ಶ್ರೀನಿವಾಸ ಪ್ರಭು ಅಂಕಣ– ನನ್ನನ್ನು ಬಸ್ ನಿಂದ ಕೆಳಗಿಳಿಸಿದರು.

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

7

ಬಸವಾಪಟ್ಟಣದಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡಲು ಅಣ್ಣ ಪ್ರಯತ್ನಿಸಿದರೂ ಅಂಥಾ ಯಶಸ್ಸೇನೂ ಕಾಣಲಿಲ್ಲ. ಅಸಲಿಗೆ ಅವರ ವ್ಯಕ್ತಿತ್ವಕ್ಕೆ ವ್ಯಾಪಾರ-ವಹಿವಾಟುಗಳು ಹೊಂದುವ ಸಂಗತಿಗಳೇ ಆಗಿರಲಿಲ್ಲ. ಇದರ ಜತೆಗೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲೇಬೇಕೆಂದು ತೀರ್ಮಾನಿಸಿಕೊಂಡಿದ್ದ ಅಣ್ಣ, ನಾಗರಾಜ ಭಾವ ಹಾಗೂ ಅವರ ಸೋದರಮಾವನವರಾದ ಸುಬ್ಬಕೃಷ್ಣ ಮಾವಯ್ಯನವರ ನೆರವಿನಿಂದ ಬೆಂಗಳೂರಿಗೆ ಬಂದು ಅಂಗಡಿ ವ್ಯಾಪಾರ ಶುರು ಮಾಡಿದರು.

ಮೊದಲಿಗೆ ನಳಿನಿ ಅಕ್ಕ ಹಾಗೂ ಕುಮಾರಣ್ಣಯ್ಯನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿದರು. ನನ್ನ ತಂಗಿ ಪದ್ಮಿನಿ ಚಿಕ್ಕವಳಿದ್ದುದರಿಂದ ಅಮ್ಮ ಅವಳ ಜತೆಗೆ ಬಸವಾಪಟ್ಟಣದಲ್ಲೇ ಉಳಿದರು. ನಾನು ಮೊದಲಿನಂತೆ ಕೊಣನೂರಿನಲ್ಲಿ, ಚಿಕ್ಕಜ್ಜನ ಮನೆಯಲ್ಲಿ. ಆಗ ನಾನು ಓದುತ್ತಿದ್ದುದು ಏಳನೇ ಇಯತ್ತೆಯಲ್ಲಿ.

ತರಗತಿಯಲ್ಲಿ ಕನ್ನಡ ಮೇಷ್ಟ್ರು (ಈಗ ಅವರ ಹೆಸರು ಮರೆತಿದೆ) ಪಾಠ ಮಾಡುತ್ತಿದ್ದರು… ಸೋಮೇಶ್ವರ ಶತಕ. ಕನ್ನಡ ತರಗತಿಯೊಂದೇ ನನಗೆ ಯಾವಾಗಲೂ ಇಷ್ಟವಾಗುತ್ತಿದ್ದುದು. ಆ ಮೇಷ್ಟ್ರೂ ಸಹಾ ಕೊಂಚ ರಾಗವಾಗಿ ಹಾಡಿಕೊಂಡೇ ಪದ್ಯಭಾಗಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು. ಉಳಿದ ಯಾವ ಮೇಷ್ಟ್ರಿಗೂ ಪಾಠ ಮಾಡುವುದಕ್ಕೇ ಬರುವುದಿಲ್ಲ, ಅದಕ್ಕೇ ಅದ್ಯಾವ ವಿಷಯಗಳೂ ನನಗೆ ಅರ್ಥವಾಗುವುದಿಲ್ಲ ಅನ್ನುವುದು ನನ್ನ ದೃಢ ನಂಬಿಕೆಯಾಗಿತ್ತು.

‘ಅವಿನೀತಂ ಮಗನೇ, ಅಶೌಚಿ ಮುನಿಯೇ, ಬೈವಾಕೆ ತಾಂ ಪತ್ನಿಯೇ, ಸವಿಗೆಟ್ಟನ್ನವದು ಊಟವೇ, ಕುಜನರೊಳ್ ಕೂಡಿರ್ಪವಂ ಮಾನ್ಯನೇ, ಬವರಕ್ಕಾಗದವ ಬಂಟನೇ, ಎಡರಿಗಂ ತಾನಾಗದವ ನಂಟನೇ, ಶಿವನಂ ಬಿಟ್ಟವ ಶಿಷ್ಟನೇ ಹರಹರಾ ಶ್ರೀ ಚೆನ್ನ ಸೋಮೇಶ್ವರ’ ಎಂದು ಮೇಷ್ಟ್ರು ತಮ್ಮದೇ ಧಾಟಿಯಲ್ಲಿ ಹಾಡಿಕೊಂಡು ವಿವರಿಸುತ್ತಿದ್ದಾರೆ… ಕುಜನರೊಳ್ ಕೂಡಿರ್ಪವಂ ಮಾನ್ಯನೇ.. ಕೆಟ್ಟ ಜನರ ಸಹವಾಸ ಮಾಡಿದವನಿಗೆ ಗೌರವ ಪ್ರಾಪ್ತವಾಗುವುದುಂಟೇ..ˌಎಂದು ಮೇಷ್ಟ್ರು ಹೇಳುತ್ತಿದ್ದರೆ ನನ್ನ ಮನಸ್ಸು ಆ ಸಾಲಿನ ಭಾವವನ್ನು ನನಗೇ ಸಮೀಕರಿಸಿಕೊಂಡು ಮಂಥನ ನಡೆಸಿತ್ತು. ಚೆಲುವ… ಹಾಳು ಚೆಲುವ… ಮರಳುಗುಡ್ಡೆಯ ಆಟದ ಆವರಣಕ್ಕೆ ನಾಗಾಲೋಟದಿಂದ ಮನಸ್ಸು ಧಾವಿಸಿತು.

ಪ್ರತಿ ಸಂಜೆ ನಾವು ಏಳೆಂಟು ಹುಡುಗರು ಮರಳುಗುಡ್ಡೆಯ ಬಳಿ ಸೇರಿ ಆಡುತ್ತಿದ್ದೆವು. ಆಗಾಗ್ಗೆ ಅಲ್ಲಿಗೆ ನಮಗಿಂತ ಕೊಂಚ ಹಿರಿಯನೂ ಬಲಿಷ್ಠನೂ ಆಗಿದ್ದ ಚೆಲುವ ಆಟವಾಡಲು ಬರುತ್ತಿದ್ದ. ಅವನ ಹೆಸರಿನಲ್ಲಷ್ಟೇ ಚೆಲುವಿದ್ದದ್ದು. ನಮ್ಮೆಲ್ಲರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಅವನನ್ನು ಕಂಡರೆ ನಮಗಾರಿಗೂ ಇಷ್ಟವಿರಲಿಲ್ಲ. ಅವನನ್ನು ಯಾರಾದರೂ ವಿರೋಧಿಸಿದರೆ ಮುಲಾಜಿಲ್ಲದೆ ಹೊಡೆಯುತ್ತಿದ್ದ. ಬೇಸತ್ತು ಮನೆಗೆ ಹೊರಟರೆ ಕುತ್ತಿಗೆಗೇ ಕೈಹಾಕಿ, ‘ಮೆಟ್ರೆ ಹಿಚುಕಿ ಸಾಯಿಸಿಬಿಡ್ತೀನಿ’ ಎಂದು ಹೆದರಿಸಿ ಅಲ್ಲೇ ಉಳಿಸಿಕೊಳ್ಳುತ್ತಿದ್ದ.

‘ಬನ್ರೋ.. ನಿಮಗೆಲ್ಲಾ ಹೊಸ ಹೊಸ ವಿಷಯಗಳನ್ನ ಹೇಳಿಕೊಡ್ತೀನಿ! ಮಜಾ ಅಂದ್ರೆ ಮಜಾ!’ ಎಂದು ಗಾಳ ಹಾಕುತ್ತಿದ್ದ. ಅನಂತರ ವಿಚಿತ್ರ ಹಾವಭಾವಗಳೊಂದಿಗೆ, ‘ಮದುವೆ ಅಂದರೇನು, ಮದುವೆಯಾದವರು ಏನು ಮಾಡುತ್ತಾರೆ’ ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವರ್ಣಿಸುತ್ತಿದ್ದ. ಅವನ ಮಾತುಗಳನ್ನು ಕೇಳುತ್ತಿದ್ದರೆ ಒಂದುರೀತಿಯ ಕುತೂಹಲ.. ಒಂದು ರೀತಿಯ ಪುಳಕ… ಅರ್ಥವಾಗದಿದ್ದರೂ ಅರ್ಥ ಮಾಡಿಕೊಳ್ಳಬೇಕೆನ್ನುವ ತವಕ…! ‘ಥೂ.. ಇದೆಲ್ಲಾ ಕೆಟ್ಟದು… ಇದನ್ನೆಲ್ಲಾ ಕೇಳಬಾರದು’ ಎಂದು ಒಳಮನಸ್ಸು ಚೀರುತ್ತಿದ್ದರೂ ಕೇಳಲೇ ಬೇಕಾಗಿದ್ದ ಅನಿವಾರ್ಯ…

ಮುಗ್ಧಮನಸ್ಸಿನ ಮೇಲಿನ ಈ ಸತತ ಪ್ರಹಾರ ನನ್ನನ್ನು ಎಂಥ ಮಾನಸಿಕ ಕ್ಷೋಭೆ-ತಲ್ಲಣಕ್ಕೆ ದೂಡಿಬಿಟ್ಟಿತ್ತೆಂದರೆ ಸೂತ್ರ ಹರಿದ ಪಟದ ಹಾಗೆ ಮನಸ್ಸು ಹೊಯ್ದಾಡುತ್ತಿತ್ತು. ಆಲೋಚನೆಯ ದಿಕ್ಕುಗಳೇ ಸಂಪೂರ್ಣವಾಗಿ ಬದಲಾಗಿ ಹೋಗಿದ್ದವು. ನೋಡುವ ದೃಷ್ಟಿಯಲ್ಲಾಗಿದ್ದ ವ್ಯತ್ಯಾಸವನ್ನು ಎದುರಿಗಿದ್ದವರು ಗುರುತಿಸಿ ಸಂಕೋಚ ಪಟ್ಟುಕೊಂಡದ್ದೂ ಉಂಟು. ಇದೆಲ್ಲಕ್ಕಿಂತ ಹೆಚ್ಚು ನನ್ನನ್ನು ಕಾಡಿದ್ದು ‘ನಾನೇನೋ ತಪ್ಪು ಮಾಡುತ್ತಿದ್ದೇನೆ.. ಇದು ಸರಿಯಲ್ಲ ಅನ್ನುವ ಭಾವನೆ. ಮೊದಲೇ ಕಾಡುತ್ತಿದ್ದ ಕೀಳರಿಮೆ-ಸಂಕೋಚ-ನಾಚಿಕೆಗಳ ಜತೆಗೆ ಈ ಅಪರಾಧಿ ಭಾವವೂ ಸೇರಿಕೊಂಡು ನನ್ನ ಮನಸ್ಸು ಜರ್ಝರಿತವಾಗಿ ಹೋಯಿತು.

ವಾರಾಂತ್ಯಕ್ಕೆ ನಾನು ಬಸವಾಪಟ್ಟಣಕ್ಕೆ ಹೋಗಿ ಬರುತ್ತಿದ್ದೆನಲ್ಲಾ, ನನ್ನ ಗ್ರಹಚಾರಕ್ಕೆ ಅಲ್ಲೊಬ್ಬ ಚೆಲುವ ನನಗೆ ಗಂಟುಬಿದ್ದಿದ್ದ. ಕೊಣನೂರಿನ ಚೆಲುವನಿಗೂ ಇವನಿಗೂ ಅಂಥ ವ್ಯತ್ಯಾಸವೇನೂ ಇರಲಿಲ್ಲ. ನಟ್ಟುನಡು ಮಧ್ಯಾಹ್ನದ ಹೊತ್ತು ಒಂದಷ್ಪು ಗುಪ್ತಸ್ಥಳಗಳಲ್ಲಿ ಕೂರಿಸಿಕೊಂಡು ನನಗೆ ‘ಜ್ಞಾನದಾನ’ ಮಾಡುತ್ತಿದ್ದ ಈ ಚೆಲುವ.

ಹೀಗೆ ಗಳಿಸಿಕೊಂಡ ಜ್ಞಾನವನ್ನು ಪ್ರದರ್ಶಿಸಲು ಹೋಗಿ, ಒಂದಷ್ಟು ಚೇಷ್ಟೆ ಮಾಡಿ, ಅದು ದೊಡ್ಡವರಿಗೆ ಗೊತ್ತಾಗಿ ಅವರು ನನಗೆ ಪೋಲಿಮುಕ್ಕ ಎಂಬ ಬಿರುದನ್ನು ದಯಪಾಲಿಸಿದ್ದೂ ಆಯಿತು! ವಿಜಯಕ್ಕ—ಅಮ್ಮನ ಕಿವಿಗೂ ಈ ಸುದ್ದಿ ತಲುಪಿ ಅವರು, ‘ಎಂಥವರ ಮಗ ನೀನು… ಹೀಗೆಲ್ಲಾ ಕೆಟ್ಟ ಸಹವಾಸಕ್ಕೆ ಬಿದ್ದು ಪೋಲಿಹುಡುಗ ಅನ್ನಿಸಕೋಬಾರದು.. ಚೆನ್ನಾಗಿ ಓದಿ ಒಳ್ಳೇ ಹೆಸರು ತೊಗೋಬೇಕು’ ಎಂದು ಸಾಕಷ್ಟು ಬುದ್ಧಿ ಹೇಳಿದರು. ನಾನು ಮಂಕಾಗಿ ಕುಳಿತುಕೊಂಡು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ… ಕನ್ನಡ ಮೇಷ್ಟ್ರ ‘ಕುಜನರೊಳ್ ಕೂಡಿರ್ಪವಂ ಮಾನ್ಯನೇ’ ಪದ್ಯದ ವಿವರಣೆ ನಡೆದೇ ಇತ್ತು.

ಒಂದು ಸಂಜೆ ಆಟ ಮುಗಿಸಿ ಮನೆಗೆ ಬಂದು ಓದಿನ ಶಾಸ್ತ್ರ ಮಾಡಿ ಊಟ ಮಾಡಿ ಮಲಗಿದ್ದಾಗ ಚಿಕ್ಕಜ್ಜ— ಅಜ್ಜಿ ಪಿಸುದನಿಯಲ್ಲಿ ಮಾತಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂತು. ನಾನೇ ಮಾತಿನ ಕೇಂದ್ರವಾಗಿದ್ದರಿಂದ ಕುತೂಹಲದಿಂದ ಅವರಿಗೆ ಗೊತ್ತಾಗದಂತೆ ಅವರ ಮಾತಿಗೆ ಕಿವಿಯಾದೆ. ಚಿಕ್ಕಜ್ಜ ಹೇಳುತ್ತಿದ್ದರು: ‘ಈಚೆಗೆ ಯಾಕೋ ಪ್ರಭೂಗೆ ಕೆಟ್ಟ ಸಹವಾಸ ಜಾಸ್ತಿಯಾಗಿಬಿಟ್ಟಿದೆ. ಸರಿಯಾಗಿ ಬುದ್ಧಿ ಹೇಳಬೇಕು.

ಇವತ್ತು ಆ ಅಯೋಗ್ಯ ಚೆಲುವ ಏನು ಮಾಡಿದಾನೆ ಗೊತ್ತಾ? ಗೋಪಾಲಯ್ಯನ ಮಗ ಕಿಶೊರ ಇದಾನಲ್ಲಾ, ಅವನಿಗೆ ‘ಲೋ ಕಿಶೋರ, ಹೋಗಿ ನಿನ್ನ ತಂಗೀನ ಕರಕೊಂಡು ಬಾರೋ.. ನಾನೂ ಅವಳೂ ಗಂಡ ಹೆಂಡತೀರಾಗಿ ಮದುವೆ ಆಟ ಆಡ್ತೀವಿ.. ನೀವೆಲ್ಲಾ ನಮ್ಮ ಮದುವೆ ಮಾಡಿಸೋರಂತೆ’ ಅಂದನಂತೆ. ಕಿಶೋರ ಅತ್ತುಕೊಂಡು ಮನೇಗೆ ಓಡಿಹೋಗಿ ಗೋಪಾಲಯ್ಯನೋರಿಗೆ ವಿಷಯ ಹೇಳಿದನಂತೆ.

ನಮ್ಮ ಪ್ರಭೂನೂ ಅಲ್ಲೇ ಇದ್ದನಂತೆ.. ಯಾಕೋ ತುಂಬಾ ಭಯ ಆಗ್ತಿದೆ ನಂಗೆ. ನೀನೂ ಸ್ವಲ್ಪ ನಿಗವಾಗಿರು. ಎಲ್ ಎಸ್ ಪರೀಕ್ಷೆ ಒಂದು ಒಳ್ಳೇ ಮಾರ್ಕ್ಸ್ ತೊಗೊಂಡು ಪಾಸ್ ಮಾಡಿಬಿಟ್ರೆ ಸಾಕು’ ಅಂದರು. ಚಿಕ್ಕಜ್ಜಿಯೂ ತಲೆಯಾಡಿಸಿದರು. ಅವರ ಸಂಕಟ ನೋಡಿ ನನಗೂ ಯಾಕೋ ಹೊಟ್ಟೆ ತೊಳಸಿಕೊಂಡು ಬಂದಂತಾಯಿತು. ನೂರಾರು ಯೋಚನೆಗಳು— ಭಾವನೆಗಳು ನುಗ್ಗಿ ಬಂದು ಅವುಗಳ ರಭಸಕ್ಕೆ ಮನಸ್ಸು ಬಸವಳಿದು ಹೋಗಿ ಹಾಗೇ ನಿದ್ರೆಗೆ ಜಾರಿದೆ.

ಒಂದಷ್ಟು ದಿನಗಳು ಕಳೆದಮೇಲೆ ಅಣ್ಣ ಎಲ್ಲರನ್ನೂ ಬೆಂಗಳೂರಿಗೆ ಕರೆಸಿಕೊಳ್ಳುವುದೆಂದು ತೀರ್ಮಾನ ಮಾಡಿದರು. ನಾನು ಮಾತ್ರ ಎಲ್ ಎಸ್ ಪರೀಕ್ಷೆ ಮುಗಿಸಿಕೊಂಡು, ಹೈಸ್ಕೂಲ್ ಗೆ ಬೆಂಗಳೂರಿಗೆ ಹೋಗಿ ಸೇರುವುದು ಎಂಬುದು ಅಣ್ಣನ ಅಭಿಪ್ರಾಯವಾಗಿತ್ತು. ಎಲ್ಲರೂ ಬೆಂಗಳೂರಿಗೆ ಹೋಗಿ ಸುಖವಾಗಿರುತ್ತಾರೆ.. ನಾನು ಮಾತ್ರ ಈ ಕೊಣನೂರಿನಲ್ಲಿ ಕೊಳೆಯಬೇಕು! ನಿರಾಸೆಯಿಂದ ಮನಸ್ಸು ಕುದ್ದುಹೋಯಿತು. ಹೊರಡುವ ಮೊದಲು ಎರಡು ದಿನ ಜೊತೆಗಿರಲಿ ಎಂದು ಅಮ್ಮ ಬಸವಾಪಟ್ಟಣಕ್ಕೆ ಕರೆಸಿಕೊಂಡಿದ್ದರು.

ನಾನೂ ಬೆಂಗಳೂರಿಗೆ ಬಂದೇ ಬರುತ್ತೇನೆ ಎಂದು ನಾನು ರಚ್ಚೆ ಹಿಡಿದುಬಿಟ್ಟೆ. ಯಾರು ಯಾರು ಎಷ್ಟು ಸಮಾಧಾನ ಹೇಳಿದರೂ ನಾನು ಮಾತ್ರ ಹಠ ಬಿಡಲಿಲ್ಲ. ಕೊನೆಗೆ ಅಣ್ಣ,ಆಯ್ತು ಬಿಡು… ನಿನ್ನನ್ನೂ ಕರಕೊಂಡು ಹೋಗ್ತೀನಿ.. ಅಲ್ಲಿ ಇನ್ನೊಂದು ವರ್ಷ ಏಳನೇ ಕ್ಲಾಸೇ ಓದುವಿಯಂತೆ ಅಂದರು. ಪರವಾಗಿಲ್ಲ,ಇನ್ನೊಂದು ವರ್ಷ ಅದನ್ನೇ ಓದ್ತೀನಿ. ನಾನು ಬೆಂಗಳೂರಿಗೆ ಬರಬೇಕು ಅಷ್ಟೇ ಎಂದೆ ಖಡಾಖಂಡಿತವಾಗಿ! ಸರಿˌ ಈಗ ಮಲಕ್ಕೊ.

ಬೆಳಿಗ್ಗೆ ಬೇಗ ಏಳಬೇಕು ಎಂದರು ಅಮ್ಮ. ಮಲಗಿದರೂ ನನಗೇನೋ ಅನುಮಾನ… ಇವರು ನನ್ನನ್ನು ಕರೆದುಕೊಂಡು ಹೋಗುವುದಿಲ್ಲ ಎಂದು! ನನ್ನ ಅನುಮಾನವೇ ನಿಜವಾಯಿತು! ಯಥಾಪ್ರಕಾರ ಕದ್ದು ಅವರ ಮಾತು ಕೇಳಿಸಿಕೊಂಡ ನನಗೆ ಅರ್ಥವಾದದ್ದಿಷ್ಟು: ಬೆಂಗಳೂರು ಬಸ್ಸು ಕೊಣನೂರು ಮಾರ್ಗವಾಗಿ ಬಸವಾಪಟ್ಟಣಕ್ಕೆ ಬಂದು ಮುಂದೆ ಸಾಗುತ್ತಿತ್ತು.

ಬೆಳಿಗ್ಗೆ ಬೇಗ ಹೊರಟು ಮೊದಲ ಬಸ್ಸಿಗೆ ಕೊಣನೂರಿಗೆ ಹೋಗಿ ಬೆಂಗಳೂರು ಬಸ್ ಹತ್ತಿಬಿಟ್ಟರೆ ಸೀಟ್ ಗಳೂ ಆರಾಮಾಗಿ ಸಿಗುತ್ತವೆ; ನನಗೂ ಗೊತ್ತಾಗದ ಹಾಗೆ ಹೊರಟುಬಿಡಬಹುದು! ಅಕಸ್ಮಾತ್ ಆಮೇಲೆ ನಾನೇನಾದರೂ ರಂಪ ಮಾಡಿದರೂ ಸಮಾಧಾನ ಪಡಿಸಲು ವಿಜಯಕ್ಕ ಇದ್ದಾಳೆ! …. ಛೇ! ಎಂಥಾ ಮೋಸ! ಇರಲಿ,ಇವರಿಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿಕೊಂಡೆ.

ಮರುದಿನ ಬೆಳಗಿನ ಜಾವಕ್ಕೇ ಎಲ್ಲರೂ ಎದ್ದು ಮೆಲ್ಲಗೆ ನನಗೆ ಅರಿವಾಗದಂತೆ ಹೋಗುತ್ತಿದ್ದೇವೆಂದು ಭ್ರಮಿಸಿಕೊಂಡು ಕೊಣನೂರು ಬಸ್ ಗೆ ಹೊರಟರು. ಎಲ್ಲವನ್ನೂ ಮಲಗಿಕೊಂಡೇ ಗಮನಿಸಿಕೊಳ್ಳುತ್ತಿದ್ದ ನಾನು ಅವರು ಹೊರಟ ತಕ್ಷಣ ಕಾರ್ಯಪ್ರವೃತ್ತನಾದೆ. ಸ್ವಲ್ಪ ಹೊತ್ತು ಬಿಟ್ಟು ಯಾರಿಗೂ ಸುಳಿವು ಕೊಡದ ರೀತಿಯಲ್ಲಿ ಬಸವಾಪಟ್ಟಣದ ಬಸ್ ಸ್ಟ್ಯಾಂಡಿಗೆ ಹೋಗಿ ಯಾರಿಗೂ ಕಾಣದ ಜಾಗದಲ್ಲಿ ಅವಿಸಿಟ್ಟುಕೊಂಡೆˌ. ಸುಮಾರು ಹೊತ್ತಾದ ಮೇಲೆ ಬೆಂಗಳೂರು ಎಂಬ ಫಲಕ ಹೊತ್ತಿದ್ದ ಕೆಂಪುಬಸ್ ದೂರದಲ್ಲಿ ಬರುತ್ತಿರುವುದು ಕಾಣಿಸಿತು.

ಇಳಿಯುವವರನ್ನು ಇಳಿಸಿ ಹತ್ತುವವರನ್ನು ಮೇಲೇರಿಸಿಕೊಂಡು ಇನ್ನೇನು ಬಸ್ ಹೊರಡಬೇಕು, ಅಷ್ಟರಲ್ಲಿ ನಾನು ಮರೆಯ ಜಾಗದಿಂದ ಆಚೆ ಬಂದು ಬಸ್ಸಿನ ಒಳಗೆ ನುಗ್ಗಿ ಜನರ ಮಧ್ಯೆ ಸೇರಿಕೊಂಡುಬಿಟ್ಟೆ. ಬಸ್ ಹೊರಟಿತು. ಅಣ್ಣ-ಅಮ್ಮ ಎಲ್ಲರೂ ಮುಂದೆ ಕೂತಿರುವುದು ಕಾಣಿಸಿತು. ಬಸ್ ಒಂದಷ್ಟು ದೂರ ಹೋಗುವ ತನಕ ಸುಮ್ಮನಿದ್ದು ಆಮೇಲೆ ಜನಗಳ ಮಧ್ಯದಿಂದ ತೂರಿಕೊಂಡು ಮುಂದೆ ಹೋಗಿ ಹಿಂದಿನಿಂದ ಅಣ್ಣಯ್ಯನ ಭುಜವನ್ನು ಮುಟ್ಟಿ ‘ಕುಮಾರಾ’ ಎಂದೆ.

ಹಿಂದೆ ತಿರುಗಿ ನೋಡಿದ ಅಣ್ಣಯ್ಯ ನನ್ನನ್ನು ನೋಡಿ ಗಾಬರಿಯಿಂದ ‘ಅಯ್ಯೋ! ಅಣ್ಣಾ.. ಪ್ರಭು ಬಸ್ ಹತ್ತಿಕೊಂಡು ಬಂದುಬಿಟ್ಟಿದಾನೆ!’ ಎಂದು ಚೀರಿದ. ತಕ್ಷಣವೇ ಹೋಲ್ಡಾನ್ ಹೋಲ್ಡಾನ್ ಎಂದು ಕೂಗುತ್ತಾ ಬಸ್ ಅನ್ನು ನಿಲ್ಲಿಸಿದರು. ಏನು ಸಾರ್ ಅದು ನಿಮ್ಮ ರಗಳೆ ಎಂದು ಕಂಡಕ್ಟರ್ ಸಿಡುಕಿದ. ಏನು ಮಾಡುವುದೆಂದು ಯಾರಿಗೂ ತೋಚುತ್ತಿಲ್ಲ. ಅಣ್ಣ ಅಮ್ಮ ಅಸಹಾಯಕರಾಗಿ ನೋಡುತ್ತಿದ್ದರೆ ನಾನು ಗೆದ್ದ ಖುಷಿಯಿಂದ ಬೀಗುತ್ತಿದ್ದೆ! ಅಷ್ಟರಲ್ಲಿ ಬಸ್ ನಲ್ಲಿದ್ದ ಅಣ್ಣನ ಶಿಷ್ಯರೊಬ್ಬರು, ‘ಚಿಂತೆ ಮಾಡಬೇಡಿ ಮೇಷ್ಟ್ರೇ.. ನಾನಿಲ್ಲೇ ಕೇರಳಾಪುರಕ್ಕೆ ಹೋಗಬೇಕು.. ನಿಮ್ಮ ಹುಡುಗನ್ನ ಬಸವಾಪಟ್ಟಣಕ್ಕೆ ಕರಕೊಂಡು ಹೋಗಿ ಮನೆ ತಲುಪಿಸಿ ಮುಂದಿನ ಬಸ್ ಗೆ ಊರಿಗೆ ಹೋಗ್ತೀನಿ’ ಎಂದು ನನ್ನನ್ನು ಬಸ್ ನಿಂದ ಕೆಳಗಿಳಿಸಿದರು.

ಪರೀಕ್ಷೆ ಮುಗೀತಿದ್ದ ಹಾಗೆ ಕರಕೊಂಡು ಹೋಗ್ತೀವಿ.. ಬೇಜಾರು ಮಾಡಿಕೋಬೇಡ ಎಂದು ಪಾಪ ಅಮ್ಮ ಕೂಗಿ ಹೇಳುತ್ತಿದ್ದರೂ ನಾನು ಕೇಳಿಸದವನಂತೆ ಒಂದೂ ಮಾತಾಡದೆ ಗಡಿಗೆ ಮುಖ ಹೊತ್ತುಕೊಂಡು ಕೆಳಗಿಳಿದೆ. ಅಣ್ಣನ ಶಿಷ್ಯರು ಅಲ್ಲಿ ಯಾರದೊ ಸೈಕಲ್ ತೆಗೆದುಕೊಂಡು ನನ್ನನ್ನು ಕೂರಿಸಿಕೊಂಡು ಬಸವಾಪಟ್ಟಣಕ್ಕೆ ಕರೆದುಕೊಂಡು ಹೋದರು. ಹೀಗೆಲ್ಲಾ ಹಠ ಮಾಡಬಾರದು, ಒಳ್ಳೆಯ ಹುಡುಗನಾಗಿರಬೇಕು ಎಂದು ದಾರಿಯುದ್ದಕ್ಕೂ ಅವರ ಉಪದೇಶ ಬೇರೆ! ಛೇ! ಬೇರೆ ದಾರಿಯೇ ಇಲ್ಲ! ಮತ್ತಷ್ಟು ದಿವಸ ಈ ಚೆಲುವರ ಕಾಟ ಸಹಿಸಿಕೊಳ್ಳಬೇಕು… ಪೋಲಿಮುಕ್ಕ-ದಡ್ಡ ಶಿಖಾಮಣಿ ಇತ್ಯಾದಿ ಬೈಗುಳಗಳನ್ನು ಕೇಳಬೇಕು.. ಹಳೇ ಮ್ಯಾಚಸ್ ಗಳನ್ನಿಟ್ಟುಕೊಂಡೇ ಆಟ ಆಡಬೇಕು… ಪರೀಕ್ಷೆಗೆ ಓದಬೇಕು… ಥೂ!!!!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: