ಅಂಬೇಡ್ಕರ್ ಪರಿಕಲ್ಪಿಸಿದ ಸಾಮಾಜಿಕತೆ…

ಮೇಟಿ ಮಲ್ಲಿಕಾರ್ಜುನ 

ಅಂಬೇಡ್ಕರ್ ಅನ್ನುವುದು ಇವತ್ತು ಕೇವಲ ನಾಮಪದವಾಗಿ ಮಾತ್ರ ಉಳಿದಿಲ್ಲ. ಅದೊಂದು ಕ್ರಿಯಾಪದವಾಗಿ ರೂಪಾಂತರಗೊಂಡಿದೆ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಕ್ರಿಯಾವರ್ತುಲವನ್ನು ಪ್ರತಿನಿಧಿಸುವ  ಆಲೋಚನಾಕ್ರಮವಾಗಿದೆ ಮತ್ತು ಈ ಎಲ್ಲ ವಲಯಗಳಲ್ಲಿ ಹುದುಗಿರುವ ಅಸಮಾನ ರಚನೆಗಳನ್ನು ವಿಶ್ಲೇಷಿಸುವ ತಾತ್ವಿಕ ವಿದ್ಯಮಾನವಾಗಿಯೂ ನೆಲೆಗೊಂಡಿದೆ.  ಇಂತಹ ಅಸಮಾನತೆ ಹಾಗೂ ಇದನ್ನು ನಿಯಂತ್ರಿಸುವ ಸಾಂಸ್ಕೃತಿಕ ಯಜಮಾನಿಕೆಯನ್ನು ಅಳಿಸಿ, ಹೊಸ ಸಾಮಾಜಿಕತೆಯನ್ನು ನೆಲೆಗೊಳಿಸುವ ದೃಷ್ಟಿಕೋನವಾಗಿದೆ.

ದಲಿತ, ಹಿಂದುಳಿದ, ತಳಸಮುದಾಯ, ಅಲ್ಪಸಂಖ್ಯಾತ, ಮಹಿಳೆ ಹಾಗೂ ಇತರೆ ದಮನಿತ ಸಮೂಹಗಳ ವಿಮೋಚನೆಗೆ ಬೇಕಾದ ದಾರಿಗಳನ್ನು ರೂಪಿಸಿದ ದಾರ್ಶನಿಕನಾಗಿ ಅಂಬೇಡ್ಕರ್ ಅವರು ನಮಗೆ ಒದಗಿ ಬಂದಿದ್ದಾರೆ. ಇವರ ಚಿಂತನೆಗಳು ಸಂಶೋಧನೆಯನ್ನು ನೆಲೆಯಾಗಿಸಿಕೊಂಡು ಮೈದೋರಿವೆ. ವೈಜ್ಞಾನಿಕ ವಿಧಾನ, ದತ್ತಾಂಶ ಹಾಗೂ ಖಚಿತ ತಾತ್ವಿಕ ಚೌಕಟ್ಟುಗಳು ಇವರ ಸಂಶೋಧನಾ ವಿಶ್ಲೇಷಣೆಗಳಲ್ಲಿ ಎದ್ದು ಕಾಣುತ್ತವೆ. ಇವರ ವಿಶ್ಲೇಷಣೆಗಳು ಕೇವಲ ಬಣ್ಣನೆಗಳು (Descriptive) ಆಗದೇ  ವಾದಾತ್ಮಕ ವಿಶ್ಲೇಷಣೆಗಳು (Argumentative) ಆಗಿರುತ್ತವೆ.  

ಭಾರತ ದೇಶದ ಸಾಮಾಜಿಕ ವ್ಯವಸ್ಥೆಯನ್ನು ನಿರಚನಗೊಳಿಸಲು ಅತ್ಯಂತ ಸೂಕ್ತ ವೈಚಾರಿಕ ಮಾದರಿಗಳನ್ನು ಅಂಬೇಡ್ಕರ್ ಅವರು ತಮ್ಮ ಸಂಶೋಧನೆಗಳ ಮೂಲಕ ಪ್ರಚುರಪಡಿಸಿದರು. ಇವರು ಪ್ರತಿಪಾದಿಸುವ ಸಾಮಾಜಿಕ ಮೌಲ್ಯಗಳು ಅತ್ಯಂತ ಮುಖ್ಯ. ಈ ಮೌಲ್ಯಗಳನ್ನು ವ್ಯಾಪಕವಾಗಿ ಸ್ವಾತಂತ್ರ್ಯ, ಸಮಾನತೆ ಹಾಗೂ ಬಾಂಧವ್ಯ ಎಂದು ವ್ಯಾಖ್ಯಾನಿಸಬಹುದು. ಹೀಗೆ ವ್ಯಾಖ್ಯಾನಿಸಿದ ಮೌಲ್ಯಗಳಲ್ಲಿ ವೈರುಧ್ಯ ಹಾಗೂ ವಿರೋಧಾಭಾಸವನ್ನು ನೋಡುತ್ತೇವೆ. ಸ್ವಾತಂತ್ರ್ಯ ಅನ್ನುವುದು ಸಮಾನತೆ ಮತ್ತು ಬಾಂಧವ್ಯವನ್ನೂ ಒಳಗೊಂಡಿರಬೇಕಾದ ಪರಿಕಲ್ಪನೆ. ಆದರೆ ಸ್ವಾತಂತ್ರ್ಯವನ್ನು ಪಡೆದಾದ ಮೇಲೆಯೂ ಸಮಾನತೆಯನ್ನು ಮತ್ತು ಪರಸ್ಪರ ಸಾಮಾಜಿಕ ಬಾಂಧವ್ಯವನ್ನು ಪಡೆಯಬೇಕು ಅನ್ನುವುದೇ ಇಲ್ಲಿ ವಿರೋಧಾಭಾಸವನ್ನು ಸೂಚಿಸುವ ಬಗೆಯಾಗಿದೆ.

ಇಂತಹದೊಂದು ವೈರುಧ್ಯ ಅಥವಾ ವಿರೋಧಾಭಾಸ ಅಂಬೇಡ್ಕರ್ ಅವರ ಆಲೋಚನಾ ಕ್ರಮದಲ್ಲಿಯೇ ಅಡಕವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಭಾರತದ ಸಾಮಾಜಿಕ ವಿನ್ಯಾಸದ ಒಳಗೆಯೇ ತಾರತಮ್ಯದ ನೆಲೆಗಳು ಅಂತಸ್ಥಗೊಂಡಿವೆ. ಭಾರತ ದೇಶದ ಸಮೂಹಗಳ ಬದುಕಿನ ವ್ಯವಸ್ಥೆಯೇ ಅಸಮಾನತೆಯನ್ನು ಪ್ರತಿನಿಧಿಸುವ ವಿನ್ಯಾಸವಾಗಿದೆ. ಹಾಗಾಗಿ ಸ್ವಾತಂತ್ರ್ಯದ ಜೊತೆಗೆ ನಮ್ಮ ಸಮೂಹಗಳು ಸಾಧಿಸಬೇಕಾದ ಇನ್ನೆರಡು ಮೌಲ್ಯಗಳೆಂದರೆ, ಸಮಾನತೆ ಮತ್ತು ಬಾಂಧವ್ಯ. ಹೊಸ ಸಾಮಾಜಿಕ ವಿನ್ಯಾಸವನ್ನು ಪಡೆಯುವ ಮಾದರಿಯನ್ನು ಈ ಮೌಲ್ಯಗಳ ಮೂಲಕ ಅಂಬೇಡ್ಕರ್ ಅವರು ರೂಪಿಸಿದ್ದಾರೆ.   

ಸಾಮಾಜಿಕ, ಸಾಂಸ್ಕೃತಿ, ರಾಜಕೀಯ ಹಾಗೂ ಆರ್ಥಿಕ ತಾರತಮ್ಯವನ್ನು ಬುಡಸಮೇತ ಕಿತ್ತು ಹೊಸ ಸಾಮಾಜಿಕತೆಯನ್ನು ನೆಲೆಗೊಳಿಸಲು ಈ ತಾತ್ವಿಕ ವಿನ್ಯಾಸ ಅತ್ಯಂತ ಜರೂರಿನದು ಅನ್ನುವುದು ಬಾಬಾ ಸಾಹೇಬ್ ಅವರ ವಿವೇಕ ಆಗಿತ್ತು. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಭಾರತದ ಹೊಸ ಸಾಮಾಜಿಕತೆಯನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ಅಷ್ಟೆ ಅಲ್ಲದೇ, ಸ್ವಾತಂತ್ರ್ಯ, ಸಮಾನತೆ ಹಾಗೂ ಬಾಂಧವ್ಯಗಳ ನಡುವೆ ಈಗಾಗಲೇ ಏರ್ಪಟ್ಟಿದ್ದಂತಹ ಕಂದಕವನ್ನು ಕಿಂಚಿತ್ತು ಕಡಿಮೆಗೊಳಿಸಲು ಸಾಧ್ಯವಾಗಿಲ್ಲ. ಯಾವ ಮೌಲ್ಯಗಳ ನಡುವೆ ಅನುಸಂಧಾನಗೊಳಿಸುವ ಅಗತ್ಯವಿತ್ತೋ, ಅವುಗಳ ನಡುವೆ ಇನ್ನಷ್ಟು ಅಂತರವನ್ನು ಹೆಚ್ಚಿಸುವ ಹುನ್ನಾರಗಳು ಕಳೆದ ಏಳು ದಶಕಗಳಿಂದಲೂ ನಡೆದುಕೊಂಡೆ ಬಂದಿವೆ. ಭಾರತದ ಎಲ್ಲ ಸಮೂಹಗಳ ನಡುವೆ ಸಾಂಸ್ಕೃತಿಕ ಅನುಸಂಧಾನದ ಮಾರ್ಗಗಳನ್ನು ನೆಲೆಗೊಳಿಸುವ ಇರಾದೆ ಅಂಬೇಡ್ಕರ್ ಅವರದಾಗಿತ್ತು. ಅಂಬೇಡ್ಕರ್ ಅವರನ್ನು ನಿತ್ಯವೂ ಜಪಿಸುವ ನಾವು, ಸಮುದಾಯಗಳ ಏಳಿಗೆಯನ್ನು ಕುರಿತು ಇವರು ರೂಪಿಸಿದ ತಾತ್ವಿಕ ನಿಲುವುಗಳನ್ನು ಪ್ರಾಯೋಗಿಕವಾಗಿ ನೆಲೆಗೊಳಿಸುವ ಯಾವ ಬಗೆಯ ಪ್ರಯತ್ನವನ್ನೂ ಮಾಡಲೇ ಇಲ್ಲ. 

ಯಾವುದೇ ದೇಶದ ಜನರು ತಮ್ಮ ಬದುಕಿನ ಸೌರ್ಹಾದತೆಗಾಗಿ ‘ಒಳಗೊಳ್ಳುವಿಕೆ’ ಮತ್ತು ‘ಅಸ್ಮಿತೆ’ ಎಂಬ ಈ ಎರಡು ಮುಖ್ಯ ಸಂಗತಿಗಳನ್ನು ಒಟ್ಟೊಟ್ಟಿಗೆ ಹೊಂದಿರಬೇಕಾಗುತ್ತದೆ. ಉದಾ.ಗೆ ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ಒಡಕಿಗೆ ಕಾರಣವಾಗುವ ವಿದ್ಯಮಾನಗಳನ್ನು ಮರೆತುಬಿಡಲು ಸಿದ್ಧರಿದ್ದರೆ ಅವರು ಒಂದೇ ದೇಶದಯೊಳಗೆ ಸಹಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು ಥಾಟ್ಸ್ ಆನ್ ಪಾಕಿಸ್ತಾನ್ ಎನ್ನುವ ಬರಹದಲ್ಲಿ ಚರ್ಚಿಸುತ್ತಾರೆ. ಆದರೆ ಚಾರಿತ್ರಿಕ ವ್ಯಂಗ್ಯವೇನೆಂದರೆ, ನಮ್ಮನ್ನು ವಿಭಜಿಸುವುದಕ್ಕೆ ಕಾರಣವಾಗುವ ಸಂಗತಿಗಳೇ ನಮಗೆ ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮುಖ್ಯವಾಗುತ್ತವೆ.

ಸಾಂಸ್ಕೃತಿಕ ಹುನ್ನಾರಗಳಿಗೆ ಕಾರಣವಾಗುವ ಎಲ್ಲ ಬಗೆಯ ಸಂಗತಿಗಳನ್ನು ಅಂಬೇಡ್ಕರ್ ಅವರು ಮನಗಂಡಿದ್ದರು. ಅದಕ್ಕಾಗಿಯೇ, ಸಮೂಹಗಳ ಪ್ರಾತಿನಿಧ್ಯ, ತಾತ್ವಿಕ ನಿಲುವುಗಳು ಹಾಗೂ ಸಾಂಸ್ಕೃತಿಕ ಪ್ರತಿನಿಧೀಕರಣವನ್ನು ಕುರಿತು ತಮ್ಮ ಚಿಂತನೆಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಮಂಡಿಸಿದ್ದಾರೆ. ಅಂಚಿನ ಸಮೂಹಗಳು, ಸಮಾಜದ ಮುಖ್ಯವಾಹಿನಿಯಿಂದ ಹೊರಗಿರುವ ಸಮೂಹಗಳು, ಅಧಿಕಾರಹೀನ ಸಮುದಾಯಗಳು ಹಾಗೂ ಮನುಷ್ಯ ಸಹಜ ಘನತೆಯಿಂದ ನಿರಾಕರಣೆಗೆ ಒಳಗಾದ ಸಾಮಾಜಿಕ ಗುಂಪುಗಳ ಅಸ್ತಿತ್ವ, ಅಸ್ಮಿತೆ, ಪ್ರಜ್ಞೆ ಹಾಗೂ ಪ್ರಾತಿನಿಧ್ಯದ ಬಗೆಗೆ ಅಂಬೇಡ್ಕರ್ ಅವರಿಗೆ ಅಪಾರವಾದ ಕಾಳಜಿಗಳಿದ್ದವು. ಸಮಾಜದ ಐಕ್ಯತೆ, ಸಹಬಾಳ್ವೆ ಮತ್ತು ಆರ್ಥಿಕ ಸಮಾನತೆಗಳ ನಡುವಣ ನಂಟಸ್ತಿಕೆಯನ್ನು ಅತ್ಯಂತ ಸರಿಯಾಗಿ ಗುರುತಿಸಿದ್ದರು. ಸಹಜೀವನ, ಸಾಮರಸ್ಯ ಹಾಗೂ ದೇಶದ ಐಕ್ಯತೆಗೆ ಬೇಕಾದ ಇಂತಹ ಮೂಲತತ್ವಗಳು ಅಂಬೇಡ್ಕರ್ ಅವರು ಚಿಂತನೆಗಳ ಪ್ರಮುಖ ಆಶಯಗಳು ಆಗಿದ್ದವು. 

ಸಾಮಾಜಿಕತೆ ಅನ್ನುವುದು ಕೇವಲ ಸಾಮೂಹಿಕ ನೆಲೆಯಲ್ಲಿ ರೂಪಿಸುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಮಾತ್ರವಲ್ಲ. ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಸಮಾನತೆ ಹಾಗೂ ಅವಕಾಶಗಳು ಯಥೇಚ್ಛವಾಗಿ ನೆಲೆಗೊಳ್ಳುವ ಪ್ರಜಾಸತ್ತಾತ್ಮಕ ವಾತವರಣ ನಿರ್ಮಾನಗೊಳ್ಳಬೇಕು ಅನ್ನುವುದು ಅವರ ಬಲವಾದ ಹಕ್ಕೊತ್ತಾಯ ಆಗಿತ್ತು. ಹಾಗಾಗಿಯೇ, ಸಮೂಹಗಳಿಗೆ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ನೀಡುವುದಕ್ಕಿಂತ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವುದೇ ನಿಜವಾದ ಸ್ವಾತಂತ್ರ್ಯ ಎನ್ನುವುದು ಇವರ ನಂಬಿಕೆಯಾಗಿತ್ತು ಮತ್ತು ಇದುವೇ ದಿಟವಾದ ಸ್ವಾತಂತ್ರ್ಯ. ಅಂದರೆ, ಮೇಲು-ಕೀಳು, ಹಿಂದೂ-ಮುಸ್ಲಿಂ, ಬಹುಸಂಖ್ಯಾತರು-ಅಲ್ಪಸಂಖ್ಯಾತರು, ಗಂಡು-ಹೆಣ್ಣು ಎಂಬ ಇತ್ಯಾದಿ ವೈರುಧ್ಯಗಳನ್ನು ಮೀರಿ ಸಹಬಾಳ್ವೆಯ, ಸಮಾನತೆಯ ಹಾಗೂ ಸ್ವಾಯತ್ತತೆಯಿಂದ ಕೂಡಿದ ಸಮಾಜವನ್ನು ಇವರು ಪರಿಕಲ್ಪಿಸಿದ್ದರು. ಹಾಗಾಗಿ ಏಕಕಾಲಕ್ಕೆ ವ್ಯಕ್ತಿ ಮತ್ತು ಸಾಮಾಜಿಕ ಘನತೆಯನ್ನು ನೆಲೆಗೊಳಿಸುವ ತುಡಿತವನ್ನು ಹೊಂದಿದ್ದರು. 

ತಳಸಮುದಾಯ, ಶೂದ್ರ, ಅತೀ ಶೂದ್ರ ಸಮುದಾಯಗಳು ಮತ್ತು ದಲಿತರ ‘ಸ್ವಂತಿಕೆ’ಯ ಪ್ರಶ್ನೆ ಎದುರಾದಾಗೆಲ್ಲ ಅಂಬೇಡ್ಕರ್ ವೈಚಾರಿಕ ವಿನ್ಯಾಸಗಳು ಪ್ರಬಲ ಅಸ್ತ್ರಗಳಾಗಿ ಒದಗಿಬಂದಿವೆ. ದಲಿತ ಚಳವಳಿಯ ತಾತ್ವಿಕ ನೆಲೆಗಳು, ಕಾರ್ಯತಂತ್ರ, ಕ್ರಿಯಾಯೋಜನೆ ಹಾಗೂ ಸಾಮಾಜಿಕ ಸಾಂಗತ್ಯವನ್ನು ರೂಪಿಸುವ ಹೋರಾಟಗಳಿಗೆ ಬೆನ್ನೆಲುಬಾಗಿ ಅಂಬೇಡ್ಕರ್ ವಿಚಾರಧಾರೆ ಅತ್ಯಂತ ಪ್ರಧಾನ ಪಾತ್ರವನ್ನು ವಹಿಸಿದೆ. ಆದ್ದರಿಂದ ಜಾತಿ ಮತ್ತು ಜಾತಿ ಸಂಬಂಧಿತ ಸಂಗತಿಗಳ ಬಗೆಗಿನ ನಿಚ್ಚಳವಾದ ಎಚ್ಚರ ನೆಲೆಗೊಳ್ಳಲು ಸಾಧ್ಯವಾಯಿತು. ಆದರೆ ರಾಜಕೀಯ ಮತ್ತು ಸಾಂಸ್ಕೃತಿಕ ಮೇಲಾಟದ ಕಾರಣವಾಗಿ ಇವತ್ತು ಜಾತಿಗಳ ದೃವೀಕರಣ ಹಾಗೂ ಕೋಮುವಾದಿ ನಿಲುವುಗಳೇ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿವೆ. ಸಾಮಾಜಿಕ ಸಹಬಾಳ್ವೆಗೆ ಎದುರಾಗುವ ಇಂತಹ ಅಪಚಾರವನ್ನು ಮೀರುವುದಕ್ಕೆ, ಸಾಂಸ್ಥೀಕರಣಗೊಂಡಿರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲನಗೊಳಿಸುವಲ್ಲಿ ಪ್ರಜಾಸತ್ತಾತ್ಮಕ ಅಧಿಕಾರದ ಪಾತ್ರವೇನು ಎನ್ನುವುದನ್ನು ಅಂಬೇಡ್ಕರ್ ಅವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ಬಾಂಧವ್ಯ ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆಗಳನ್ನು ರಾಷ್ಟ್ರೀಯತೆಯೊಂದಿಗೆ ತಳುಕು ಹಾಕಿರುವುದನ್ನು ಇವರ ಹಲವು ವಿಶ್ಲೇಷಣೆಗಳಲ್ಲಿ ಕಾಣುತ್ತೇವೆ.

ಅಂಚಿನ ಸಮೂಹಗಳನ್ನು ಅಂಬೇಡ್ಕರ್ ಅವರು ದಲಿತ ಮತ್ತು ಸಬಾಲ್ಟ್ರನ್ ಎಂದು ಬೇರ್ಪಡಿಸಿದ್ದರು. ಏಕೆಂದರೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಮತ್ತು ಸ್ವಾಯತ್ತತೆಯ ವಾತಾವರಣವನ್ನು ರೂಪಿಸಲು ಈ ವಿಭಜನೆ ಅತ್ಯಂತ ಮುಖ್ಯವಾಗಿತ್ತು. ಸಬಾಲ್ಟ್ರನ್ ಸಮೂಹಗಳಿಗೆ ಈಗಾಗಲೇ ಸಾಮಾಜಿಕ ಅಸ್ತಿತ್ವ ಇರುತ್ತದೆ ಆದರೆ ಅದಕ್ಕೊಂದು ಸಂಘಟಿತ ವಿನ್ಯಾಸ ಇರುವುದಿಲ್ಲ. ಅಂದರೆ ಎಲ್ಲ ಬಗೆಯ ಅವಕಾಶ ಮತ್ತು ಸಂಪನ್ಮೂಲಗಳ ಹಂಚಿಕೆಯಲ್ಲಿ ಇವರೂ ವಂಚಿತರಾಗಿರುತ್ತಾರೆ. ಆದರೆ ದಲಿತರು ಇದಕ್ಕಿಂತ ಹೀನಾಯ ಸಾಮಾಜಿಕ, ಆರ್ಥಿಕ ಸ್ಥಿತಿಯಲ್ಲಿರುತ್ತಾರೆ ಮತ್ತು ಸಾಮಾಜದ ಯಾವುದೇ ಶ್ರೇಣೀಕರಣದಲ್ಲಿಯೂ ಇವರನ್ನು ಒಂದು ಸಾಮಾಜಿಕ ಸಮೂಹವನ್ನಾಗಿ ನೆಲೆಗೊಳಿಸಲು ಅವಕಾಶವಿರುವುದಿಲ್ಲ.

ಹಾಗಾಗಿಯೇ ಭಾರತದ ಸ್ವಾತಂತ್ರ್ಯ ಚಳವಳಿಯ ಬಗೆಗೆ ಅಂಬೇಡ್ಕರ್ ಅವರು ಭಿನ್ನ ನಿಲುವುಗಳನ್ನು ತಾಳಿದ್ದರು. ಅಂದರೆ ವಸಾಹತು ಆಳ್ವಿಕೆ ಮತ್ತು ಅದರಿಂದ ಏರ್ಪಟ್ಟ ಅಸಮಾನತೆಯನ್ನು ನಿರ್ಮೂಲನಗೊಳಿಸಿ ನಾವು ಸ್ವಾತಂತ್ರ್ಯವನ್ನು ಪಡೆಯಬೇಕು ಅನ್ನುವ ಏಕೈಕ ಉದ್ದೇಶವನ್ನು ಈ ಚಳವಳಿ ಹೊಂದಿತ್ತು. ಆದರೆ ಅಸ್ಪೃಶ್ಯತೆಯ ನಿರ್ಮೂಲನೆ ಹಾಗೂ ಸಾಮಾಜಿಕ ಸಮಾನತೆ ಮತ್ತು ಸ್ವಾಯತ್ತತೆಯನ್ನು ನೆಲೆಗೊಳಿಸುವ ಇರಾದೆ ಈ ಚಳವಳಿಗೆ ಇರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ವಿಶ್ಲೇಷಿಸಿದ್ದಾರೆ. ಒಟ್ಟಾರೆ ಸಮಾಜಗಳ ರಚನೆಗೆ ನೈತಿಕ ತಳಹದಿಯೇ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಖಚಿತವಾಗಿ ತಮ್ಮ ಚಿಂತನೆಗಳಲ್ಲಿ ವಿಶ್ಲೇಷಿಸಿದ್ದಾರೆ.  

‍ಲೇಖಕರು Admin

April 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: