ಶ್ರೀನಿವಾಸ ಪ್ರಭು ಅಂಕಣ – ನನ್ನ ಅಭಿನಯವನ್ನು ಅವರು ಮೆಚ್ಚಿಕೊಂಡು ಬೆನ್ನು ತಟ್ಟಿದ್ದು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

79

ಇದೇ ಕಾಲಘಟ್ಟದಲ್ಲಿಯೇ—ಅಂದರೆ 1987ರ ಆರಂಭದ ದಿನಗಳಲ್ಲಿಯೇ ಸಮಾನಾಂತರವಾಗಿ ಘಟಿಸಿದ ಕೆಲ ಮುಖ್ಯ ಸಂಗತಿಗಳನ್ನು ಈಗ ನೆನಪಿಸಿಕೊಳ್ಳುತ್ತೇನೆ. ಎಲ್ಲಕ್ಕಿಂತ ಮುಖ್ಯವಾದುದು ಗಿರೀಶ್ ಕಾರ್ನಾಡರ ‘ಕನಕ ಪುರಂದರ’ ಚಿತ್ರ.

ಒಂದು ದಿನ ಕಾನಕಾನಹಳ್ಳಿ ಗೋಪಿಯವರು ನನ್ನನ್ನು ಭೇಟಿಯಾಗಲು ದೂರದರ್ಶನ ಕೇಂದ್ರಕ್ಕೆ ಬಂದರು. ಗೋಪಿಯವರದು ಒಂದು ರೀತಿಯಲ್ಲಿ ‘ಸರ್ವಾಂತರ್ಯಾಮಿ’ ವ್ಯಕ್ತಿತ್ವ ಎನ್ನಬೇಕು! ಅಪರೂಪದ ವಸ್ತುಗಳನ್ನು,ಪುರಾತನ ಕಾಲದ ಪಾತ್ರೆ ಪಡಗ—ವಸ್ತು ವಿಶೇಷಗಳನ್ನು ಸಂಗ್ರಹಿಸುವ ಹವ್ಯಾಸವಿದ್ದ ಗೋಪಿಯವರು ಚಿತ್ರರಂಗದವರಿಗೆ—ಅದರಲ್ಲೂ ಚಾರಿತ್ರಿಕ ಹಿನ್ನೆಲೆಯ ಚಿತ್ರಗಳನ್ನು ರೂಪಿಸುವವರಿಗೆ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿದ್ದರು.ಕನ್ನಡ ಸಾಂಸ್ಕೃತಿಕ ಲೋಕದ ಎಲ್ಲ ಕ್ಷೇತ್ರಗಳ ಸಾಧಕರಿಗೂ ಗೋಪಿ ಚಿರಪರಿಚಿತರಾಗಿದ್ದವರು.

ಒಮ್ಮೆ YNK ಅವರು,’ಆ ಗೋಪೀನ ನೋಡಿ..antiques ಸಂಗ್ರಹ ಮಾಡ್ತಾ ಮಾಡ್ತಾ ತಾನೇ ಒಂದು antique ಥರಾ ಆಗ್ಬಿಟ್ಟಿದಾನೆ! ಅವನ scooter ಕೂಡಾ ಬಹುಶಃ 18ನೇ ಶತಮಾನದ್ದಿರಬೇಕು!’ ಎಂದು ಪ್ರೀತಿಯಿಂದ ತಮಾಷೆ ಮಾಡುತ್ತಿದ್ದರು. ಅಂದು ಗೋಪಿ ನಮ್ಮ ಕೇಂದ್ರಕ್ಕೆ ಬಂದವರೇ ಅತ್ಯುತ್ಸಾಹದಿಂದ, ‘ಮಿ॥ಹ್ಯಾಮ್ಲೆಟ್, ನಿಮಗೆ ನಮ್ಮ ಸಾಂಪ್ರದಾಯಿಕ ವೇಷ ಹಾಕಿಸಿ 15ನೇ ಶತಮಾನಕ್ಕೆ ಕರಕೊಂಡು ಹೋಗೋಣ ಅಂತಿದೀನಿ.! ತಯಾರಿದೀರಾ?’ ಎಂದು ನುಡಿದು ಜೋರಾಗಿ ನಕ್ಕರು. “ಓಹೋ! ನಾನು ರೆಡಿ ಸರ್! ಹ್ಯಾಗೆ ಕರಕೊಂಡು ಹೋಗ್ತಿದೀರಾ? ನಿಮ್ಮ ಸ್ಕೂಟರ್ ನಲ್ಲೇನಾ?” ಎಂದು ನಾನೂ ನಗುತ್ತಾ ನುಡಿದೆ. ಮತ್ತಷ್ಟು ಜೋರಾಗಿ ನಕ್ಕ ಗೋಪಿಯವರು ನೇರ ವಿಷಯಕ್ಕೆ ಬಂದರು: ಗಿರೀಶ್ ಕಾರ್ನಾಡರು ಫಿಲ್ಮ್ಸ್ ಡಿವಿಷನ್ ಗಾಗಿ ‘ಕನಕ ಪುರಂದರ’ ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ; ಶಂಕರ್ ನಾಗ್ ಕನಕ ದಾಸರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ; ಪುರಂದರರ ಪಾತ್ರಕ್ಕೆ ಕಲಾವಿದನ ಅನ್ವೇಷಣೆ ನಡೆಯುತ್ತಿದೆ; ಗೋಪಿಯವರು ನನ್ನ ಹೆಸರನ್ನು ಗಿರೀಶರಿಗೆ ಸೂಚಿಸಿದ್ದಾರೆ! “ಗಿರೀಶ್ ಅವರು ಜನಾರ್ಧನ ಹೋಟಲ್ ನಲ್ಲಿ ಇಳಿದುಕೊಂಡಿದಾರೆ;ನೀವು ಇವತ್ತೇ—ಸಾಧ್ಯವಾದರೆ ಈಗಲೇ ಹೋಗಿ ಅವರನ್ನು ಒಂದ್ಸಲ ಭೇಟಿ ಮಾಡಿಬಿಡಿ..ಅವರಿಗೆ ಒಪ್ಪಿಗೆ ಆದರೆ ಮುಂದಿನ ವಾರದಿಂದಾನೇ ಶೂಟಿಂಗ್! ನೀವು ಹೂಂ ಅಂದರೆ ನನ್ನ ಸ್ಕೂಟರ್ ನಲ್ಲೇ ಈಗಲೇ ಕರಕೊಂಡು ಹೋಗಿಬಿಡ್ತೀನಿ!” ಎಂದು ಮತ್ತೆ ನಕ್ಕರು ಗೋಪಿ. ನನ್ನ ಮೆಚ್ಚಿನ ನಾಟಕಕಾರ—ನಟ—ನಿರ್ದೇಶಕನ ಚಿತ್ರದಲ್ಲಿ ನಟಿಸಲು ಅವಕಾಶ ಹುಡುಕಿಕೊಂಡು ಬಂದಿದೆ..ಬೇಡ ಅನ್ನುವುದುಂಟೇ?! ನಟಿಸಲು ನಮ್ಮ ಕೇಂದ್ರದವರು ಖಂಡಿತ ಅನುಮತಿ ಕೊಡುವುದಿಲ್ಲ ಅನ್ನುವುದಂತೂ ಖಚಿತವಾಗಿತ್ತು. ಅನುಮತಿ ಕೇಳದೇ ಇದ್ದರೆ ಆಯಿತು! ಕದ್ದು ಮುಚ್ಚಿ ಡಬ್ಬಿಂಗ್ ಮಾಡಿದಂತೆ ಇದನ್ನೂ ಮಾಡಿ ಮುಗಿಸಿದರಾಯಿತು! ಯಾರಾದರೂ ದೆಹಲಿಗೆ ಮೂಗರ್ಜಿ ಬರೆದು ವಿಚಾರಣೆಗೆ ಬಂದರೆ ಆಮೇಲೆ ನೋಡಿಕೊಂಡರಾಯಿತು..ಎಂದೆಲ್ಲಾ ಮನಸ್ಸಿನಲ್ಲೇ ಮಂಥನ ನಡೆಸುತ್ತಾ ಗೋಪಿಯವರೊಂದಿಗೆ ಗಿರೀಶರ ಭೇಟಿಗೆ ಹೊರಟೇಬಿಟ್ಟೆ.

ಜನಾರ್ಧನ ಹೋಟಲ್ ನಲ್ಲಿ ಗಿರೀಶರ ಕೋಣೆಯೊಳಗೆ ಗೋಪಿ ಅವರೊಂದಿಗೆ ನಾನು ಕಾಲಿರಿಸಿದಾಗ ಎದುರಿಗೇ ಕುರ್ಚಿಯ ಮೇಲೆ ಕುಳಿತು ಪೇಪರ್ ಓದುತ್ತಿದ್ದ ಗಿರೀಶರು ಕಂಡರು. ಗೋಪಿ ಗಿರೀಶರಿಗೆ ನನ್ನ ಪರಿಚಯ ಮಾಡಿಕೊಟ್ಟಾಗ ನಾನವರಿಗೆ ನಮಸ್ಕರಿಸಿದೆ. ಏನೊಂದೂ ಮಾತಾಡದೆ ಗಿರೀಶ್ ಅವರು ನನ್ನನ್ನೇ ದಿಟ್ಟಿಸಿ ನೋಡತೊಡಗಿದರು. ನಾನೂ ಅವರ ಮುಖ ಭಾವದಲ್ಲಾಗುವ—ಆಗಬಹುದಾದ ಬದಲಾವಣೆಗಳನ್ನು ಕಾತರದಿಂದ ಗಮನಿಸುತ್ತಾ ನಿಂತಿದ್ದೆ. ಇದ್ದಕ್ಕಿದ್ದಂತೆ ಗಿರೀಶರ ಮುಖ ಅರಳಿತು! ‘ಸರಸ್, can you come here for a minute’? ಎಂದು ಪತ್ನಿಯನ್ನು ಕರೆದರು. ಒಳಗಿನಿಂದ ಬಂದ ಪತ್ನಿ ಸರಸ್ವತಿಯವರಿಗೆ ನನ್ನನ್ನು ತೋರಿಸುತ್ತಾ,” see! my purandara is here at last!” ಎಂದು ಉದ್ಗರಿಸಿದರು! ಸರಸ್ವತಿಯವರ ಮುಖದ ಮೇಲೂ ನಸುನಗು—ಒಪ್ಪಿಗೆಯ ಮುದ್ರೆ! ಒಂದೇ ಕ್ಷಣದಲ್ಲಿ ಪುರಂದರರ ಪಾತ್ರಕ್ಕೆ ನನ್ನ ಆಯ್ಕೆ ಆಗಿಯೇಹೋಗಿತ್ತು! ಗಿರೀಶರ ಒಪ್ಪಿಗೆಯಿಂದ ನನಗಿಂತ ಹೆಚ್ಚು ಸಂಭ್ರಮ ಪಟ್ಟವರು ಗೋಪಿ! “ನಾನು ಹೇಳಿರಲಿಲ್ವಾ ಗಿರೀಶ್? ನಿಮಗೆ ಪರ್ಫೆಕ್ಟ್ ಪುರಂದರನ್ನ ಹುಡುಕಿಕೊಡೋ ಜವಾಬ್ದಾರಿ ನಂದು ಅಂತ?” ಎಂದು ಖುಷಿಯಿಂದ ಬೀಗಿದರು ಗೋಪಿ.ಅಂದೇ ಒಂದೆರಡು ತಾಸು ಅಲ್ಲೇ ಕೂರಿಸಿಕೊಂಡು ತಮ್ಮ ಚಿತ್ರದ—ನನ್ನ ಪಾತ್ರದ ರೂಪುರೇಷೆಗಳನ್ನೆಲ್ಲಾ ವಿವರಿಸಿ ಹೇಳಿದ ಗಿರೀಶ್ ಅವರು ಕೊನೆಯಲ್ಲಿ, “ಇನ್ನು ಕೊಂಚ ವ್ಯವಹಾರಕ್ಕೆ ಬರೋಣ..ಶ್ರೀನಿವಾಸ್, ಏನು ಸಂಭಾವನೆ ನಿರೀಕ್ಷೆ ಮಾಡ್ತೀರಿ ನೀವು?” ಎಂದು ಕೇಳಿದರು. ನಾನು ಅರೆಚಣವೂ ತಡಮಾಡದೆ “ಪುರಂದರ” ಎಂದೆ. ಒಂದು ಕ್ಷಣ ನನ್ನನ್ನೇ ದಿಟ್ಟಿಸಿದ ಗಿರೀಶ್ ನನ್ನ ಮಾತು ಅರ್ಥವಾದೊಡನೆ ನಗುತ್ತಾ, “oh! that is so nice of you! ಹಾಗಂತ ನಾನೇನೂ ನಿಮ್ಮನ್ನ ಖಾಲಿ ಕೈಯಾಗ ಕಳಿಸೂದಿಲ್ಲ ಬಿಡ್ರಿ! anyway, thank you and all the best” ಎಂದು ಕೈಕುಲುಕಿ ಕಳಿಸಿಕೊಟ್ಟರು. ಹೊರಬಂದ ಮೇಲೆ ಗೋಪಿಯವರೂ ಸಹಾ ಅಭಿನಂದನೆ ಹೇಳುತ್ತಾ, “ನೀವು ಹೇಳಿದ್ದು ಸರಿ..ಅಂಥ ಅದ್ಭುತವಾದ ಪಾತ್ರ ದೊರೆತಿರೋದೇ ದೊಡ್ಡ ಸಂಭಾವನೆ! ಏನಿಲ್ಲಾ ಅಂದರೂ 25—30 ಕಲಾವಿದರನ್ನ ಈ ಪಾತ್ರಕ್ಕೆ ನೋಡಿದ್ರು ಗಿರೀಶ್…ಯಾರೂ ಒಪ್ಪಿಗೆ ಆಗಿರಲಿಲ್ಲ..ನಿಮ್ಮ ಹಣೇಮೇಲೆ ಪುರಂದರ ಅಂತ ಕೆತ್ತಿಬಿಟ್ಟಿರೋವಾಗ ತಪ್ಪಿಸೋಕ್ಕಾಗುತ್ತಾ?” ಎನ್ನುತ್ತಾ ಸ್ಕೂಟರ್ ಹತ್ತಿದರು ಗೋಪಿ.

‘ಕನಕ ಪುರಂದರ’ ಚಿತ್ರ ನಿರ್ಮಾಣ ತಂಡದಲ್ಲಿ ಘಟಾನುಘಟಿಗಳ ದಂಡೇ ನೆರೆದಿತ್ತು. ಹಿರಿಯ ವಿದ್ವಾಂಸ ಎಸ್.ಕೆ.ರಾಮಚಂದ್ರರಾಯರು ಪ್ರಮುಖ ಸಂಪನ್ಮೂಲ ಲೇಖಕರಾಗಿದ್ದರು. ಎ.ಕೆ.ಬೀರ್ ಅವರ ಛಾಯಾಗ್ರಹಣ; ಭಾಸ್ಕರ್ ಚಂದಾವರ್ಕರ್ ಅವರ ಸಂಗೀತ ಸಂಯೋಜನೆ; ಸುರೇಶ್ ಅರಸ್ ಸಂಕಲನ; ಜಯೂ—ನಚಿಕೇತ್ ಅವರ ಕಲಾನಿರ್ದೇಶನ;ಟಾಮ್ ಆಲ್ಟರ್ ನಿರೂಪಣೆ…ಇನ್ನು ತಾರಾಗಣದಲ್ಲಿ ಸರಸ್ವತಿ ಬಾಯಿಯಾಗಿ ಅರುಂಧತಿ ನಾಗ್; ನಾನು ಪುರಂದರ; ಶಂಕರ್ ನಾಗ್ ಕನಕನಾದರೆ ಉಳಿದ ಮುಖ್ಯ ಪಾತ್ರಗಳಲ್ಲಿ ಎಂ.ವಿ.ನಾರಾಯಣ ರಾವ್, ಹಾಸಾಕೃ; ರಾಮಚಂದ್ರಾಚಾರ್, ರೊಟ್ಟಿ, ವೈಶಾಲಿ ಕಾಸರವಳ್ಳಿ, ಅಕ್ಕ ನಳಿನಿ, ಎಲ್ ವಿ ಶಾರದಾ ಮುಂತಾದವರು; ಸಹನಿರ್ದೇಶಕರಾಗಿ ಕಾನಕಾನಹಳ್ಳಿ ಗೋಪಿ; ನಿರ್ದೇಶಕ ಗಿರೀಶ್ ಕಾರ್ನಾಡ್!!ಇನ್ನು ನನ್ನ ಪಾತ್ರಕ್ಕೆ ಹಿನ್ನೆಲೆ ಗಾಯಕರಾಗಿದ್ದವರು ಉತ್ತರ ಕರ್ನಾಟಕದ ಸಿರಿಕಂಠದ ಗಾಯಕ ಹನುಮಂತ ಬುರ್ಲಿ!

ನಾನು ಈ ಚಿತ್ರದ ತಾರಾಗಣದ ಪಟ್ಟಿಯಲ್ಲಿ ನನ್ನ ಹೆಸರನ್ನು ಮರೆಮಾಚಿ ‘ಶ್ರೀ ಪ್ರಭಾಕರ’ ನಾಗಿದ್ದೆ! ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕೆಲ ಮುಖ್ಯ ಸೆಟ್ ಗಳನ್ನು ನಮ್ಮ ಚಿತ್ರಕ್ಕಾಗಿ ನಿರ್ಮಿಸಲಾಗಿತ್ತು. ಒಂದಷ್ಟು ಮುಖ್ಯದೃಶ್ಯಗಳ ಚಿತ್ರೀಕರಣವನ್ನು ಮೇಲುಕೊಟೆಯಲ್ಲಿ ನಡೆಸಲು ಆಯೋಜಿಸಿದ್ದರು.

ಅತ್ಯಂತ ಅಡಕವಾಗಿ ಕನಕ—ಪುರಂದರರಿಬ್ಬರ ಬದುಕಿನ ಪ್ರಮುಖ ಘಟ್ಟಗಳನ್ನು ದಾಖಲಿಸುತ್ತಾ, ದೃಶ್ಯಭಾಗಗಳು—ನಿರೂಪಣಾಭಾಗಗಳನ್ನು ಜಾಣ್ಮೆಯಿಂದ ವಿಭಜಿಸಿಕೊಂಡು ಸೊಗಸಾದ ಚಿತ್ರಕಥೆಯನ್ನು ಗಿರೀಶ್ ಸಿದ್ಧಪಡಿಸಿದ್ದರು. ಈ ಚಿತ್ರದಲ್ಲಿ ಪುರಂದರರ ಪಾತ್ರವನ್ನು ನಿರ್ವಹಿಸಿದ್ದು ನನಗೆ ವೈಯಕ್ತಿಕವಾಗಿ ಬಹಳ ತೃಪ್ತಿಯನ್ನೂ ವಿಮರ್ಶಾವಲಯದಲ್ಲಿ ಒಳ್ಳೆಯ ಹೆಸರನ್ನೂ ಮರೆಯಲಾಗದ ಅನುಭವವನ್ನೂ ಒದಗಿಸಿತು.

‘ಕನಕ ಪುರಂದರ’ ಚಿತ್ರದ ನನ್ನ ಭಾಗದ ಮೊದಲ ದಿನದ ಚಿತ್ರೀಕರಣವನ್ನಂತೂ ನಾನು ಜನ್ಮೇಪಿ ಮರೆಯುವಂತಿಲ್ಲ! ಮೊಟ್ಟಮೊದಲ ದಿನದ ಚಿತ್ರೀಕರಣಕ್ಕೆ ನಾನು ಸಂಭ್ರಮದಿಂದಲೇ ಚಾಮುಂಡೇಶ್ವರಿ ಸ್ಟುಡಿಯೋಗೆ ಹೋದೆ. ಅಂದಿನ ಮೊದಲ ದೃಶ್ಯ ಯಾವುದೆಂದು ಗಿರೀಶ್ ವಿವರಿಸುತ್ತಿದ್ದಂತೆಯೇ ನನ್ನ ಎದೆ ಧಸಕ್ಕೆಂದಿತು! ಅದು, ಪುರಂದರರು ‘ಮಧುಕರ ವೃತ್ತಿ ಎನ್ನದು’ ಎನ್ನುವ ಪದವನ್ನು ಹಾಡಿಕೊಂಡು ನರ್ತಿಸುತ್ತಾ ಬರುವುದು; ನರ್ತಿಸುತ್ತಾ ಬಂದು ಒಂದೆಡೆ ನಿಂತು ಹಾಡನ್ನು ಮುಂದುವರಿಸುವುದು! ವಿಠಲಾ ವಿಠಲಾ!! ಇದೇನು ಪರೀಕ್ಷೆ! ಮೊಟ್ಟಮೊದಲ ದೃಶ್ಯವೇ ನರ್ತಿಸುವುದಾಗಬೇಕೇ! ಯಾವುದು ನನ್ನ ಅಳುಕು ಸಂಕೋಚಗಳ ಮೂಲಕಾರಣವೋ ಅದರಿಂದಲೇ ಚಿತ್ರೀಕರಣದ ಆರಂಭ ಹಾಗೂ ನನ್ನ ಪಾತ್ರ ಪ್ರವೇಶವಾಗಬೇಕೇ!! ಅಳುಕಿನಿಂದಲೇ ಅಭ್ಯಾಸ ಶುರುಮಾಡಿದೆ.

ತಂಬೂರಿ ಹೆಗಲಿಗೆ ಹಾಕಿಕೊಂಡು ಹೆಜ್ಜೆಹಾಕುತ್ತಾ ಚಿಟಿಕೆ ಹೊಡೆಯುತ್ತಾ ಬರುವುದನ್ನು ಗೋಪಿಯವರೇ ಹೇಳಿಕೊಟ್ಟರು. ನಾಲ್ಕಾರು ರಿಹರ್ಸಲ್ ಗಳ ನಂತರ ಮೊದಲ ಟೇಕ್! ಅರೆ! ಏನಾಶ್ಚರ್ಯ!ಸರಿಯಾಗಿಯೇ ಹೆಜ್ಜೆ ಹಾಕಿಯೇಬಿಟ್ಟೆ! ಮೊದಲ ಟೇಕ್ ನಲ್ಲೇ ಸರಿಯಾಗಿ ಮಾಡಿದ್ದಕ್ಕೆ ಚಪ್ಪಾಳೆ ಭಾಗ್ಯ ಬೇರೆ ದಕ್ಕಿಬಿಟ್ಟಿತು! ಮರುಕ್ಷಣದಲ್ಲೇ ಹರಿತ ಬಾಣದಂಥ ಮಾತು ಕಿವಿಯನ್ನು ಇರಿಯಿತು! ‘ಒನ್ ಮೋರ್’ ಎಂದು ಕೂಗಿದರು ಗಿರೀಶ್! ನನ್ನ ಉತ್ಸಾಹವೆಲ್ಲಾ ಜರ್ರನೆ ಇಳಿದುಹೋಗಿ, “ಯಾಕೆ ಸರ್? ಸರಿಯಾಗೇ ಇತ್ತಲ್ಲವಾ?” ಎಂದು ಹತಾಶೆ—ಕರುಣೆ ಬೆರೆತ ದನಿಯಲ್ಲಿ ಕೇಳಿದೆ. “ಎಲ್ಲಾ ಸರಿ ಇತ್ತು ಶ್ರೀನಿವಾಸ್, ಆದರೆ ಬಂದು ನಿಂತಮೇಲೆ ನೀವು ನಾಲಗೆಯಿಂದ ತುಟಿ ಸವರಿಕೊಂಡು ಹಾಡು ಶುರುಮಾಡಿದ್ರಿ! ಅದು ಅಷ್ಟು ಸರಿ ಕಾಣ್ತಿಲ್ಲ! ಇನ್ನೊಮ್ಮೆ ಮಾಡಿಬಿಡೋಣು” ಎಂದರು ಗಿರೀಶ್! ‘ಹಾ ವಿಧಿಯೇ! ಹೀಗೂ ನಿನ್ನದೊಂದು ಆಟವೇ!’ ಎಂದು ಮನದಲ್ಲೇ ಮರುಗುತ್ತಾ ಎರಡನೆಯ ಟೇಕ್ ಗೆ ಸಿದ್ಧನಾದೆ.

ನನ್ನ ದುರಾದೃಷ್ಟ..ಅಲ್ಲಿ ಹೆಜ್ಜೆ ತಪ್ಪಿಹೋಯಿತು. ಮೂರು..ನಾಲ್ಕು..ಐದು..ಹೀಗೇ ಮುಂದುವರಿಯುತ್ತಾ ಎಂಟು ಟೇಕ್ ಗಳಾಗಿಹೋದವು.. ಹಾಳು ಹೆಜ್ಜೆಗಳು ಮಾತ್ರ ಸರಿಯಾಗಿ ಮೇಳೈಸಲೇ ಇಲ್ಲ! ನನಗೊಂದು ಕಡೆ ಒತ್ತಡ —ಆತಂಕ ಹೆಚ್ಚುತ್ತಿದೆ.. ಮತ್ತೊಂದೆಡೆ ಗಿರೀಶ್ ಚಡಪಡಿಸುತ್ತಿದ್ದಾರೆ! ಸಾಲದೆಂಬಂತೆ ಹತ್ತಿರ ಬಂದು ಕಿವಿಯಲ್ಲಿ,”sorry ಶ್ರೀನಿವಾಸ್, ಫಿಲ್ಮ್ ಭಾಳ waste ಆಗಿಬಿಟ್ರೆ ಮುಂದೆ ತ್ರಾಸ ಆಗುತ್ತೆ..ಬೇಕಿದ್ರೆ ಇನ್ನೊಂದೆರಡು ಬಾರಿ ರಿಹರ್ಸಲ್ ಮಾಡಿಕೊಳ್ಳಿ..you should get it right this time” ಎಂದು ನಯವಾಗಿಯೇ ಹೇಳಿದರೂ ನನಗೇಕೋ ಕೆನ್ನೆಗೇ ಬಾರಿಸಿದಂತೆ ಅನ್ನಿಸಿಬಿಟ್ಟಿತು. ಗಿರೀಶರ ಆತಂಕಕ್ಕೂ ಕಾರಣವಿಲ್ಲದಿರಲಿಲ್ಲ..ಅದಿನ್ನೂ ಕಚ್ಚಾಫಿಲ್ಮ್ ಜ಼ಮಾನಾ! ಫಿಲ್ಮ್ ನ ಬೆಲೆಯಂತೂ ಗಗನಚುಂಬಿಯೇ ಆಗಿದ್ದು ಪ್ರಸಿದ್ಧ ನಿರ್ದೇಶಕರುಗಳೂ ಸಹಾ ಒಂದೊಂದು ಅಡಿ ಫಿಲ್ಮ್ ಉಳಿಸಲು ಎಷ್ಟು ಕಷ್ಟ ಪಡುತ್ತಿದ್ದರೆಂಬುದರ ಕುರಿತಾಗಿ ದಂತಕಥೆಗಳೇ ಹರಡಿಬಿಟ್ಟಿದ್ದವು! ಈಗಿನಂತೆ ಡಿಜಿಟಲ್ ಯುಗವಾಗಿದ್ದರೆ ಸಮಯದ ಹೊರತಾಗಿ ಬೇರೆ ದುಂದುವೆಚ್ಚದ ಕುರಿತಾಗಿ ತಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಆಗ ಕಚ್ಚಾ ಫಿಲ್ಮ್ ಅಂದರೆ ಚಿನ್ನ! ಪರಿಸ್ಥಿತಿ ಹೀಗಿರುವಾಗ ಮೊದಲ ದಿನದ ಚಿತ್ರೀಕರಣದಲ್ಲೇ ಮೊದಲ ಶಾಟ್ ನಲ್ಲೇ ನಟನೊಬ್ಬ ಫಿಲ್ಮ್ ‘ತಿನ್ನಲು’ ಆರಂಭಿಸಿಬಿಟ್ಟರೆ ಮುಂದೆ ಗತಿಯೇನು! ಸರಿ… ಮತ್ತೂ ನಾಲ್ಕು ಬಾರಿ ಅಭ್ಯಾಸ ಮಾಡಿಕೊಂಡು ಹತ್ತನೆಯ ಟೇಕ್ ಗೆ ಸಿದ್ಧನಾದೆ. ಎದೆಯಲ್ಲಿ ವಿಠ್ಠಲ ನಾಮದ್ದೇ ಬಡಿತ! “ಸೌಂಡ್..ಕ್ಯಾಮರಾ..action” ಮೊಳಗು! ಇದ್ದಬದ್ದ ಧೈರ್ಯ ವಿಶ್ವಾಸಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹೆಜ್ಜೆ ಹಾಕಿಕೊಂಡು ಹಾಡುತ್ತಾ ಹೊರಟೆ.. “ಮಧುಕರ ವೃತ್ತಿ ಎನ್ನದು..ಬಲು ಚೆನ್ನದು..ಮಧುಕರ ವೃತ್ತಿ ಎನ್ನದು..”

“cut it..take okay!” ನಿರ್ದೇಶಕರ ಕೂಗು! ಅಬ್ಬಾ! ತಲೆಯ ಮೇಲಿನ ಚಪ್ಪಡಿ ಸರಿಸಿದ ಅನುಭವ! ಅಂದು ಮಧ್ಯಾಹ್ನ ಶಂಕರ್ ನಾಗ್ ಸ್ಟುಡಿಯೋಗೆ ಬಂದಿದ್ದರು. ಊಟದ ಸಮಯದಲ್ಲಿ ಗಿರೀಶ್ ಪ್ರಾಸಂಗಿಕವಾಗಿ ನನ್ನ ಪಡಿಪಾಟಲನ್ನು ಶಂಕರ್ ಅವರಿಗೆ ಹೇಳಿದರು. ಶಂಕರ್ ಜೋರಾಗಿ ನಗುತ್ತಾ, “ಅಯ್ಯೋ..’accident’ ಸಿನಿಮಾ ಶೂಟಿಂಗ್ ಟೈಮಲ್ಲೂ ನನಗೆ ಹೀಗೇ ಕೈಕೊಟ್ಟಿದ್ದ ಇವನು”! ಎನ್ನುತ್ತಾ, ನಾನು dance ಬರುತ್ತದೆಂದು ಸುಳ್ಳು ಹೇಳಿದ್ದು.. ನಂತರ disco class ಗೆ ಸೇರಿದರೂ ಸುಧಾರಿಸದಿದ್ದುದು..ತಾನೇ ಹೊಂದಾಣಿಕೆ ಮಾಡಿಕೊಂಡು ಸಮೂಹ ನೃತ್ಯವಾಗಿ ದೃಶ್ಯವನ್ನು ಮಾರ್ಪಡಿಸಿದ್ದು.. ಹೀಗೆ ಇಡೀ ಪ್ರಸಂಗವನ್ನು ವರ್ಣರಂಜಿತವಾಗಿ ವಿವರಿಸಿಯೇಬಿಟ್ಟರು! ಎಲ್ಲರೂ ನನ್ನ ‘ಅಮೋಘ ನೃತ್ಯಪ್ರತಿಭೆ’ಯನ್ನು ಕೊಂಡಾಡುತ್ತಾ ನಗುತ್ತಿದ್ದರೆ ನಾನು ಪೆಚ್ಚುಪೆಚ್ಚಾಗಿ ನಗುತ್ತಾ ಕುಳಿತಿದ್ದೆ! ಮನಸ್ಸಿನಲ್ಲಿ ಮಾತ್ರ ಒಂದು ಹಠ—ಸವಾಲು ಬಲಿಯುತ್ತಿತ್ತು..”ಕನಕ ಪುರಂದರ’ ಚಿತ್ರದಲ್ಲಿ ಮುಂದೆ ಇನ್ನೂ ಕೆಲ ನೃತ್ಯಭಾಗಗಳಿದ್ದುದರಿಂದ ಅಂದಿನಿಂದಲೇ ನಳಿನಿ ಅಕ್ಕನ ಮಾರ್ಗದರ್ಶನದಲ್ಲಿ ಒಂದಷ್ಟು ಸರಳ ಹೆಜ್ಜೆಗಳನ್ನು ಹಾಕುವ ಕ್ರಮವನ್ನು ಅಭ್ಯಸಿಸತೊಡಗಿದೆ! ವಾಸ್ತವವಾಗಿ ಈ ‘ದೇಸಿ’ ನೃತ್ಯ ಶೈಲಿ ಡಿಸ್ಕೋ ಡ್ಯಾನ್ಸ್ ನಷ್ಟು ಕಷ್ಟ ಕೊಡಲಿಲ್ಲ ಅನ್ನಬೇಕು!ಅಕ್ಕನ ಬಳಿ ಹೇಳಿಸಿಕೊಂಡದ್ದರಿಂದ ನಿಜಕ್ಕೂ ಬಹಳಷ್ಟು ಪ್ರಯೋಜನವಾದದ್ದಲ್ಲದೇ ಮತ್ತೆಂದೂ ಶೂಟಿಂಗ್ ನಲ್ಲಿ ನನ್ನ ಕಾರಣಕ್ಕೆ ಎರಡನೆಯ ಟೇಕ್ ತೆಗೆದುಕೊಳ್ಳುವ ಪ್ರಸಂಗ ಎದುರಾಗಲಿಲ್ಲ!

‘ಕನಕ ಪುರಂದರ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಂಜನಿ ಐದಾರು ತಿಂಗಳ ಗರ್ಭಿಣಿ. ಒಮ್ಮೆ ಚಿತ್ರೀಕರಣವನ್ನು ನೋಡಲು ಚಾಮುಂಡೇಶ್ವರಿ ಸ್ಟುಡಿಯೋಗೂ ಬಂದಿದ್ದಳು. ಗಿರೀಶ್ ರಿಗೆ ರಂಜನಿ ಗರ್ಭಿಣಿ ಎಂದು ತಿಳಿದ ಮೇಲಂತೂ ಒಂದು ದಿನವೂ ನನ್ನನ್ನು ಅನಗತ್ಯವಾಗಿ ಸೆಟ್ ನಲ್ಲಿ ಉಳಿಸಿಕೊಳ್ಳುತ್ತಿರಲಿಲ್ಲ. ಆದಷ್ಟು ಬೇಗ ನನ್ನ ಭಾಗಗಳ ಚಿತ್ರೀಕರಣ ಮುಗಿಸಿ, “your wife needs your company more .now” ಎಂದು ನುಡಿದು ಕಳಿಸಿಬಿಡುತ್ತಿದ್ದರು!

ಮತ್ತೂ ಒಂದು ಸ್ವಾರಸ್ಯದ ಸಂಗತಿ ಇಲ್ಲಿ ನೆನಪಾಗುತ್ತಿದೆ:

ಶ್ರೀನಿವಾಸ ನಾಯಕ ತನ್ನೆಲ್ಲಾ ಸಂಪತ್ತನ್ನೂ ದಾನ ಮಾಡಿ ದಾಸ ದೀಕ್ಷೆ ತೆಗೆದುಕೊಳ್ಳುವ ಸನ್ನಿವೇಶದ ಚಿತ್ರೀಕರಣವನ್ನು ಗಿರೀಶ್ ಅವರು ಸ್ಟುಡಿಯೋದಲ್ಲಿಯೇ ಆಯೋಜಿಸಿದ್ದರು. ದೀಕ್ಷೆ ತೆಗೆದುಕೊಳ್ಳುವ ವಿಧಿ ವಿಧಾನಗಳನ್ನು ಒಂದಿಷ್ಟೂ ಊನವಾಗದಂತೆ ಅನುಸರಿಸಬೇಕಾದ ಅಗತ್ಯವಿತ್ತು. ಮತ್ತು ಆ ಧಾರ್ಮಿಕ ಆಚರಣೆಯ ಅಂಗವಾಗಿ ವಿಶೇಷ ವಿನ್ಯಾಸದ ಬಣ್ಣಬಣ್ಣದ ಚಿತ್ತಾರದ ರಂಗವಲ್ಲಿಯನ್ನು ಬಿಡಿಸಬೇಕಾಗಿತ್ತು. ಇವೆಲ್ಲದರ ಸಮಗ್ರ ತಿಳುವಳಿಕೆ ಇದ್ದ ಪಂಡಿತ ಶ್ರೇಷ್ಠರೊಬ್ಬರನ್ನು ಗಿರೀಶ್ ಅವರು ವಿಶೇಷವಾಗಿ ಆಹ್ವಾನಿಸಿದ್ದರು. ಅವರೇ ಕೋಟ ಗಣಪತಿ ಸೋಮಯಾಜಿಗಳು! ಸಂಸ್ಕೃತ—ಕನ್ನಡ ಭಾಷಾ ಸಾಹಿತ್ಯಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಸೋಮಯಾಜಿಗಳು ಬೆಂಗಳೂರು ಹೈಸ್ಕೂಲ್ ನಲ್ಲಿ ನನಗೆ ಕನ್ನಡ ಮೇಷ್ಟ್ರಾಗಿದ್ದರು! ನಾನು ಆ ಕಾಲದ ಅವರ ಪಟ್ಟ ಶಿಷ್ಯ! ಸ್ಟುಡಿಯೋಗೆ ಬಂದು ಆರೆಂಟು ತಾಸುಗಳ ಕಾಲ ತದೇಕಚಿತ್ತರಾಗಿ ಕುಳಿತು ಕಣ್ಮನ ಸೂರೆಗೊಳ್ಳುವ ಚಿತ್ತಾರವನ್ನು ಅವರು ಬಿಡಿಸಿಕೊಟ್ಟ ಪರಿ ಅನನ್ಯವಾದುದು. ಅವರನ್ನು ಕಂಡೊಡನೆ ನಾನು ಅವರ ಬಳಿ ಧಾವಿಸಿ ಹೋಗಿ ನಮಸ್ಕರಿಸಿ, “ಗುರುಗಳೇ, ನಾನು ನಿಮ್ಮ ಶಿಷ್ಯ..ಶ್ರೀನಿವಾಸ ಪ್ರಭು” ಎಂದು ಗುರುತು ಹೇಳಿದೆ.

ನನ್ನನ್ನು ಪುರಂದರರ ವೇಷದಲ್ಲಿ ನೋಡಿ ತುಂಬು ಸಂತೋಷದಿಂದ, “ಒಪ್ಪುತ್ತೆ ಕಣಯ್ಯಾ..ಈ ಪಾರ್ಟು ನಿನಗೆ ತುಂಬಾ ಚೆನ್ನಾಗಿ ಒಪ್ಪುತ್ತೆ! ಆಗಾಗ ಟಿ ವೀ ಲೂ ನಿನ್ನನ್ನು ನೋಡ್ತಾ ಇರ್ತೀನಿ..ಪ್ರಿಯ ವೀಕ್ಷಕರೆ ಕಾರ್ಯಕ್ರಮದಲ್ಲಿ ಏನೇನೋ ಸಬೂಬು ಸಮಜಾಯಿಷಿ ಕೊಡ್ತಿರ್ತೀಯಾ!ಗಳಿಗೇಗೊಂದ್ಸಲ ಅನಿವಾರ್ಯ ಅಂತ ರಾಗ ಎಳೀತಿರ್ತೀಯಾ! ಅನಿವಾರ್ಯ ಪ್ರಭು ಅಂತಾನೇ ನಾಮಕರಣ ಮಾಡಿಬಿಟ್ಟಿದೀನಿ ನಾನು ನಿನಗೆ!” ಎಂದು ನಸುನಕ್ಕು ನುಡಿದು ತುಂಬು ಹೃದಯದಿಂದ ಆಶೀರ್ವದಿಸಿದರು ಗುರುಗಳು.

ಈ ಗಣಪತಿ ಸೋಮಯಾಜಿಗಳೇ ಮುಂದೆ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಕುಣಿಗಲ್ ಸಮೀಪದ ಹೆಬ್ಬೂರಿನಲ್ಲಿ ನಾರಾಯಣಾಶ್ರಮವನ್ನು ಸ್ಥಾಪಿಸಿದರು; ಶ್ರೀಚಕ್ರದ ಅತಿ ವಿಶೇಷ ವಿನ್ಯಾಸದ ಕಾಮಾಕ್ಷಿ ದೇಗುಲವನ್ನೂ ನಿರ್ಮಿಸಲು ಮಾರ್ಗದರ್ಶನ ಮಾಡಿದರು. ಇಂದು ಹೆಬ್ಬೂರು ಒಂದು ಪವಿತ್ರ ಯಾತ್ರಾಕ್ಷೇತ್ರವಾಗಿ ಬೆಳೆದು ನಿಂತಿದೆ. ಗುರುಗಳು ಇರುವ ತನಕವೂ ನಾವು ಅನೇಕ ಬಾರಿ ಹೆಬ್ಬೂರಿಗೆ ಹೋಗಿ ಅವರ ಶುಭ ಹಾರೈಕೆಗಳನ್ನು ಪಡೆದು ಬಂದಿದ್ದೇವೆ.

ಹೀಗೆ ಅನೇಕ ಕಾರಣಗಳಿಗೆ ‘ಕನಕ ಪುರಂದರ’ ನನ್ನ ಪಾಲಿಗೆ ಒಂದು ಮಹತ್ವದ ಚಿತ್ರ. ಗಿರೀಶ್ ರಂತಹ ಶ್ರೇಷ್ಠ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದ ಖುಷಿಯ ಜತೆಗೆ ನನ್ನ ಅಭಿನಯವನ್ನು ಅವರು ಮೆಚ್ಚಿಕೊಂಡು ಬೆನ್ನು ತಟ್ಟಿದ್ದು ನನ್ನ ಸಂತಸವನ್ನು ಇಮ್ಮಡಿಸಿದ ಸಂಗತಿ.

‍ಲೇಖಕರು Admin

January 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: