ಶ್ರೀನಿವಾಸ ಪ್ರಭು ಅಂಕಣ- ನನ್ನ ಬದುಕಿನ ಮತ್ತೊಂದು ಮುಖ್ಯ ಕಾಲಘಟ್ಟ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

45

ನನಗೆ ಕಾ ನಾ ಶ್ರೀನಿವಾಸ್ ಅಲಿಯಾಸ್ ಶೀನಣ್ಣನ ಮುಖತಃ ಪರಿಚಯವಾದದ್ದು ಪ್ರಜಾವಾಣಿ ಕಛೇರಿಯಲ್ಲಿ. ಒಮ್ಮೆ ನಾನು ವೈಕುಂಠರಾಜು ಅವರನ್ನು ಭೇಟಿಯಾಗಲು ಪ್ರಜಾವಾಣಿ ಕಛೇರಿಗೆ ಹೋಗಿದ್ದಾಗ ಅವರೆದುರಿಗೆ ಕಾ ನಾ ಶ್ರೀಯವರು ಕುಳಿತಿದ್ದರು. ಅವರ ಹೆಸರು ಕೇಳುತ್ತಲೇ ನಾನು ಸಂಭ್ರಮದಿಂದ, “ನೀವು ಗುರುದತ್ತನ ಅಣ್ಣ ಅಲ್ಲವೇ? ನಿಮ್ಮ ಬಗ್ಗೆ, ನಿಮ್ಮ ಚಟುವಟಿಕೆಗಳ ಬಗ್ಗೆ ಅವನು ಸಾಕಷ್ಟು ಹೇಳಿದಾನೆ.ಹಾಗಾಗಿ ಮುಖತಃ ಇದೇ ಮೊದಲು ನಿಮ್ಮನ್ನು ಭೇಟಿಯಾಗುತ್ತಿದ್ದರೂ ನೀವು ನನಗೆ ಸಾಕಷ್ಟು ಪರಿಚಿತರೇ ಆಗಿದ್ದೀರಿ” ಎಂದೆ. ಕಾನಾಶ್ರೀ ಗೌರಿಬಿದನೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಸಾಂಸ್ಕೃತಿಕ—ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು.ಅದರಲ್ಲೂ ರಂಗಭೂಮಿ ಅವರ ವಿಶೇಷ ಆಸಕ್ತಿಯ ಕ್ಷೇತ್ರ.ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನೂ ರಂಗಭೂಮಿ ಶಿಬಿರಗಳನ್ನೂ ವಿಚಾರಗೋಷ್ಠಿ—ಕವಿಗೋಷ್ಠಿಗಳನ್ನೂ ನಡೆಸುತ್ತಾ ಸಾಮಾನ್ಯ ಜನರಿಗೆ ಸಾಹಿತ್ಯ—ನಾಟಕಗಳನ್ನು ಮುಟ್ಟಿಸುವ, ಸದಭಿರುಚಿಯನ್ನು ಬೆಳೆಸುವ ಕಾರ್ಯದಲ್ಲಿ ಹುಮ್ಮಸ್ಸಿನಿಂದ ತೊಡಗಿಕೊಂಡವರು.

ಅಂದು ಹಾಗೇ ಮಾತನಾಡುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಕಾನಾಶ್ರೀ(ಶೀನಣ್ಣ) ಕೇಳಿದರು: “ಪ್ರಭೂ,ನೀವು ಯಾಕೆ ನಮ್ಮ ಗೌರಿಬಿದನೂರಿನಲ್ಲಿ ಒಂದು ತರಬೇತಿ ಶಿಬಿರ ನಡೆಸಿ ಒಂದು ನಾಟಕ ಮಾಡಿಸಬಾರದು? ನಿಮ್ಮ ಪ್ರತಿಭೆ ಬರೀ ಪಟ್ಟಣವಾಸಿಗಳಿಗಷ್ಟೇ ಸೀಮಿತವಾಗಬೇಕೇ?ಪುಟ್ಟ ಊರುಗಳಲ್ಲಿ—ಗ್ರಾಮೀಣ ಪ್ರದೇಶಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರು ಪ್ರಕಾಶಕ್ಕೆ ಬರುವಂತೆ ಮಾಡುವುದು ನಿಮ್ಮಂಥವರ ಹೊಣೆಯಲ್ಲವೇ? ರಂಗಭೂಮಿಯ ಬೆಳವಣಿಗೆಗೆ ಇದರಿಂದ ಎಷ್ಟು ಸಹಾಯವಾಗುತ್ತದೆ ಅಂತ ಯೋಚನೆ ಮಾಡಿದೀರಾ?”. ನಾನು ನಕ್ಕು ಹೇಳಿದೆ: “ಶೀನಣ್ಣ, ನಮ್ಮೂರಿಗೆ ಬಂದು ಶಿಬಿರ ಮಾಡಿಸು ಅನ್ನೋ ನಿಮ್ಮ ಒಂದೇ ಮಾತು ಸಾಕು ನನಗೆ! ಹೇಳಿ, ಯಾವಾಗ ಶಿಬಿರ ಶುರು ಮಾಡಲಿ?”. ವಾಸ್ತವವಾಗಿ ಶೀನಣ್ಣ ನನ್ನೆದುರು ಹಾಗೆ ಹೇಳಲೂ ಒಂದು ಕಾರಣವಿತ್ತು: ಈ ಮೊದಲು ತಮ್ಮ ಊರಲ್ಲಿ ಶಿಬಿರ ನಡೆಸಿಕೊಡಲು ಅವರು ಕೇಳಿಕೊಂಡಿದ್ದ ಒಂದಿಬ್ಬರು ರಂಗಕರ್ಮಿಗಳು ಒಂದಿಷ್ಟೂ ಉತ್ಸಾಹ ತೋರದೇ ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡಿದ್ದರು! ವೈಕುಂಠರಾಜು ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಈ ಮಾತುಕತೆಯ ಪರಿಣಾಮ ಏನಾಯಿತೆಂದರೆ ನಾಟಕ ಅಕಾಡಮಿಯ ವತಿಯಿಂದ ಗೌರಿಬಿದನೂರಿನಲ್ಲಿ ನನ್ನ ನಿರ್ದೇಶನದಲ್ಲಿ ಒಂದು ತಿಂಗಳ ಕಾಲ ಶಿಬಿರ ನಡೆಸುವುದೆಂದೂ ಶಿಬಿರದ ಅಂಗವಾಗಿ ‘ಉದ್ಭವ’ ನಾಟಕವನ್ನೇ ಶಿಬಿರಾರ್ಥಿಗಳಿಗೆ ಮಾಡಿಸುವುದೆಂದೂ ತೀರ್ಮಾನವಾಗಿಹೋಯಿತು! ನಮ್ಮ ರಾಜ್ಯದುದ್ದಕ್ಕೂ ಸಂಚರಿಸಿ ನಾನು ಊರು—ಗ್ರಾಮಗಳಲ್ಲಿ ನಡೆಸಿದ ಅನೇಕ ಯಶಸ್ವೀ ಶಿಬಿರಗಳಲ್ಲಿ ಗೌರಿಬಿದನೂರಿನದೂ ಒಂದು.

ಶಿಬಿರದಲ್ಲಿ 30—35 ಮಂದಿ ಆಸಕ್ತರು ಭಾಗವಹಿಸುತ್ತಿದ್ದುದರಿಂದ ಹಾಗೂ ಎಲ್ಲರಿಗೂ ಒಂದು ಪುಟ್ಟ ಪಾತ್ರವನ್ನಾದರೂ ಕೊಡಬೇಕಾಗಿದ್ದುದರಿಂದ ಶೀನಣ್ಣ ಉದ್ಭವ ನಾಟಕವನ್ನೇ ಸಿದ್ಧಪಡಿಸಲು ಹೇಳಿದ್ದರು.ಉದ್ಭವ ನಾಟಕದಲ್ಲಿ ಪಾತ್ರಗಳ ಸಂಖ್ಯೆಯೂ ಹೆಚ್ಚಿರುವುದರ ಜತೆಗೆ ‘ಗುಂಪೇ ಒಂದು ಮುಖ್ಯ ಪಾತ್ರವೋ’ ಅನ್ನಿಸುವಷ್ಟರ ಮಟ್ಟಿಗೆ ಗುಂಪು ದೃಶ್ಯಗಳಿವೆ.ಹಾಗಾಗಿ ಭಾಗವಹಿಸಿದ ಎಲ್ಲರಿಗೂ ಒಂದು ಪುಟ್ಟ ಅವಕಾಶವಾದರೂ ದೊರೆಯುವುದು ಖಚಿತವಾಗಿತ್ತು.

ಗೌರಿಬಿದನೂರಿನಲ್ಲಿ ಒಂದು ತಿಂಗಳ ಕಾಲ ನಾನು ಶೀನಣ್ಣನ ಮನೆಯಲ್ಲೇ ತಂಗಿದ್ದೆ.ಶೀನಣ್ಣನ ಧರ್ಮಪತ್ನಿ ಶಾರದಾ,ಗುರುದತ್ತನ ಹಾಗೆ ನನಗೂ ಅತ್ತಿಗೆಯೇ ಆಗಿಹೋಗಿದ್ದರು. ಮಾನಸ—ಮಾಧುರ್ಯ ಶೀನಣ್ಣ ದಂಪತಿಗಳ ಮುದ್ದುಮಕ್ಕಳು. ಹಗಲಿನಲ್ಲಿ ಒಂದಷ್ಟು ಹೊತ್ತು ಓದು—ಬರಹ;ಒಂದಷ್ಟು ಹೊತ್ತು ಮಕ್ಕಳೊಂದಿಗೆ ಆಟ;ಸಂಜೆ ಮೂರು ತಾಸು ಶಿಬಿರಾರ್ಥಿಗಳಿಗೆ ತರಬೇತಿ ಹಾಗೂ ನಾಟಕದ ತಯಾರಿ;ರಾತ್ರಿ ಒಂದೆರಡು ತಾಸು ಗೆಳೆಯರೊಂದಿಗೆ ಗೋಷ್ಠಿ—ಚರ್ಚೆ;ಹೊತ್ತು ಹೊತ್ತಿಗೆ ಶಾರದಾ ಅತ್ತಿಗೆ ಮಾಡಿ ಬಡಿಸುತ್ತಿದ್ದ ವೈವಿಧ್ಯಮಯ ರಸಗವಳ…ಆಹಾ! ಜನ್ಮವೆಲ್ಲಾ ಹೀಗೇ ಊರೂರು ಸುತ್ತಿಕೊಂಡು ಶಿಬಿರ—ನಾಟಕ ಮಾಡಿಸಿಕೊಂಡು ಆನಂದವಾಗಿ ಕಳೆದುಬಿಡಬಹುದಲ್ಲಾ! ಎಂದು ಎಷ್ಟೋ ಸಲ ಅಂದುಕೊಂಡಿರುವುದೂ ಉಂಟು!

ಗೌರಿಬಿದನೂರಿನಲ್ಲಿ ಮಾಡಿಸಿದ ಉದ್ಭವ ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದವರು ಜಿ.ಕೆ.ರಂಗನಾಥ್. ಇವರು ಪ್ರಸಿದ್ಧ ನಟ—ಚಿಂತಕ ಜಿ.ಕೆ.ಗೋವಿಂದರಾವ್ ಅವರ ಕಿರಿಯ ಸೋದರ. ಆ ಶಿಬಿರದಲ್ಲಿದ್ದ ಮತ್ತೊಬ್ಬ ಪ್ರತಿಭಾವಂತ ನಟ ರಾಜಶೇಖರ. ಉಳಿದವರ ಹೆಸರುಗಳು ಈಗ ನೆನಪಿನಿಂದ ಜಾರಿಹೋಗಿವೆ. ಶೀನಣ್ಣ ಸುತ್ತ ಮುತ್ತಲ ನಾಲ್ಕಾರು ಹಳ್ಳಿಗಳಲ್ಲಿ ನಮ್ಮ ನಾಟಕದ ಪ್ರದರ್ಶನವನ್ನು ಏರ್ಪಡಿಸಿದ್ದರು. ಒಂದು ಹಳ್ಳಿಯಲ್ಲಿ —ಬಹುಶಃ ಇಡಗೂರು ಇರಬೇಕು—ಪ್ರದರ್ಶನದ ವೇಳೆ ನಡೆದ ಒಂದು ಪ್ರಸಂಗ ಸ್ವಾರಸ್ಯಕರವಾಗಿದೆ. ಅಲ್ಲಿ ಪ್ರದರ್ಶನವಿದ್ದುದು ರಾತ್ರಿ ಎಂಟು ಗಂಟೆಗೆ. ಪ್ರಚಾರ ಚೆನ್ನಾಗಿ ಮಾಡಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

ಸುತ್ತಮುತ್ತಲ ಹಳ್ಳಿಗಳಿಂದಲೂ ಒಂದಷ್ಟು ಜನ ಗಾಡಿ ಕಟ್ಟಿಕೊಂಡು ನಮ್ಮ ನಾಟಕ ನೋಡಲು ಬಂದಿದ್ದರು. ಬರೀ ಬರುವುದಷ್ಟೇ ಅಲ್ಲ,ಅದು ಇಡೀ ರಾತ್ರಿಯ ಪ್ರದರ್ಶನ ಎಂದು ಭಾವಿಸಿಕೊಂಡು ಕಂಬಳಿ—ಚಾಪೆ ಇತ್ಯಾದಿಗಳನ್ನೂ ಸುತ್ತಿಕೊಂಡು ಬಂದಿದ್ದಾರೆ.. ನಾಟಕ ಮುಗಿದ ಮೇಲೆ ಬೆಳಕು ಹರಿಯುವ ತನಕ ಅಲ್ಲೇ ಬಯಲಿನಲ್ಲೇ ಮಲಗಿದ್ದು ಹೊರಡುವುದಕ್ಕೆ ಸನ್ನದ್ಧರಾಗಿ! ಅಯ್ಯೋ! ನಮ್ಮದು ಬರೇ ಎರಡು ತಾಸಿನ, ಹವ್ಯಾಸೀ ರಂಗಭೂಮಿಯ ನಾಟಕ! ಬೆಳಕು ಹರಿಯುವ ತನಕ ಆಟ ನಡೆಸುವ ಯಕ್ಷಗಾನ—ಬಯಲಾಟಗಳಂತಾಗಲೀ ಸಮಯ ಸ್ಫೂರ್ತಿಯಿಂದ ಸನ್ನಿವೇಶಗಳನ್ನು ವಿಸ್ತರಿಸುತ್ತಾ ತಮ್ಮ ಮಾತುಗಾರಿಕೆಯಿಂದಲೇ ಪ್ರೇಕ್ಷಕರನ್ನು ತಾಸುಗಟ್ಟಲೆ ಹಿಡಿದು ಕೂರಿಸುವ ಪ್ರತಿಭಾವಂತ ನಟರನ್ನೊಳಗೊಂಡ ವೃತ್ತಿ ರಂಗಭೂಮಿಯ ನಾಟಕಗಳಂತಾಗಲೀ ಅಲ್ಲ ನಮ್ಮ ನಾಟಕ ಪ್ರದರ್ಶನ! ಈ ವಿಷಯ ತಿಳಿಯುತ್ತಿದ್ದಂತೆ ಬಂದಿದ್ದ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರಾಸೆಯೇ ಆಯಿತು! ಕೊನೆಗೆ ಪ್ರಾರಂಭದಲ್ಲಿ ಒಂದಷ್ಟು ಹೊತ್ತು ರಂಗಗೀತೆಗಳನ್ನು ಹಾಡಿ ನಂತರ ನಾಟಕ ಪ್ರಾರಂಭಿಸಿದ್ದು ಅವರಿಗೆ ತುಸು ಸಮಾಧಾನ ತಂದಿತು ಎನ್ನಬಹುದು. ಹವ್ಯಾಸಿ ರಂಗಭೂಮಿಯ ಹೊಸಬಗೆಯ ನಾಟಕಗಳನ್ನು ನೋಡಿಯೇ ಇರದ ಆ ಪ್ರೇಕ್ಷಕರಿಗೆ ನಮ್ಮ ನಾಟಕ ಅಷ್ಟಾಗಿ ತಲುಪಿದಂತೆ ಕಾಣಲಿಲ್ಲ. ಹಾಗೆ ನೋಡಿದರೆ ಇಂಥ ನಾಟಕಗಳನ್ನು ಪದೇ ಪದೇ ತೋರಿಸಿ ಆಧುನಿಕ ರಂಗಭೂಮಿಯತ್ತ ಆ ಪ್ರೇಕ್ಷಕರನ್ನು ಸೆಳೆಯುವುದು,ಹೊಸ ನಾಟಕಗಳ ಕುರಿತಾದ ತಿಳುವಳಿಕೆಯನ್ನು ನೀಡಿ ಅಭಿರುಚಿಯನ್ನು ಬೆಳೆಸುವುದು ಶೀನಣ್ಣನ ಪ್ರಾಥಮಿಕ ಉದ್ದೇಶವೇ ಆಗಿತ್ತು ಎಂದರೂ ತಪ್ಪಾಗಲಾರದು. ಇರಲಿ.

ಅಂದು ನಾಟಕ ನೋಡಲು ಆ ಹಳ್ಳಿಯ ಗಣ್ಯರು,ರಾಜಕೀಯ ಕ್ಷೇತ್ರದ ಧುರೀಣರು,ಗ್ರಾಮ ಪಂಚಾಯಿತಿಯ ಛೇರಮನ್ನರು ಎಲ್ಲರೂ ಬಂದಿದ್ದರು. ನಾಟಕದಲ್ಲಿ ಶಿಖರಪ್ರಾಯವಾದ ಪ್ರಸಂಗವೆಂದರೆ, ರಾಘಣ್ಣ, ‘ಗಣಪತಿ ಉದ್ಭವಿಸಿ ಬಂದಿದ್ದಾನೆ’ ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ವಂಚಿಸಿ ಗಣಪತಿಗೆ ಪಾರ್ಕ್ ನಲ್ಲಿಯೇ ಗುಡಿ ಕಟ್ಟುವ,ಶಿಲ್ಪಿ ರಾಮಾಚಾರಿಗಳು ಅಲ್ಲಿಗೆ ಬಂದು ‘ಅದು ಉದ್ಭವ ಮೂರ್ತಿಯಲ್ಲ’ ಎಂದು ವ್ಯರ್ಥವಾಗಿ ಕೂಗಾಡುವ ಸನ್ನಿವೇಶ. ದೃಶ್ಯ ಆರಂಭವಾಯಿತು. ರಂಗದ ಮೇಲೆ ಉದ್ಭವ ಮೂರ್ತಿಯ ಪ್ರತಿಷ್ಠಾಪನೆಯಾಗಿ ಮೇಳದವರು “ಸದ್ದು ಗದ್ದಲದಿ ಸುದ್ದಿ ಮಾಡುವನಲ್ಲ..ಇದ್ದೂ ಇಲ್ಲದಂತೆ ಸ್ವಾಮಿ ಉದ್ಭವಿಸಿ ಬರುತಾನೆ” ಹಾಡನ್ನು ಹಾಡತೊಡಗಿದ್ದಾರೆ. ಇದ್ದಕ್ಕಿದ್ದಂತೆ ಪ್ರೇಕ್ಷಾಗೃಹದಲ್ಲಿ ಒಂದಷ್ಟು ಚಟುವಟಿಕೆ ಆರಂಭವಾಗಿ ಹೋಯಿತು. “ಜಟ್ಟನೆ ಹೋಗಿ ಪಟ್ಟನೆ ಬರ್ರೋ” ಎಂದು ಮುಂದಿನ ಸಾಲಿನಲ್ಲಿದ್ದ ಧುರೀಣರೊಬ್ಬರು ಸೂಚನೆ ಕೊಡುತ್ತಿದ್ದಾರೆ;ಮತ್ತೊಬ್ಬರು,”ಒಳ್ಳೇ ಹಣ್ಣು ತರ್ರೋ..ಕಸಕಟ್ಟೆ ಕಾಯಿ ಗೀಯಿ ತಂದೀರಾ ಮತ್ತೆ” ಎಂದು ಜೋರಾಗಿಯೇ ಕೂಗುತ್ತಿದ್ದಾರೆ! ಏನಾಗುತ್ತಿದೆ ಎಂದು ಕಣ್ಣುಕಣ್ಣು ಬಿಟ್ಟುಕೊಂಡು ನಾವು ನೋಡುತ್ತಿದ್ದಂತೆಯೇ ಒಂದಷ್ಟು ಯುವಕರು ಹೂವು—ಹಣ್ಣು—ಊದುಗಡ್ಡಿ—ಕರ್ಪೂರ ಇತ್ಯಾದಿ ಪೂಜಾಸಾಮಗ್ರಿಗಳನ್ನು ಅಣಿಮಾಡಿಕೊಂಡು ತಂದುಬಿಟ್ಟರು! ಒಂದಿಬ್ಬರು ಮುಖಂಡರು ಸೀದಾ ರಂಗದ ಮೇಲೆಯೇ ಬಂದು ಪಾಂಗತವಾಗಿ ಪೂಜೆ ಆರಂಭಿಸಿಯೇ ಬಿಟ್ಟರು! ರಂಗದ ಮೇಲಿದ್ದ, ನಾಟಕದಲ್ಲಿ ಅರ್ಚಕ ಗಣಪತಿ ಶಾಸ್ತ್ರಿಗಳ ಪಾತ್ರ ನಿರ್ವಹಿಸುತ್ತಿದ್ದ ನಮ್ಮ ಕಲಾವಿದನಿಗೆ, “ಪೂಜೆ ಮಾಡಿ ಅಯ್ನೊರೇ,ನಮ್ಮ ಸುತ್ತೂ ಹಳ್ಳ್ಯಾಗೆ ಮಳೆ ಬೆಳೆ ಚಂದಾಗಿ ಆಗಿ ಎಲ್ಲಾ ಸುಕವಾಗಿರೋ ಹಂಗೆ ನೋಡ್ಕಳಪ್ಪಾ ಸ್ವಾಮಿ ಅಂತ ಬೇಡ್ಕೊಂಡು ಒಂದು ಆರತಿ ಎತ್ತಿಬುಡಿ” ಎಂದು ಸೂಚನೆ..ಅಲ್ಲಲ್ಲ..ಅಪ್ಪಣೆ ನೀಡಿದರು! ಹಳ್ಳಿಯ ಛೇರ್ಮನ್ ರ ಅಪ್ಪಣೆ ಮೀರಲಾದೀತೇ? ತನಗೆ ತೋಚಿದಂತೆ ಆ ಅನನುಭವಿ ನಟ—ಅರ್ಚಕನೂ ಪೂಜೆ ಮಾಡಿದ..ಛೇರ್ಮನ್ನರ ಆದಿಯಾಗಿ ಒಂದಷ್ಟು ಜನ ಮುಖಂಡರು ”ಉದ್ಭವ ಮೂರ್ತಿ”ಗೆ ಪೂಜೆ ಮಾಡಿ,ಗಲ್ಲಗಲ್ಲ ಬಡಿದುಕೊಂಡು ಅಡ್ಡಬಿದ್ದು ನಮ್ಮ ಮೇಳದವರೊಂದಿಗೆ ತಾವೂ ಸೇರಿಕೊಂಡು,”ಜೈಗಣೇಶ ಜೈಗಣೇಶ ಜೈಗಣೇಶ ಪಾಹಿಮಾಂ..ಜೈಗಣೇಶ ರಕ್ಷಮಾಂ” ಹಾಡಿ ಸಂಭ್ರಮಿಸಿದರು. ಅವರ ಈ ಎಲ್ಲಾ ಸಂಭ್ರಮಾಚರಣೆಗಳನ್ನೂ ಮೂಕಪ್ರೇಕ್ಷಕರಾಗಿ ವೀಕ್ಷಿಸುವ ಸರದಿ ನಮ್ಮದಾಗಿತ್ತು!

ಈ ಪ್ರದರ್ಶನ ನನ್ನಲ್ಲಿ ಮತ್ತಷ್ಟು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿತು:’ಯಾವ ಪ್ರೇಕ್ಷಕರಿಗಾಗಿ ನಾವು ನಾಟಕ ಮಾಡುತ್ತಿದ್ದೇವೆ ಹಾಗೂ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೇವೆ?”. ನನಗಿನ್ನೂ ನೆನಪಿದೆ: ಉದ್ಭವ ನಾಟಕದ ಪ್ರಥಮ ಪ್ರದರ್ಶನಗಳಾದಾಗ,”ಓಹೋ.. ಗಂಭೀರ ನಾಟಕಗಳನ್ನು ಮಾಡಿಸುತ್ತಿದ್ದ ಪ್ರಭು ಕೂಡಾ ಹಾಡು ಕುಣಿತಗಳ ಜನಪ್ರಿಯ ಹಾದಿಯನ್ನೇ ತುಳಿಯತೊಡಗಿದ” ಎಂಬಂತಹ ಅಪಸ್ವರಗಳು ಜೋರಾಗಿಯೇ ಕೇಳತೊಡಗಿದ್ದವು. ಈಗ ಇಲ್ಲಿ ನೋಡಿದರೆ ನನ್ನ ನಾಟಕದ ಮೂಲ ಉದ್ದೇಶಕ್ಕೇ ಗಾಸಿಯಾಗುವಂತಹ ಪ್ರತಿಕ್ರಿಯೆಗಳು ಪ್ರೇಕ್ಷಕರಿಂದ ವ್ಯಕ್ತವಾಗುತ್ತಿವೆ! ಬಹಳ ಯೋಚಿಸಿ ಯೋಚಿಸಿ ನಾನೇ ನನಗಾಗಿ ಒಂದು ಶರಾ ಬರೆದುಕೊಂಡೆ: “ನನ್ನ ಮನಸ್ಸಿಗೆ ಒಗ್ಗುವಂತಹ,ಪ್ರೇಕ್ಷಕರ ಅಭಿರುಚಿಯನ್ನು ಕೆಡಿಸದಂತಹ, ಅವರನ್ನು ರಂಜಿಸುವಂತಹ,ಸಾಧ್ಯವಾದರೆ ಅವರ ಅರಿವಿನ ಪರಿಧಿಯನ್ನು ವಿಸ್ತರಿಸುವಂತಹ ನಾಟಕಗಳನ್ನು ಮಾಡಿಸುತ್ತೇನೆ;ಯಾವುದೇ ಕಾರಣಕ್ಕೂ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ”. ಅಂದಿನಿಂದ ಇಂದಿನವರೆಗೆ ನಾನು ಪ್ರಾಮಾಣಿಕವಾಗಿ,ಒಂದು ತಪಸ್ಸಿನ ಹಾಗೆ ಪಾಲಿಸಿಕೊಂಡು ಬಂದಿರುವ ನಿಯಮಗಳಿವು.

ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಉದ್ಭವ’ ನಾಟಕದ ಒಂದು ಪ್ರದರ್ಶನಕ್ಕೆ ಹೈದರಾಬಾದ್ ದೂರದರ್ಶನ ಕೇಂದ್ರದಲ್ಲಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಿ.ವಿ.ಸತೀಶ್ ಅವರು ಹಾಗೂ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜ್ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇ.ನಾ.ಶ್ರೀನಿವಾಸ ಮೂರ್ತಿಯವರು ಬಂದಿದ್ದರು. ಸತೀಶ್ ಅವರು ಆ ವೇಳೆಗಾಗಲೇ ತಮ್ಮ ಅನೇಕ ಸಾಕ್ಷ್ಯಚಿತ್ರಗಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಪ್ರಸ್ತುತಿಗಳ ಮೂಲಕ ದೂರದರ್ಶನ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿದ್ದವರು.ಅಷ್ಟು ಹೊತ್ತಿಗಾಗಲೇ ಗುಲ್ಬರ್ಗಾದಲ್ಲಿ ಒಂದು ದೂರದರ್ಶನ ಕೇಂದ್ರ ಆರಂಭವಾಗಿದ್ದರೂ ಅಲ್ಲಿ ಕಾರ್ಯಕ್ರಮಗಳನ್ನು ನಿರ್ಮಿಸಲು ಬೇಕಾದ ಮೂಲಭೂತ ಸೌಕರ್ಯಗಳು ಇರಲಿಲ್ಲ.

ಹಾಗಾಗಿ ನಾಡಿನ ಪ್ರಸಿದ್ಧ ಕಲಾವಿದರನ್ನು,ರಂಗಭೂಮಿ ಮತ್ತಿತರ ಕಲಾಕ್ಷೇತ್ರಗಳ ತಂಡಗಳನ್ನು ಹೈದರಾಬಾದ್ ದೂರದರ್ಶನಕ್ಕೆ ಆಹ್ವಾನಿಸಿ,ಅಲ್ಲಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣ ನಡೆಸಿ ನಂತರ ಗುಲ್ಬರ್ಗಾ ಕೇಂದ್ರದಿಂದ ಪ್ರಸಾರ ಮಾಡುತ್ತಿದ್ದರು. ಪಿ.ವಿ.ಸತೀಶ್ , ಪವನಕುಮಾರ್ ಮಾನ್ವಿ ಮುಂತಾದವರು ಕನ್ನಡ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದವರಲ್ಲಿ ಪ್ರಮುಖರು. ಉದ್ಭವ ನಾಟಕ ನೋಡಿದ ಸತೀಶ್ ಅವರು ನಾಟಕವನ್ನು ಮನಸಾರೆ ಮೆಚ್ಚಿಕೊಂಡು,”ಈ ನಾಟಕವನ್ನು ಗುಲ್ಬರ್ಗಾ ಕೇಂದ್ರಕ್ಕಾಗಿ ನಾನು ನಿರ್ಮಿಸಿ ಸಿದ್ಧಪಡಿಸುತ್ತೇನೆ..ಇದರ ಜತೆಗೆ ಮತ್ತೂ ಒಂದು ನಾಟಕವನ್ನು ಸಿದ್ಧ ಪಡಿಸಿಕೊಂಡು ನಿಮ್ಮ ತಂಡದವರೆಲ್ಲರೂ ಹೈದರಾಬಾದ್ ಗೆ ಬಂದುಬಿಡಿ..ಮೂರು ದಿನ ನಿಮ್ಮ ನಾಟಕಗಳಿಗಾಗಿ ಸ್ಟುಡಿಯೋ ಕಾದಿರಿಸುತ್ತೇನೆ..ಸ್ಟುಡಿಯೋ ಚಿತ್ರೀಕರಣದ ನಂತರ ನಾಟಕಗಳ ಪ್ರದರ್ಶನವನ್ನೂ ಏರ್ಪಡಿಸುತ್ತೇವೆ..ಕರ್ಣಾಟಕ ಸಾಹಿತ್ಯ ಮಂದಿರ ಸಂಸ್ಥೆಯವರು ಈ ಪ್ರದರ್ಶನಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತಾರೆ” ಎಂದು ಆಹ್ವಾನ ನೀಡಿದರು.ನಮ್ಮ ತಂಡದ ಕಲಾವಿದರೆಲ್ಲರಿಗೂ ಖುಷಿಯೋ ಖುಷಿ—ದೂರದರ್ಶನದಲ್ಲಿ ನಮ್ಮ ನಾಟಕ ಪ್ರಸಾರವಾಗುತ್ತದೆ ಎಂದು! ಮಾತುಕತೆಗೆ ಹಾಗೂ ಕರಾರುಪತ್ರ ಇತ್ಯಾದಿಗಳನ್ನು ಸಿದ್ಧಪಡಿಸಿಕೊಳ್ಳಲಿಕ್ಕೆ,ಇತರ ಪೂರ್ವಭಾವಿ ಸಿದ್ಧತೆಗಳಿಗೆ ಎಂದು ನಾನು ಹಾಗೂ ರಿಚರ್ಡ್ ಜಿ ಲೂಯಿಸ್ ಒಮ್ಮೆ ಹೈದರಾಬಾದ್ ಗೆ ಹೋಗಿಬಂದೆವು. ಸತೀಶ್ ಅವರ ಮುಂಜಾಗ್ರತೆ ಹಾಗೂ ಕಾಳಜಿಗಳು ಯಾವ ಮಟ್ಟದಲ್ಲಿದ್ದವೆಂದರೆ ನಮ್ಮ ಆ ಪ್ರವಾಸದ ಖರ್ಚನ್ನು ಭರಿಸಲು ಅಲ್ಲಿ ಎರಡು ಸಾಕ್ಷ್ಯಚಿತ್ರಗಳಿಗೆ ಹಿನ್ನೆಲೆ ನಿರೂಪಣೆಯನ್ನು ನನ್ನಿಂದ ಮಾಡಿಸಿ ಸೂಕ್ತ ಸಂಭಾವನೆಯನ್ನು ನೀಡಿ ಸಹಕರಿಸಿದರು! ಹವ್ಯಾಸಿ ರಂಗಭೂಮಿಯ ಕಲಾವಿದರು ‘ಸೈಕಲ್’ ಹೊಡೆಯುವುದು,ಬಡತನದಲ್ಲೇ ನಾಟಕ ಮಾಡುವುದು ಅವರಿಗೆ ಚಿರಪರಿಚಿತ ಸಂಗತಿಯೇ ಆಗಿತ್ತು! ಹೀಗೆ ನಮ್ಮ ನಾಟ್ಯದರ್ಪಣ ತಂಡದ ಸಿಕ್ಕು ಹಾಗೂ ಉದ್ಭವ—ಈ ಎರಡು ನಾಟಕಗಳು ಹೈದರಾಬಾದ್ ದೂರದರ್ಶನ ಕೇಂದ್ರದಲ್ಲಿ ಚಿತ್ರೀಕರಣಗೊಂಡು ಗುಲ್ಬರ್ಗಾ ಕೇಂದ್ರದಿಂದ ಆ ಭಾಗದ ಕನ್ನಡ ವೀಕ್ಷಕರಿಗಾಗಿ ಪ್ರಸಾರಗೊಂಡವು. ಇದು ದೂರದರ್ಶನದೊಂದಿಗಿನ ನನ್ನ ನಂಟಿನ ಮೊಟ್ಟಮೊದಲ ಕೊಂಡಿ! ಮುಂದೆ ಇದೇ ಕೇಂದ್ರದಲ್ಲೇ ಹತ್ತಾರು ವರ್ಷಗಳ ಕಾಲ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸ ಮಾಡಬೇಕಾಗಿ ಬರುತ್ತದೆಂದು ನಾನು ಆಗ ಕನಸಿನಲ್ಲೂ ಊಹಿಸಿರಲಿಲ್ಲ! ಇರಲಿ..ಅದು ನನ್ನ ಮುಂದಿನ ಬದುಕಿನ ಮತ್ತೊಂದು ಮುಖ್ಯ ಕಾಲಘಟ್ಟ.

ಹೈದರಾಬಾದ್ ನ ಕನ್ನಡ ಪ್ರೇಕ್ಷಕರೂ ಸಹಾ ನಮ್ಮ ನಾಟಕಗಳನ್ನು ಸೊಗಸಾಗಿ ಸ್ವೀಕರಿಸಿ ಮುಕ್ತಕಂಠದಿಂದ ಪ್ರಶಂಸಿಸಿದರು.ಅಲ್ಲಿ ನಾಟಕಗಳ ಪ್ರದರ್ಶನವಾದದ್ದು 1981 ರ ಏಪ್ರಿಲ್ ಮಾಹೆಯಲ್ಲಿ. ಕರ್ಣಾಟಕ ಸಾಹಿತ್ಯ ಮಂದಿರದ ಸಕ್ರಿಯ ಕಾರ್ಯಕರ್ತರೂ ಉತ್ತಮ ನಟರೂ ಆದ ಪ್ರಹ್ಲಾದ ಜೋಶಿಯವರು ಈಗಲೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ;ಅಂದು ನಮ್ಮ ನಾಟಕಗಳು ಅಲ್ಲಿನ ಪ್ರೇಕ್ಷಕರ ಮೇಲೆ ಅಗಾಧ ಪರಿಣಾಮ ಬೀರಿದ್ದನ್ನು ಆಗಾಗ ನೆನೆಸಿಕೊಳ್ಳುತ್ತಾರೆ!

ಕಲಾಕ್ಷೇತ್ರದಲ್ಲಿ ನಮ್ಮ ಉದ್ಭವ ನಾಟಕ ನೋಡಿ ಅಪಾರವಾಗಿ ಮೆಚ್ಚಿಕೊಂಡ ಮತ್ತೊಬ್ಬ ಮಹನೀಯರೆಂದರೆ ದೇ.ನಾ.ಶ್ರೀನಿವಾಸಮೂರ್ತಿ. ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ದೇನಾಶ್ರೀ ಚಿರಪರಿಚಿತ ಹೆಸರು. ಅಂದು ಉದ್ಭವ ನಾಟಕದ ಪ್ರದರ್ಶನದ ನಂತರ ನನ್ನನ್ನು ಭೇಟಿಯಾಗಿ ಮಾತನಾಡಿದ ದೇನಾಶ್ರೀಯವರು ನನ್ನೊಂದಿಗೆ ವೈಯಕ್ತಿಕವಾಗಿ ಮಾತಾಡಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು.ಅಂದಿಗೆ ಎರಡು ದಿನಗಳ ನಂತರ ಸ್ಟೇಕ್ ಬ್ಯಾಂಕ್ ಆಫ್ ಮೈಸೂರ್ ನ ಸಾಂಸ್ಕೃತಿಕ ಸಂಘದವರು ಅವರ ಬ್ಯಾಂಕ್ ನ ರಂಗಮಂದಿರದಲ್ಲೇ ‘ಸಿಕ್ಕು’ ನಾಟಕ ಪ್ರದರ್ಶನವನ್ನು ಏರ್ಪಡಿಸಿದ್ದರು. ನಾನು ದೇನಾಶ್ರೀಯವರಿಗೆ,”ನಾಡಿದ್ದು ಮಧ್ಯಾಹ್ನದ ವೇಳೆಗೆ ಬ್ಯಾಂಕ್ ರಂಗಮಂದಿರಕ್ಕೇ ಬಂದುಬಿಡಿ..ಅಲ್ಲೇ ಮಾತಾಡಿಕೊಂಡು ಹಾಗೇ ನಾಟಕವನ್ನೂ ನೋಡಿಕೊಂಡು ಹೋಗಬಹುದು” ಎಂದು ಸೂಚಿಸಿದೆ.ದೇನಾಶ್ರೀ ಅವರು ದೊಡ್ಡಬಳ್ಳಾಪುರದ ರಂಗತಂಡಕ್ಕಾಗಿಯೋ ಅಥವಾ ಅವರ ಕಾಲೇಜ್ ವಿದ್ಯಾರ್ಥಿಗಳಿಗಾಗಿಯೋ ಒಂದು ರಂಗಶಿಬಿರ ನಡೆಸಿಕೊಡಲು ಆಹ್ವಾನಿಸಲು ಬರುತ್ತಿದ್ದಾರೆಂಬುದು ನನ್ನ ಎಣಿಕೆಯಾಗಿತ್ತು.ಆದರೆ ಅಂದು ಬ್ಯಾಂಕ್ ರಂಗಮಂದಿರಕ್ಕೆ ಬಂದ ದೇನಾಶ್ರೀಯವರು ನನಗೆ ಹೇಳಿದ ಮಾತುಗಳನ್ನು ಕೇಳಿ ನಾನು ಅಕ್ಷರಶಃ ಗರ ಬಡಿದುಹೋದೆ! ಅವರ ಮಾತುಗಳು ನನ್ನ ತಿಳಿವಿನ ಆಳಕ್ಕೆ ಇಳಿದು ಅರ್ಥವಾಗುವುದಕ್ಕೆ ಸಾಕಷ್ಟು ಸಮಯವೇ ಬೇಕಾಯಿತು! ದೇನಾಶ್ರೀ ಅವರು ಹೇಳಿದ್ದು ಇಷ್ಟು: “ನಮ್ಮ ಕಾಲೇಜ್ ನಲ್ಲಿ ಕನ್ನಡ ಅಧ್ಯಾಪಕರ ಒಂದು ಹುದ್ದೆ ಖಾಲಿ ಇದೆ; ನೀವು ಕನ್ನಡ ಎಂ.ಎ. ಪದವೀಧರರು..ಸ್ವರ್ಣಪದಕ ವಿಜೇತರು..ರಂಗ ಕಲಾವಿದರು..ನಿಮ್ಮಂಥವರು ನಮ್ಮ ಶಿಕ್ಷಣ ಸಂಸ್ಥೆಗೆ ಅಧ್ಯಾಪಕರಾಗಿ ಬಂದರೆ ನಮಗೆ ಬಹಳ ಸಂತೋಷವಾಗುತ್ತದೆ. ದಯವಿಟ್ಟು ನಮ್ಮ ಆಹ್ವಾನವನ್ನು ಸ್ವೀಕರಿಸಿ.”

ಇದೇನಿದು ವಿಚಿತ್ರ! ಹೀಗೂ ಆಗುವುದುಂಟೇ? ಎಷ್ಟೋ ವರ್ಷಗಳ ಕಾಲ ಮರೀಚಿಕೆಯಂತೆ ಕಾಡಿದ ಈ ‘ಕೆಲಸ’ ಇಂದು ತಾನಾಗಿ ನನ್ನ ಪಾಲಿಗೆ ಒದಗಿ ಬಂದು ಕರೆಯುತ್ತಿದೆ! ಬಹುಶಃ ಕೆಲಸಕ್ಕಾಗಿ ಹಂಬಲಿಸಿ, ಸಿಗದಾಗ ನಿರಾಶನಾಗಿ, ತೀವ್ರ ಖಿನ್ನತೆಗೆ ಒಳಗಾಗಿ ಪಾಡು ಪಟ್ಟಿದ್ದೇ ಕಾರಣವಾಗಿ ದೇನಾಶ್ರೀಯವರ ಈ ಅವಕಾಶದ ಆಹ್ವಾನ ನನ್ನಲ್ಲಿ ಆ ಮಟ್ಟದ ಅಚ್ಚರಿಯನ್ನು ಮೂಡಿಸಿರಲಿಕ್ಕೂ ಸಾಕು! ಅದಷ್ಟು ಸಾಲದೆಂಬಂತೆ ಅವರು ಕಾಲೇಜ್ ಗೆ ಸಲ್ಲಿಸಬೇಕಾಗಿದ್ದ ಅರ್ಜಿಯನ್ನೂ ತಮ್ಮೊಂದಿಗೇ ತಂದಿದ್ದರು! “ಇದರಲ್ಲಿ ನೀವೊಂದು ಸಹಿ ಹಾಕಿ ಮುಖ್ಯ ವಿವರಗಳನ್ನು ತುಂಬಿಕೊಡಿ ಸಾಕು..ನೀವು ಸಂದರ್ಶನಕ್ಕೆ ಬರುವಾಗ ಎಲ್ಲಾ ಪ್ರಮಾಣ ಪತ್ರಗಳನ್ನೂ ತಂದು ತೋರಿಸಬಹುದು.. ಬರುವ ಸೋಮವಾರ ಸಂದರ್ಶನ ಇಟ್ಟುಕೊಂಡಿದ್ದೇವೆ” ಎಂದವರು ಹೇಳಿದಾಗಲಂತೂ ನಾನು ನಿಜಕ್ಕೂ ಮೂಕನಾಗಿ ಹೋದೆ. ಕೊನೆಗೆ ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ಅರ್ಜಿಯನ್ನು ತುಂಬಿ ಸಹಿ ಹಾಕಿ ಸಂದರ್ಶನಕ್ಕೆ ಹಾಜರಾಗುವೆನೆಂದು ಮಾತುಕೊಟ್ಟು ಅವರನ್ನು ಕಳಿಸಿಕೊಟ್ಟೆ.

ಮತ್ತೆರಡು ದಿನ ನನಗೆ ಅದೇ ಗೊಂದಲ—ಸಂದಿಗ್ಧಗಳ ಕಾಟ! ಹಾಯಾದ —ನೆಮ್ಮದಿಯ ತಿಂಗಳ ಸಂಬಳದ ಸುಂದರ ಬದುಕು ಕೈಬೀಸಿ ಕರೆಯುತ್ತಿದೆ… ನನ್ನ ರಂಗಭೂಮಿಯ ಚಟುವಟಿಕೆಗಳಿಗೂ ವೇದಿಕೆ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸುವ ಸಹೃದಯರು ಬೆಂಬಲಕ್ಕೆ ನಿಂತಿದ್ದಾರೆ…ಕೆಲಸವನ್ನು ಒಪ್ಪಿಕೊಂಡೇ ಬಿಡಲೇ?! ಆದರೆ ಹೀಗೆ ಕೆಲಸ ಒಪ್ಪಿಕೊಂಡರೆ ಅದರದ್ದೇ ಆದಂತಹ ನೂರಾರು ಒತ್ತಡಗಳನ್ನೂ ಸವಾಲುಗಳನ್ನೂ ಬೆನ್ನಿಗೆ ಕಟ್ಟಿಕೊಂಡಂತಾಗುತ್ತದೆ; ಅವುಗಳ ನಿರ್ವಹಣೆಯಲ್ಲಿ ರಂಗಭೂಮಿ ಹಿನ್ನೆಲೆಗೆ ಸರಿದು ಬದುಕಿನ ಜೀವಸೆಲೆಯೇ ಬತ್ತಿ ಹೋದಂತಾಗುತ್ತದೆ.. ಇಷ್ಟುದಿನ ಬೇಡವೆಂದು ದೂರಸರಿಸಿರುವ ಈ ಆಮಿಷದ ತೆಕ್ಕೆಗೆ ಈಗ ಹೋಗಿ ಸಿಕ್ಕಿಬೀಳಲೇ? ಉಂಹುಂ…ಬೇಡವೇ ಬೇಡ!

ಅಭಿನಯಿಸಿದ ಹ್ಯಾಮ್ಲೆಟ್ ಪಾತ್ರದ ದ್ವಂದ್ವ—ಇಬ್ಬಂದಿಗಳೆಲ್ಲಾ ಮತ್ತೆ ವಾಸ್ತವದಲ್ಲಿ ಅಮರಿಕೊಂಡಂತಾಗಿ ಹೋಗಿ ನಾನು ಹೈರಾಣಾಗಿಬಿಟ್ಟೆ. ಯಾಕೆ ಹೀಗೆ? ಯಾಕೆ ಹೀಗೆ ಬದುಕು ಪದೇ ಪದೇ ನನ್ನನ್ನು ಕವಲು ದಾರಿಯಲ್ಲಿ ತಂದು ನಿಲ್ಲಿಸುತ್ತದೆ? ನನಗೇ ಏಕೆ ಹೀಗೆ ಬದುಕಿನ ಪ್ರತಿ ಹೊರಳಿನಲ್ಲೂ ಆಯ್ಕೆಯ ಸಮಸ್ಯೆ ಎದುರಾಗುತ್ತದೆ?ಏನಿದರ ಚೇಷ್ಟೆ? ಒಂದೂ ಅರ್ಥವಾಗುತ್ತಿಲ್ಲ…

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

April 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: