ಶ್ರೀನಿವಾಸ ಪ್ರಭು ಅಂಕಣ – ನಾನು ನೋಡಿದ ಮೊಟ್ಟಮೊದಲ ಸಿನೆಮಾ ಶೂಟಿಂಗ್…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

26

1973 ನಾನಾಗ ಜ್ಯೂನಿಯರ್ ಎಂ ಎ ವಿದ್ಯಾರ್ಥಿ. ಕಣಗಾಲ್ ಪುರುಷೋತ್ತಮ ಆಗ ನನ್ನ ಸಹಪಾಠಿ. ಈ ಪುರುಷೋತ್ತಮ, ಅದ್ವಿತೀಯ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ಸುಪುತ್ರ. ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಇವನಿಗೆ ಚಿಕ್ಕಪ್ಪನಾಗಬೇಕು. ಕಣಗಾಲ್ ಕುಟುಂಬದ ಕುಡಿ ನನ್ನ ಸಹಪಾಠಿ ಅನ್ನುವುದೇ ಆಗ ನನಗೆ ಒಂದು ಹೆಮ್ಮೆಯ ಸಂಗತಿಯಾಗಿತ್ತು. ನನ್ನ ಸಿನೆಮಾ ಹುಚ್ಚಿನ ಅರಿವಿದ್ದ ಪುರುಷೋತ್ತಮ ಒಂದು ದಿನ ಕೇಳಿದ: ‘ಅಪ್ಪ ‘ಭಲೇ ಭಟ್ಟ’ ಅನ್ನೋ ಒಂದು ಹಾಸ್ಯಪ್ರಧಾನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಒಂದು ಹಾಡಿನ ಶೂಟಿಂಗ್ ನಡೀತಿದೆ. ಶೂಟಿಂಗ್ ನೋಡೋದಕ್ಕೆ ಆಸಕ್ತಿ ಇದ್ದರೆ ಹೇಳು. ಕರಕೊಂಡು ಹೋಗ್ತೀನಿ.’

ಅನಾಯಾಸವಾಗಿ ಒದಗಿದ ಇಂಥ ಅಪೂರ್ವ ಅವಕಾಶವನ್ನು ಕೈಚೆಲ್ಲುವುದಾದರೂ ಉಂಟೇ! ಆ ತಕ್ಷಣವೇ ಅವನೊಟ್ಟಿಗೆ ಶೂಟಿಂಗ್ ನೋಡಲು ಮತ್ತೊಬ್ಬ ಸಹಪಾಠಿ ಕೇಶವ ಪ್ರಸನ್ನನೊಂದಿಗೆ ಹೊರಟೇಬಿಟ್ಟೆ. ಆಗೆಲ್ಲಾ ಸ್ಟುಡಿಯೋದಲ್ಲಿ ಶೂಟಿಂಗ್ ನೋಡಲು ಪಾಸ್ ತೆಗೆದುಕೊಳ್ಳಬೇಕಾದ ಅಗತ್ಯವಿತ್ತು. ಪಾಸ್ ವ್ಯವಸ್ಥೆ ಮಾಡಿಕೊಂಡು ಪುರೋಷೋತ್ತಮ ನಮ್ಮನ್ನು ಶೂಟಿಂಗ್ ನಡೆಯುತ್ತಿದ್ದ ಫ್ಲೋರ್ ಗೆ ಕರೆದುಕೊಂಡು ಹೋದ. ಅದು ನಾನು ನೋಡಿದ ಮೊಟ್ಟಮೊದಲ ಸಿನೆಮಾ ಶೂಟಿಂಗ್.

ಪ್ರಭಾಕರ ಶಾಸ್ತ್ರಿಗಳು ದೃಶ್ಯ ಸಂಯೋಜನೆಯ ಕುರಿತಾಗಿ ಛಾಯಾಗ್ರಾಹಕರೊಂದಿಗೆ ಚರ್ಚಿಸುತ್ತಿದ್ದರು. ಸುತ್ತ ಒಮ್ಮೆ ಕಣ್ಣು ಹಾಯಿಸಿದೆ… ದೊಡ್ಡ ಸ್ಟುಡಿಯೋದ ಒಂದು ಭಾಗದಲ್ಲಿ ವಿಶಾಲ ಪ್ರಾಂಗಣದ ಸೆಟ್ ಹಾಕಲಾಗಿತ್ತು. ದೈತ್ಯಾಕಾರದ ಲೈಟ್ ಗಳು… ಏನೇನೋ ವಸ್ತು ವಿಶೇಷಗಳು… 30-40 ಜನ ತಮ್ಮತಮ್ಮದೇ ಕೆಲಸಗಳಲ್ಲಿ ಮಗ್ನರಾಗಿಹೋಗಿದ್ದರು. ಒಂದಷ್ಟು ಹೊತ್ತಿನ ಪೂರ್ವಸಿದ್ಧತೆಗಳ ತರುವಾಯ ಶೂಟಿಂಗ್ ಆರಂಭವಾಯಿತು. ಆ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದವರು ಒಬ್ಬ ನರ್ತಕಿ, ಕೆಲ ಸಹ ಕಲಾವಿದರು ಹಾಗೂ ಮುಸುರಿ ಕೃಷ್ಣಮೂರ್ತಿಯವರು. ಹತ್ತಾರು ಬಾರಿ ಅಭ್ಯಾಸದ ನಂತರ, ‘ಆಯ್ತು.. ಟೇಕ್ ಮಾಡೋಣ’ ಎಂದರು ನಿರ್ದೇಶಕರು.

ಮೂರು ನಾಲ್ಕು ಬಾರಿ ‘action’, ‘cut’ ಗಳಾದರೂ ನಿರ್ದೇಶಕರಿಗೆ ಸಮಾಧಾನವಾಗದೆ ಅವರು ಕೊಂಚ ಸಿಡಿಮಿಡಿಗೊಳ್ಳತೊಡಗಿದರು. ‘ಹೀಗೆ ತುಂಬಾ ಸಲ take ಗಳಾದರೆ ತುಂಬಾ ಬೆಲೆ ಬಾಳೋ film ದಂಡ ಆಗುತ್ತಲ್ಲಾ, ಅದಕ್ಕೇ ಅಪ್ಪ ಬೇಜಾರು ಮಾಡಿಕೋತಿದಾರೆ’ ಎಂದು ಪುರುಷೋತ್ತಮ ನನ್ನ ಕಿವಿಯಲ್ಲಿ ಉಸುರಿದ. ಕೊನೆಗೊಮ್ಮೆಕೇವಲ 40 ಸೆಕೆಂಡ್ ಗಳ ಆ ಚಿತ್ರಿಕೆಯ ಶಾಟ್ ಸಮರ್ಪಕವಾಗಿ ಮೂಡಿ ನಿರ್ದೇಶಕರು ಜೋರಾಗಿ ಖುಷಿಯಿಂದ, ‘ಶಾಟ್ ಓ ಕೆ’ ಎಂದು ಕೂಗಿದರು.

ಮತ್ತೆ ಮುಂದಿನ ಚಿತ್ರಿಕೆಗೆ ತಯಾರಿ ಆರಂಭವಾಯಿತು… ಯಾಕೋ ಇದು ಬಹಳ ನಿಧಾನದ, ಸಾವಧಾನದ ಕೆಲಸ ಅನ್ನಿಸಿ ಬೇಸರವಾಗತೊಡಗಿ ಶಾಸ್ತ್ರಿಗಳಿಗೆ ನಮಸ್ಕರಿಸಿ ಅಲ್ಲಿಂದ ಹೊರಟುಬಿಟ್ಟೆವು. ಏನೇ ಆದರೂ ನಾಟಕವೇ ಹೆಚ್ಚು ಖುಷಿ ನೀಡುವ ಮಾಧ್ಯಮ ಎಂದು ತೀವ್ರವಾಗಿ ಅನ್ನಿಸತೊಡಗಿದ್ದು ಮಾತ್ರ ಸತ್ಯ. ಮರುದಿನ ಪುರುಷೋತ್ತಮನೊಂದಿಗೂ ಈ ಕುರಿತು ಚರ್ಚೆ ಮಾಡಿದೆ. ಅವನು ನಕ್ಕು ಹೇಳಿದ: ‘ಸಿನೆಮಾದಲ್ಲಿ ಪೂರ್ತಿಯಾಗಿ ತೊಡಗಿಕೊಂಡಾಗ ಮಾತ್ರ ಆ ಮಾಧ್ಯಮದ ಶಕ್ತಿ-ಸಾಧ್ಯತೆಗಳು ಅರ್ಥವಾಗೋದಕ್ಕೆ ಸಾಧ್ಯ.’ ಅವನ ಮಾತಿನಲ್ಲೂ ಸತ್ಯಾಂಶವಿದೆ, ಒಂದು ಚಿಕ್ಕ ಅನುಭವದಿಂದ ಏನನ್ನು ತಾನೇ ತೀರ್ಮಾನಿಸಲು ಸಾಧ್ಯ ಅನ್ನಿಸಿ ಸುಮ್ಮನಾದೆ.

ಇಷ್ಟೆಲ್ಲಾ ನೆನಪುಗಳು ನುಗ್ಗಿ ಬಂದದ್ದು ರಂಗಾ ಅವರು ‘ಬರುವ ವಾರ ಶೂಟಿಂಗ್ ಗೆ ಹೊರಡಲು ಸಿದ್ಧತೆ ಮಾಡಿಕೊಳ್ಳಿ’ ಎಂದು ಹೇಳಿದಾಗ!

‘ಗೀಜಗನ ಗೂಡು’ ಚಿತ್ರದ ಬಹುತೇಕ ಚಿತ್ರೀಕರಣ ನಡೆದದ್ದು ಹೆಗ್ಗಡದೇವನ ಕೋಟೆಯ ಸಮೀಪದ ಕಾರಾಪುರ ಅರಣ್ಯ ಪ್ರದೇಶದಲ್ಲಿ. ಅಲ್ಲಿಯೇ ಇದ್ದ ಗೆಸ್ಟ್ ಹೌಸ್ ನಲ್ಲಿ ಎಲ್ಲರ ವಾಸ್ತವ್ಯ. ಕಾಡಿನಲ್ಲಿ ಊಟ ತಿಂಡಿಗಳ ಸಮಸ್ಯೆ ಎದುರಾಗದಂತೆ ನಿರ್ಮಾಪಕ ಚಿದಂಬರಂ ಅವರು ಅಡುಗೆಯವರನ್ನೇ ನೇಮಿಸಿಬಿಟ್ಟಿದ್ದರು. ಮೈಸೂರಿನ ಆರತಿ ಮುದ್ದಯ್ಯ ನಾಯಕಿಯಾಗಿ ನಟಿಸುತ್ತಿದ್ದರೆ ಎಂ ಕೆ ಶಂಕರ್ (‘ತಾಯಿ’ ನಾಟಕದ ಪೊವೆಲ್) ನಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದ. ಆ ವೇಳೆಗಾಗಲೇ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ದೊಡ್ಡ ಹೆಸರುಗಳಾಗಿದ್ದ ಹೆಚ್. ಜಿ. ಸೋಮಶೇಖರ ರಾವ್ ಅಲಿಯಾಸ್ ಸೋಮಣ್ಣ, ಸುಂದರ ರಾಜ್, ರಮೇಶ್ ಭಟ್, ಶೋಭಾ ರಾಘವೇಂದ್ರ, ಕೋಕಿಲಾ ಮೋಹನ್, ಎನ್ ಕೆ ರಾಮಕೃಷ್ಣ… ಜೊತೆಗೆ ಹಂಜು ಇಮಾಂ, ಬಿಜಾಪುರದ ರಂಗಭೂಮಿ ಕಲಾವಿದ ಅಶೋಕ ಬಾದರದಿನ್ನಿ ಮತ್ತು ನಾನು-ತಾರಾಗಣದಲ್ಲಿದ್ದ ಇತರ ಕಲಾವಿದರು. ಎಸ್. ರಾಮಚಂದ್ರ ಅವರು ಛಾಯಾಗ್ರಾಹಕರಾಗಿದ್ದರು.

ಕಾರಾಪುರದ ಕಾಡಿನಲ್ಲಿ ಕಳೆದ ಅದೊಂದು ತಿಂಗಳು ನನ್ನ ಪಾಲಿಗೆ ಅವಿಸ್ಮರಣೀಯ ಅನುಭವದ ಖಜಾನೆಯನ್ನೇ ದೊರಕಿಸಿಕೊಟ್ಟಿತೆಂದರೆ ಅತಿಶಯೋಕ್ತಿಯಲ್ಲ. ಬಲುಬೇಗ ತಂಡದವರೊಂದಿಗೆ ಹೊಂದಿಕೊಂಡು ನಾನೂ ಅವರಲ್ಲೊಬ್ಬನಾಗಿ ಹೋದೆ. ಅಲ್ಲಿಯೇ ಸಿನೆಮಾ ಕ್ಯಾಮರಾವನ್ನು ನಾನು ಅಷ್ಟು ಸನಿಹದಿಂದ ನೋಡಿದ್ದು, ಕ್ಲೋಸ್ ಅಪ್, ಲಾಂಗ್ ಶಾಟ್, ಟ್ರಾಲಿ ಟ್ರ್ಯಾಕ್, ಲೈನ್ ಕ್ರಾಸ್ ಇತ್ಯಾದಿ ಶಬ್ದಗಳನ್ನು ಕೇಳಿ ಅರ್ಥ ಮಾಡಿಕೊಂಡಿದ್ದು, ಸಿನೆಮಾ ವ್ಯಾಕರಣದ ಪ್ರಾಥಮಿಕ ಪಾಠಗಳನ್ನು ಕಲಿತದ್ದು. ‘ಈ ವ್ಯಾಕರಣದ ಜಂಜಾಟ-ಕಸರತ್ತುಗಳನ್ನು ಮೀರಿ ಒಬ್ಬ ನಿರ್ದೇಶಕ ಪ್ರೇಕ್ಷಕನಿಗೆ ಮರೆಯಲಾಗದ ಅನುಭವ ಕಟ್ಟಿಕೊಡುವಂತಹ ಚಿತ್ರ ಮಾಡುವುದೇ ದೊಡ್ಡ ಸವಾಲು’ ಎಂದು ರಂಗಾ ಹೇಳುತ್ತಿದ್ದರು. ಚಿತ್ರೀಕರಣಕ್ಕೆ ಆಗಾಗ್ಗೆ ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಬಂದು ಸ್ವಲ್ಪ ಸಮಯ ನಮ್ಮೆಲ್ಲರೊಟ್ಟಿಗೆ ಕಳೆದು ಹೋಗುತ್ತಿದ್ದರು. ಆಗೆಲ್ಲಾ ಸಿನೆಮಾ-ಸಾಹಿತ್ಯಗಳನ್ನು ಕುರಿತು ನಡೆಯುತ್ತಿದ್ದ ಚರ್ಚೆ ಅನೇಕ ಹೊಸ ಹೊಳಹುಗಳನ್ನು ನನಗೆ ನೀಡುತ್ತಿತ್ತು.

‘ಗೀಜಗನ ಗೂಡು’ ಚಿತ್ರದ ಕಥೆಯೂ ತುಂಬಾ ವಿಶಿಷ್ಟವಾದುದೇ. ಗೀಜಗನ ಹಕ್ಕಿಯ ಸುತ್ತ ಹಬ್ಬಿರುವ ಕಥೆಗಳೂ ತುಂಬಾ ಸ್ವಾರಸ್ಯಕರ. ಗೀಜಗನ ಹಕ್ಕಿ ಮೊಟ್ಟೆ ಇಡುವ ಮೊದಲು ಸುಂದರವಾದ ಗೂಡನ್ನು ಸಿದ್ಧ ಪಡಿಸಿಕೊಂಡು ಮಣ್ಣನ್ನು ತಂದು ಗೂಡಿನೊಳಗಿನ ತಳಭಾಗಕ್ಕೆ ಮೆತ್ತುತ್ತದಂತೆ. ನಂತರ ಮೊಟ್ಟೆ ಒಡೆದು ಮರಿಗಳು ಹೊರಬರುವ ಸಂದರ್ಭದಲ್ಲಿ ಬೆಳಕಿರಲೆಂದು ಮಿಣುಕು ಹುಳಗಳನ್ನು ತಂದು ಆ ಮಣ್ಣಿನಲ್ಲಿ ಸಿಕ್ಕಿಸುತ್ತದಂತೆ! ಅಕಸ್ಮಾತ್ ಗಾಳಿಗೆ ಗೂಡು ಬಿದ್ದುಹೋದರೆ ಅಥವಾ ಯಾರಾದರೂ ಗೂಡನ್ನು ಮುಟ್ಟಿಬಿಟ್ಟರೆ ಆ ಗೂಡನ್ನೇ ತ್ಯಜಿಸಿ ಹೋಗಿ ಹೊಸ ಗೂಡನ್ನು ಕಟ್ಟಿಕೊಳ್ಳುತ್ತದಂತೆ. ಈ ಗೂಡಿನ ವಿಚಾರವನ್ನೇ ಪ್ರತಿಮಾತ್ಮಕವಾಗಿ ಬಳಸಿಕೊಂಡು, ಬೇರೆ ಬೇರೆ ವರ್ಗ-ಸ್ತರಗಳ ಗಂಡು-ಹೆಣ್ಣಿನ ನಡುವಣ ಸಂಬಂಧದ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದರು ನಿರ್ದೇಶಕ ರಂಗಾ.

ಕಾಡಿನ ಮೂಲೆ ಮೂಲೆಗಳಲ್ಲಿ ಸಂಚರಿಸಿ ಚಿತ್ರೀಕರಣ ಮಾಡಿದ್ದು, ಅಲ್ಲೇ ಇದ್ದ ಕಾಡುಜನರ ಹಾಡಿಗೇ ಹೋಗಿ ಅವರೊಟ್ಟಿಗೇ ಚಿತ್ರೀಕರಣ ಮಾಡಿದ್ದು, ಚಿತ್ರೀಕರಣದ ನಡುವೆಯೇ ಎಷ್ಟೋ ಬಾರಿ ಕಾಡುಪ್ರಾಣಿಗಳು ನಮ್ಮ ನಡುವಿನಿಂದಲೇ ಮಿಂಚಿನ ವೇಗದಲ್ಲಿ ಸರ್ರೆಂದು ಹಾರಿ ತೂರಿ ಮಾಯವಾಗುತ್ತಿದ್ದುದು, ಸಣ್ಣ ಭಯದ ಜತೆಗೇ ರೋಮಾಂಚವುಂಟುಮಾಡುತ್ತಿದ್ದ ಆನೆ ಸವಾರಿಯ ದೃಶ್ಯಗಳು… ಒಂದೊಂದೂ ಪದೇ ಪದೇ ಮೆಲುಕು ಹಾಕುವಂತಹ ಅಪರೂಪದ ಅನುಭವಗಳು. ಯಾವುದೇ ತರತಮ ಭಾವವಿಲ್ಲದೇ ಎಲ್ಲರೂ ಒಟ್ಟಿಗೆ ಸಾಲಾಗಿ ನೆಲದ ಮೇಲೆ ಕುಳಿತು ಹರಟುತ್ತಾ, ತಮಾಷೆ ಮಾಡುತ್ತಾ, ನಗುತ್ತಾ ಬಾಳೆಎಲೆಯಲ್ಲಿ ಊಟ ಮಾಡುತ್ತಿದ್ದುದು, ಸಂಜೆ ಶೂಟಿಂಗ್ ಮುಗಿದ ಮೇಲೆ ಮತ್ತೆ ಒಟ್ಟಾಗಿ ಕುಳಿತು ಅಂದಿನ ಶೂಟಿಂಗ್ ಅನುಭವಗಳನ್ನು ಮೆಲುಕುಹಾಕುತ್ತಾ ಒಂದಷ್ಟು ನಾಟಕದ ಹಾಡುಗಳನ್ನು ಹೇಳುತ್ತಾ ವಿಶ್ರಮಿಸುತ್ತಿದ್ದುದು… ಇವೆಲ್ಲಾ ಇತ್ತೀಚಿನ ದಿನಗಳಲ್ಲಿ ಮಾಯವೇ ಆಗಿ ಹೋಗಿರುವಂತಹ ಸಂಗತಿಗಳು.

ಒಂದು ಪ್ರಸಂಗವನ್ನಂತೂ ಇಲ್ಲಿ ನೆನೆಸಿಕೊಳ್ಳಲೇಬೇಕು: ಒಂದು ರಾತ್ರಿಯ ದೃಶ್ಯದ ಚಿತ್ರೀಕರಣಕ್ಕೆ ತುಸು ದೂರದಲ್ಲಿದ್ದ ಹಾಡಿಗೆ ಹೋಗಬೇಕಿತ್ತು. ನಾವೆಲ್ಲರೂ ನಮಗಾಗಿಯೇ ಇದ್ದ ವ್ಯಾನ್ ನಲ್ಲಿ ಹಾಡಿಗೆ ಹೊರಟೆವು. ಕಾರಾಪುರಕ್ಕೆ ತನ್ನ ಬೈಕ್ ನಲ್ಲಿಯೇ ಬಂದಿದ್ದ ನಮ್ಮ ಮೇಕಪ್ ಕಲಾವಿದ ರಾಮಕೃಷ್ಣ ಅಂದು ಬೈಕ್ ನಲ್ಲಿಯೇ ಹಾಡಿಗೂ ಹೊರಟ. ಆನೆಗಳು ಎದುರಾಗುವ ಎಲ್ಲಾ ಸಾಧ್ಯತೆಗಳಿವೆಯೆಂದು ಯಾರು ಎಷ್ಟು ಹೇಳಿದರೂ ಕೇಳದ ರಾಮಣ್ಣ ತನ್ನಂತೆಯೇ ಸಾಹಸಪ್ರಿಯರಾಗಿದ್ದ ಸೋಮಣ್ಣ ಅವರನ್ನೂ ಜತೆಗೆ ಕರೆದುಕೊಂಡು ಬೈಕ್ ನಲ್ಲಿ ಹೊರಟೇಬಿಟ್ಟ! ಹಾಡಿ ಇನ್ನೂ ಸಾಕಷ್ಟು ದೂರ ಇದೆ ಅನ್ನುವಾಗಲೇ ಒಂದು ಒಂಟಿ ಸಲಗ ಇವರಿಗೆದುರಾಗಬೇಕೇ! ಅದರಿಂದ ತಪ್ಪಿಸಿಕೊಂಡು ಮರಗಳ ನಡುವೆ ಸಂದಿಗೊಂದಿಗಳಲ್ಲಿ ಬೈಕ್ ನುಗ್ಗಿಸಿಕೊಂಡು ಬರುತ್ತಿದ್ದರೆ ಆನೆ ಹಿಂಬಾಲಿಸುತ್ತಲೇ ಬರುತ್ತಿದೆ…

ಹಿಂದೆ ಕೂತಿದ್ದ ಸೋಮಣ್ಣನಿಗಂತೂ ಹೃದಯವೇ ಬಾಯಿಗೆ ಬಂದಂತಾಗಿ ಹೋಗಿತ್ತು! ಮಧ್ಯೆ ಮಧ್ಯೆ ನಿಂತು ಹೋಗುತ್ತಿದ್ದ ಯಮಭಾರದ ಬೈಕ್ ಅನ್ನು ಒಮ್ಮೊಮ್ಮೆ ತಳ್ಳುತ್ತಾ, ಅದು ಸ್ಟಾರ್ಟ್ ಆದಾಗ ಓಡಿಸುತ್ತಾ, ಆನೆಯ ಕಣ್ಣಿಗೆ ಬೀಳದಂತೆ ಮರೆಯಾಗುತ್ತಾ ಹರಸಾಹಸ ಮಾಡಿ ಹಾಡಿ ತಲುಪವಷ್ಟರಲ್ಲಿ ಇಬ್ಬರಿಗೂ ಮತ್ತೆ ಹೊಸ ಬದುಕಿಗೇ ಬಂದಂತಾಗಿತ್ತು. ಆ ಗಾಬರಿಯ ಪರಿಣಾಮವಾಗಿ ಎರಡು ದಿನ ಸೋಮಣ್ಣನ ಗಂಟಲೇ ಹೂತುಹೋಗಿ ಸ್ವರವೇ ಹೊರಡುತ್ತಿರಲಿಲ್ಲ. ‘ಏನು ಸೋಮಣ್ಣಾ, ಅಷ್ಟು ಮಾತಾಡ್ತಿದ್ರಿ.. ಆನೆ ಹಾವಳೀಗೆ ಈಗ ಮಾತೇ ನಿಂತು ಹೋಗಿದೆಯಲ್ಲಾ!’ ಎಂದು ರಂಗಾ ತಮಾಷೆ ಮಾಡಿದ್ದಕ್ಕೆ ಸೋಮಣ್ಣ ಪೆನ್ನು ಪೇಪರ್ ತೆಗೆದುಕೊಂಡು ಹೀಗೆ ಬರೆದರು: ‘ಸಧ್ಯ.. ನಿಂತುಹೋಗಿರೋದು ಬರೀ ಮಾತು.. ಉಸಿರಲ್ಲ! ಸಂತೋಷ ಪಟ್ಟುಕೋ.. ಆನೆ ದಾಳೀಗೆ ಒಂದುವೇಳೆ ನನ್ನ ಉಸಿರೇ ನಿಂತುಹೋಗಿದ್ರೆ ನಿನ್ನ ಗತಿ ಏನಾಗ್ತಿತ್ತಯ್ಯಾ ಡೈರೆಕ್ಟ್ರೇ!!’ ಸಧ್ಯ.. ಏನೂ ಅನಾಹುತವಾಗಲಿಲ್ಲವಲ್ಲಾ ಎಂಬ ಸಮಾಧಾನದ ನಿಟ್ಟುಸಿರಿನೊಂದಿಗೆ ನೆಮ್ಮದಿಯಾಗಿ ಶೂಟಿಂಗ್ ಮುಂದುವರಿಸಿದೆವು.

ಇದಾದ ಕೆಲವು ದಿನಗಳಿಗೇ ಬೆಂಗಳೂರಿನಿಂದ ವರ್ತಮಾನ ಬಂತು: NSD ಗೆ ಓದಲು ಹೋಗಲು ಮೂರು ರಂಗಕರ್ಮಿಗಳನ್ನು ಆರಿಸಲು ಸಂದರ್ಶನ ನಿಗದಿಯಾಗಿ ಕರೆ ಬಂದಿದೆ! ಖುಷಿಯಿಂದ ರಂಗಾ ಅವರ ಬಳಿ ಹೋಗಿ ಹೇಳಿದೆ: ‘ಇನ್ನು ಎರಡು ದಿನಕ್ಕೆ ಸಂದರ್ಶನ ಇದೆ. ನಾಳೆ ಹೋಗಿ ಸಂದರ್ಶನ ಮುಗಿಸಿಕೊಂಡು ಮರುದಿನವೇ ಬಂದುಬಿಡುತ್ತೇನೆ.’ ‘ಅರೆ! ನಮ್ಮ ಅಶೋಕ ಬಾದರದಿನ್ನೀಗೂ ಸಂದರ್ಶನಕ್ಕೆ ಕರೆ ಬಂದಿದೆ ಕಣ್ರೀ! ಅವನೂ ನಾಳೆ ಹೊರಡ್ತಿದಾನೆ’ ಎಂದು ರಂಗಾ ಹೇಳಿದಾಗ ನನ್ನ ಆಶ್ಚರ್ಯಕ್ಕೆ ಪಾರವೇ ಇಲ್ಲ! ಅಷ್ಟು ದಿನದಿಂದ ಒಟ್ಟಿಗೇ ಕೆಲಸ ಮಾಡುತ್ತಿದ್ದರೂ ಈ ವಿಚಾರ ಪರಸ್ಪರರ ಅರಿವಿಗೇ ಬಂದಿರಲಿಲ್ಲ! ಅಶೋಕ ಅವನದೇ ಪಕ್ಕಾ ಬಿಜಾಪುರೀ ಶೈಲಿಯಲ್ಲಿ ಹೇಳಿದ: ‘ಹೋಗಾ ಇವನವ್ವನ.. ಏ ಮಗನಾ.. ದುಷ್ಮನ್ ಎಲ್ಲವನೆ ಅಂದ್ರೆ ಬಗಲಾಗೇ ಕುಂತಿಯಲ್ಲೋ!ಇಲ್ಲೋಡು.. ಇಬ್ಬರದೂ selection ಆತೋ ಪಾಡು.. ನಿಂದೊಬ್ಬಂದೇ ಆತಂದ್ರ ಖರೇನ ಮರ್ಡರ್ ಆಕ್ಕತ್ತಿ..’ ಮನಸಾರೆ ನಕ್ಕು ಇಬ್ಬರೂ ಸಂಭ್ರಮದಿಂದ ಊರಿಗೆ ಹೊರಡಲು ತಯಾರಾದೆವು.

ಗೀಜಗನ ಗೂಡು ತಂಡದ ಎಲ್ಲಾ ಗೆಳೆಯರೂ ನಮ್ಮಿಬ್ಬರಿಗೂ ಶುಭವನ್ನು ಹಾರೈಸಿ ಬೀಳ್ಕೊಟ್ಟರು. ನಮ್ಮ ನಿರ್ಮಾಪಕರು ಮೈಸೂರಿನ ತನಕ ಕಾರ್ ನಲ್ಲಿ ಕಳಿಸಿಕೊಟ್ಟರು. ಅಲ್ಲಿಂದ ಮುಂದೆ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣ. ದಾರಿಯುದ್ದಕ್ಕೂ ನಮ್ಮಿಬ್ಬರಿಗೂ ರಂಗಭೂಮಿಯದೇ ಕನವರಿಕೆ. ಕಂಡ—ಹಂಚಿಕೊಂಡ ಕನಸುಗಳಿಗೆ ಲೆಕ್ಕವೇ ಇಲ್ಲ. ಇಬ್ಬರ ಆಯ್ಕೆಯೂ ಆಗಿಯೇ ಹೋಗಿದೆ ಎಂಬಂತೆ ದೆಹಲಿಯ ಬದುಕಿನ ಬಗ್ಗೆಯೂ ಹತ್ತಾರು ಯೋಜನೆಗಳನ್ನು ರೂಪಿಸಿದ್ದೇ ರೂಪಿಸಿದ್ದು!

ಬೆಂಗಳೂರಲ್ಲಿ ಅಂದು ಸಂಜೆ ಆತ್ಮೀಯ ಗೆಳೆಯ ಗೋಪಾಲಿಯ ರೂಂನಲ್ಲಿ ಜಯನಗರದ ಆಪ್ತ ಮಿತ್ರರೊಂದಿಗೆ ಗೋಷ್ಠಿ. ರಾತ್ರಿ ಎಲ್ಲರೊಟ್ಟಿಗೆ ಸರಿ ರಾತ್ರಿಯ ತನಕ ಹರಟುತ್ತಾ ಕಾಲ ಕಳೆದು ಮಲಗಿದರೆ ಖುಷಿ-ಸಂಭ್ರಮಕ್ಕೆ ನಿದ್ರೆಯಾದರೂ ಎಲ್ಲಿ ಸುಳಿದೀತು! ಹೊಸ ಜಗತ್ತಿನ ಹೊಸಿಲ ಬಳಿ ಕದ ಬಡಿಯುತ್ತಾ ನಿಂತಿದ್ದೇನೆ.. ಆ ಅನೂಹ್ಯ ಮಾಯಾಲೋಕ ಬಾಗಿಲು ತೆರೆದು ತನ್ನ ಪ್ರೀತಿಯ ತೆಕ್ಕೆಯಲ್ಲಿ ನನ್ನನ್ನು ತಬ್ಬಿ ಹಿಡಿಯುವುದೋ ಅಥವಾ.. ಈ ಹಿಂದೆ ಆದಂತೆ… ಛೆ.. ಛೆ.. ಹಾಗೆ ಋಣಾತ್ಮಕವಾಗಿ ಚಿಂತಿಸಬಾರದು ಎಂದು ನನ್ನನ್ನು ನಾನೇ ಎಚ್ಚರಿಸಿಕೊಂಡು ಭದ್ರವಾಗಿ ಕಣ್ಮುಚ್ಚಿಕೊಂಡು ಮಲಗಿಬಿಟ್ಟೆ.

ಬೆಳಿಗ್ಗೆ ಎದ್ದು ಗೆಳೆಯರ ಶುಭ ಹಾರೈಕೆಗಳನ್ನೂ ಪಡೆದುಕೊಂಡು ಮನೆಯತ್ತ ಹೊರಟೆ. ಗೋಪಾಲಿ, ‘ತಾಳು.. ನಾನು ಆ ಕಡೆಯೇ ಹೋಗಬೇಕು.. ಸ್ವಲ್ಪ ಕೆಲಸವಿದೆ.. ನಿನ್ನನ್ನು ಮನೆಯ ಹತ್ತಿರ ಬಿಟ್ಟು ನಾನು ಮುಂದೆ ಹೋಗುತ್ತೇನೆ’ ಎಂದ. ಗೋಪಾಲಿಯ ಲೂನಾ ಮೇಲೆ ನಮ್ಮಿಬ್ಬರ ಸವಾರಿ ಮನೆಯತ್ತ ಹೊರಟಿತು. ಉಮೇದಿನಲ್ಲಿ ‘ನಾನೇ drive ಮಾಡುತ್ತೇನೆ’ ಎಂದು ಗೋಪಾಲಿಯನ್ನು ಹಿಂದೆ ಕೂರಿಸಿಕೊಂಡು ಹೊರಟೆ. ನನ್ನ ಮನಸ್ಸಿನ ಉತ್ಸಾಹ-ಸಂಭ್ರಮಗಳ ಸುಳಿವು ಸಿಕ್ಕಿದೆಯೋ ಎನ್ನುವಂತೆ ಗೋಪಾಲಿಯ ಲೂನಾ ಕೂಡಾ ಗಾಳಿಯಲ್ಲಿ ಹಾರುತ್ತಿತ್ತು.

ಮುಖ್ಯ ರಸ್ತೆಯಿಂದ ಬಲಕ್ಕೆ ಹೊರಳಿ ಮತ್ತೆ ಎಡಕ್ಕೆ ತಿರುಗಿದರೆ ನಮ್ಮ ಮನೆಯ ರಸ್ತೆ.. 32ನೇ ಜಿ ಕ್ರಾಸ್. ಬಲಕ್ಕೆ ಹೊರಳಿ ಇನ್ನೇನು ಎಡಕ್ಕೆ ತಿರುಗಬೇಕು.. ಅಷ್ಟರಲ್ಲೇ ಅಲ್ಲಿದ್ದ ಮರಳ ಹಾಸಿನ ಮೇಲೆ ಹಾದ ಲೂನಾ ಸರ್ರೆಂದು ಜಾರಿ ಧರಾಶಾಯಿಯಾಯಿತು. ಅದರೊಟ್ಟಿಗೇ ನಿಯಂತ್ರಣ ಕಳೆದುಕೊಂಡ ನಾವೂ ಕೆಳಗುರುಳಿದೆವು. ನೋಡಲು ಅಂಥ ದೊಡ್ಡ ಅಪಘಾತದಂತೇನೂ ಭಾಸವಾಗುತ್ತಿರಲಿಲ್ಲ. ಆದರೆ ಬಿದ್ದ ರಭಸಕ್ಕೆ ಲೂನಾದ ಬ್ರೇಕ್ ನಿಯಂತ್ರಣದ ಕಬ್ಬಿಣದ ಹಿಡಿಕೆಯಂತಹ ಭಾಗ ನನ್ನ ಎಡತೊಡೆಯ ಭಾಗಕ್ಕೆ ಬಲವಾಗಿ ನಾಟಿಬಿಟ್ಟಿತು. ಪ್ಯಾಂಟ್ ಅನ್ನು ಭೇದಿಸಿಕೊಂಡು ಒಳನುಗ್ಗಿದ್ದ ಆ ಹಿಡಿಕೆಯ ಭಾಗ ತೊಡೆಯೊಳಹೊಕ್ಕು ಸಾಕಷ್ಟು ಘಾಸಿಯನ್ನೇ ಉಂಟುಮಾಡಿತ್ತು. ಆ ರಸ್ತೆಯ ಮಗ್ಗುಲಿಗೇ ಡಾ. ನಾಗರಾಜಾರಾವ್ ಅವರ ಮನೆ ಇತ್ತು.

ನಾನು, ದಿಕ್ಕು ತಪ್ಪಿದವನಂತೆ ನಿಂತಿದ್ದ ಗೋಪಾಲಿಗೆ ಸಮಾಧಾನ ಹೇಳಿ ಅವನನ್ನು ಅವನ ಕೆಲಸಕ್ಕೆ ಕಳಿಸಿ ಕುಂಟುತ್ತಾ ಡಾಕ್ಟ್ರ ಮನೆಗೆ ಹೋದೆ. ನನ್ನ ಅದೃಷ್ಟಕ್ಕೆ ಡಾಕ್ಟ್ರು ಇನ್ನೂ ಆಸ್ಪತ್ರೆಗೆ ಹೊರಟಿರಲಿಲ್ಲ. ನನಗಾಗಿದ್ದ ಗಾಯವನ್ನು ತಪಾಸಣೆ ಮಾಡಿದ ಡಾಕ್ಟ್ರು, ‘ಪೆಟ್ಟು ಆಳವಾಗಿ ಆಗಿದೆ.. ಐದಾರು ಹೊಲಿಗೆ ಹಾಕಬೇಕಾಗುತ್ತೆ…’ ಎಂದರು. ನನಗೆ ವಿಪರೀತ ಆತಂಕವಾಗಿಹೋಯಿತು. ‘ನೋಡಿ ಡಾಕ್ಟ್ರೇ, ನೀವು ಎಷ್ಟು ಹೊಲಿಗೆ ಬೇಕಾದರೂ ಹಾಕಿ.. ಪರವಾಗಿಲ್ಲ. ಆದರೆ ಈಗ ಹತ್ತು ಗಂಟೇಗೆ ನಾನು ಒಂದು ಸಂದರ್ಶನಕ್ಕೆ ಹೋಗಲೇಬೇಕು.. ಯಾವ ಕಾರಣಕ್ಕೂ ಅದು ತಪ್ಪೋ ಹಾಗಿಲ್ಲ.. ನನ್ನನ್ನ ಸಂದರ್ಶನಕ್ಕೆ ಹೋಗೋ ಹಾಗೆ ಮಾಡೋದು ನಿಮ್ಮ ಜವಾಬ್ದಾರಿ’ ಎಂದು ದೃಢವಾಗಿ ಹೇಳಿದೆ. ಒಮ್ಮೆ ಕೈ ಗಡಿಯಾರ ನೋಡಿಕೊಂಡ ಡಾಕ್ಟ್ರು ಒಂದು ಕ್ಷಣ ಸುಮ್ಮನಿದ್ದು, ‘ಆಯ್ತು.. ಆಸ್ಪತ್ರೇಗೆ ಒಂದು ಫೋನ್ ಮಾಡಿ ಹಾಗೇ ಸೂಚರ್ ಮೆಟೀರಿಯಲ್ ತರ್ತೀನಿ.. ಕೂತಿರಿ’ ಎಂದು ಹೇಳಿ ಒಳಹೋದರು. ನನ್ನ ಮನಸ್ಸೋ ನೆನಪಿಗೆ ಬಂದ ದೇವರಿಗೆಲ್ಲಾ ಮೊರೆಯಿಡುತ್ತಿತ್ತು: ‘ನಾನು ಸಂದರ್ಶನಕ್ಕೆ ಹೋಗೋ ಹಾಗೆ ಮಾಡಿ.. ಸಂದರ್ಶನಕ್ಕೆ ಹೋಗೋ ಹಾಗೆ ಮಾಡಿ.. ಪ್ಲೀಸ್..’

ಅಷ್ಟರಲ್ಲಿ ಹೊರಬಂದ ಡಾಕ್ಟ್ರು ಬಲು ಮುತುವರ್ಜಿಯಿಂದ ಗಾಯವನ್ನು ಸ್ವಚ್ಛಮಾಡಿ ಸೂಚರ್ ಪೋಣಿಸಲು ಸಿದ್ಧ ಮಾಡಿಕೊಂಡು ನಾಲ್ಕಾರು ಹೊಲಿಗೆಗಳನ್ನು ಹಾಕಿದರು. ಆಶ್ಚರ್ಯವೆಂಬಂತೆ ಆ ನೋವು ನನ್ನನ್ನು ಒಂದಿಷ್ಟೂ ಬಾಧಿಸಲಿಲ್ಲ!

ಡಾಕ್ಟರ ಮನೆಯಿಂದ ಹಾಗೇ ನಿಧಾನವಾಗಿ ಕುಂಟಿಕೊಂಡು ಒಂದು ಫರ್ಲಾಂಗ್ ದೂರದಲ್ಲಿದ್ದ ನಮ್ಮ ಮನೆಗೆ ಹೋದೆ. ನನ್ನ ಸ್ಥಿತಿಯನ್ನು ಕಂಡು ಎಲ್ಲರಿಗೂ ಗಾಬರಿ! ಹಾಗೇ ಕುಂಟಿಕೊಂಡೇ ಸಂದರ್ಶನಕ್ಕೆ ಹೊರಡಲು ಸಿದ್ಧನಾದೆ. ರವೀಂದ್ರ ಕಲಾಕ್ಷೇತ್ರದ ಲೌಂಜ್ ನಲ್ಲಿ ಸಂದರ್ಶನವನ್ನು ಏರ್ಪಡಿಸಿದ್ದರು. ಆ ಸಮಯದಲ್ಲಿ ಮೂರ್ತಿಭಾವ UVCE (ಇಂಜಿನಿಯರಿಂಗ್ ಕಾಲೇಜ್) ನಲ್ಲಿ ಕೆಲಸ ಮಾಡುತ್ತಿದ್ದರು. ಅವರೇ ನನ್ನನ್ನು ಸ್ಕೂಟರ್ ನಲ್ಲಿ ಒಂದೇ ಬದಿಯಲ್ಲಿ ಹೆಣ್ಣುಮಕ್ಕಳು ಕೂರುವಂತೆ ಕೂರಿಸಿಕೊಂಡು ನಿಧಾನವಾಗಿ ಗಾಡಿ ಓಡಿಸಿಕೊಂಡು ಕಲಾಕ್ಷೇತ್ರದ ಬಳಿ ನನ್ನನ್ನು ಇಳಿಸಿ ಹೋದರು. ಅಲ್ಲಿದ್ದ ಒಂದಿಬ್ಬರು ಗೆಳೆಯರ ನೆರವಿನೊಂದಿಗೆ ನಿಧಾನವಾಗಿ ಕಲಾಕ್ಷೇತ್ರದ ಮೆಟ್ಟಿಲುಗಳನ್ನು ಹತ್ತಿ ಸಂದರ್ಶನದ ಜಾಗದ ಬಳಿ ಹೋದೆ. ನನ್ನ ಸರದಿ ಬಂದು ಕುಂಟುತ್ತಲೇ ಒಳಹೋದ ನನ್ನನ್ನು ನೋಡಿ ಸಂದರ್ಶಕರು ಮುಖ ಮುಖ ನೋಡಿಕೊಂಡದ್ದು ನನಗೆ ಸ್ಪಷ್ಟವಾಗಿಯೇ ಅರಿವಿಗೆ ಬಂತು. ಸಂದರ್ಶನ ನಡೆಸಿದವರಲ್ಲಿ ಡಾ॥ಹೆಚ್. ಕೆ. ರಂಗನಾಥ್ ಹಾಗೂ ಕೋಮಲಾ ವರದನ್ ಪ್ರಮುಖರು. ನಾಟಕ ಸಾಹಿತ್ಯಕ್ಕೆ ಸಂಬಂಧ ಪಟ್ಟ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾಗಿಯೇ ಉತ್ತರಿಸಿದೆ. ಕೊನೆಗೆ ರಂಗನಾಥ್ ಅವರು, ‘ಯಾವುದಾದರೊಂದು ನಾಟಕದ ಭಾಗವನ್ನು ಅಭಿನಯಿಸಿ ತೋರಿಸುವಿರಾ?’ ಎಂದು ಕೇಳಿದರು.

ಆಗ ವಿಧಿಯಿಲ್ಲದೆ ನನ್ನ ಬೆಳಗಿನ ಅಪಘಾತದ ಕಥೆಯನ್ನು ಅವರಿಗೆ ಹೇಳಿ, ಓಡಾಡುತ್ತಾ ನಟಿಸುವ ಸ್ಥಿತಿಯಲ್ಲಿ ನಾನಿಲ್ಲವಾದ್ದರಿಂದ ಕುಳಿತೇ ಅಭಿನಯಿಸಲು ಅವಕಾಶ ಕೊಡಿರೆಂದು ಕೇಳಿಕೊಂಡೆ. ನನ್ನ ಮಾತು ಕೇಳಿ ಸಂದರ್ಶಕರು ಚಕಿತರಾದವರಂತೆ ಕಂಡುಬಂದರು. ‘ಏನು! ಅಪಘಾತ ಮಾಡಿಕೊಂಡು ನಾಲ್ಕಾರು ಹೊಲಿಗೆ ಹಾಕಿಸಿಕೊಂಡು interview ಗೆ ಬಂದಿದೀರಾ!!? ಅಷ್ಟು ಮುಖ್ಯಾನಾ ಇದು ನಿಮಗೆ?!!’ ಎಂದು ಡಾ.ರಂಗನಾಥ್ ಉದ್ಗರಿಸಿದರು. ‘ಅನುಮಾನವೇ ಬೇಡ ಸರ್.. ಈಗ ಸಧ್ಯಕ್ಕೆ ಇದಕ್ಕಿಂತ ಮುಖ್ಯವಾದ್ದು ಬೇರೆ ಯಾವುದೂ ಇಲ್ಲ ನನಗೆ’ ಎಂದು ನಾನು ಉತ್ತರಿಸಿದೆ. ಕುಳಿತೇ ಒಂದಷ್ಟು ಭಾವ ಪ್ರದರ್ಶನ ಮಾಡಿ ಸಂಭಾಷಣೆಗಳನ್ನೂ ಹೇಳಿದೆ. ಸಂದರ್ಶಕರು ಸಂತೃಪ್ತರಾದಂತೆ ಕಂಡುಬಂದರು. ನಾನು ಆಯ್ಕೆಯಾಗುತ್ತೇನೆಂಬ ವಿಶ್ವಾಸ ನನ್ನಲ್ಲಿಯೂ ತುಂಬಿ ಬಂದಿತು. ಸಂದರ್ಶನ ಮುಗಿಸಿ ಹೊರಬಂದರೆ ಅಶೋಕ ತನ್ನ ಪಾಳಿಗೆ ಕಾಯುತ್ತಾ ಕುಳಿತಿದ್ದ. ಅವನೊಟ್ಟಿಗೆ ಕೊಂಚ ಹೊತ್ತು ಮಾತಾಡಿ ಶುಭ ಹಾರೈಸಿ ಒಂದು ಆತ್ಮವಿಶ್ವಾಸದ ಭಾವದೊಂದಿಗೆ ಮನೆಯತ್ತ ಹೊರಟೆ. ಆಟೋದಲ್ಲಿ ಕೂತು ಹೊರಟಾಗ ಅಷ್ಟು ಹೊತ್ತೂ ನೇಪಥ್ಯಕ್ಕೆ ಸರಿದಿದ್ದ ತೊಡೆಯ ನೋವು ‘ಇಲ್ಲೇ ಇದ್ದೇನೆ’ ಎಂದು ಸಾರುತ್ತಾ ಬಾಧಿಸತೊಡಗಿತು…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: