಗುವ ಆಸೆ ಎಂಬ ಕವಿತೆಯಲ್ಲಿ ಕಾಣಬಹುದು.

ಮತ್ತೊಂದು ಕವಿತೆಯಲ್ಲಿ ಕವಿಯ ಮನದ ತಳಮಳ ಕಾಣಬಹುದು, ಸಾಂಕ್ರಾಮಿಕ ರೋಗ ಕೊರೋನ ಬಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದಾಗ ಮಕ್ಕಳು ಮನೆ ಸೇರಿ ಆನ್ಲೈನ್ ಕ್ಲಾಸ್ ಅಂತ ಹೇಳಿ ಮಕ್ಕಳ ವಿದ್ಯಾಭ್ಯಾಸದ ದಿಕ್ಕನ್ನೇ ಬದಲಿಸಿತು, ಮಕ್ಕಳ ಓದುವ ಆಸಕ್ತಿಯನ್ನು ಕಿತ್ತುಕೊಂಡ ಮೊಬೈಲ್ಗಳು, ಮಕ್ಕಳಿಗೆ ಬಯಸದೆ ಸಿಕ್ಕ ಭಾಗ್ಯ ಮೊಬೈಲ್ ಗಳ ಬಳಕೆ, ಮಕ್ಕಳನ್ನು ಯಾವುದರಿಂದ ದೂರ ಇಡಬೇಕಾಗಿತ್ತೋ ಅದೇ ಹತ್ತಿರವಾಯಿತು, ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿದ್ದು ಅಂತೂ ಸತ್ಯ. ಈ ಸನ್ನಿವೇಶವನ್ನೇ ನೆನಪು ಮಾಡುವಂತ ಒಂದು ಕವಿತೆಯನ್ನು ಕವಿ ಕಟ್ಟಿ ಕೊಟ್ಟಿದ್ದಾರೆ.

ದೂರದರ್ಶನದ ಸಂಗವನು ತೊರೆದು
ಜಂಗಮವಾಣಿಯ ಹಂಗನು ಹರಿದು
ಊರಿನ ಬೀದಿಗಳನು ಸುತ್ತೋಣ ಬಾ
ಗಿಡಮರಗಳನು ನಾವು ಹತ್ತೋಣ ಬಾ

-ಕವಿ ಕವಿತೆಯನ್ನು ತುಂಬಾ ಸೊಗಸಾಗಿ ಮಕ್ಕಳನ್ನ ಮನಸ್ಸಲ್ಲಿಟ್ಟುಕೊಂಡೇ ಬರುದಿರುವಂತ ಕವಿತೆ, ಮಕ್ಕಳು ಇಂದಿನ ಕಾಲದಲ್ಲಿ ಟಿವಿ ಮೊಬೈಲ್ ಬಿಟ್ಟು ಇರಲಾರದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಅದನ್ನು ಮನಗೊಂಡ ಕವಿ ದೂರದರ್ಶನ ಸಂಗವನ್ನು ತೊರೆದು, ಜಂಗಮ(ಮೊಬೈಲ್) ಹಂಗನ್ನು ಬಿಟ್ಟು, ಊರಿನ ಕೇರಿ ಬೀದಿಗಳನ್ನು ಸುತ್ತೋಣ ಬಾ, ಮರ ಗಿಡಗಳನ್ನು ನಾವು ಹತ್ತೋಣ ಬಾ ಎಂದು ಕವಿ ಮಕ್ಕಳನ್ನು ಆಟ ಆಡಲು ಮೈದಾನಕ್ಕೆ ಕರೆಯುತ್ತಾರೆ.

ಹಿಂದಿನ ಕಾಲದಲ್ಲಿ ಟಿವಿ ಮೊಬೈಲ್ ಸುಳಿವು ಅಷ್ಟೊಂದು ಇರಲಿಲ್ಲ, ಹಾಗಾಗಿ ಮಕ್ಕಳು ಶಾಲೆ ಇಲ್ಲದಾಗ ಊರಿನ ಓಣಿ ಬೀದಿ ಸುತ್ತಾಡಿ ಸ್ನೇಹಿತರೊಂದಿಗೆ ಮೈದಾನದ ಆಟಗಳ ಚಿನ್ನಿದಾಂಡು, ಲಗೋರಿ ಮತ್ತು ಮರ ಗಿಡಗಳನ್ನು ಹತ್ತಿ ಮರಕೋತಿ ಆಟ ಆಡುತ್ತಿದ್ದರು, ಹಾಗೆ ದೈಹಿಕವಾಗಿ,ಮಾನಸಿಕವಾಗಿ ಸದೃಢವಾಗಿರುತ್ತಿದ್ದರು.

ಈಗಿನ ಮಕ್ಕಳಿಗೆ ಮರಕೋತಿ ಆಟ ಚಿನ್ನಿ-ದಾಂಡು ಆಟ ಅಂದ್ರೆ ಏನು ಅಂತಾನೆ ಗೊತ್ತಿಲ್ಲ. ಈ ತನ್ನ ಅಳಲನ್ನ ಕವಿ ತೋಡಿಕೊಂಡಿದ್ದಾರೆ, ಈ ಕವಿತೆಯನ್ನು ಸಂಪೂರ್ಣವಾಗಿ ಓದಿದಾಗ ಅರ್ಥವಾಗುತ್ತೆ. ಹಳ್ಳಕೊಳ್ಳ ಸುತ್ತೋಣ ಬಾ, ಬೆಟ್ಟಗುಡ್ಡ ಹತ್ತೋಣ ಬಾ, ತುಂಬಾ ಸೊಗಸಾಗಿ ಕವಿತೆಯಲ್ಲಿ ಮಕ್ಕಳನ್ನು ಪರಿಸರದೊಳಗೆ ಸುತ್ತಾಡಿಸುತ್ತಾರೆ. ಈ ರೀತಿಯ ಸಾಹಿತ್ಯ ಈಗಿನ ಮಕ್ಕಳಿಗೆ ಅವಶ್ಯಕತೆವಾಗಿದೆ.

ಈಗಿನ ಮಕ್ಕಳಿಗೆ ಹಳ್ಳಕೊಳ್ಳ ಬೆಟ್ಟ ಗುಡ್ಡ ಗೊತ್ತಿಲ್ಲ, ಕೆರೆಯಲ್ಲಿ ಈಜುವುದು ಗೊತ್ತಿಲ್ಲ, ಗಾಳಿಪಟ ಹಾರಿಸುವುದು ಗೊತ್ತಿಲ್ಲ, ಇದೊಂತರ ವಿಪರ್ಯಾಸವೇ ಸರಿ.

ಮಕ್ಕಳ ಕವಿ ವೀರೇಶ್ ಕುರಿಯ ರವರು ಮತ್ತೊಂದು ಕಡೆ ಕನ್ನಡದ ಕಂಪನ ಬಿತ್ತಾರ ಮಾಡಿದ್ದಾರೆ, ಮೊದಲೇ ಶಿಕ್ಷಕ, ಕವಿಯಾಗಿರುವ ಇವರು ಈ ಕವಿತೆ ತುಂಬಾ ಜಾಣ್ಮೆಯಿಂದ ಕಟ್ಟಿದ್ದಾರೆ, ನಾಡಿನ ಕವಿಗಳು ಶಿಕ್ಷಕರು ಹಿರಿಯರು ಕನ್ನಡ ಅಭಿಮಾನಿಗಳು ಎಲ್ಲರೂ ಮಕ್ಕಳಿಗೆ, ಮಕ್ಕಳಲ್ಲಿ ಕನ್ನಡ ಅಭಿಮಾನ, ಭಾಷಾಭಿಮಾನ ಬೆಳೆಸುವ ಹಾದಿ ರೂಪಿಸಬೇಕಾಗಿದೆ, ಇಂದಿನ ಮಕ್ಕಳಿಗೆ ಆಗ ಮಾತ್ರ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಮಾತಿನಂತೆ ಕವಿ ತನ್ನ ಮಿಠಾಯಿ ಮಾಮ ಪುಸ್ತಕದಲ್ಲಿರುವ “ತಾಯಿಯ ಆಸೆ” ಎನ್ನುವ ಕವಿತೆಯಲ್ಲಿ ಕನ್ನಡ ಅಭಿಮಾನ ವ್ಯಕ್ತಪಡಿಸಿದ್ದಾರೆ.

“ಕನ್ನಡವ ಮಾತಾಡು ಓ ನನ್ನ ಮುದ್ದು ಕೂಸೆ
ಕನ್ನಡದಿ ನೀ ಹಾಡು ಇದು ನನ್ನ ಎದೆಯಾಸೆ “

-ಇಲ್ಲಿ ತಾಯಿ ತನ್ನ ಮಕ್ಕಳಿಗೆ ಕೂಸುವಿಗೆ ಮನದುಂಬಿ ಕನ್ನಡ ಪದಗಳಿಂದ ಮಾತಾಡು, ಕನ್ನಡದ ಹಾಡುಗಳನ್ನು ನೀ ಹಾಡು, ಕೂಸೆ ಇದು ನನ್ನ ಎದೆಯಾಸೆ ಆಗಿದೆ ಎಂದು ತಾಯಿ ಮಗುವಿಗೆ ತುಂಬಾ ಪ್ರೀತಿಯಿಂದ ಹೇಳಿಕೊಡುವ ಭಾಷಾಭಿಮಾನದ ಸಾಲುಗಳಾಗಿವೆ. ಮಕ್ಕಳಲ್ಲಿ ನಾಡು ನುಡಿಯ ಬಗ್ಗೆ ಪ್ರೇಮವನ್ನು ಬೆಳೆಸಬೇಕಾಗಿದೆ, ಕವಿ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ.

“ತರ್ಲೆ ತಮ್ಮ” ಎಂಬ ಕವಿತೆಯಲ್ಲಿ ಕವಿ ಅಣ್ಣ-ತಮ್ಮನವರ ತರ್ಲೆ ತರದ ಬಗ್ಗೆ ತುಂಬಾ ಸೊಗಸಾಗಿ ತುಂಟತನದ ವ್ಯಕ್ತವಾದ ಭಾವವನ್ನ ಕಾಣಬಹುದು.

“ಜಗಳಗಂಟನು ನನ್ನ ತಮ್ಮ
ಬಹಳ ತುಂಟ ತರ್ಲೆ ತಿಮ್ಮ

ಅಮ್ಮನು ನನಗೆ ಕೊಡಲು ಹಣ್ಣು
ಬೀಳುವುದದರ ಮೇಲೆ ಇವನ ಕಣ್ಣು “

ಪ್ರತಿ ಮನೆಯಲ್ಲಿ ಈ ತರ ಅಣ್ಣ-ತಮ್ಮ ಇರ್ಲೇಬೇಕು, ಯಾಕಂದರೆ ಜೀವನ ಸುಖ ಸಂತೋಷದೊಂದಿಗೆ ಸಾಗಬೇಕು ಅಂದ್ರೆ ತರ್ಲೆ ಅಣ್ಣ ತಮ್ಮ ಮನೆಗೆ ಬೇಕು, ಇಲ್ಲಿ ಕವಿ ಜಗಳಗಂಟ ತಮ್ಮ ಇದ್ದಾನೆ, ಅವನೊಬ್ಬ ಬಹಳ ತುಂಟ ತರ್ಲೆ ತಿಮ್ಮ, ಅಮ್ಮ ನನಗೆ ಕೊಡಲು ಹಣ್ಣು ತಂದಿದ್ದಳು, ಬಿತ್ತು ಅದರ ಮೇಲೆ ಅವನ ಕಣ್ಣು ಎನ್ನುವ ಕವನದ ಸಾಲುಗಳು ಮಕ್ಕಳಿಗೆ ಪ್ರಾಸಭದ್ಧ ಪದಗಳ ಬಳಕೆ ಮನಸೆಳೆಯುವಂತೆ ಇದೆ. ಈ ರೀತಿಯ ಪ್ರಾಸ ಪದಗಳು ಒಳಗೊಂಡ ಕವಿತೆಗಳು ಮಕ್ಕಳಿಗೆ ಕಂಠಪಾಠ ಮಾಡಲು ಸುಲಭದ ವಸ್ತು ವಿಷಯವಾಗುವುದರಲ್ಲಿ ಎರಡು ಮಾತಿಲ್ಲ, ಕವಿ ಇಲ್ಲಿ “ನನ್ನ ತಮ್ಮ- ತರಲೆ ತಿಮ್ಮ”, “ಕೊಡಲು ಹಣ್ಣು- ಇವನ ಕಣ್ಣು” ಎನ್ನುವ ಸಾಲುಗಳಲ್ಲಿ ಪ್ರಾಸವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಇನ್ನೊಂದು ಕವಿತೆಯಲ್ಲಿ ಕವಿಯ ಪ್ರಕೃತಿಯಲ್ಲಿರುವ ಗುಬ್ಬಿ, ಗಿಳಿ, ಕೋಗಿಲೆ, ನವಿಲು ಮುಂತಾದ ಪಕ್ಷಿ ಸಂಕುಲಗಳ ವಿಸ್ಮಯಗಳನ್ನು ಪದಗಳಲ್ಲಿ ಸೆರೆಹಿಡಿದು ಕವಿತೆ ಕಟ್ಟಿರುವುದು ಓದಲೇಬೇಕು. ಆ ಕವಿತೆ “ಹಕ್ಕಿಗಳ ಹಾಡು” ಕವನ ಇಂತಿದೆ.

“ಓ ನವಿಲೇ ಓ ನವಿಲೇ
ಬಿಂಕವೇತಕೆ…?
ನಾಟ್ಯಾರಾಣಿ ಎಲೆ ಬಾಲೆ
ಸೋತಿ ನಿನ್ನ ನೃತ್ಯಕ್ಕೆ..”

-ಕವಿ ಪ್ರಕೃತಿಯೊಳಗೆ ಪಕ್ಷಿಗಳು ಭೇದವಿರದೆ ಸಂತೋಷದೊಂದಿಗೆ ತಮ್ಮದೇ ಆದ ವಿಶಿಷ್ಟತೆಯೊಂದಿಗೆ ಇರುವುದನ್ನ ಕವಿ ಬಣ್ಣಿಸಿರುವದು ಕಾಣಬಹುದಾಗಿದೆ. ಇಲ್ಲಿ ನವಿಲನ್ನು ಕುರಿತು ನವಿಲೇ ನಿನಗೆ ಬಿಂಕವೇಕೆ, ನಿನ್ನ ನಾಟ್ಯ ರಾಣಿಯ ನಿನ್ನ ನೃತ್ಯಕ್ಕೆ ನಾನು ಸೋತೆ ಎನ್ನುವಂತೆ ನವಿಲಿನ ನರ್ತನೆಯನ್ನ ಮತ್ತು ಗಿಳಿ ಕೋಗಿಲೆ ಗುಬ್ಬಿಗಳನ್ನು ಕುರಿತು ಮಕ್ಕಳಿಗೆ ಮನಮುಟ್ಟುವಂತೆ ಕವಿತೆಯಲ್ಲಿ ವರ್ಣಿಸಿದ್ದಾರೆ.
ಕವಿ ಪ್ರಕೃತಿಯ ವಿಷಯಗಳೊಂದಿಗೆ ಕವಿತೆ ಕಟ್ಟಿರುವುದು ಮಕ್ಕಳ ಮನಸ್ಸು ಗೆಲ್ಲುತ್ತಾ ಸಾಗಿದ್ದಾರೆ, ಮಿಠಾಯಿ ಮಾಮ ಪುಸ್ತಕದಲ್ಲಿರುವ ಕವಿತೆಗಳನ್ನು ಗಮನಿಸಿದಾಗ ತಿಳಿಯುತ್ತಿದೆ.

ಮತ್ತೊಂದು ಕಡೆ ಮಿಠಾಯಿ ಮಾಮ ಪುಸ್ತಕದಲ್ಲಿ “ಕಾಗೆ ಮತ್ತು ಮಗು” ಕವನದಲ್ಲಿ ಮಗುವಿನ ಸಂಭಾಷಣೆ ಕಾಗೆಯ ಜೊತೆಗೆ….

“ನಿನಗೆ ಮಾತ್ರ ಈ ಕಡುಗಪ್ಪು
ದೇವನ ಈ ರೀತಿಯ ಬಲು ತಪ್ಪು..!
ಬೇಸರವೇನು ಓ ಕಾಗಕ್ಕ..?
ನನ್ನಲ್ಲಿ ಹೇಳು ನಿನ್ನ ದುಃಖ..!”

-ಈ ಕವಿತೆಯಲ್ಲಿ ಕವಿ ಮಕ್ಕಳಿಗೆ ಚಿಂತನೆಗೆ ಹಚ್ಚುವ ನಿಟ್ಟಿನಲ್ಲಿ “ಕಾಗೆ ಮತ್ತು ಮಗು” ಕವಿತೆಯನ್ನು ರಚಿಸಿರುವುದನ್ನು ಕಾಣಬಹುದು. ಮಗು ಕಾಗೆಗೆ ಪ್ರಶ್ನೆ ಮಾಡಿ, ನಿನ್ನ ದುಃಖ ನನ್ನ ಬಳಿ ಏಳಿಕೋ, ದೇವರು ನಿನ್ನ ವಿಷಯದಲ್ಲಿ ಬಹಳ ತಪ್ಪು ಮಾಡಿದ್ದಾನೆ, ನಿನಗೆ ಮಾತ್ರ ಯಾಕೆ ಕಪ್ಪು ಬಣ್ಣ ಕೊಟ್ಟಿದ್ದಾನೆ?, ಬೇಸರ ಪಡಬೇಡ ಕಾಗೆಯೇ ನನ್ನಲ್ಲಿ ಹೇಳು ನಿನ್ನ ದುಃಖ, ದುಮ್ಮಾನಗಳನ್ನು ಎಂದು ಮಗು ಮುದ್ದಾಗಿ ಪ್ರಶ್ನೆ ಮಾಡುವ ಪರಿ ತುಂಬಾ ಇಷ್ಟವಾಗುತ್ತಿದೆ.

ಒಟ್ಟಾರೆಯಾಗಿ ಹೇಳಬೇಕಾದರೆ ಕವಿ ವೀರೇಶ್ ಬ ಕುರಿ ರವರು ಮಕ್ಕಳ ಕವಿತೆಗಳನ್ನು ಬರೆದು ಮಿಠಾಯಿ ಮಾಮ ಪುಸ್ತಕದೊಂದಿಗೆ ಮಕ್ಕಳ ಸಾಹಿತ್ಯದಿಂದ ಮನಗೆಲ್ಲುತ್ತಾರೆ, ಈ ಪುಸ್ತಕದಲ್ಲಿ ಇನ್ನೂ ಮುಂತಾದ ಕವಿತೆಗಳು “ತುಂಟ ಬೆಕ್ಕು, ಬಾ ಬಾ ಗುಬ್ಬಿ, ಗಾಳಿಪಟ, ಬಣ್ಣದ ಬುಗುರಿ, ನಾಲ್ಕರ ಮಗ್ಗಿ ಹಾಡು, ನಮ್ಮ ಪೊಲೀಸ್, ಮುದ್ದಿನ ಅಜ್ಜಿ, ಚುಕ್ಕುಬುಕ್ಕು ರೈಲು, ಚೆಲುವ ಚಿಟ್ಟೆ, ಮತ್ತು ಇರುವೆ ಇರುವೆ ” ಮುಂತಾದ ಕವಿತೆಗಳನ್ನು ಕಟ್ಟುವುದರ ಮೂಲಕ ಮಕ್ಕಳ ಮನಸ್ಸನ್ನು ಮತ್ತು ಸಾಹಿತ್ಯ ಆಸಕ್ತರ ಮನವನ್ನು ಕವಿ ವೀರೇಶ್ ರವರು ಗೆಲ್ಲುತ್ತಾರೆ, ಇನ್ನು ಮಕ್ಕಳ ಸಾಹಿತ್ಯ ಲೋಕದಲ್ಲಿ ಅವರ ಸಾಹಿತ್ಯ ಕೃಷಿ ಇನ್ನೂ ಉತ್ತುಂಗದಲ್ಲಿ ಸಾಗಲಿ ಎಂಬ ಸದಾಶಯದೊಂದಿಗೆ.

‍ಲೇಖಕರು Admin

December 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: