ಶ್ರೀನಿವಾಸ ಪ್ರಭು ಅಂಕಣ – ತುಸು ಭಾರವಾದ ಹೃದಯದೊಂದಿಗೆ ಮತ್ತೆ ಬಾಂಬೆಗೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

62

ಅಂತೂ ಇಂತೂ ನಮ್ಮ ರಂಗ ಪ್ರವಾಸವನ್ನು ಮುಗಿಸಿಕೊಂಡು ಬೆಂಗಳೂರಿಗೆ ಮರಳಿ ಬಂದೆವು.’ಉದ್ಭವ’ ನಾಟಕ ಪ್ರದರ್ಶನಕ್ಕೆಂದು ಬಾಂಬೆಗೆ ಹೋಗಿದ್ದಾಗಲೇ ಮಂಜುನಾಥ್ ಅವರೊಟ್ಟಿಗೆ ಮಾತಾಡಿ ಆದಷ್ಟು ಬೇಗ ಶಿಬಿರ ನಡೆಸಲು ಬಂದುಬಿಡುತ್ತೇನೆಂದು ಹೇಳಿ ದಿನಾಂಕವನ್ನೂ ನಿಗದಿ ಪಡಿಸಿಕೊಂಡು ಬಂದಿದ್ದೆ.ಪ್ರವಾಸದ ಸಂದರ್ಭದಲ್ಲಿ ನಡೆದ ಅವಾಂತರಗಳಿಂದಾಗಿ ಮನಸ್ಸು ಪೂರ್ತಿ ಕೆಟ್ಟುಹೋಗಿತ್ತು; ಬೇರೊಂದು ವಾತಾವರಣದಲ್ಲಿ ನೆಮ್ಮದಿಯಾಗಿ ಒಂದಷ್ಟು ದಿನ ಕಳೆದುಬರಲು ತವಕಿಸುತ್ತಿತ್ತು.

ಊಹಿಸಿದ್ದಂತೆಯೇ ಬೆಂಗಳೂರಿಗೆ ಬಂದ ಒಂದೆರಡು ದಿನಗಳಲ್ಲೇ ತಂಡದ ಬಂಡಾಯಗಾರರು ನನ್ನನ್ನು ಮಾತುಕತೆಗೆ—ವಿಚಾರಣೆ ಸೂಕ್ತ ಪದವೇನೋ—ಕರೆದರು.ಆ ‘ವಿಚಾರಣೆ’ಯಲ್ಲೋ—ಮತ್ತದೇ ಮಾತು—ಆರೋಪಗಳ ಪುನರಾವರ್ತನೆ:’ನನ್ನದು ಸರ್ವಾಧಿಕಾರಿ ಧೋರಣೆ..ಕಟುವಾಗಿ ದೂಷಿಸುವ ಪ್ರವೃತ್ತಿ.. ಇತ್ಯಾದಿ ಇತ್ಯಾದಿ. ನಾನು ಒಂದೇ ಮಾತಿನಲ್ಲಿ ಅವರೆಲ್ಲರ ಆರೋಪಗಳಿಗೆ ಉತ್ತರಿಸಿದೆ: “ಶಿಸ್ತನ್ನು ವಿಧಿಸುವುದು ದಬ್ಬಾಳಿಕೆಯಾಗುವುದಾದರೆ ಮುಂದೆಯೂ ನಾನು ಹಾಗೆಯೇ ಇರುವವನು; ಮಾಡದ ತಪ್ಪಿಗೆ ಕ್ಷಮೆ ಯಾಚಿಸುವ ಅಗತ್ಯವಿಲ್ಲ; ನಿಮಗೆ ನನ್ನ ನಡವಳಿಕೆ ಹಿಡಿಸದಿದ್ದರೆ ತಂಡದಿಂದ ನನ್ನನ್ನೇ ಹೊರಹಾಕಬಹುದು; ಒಂದು ಬಾಗಿಲು ಮುಚ್ಚಿದರೆ ಹತ್ತು ಬಾಗಿಲು ಹೊಸದಾಗಿ ತೆರೆದುಕೊಳ್ಳುತ್ತದೆನ್ನುವ ವಿಶ್ವಾಸ ನನಗಿದೆ; ಇಷ್ಟು ದಿನದ ನಿಮ್ಮೆಲ್ಲರ ಸಹಕಾರಕ್ಕೆ,ಸಹನೆಗೆ, ಇಷ್ಟುದಿನ ನನ್ನನ್ನು ಸಹಿಸಿಕೊಂಡಿದ್ದಕ್ಕೆ ಅನಂತಾನಂತ ವಂದನೆಗಳು;ಹತ್ತಾರು ಒಳ್ಳೆಯ ನಾಟಕಗಳನ್ನು ಜತೆಯಾಗಿ ಮಾಡಿದ್ದೇವೆ; ನೂರಾರು ಯಶಸ್ವೀ ಪ್ರದರ್ಶನಗಳನ್ನು ನೀಡಿದ್ದೇವೆ..ಅದೆಲ್ಲವೂ ಎಂದೂ ನನ್ನ ನೆನಪಿನಿಂದ ಮರೆಯಾಗುವುದಿಲ್ಲ” ಎಂದಷ್ಟು ಹೇಳಿ ಹೊರನಡೆದುಬಿಟ್ಟೆ.

ಒಂದು ಬಗೆಯ ಖಾಲಿತನ ನನ್ನನ್ನು ಆವರಿಸಿಕೊಂಡುಬಿಟ್ಟಿತ್ತು.ಯಾವ ತಂಡಕ್ಕೆ ಒಂದು ಹೊಸ ರೂಪವನ್ನು ಕೊಟ್ಟು ಅನೇಕ ನಾಟಕಗಳನ್ನು ಮಾಡಿಸಿ ಕಟ್ಟಿ ಬೆಳೆಸಿದೆನೋ ಆ ತಂಡದಿಂದಲೇ ಇಂದು ಹೊರಬಂದಿದ್ದೇನೆ!ಹಾಗೆಂದು ಅವಕಾಶಗಳ ಕೊರತೆಯೇನೂ ನನ್ನನ್ನು ಬಾಧಿಸುವಂತಿರಲಿಲ್ಲ. ನಾಡಿನ ಯಾವುದೇ ರಂಗತಂಡದವರು ನನ್ನ ನಿರ್ದೇಶನದಲ್ಲಿ ನಾಟಕವನ್ನು ಮಾಡಲು ಸಿದ್ಧರಿದ್ದರು.ತಿಂಗಳಿಗೊಂದೂರಿನಂತೆ ನಾಡಿನಾದ್ಯಂತ ಸಂಚರಿಸಿಕೊಂಡು ನಾಟಕ ಮಾಡಿಸಿಕೊಂಡಿರುವುದು ಕಷ್ಟವೇನಾಗಿರಲಿಲ್ಲ. ಆದರೆ ಇಷ್ಟು ವರ್ಷಗಳ ಪರಿಶ್ರಮದಿಂದ ಬೆಳೆಸಿದ್ದ ‘ನಮ್ಮ ತಂಡ’ ಎಂಬೊಂದು ಭಾವನಾತ್ಮಕ ಬಂಧ ಬೆಸೆದುಕೊಂಡಿತ್ತಲ್ಲಾ..ಅದು ತುಂಡರಿಸಿಹೋದಾಗ ಆದ ಘಾಸಿ ಮಾತ್ರ ಮಾತಿಗೆ ನಿಲುಕದ್ದು. ಅಂದು ಸಂಜೆ ನನ್ನ ಜತೆಗಿದ್ದವರು ಅಂತರಂಗದ ಕಿರಿಯ ಗೆಳೆಯ ಗೋಪಿ, ಫಣೀಂದ್ರ ಹಾಗೂ ಸುಶೀಲೇಂದ್ರ.ಎದುರಿಗೆ ಎಷ್ಟೇ ‘ಧೈರ್ಯವಾಗಿದ್ದೇನೆ’ ಎಂದು ತೋರಿಸಿಕೊಂಡರೂ ಒಳಗಿನ ನನ್ನ ಬೇಗುದಿಯನ್ನು ಅರ್ಥಮಾಡಿಕೊಂಡಿದ್ದ ಗೆಳೆಯರು ಸಮಾಧಾನ ಹೇಳಿ ವಿಶ್ವಾಸ ತುಂಬಿದರು: “ಚಿಂತೆ ಮಾಡಬೇಡಿ ಪ್ರಭೂ..ನೀವು ನಾಟಕಗಳನ್ನು ಬರೆದು ಸಿದ್ಧ ಮಾಡಿಟ್ಟುಕೊಳ್ಳಿ..ಒಂದು ಹೊಸ ತಂಡ ಕಟ್ಟಿಕೊಂಡು ನಾವೇ ನಾಟಕ ಮಾಡಿಸೋಣ.. ತಂಡ ಹೊಸದಾದರೂ ನಿಮ್ಮ ಹೆಸರಿನ ಬಲ ಇರುತ್ತಲ್ಲಾ,ಅಷ್ಟು ಸಾಕು..ಪ್ರಾರಂಭದ ಬಂಡವಾಳದ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ..ಅದೆಲ್ಲಾ ನಾವು ನೋಡಿಕೋತೀವಿ.” ಅವರ ಮಾತುಗಳನ್ನು ಕೇಳಿ ಮನಸ್ಸು ಎಷ್ಟೋ ಹಗುರಾಯಿತು.

ಇದಾದ ಎರಡು ದಿನಕ್ಕೇ ಮೈಸೂರು ಅಸೋಸಿಯೇಷನ್ ನ ಕಲಾವಿದರಿಗೆ ಶಿಬಿರ—ನಾಟಕ ಮಾಡಿಸಲು ಬಾಂಬೆಗೆ ಹೊರಟುಬಿಟ್ಟೆ.ರಂಗ ಚಟುವಟಿಕೆಯಲ್ಲಿ ತನ್ಮಯತೆಯಿಂದ ತೊಡಗಿಕೊಂಡುಬಿಟ್ಟರೆ ಮನಸ್ಸಿನ ದುಗುಡ—ಸಂಕಟಗಳೆಲ್ಲವೂ ಹೇಳಹೆಸರಿಲ್ಲದಂತೆ ಪರಾರಿಯಾಗಿ ಬಿಡುತ್ತವೆ! ಬಾಂಬೆಯಲ್ಲಿ ನನಗೆ ಅತ್ಯಂತ ಆತ್ಮೀಯ ಸ್ವಾಗತ ದೊರೆಯಿತು.ಉತ್ಸಾಹದಿಂದ ಪುಟಿಯುತ್ತಿದ್ದ ಪ್ರತಿಭಾವಂತ ರಂಗಕರ್ಮಿಗಳ ಒಂದು ಅದ್ಭುತ ತಂಡವನ್ನೇ ಕಟ್ಟಿ ಬೆಳೆಸಿದ್ದರು ಮಂಜುನಾಥ ದ್ವಯರು.ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪ್ರೀತಿ—ವಿಶ್ವಾಸ—ಬದ್ಧತೆಗಳೇ ಆ ತಂಡದ ಮೂಲದ್ರವ್ಯ.ಡಾ॥ಮಂಜುನಾಥ್ ಹಾಗೂ ಮಂಜುನಾಥಯ್ಯ ಅವರ ಜತೆಗಿದ್ದ ಇತರ ಕಲಾವಿದರು ರಂಗನಾಥರಾವ್ ,ಗುರುದತ್ತ ರಾವ್ ,ದೇಸಾಯಿ,ಪ್ರಸಾದ್—ಭಾರತಿ ಪ್ರಸಾದ್ ,ಶ್ರೀಕಾಂತ್ ಅಲಿಯಾಸ್ ಚಿಕ್ಕಣ್ಣ,ರವಿಶಂಕರ್ , ಹರೀಶ್ ,ಪ್ರಸನ್ನ, ಉಷಾ ಆಂಟಿ, ರತ್ನ ರಾವ್ ,ಸರಿತಾ, ರಮಾ ಹರಿಹರನ್ , ಶಾರ್ವರಿ…ಮೊದಲಾದ ಕಲಾವಿದರು. ತರಬೇತಿ ಶಿಬಿರವನ್ನು ನಡೆಸುತ್ತಲೇ ಜೊತೆಯಲ್ಲೇ ‘ಬೇಲಿ ಮತ್ತು ಹೊಲ’ ನಾಟಕದ ತಾಲೀಮನ್ನೂ ಶುರು ಮಾಡಿಬಿಡುವುದೆಂದು ಯೋಜನೆ ಹಾಕಿಕೊಂಡೆವು.ಅನೇಕ ‘ಸ್ಫೂರ್ತ ವಿಸ್ತರಣ'(improvisations) ಗಳನ್ನು ಅವರುಗಳು ಅತ್ಯಂತ ಸೊಗಸಾಗಿ,ಪ್ರಬುದ್ಧವಾಗಿ ಕಟ್ಟಿಕೊಟ್ಟ ರೀತಿಗೆ ನಾನು ಮಾರುಹೋದೆ.ಶಿಬಿರದಲ್ಲಿದ್ದ ರಮಾ ಅವರ ಪತಿ ಹರಿಹರನ್ ಪ್ರಸಿದ್ಧ ತಮಿಳು ಚಿತ್ರ ನಿರ್ದೇಶಕರು.ಆ ಕಾಲಘಟ್ಟದಲ್ಲಿ ಅವರು ನಿರ್ದೇಶಿಸಿದ್ದ ‘ಏಳಾವುದ ಮನಿದನ್’ ಒಂದು ಅರ್ಥಪೂರ್ಣ ಚಿತ್ರವೆಂದು ಹೆಸರು ಮಾಡಿತ್ತು.ಸ್ವಾರಸ್ಯದ ಸಂಗತಿಯೆಂದರೆ ಆ ಚಿತ್ರದಲ್ಲಿ ಎಂ.ಎ.ಓದುವಾಗ ನನ್ನ ಜತೆಗಿದ್ದ ಸತ್ಯೇಂದ್ರ—ನನಗೆ ‘ತೀರ್ಥದೀಕ್ಷೆ’ ನೀಡಿದ್ದ, ‘ಕ್ರಾಂತಿ ಬಂತು ಕ್ರಾಂತಿ’ ನಾಟಕದಲ್ಲಿ ನನ್ನ ಜತೆಗೆ ಅಭಿನಯಿಸಿದ್ದ ಸತ್ಯೇಂದ್ರ ಕೂಡಾ ಒಂದು ಮುಖ್ಯ ಪಾತ್ರ ನಿರ್ವಹಿಸಿದ್ದ! ಹರಿಹರನ್ ಅವರು ಒಮ್ಮೆ ನಮ್ಮ ಶಿಬಿರಕ್ಕೂ ಬಂದು ‘ಚಿತ್ರ ಮಾಧ್ಯಮ’ ಹಾಗೂ ‘ರಂಗ ಮಾಧ್ಯಮ’ಗಳ ನಡುವಣ ಸಂಬಂಧ—ವ್ಯತ್ಯಾಸಗಳ ಕುರಿತಾಗಿ ಸೊಗಸಾಗಿ ಮಾತಾಡಿದ್ದರು.ಇರಲಿ.

ಅತ್ಯಲ್ಪ ಕಾಲದಲ್ಲೇ ಅಲ್ಲಿ ನನಗೆ ಅತಿ ಆತ್ಮೀಯನಾಗಿ ‘ಏಕವಚನ’ದ ಗೆಳೆಯರೇ ಆಗಿಹೋದವರೆಂದರೆ ಗುರುದತ್ತ ರಾವ್ ಹಾಗೂ ಶ್ರೀಕಾಂತ್. ಪ್ರಸಿದ್ಧ ಗಾಯಕ ಹರಿಹರನ್ ಅವರ ಹತ್ತಿರದ ಗೆಳೆಯನಾಗಿದ್ದ ಗುರು ಸ್ವತಃ ತುಂಬಾ ಒಳ್ಳೆಯ ಗಾಯಕ. ಅವನು ಸೊಗಸಾಗಿ ಹಾಡುತ್ತಿದ್ದ ‘ಕಾ ಕರೂ ಸಜನೀ ಆಯೇನ ಬಾಲಮ್ ‘ ಇನ್ನೂ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿದೆ!

ಅದೇನೋ..ನನ್ನ ಸ್ವಭಾವಕ್ಕೆ ಒಗ್ಗದ ನಗರ ಬಾಂಬೆ. ಹೊರಗೆ ಹೋಗಿ ಊರು ಸುತ್ತಿಕೊಂಡು ಬರಬೇಕು ಎಂದು ನನಗೆ ಅನ್ನಿಸುತ್ತಲೇ ಇರಲಿಲ್ಲ.ಹೀಗಾಗಿ ದಿನದ ಹೆಚ್ಚಿನ ಸಮಯ ಮಾಹೀಮ್ ನಲ್ಲಿದ್ದ ಮೈಸೂರು ಅಸೋಸಿಯೇಷನ್ ನ ಮೂರನೇ ಮಹಡಿಯ ನನ್ನ ಕೋಣೆಯಲ್ಲೇ ಕಳೆಯುತ್ತಿದ್ದೆ.ನೆಚ್ಚಿನ ಸಂಗಾತಿಗಳಾಗಿ ಒಂದಷ್ಟು ಪುಸ್ತಕಗಳಿದ್ದವಲ್ಲಾ! ಆಗಾಗ್ಗೆ ಕೆಲ ಶಿಬಿರಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಬಂದು ರಂಗಭೂಮಿಯ ಬಗ್ಗೆ,ನಾಟಕಗಳ ಬಗ್ಗೆ ಚರ್ಚಿಸುತ್ತಿದ್ದರು. ಒಂದೊಂದು ವಾರಾಂತ್ಯದಲ್ಲಿ ಚೆಂಬೂರಿನಲ್ಲಿದ್ದ ಶ್ರಿಕಾಂತನ ಮನೆಗೆ ಗುರುವಿನೊಟ್ಟಿಗೆ ಹೋಗಿ ‘ಗೋಷ್ಠಿ’ ನಡೆಸಿ ಸೋದರಿ ಉಷಾ ಶ್ರೀಕಾಂತರ ಆತಿಥ್ಯ ಸ್ವೀಕರಿಸಿ ಬರುತ್ತಿದ್ದುದೂ ಉಂಟು!

ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ತಾಲೀಮಿಗೆ ಬಂದಿಳಿಯುತ್ತಿದ್ದರು. 9—9.30 ರ ವರೆಗೆ ಶಿಬಿರ—ತಾಲೀಮು ನಡೆಯುತ್ತಿತ್ತು. ಶನಿವಾರ—ಭಾನುವಾರಗಳಂದು ಮಾತ್ರ ಬೆಳಗಿನಿಂದ ಸಂಜೆಯವರೆಗೂ ಶಿಬಿರ ನಡೆಯುತ್ತಿತ್ತು. ರಂಗನಾಥರಾವ್ ಎಂಬ ಕಲಾವಿದರು ‘ಬೇಲಿ ಮತ್ತು ಹೊಲ’ ನಾಟಕದಲ್ಲಿ ಇನ್ಸ್ ಪೆಕ್ಟರ್ ಪೋತರಾಜುವಿನ ಪಾತ್ರ ನಿರ್ವಹಿಸುತ್ತಿದ್ದರು. ಇವರು ಪ್ರಸಿದ್ಧ ಹಿರಿಯ ಸಾಹಿತಿ ವಿ.ಸೀತಾರಾಮಯ್ಯನವರ ಹತ್ತಿರದ ಸಂಬಂಧಿಗಳು. ಸಿಡಿಲ ಕಂಠದ ಈ ಕಲಾವಿದ ಸಂಭಾಷಣೆ ಹೇಳುತ್ತಿದ್ದ ರೀತಿ,ಮಾತಿನ ಏರಿಳಿತ, ಕಣ್ಣುಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದ ಪರಿ, ಒಟ್ಟಾರೆ ಭಾವಾಭಿವ್ಯಕ್ತಿ ನನಗೆ ತುಂಬಾ ಇಷ್ಟವಾಗಿತ್ತು.

ಗುರು ದಫೇದಾರ ಚಿನ್ನಪ್ಪನ ಪಾತ್ರವನ್ನೂ, ರವಿಶಂಕರ್ ಹಾಗೂ ಹರೀಶ್ ಪೋಲೀಸ್ ಪೇದೆಗಳ ಪಾತ್ರಗಳನ್ನೂ, ಮಂಜುನಾಥಯ್ಯ ಇಟೋಬನ ಪಾತ್ರವನ್ನೂ, ದೇಸಾಯಿ ಚಂಬಸಯ್ಯನ ಪಾತ್ರವನ್ನೂ, ಭಾರತಿ ಪ್ರಸಾದ್ ಪಾರವ್ವನ ಪಾತ್ರವನ್ನೂ, ಪ್ರಸಾದ್ ಪತ್ರಕರ್ತನ ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಇತರ ಪಾತ್ರಗಳಿಗೂ ಸೂಕ್ತ ಕಲಾವಿದರ ಆಯ್ಕೆಯಾಗಿದ್ದು ಎಲ್ಲರೂ ಪರಮ ನಿಷ್ಠೆ—ತನ್ಮಯತೆಯಿಂದ ತಾಲೀಮಿನಲ್ಲಿ ಭಾಗವಹಿಸುತ್ತಿದ್ದರು. ರತ್ನ ರಾವ್ ಹಾಗೂ ಶಾರ್ವರಿ ಬಹಳ ಒಳ್ಳೆಯ ಗಾಯಕಿಯರಾಗಿದ್ದು ಮೇಳದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.ಎಲ್ಲ ಕಲಾವಿದರ ನಡುವೆ ಇದ್ದ ಆತ್ಮೀಯ ಬಂಧದಿಂದಾಗಿ ರಿಹರ್ಸಲ್ ಗಳಲ್ಲಿ ಹೊಡೆದು ಕಾಣುತ್ತಿದ್ದ ಸಂಭ್ರಮದ,ಹಬ್ಬದ ವಾತಾವರಣ ಮನಸ್ಸನ್ನು ಅರಳಿಸುತ್ತಿತ್ತು.

ಒಂದು ದಿನ ಮಧ್ಯಾಹ್ನ ನಾನು ಕೋಣೆಯಲ್ಲಿ ಅಂದಿನ ತಾಲೀಮಿನ ದೃಶ್ಯದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅಲ್ಲಿನ ಸಹಾಯಕನಾಗಿದ್ದ ರತ್ನಾಕರ ಒಂದೇ ಉಸುರಿಗೆ ಮಹಡಿ ಹತ್ತಿಕೊಂಡು ತೇಕಿಕೊಂಡು ಬಂದ. “ಸಾರ್, ಈಗಲೇ ಕೆಳಗೆ ಬನ್ನಿ.. ಶಂಕರ್ ನಾಗ್ ಅವರು ಫೋನ್ ಮಾಡಿದ್ರು.. ಇನ್ನೈದು ನಿಮಿಷಕ್ಕೆ ಮತ್ತೆ ಮಾಡ್ತಾರೆ” ಎಂದು ಏದುಸಿರು ಬಿಡುತ್ತಲೇ ಹೇಳಿದ ರತ್ನಾಕರ. ಶಂಕರ್ ನಾಗ್ ಅವರ ಜತೆ ಫೋನ್ ನಲ್ಲಿ ಮಾತಾಡಿದ ಸಂಭ್ರಮ—ಸಂತಸ ಅವನ ಮುಖದ ಮೇಲೆ ಹೊಡೆದುಕಾಣುತ್ತಿತ್ತು. ‘ಶಂಕರ್ ಯಾಕೆ ಫೋನ್ ಮಾಡಿದ್ದಾರೆ? ಯಾವುದಾದರೂ ನಾಟಕ ಶುರು ಮಾಡುತ್ತಿರಬಹುದು..ಅದಕ್ಕೇ ಜ್ಞಾಪಿಸಿಕೊಂಡಿರಬಹುದು’ ಎಂದು ಮನಸ್ಸಿನಲ್ಲೇ ಚಿಂತಿಸುತ್ತಾ ರತ್ನಾಕರನೊಟ್ಟಿಗೆ ಕೆಳಗಿಳಿದು ಹೋದೆ. ಹೋದ ಐದು ನಿಮಿಷಕ್ಕೆ ಫೋನ್ ರಿಂಗಣಿಸಿತು.ನಾನೇ ಕರೆಯನ್ನು ಸ್ವೀಕರಿಸಿದೆ.

ಆ ಬದಿಗಿದ್ದವರು ಶಂಕರ್ ನಾಗ್. “ಶ್ರೀನಿವಾಸ್, desperately trying to contact you since yesterday..ಕೊನೆಗೆ ನೀವು ಬಾಂಬೇಲಿರೋ ವಿಷಯ ಗೊತ್ತಾಯ್ತು..ಈಗ ನಾನು ಮದ್ರಾಸ್ ನಲ್ಲಿದೇನೆ..ದ್ವಾರಕೀಶ್ ಅವರ ‘ಗೆದ್ದಮಗ’ film ದು ಶೂಟಿಂಗ್ ನಡೀತಿದೆ..ಈಗ immediate ಆಗಿ ನೀವು ಮದ್ರಾಸ್ ಗೆ ಹೊರಟು ಬರಬೇಕು. ಆಗುತ್ತಾ?” ಎಂದು ಪಟಪಟನೆ ಮಾತಾಡಿದರು ಶಂಕರ್. “ಏನು ವಿಷಯ ಶಂಕರ್? ಈಗ ಇಲ್ಲಿ ನಾಟಕ ಮಾಡಿಸ್ತಿದೇನೆ..ಮಧ್ಯದಲ್ಲಿ ಬಿಟ್ಟುಬರೋದು ಕಷ್ಟ ಆಗುತ್ತೇನೊ..” ಎಂದೆ ನಾನು.

“ಹೇಗಾದರೂ ಬಿಡಿಸಿಕೊಂಡು ನೀವು ಬಂದರೆ ತುಂಬಾ ಒಳ್ಳೇದು. Here is a great opportunity for you!ದ್ವಾರಕೀಶ್ ಅವರು ‘ಆನಂದ ಭೈರವಿ’ ಅನ್ನೋ film ಮಾಡ್ತಿದಾರೆ. It is a bilingual. ಕನ್ನಡ versionಗೆ ಹೊಸ hero ನ ಹುಡುಕ್ತಿದಾರೆ. ನಾನು ನಿಮ್ಮ ಹೆಸರು suggest ಮಾಡಿದೀನಿ. ತಕ್ಷಣಾನೇ ಕರೆಸಿಬಿಡಿ ಅಂದ್ರು ದ್ವಾರಕೀಶ್ ಅವರು.I dont want you to miss this great opportunity.. ಗಿರೀಶ್ ಕಾರ್ನಾಡ್ ಅವರೂ ಒಂದು main role ಮಾಡ್ತಿದಾರೆ.. ನನ್ನ ಕೇಳಿದರೆ immediate flight ಹತ್ತಿ ನೀವು ಮದ್ರಾಸ್ ಗೆ ಹೊರಟುಬಂದುಬಿಡಿ..ಉಳಿದದ್ದೆಲ್ಲಾ ಆಮೇಲೆ ಯೋಚನೆ ಮಾಡಬಹುದು. ಇನ್ನು ಹತ್ತು ನಿಮಿಷ ಬಿಟ್ಟು ಮತ್ತೆ ಫೋನ್ ಮಾಡ್ತೀನಿ” ಎಂದು ನುಡಿದು ಫೋನ್ ಕೆಳಗಿಟ್ಟರು ಶಂಕರ್ ನಾಗ್. ಏನು ಮಾಡಲೂ ತೋಚದೆ ಹಾಗೇ ಕುರ್ಚಿಯ ಮೇಲೆ ಕುಳಿತುಬಿಟ್ಟೆ. ‘ಎಲ್ಲೋ ಒಂದು ಅವಕಾಶವಿದೆ’ ಎನ್ನುತ್ತಿದ್ದಂತೆ ತನ್ನ ಗೆಳೆಯರನ್ನು ನೆನಪಿಸಿಕೊಳ್ಳುವ ಶಂಕರ್ ರ ಸ್ನೇಹ ಪರತೆಯನ್ನು ನೆನೆದು ಹೃದಯ ತುಂಬಿ ಬಂತು.

ಇಂಥ ಉದಾರ ಮನಸ್ಸಿನ, ತನ್ನೊಂದಿಗೆ ತನ್ನ ಗೆಳೆಯರನ್ನೂ ಬೆಳೆಸಬೇಕೆಂಬ ಮನೋಧರ್ಮದ, ನಿಸ್ವಾರ್ಥ ಬುದ್ಧಿಯ ಮಹನೀಯರಿಂದಲೇ ಬದುಕು ಸಹನೀಯವಾಗುವುದಲ್ಲವೇ ಎನ್ನಿಸಿ ಕಣ್ಣು ತುಂಬಿ ಬಂತು. ಅದೇ ವೇಳೆಗೆ ಡಾ॥ಮಂಜುನಾಥ್ ರ ಆಗಮನವಾಯಿತು. ಅವರಿಗೆ ಎಲ್ಲ ವಿವರಗಳನ್ನೂ ತಿಳಿಸಿ ಏನು ಮಾಡಲೆಂದು ಅವರನ್ನೇ ಕೇಳಿದೆ! ಅವರೂ ಒಂದು ಕ್ಷಣ ಯೋಚಿಸಿ ನುಡಿದರು: “ಒಳ್ಳೇ ಅವಕಾಶ ಹುಡುಕಿಕೊಂಡು ಬಂದಿರೋವಾಗ ತಿರಸ್ಕರಿಸೋದು ಜಾಣತನ ಅಲ್ಲ.ಹೋಗಿಬನ್ನಿ. ಅಲ್ಲಿಯ ಬೆಳವಣಿಗೆ ನೋಡಿಕೊಂಡು ಇಲ್ಲಿ ಏನು ಮಾಡಬೇಕೂಂತ ನಿರ್ಧರಿಸೋಣ.ಆದರೆ ಒಂದು ಖಾತ್ರಿ ಮಾಡಿಕೊಳ್ಳಿ: ಇಲ್ಲಿ workshop ಆಗಲೇ ಬೇಕು..ನಾಟಕ ತಯಾರಾಗಲೇ ಬೇಕು..ಅದನ್ನ ತಪ್ಪಿಸಿಕೊಳ್ಳೋ ಹಾಗಿಲ್ಲ ನೀವು!” ನಾನು, “ಇಲ್ಲ ಸರ್ , ಯಾವ ಕಾರಣಕ್ಕೂ ತಪ್ಪಿಸೋಲ್ಲ..” ಎಂದವರಿಗೆ ಆಶ್ವಾಸನೆ ಕೊಟ್ಟೆ. ಮರುಕ್ಷಣವೇ ಮತ್ತೊಂದು ಯೋಚನೆ ನುಗ್ಗಿಬಂತು: ಶಂಕರ್ ಏನೋ flight ನಲ್ಲಿ ಬನ್ನಿ ಎಂದುಬಿಟ್ಟರು.. ಆದರೆ ನನ್ನ ಕಿಸೆಯಲ್ಲಿರುವುದು ಕೇವಲ ನೂರಿನ್ನೂರು ರೂಪಾಯಿಗಳಷ್ಟೇ! ಅಷ್ಟರಲ್ಲಿ ಆಕಾಶಯಾನ ಮಾಡುವುದಾದರೂ ಹೇಗೆ?! ನನ್ನ ಕಳವಳ ಡಾ॥ಮಂಜುನಾಥ್ ಅವರಿಗೆ ಅರ್ಥವಾಯಿತೆಂದು ತೋರುತ್ತದೆ.. “ಏನು ಯೋಚನೆ ಮಾಡ್ತಿದೀರಿ ಪ್ರಭೂ? flight ಗೆ ಹಣ ಸಾಲದಾಗಿದೆಯೇ?” ಎಂದರು! ನಾನೂ ಎಲ್ಲಾ ಸಂಕೋಚವನ್ನೂ ಬದಿಗೊತ್ತಿ, “ಹೌದು ಸರ್..ಸಾಲದಾಗಿದೆ ಅನ್ನೋದಕ್ಕಿಂತಲೂ ಇಲ್ಲವೇ ಇಲ್ಲ ಅಂದರೂ ಆದೀತು!” ಎಂದು ಹೇಳಿಯೇ ಬಿಟ್ಟೆ.

ಮಂಜುನಾಥ್ ಅವರು ಹುಸಿನಗುತ್ತಾ ತಮ್ಮ ಗೆಳೆಯರೊಬ್ಬರಿಗೆ ಫೋನ್ ಮಾಡಿ ಮದ್ರಾಸಿಗೆ ಅಂದೇ ರಾತ್ರಿಯ flight ಟಿಕೆಟ್ ಕಾದಿರಿಸುವಂತೆ ಹೇಳಿ, ನನ್ನತ್ತ ತಿರುಗಿ, “ಚಿಂತೆ ಬೇಡ..ಟಿಕೆಟ್ ವ್ಯವಸ್ಥೆ ಆಗಿದೆ. ಇನ್ನರ್ಧ ಗಂಟೇಲಿ ಇಲ್ಲಿಗೇ ತಂದುಕೊಡ್ತಾರೆ. ಟಿಕೆಟ್ ದುಡ್ಡು 800 ರೂಪಾಯಿ ಆಗಿದೆ..ಆಮೇಲೆ ನಿಮ್ಮ ಸಂಭಾವನೇಲಿ ಇದನ್ನ ಮುರಕೊಂಡರಾಯ್ತು.. ಹೋಗಿಬನ್ನಿ. all the best” ಎಂದು ಹಾರೈಸಿದರು. ಅದೇ ವೇಳೆಗೆ ಶಂಕರ್ ಅವರ ಫೋನ್ ಕರೆ ಬಂದು ನಾನು ಮದ್ರಾಸಿಗೆ ಹೊರಟುಬರುತ್ತಿರುವ ವಿಷಯವನ್ನು ಅವರಿಗೆ ತಿಳಿಸಿದೆ. ನಂತರ ಮಂಜುನಾಥ್ ಅವರಿಗೆ ಧನ್ಯವಾದಗಳನ್ನರ್ಪಿಸಿ ಮುಂದಿನ ಸಿದ್ಧತೆಗಾಗಿ ಕೋಣೆಗೆ ಹೊರಟೆ. ಕಲಾವಿದ ಮಿತ್ರ ಹರೀಶ್ ನನ್ನನ್ನು ತಮ್ಮ ಬೈಕ್ ನಲ್ಲೇ ಏರ್ ಪೋರ್ಟ್ ಗೆ ಕರೆದುಕೊಂಡು ಹೋಗಿ ಬಿಟ್ಟರಲ್ಲದೇ ವಿಮಾನಯಾನದ ಪ್ರಾಥಮಿಕ ತಿಳುವಳಿಕೆಯನ್ನೂ ನೀಡಿದರು. ಅದು ನನ್ನ ಬದುಕಿನ ಮೊಟ್ಟಮೊದಲ ವಿಮಾನ ಯಾನವಾಗಿತ್ತು! ಪ್ರಪ್ರಥಮ ಆಕಾಶ ಯಾನದ ರೋಚಕತೆ ಒಂದೆಡೆಗಾದರೆ ಪ್ರಪ್ರಥಮ ನಾಯಕ ಪಾತ್ರದ ಅವಕಾಶದ ಕದ ತಟ್ಟುತ್ತಿರುವ ಸಂಭ್ರಮ—ಕಾತರತೆಗಳು ಮತ್ತೊಂದೆಡೆಗೆ ಮುತ್ತಿಕೊಂಡು ನಾನಂತೂ ಒಂದು ಅಯೋಮಯ ಸ್ಥಿತಿಯನ್ನು ತಲುಪಿಬಿಟ್ಟಿದ್ದೆ!

ಭಯಂಕರ ಸದ್ದು ಮಾಡುತ್ತಾ ವಿಮಾನ ಆಕಾಶಕ್ಕೆ ಚಿಮ್ಮಿದ್ದೊಂದು ಗೊತ್ತು..ನಂತರದ ಅದರ ಶರವೇಗದ ಚಲನೆ ಅನುಭವಕ್ಕೇ ಬರದೆ ವಿಮಾನ ಆಗಸದ ನಡುವೆ ನಿಶ್ಚಲವಾಗಿ ನಿಂತುಬಿಟ್ಟಿದೆಯೇನೋ ಅನ್ನಿಸತೊಡಗಿ ‘ಇದು ಹೀಗೇಕೆ’ ಎಂದು ಚಿಂತಿಸುತ್ತಿರುವಂತೆಯೇ ವಿಮಾನ ಮದ್ರಾಸಿನಲ್ಲಿ ಇಳಿಯುತ್ತಿದೆಯೆಂಬ ಸೂಚನೆ ಬಂದೇ ಬಿಟ್ಟಿತು! ವಿಮಾನದಿಂದಿಳಿದು ಹೊರಬರುತ್ತಿದ್ದಂತೆ ಮತ್ತೊಂದು ಆಶ್ಚರ್ಯ ಕಾದಿತ್ತು:ಶಂಕರ್ ನಾಗ್ ಸ್ವತಃ ತಾವೇ ಏರ್ ಪೋರ್ಟ್ ಗೆ ಬಂದಿದ್ದರು—ನನ್ನನ್ನು ಕರೆದೊಯ್ಯಲು! ಅವರ ಸರಳತೆಗೆ,ಸ್ನೇಹಪರತೆಗೆ ಮನದಲ್ಲೇ ಅಚ್ಚರಿಪಡುತ್ತಾ ಅವರೊಟ್ಟಿಗೆ ಅವರು ಇಳಿದುಕೊಂಡಿದ್ದ ವುಡ್ ಲ್ಯಾಂಡ್ಸ್ ಹೋಟಲಿಗೆ ಹೋದೆ. ರಾತ್ರಿ ಊಟ ಮುಗಿಸಿದ ನಂತರ ಸುಮಾರು ಹೊತ್ತಿನ ತನಕ ರಂಗಭೂಮಿ—ಸಿನೆಮಾ ಬಗ್ಗೆ ಮಾತಾಡುತ್ತಾ ಕುಳಿತವರಿಗೆ ಹೊತ್ತು ಕಳೆದದ್ದರ ಪರಿವೆಯೇ ಇರಲಿಲ್ಲ! ಒಂದೆರಡು ತಾಸು ನಿದ್ದೆಯ ಶಾಸ್ತ್ರ ಮುಗಿಸಿ ಬೆಳಿಗ್ಗೆ ಬೇಗ ಎದ್ದು ಸಿದ್ಧರಾಗಿ ನಿರ್ಮಾಪಕ ದ್ವಾರಕೀಶ್ ಅವರ ಮನೆಗೆ ಹೊರಟೆವು. ಶಂಕರ್ ಅವರು ದ್ವಾರಕೀಶ್ ಅವರಿಗೆ ನನ್ನ ಪರಿಚಯ ಮಾಡಿಕೊಡುತ್ತಾ ‘ಇವರು ಕರ್ಣಾಟಕದ ಹ್ಯಾಮ್ಲೆಟ್ ಎಂದೇ ಪ್ರಸಿದ್ಧರು..ನಾವು ಜೊತೆಯಲ್ಲಿ ಸಾಕಷ್ಟು ನಾಟಕ ಮಾಡಿದ್ದೇವೆ..ನೀವು ಇವರಿಗೊಂದು ಅವಕಾಶ ಕೊಡಬೇಕು” ಎಂದರು. ದ್ವಾರಕೀಶ್ ಅವರು ಒಮ್ಮೆ ನನ್ನನ್ನು ಆಪಾದಮಸ್ತಕ ದಿಟ್ಟಿಸಿ ನೋಡಿದರು.’ಚರ್ಬೀನೇ ಇಲ್ಲವಲ್ಲಯ್ಯಾ’ ಎಂದು ಜಿ. ವಿ.ಅಯ್ಯರ್ ಅವರು ಗೊಣಗಿದಂತೆ ಇವರು ಹೇಳಲಾಗದಷ್ಟರ ಮಟ್ಟಿಗೆ ನಾನೂ ಚರ್ಬಿ ತುಂಬಿಕೊಂಡಿದ್ದೆ! “ನನಗೇನೋ ಹುಡುಗ ಓಕೆ ಶಂಕರಾ..ನಿರ್ದೇಶಕರು ಓಕೆ ಅಂದುಬಿಟ್ಟರೆ ನಂದೇನೂ ಅಭ್ಯಂತರವಿಲ್ಲ” ಅಂದರು ದ್ವಾರಕೀಶ್ ಅವರು. ‘ಆನಂದಭೈರವಿ’ ಚಿತ್ರದ ನಿರ್ದೇಶಕರು ಜಂದ್ಯಾಲ ಅವರು. ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರಾಗಿದ್ದ ನಿರ್ದೇಶಕರವರು. ಶೂಟಿಂಗ್ ನಡೆಯುತ್ತಿದ್ದುದು ರಾಜಮಂಡ್ರಿಯಲ್ಲಿ! “ಒಂದು ಕೆಲಸ ಮಾಡಿ ಪ್ರಭೂ..ಮಧ್ಯಾಹ್ನ 2 ಗಂಟೆಗೆ ರಾಜಮಂಡ್ರಿಗೆ ಒಂದು train ಇದೆ..ರಾತ್ರಿ ಅಲ್ಲಿಗೆ ತಲುಪಿಕೋತೀರಾ.ಹೋಗಿ ಜಂದ್ಯಾಲ ಅವರನ್ನ ಭೇಟಿ ಮಾಡಿ..ನಾನೂ ಫೋನ್ ಮಾಡಿ ನೀವು ಬರೋ ವಿಷಯ ತಿಳಿಸಿರ್ತೇನೆ” ಎಂದರು ದ್ವಾರಕೀಶ್. ‘ಹಾಗೇ ಆಗಲಿ ಸರ್ ‘ ಎಂದು ನುಡಿದು ಅವರ ಶುಭ ಹಾರೈಕೆಗಳನ್ನು ಪಡೆದುಕೊಂಡು ಅಲ್ಲಿಂದ ಹೊರಟೆ. ಶಂಕರ್ ತಮ್ಮ ಕಾರ್ ನಲ್ಲಿಯೇ ರೈಲ್ವೇಸ್ಟೇಷನ್ ಗೆ ನನ್ನನ್ನು ಕಳಿಸಿಕೊಟ್ಟರು.

ಮದ್ರಾಸ್ ನಿಂದ ರಾಜಮಂಡ್ರಿಗೆ ಹೆಚ್ಚುಕಡಿಮೆ ಹನ್ನೆರಡು ತಾಸಿನ ಪ್ರಯಾಣ. ನಾನು ರಾಜಮಂಡ್ರಿ ತಲುಪಿದಾಗ ಸಮರಾತ್ರಿಯಾಗಿತ್ತು. ಚಿತ್ರೀಕರಣ ತಂಡದವರು ಉಳಿದುಕೊಂಡಿದ್ದ ಹೋಟಲ್ ಗೆ ಆಟೋ ಹಿಡಿದು ಹೋಗಿ ಒಂದು ರೂಂ ಹಿಡಿದು ಕೊಂಚ ನಿದ್ದೆ ಮಾಡಿ ಬೆಳಿಗ್ಗೆ ಬೇಗ ಎದ್ದು ಸಿದ್ಧನಾಗಿ ಹೋಗಿ ನಿರ್ದೇಶಕರನ್ನು ಭೇಟಿ ಮಾಡಿ ನನ್ನ ಪರಿಚಯ ಹೇಳಿಕೊಂಡೆ.ನನ್ನನ್ನೊಮ್ಮೆ ದಿಟ್ಟಿಸಿ ನೋಡಿದ ಜಂದ್ಯಾಲ ಅವರು, “You would have been a perfect choice for the character…but..” ಎಂದು ನಿಲ್ಲಿಸಿದರು. ಏನು ಹೇಳುತ್ತಾರೋ ಎಂಬ ಕಾತರ—ಆತಂಕದಿಂದ ನಾನು ಅವರನ್ನೇ ದಿಟ್ಟಿಸುತ್ತಿದ್ದೆ.

“I am so sorry mr.srinivas…actually ನಾವು ಮೊನ್ನಿನ ತನಕ ಬೆಂಗಳೂರಿನಿಂದ ಯಾರಾದರೂ ಬರಬಹುದು ಎಂದು ಕಾಯುತ್ತಲೇ ಇದ್ದೆವು. ಯಾರೂ ಬಾರದೇ ಹೋದಾಗ ಬೇರೆ ಮಾರ್ಗವಿಲ್ಲದೆ ತೆಲುಗು ಭಾಷೆಯ ನಾಯಕ ನಟನನ್ನೇ ಕನ್ನಡ ಅವತರಣಿಕೆಗೂ ಆರಿಸಿಕೊಂಡು ಬಿಟ್ಟಿದ್ದೇವೆ..ಎರಡು ದಿನಗಳ ಚಿತ್ರೀಕರಣ ಬೇರೆ ಆಗಿಹೋಗಿದೆ..ಇನ್ನು ಬದಲಾಯಿಸುವುದು ಸಾಧ್ಯವಿಲ್ಲ..ಮುಂದೆ ಸೂಕ್ತ ಅವಕಾಶವಿದ್ದಾಗ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ” ಎಂದು ಮಾತು ಮುಗಿಸಿದರು ನಿರ್ದೇಶಕ ಜಂದ್ಯಾಲ.

ಮತ್ತೊಮ್ಮೆ ಆಶಾಭಂಗವಾಗಿ ಪಿಚ್ಚೆನ್ನಿಸಿದರೂ ಹಿಂದಿನ ಅನುಭವಗಳು ಕಲಿಸಿದ ಪಾಠದ ಪರಿಣಾಮವಾಗಿ ಕನಸು ಕಟ್ಟಿಕೊಳ್ಳುವುದನ್ನೇ ಬಿಟ್ಟಿದ್ದೆನಾದ್ದರಿಂದ ವಿಪರೀತ ನಿರಾಸೆ ಎಂದೇನೂ ಆಗಲಿಲ್ಲ. ಅವರಿಗೆ ವಂದನೆಗಳನ್ನು ಹೇಳಿ ಹೊರಬಂದೆ. ಆಗಲೇ ನನಗೆ ಅರಿವಾದದ್ದು:ಮರಳಿ ಹೋಗಲು ಬಸ್ ಗಾಗಲೀ ರೈಲಿಗಾಗಲೀ ನನ್ನ ಬಳಿ ಹಣವಿಲ್ಲವೆಂದು! ಕೂಡಲೇ ಅಲ್ಲಿಯೇ ಇದ್ದ ಪ್ರೊಡಕ್ಷನ್ ಮ್ಯಾನೇಜರ್ ಬಳಿ ಹೋಗಿ ವಿಷಯವನ್ನೆಲ್ಲಾ ವಿವರಿಸಿ ವಿಮಾನ ಪ್ರಯಾಣ ಭತ್ಯೆಯನ್ನೇ ವಸೂಲಿ ಮಾಡಿಕೊಂಡು ಮದ್ರಾಸ್ ರೈಲು ಹತ್ತಿದೆ.ದಾರಿಯುದ್ದಕ್ಕೂ ‘ಗುಳ್ಳೆನರಿ’ ನಾಟಕದಲ್ಲಿ ನಾನೇ ಬರೆದಿದ್ದ ಹಾಡೊಂದರ ಸಾಲುಗಳು ನೆನಪಿಗೆ ಬಂದು ಬಂದು ಕಾಡುತ್ತಿದ್ದವು: “ಅಯ್ಯೋ ಪಾಪ ಪಟ್ಟ ಪಾಡು ವ್ಯರ್ಥವಾಯ್ತಲ್ಲಾ/ ಕೈಗೆ ಬಂದಾ ತುತ್ತು, ಬಾಯಿಗೆ ಬಾರದೆ ಹೋಯಿತಲ್ಲಾ”!

ನಾಟಕದ ಹಾಗೂ ಈಗಿನ ಸಂದರ್ಭಗಳು ಬೇರೆಬೇರೆಯಾದರೂ ಹಾಡಿನ ಭಾವಾರ್ಥ ಒಂದೇ ಅನ್ನಿಸಿ ಸಣ್ಣದಾಗಿ ನಕ್ಕೆ.ಒಂದು ವಿಷಾದದ ನಗು—ತುಸು ಭಾರವಾದ ಹೃದಯದೊಂದಿಗೆ ಮತ್ತೆ ಬಾಂಬೆಗೆ ಬಂದಿಳಿದೆ.

ಬಾಂಬೆಗೆ ಬಂದು ಒಂದೆರಡು ದಿನ ತಾಲೀಮಿನಲ್ಲಿ ಮಗ್ನನಾಗುತ್ತಿದ್ದಂತೆ ಕಾಡುತ್ತಿದ್ದ ಬಾಧೆಗಳೆಲ್ಲಾ ತಾವಾಗಿಯೇ ದೂರವಾಗಿ ಹೋದವು. ಈ ಮಧ್ಯದಲ್ಲಿ ಡಾ॥ಮಂಜುನಾಥ್ ಅವರು ಒಂದು ವಿಚಾರ ಮುಂದಿಟ್ಟರು: “ಮತ್ತೋರ್ವ ರಂಗಕರ್ಮಿಯನ್ನಾಗಲೀ ನಿರ್ದೇಶಕರನ್ನಾಗಲೀ ಶಿಬಿರಕ್ಕೆ ಆಹ್ವಾನಿಸಿದರೆ ಹೇಗೆ? ಸಾಧ್ಯವಾದರೆ ಇನ್ನೂ ಒಂದು ನಾಟಕವೂ ಸಿದ್ಧವಾಗಿಬಿಡಲಿ.”

ನನಗೂ ಈ ಸಲಹೆ ಇಷ್ಟವಾಯಿತು.ನಾನೇ ನಚ್ಚಿಯ (ಟಿ.ಎನ್.ನರಸಿಂಹನ್)ಹೆಸರನ್ನು ಸೂಚಿಸಿದೆ. “ನಾನು ಹಾಗೂ ನಚ್ಚಿ ನಾಟಕ ಕಟ್ಟುವ ಕ್ರಮಗಳು ತೀರಾ ಭಿನ್ನ ಭಿನ್ನವಾದುವು..ನಾನು ಸಂಪೂರ್ಣವಾಗಿ ಸ್ಕ್ರಿಪ್ಟ್ ಸಿದ್ಧವಾಗದೇ ತಾಲೀಮು ಆರಂಭಿಸುವವನೇ ಅಲ್ಲ. ನಚ್ಚಿಯಾದರೋ ಒಂದೆಳೆಯನ್ನು ಇಟ್ಟುಕೊಂಡು ತಾಲೀಮು ನಡೆಸುತ್ತಲೇ, ಸ್ಫೂರ್ತ ವಿಸ್ತರಣದ (improvisation) ಮೂಲಕವೇ ನಾಟಕವನ್ನು ಕಟ್ಟುತ್ತಾ ಹೋಗಬಲ್ಲ. ಶಿಬಿರಾರ್ಥಿಗಳಿಗೆ ಎರಡೂ ಮಾರ್ಗದ ಪರಿಚಯವೂ ಆಗುತ್ತದೆ; ಶಿಬಿರದಲ್ಲಿ ವೈವಿಧ್ಯತೆಯೂ ಇರುತ್ತದೆ” ಎಂದು ನಾನು ಹೇಳಿದ ಮಾತು ಮಂಜುನಾಥರಿಗೂ ಒಪ್ಪಿಗೆಯಾಯಿತು. ಮೇಲಾಗಿ ಅವರು ನಚ್ಚಿಯನ್ನು ಹತ್ತಿರದಿಂದ ಬಲ್ಲವರೂ ಆಗಿದ್ದರು.

ಆ ತಕ್ಷಣವೇ ಮಂಜುನಾಥ್ ಅವರು ಬೆಂಗಳೂರಿನಲ್ಲಿದ್ದ ನಚ್ಚಿಗೆ ಫೋನ್ ಮಾಡಿ ಅವನು ಬಾಂಬೆಗೆ ಬರುವ ಕಾರ್ಯಕ್ರಮವನ್ನು ನಿಶ್ಚಿತ ಗೊಳಿಸಿಯೇ ಬಿಟ್ಟರು.ಅದಾದ ನಾಲ್ಕು ದಿನಗಳಿಗೆ ನಚ್ಚಿ ಬಂದಿಳಿದ. ನಚ್ಚಿ ಅಲ್ಲಿ ಮಾಡಿಸಲು ಆರಿಸಿಕೊಂಡಿದ್ದು ಕುವೆಂಪು ಅವರ ಕಥೆ ಆಧಾರಿತ ನಾಟಕ— ‘ಮೀನಾಕ್ಷಿ ಮನೆ ಮೇಷ್ಟ್ರು’. ಅದರಲ್ಲಿ ಕಡಿಮೆ ಪಾತ್ರಧಾರಿಗಳಿದ್ದುದರಿಂದ ಅವನು ಸಂಜೆ ಬೇಗ ತಾಲೀಮು ಆರಂಭಿಸುತ್ತಿದ್ದ. ಅದು ಮುಗಿದ ಮೇಲೆ ನಾನು ‘ಬೇಲಿ ಮತ್ತು ಹೊಲ’ ನಾಟಕದ ತಾಲೀಮು ಶುರು ಮಾಡುತ್ತಿದ್ದೆ. ನಿಜ ಹೇಳಬೇಕೆಂದರೆ ನಚ್ಚಿ ತಾಲೀಮು ನಡೆಸುತ್ತಿದ್ದ ರೀತಿ, ಅವನು ನಾಟಕವನ್ನು ಕಟ್ಟುತ್ತಿದ್ದ ಕ್ರಮ ನನಗೆ ತುಂಬಾ ಇಷ್ಟವಾಗಿತ್ತು. ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ತಾಲೀಮಿನಲ್ಲೇ ಅದಕ್ಕೆ ರಕ್ತ ಮಾಂಸಗಳನ್ನು ತುಂಬುತ್ತಾ ಒಂದು ಸ್ಪಷ್ಟ ಆಕಾರಕ್ಕೆ ತಂದು ನಿಲ್ಲಿಸುತ್ತಿದ್ದ ಅವನ ಕ್ರಮವನ್ನು ನೋಡಿ ನಾನು ಸಾಕಷ್ಟು ಕಲಿತೆ ಎಂದೇ ಹೇಳಬೇಕು. ಈ ನನ್ನ ಕಲಿಕೆ ಮುಂದೆ ಕೆಲ ನಾಟಕಗಳನ್ನು ನಿರ್ದೇಶಿಸುವ ಸಮಯದಲ್ಲಿ ನನಗೆ ಬಹಳಷ್ಟು ನೆರವಾಯಿತು!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

August 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: