ಶ್ರೀನಿವಾಸ ಪ್ರಭು ಅಂಕಣ: ನಮ್ಮ ಮನೆಯಲ್ಲಿ ಚಾಪೆ ಸದಾ ಸಿದ್ಧವಾಗಿರುತ್ತದೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 118
———————
ಈ ಶತಮಾನದ ಆರಂಭದ ವರ್ಷಗಳು ಒಂದು ರೀತಿಯಲ್ಲಿ ನನಗೆ ಮಹಾ ಕ್ರಿಯಾಶೀಲ ಪರ್ವ. ಅಭಿನಯಿಸಿದ ಧಾರಾವಾಹಿಗಳು, ಚಲನಚಿತ್ರಗಳು ಅಸಂಖ್ಯಾತ. ಇವುಗಳ ಜತೆಗೆ ಪರಮಪ್ರಿಯವಾದ ರಂಗಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದೆ! ಈ ದಿನಗಳಲ್ಲಿ ನಾನು ಅಭಿನಯಿಸಿದ ಎರಡು ಮುಖ್ಯ ರಂಗ ಪ್ರಯೋಗಗಳೆಂದರೆ ‘ಸೇವಂತಿ ಪ್ರಸಂಗ’ ಹಾಗೂ ‘ಇತಿ ನಿನ್ನ ಅಮೃತಾ’.

‘ಸೇವಂತಿ ಪ್ರಸಂಗ’ ಜಾರ್ಜ್ ಬರ್ನಾರ್ಡ್ ಷಾ ಅವರ ‘ಪಿಗ್ಮೇಲಿಯನ್’ ನಾಟಕವನ್ನು (my fair lady) ಆಧರಿಸಿದ್ದು ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿಯವರು ಈ ನಾಟಕವನ್ನು ಅತ್ಯಂತ ಸೊಗಸಾಗಿ —ಕನ್ನಡದ್ದೇ ನಾಟಕವೆನ್ನಿಸುವಷ್ಟು ಸಹಜವಾಗಿ ರೂಪಾಂತರಿಸಿದ್ದರು. ಪ್ರಸಿದ್ಧ ಅಭಿನೇತ್ರಿ ವೈಶಾಲಿ ಕಾಸರವಳ್ಳಿಯವರು ಈ ರಂಗ ಪ್ರಯೋಗವನ್ನು ನಿರ್ದೇಶಿಸಿದ್ದರು.

ಈ ನಾಟಕದ ಕೇಂದ್ರ ಪಾತ್ರ ಸೇವಂತಿ, ಬಲೂನು ಮಾರುವ ಅಶಿಕ್ಷಿತ ಒರಟು ಹುಡುಗಿ. ಅವಳ ಭಾಷೆಯನ್ನೂ ವ್ಯಕ್ತಿತ್ವವನ್ನೂ ತಿದ್ದಿ ತೀಡಿ ಶಿಷ್ಟ ಸಮಾಜಕ್ಕೆ ಒಪ್ಪಿತವಾಗುವ ರೀತಿಯಲ್ಲಿ ಅವಳನ್ನು ಮಾರ್ಪಡಿಸುತ್ತೇನೆ ಎನ್ನುವುದು ಭಾಷಾಶಾಸ್ತ್ರಜ್ಞ ಭಾರ್ಗವ ಶಾಸ್ತ್ರಿಯ ಹಠ. ಸೇವಂತಿಯ ಪಾತ್ರವನ್ನು ಪೂಜಾ ಲೋಕೇಶ್ ಅವರೂ ಭಾರ್ಗವ ಶಾಸ್ತ್ರಿಯ ಪಾತ್ರವನ್ನು ನಾನೂ ನಿರ್ವಹಿಸಿದ್ದೆವು. ಸೇನೆಯ ಕ್ಯಾಪ್ಟನ್ ನ ಮತ್ತೊಂದು ಮುಖ್ಯ ಪಾತ್ರವನ್ನು ಮುಂದೆ ಚಿತ್ರರಂಗದಲ್ಲಿ ಪ್ರಸಿದ್ಧರಾದ ಅನಿರುದ್ಧ ಅವರೂ ಸೇವಂತಿಯ ಕುಡುಕ ತಂದೆಯ ಪಾತ್ರವನ್ನು ಕಲಾಗಂಗೋತ್ರಿ ಕಿಟ್ಟಿಯೂ ನಿರ್ವಹಿಸಿದ್ದರು. ಪ್ರಾರಂಭಿಕ ಪ್ರದರ್ಶನಗಳಲ್ಲಿ ಎಂ ಡಿ ಪಲ್ಲವಿಯವರೂ ನಂತರದ ಪ್ರದರ್ಶನಗಳಲ್ಲಿ ಪ್ರಸಿದ್ಧ ನಟಿ ಮಾಲತಿ ಸರದೇಶ ಪಾಂಡೆಯವರೂ ಹಿನ್ನೆಲೆ ಗಾಯನದಲ್ಲಿ ಸಹಕರಿಸಿದ್ದರು.

ಮೂಲತಃ ‘ಬದಲಾವಣೆ’ಗಳ ಬಗ್ಗೆ ಮಾತಾಡುವ ಈ ನಾಟಕದ ವಿವಿಧ ಆಯಾಮಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಸೇವಂತಿಯ ವ್ಯಕ್ತಿತ್ವದ ಮಾರ್ಪಾಡು ಒಂದು ಹಂತದ್ದಾದರೆ ಭಾರ್ಗವ ಶಾಸ್ತ್ರಿಯ ಮನೋಧರ್ಮ—ವ್ಯಕ್ತಿತ್ವದಲ್ಲಾಗುವ ಮಾರ್ಪಾಡು ಮತ್ತೊಂದು ಹಂತದ್ದು. ಶಿಷ್ಟ ಭಾಷೆ—ಉತ್ತಮ ವೇಷಭೂಷಗಳಷ್ಟರಿಂದಲೇ ವ್ಯಕ್ತಿ ಶಿಷ್ಟ—ನಾಗರಿಕ ಸಮಾಜಕ್ಕೆ ಸೇರಿದವನೆಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತಾನೆಯೇ? ಅಂತರಂಗದ ಮಾರ್ದವತೆ—ನವುರು—ಶುದ್ಧತೆಗಳು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ—ಅಳೆಯುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದೇ ಇಲ್ಲವೇ?..ಇಂತಹ ಸೂಕ್ಷ್ಮ ಸಂದಿಗ್ಧ ಪ್ರಶ್ನೆಗಳು ನಾಟಕದಲ್ಲಿ ಅಂತರ್ಗತವಾಗಿವೆಯೇನೋ ಎಂಬುದು ನನ್ನ ಅನಿಸಿಕೆ. ಇರಲಿ. ಒಟ್ಟಿನಲ್ಲಿ ಒಂದು ಸೊಗಸಾದ ನಾಟಕದ ಸಮರ್ಥ ರೂಪಾಂತರವನ್ನು ವೈಶಾಲಿಯವರು ರಂಗದ ಮೇಲೆ ಕಟ್ಟಿಕೊಟ್ಟರು. ಭಾರ್ಗವ ಶಾಸ್ತ್ರಿ, ಬಹುಕಾಲ ನಾನು ನೆನಪಿಸಿಕೊಳ್ಳುವ ಪಾತ್ರ ಕೂಡಾ.

“ಇತಿ ನಿನ್ನ ಅಮೃತಾ”, ಶಂಕರ್ ನಾಗ್ ಅವರು ಪ್ರಾರಂಭಿಸಿದ್ದ ಸಂಕೇತ್ ತಂಡಕ್ಕಾಗಿ ಪ್ರಸಿದ್ಧ ನಿರ್ದೇಶಕ ಎಂ.ಎಸ್. ಸತ್ಯು ಅವರು ನಿರ್ದೇಶಿಸಿದ ನಾಟಕ. ಎ ಆರ್ ಗುರ್ನಿ ಅವರ ಲವ್ ಲೆಟರ್ಸ್ ಎಂಬ ನಾಟಕವನ್ನು ಜಾವೇದಿ ಸಿದ್ದಿಕಿ ಅವರು ಹಿಂದಿ ಭಾಷೆಯಲ್ಲಿ ರೂಪಾಂತರಿಸಿದ್ದು ಅದನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದವರು ಜಯಂತ ಕಾಯ್ಕಿಣಿ ಅವರು. “ಇತಿ ನಿನ್ನ ಅಮೃತಾ” ಒಂದು ವಿಶಿಷ್ಟ ನಾಟಕ; ಓದು ನಾಟಕವೆಂದೇ ಕರೆಯಬಹುದೇನೋ. ಪರಸ್ಪರ ಅಗಲಿರಲಾರದ, ಜೊತೆಯಾಗಿಯೂ ಬದುಕಲಾಗದ ಇಬ್ಬರು ಪ್ರೇಮಿಗಳ ನಡುವಣ ಪ್ರೇಮಕಥೆ, ಅವರು 35 ವರ್ಷಗಳಷ್ಟು ಸುದೀರ್ಘ ಕಾಲ ಪರಸ್ಪರರಿಗೆ ಬರೆದುಕೊಂಡ ಪತ್ರಗಳ ಓದಿನ ಮುಖಾಂತರ ತೆರೆದುಕೊಳ್ಳುತ್ತಾ ಹೋಗುತ್ತದೆ. ಅಮೃತಾ ಚಿತ್ರಕಲಾವಿದೆಯಾದರೆ ಅವಳ ಗೆಳೆಯ ಜು಼ಲ್ಫಿ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಕೊಂಡವನು. ಅವರು ಒಬ್ಬರಿಗೊಬ್ಬರು ಬರೆದುಕೊಂಡ ಒಂದೊಂದು ಪತ್ರದ ಓದೂ ಮುಗಿಯುತ್ತಿದ್ದಂತೆ ವರ್ಷಗಳೂ ಉರುಳುತ್ತಾ ಹೋಗುತ್ತವೆ…ಎಳೆಯ ಅಮೃತಾ—ಜು಼ಲ್ಫಿ ವಯಸ್ಕರಾಗುತ್ತಾ ಪ್ರೌಢರಾಗುತ್ತಾ ಪ್ರಬುದ್ಧರಾಗುತ್ತಾ ಹೋಗುತ್ತಾರೆ…ಸಂಬಂಧಗಳು ಗಾಢವಾಗುತ್ತಾ ಸಂಕೀರ್ಣವಾಗುತ್ತಾ ಜಟಿಲವಾಗುತ್ತಾ ಹೋಗುತ್ತವೆ. ಒಟ್ಟಾರೆ ಒಂದಿಡೀ ಕಾಲಘಟ್ಟದ ಅವಸ್ಥಾಂತರಗಳ ಅನಾವರಣ, ಪಾತ್ರಗಳು ಕುಳಿತಲ್ಲಿಂದ ಕದಲದೇ ನಡೆಸುವ ಪತ್ರಗಳ ಓದಿನ ಮುಖಾಂತರವೇ ಆಗುತ್ತಾ ಹೋಗುತ್ತದೆ. ಇದು ನಿಜಕ್ಕೂ ನಾಟಕವೇ ಎಂಬ ಅನುಮಾನ ಬರುವಷ್ಟರ ಮಟ್ಟಿಗಿನ ವಿಶಿಷ್ಟ ಸಂವಿಧಾನದ ನಾಟಕ ಇದು. ಹಿಂದಿ ರಂಗಭೂಮಿಗಾಗಿ ಈ ನಾಟಕವನ್ನು ಸಿದ್ಧಪಡಿಸಿದಾಗ ಶಬಾನಾ ಅಜ್ಮಿ಼ ಹಾಗೂ ಫಾರೂಕ್ ಶೇಖ್ ಅವರು ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಅಬ್ಬಬ್ಬಾ ಎಂದರೆ 8—10 ಪ್ರದರ್ಶನಗಳಷ್ಟೇ ಈ ರಂಗಪ್ರಯೋಗದ ಆಯಸ್ಸು ಎಂದುಕೊಂಡಿದ್ದ ರಂಗತಂಡದವರು ನಾಟಕದ ಅಭೂತಪೂರ್ವ ಯಶಸ್ಸನ್ನು ಕಂಡು ದಂಗಾಗಿಹೋದರಂತೆ! ವಿಶ್ವದಾದ್ಯಂತ ನೂರಾರು ಪ್ರದರ್ಶನಗಳನ್ನು ಕಂಡ ಹೆಗ್ಗಳಿಕೆ ‘ತುಮ್ಹಾರೀ ಅಮೃತಾ’ ನಾಟಕದ್ದು.

‘ಇತಿ ನಿನ್ನ ಅಮೃತಾ’ ನಾಟಕದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದವರು ಅಮೃತಾರ ಪಾತ್ರದಲ್ಲಿ ಅರುಂಧತಿ ನಾಗ್ ಹಾಗೂ ಜು಼ಲ್ಫಿಯ ಪಾತ್ರದಲ್ಲಿ ನಾನು. ಮಾತುಗಳನ್ನು ಕಲಿಯುವ ಅಗತ್ಯವಿಲ್ಲದ ಓದು ನಾಟಕವಾದ್ದರಿಂದ ರಂಗಪ್ರಯೋಗ ಸುಲಭವೆಂಬುದು ಕೇವಲ ಭ್ರಮೆ ಎಂಬುದು ಒಂದೆರಡು ದಿನಗಳ ತಾಲೀಮಿನಲ್ಲೇ ಸ್ಪಷ್ಟವಾಗಿಹೋಯಿತು! ಒಟ್ಟಾರೆ ನಾಟಕದ ಧ್ವನಿಯನ್ನು ನಮಗೆ ಮನದಟ್ಟು ಮಾಡಿಕೊಟ್ಟಮೇಲೆ ನಿರ್ದೇಶಕರಿಗೆ ವಿಶೇಷ ಕೆಲಸವೇನೂ ಇರಲಿಲ್ಲ. ಸತ್ಯು ಅವರ ರಂಗವಿನ್ಯಾಸ ಅತ್ಯಂತ ಸರಳವಾಗಿದ್ದರೂ ಅರ್ಥಪೂರ್ಣವಾಗಿತ್ತು. ರಂಗದ ಎರಡು ಬದಿಗಳಲ್ಲಿ ಎರಡು ಮೇಜು—ಕುರ್ಚಿಗಳು…ನಡುವೆ ಈಸ಼ಲ್ ಮೇಲೆ ವೇದನೆಯೇ ಮೂರ್ತಿವೆತ್ತಂತಹ ಮುಖಭಾವದ ಹೆಣ್ಣೊಬ್ಬಳ ಅಪೂರ್ಣ ಚಿತ್ರ..ಕೇವಲ ನಮ್ಮ ಮಾತು—ಧ್ವನಿಯ ಏರಿಳಿತಗಳ ಮೂಲಕವೇ ಹತ್ತಾರು ವರ್ಷಗಳಷ್ಟು ದೀರ್ಘಾವಧಿಯ ಘಟನಾವಳಿಗಳ—ಆಂತರಂಗಿಕ ತುಮುಲಗಳ—ದ್ವಂದ್ವ ಸಂಘರ್ಷಗಳ ಒಂದು ಭಾವಲೋಕವನ್ನೇ ಪ್ರೇಕ್ಷಕರೆದುರಿಗೆ ಕಟ್ಟಿಕೊಡಬೇಕಾದ ಗುರುತರ ಹೊಣೆ ಕಲಾವಿದರಾದ ನಮ್ಮ ಮೇಲಿತ್ತು. ಮಾತಿನ ಮಂಟಪವನ್ನು ಕಟ್ಟುತ್ತಲೇ ಪ್ರೇಕ್ಷಕರ ಒಳಗಣ್ಣಿಗೆ ಚಿತ್ರಗಳನ್ನು ಕಟ್ಟಿಕೊಡಬೇಕಾದ ಅನಿವಾರ್ಯತೆ ಇತ್ತು. ಈ ದೃಷ್ಟಿಯಿಂದ ಎಂಥ ಕಲಾವಿದರಿಗೂ ಸವಾಲಾಗಬಲ್ಲಂಥ ಅಪರೂಪದ ನಾಟಕ ‘ಇತಿ ನಿನ್ನ ಅಮೃತಾ’.

ಅರುಂಧತಿ ಅವರಂತೂ ಅಮೃತಾಳ ಪಾತ್ರದಲ್ಲಿ ಪರಕಾಯ ಪ್ರವೇಶವನ್ನೇ ಮಾಡಿಬಿಟ್ಟಿದ್ದರು. ಪುಟ್ಟಹುಡುಗಿ ಅಮೃತಾಳ ಹುಡುಗಾಟಿಕೆಯಾಗಲೀ ತರುಣಿ ಅಮೃತಾಳ ದಿಟ್ಟ ಧೀಮಂತ ನಿಲುವುಗಳಾಗಲೀ ಪ್ರೌಢ ವಯಸ್ಸಿನ ಅಮೃತಾಳ ಮೆಲುದನಿಯ ಗಂಭೀರ ಹಳಹಳಿಕೆಗಳಾಗಲೀ ಅರುಂಧತಿಯವರ ಧ್ವನಿಯ ಏರಿಳಿತದ ಮಾಂತ್ರಿಕ ಸ್ಪರ್ಶದಲ್ಲಿ ಪ್ರೇಕ್ಷಕರನ್ನು ತೀವ್ರವಾಗಿ ತಟ್ಟುತ್ತಿದ್ದವು. ರಂಗದ ಮೇಲೆ ಅರುಂಧತಿಯವರೊಂದಿಗೆ ಅಭಿನಯಿಸುವುದೇ ಒಂದು ವಿಶಿಷ್ಟ ಅನುಭವ. ನನಗೂ ಜು಼ಲ್ಫಿಯ ಪಾತ್ರನಿರ್ವಹಣೆ ಅಭಿನಯದ ಹಲ ಅಗೋಚರ ಮಗ್ಗುಲುಗಳನ್ನು ಅತ್ಯಂತ ಸೊಗಸಾಗಿ ದರ್ಶನ ಮಾಡಿಸಿದ ಅನುಭವ ತಂದುಕೊಟ್ಟಿತು.

ಇದೇ ಸಮಯದಲ್ಲಿಯೇ ಧಾರಾವಾಹಿ ಹಾಗೂ ಚಲನಚಿತ್ರಗಳ ಹಲವಾರು ಚಿತ್ರೀಕರಣಗಳಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡಿದ್ದೆ. ಒಂದು ದಿನ ಇದ್ದಕ್ಕಿದ್ದಹಾಗೆ ದೇಹದ ಎಡಭಾಗದಲ್ಲಿ ಸೊಂಟದಿಂದ ಕೆಳಗೆ ಒಂದು ರೀತಿಯ ಸೆಳೆತ—ನೋವು ಆರಂಭವಾಗಿಬಿಟ್ಟಿತು. ಹಲವಾರು ನೋವು ನಿವಾರಕ ಮಾತ್ರೆಗಳನ್ನು ತಿಂದದ್ದಾಯಿತು..ಹಲವಾರು ಎಣ್ಣೆ—ಕ್ರೀಮ್ ಗಳನ್ನು ಬಳಿದು ನೀವಿದ್ದಾಯಿತು; ಏನೂ ಪ್ರಯೋಜನವಾಗಲಿಲ್ಲ. ಮೂರು ನಾಲ್ಕು ಡಾಕ್ಟರ್ ಗಳನ್ನು ಸಂಪರ್ಕಿಸಿ ವಿಚಾರಿಸಿದ್ದಾಯಿತು.ಅವರು ಹೇಳಿದ ವೈದ್ಯಗಳನ್ನೆಲ್ಲಾ ಚಾಚೂ ತಪ್ಪದೆ ಪಾಲಿಸಿದ್ದೂ ಆಯಿತು. ಊಂಹೂಂ…ನೋವು ಒಂದಿಷ್ಟು ಕದಲಲೂ ಇಲ್ಲ! ಕೊನೆಕೊನೆಗೆ ನೆಟ್ಟಗೆ ನಡೆಯುವುದಕ್ಕೇ ತ್ರಾಸವಾಗುವಷ್ಟರ ಮಟ್ಟಿಗೆ ನೋವು ಬಾಧಿಸತೊಡಗಿ ಚಿತ್ರೀಕರಣದಲ್ಲಿಯೂ ತೊಂದರೆಯಾಗತೊಡಗಿತು. ಭದ್ರವಾಗಿ ಹೆಜ್ಜೆಯೂರಿ ನಡೆಯುವುದಕ್ಕೇ ಕಷ್ಟವಾಗಿಬಿಟ್ಟರೆ ಚಿತ್ರೀಕರಣದಲ್ಲಿ ಪಾಲುಗೊಳ್ಳುವುದಾದರೂ ಹೇಗೆ? ಕೊನೆಗೆ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ನಾಟಿ ಔಷಧ ನೀಡುವುದರಲ್ಲಿ ಸಿದ್ಧಹಸ್ತರಾದ ಪಾಪಣ್ಣನವರನ್ನು ಹೋಗಿ ಕಂಡು ನನ್ನ ಸಮಸ್ಯೆಯನ್ನು ವಿವರಿಸಿದೆ. ಅವರು ಒಮ್ಮೆ ಕಣ್ಣು ಮುಚ್ಚಿ ತೆಗೆದು ಸಣ್ಣಗೆ ನಕ್ಕು ‘ಸಿಯಾಟಿಕಾ’ ಎಂದರು!

ಅರೆರೆ! ಅಲೋಪತಿ ವೈದ್ಯರೇ ಹೇಳದಿದ್ದ ವ್ಯಾಧಿಯ ಹೆಸರನ್ನು ಇವರು ಹೇಳಿಬಿಟ್ಟರಲ್ಲಾ ಎಂದು ಚಕಿತನಾಗಿಹೊದೆ. “ಒಂದು ವಾರ ಅಷ್ಟೇ..ಸರಿ ಮಾಡಿಬಿಡ್ತೀನಿ” ಅಂದರು. ಯಾರೋ ಇಬ್ಬರು ಹುಡುಗರು ಒಳಗೆ ಕರೆದುಕೊಂಡು ಹೋಗಿ ಅದೆಂಥದೋ ಕಟುವಾಸನೆಯ ತೈಲಗಳನ್ನು ಊರುಭಾಗಕ್ಕೆ ಹಚ್ಚಿ ನೋವು ಹೆಚ್ಚಾಗುವಷ್ಟೇ ನೀವಿ ನೀವಿ ತಿಕ್ಕಿದರು! ಅನಂತರ ಪಾದದಿಂದ ತೊಡೆಯ ಮೇಲಿನ ಸಂಧಿಯವರೆಗೆ ಬಲವಾಗಿ ಬ್ಯಾಂಡೇಜ್ ಅನ್ನು ಸುತ್ತಿ ಸುತ್ತಿ ಕಟ್ಟಿ ಭದ್ರಪಡಿಸಿದರು. ಅವರು ತೊಡೆಗೆ ಬ್ಯಾಂಡೇಜ್ ಸುತ್ತಿದ ವೈಖರಿಗೆ ಅಕ್ಷರಶಃ ನನ್ನ ಜಂಘಾಬಲವೇ ಉಡುಗಿಹೋಯಿತು! ‘ಒಂದು ವಾರ ಸ್ನಾನ ಮಾಡಬೇಡಿ’ ಎಂದು ಅವರು ಮೊದಲ ಎಚ್ಚರಿಕೆಯನ್ನು ನೀಡಿದಾಗ ಮತ್ತಷ್ಟು ಗಾಬರಿಗೊಂಡೆ. ‘ಅಯ್ಯಯ್ಯೋ..ತೀರಾ ಒಂದು ವಾರ ಸ್ನಾನವಿಲ್ಲದೆ ಹೇಗೆ ಸ್ವಾಮೀ, ಅದೂ ಈ ವೈದ್ಯದ ಒಂದು ಭಾಗವೇ?’ ಎಂದರೆ ‘ಹಾಗಲ್ಲ..ನೀರು ಸ್ವಲ್ಪಾನೂ ಸೋಕಬಾರದು ಅನ್ನೋದಕ್ಕೆ ಹೇಳಿದೆ..ಹುಷಾರಾಗಿರಿ’ ಎಂದು ಸಮಾಧಾನ ಹೇಳಿದರು. ಕಷ್ಟಪಟ್ಟು ಆ ಭಾರೀ ಭರ್ಜರಿ ಗಾತ್ರದ ಬ್ಯಾಂಡೇಜ್ ಮೇಲೆಯೇ ಪ್ಯಾಂಟ್ ಏರಿಸಿಕೊಂಡು ಕುಂಟಿಕೊಂಡೇ ಮನೆಯತ್ತ ಸಾಗಿದೆ. ಆ ಬ್ಯಾಂಡೇಜ್ ಇಟ್ಟುಕೊಂಡು ಮುಂದಿನ ಒಂದೂ ವಾರ ಶೂಟಿಂಗ್ ಮಾಡಿ ಮುಗಿಸುವಷ್ಟರಲ್ಲಿ ನಾನು ಸುಸ್ತು ಹೊಡೆದುಹೋಗಿದ್ದೆ. ಒಂದು ವಾರದ ನಂತರ ಬ್ಯಾಂಡೇಜ್ ಬಿಚ್ಚಿದರೆ ನೋವಿನಲ್ಲಿ ಒಂದು ಎಳ್ಳುಕಾಳಿನಷ್ಟಾದರೂ ಕಡಿಮೆ ಎಂದಾಗಿರಬೇಕಲ್ಲವೇ? ಇಲ್ಲವೇ ಇಲ್ಲ! ನೋವು ಇದ್ದಂತೆಯೇ ಇದೆ! ಯಾಕೋ ಈ ವೈದ್ಯ ಫಲಕಾರಿಯಾಗುತ್ತಿಲ್ಲ ಅನ್ನಿಸಿ ಅದನ್ನು ಅಲ್ಲಿಗೇ ನಿಲ್ಲಿಸಿಬಿಟ್ಟೆ.

ನಮ್ಮ ನೆರೆಮನೆಯವರೇ ಆಗಿದ್ದ ಡಾ॥ ರಘುರಾಮ ಭಟ್ಟರ ಸಲಹೆಯ ಮೇರೆಗೆ ಆರ್ಥೋಪಿಡಿಷಿಯನ್ ಒಬ್ಬರನ್ನು ಭೇಟಿ ಮಾಡಿದೆ. ಅವರು , “ಯಾವುದಕ್ಕೂ ಒಂದು M R I scanning ಮಾಡಿಸಿಬಿಡಿ ಪ್ರಭೂ..ಏನೂ ತೊಂದರೆ ಇಲ್ಲ ಅನ್ನೋದು ಖಾತ್ರಿಯಾಗಿ ಬಿಡಲಿ” ಎಂದರು. ಅವರು ಸೂಚಿಸಿದಂತೆ ಜಯನಗರದ ಒಂದು ಡಯಾಗ್ನಾಸ್ಟಿಕ್ಸ್ ಕೇಂದ್ರಕ್ಕೆ ಹೋದೆ. ಮೆತ್ತನೆಯ ಮೇಜೊಂದರ ಮೇಲೆ ಮಲಗಿಸಿ ಗೂಡಿನಂತಹ ಭಾರಿ ಯಂತ್ರವೊಂದರ ಒಳಗೆ ನನ್ನನ್ನು ದೂಡಿದರು. ಅನೇಕರಿಗೆ ಅಲ್ಲಿ ಒಳಗೆ ಉಸಿರು ಕಟ್ಟಿದ ಹಾಗಾಗುತ್ತದೆಂಬುದನ್ನು ಕೇಳಿ ತಿಳಿದಿದ್ದೆ. ಯಂತ್ರದ ಒಳಹೋಗುತ್ತಿದ್ದಂತೆ ಚಿತ್ರವಿಚಿತ್ರ ಸದ್ದುಗಳ ಆರ್ಭಟ…ನಿಜಕ್ಕೂ ಉಸಿರು ಕಟ್ಟಿಸುವಂಥದ್ದೇ ವಾತಾವರಣ..ಜೋರಾಗಿ ಅಲುಗಾಡುವಂತಿಲ್ಲ..ಆಳವಾಗಿಯೂ ಉಸಿರೆಳೆದುಕೊಳ್ಳುವಂತಿಲ್ಲ! ಸುಮಾರು ಇಪ್ಪತ್ತು ನಿಮಿಷ ಒಂದೇ ಸಮನೆ ಭೋರ್ಗರೆದ ಯಂತ್ರ ಕೊನೆಗೊಮ್ಮೆ ಸಮಾಧಾನ ತಂದುಕೊಂಡು ತೆಪ್ಪಗಾದಾಗ ನಾನೂ ನೆಮ್ಮದಿಯ ಉಸಿರು ಬಿಟ್ಟೆ. ಹೊರಬಂದು ವೈದ್ಯರನ್ನು ಭೇಟಿಯಾದರೆ ಅವರು , ” Congatulations mr. prabhu..ಏನೂ ತೊಂದರೆಯಿಲ್ಲ..everything is normal” ಎಂದು ಜೋರಾಗಿ ನಕ್ಕರು. ನನಗೇನೂ ಅಷ್ಟು ಸಮಾಧಾನವಾಗಲಿಲ್ಲ! ಸ್ವಲ್ಪ ತೊಂದರೆಯಿದೆ ಎಂದಾಗಿ ಅದಕ್ಕೆ ಅವರು ಪರಿಹಾರವನ್ನು ಸೂಚಿಸಿದ್ದರೆ ನೋವಿನ ಸಮಸ್ಯೆ ಬಗೆ ಹರಿಯುತ್ತಿತ್ತು. ಈಗ ಮತ್ತೆ ಮೊದಲಿನ ಅದೇ ಅತಂತ್ರ ಸ್ಥಿತಿ..ಅದೇ ಸೆಳೆತ—ನೋವು!

ಮತ್ತಾರ ಬಳಿ ಹೋಗುವುದೆಂದು ಚಿಂತಿಸುತ್ತಿದ್ದಾಗಲೇ ನನ್ನ ಸಹಾಯಕನೂ ಪ್ರಿಯ ಮಿತ್ರನೂ ಆಗಿದ್ದ ಅಶೋಕ್ ಜೈನ್ ಒಂದು ಸಲಹೆ ನೀಡಿದ: “ಸರ್ , ಇಲ್ಲೇ ಧರ್ಮರಾಯನ ಗುಡಿ ಹತ್ರ ಒಬ್ಬ ಉಳುಕು ತೆಗೆಯೋ ನಾಟಿ ವೈದ್ಯ ಇದಾನೆ..ಒಂದ್ಸಲ ಪ್ರಯತ್ನ ಪಡಬಹುದೇನೋ….ವಾಸಿಯಾಗೇ ಆಗುತ್ತೆ ಅಂತ ಗ್ಯಾರಂಟಿ ಕೊಡಲಾರೆ..ಆದರೆ ಸುಮಾರು ಜನಕ್ಕೆ ಅನುಕೂಲ ಅಂತೂ ಆಗಿದೆ”.ಹೇಗಾದರೂ ಸರಿ ಈ ಬಾಧೆಯಿಂದ ಮುಕ್ತಿ ಸಿಕ್ಕಿದರೆ ಸಾಕೆಂದು ಪರದಾಡುತ್ತಿದ್ದ ನಾನು ಈ ಪ್ರಯತ್ನವನ್ನೂ ಮಾಡಿಯೇ ಬಿಡೋಣ ಎಂದುಕೊಂಡು ಅಶೋಕನೊಟ್ಟಿಗೆ ಆ ವೈದ್ಯನಲ್ಲಿಗೆ ಹೋದೆ. ಮೂಲತಃ ಆಂಧ್ರದವನಾದ ಆತ ಹಿರಿಯ NTR ಅವರ ಪರಮ ಭಕ್ತನಷ್ಟೇ ಅಲ್ಲ, ಜೂನಿಯರ್ ಎನ್ ಟಿ ಆರ್ ಎಂದೇ ಅವನ ವಲಯದಲ್ಲಿ ಖ್ಯಾತನಾಗಿದ್ದ. ಅವನದು ಗುಡಿಯ ಬಳಿಯ ಗಲ್ಲಿಯೊಂದರಲ್ಲಿ ಒಂದು ಪುಟ್ಟ ಮನೆ. ನಾವು ಅವನ ಮನೆಗೆ ಹೋದಾಗ ಮನೆಯ ಬಾಗಿಲು ತೆರೆದಿತ್ತು, ಆದರೆ ಆತ ಮನೆಯಲ್ಲಿರಲಿಲ್ಲ. ‘ಐದು ನಿಮಿಷ ನೋಡೋಣ ಸರ್..ಕಾಫಿಗೇನಾದ್ರೂ ಹೋಗಿರಬಹುದು’ ಎಂದ ಅಶೋಕ. ಸರಿ ಎಂದು ಮನೆಯ ಒಳಗೆ ಕಾಲಿಟ್ಟರೆ ಒಂದು ನೇಣಿನ ಕುಣಿಕೆ ರಪ್ಪೆಂದು ಮುಖಕ್ಕೆ ಬಡಿಯಿತು! ಬಿಸಿಲಿನಿಂದ ಮನೆಯೊಳಗೆ ಹೋದ ನಾನು ಕಣ್ಣನ್ನು ಅಲ್ಲಿನ ಕತ್ತಲೆಗೆ ಹೊಂದಿಸಿಕೊಂಡು ನೋಡಿದರೆ, ಹೌದು! ನೇಣುಕುಣಿಕೆಯೇ! “ಏನೋ ಇದು ಅಶೋಕ, ಇವನು ಉಳುಕು ತೆಗೀತಾನೋ ಇಲ್ಲಾ ನೇಣುಹಾಕ್ತಾನೋ?” ಎಂದರೆ ಅವನೂ ಏನೂ ಅರ್ಥವಾಗದೆ ಪೆಚ್ಚಾಗಿ ನಕ್ಕ. ಅದೇ ಸುಮುಹೂರ್ತದಲ್ಲಿ ನಮ್ಮ ನಾಟಿ ವೈದ್ಯ ಅಲಿಯಾಸ್ ಜೂನಿಯರ್ ಎನ್ ಟಿ ಆರ್ ಅವರ ಆಗಮನವಾಯಿತು! ಬಾಯಲ್ಲೊಂದು ಬೀಡಿ ಕಚ್ಚಿಕೊಂಡು ಉಟ್ಟಿದ್ದ ಬಣ್ಣ ಬಣ್ಣದ ಲುಂಗಿಯನ್ನು ಮೇಲೆತ್ತಿಕಟ್ಟಿ ಪಟ್ಟೆಪಟ್ಟೆಯ ಚಡ್ಡಿಯ ದರ್ಶನ ಮಾಡಿಸುತ್ತಾ ಒಳಬಂದ ಎನ್ ಟಿ ಆರ್ ನಮ್ಮನ್ನು ಒಳಗೆ ನೋಡಿದೊಡನೆ ಅವಾಕ್ಕಾಗಿ ನಿಂತುಬಿಟ್ಟ. ಅಶೋಕ ಅವನಿಗೆ ಎಲ್ಲವನ್ನೂ ವಿವರಿಸಿದ ಮೇಲೆ ಕೊಂಚ ಸಾವರಿಸಿಕೊಂಡ ಆತ ನಂತರ ದೃಢ ವಿಶ್ವಾಸದಿಂದ, ‘ಬನ್ನಿ ಸಾರ್ ಇಲ್ಲಿ ಮಲಿಕ್ಕಳಿ’ ಎಂದು ಕುಣಿಕೆಯ ಕೆಳಭಾಗವನ್ನು ತೋರಿಸಿದ. ಮಣ್ಣುನೆಲದ ಮೇಲೆ ಹೊಟ್ಟೆಯ ಮೇಲೆ ಮಲಗಿದ ನನ್ನ ಬೆನ್ನಿಗೆ ಒಂದಷ್ಟು ಎಣ್ಣೆ ಸುರಿದು ನೀವಿ ನಂತರ ಎಣ್ಣೆಯನ್ನು ಒರೆಸಿ ಹಾಕಿದ. ನೋಡನೋಡುತ್ತಿದ್ದಂತೆ ತೂಗುಬಿದ್ದಿದ್ದ ಕುಣಿಕೆಯನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದು ತನ್ನ ಎಡಗಾಲನ್ನು ನನ್ನ ಬೆನ್ನ ಮೇಲೆ ಹಾಕಿ ಅಂಗಾಲಿನಿಂದಲೇ ವಿಧವಿಧವಾಗಿ ಮಸಾಜ್ ಮಾಡತೊಡಗಿದ. ಒಮ್ಮೊಮ್ಮೆ ಬಲಗಾಲಿನಿಂದ ಕೆಲವೊಮ್ಮೆ ಎಡಗಾಲಿಂದ ಬೆನ್ನನ್ನು ತುಳಿಯುತ್ತಾ ಒದೆಯುತ್ತಾ ಮೆಟ್ಟುತ್ತಾ ರುದ್ರನರ್ತನವನ್ನೇ ನಡೆಸಿಬಿಟ್ಟ ಜೂ.ಎನ್ ಟಿ ಆರ್! ಇಪ್ಪತ್ತು ನಿಮಿಷಗಳ ತರುವಾಯ ಈ ತಾಡನ ಮರ್ದನಗಳಿಂದ ನನಗೆ ಮುಕ್ತಿ ಸಿಕ್ಕಿತು. ನಂತರ ಮತ್ತೊಂದು ಮೂಲೆಗೆ ನನ್ನನ್ನು ಆಹ್ವಾನಿಸಿ ಗೋಡೆಯ ಕಡೆ ಮುಖ ಮಾಡಿ ಕೂರಲು ಸೂಚಿಸಿದ. ಅಲ್ಲೇ ಪಕ್ಕದಲ್ಲಿದ್ದ ಬ್ಯಾಟರಿಯೊಂದು ನನ್ನ ಕಣ್ಣಿಗೆ ಬಿದ್ದು ಅವನೇನು ಮಾಡಬಹುದೆಂಬ ಹೊಲಬು ನನಗೆ ಸಿಕ್ಕಿಬಿಟ್ಟಿತು! ಶಾಕ್ ಟ್ರೀಟ್ ಮೆಂಟ್! ಯಾಕೋ ಅಲ್ಲಿ ಆ ಚಿಕಿತ್ಸೆ ಪಡೆಯಲು ವಿಪರೀತ ಭಯವಾಗಿಬಿಟ್ಟಿತು! ತೂಗುಬಿದ್ದಿದ್ದ ನೇಣಿನ ಕುಣಿಕೆ ಬೇರೆ ನನ್ನನ್ನು ಅಣಕಿಸುತ್ತಿತ್ತು! “ಬೇಡ ಮಾರಾಯ, ಇಷ್ಟೇ ವೈದ್ಯ ಸಾಕು..ಎಷ್ಟು ಕೊಡಬೇಕು ಹೇಳು” ಎಂದೆ. ಆತ ತಲೆ ಕೆರೆದುಕೊಳ್ಳುತ್ತಾ ‘ಶಾನೆ ಕೆಲಸ ಆಗೈತೆ..ಐವತ್ತು ಕೊಟ್ಟುಬಿಡಿ ಸಾರ್” ಎಂದಾಗ ನನಗೇ ಅಯ್ಯೋ ಅನ್ನಿಸಿಬಿಟ್ಟಿತು.

ವಿಚಿತ್ರ ಗೂಡಿನ ಭಯಾನಕ ಸದ್ದುಗಳ ಉಸಿರುಗಟ್ಟಿಸುವ ಚಿಕಿತ್ಸೆಗೆ ಆರು ಸಾವಿರ ತೆತ್ತು ಬಂದಿದ್ದ ನನಗೆ ಐವತ್ತು ರೂಪಾಯಿಯ ಕುಣಿಕಾ ಚಿಕಿತ್ಸೆ ತೀರಾ ಕಡಿಮೆ ಬೆಲೆಯದೆನಿಸಿ ನಾನಾಗಿಯೇ ನೂರು ರೂ ಕೊಟ್ಟು ಅಶೋಕನೊಂದಿಗೆ ಹೊರನಡೆದೆ. ಏನಾಶ್ಚರ್ಯ! ತೊಡೆಯ ನೋವು—ಸೆಳೆತ ಬಾಧಿಸುತ್ತಿಲ್ಲ! ನನ್ನ ಖುಷಿಗೆ ಪಾರವೇ ಇಲ್ಲದಂತಾಗಿಹೋಯಿತು! ಬೆಟ್ಟದಂತೆ ಬಂದದ್ದು ಮಂಜಿನಂತೆ ಕರಗಿಹೋಯ್ತಲ್ಲೋ ಅಶೋಕಾ ಎಂದು ನಾನು ಸಂಭ್ರಮಿಸಿದರೆ ತಾನು ಹೇಳಿದ ವೈದ್ಯದಿಂದ ಗುಣವಾದದ್ದಕ್ಕೆ ಅಶೋಕನೂ ಹೆಮ್ಮೆಯಿಂದ ಬೀಗುತ್ತಿದ್ದ! ಆದರೆ ಮುಂದಿನ ಇಪ್ಪತ್ತು ಗಂಟೆಗಳೊಳಗೆ ಮತ್ತೆ ವಕ್ಕರಿಸಿಕೊಂಡು ಕಾಡತೊಡಗಿದ ನೋವು ಎಲ್ಲಾ ಸಂತಸ—ಹೆಮ್ಮೆಗಳನ್ನೂ ನುಂಗಿಹಾಕಿಬಿಟ್ಟಿತು!

ಆನಂತರ ಮತ್ತೆ ಕೆಲ ಸ್ನೇಹಿತರ ಸಲಹೆಯ ಮೇರೆಗೆ ಪ್ರಯತ್ನ ಪಟ್ಟದ್ದು ಐಸ್ ಚಿಕಿತ್ಸೆ. ಟೇಬಲ್ ಮೇಲೆ ಮಲಗಿಸಿ ಐಸ್ ಗಡ್ಡೆಗಳ ಚೀಲಗಳನ್ನು ದೇಹದ ಮೇಲೆಲ್ಲಾ ಚಲಿಸುತ್ತಾ ನೀವುತ್ತಾ ನೀಡುವ ವಿಶಿಷ್ಟ ಚಿಕಿತ್ಸೆಯಿದು. ತಣುಪೆಂದರೆ ಮೊದಲೇ ಕಿಟಾರೆನ್ನುವ ನನಗೆ ಈ ಐಸ್ ಪ್ಯಾಕ್ ಗಳ ಚಿಕಿತ್ಸೆಯನ್ನು ಸಹಿಸಿಕೊಳ್ಳಲು ಅಸಾಧ್ಯವಾಗಿ ದಾರುಣವಾಗಿ ಚೀರಿಟ್ಟುಬಿಟ್ಟೆ. ನನ್ನ ಚೀರಾಟವನ್ನು ತಪ್ಪಾಗಿ ಅರ್ಥೈಸಿಕೊಂಡ ಐಸ್ ವೈದ್ಯರು ನನ್ನ ಸ್ನೇಹಿತರ ಬಳಿ,”ಪ್ರಭು ಅವರಿಗೆ ಸಿಕ್ಕಾಪಟ್ಟೆ ತೊಂದರೆಗಳಿವೆ ಅಂತ ನನಗನ್ನಿಸ್ತಿದೆ..ಈ ವ್ಯಾಧಿಗಳನ್ನ ಬೇಗ ಗುಣಪಡಿಸಿಕೊಳ್ಳದೇ ಹೋದರೆ ಹೆಚ್ಚು ದಿನ ಬಾಳಿಕೆ ಬರೋಲ್ಲ” ಎಂದಿದ್ದರಂತೆ!

ಹೀಗೆ ಯಾವ ಯಾವ ಮಾರ್ಗದಿಂದಲೂ ನೋವಿಗೆ ಪರಿಹಾರವೇ ಸಿಗದೇ ನೊಂದು ಬೆಂದು ಬಸವಳಿದು ಹೋಗಿದ್ದ ನನ್ನನ್ನು ಒಂದು ಬಗೆಯ ಹತಾಶೆ ಆವರಿಸಿಕೊಂಡುಬಿಟ್ಟಿತು. ಒಂದು ದಿನವೂ ಬಿಡುವಿಲ್ಲದಂತೆ ಶೂಟಿಂಗ್ ನಡೆಯುತ್ತಿದೆ; ನನಗೋ ನೆಟ್ಟಗೆ ನಡೆಯಲೂ ಆಗದಂತಹ ಕರುಣಾಜನಕ ಸ್ಥಿತಿ! ಆ ಸಂದರ್ಭದಲ್ಲೇ ನಮ್ಮ ಊರಿನಿಂದ ಬಂದಿದ್ದ ಗೆಳೆಯನೊಬ್ಬ ಸಿಕ್ಕಿ ನನ್ನ ತೊಂದರೆಯ ಬಗ್ಗೆ ಕೇಳಿ ತಿಳಿದು, “ಅಯ್ಯೋ! ಇಷ್ಟೇನಾ! ಅದಕ್ಯಾಕೋ ಇಷ್ಟು ಪರದಾಡ್ತಿದೀಯಾ! ದಿನಾ ಚಾಪೆ ಮೇಲೆ ಮಲಕ್ಕೋ. ದಿಂಬು ಇಟ್ಟುಕೋಬೇಡ. ಎಂಥಾ ನೋವಿದ್ರೂ ಮಾಯ ಆಗುತ್ತೆ” ಅಂದ! ಸಲಹೆಗಳನ್ನು ಕೇಳಿ ಕೇಳಿ ಕಾರ್ಯರೂಪಕ್ಕೆ ತಂದು ತಂದು ಬಾರಿಬಾರಿಯೂ ಸೋತಿದ್ದ ನನಗೆ ಅವನ ಮಾತಿನಲ್ಲಿ ವಿಶ್ವಾಸವೇನೂ ಮೂಡಲಿಲ್ಲ. ಆದರೂ ಈ ಚಿಕಿತ್ಸೆಗೆ ಖರ್ಚು ಮಾಡಿ ಕಳಕೊಳ್ಳುವುದೇನೂ ಇಲ್ಲ; ಅಗತ್ಯವಿರುವ ಚಾಪೆಯೂ ಮನೆಯಲ್ಲೇ ಇದೆ; ಪ್ರಯತ್ನ ಪಟ್ಟೇ ಬಿಡೋಣ ಎಂದು ಅಂದಿನಿಂದಲೇ ದಿಂಬಿಲ್ಲದೇ ಚಾಪೆಯ ಮೇಲೆ ಮಲಗತೊಡಗಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಮೂರನೆಯ ದಿನಕ್ಕೇ ನೋವು ಮಾಯ!! ಅದುವರೆಗೆ ಇದ್ದ ನೋವು ತಾನಾಗಿಯೇ ಆಯಸ್ಸು ತೀರಿ ಮಾಯವಾಯಿತೋ, ನಿಜಕ್ಕೂ ಚಾಪೆಯದೇ ಮಾಂತ್ರಿಕ ಸ್ಪರ್ಶವೋ ಒಂದೂ ಅರ್ಥವಾಗದ ಅಯೋಮಯ ಸ್ಥಿತಿ ನನ್ನದು! ಮತ್ತೆ ಒಂದೆರಡು ದಿನಗಳಲ್ಲಿ ನೋವು ಮರುಕಳಿಸುವ ಭಯವೂ ನನಗಿತ್ತು. ಆದರೂ ಹಾಗೇನಾಗಲಿಲ್ಲ. ನೋವಿನಿಂದ ಸಂಪೂರ್ಣ ಮುಕ್ತಿ ದೊರಕಿಯೇಬಿಟ್ಟಿತು!

ಈಗಲೂ ಆಗೀಗೊಮ್ಮೆ ಆ ತರಹದ ಸೆಳೆತಗಳು ನನ್ನನ್ನು ಕಾಡುವುದುಂಟು. ಚಿಕಿತ್ಸೆಗಾಗಿ ನಮ್ಮ ಮನೆಯಲ್ಲಿ ಚಾಪೆ ಸದಾ ಸಿದ್ಧವಾಗಿರುತ್ತದೆ!!!

‍ಲೇಖಕರು avadhi

November 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: