ಶ್ರೀನಿವಾಸ ಪ್ರಭು ಅಂಕಣ- ಬೆನ್ನು ತಟ್ಟಿದ ಮೇಲೇ ನನ್ನ ಮನಸ್ಸು ಹಗುರಾದದ್ದು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

42

ಹ್ಯಾಮ್ಲೆಟ್ ನಾಟಕದ ಪ್ರಚಂಡ ಯಶಸ್ಸಿನಿಂದ ಉತ್ತೇಜಿತನಾಗಿದ್ದ ನಾನು ಪರಮ ಉತ್ಸಾಹದಿಂದ, ಹೊಸ ಹುರುಪಿನಿಂದ ಉದ್ಭವ ನಾಟಕದ ತಾಲೀಮು ಆರಂಭಿಸಿದೆ. ನಮ್ಮ ನಾಟ್ಯದರ್ಪಣ ತಂಡದ ಸದಸ್ಯರಂತೂ ರಿಹರ್ಸಲ್ಸ್ ಆರಂಭವಾಗುವುದನ್ನೇ ಕಾಯುತ್ತಿದ್ದರು! ನಮ್ಮ ನಾಡಿನ ಅನೇಕ ಶ್ರೇಷ್ಠ ರಂಗ ಕಲಾವಿದರು ನಮ್ಮ ತಂಡದಲ್ಲಿದ್ದರು ಅನ್ನುವುದೇ ಒಂದು ಹೆಮ್ಮೆಯ ಸಂಗತಿಯಾಗಿತ್ತು. ಕನ್ನಡ ರಂಗಭೂಮಿಯ ‘ಚಿರ ಯುವಕ’ ಶ್ರೀನಿವಾಸ ಮೇಷ್ಟ್ರು ಕೇಂದ್ರ ಪಾತ್ರವಾದ ರಾಘಣ್ಣನ ಪಾತ್ರವನ್ನು ನಿರ್ವಹಿಸುತ್ತಿದ್ದರೆ ರಿಚರ್ಡ್, ಸುಧೀಂದ್ರ, ಲಲಿತ ಪ್ರಸಾದ್, ನಳಿನಿ ಅಕ್ಕ, ಕೃಷ್ಣೇಗೌಡರು, ಮೋಹನ್ ರಾವ್, ಶಿವಶಂಕರ್ ಮುಂತಾದವರು ಇತರ ಮುಖ್ಯ ಪಾತ್ರಗಳಲ್ಲಿದ್ದರು.

ಮೇಳದಲ್ಲಿ ಮಧುರದನಿಯ ಗಾಯಕ ಅಬ್ಬೂರು ವೆಂಕಟ ರಾಮ್ , ಹಾರ್ಮೋನಿಯಂ ಸತೀಶ್, ಮಂಜುನಾಥ್, ದ್ವಾರಕಾನಾಥ್ ಮುಂತಾದವರು ಹಾಡುಗಳಿಗೆ ಜೀವ ತುಂಬಲು ಸನ್ನದ್ಧರಾಗಿದ್ದರು.ಪ್ರೀತಿಯ ಗೆಳೆಯ ಎಂ.ಎನ್.ವ್ಯಾಸರಾವ್ ಸೊಗಸಾದ ಹಾಡುಗಳನ್ನು ಬರೆದುಕೊಟ್ಟಿದ್ದ ವಿಷಯ ಈಗಾಗಲೇ ಹೇಳಿದ್ದೇನಷ್ಟೇ. ಸಂಗೀತ ಸಂಯೋಜನೆ ಮಾಡಿಕೊಡುವುದಾಗಿ ಆಶ್ವಾಸನೆ ಕೊಟ್ಟಿದ್ದ ಕಾರಂತ ಮೇಷ್ಟ್ರಿಂದ ಬರುವ ಸಿಹಿ ಸುದ್ದಿಗಾಗಿ, ರಾಗ ಸಂಯೋಜನೆಗೊಂಡ ಹಾಡುಗಳ ಕ್ಯಾಸೆಟ್ ಗಾಗಿ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೆವು.

ಎರಡು ಮೂರು ಬಾರಿ ನಾಟಕ ಶಾಲೆಗೆ ಫೋನ್ ಮಾಡಿದಾಗಲೂ ಮೇಷ್ಟ್ರು ಸಿಕ್ಕಿರಲಿಲ್ಲ. ಕೊಂಚ ತಡವಾಗಿಯಾದರೂ ಸರಿ,ಮೇಷ್ಟ್ರು ಕ್ಯಾಸೆಟ್ ಕಳಿಸಿಯೇ ಕಳಿಸುತ್ತಾರೆ ಎಂಬೊಂದು ದೃಢ ನಂಬಿಕೆಯಲ್ಲಿ ನಾವು ನಾಟಕದ ಪೋಸ್ಟರ್ ಸಿದ್ಧ ಪಡಿಸಿ “ಸಂಗೀತ: ಬಿ.ವಿ.ಕಾರಂತ” ಎಂದು ಅದರಲ್ಲಿ ನಮೂದಿಸಿ ಪ್ರಚಾರ ಶುರು ಮಾಡಿಯೇ ಬಿಟ್ಟೆವು. ನಾಟಕದ ಪೋಸ್ಟರ್ ಅನ್ನು ನಮ್ಮ ತಂಡದ ಕಲಾವಿದ ಮಿತ್ರ ತುಳಜಾರಾಂ ಭೂತೆ ಸಿದ್ಧ ಪಡಿಸಿದ್ದ. ಗಣಪತಿಯ ಮೂರ್ತಿ ಅಕ್ಷರಗಳ ನಡುವಿನಿಂದ ಉದ್ಭವಿಸಿಯೇ ಬರುತ್ತಿದೆಯೇನೋ ಎಂಬ ಭಾವನೆ ಬರುವ ರೀತಿಯಲ್ಲಿ ಅತ್ಯಂತ ಕಲಾತ್ಮಕವಾಗಿ, ಅರ್ಥಪೂರ್ಣವಾಗಿ ಪೋಸ್ಟರ್ ಅನ್ನು ಭೂತೆ ವಿನ್ಯಾಸಗೊಳಿಸಿದ್ದ. ‘ಉದ್ಭವ’ ತೆಳುಹಾಸ್ಯದ ಲೇಪವಿದ್ದ ವಿಡಂಬನಾತ್ಮಕ ನಾಟಕವಾದುದರಿಂದ ಜನಪ್ರಿಯವಾಗುವುದರಲ್ಲಿ ಸಂಶಯವೇ ಇರಲಿಲ್ಲ.

ಜನರನ್ನು ನಗಿಸುತ್ತಾ, ನಗಿಸುತ್ತಲೇ ಚುಚ್ಚುತ್ತಾ, ಅವರನ್ನು ಚಿಂತನೆಗೆ ಒರೆಹಚ್ಚುತ್ತಾ ಹೋಗುವ ರೀತಿಯಲ್ಲಿ ನಾಟಕದ ವಿನ್ಯಾಸವನ್ನು ನಾನು ಅಣಿಗೊಳಿಸಿದ್ದೆ. ಶಿಲ್ಪಿ ರಾಮಾಚಾರಿಯ ಪಾತ್ರದ ಧೋರಣೆಗಳನ್ನು ಬದಲಾಯಿಸಿ ಅದನ್ನೊಂದು ಧನಾತ್ಮಕ ಪಾತ್ರವಾಗಿ ಪರಿವರ್ತಿಸಿ ನಾಟಕಕ್ಕೆ ಅಗತ್ಯವಾದ ‘ಘರ್ಷಣೆ’ಗೆ ಅವಕಾಶ ಕಲ್ಪಿಸಿಕೊಂಡ ಬಗ್ಗೆ ಈ ಹಿಂದೆಯೇ ಬರೆದಿದ್ದೇನೆ. ಮೂರು ನಾಲ್ಕು ವಾರಗಳ ಸತತ ಅಭ್ಯಾಸದ ನಂತರ ನಾಟಕ ಪ್ರದರ್ಶನಕ್ಕೆ ಸಿದ್ಧವಾಯಿತು..ಹಾಡುಗಳನ್ನು ಜೋಡಿಸಿಕೊಳ್ಳುವುದಷ್ಟೇ ಉಳಿದಿತ್ತು! ಪ್ರದರ್ಶನದ ದಿನಾಂಕವೂ ನಿಗದಿಯಾಗಿ ಹೋಯಿತು..ಮೇಷ್ಟ್ರಿಂದ ಹಾಡುಗಳ ಕ್ಯಾಸೆಟ್ ಮಾತ್ರ ಬರಲಿಲ್ಲ.

ನಾಲ್ಕಾರು ಬಾರಿ ಶಾಲೆಗೆ ಫೋನ್ ಮಾಡಿದರೂ ಮೇಷ್ಟ್ರು ಸಂಪರ್ಕಕ್ಕೆ ಸಿಕ್ಕಲಿಲ್ಲ. ನಾಟಕ ಪ್ರದರ್ಶನಕ್ಕೆ 2—3 ದಿನಗಳಷ್ಟೇ ಉಳಿದಿವೆ! ಪೋಸ್ಟರ್ ಗಳಲ್ಲೆಲ್ಲಾ “ಸಂಗೀತ: ಬಿ.ವಿ.ಕಾರಂತ” ಎಂದು ಸಾರಿಬಿಟ್ಟಿದ್ದೇವೆ! ಈ ಮಧ್ಯೆ ನನ್ನನ್ನೊಂದು ನೈತಿಕ ಪ್ರಶ್ನೆ ಕಾಡತೊಡಗಿತು: “ಕಾರಂತರು ರಂಗಭೂಮಿಯಲ್ಲಿ ಬಹು ದೊಡ್ಡ ಹೆಸರು..ಅವರ ಸಂಯೋಜನೆಯ ಹಾಡುಗಳಿಗೇ ಜನರನ್ನು ರಂಗಭೂಮಿಗೆ ಎಳೆತರುವ ತಾಕತ್ತಿದೆ; ಹಾಗಿರುವಾಗ ಈಗ ಕಾರಂತರ ಹೆಸರನ್ನು ದೊಡ್ಡದಾಗಿ ಹಾಕಿ, ಕೊನೆಯಲ್ಲಿ—’ ಅವರು ಸಂಗೀತ ಮಾಡಿಲ್ಲ.. ಮತ್ಯಾರೋ ಮಾಡಿದ್ದಾರೆ’ ಎಂದರೆ ಪ್ರೇಕ್ಷಕ ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುವುದಿಲ್ಲವೇ? ಪ್ರಚಾರಕ್ಕಾಗಿ ಸುಮ್ಮ ಸುಮ್ಮನೆ ಕಾರಂತರ ಹೆಸರನ್ನು ಬಳಸಿಕೊಂಡಿದ್ದಾರೆ’ ಎಂದು ಗೂಬೆ ಕೂರಿಸುವುಲ್ಲವೇ?” ಹಾಗನ್ನಿಸಿದ್ದೇ ತಡ, ಕಲಾಕ್ಷೇತ್ರದ ಆವರಣದಲ್ಲಿ ಹಾಕಿದ್ದ ಮುಖ್ಯ ಪೋಸ್ಟರ್ ಗಳಲ್ಲಿದ್ದ ಕಾರಂತರ ಹೆಸರಿನ ಮೇಲೆ ಖಾಲಿಪೇಪರ್ ಅಂಟಿಸಿ ಅವರ ಹೆಸರನ್ನು ಮರೆ ಮಾಡಿಬಿಟ್ಟೆವು!

ಬೆಂಗಳೂರಿನ ತುಂಬಾ ಅನೇಕ ಕಡೆಗಳಲ್ಲಿ ಹಚ್ಚಿರುವ ಪೋಸ್ಟರ್ ಗಳಲ್ಲಿರುವ ಮೇಷ್ಟ್ರ ಹೆಸರನ್ನು ಮರೆ ಮಾಡುವುದಂತೂ ಅಸಾಧ್ಯದ ಮಾತು; ಕೊನೆಯ ಪಕ್ಷ ಕಲಾಕ್ಷೇತ್ರಕ್ಕೆ ಬಂದಮೇಲೆ ವಿಷಯ ಗೊತ್ತಾಗುತ್ತದಲ್ಲಾ.. ಅಷ್ಟು ಸಾಕು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ‘ಮೇಷ್ಟ್ರು ನಾಟಕಶಾಲೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವವರು; ಹತ್ತಾರು ಯೋಜನೆಗಳಲ್ಲಿ ತೊಡಗಿಕೊಂಡಿರುವಂಥವರು; ಸಹಜವಾಗಿಯೇ ನಮ್ಮ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿಕೊಡಲು ಅವರಿಗೆ ಸಮಯಾಭಾವದ ಕೊರತೆ ಕಾಡಿದೆ…ಸರಿಯೇ! ಎಲ್ಲವೂ ನನಗರ್ಥವಾಗುತ್ತದೆ…ಆದರೆ ‘ಮಾಡಿಕೊಡಲಾಗುತ್ತಿಲ್ಲ’ ಎಂದು ಒಂದು ಮಾತು ಕೊಂಚ ಮೊದಲೇ ತಿಳಿಸಿಬಿಟ್ಟಿದ್ದರೆ ನನಗೆಷ್ಟು ಅನುಕೂಲವಾಗುತ್ತಿತ್ತು! ಬೇರೆ ವ್ಯವಸ್ಥೆ ಮಾಡಿಕೊಳ್ಳಲು ನನಗೆ ಸಮಯವಾದರೂ ದೊರೆಯುತ್ತಿತ್ತು..ಹೀಗೆ ಏನೂ ಹೇಳದೆ ದಿವ್ಯ ನಿರ್ಲಕ್ಷ್ಯದಿಂದಿದ್ದುಬಿಡುವುದು ಸರಿಯೇ? ಎಂದು ಮೇಷ್ಟ್ರ ಮೇಲೆ ವಿಪರೀತ ಸಿಟ್ಟು ಬಂದು ಬಿಟ್ಟಿತು.

ಅಂದು ಭಾನುವಾರ. ಸೋಮವಾರ ಹಾಗೂ ಮಂಗಳವಾರದಂದು ಕಲಾಕ್ಷೇತ್ರದಲ್ಲಿ ಉದ್ಭವ ನಾಟಕದ ಪ್ರಪ್ರಥಮ ಪ್ರದರ್ಶನಗಳು ಏರ್ಪಾಡಾಗಿದ್ದವು. ಭಾನುವಾರ ಕಲಾಕ್ಷೇತ್ರದ ಆವರಣದಲ್ಲೇ ಬೆಳಿಗ್ಗೆಯಿಂದಲೇ ರಿಹರ್ಸಲ್ಸ್ ಆರಂಭಿಸಿಬಿಟ್ಟಿದ್ದೆ. ಮರುದಿನವೇ ನಾಟಕ..ಹಾಡುಗಳು ಇನ್ನೂ ಸಿದ್ಧವಾಗಿಲ್ಲ! ನಮ್ಮ ಮೇಳದ ಹುಡುಗರು ನನಗೆ ಧೈರ್ಯತುಂಬಿದರು: “ಚಿಂತೆ ಮಾಡಬೇಡಿ ಸರ್…ನಾವು ಏನಾದರೂ ಒಂದು ವ್ಯವಸ್ಥೆ ಮಾಡ್ತೀವಿ..ಕಾರಂತರ ಮಟ್ಟಕ್ಕೆ ಸಂಗೀತ ಸಂಯೋಜನೆ ಮಾಡೋ ತಾಕತ್ತು ನಮಗಿಲ್ಲ ನಿಜ..ಆದರೆ ಖಂಡಿತ ನಿಮಗೆ ನಿರಾಸೆ ಮಾಡೋಲ್ಲ..ನಮ್ಮ ಬಗ್ಗೆ ನಂಬಿಕೆ—ಭರವಸೆ ಇಟ್ಟುಕೊಳ್ಳಿ”. ಅವರ ಮಾತು ಕೇಳಿ ಹೃದಯ ತುಂಬಿಬಂತು…ಎಷ್ಟೋ ಸಮಾಧಾನವಾಯಿತು. ವಾಸ್ತವವಾಗಿ ನಮ್ಮ ಮೇಳದ ಹುಡುಗರು ತುಂಬಾ ಪ್ರತಿಭಾವಂತರೇ ಆಗಿದ್ದರು. ಅವರೇನಾದರೂ ಒಂದು ವ್ಯವಸ್ಥೆ ಮಾಡಿ ನಾಟಕವನ್ನು ದಡ ಸೇರಿಸುತ್ತಾರೆಂದು ನಂಬಿಕೆ ಮೂಡಿತು.

ಬೆಳಿಗ್ಗೆ 11.30 ರ ಸಮಯ.ರಿಹರ್ಸಲ್ಸ್ ಭರದಿಂದ ಸಾಗುತ್ತಿತ್ತು. ಅಷ್ಟರಲ್ಲಿ ಕಲಾಕ್ಷೇತ್ರದ ಒಬ್ಬ ಸಿಬ್ಬಂದಿ ಬಂದು,” ಇಲ್ಲಿ ಶ್ರೀನಿವಾಸ ಪ್ರಭು ಅನ್ನೋರು ಯಾರು? ಅವರಿಗೆ ಫೋನ್ ಬಂದಿದೆ” ಎಂದ. ‘ ನನಗೆ ಯಾರಪ್ಪಾ ಫೋನ್ ಮಾಡಿದಾರೆ ‘ಎಂದು ಆಶ್ಚರ್ಯದಿಂದ ಗೊಣಗಿಕೊಂಡೇ ಹೋಗಿ ಫೋನ್ ಕೈಗೆತ್ತಿಕೊಂಡು ‘ಹಲೋ’ ಎಂದೆ. ಫೋನ್ ಮಾಡಿದ್ದವನು ಆತ್ಮೀಯ ಗೆಳೆಯ ಸುಂದರ ರಾಜ್. “ಪ್ರಭೂ, ಮೇಷ್ಟ್ರು ಬೆಂಗಳೂರಿಗೆ ಬಂದಿದಾರೆ..ಈ ತಕ್ಷಣ ಅವರ ಮನೇಗೆ ಹೋಗಬೇಕಂತೆ.. ನನಗೂ ಹೇಳಿದಾರೆ..ನಾನೂ ಬರ್ತಿದೀನಿ..ಈಗಲೇ ಹೊರಟು ಬಾ” ಎಂದು ಅವಸರವಸರವಾಗಿ ಹೇಳಿ ಸುಂದರ ಫೋನ್ ಇಟ್ಟ.

ನನ್ನ ಕಿವಿಗಳನ್ನು ನನಗೇ ನಂಬಲಾಗಲಿಲ್ಲ! ಏನಿದು ಪರಮಾಶ್ಚರ್ಯ! ಮೇಷ್ಟ್ರು ಬೆಂಗಳೂರಿಗೆ ಬಂದಿದಾರೆ! ಅಷ್ಟೇ ಅಲ್ಲ, ನನಗೆ ಅವರ ಮನೆಗೆ ಬರುವುದಕ್ಕೆ ಹೇಳಿದ್ದಾರೆ! ಬಹುಶಃ ಕ್ಯಾಸೆಟ್ ಸಿದ್ಧಪಡಿಸಿಕೊಂಡು ತಂದಿದ್ದಾರೆ! ಬಲು ಸಂಭ್ರಮ-ಖುಷಿಯಿಂದ ಆ ತಕ್ಷಣವೇ ನಮ್ಮ ಕಲಾವಿದರಿಗೆ ರಿಹರ್ಸಲ್ ಮುಂದುವರಿಸಲು ಸೂಚನೆಗಳನ್ನು ಕೊಟ್ಟು ರಿಚಿಯೊಂದಿಗೆ ಸ್ಕೂಟರ್ ನಲ್ಲಿ ಜಯನಗರ ನಂದಾ ಥಿಯೇಟರ್ ಸಮೀಪದಲ್ಲಿದ್ದ ಮೇಷ್ಟ್ರ ಮನೆಗೆ ಹೊರಟೆ. ಅಲ್ಲಿ ಹೋಗಿ ನೋಡಿದರೆ ಮೇಷ್ಟ್ರು ಹಾಲ್ ನಲ್ಲಿ ಹಾರ್ಮೋನಿಯಂ ಅನ್ನು ಮುಂದೆ ಇಟ್ಟುಕೊಂಡು ಕುಳಿತಿದ್ದಾರೆ!

ಹಾರ್ಮೋನಿಯಂ ಮೇಲೆ ನನ್ನ ಉದ್ಭವ ನಾಟಕದ ಹಸ್ತಪ್ರತಿ ಕಂಗೊಳಿಸುತ್ತಿದೆ! ಸುಂದರರಾಜ್ ಹಾಗೂ ನಾಗಾಭರಣ ಅದಾಗಲೇ ಬಂದು ಮೇಷ್ಟ್ರ ಪಕ್ಕದಲ್ಲಿ ಆಸೀನರಾಗಿದ್ದಾರೆ! ನನಗಂತೂ ಏನು ಮಾಡಲೂ ತೋಚದೆ ಏನು ಹೇಳಲೂ ಹೊಳೆಯದೆ ‘ಮೇಷ್ಟ್ರೇ’ ಎಂದು ತಡವರಿಸಿದೆ. “ಬನ್ನಿ..ಬನ್ನಿ..ನೋಡಿ..ನಿಮ್ಮ ನಾಟಕಕ್ಕೆ ಮ್ಯೂಸಿಕ್ ಮಾಡಿಕೊಡೋದಕ್ಕೆ ಅಂತ ಅಕಾಡಮಿ ಮೀಟಿಂಗ್ ಹಾಕಿಸಿಕೊಂಡು ಬಂದಿದೀನಿ!” ಎಂದು ನಕ್ಕರು ಮೇಷ್ಟ್ರು.”ಸರಿ ಸರಿ…ಶುರು ಮಾಡಿಬಿಡೋಣ…ಮೊದಲನೇ ಹಾಡು ಯಾವುದು? ಗುಳ್ಳೆಯ ನರಿಯಣ್ಣಾ ನಮ್ಮ ರಾಘಣ್ಣ” ಎಂದು ಹಾಡಿನ ಪಲ್ಲವಿಯನ್ನೊಮ್ಮೆ ಗುನುಗಿಕೊಂಡರು. ಹಾರ್ಮೋನಿಯಂ ಮನೆಗಳ ಮೇಲೆ ಅವರ ಕೈ ಬೆರಳುಗಳು ಲೀಲಾಜಾಲವಾಗಿ ಕುಣಿದಾಡತೊಡಗಿದವು.

ಒಂದಿಷ್ಟು ಹೊತ್ತು ತಮ್ಮಷ್ಟಕ್ಕೆ ತಾವೇ ಗುನುಗಿಕೊಂಡು ಒಂದಿಷ್ಟು ಪ್ರಯೋಗಗಳನ್ನು ಮಾಡಿ ಕೊನೆಗೆ ಸುಂದರ—ಭರಣರಿಗೆ ಹೇಳಿದರು:”ಈಗೊಂದು ಸಲ ನಾನು ಹಾಡ್ತೀನಿ.. ಸರಿಯಾಗಿ ಕೇಳಿಸಿಕೊಳ್ಳಿ” ಎಂದು ಹಾಡತೊಡಗಿದರು. ನನಗೂ ರಿಚಿಗೂ ಹೇಳತೀರದಷ್ಟು ಖುಷಿ! ಹಾಡಿ ಮುಗಿಸಿದ ಮೇಲೆ ಮೇಷ್ಟ್ರು ,”ಹ್ಯಾಗಿದೆ? ನಿಮಗೆ ಇಷ್ಟವಾಯಿತಾ ಟ್ಯೂನ್ ? ಹಿಡಿಸದಿದ್ದರೆ ಬೇರೆ ಮಾಡ್ತೀನಿ” ಎಂದರು. “ಅಯ್ಯಯ್ಯೋ! ಖಂಡಿತಾ ಬೇಡ ಮೇಷ್ಟ್ರೇ..ತುಂಬಾ ಚೆನ್ನಾಗಿ ಬಂದಿದೆ ಹಾಡು” ಎಂದು ನಾವೆಲ್ಲರೂ ಒಕ್ಕೊರಲಿನಿಂದ ನಮ್ಮ ಸಮ್ಮತಿ—ಮೆಚ್ಚುಗೆ ಸೂಚಿಸಿದೆವು.”ನಡುನಡುವೆ ರಾಘಣ್ಣನ ಬಗ್ಗೆ ಒಂದಷ್ಟು ಬೈಗುಳಗಳನ್ನು ಸೇರಿಸಿ ತಾಳದಲ್ಲೇ ಹೇಳಿ.. what a cunning fellow ರಾಘಣ್ಣ..ಹಲ್ಕಾ ಬಡ್ಡಿಮಗ ರಾಘಣ್ಣ…ಹೀಗೆ” ಎಂದು ಒಂದಷ್ಟು ಸಲಹೆ ನೀಡಿದರು.

ನಂತರ, “ಸರಿ, ಈಗ ಎರಡನೇ ಹಾಡು ನೋಡೋಣ” ಎಂದ ಮೇಷ್ತ್ರು ಒಮ್ಮೆ ಹಾಡನ್ನು ಓದಿಕೊಂಡರು. ಅದು ಚುನಾವಣಾ ಸಮಯದ ದೃಶ್ಯಕ್ಕೆಂದು ರಚಿತವಾಗಿದ್ದ ಹಾಡು. ಮೇಷ್ಟ್ರು ಒಂದೆರಡು ನಿಮಿಷ ಅದರ ಬಗ್ಗೆಯೇ ಧ್ಯಾನಿಸಿ ಇದ್ದಕ್ಕಿದ್ದಂತೆ ಹೇಳಿದರು: “ಒಂದು ಕೆಲಸ ಮಾಡಿ..ನೀವೆಲ್ಲರೂ ‘vote for —vote for ‘ ಅಂತ ಒಂದೇ rhythm ನಲ್ಲಿ ಹೇಳ್ತಾ ಇರಿ.. ನೋಡೋಣ ಏನಾಗುತ್ತೆ ಅಂತ.” ಸರಿ, ನಾವೆಲ್ಲರೂ ಒಂದೇ ಗತಿಯಲ್ಲಿ ‘vote for vote for’ ಎಂದು ಕೋರಸ್ ನಲ್ಲಿ ಹೇಳತೊಡಗಿದೆವು. ನೋಡನೋಡುತ್ತಿದ್ದಂತೆ ಅದೇ ತಾಳಕ್ಕೆ ‘ಇದೇ ನಮ್ಮ ಜನ್ಮ ಭೂಮಿ.. ನೀವೇ ನಮ್ಮ ದಾತರು/ನಿಮ್ಮ ಓಟಿನಿಂದ ನಾವು ನಿಮ್ಮನಾಳ್ವ ನಾಯ್ಕರು’ ಎಂಬ ಸುಶ್ರಾವ್ಯ ಗೀತೆ ಭೂಪ್ ರಾಗದಲ್ಲಿ ಸಿದ್ಧವಾಗಿಯೇ ಹೋಯಿತು!

ಉದ್ಭವ ಗಣಪತಿಯ ಸ್ತುತಿ ಗೀತೆ ಅನ್ನಬಹುದಾದ ಇನ್ನೊಂದು ಹಾಡು ಪ್ರಾರಂಭವಾಗುತ್ತಿದ್ದುದು ಹೀಗೆ: ” ಸದ್ದು ಗದ್ದಲದಿ ಸುದ್ದಿ ಮಾಡುವನಲ್ಲ/ ನಮ್ಮ ಸ್ವಾಮಿ ಉದ್ಭವಿಸಿ ಬರುತಾನೋ ಬರುತಾನೋ”…ಮೇಷ್ಟ್ರುಈ ಹಾಡಿಗೆ ಕೊಂಚ ಶಾಸ್ತ್ರೀಯ ಸಂಗೀತದ ಸ್ಪರ್ಶವನ್ನು ನೀಡಿ ತುಸು ಮಂದಗತಿಯಲ್ಲಿ ಸ್ವರ ಸಂಯೋಜನೆ ಮಾಡಿದರು. ಮಾಧುರ್ಯ ಪ್ರಧಾನವಾಗಿದ್ದ ಈ ಹಾಡಿನ ಸ್ವರ ಸಂಯೋಜನೆಯೂ ನಮ್ಮೆಲ್ಲರಿಗೂ ತುಂಬಾ ಇಷ್ಟವಾಯಿತು.” ನಮ್ಮ ಸ್ವಾಮಿ ಉದ್ಭವಿಸಿ ಬರುತಾನೋ” ಅನ್ನುವ ಭಾಗವನ್ನು ಮೇಷ್ಟ್ರು ಹಾಡಿ ತೋರಿಸಿದ ರೀತಿ ಹಾಗೂ ಅವರು ಅದನ್ನು ಅರ್ಥೈಸಿದ ಪರಿ ಅವರು ರಂಗಸಂಗೀತವನ್ನು ವ್ಯಾಖ್ಯಾನಿಸುವ ಕ್ರಮಕ್ಕೆ ಕನ್ನಡಿ ಹಿಡಿಯುವಂತಿತ್ತು. “ನಮ್ಮ ಸ್ವಾಮಿ ಉದ್ಭವಿಸಿ ಬರುತಾನೋ” ಎಂದು ಹಾಡುವಾಗ ‘ಉದ್ಭವಿಸಿ’ ಅನ್ನುವ ಶಬ್ದ ನಾಭಿಯಿಂದ ಉದ್ಭವಿಸಿ ಬರುವ ರೀತಿಯಲ್ಲಿ ಹೊರಹೊಮ್ಮಿ ಉದ್ಭವ ಪ್ರಕ್ರಿಯೆಯ ಶಾಬ್ದಿಕ ಅಭಿವ್ಯಕ್ತಿಯಂತೆ ಗೋಚರವಾಗಬೇಕು” ಎಂದು ಹೇಳುತ್ತಾ ಆ ಸಾಲನ್ನು ಹಾಡುವ ಕ್ರಮವನ್ನೂ ನಮಗೆ ಅಭ್ಯಾಸ ಮಾಡಿಸಿದರು.

ಹೀಗೆ ಒಂದೆರಡು ತಾಸಿನಲ್ಲಿ ಉದ್ಭವ ನಾಟಕದ ಎಲ್ಲಾ ಹಾಡುಗಳೂ ಕಾರಂತ ಮೇಷ್ಟ್ರ ಮಾಂತ್ರಿಕ ಸ್ಪರ್ಶದೊಂದಿಗೆ ಒಂದು ಪವಾಡದ ಹಾಗೆ ಸಿದ್ಧವಾಗಿಬಿಟ್ಟವು! ಮೇಷ್ಟ್ರುಎಲ್ಲಾ ಹಾಡುಗಳನ್ನೂ ತಾವೇ ಹಾಡಿ ತಮ್ಮದೇ ಪುಟ್ಟ ಟೇಪ್ ರೆಕಾರ್ಡರ್ ನಲ್ಲಿ ರೆಕಾರ್ಡ್ ಮಾಡಿಕೊಟ್ಟರಲ್ಲದೇ ತಮ್ಮ ಬಲಗೈ ಬಂಟರೇ ಆಗಿದ್ದ ಸುಂದರ ರಾಜ್ ಹಾಗೂ ಭರಣರಿಗೆ “ನಾಳೆ ನಾಡಿದ್ದು ನೀವೂ ಶೋನಲ್ಲಿ ಹಾಡಿ, ಮೇಳದವರಿಗೆ ಸಹಾಯ ಆಗುತ್ತೆ” ಎಂದು ಸೂಚನೆಯನ್ನೂ ನೀಡಿ ನಾಟಕ ಯಶಸ್ವಿಯಾಗಲೆಂದು ಶುಭ ಹಾರೈಸಿ ನಮ್ಮನ್ನು ಕಳಿಸಿಕೊಟ್ಟರು.

ನಮ್ಮ ಮೇಳದ ಹುಡುಗರಿಗಂತೂ ಖುಷಿಯೋ ಖುಷಿ! ಕಾರಂತರ ಸಂಗೀತ ಸಂಯೋಜನೆಯ ಹಾಡುಗಳನ್ನು ಹಾಡುವ ಸುವರ್ಣಾವಕಾಶ ದೊರೆತಿರುವುದೇನು ಸಾಧಾರಣ ಸಂಗತಿಯೇ! ಇದ್ದ ಕಡಿಮೆ ಸಮಯದಲ್ಲಿಯೇ ಸುಂದರರಾಜ್ ಹಾಗೂ ನಾಗಾಭರಣರ ಮೇಲ್ವಿಚಾರಣೆಯಲ್ಲಿ ನಮ್ಮ ಹುಡುಗರು ಹಾಡುಗಳನ್ನು ಸೊಗಸಾಗಿ ಕಲಿತುಕೊಂಡರು. ಮೇಷ್ಟ್ರಮನೆಯಿಂದ ಕಲಾಕ್ಷೇತ್ರಕ್ಕೆ ತಾಲೀಮಿಗೆ ಮರಳಿ ಬಂದ ತಕ್ಷಣ ನಾನು ಮೊಟ್ಟ ಮೊದಲು ಮಾಡಿದ ಕೆಲಸವೆಂದರೆ ಮರೆ ಮಾಡಿದ್ದ “ಸಂಗೀತ ನಿರ್ದೇಶನ—ಬಿ.ವಿ.ಕಾರಂತ” ಎಂಬ ಪೋಸ್ಟರ್ ನ ಬರಹ ಮತ್ತೆ ಕಾಣುವಂತೆ ಮಾಡಿದ್ದು. ಆದರೂ ಒಳಗೊಳಗೇ ಸಣ್ಣಗೆ ತಪ್ಪಿತಸ್ಥ ಭಾವನೆ ಕಾಡತೊಡಗಿತು: ನನಗಾಗಿ ಮೇಷ್ಟ್ರು ಇಷ್ಟು ಕಷ್ಟ ಪಟ್ಟುಕೊಂಡು ಬೆಂಗಳೂರಿಗೆ ಬಂದು ಹಾಡುಗಳಿಗೆ ಅದ್ಭುತವಾಗಿ ಸ್ವರ ಸಂಯೋಜನೆ ಮಾಡಿಕೊಟ್ಟಿದ್ದಾರೆ; ಇಂಥಾ ಮೇಷ್ಟ್ರ ಬಗ್ಗೆ ನಂಬಿಕೆ ಇಟ್ಟುಕೊಳ್ಳದೇ ಅನುಮಾನಿಸಿ ಪೋಸ್ಟರ್ ನಲ್ಲಿ ಅವರ ಹೆಸರನ್ನು ಮರೆಮಾಚಿಬಿಟ್ಟೆನಲ್ಲಾ ಎಂದು ಸಂಕಟವಾಗತೊಡಗಿತು.

ಹಿಂಸೆಯ ಸಂಕಲ್ಪ ಮಾತ್ರದಿಂದಲೇ ಪಡಬಾರದ ಪಾಡು ಪಟ್ಟ ಯಶೋಧರನ ಕಥೆಯೆಲ್ಲಾ ನೆನಪಿಗೆ ಬಂದು ಚುಚ್ಚತೊಡಗಿತು! ನನ್ನ ಬೇಗುದಿಯನ್ನು ಅರಿತ ನಳಿನಿ ಅಕ್ಕ ಹಾಗೂ ರಿಚಿ ನನಗೆಷ್ಟೆಷ್ಟೋ ಸಮಾಧಾನ ಮಾಡಲು ಯತ್ನಿಸಿದರು; “ನಿನ್ನ ಜಾಗದಲ್ಲಿ ಯಾರೇ ಇದ್ದರೂ ಇದಕ್ಕಿಂತ ಭಿನ್ನವಾಗೇನೂ ನಡೆದುಕೊಳ್ಳುತ್ತಿರಲಿಲ್ಲ.. ಕೊರಗಬೇಡ” ಎಂದೆಲ್ಲಾ ಸಮಜಾಯಿಷಿ ನೀಡಿದರು. ಆದರೂ ಆ ಗಿಲ್ಟ್ ನನ್ನಿಂದ ದೂರವಾಗಲಿಲ್ಲ. ಮುಂದಿನ ದಿನಗಳಲ್ಲಿ ನಾನು ದೆಹಲಿಗೆ ಹೋಗಿದ್ದಾಗ ಮೇಷ್ಟ್ರನ್ನು ಕಂಡು “ನಿಮ್ಮನ್ನು ಅನುಮಾನಿಸಿ ದೊಡ್ಡ ತಪ್ಪು ಮಾಡಿದ್ದೇನೆ.. ನನ್ನನ್ನು ಕ್ಷಮಿಸಿ” ಎಂದು ಕೇಳಿಕೊಂಡು, ಅವರು ನಕ್ಕು “ಪರವಾಗಿಲ್ಲ ಬಿಡಿ” ಎಂದು ನುಡಿದು ಬೆನ್ನು ತಟ್ಟಿದ ಮೇಲೇ ನನ್ನ ಮನಸ್ಸು ಹಗುರಾದದ್ದು. ಇರಲಿ..

ಕೇವಲ ಒಂದು ದಿನದಲ್ಲಿ ಹಾಡುಗಳನ್ನು ಸಿದ್ಧಪಡಿಸಿಕೊಂಡು ರಂಗದ ಮೇಲೆ ಹೋಗುತ್ತಿದ್ದೇವೆ;ಏನಾಗುತ್ತದೋ ಎಂಬೊಂದು ಸಣ್ಣ ಅಳುಕು ಕಾಡುತ್ತಿದ್ದರೂ ಉದ್ಭವ ನಾಟಕದ ಪ್ರಥಮ ಪ್ರದರ್ಶನಗಳು ಸೊಗಸಾಗಿ ಮೂಡಿಬಂದವು. ಶ್ರೀನಿವಾಸ ಮೇಷ್ಟ್ರು ರಾಘಣ್ಣನಾಗಿ ಮಿಂಚಿದರೆ ಉಳಿದೆಲ್ಲಾ ಕಲಾವಿದರೂ ತುಂಬು ಉತ್ಸಾಹದಿಂದ ಸೊಗಸಾಗಿ ಅಭಿನಯಿಸಿ ನಾಟಕದ ಪ್ರಚಂಡ ಯಶಸ್ಸಿಗೆ ಕಾರಣರಾದರು. ಕಾರಂತರ ವಿಭಿನ್ನ ಶೈಲಿಯ ಸಂಯೋಜನೆಯ ಹಾಡುಗಳೂ ಸಹಾ ಪ್ರೇಕ್ಷಕರ ಮನಸೆಳೆದು ಅವರೂ ಮೇಳದವರೊಂದಿಗೆ ಅಲ್ಲಲ್ಲಿ ದನಿ ಸೇರಿಸಿ ಸಂಭ್ರಮಿಸಿದರು.

ನಾನು ನಿರೀಕ್ಷಿಸಿದ್ದಂತೆಯೇ ಶಿಲ್ಪಿ ರಾಮಾಚಾರಿಗಳು, “ಇದು ಉದ್ಭವ ಮೂರ್ತಿಯಲ್ಲ..ನಾನು ಕೆತ್ತಿದ ಶಿಲ್ಪ” ಎಂದು ಅಲವತ್ತುಕೊಂಡರೂ ಅವರ ಕೂಗು ವ್ಯರ್ಥ ಪ್ರಲಾಪವಾಗಿಬಿಡುವ ದೃಶ್ಯ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದು ಸಾಧಾರಣ ರಾಜಕೀಯ ವಿಡಂಬನೆಯಾಗಿಬಿಡುವ ಅಪಾಯದಿಂದ ನಾಟಕವನ್ನು ಪಾರುಮಾಡಿತು ಎಂಬುದು ನನ್ನ ವೈಯಕ್ತಿಕ ನಂಬಿಕೆ. ಈ ಪಾತ್ರದಲ್ಲಿ ಪ್ರಾರಂಭದ ಪ್ರದರ್ಶನಗಳಲ್ಲಿ ಮೋಹನ ರಾವ್ ಅವರು, ನಂತರದ ಪ್ರದರ್ಶನಗಳಲ್ಲಿ ಸಾಯಿ ಪ್ರಕಾಶ್ ಅವರು ಪರಿಣಾಮಕಾರಿ ಅಭಿನಯ ನೀಡಿ ಮಿಂಚಿದರು.

ಆ ದಿನಗಳಲ್ಲಿ ‘ಉದ್ಭವ’ ನಾಟಕದ ಬಗ್ಗೆ ಬಂದ ಅನೇಕ ಪ್ರಶಂಸಾತ್ಮಕ ವಿಮರ್ಶೆಗಳಲ್ಲಿ ಒಂದೆರಡರ ಆಯ್ದ ಭಾಗಗಳನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ:

“ನಾಟ್ಯದರ್ಪಣ ತಂಡ ಪ್ರದರ್ಶಿಸಿದ ‘ಉದ್ಭವ'(ಅಕ್ಟೋಬರ್ 5, 1980) ನಾಟಕದ ಆರಂಭದಲ್ಲಿ, ಎಂಥಾ ವಸ್ತುವನ್ನೂ ಎಂಥಾ ಜನರನ್ನೂ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಕುತಂತ್ರದ ಕಲೆಯನ್ನು ಕರಗತ ಮಾಡಿಕೊಂಡ ರಾಘಣ್ಣನ ಒಬ್ಬ ಚಮಚಾ ‘ಇದು ಒಂದು ರಸ್ತೆಯ ಕಥೆ’ ಎಂದು ಪರಿಚಯ ಮಾಡಿಕೊಡುತ್ತಾನೆ. ರಸ್ತೆಯ ಕಥೆ ಬೆಳೆದಂತೆ ಸ್ವಾರ್ಥ—ಮೌಢ್ಯಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಜನರ ಕುರುಡು ದೈವಭಕ್ತಿಯನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಒಂದು ದೊಡ್ಡ ದಂಡೇ ಈ ರಸ್ತೆಯ ಇಕ್ಕಟ್ಟಿನಲ್ಲಿ ತುಂಬಿ ಹೋಗುತ್ತದೆ.
ಬಿ.ವಿ.ವೈಕುಂಠರಾಜು ಅವರ ಉದ್ಭವ ಕಾದಂಬರಿಯ ಈ ವಸ್ತುವನ್ನು ನಿರ್ದೇಶಕ ಶ್ರೀನಿವಾಸ ಪ್ರಭು ಯಶಸ್ವಿಯಾಗಿ ರಂಗಕ್ಕೆ ಅಳವಡಿಸಿಕೊಂಡಿದ್ದಾರೆ.

ರುದ್ರ ಹಾಗೂ ನಂಜುಂಡ ಪಾತ್ರಗಳು ಕಥೆಯ ನಿರೂಪಣೆಗೆ ಸಹಾಯಕರಾಗಿದ್ದಾರೆ… ಹಾಡುಗಳು ರಂಜನೆಗೆ ಒದಗಿಬಂದವು. ಅವು ಅಣಕದ ಧಾಟಿಯಲ್ಲಿದ್ದುದು ಸೂಕ್ತವಾಗಿತ್ತು. ಕಾದಂಬರಿಯನ್ನು ನಾಟಕವಾಗಿಸಿಕೊಳ್ಳುವುದರಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಪ್ರತಿಯೊಂದು ಪ್ರಕರಣದ ನಡುವಿನ ಘಟನೆಗಳನ್ನು ಕ್ಷಿಪ್ರಗತಿಯಲ್ಲಿ ನಿರೂಪಿಸುವುದಕ್ಕೆ ಗುಂಪನ್ನು ಬಳಸಿಕೊಳ್ಳುವ ಕ್ರಮ. ಉದ್ದಕ್ಕೂ ಈ ಗುಂಪಿನ ದಕ್ಷ ಬಳಕೆಯಿಂದಾಗಿ ಒಂದು ಬಗೆಯ ವ್ಯಂಗ್ಯ, ರಾಜಕೀಯ ಅಣಕ, ನವುರಾದ ಹಾಸ್ಯಗಳೆಲ್ಲವನ್ನೂ ಮೂಡಿಸುವುದು ಸಾಧ್ಯವಾಯಿತು.”(ಪ್ರಜಾವಾಣಿ)

ಬೆಳಗಾವಿ ನಾಟಕೋತ್ಸವದಲ್ಲಿ ‘ಉದ್ಭವ’ ಪ್ರದರ್ಶನಗೊಂಡಾಗ ಬಂದ ವಿಮರ್ಶೆಯ ಭಾಗಗಳು:

“ಬೆಂಗಳೂರಿನ ನಾಟ್ಯದರ್ಪಣ ತಂಡ ಅಭಿನಯಿಸಿದ ‘ಉದ್ಭವ’ ನಾಟಕ ಇಡೀ ನಾಟಕೋತ್ಸವದಲ್ಲೇ ಅತ್ಯಂತ ಯಶಸ್ವೀ ಪ್ರದರ್ಶನವಾಗಿತ್ತು…ತಾಪತ್ರಯಗಳಿಂದ ಬಳಲುತ್ತಿದ್ದ ಬುದ್ಧಿವಂತನೊಬ್ಬ ನಗರದ ಕಿರಿದಾದ ರಸ್ತೆಯೊಂದನ್ನು ವಿಸ್ತರಿಸುವ ಹಂಚಿಕೆ ಹೂಡಿ ಅದರಿಂದ ಸ್ಥಾನಮಾನ ಪ್ರತಿಷ್ಠೆ ಗಳಿಸುವ ವಸ್ತುವಿರುವ ನಾಟಕ ನಾನಾಬಗೆಯ ತಂತ್ರ ಪ್ರತಿತಂತ್ರಗಳ ವ್ಯವಸ್ಥಿತ ಲೆಕ್ಕಾಚಾರದಲ್ಲಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿತ್ತು. ಗಣೇಶನ ಮೂರ್ತಿಯ ಉದ್ಭವ, ಚುನಾವಣೆಯ ಅಬ್ಬರ, ತಿರುಮಂತ್ರ ಪ್ರಕರಣ ಮೊದಲಾದುವೆಲ್ಲಾ ಸಂಗೀತ—ಹಾಡುಗಳ (ಬಿ.ವಿ.ಕಾರಂತ/ಎಂ.ಎನ್.ವ್ಯಾಸರಾವ್) ಸುಸಂಬದ್ಧ ಸಂಯೋಜನೆಯಿಂದ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ಮಾಡಿದವು. ಶ್ರೀನಿವಾಸ ಮೇಷ್ಟ್ರು, ರಿಚರ್ಡ್ ಜಿ ಲೂಯಿಸ್, ಎಲ್.ಎಸ್.ಸುಧೀಂದ್ರ ಒಳ್ಳೆಯ ಅಭಿನಯದಿಂದ ಪ್ರದರ್ಶನಕ್ಕೆ ಮೆರುಗು ನೀಡಿದರು.” (ಲಕ್ಷ್ಮಣ ಕೊಡಸೆ—ಪ್ರಜಾವಾಣಿಯಲ್ಲಿ).

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

March 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: