ಶ್ರೀನಿವಾಸ ಪ್ರಭು ಅಂಕಣ: ಕಾನೂರು ಹೆಗ್ಗಡಿತಿಯೊಂದಿಗೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 107

ಇದೇ ಸಮಯದಲ್ಲಿಯೇ ಒಂದು ದಿನ ಗುರು ಶ್ಯಾಮಲ ಜಿ. ಭಾವೆಯವರ ಮನೆಗೆ ಸಂಗೀತ ಪಾಠಕ್ಕೆಂದು ಹೋಗಿದ್ದಾಗ ಅಕ್ಕ ತುಂಬಾ ಉಮೇದಿನಲ್ಲಿದ್ದ ಹಾಗೆ ಕಂಡರು! “ಅಪ್ಪಣ್ಣಾ, ಒಂದು ಭಾರಿ ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೋತಾ ಇದೀನಿ… ನೀವು ನನ್ನ ಜೊತೆಗೆ ಇರಬೇಕು… ಆಗೋಲ್ಲ ಅನ್ನಬಾರದು!” ಎಂದು ಮಾತು ಆರಂಭಿಸಿದರು.

“ಗುರುಗಳ ಮಾತು ಮಾತಲ್ಲ, ಆದೇಶ! ಹೇಳಿ ಅಕ್ಕಾ, ನನ್ನಿಂದ ಏನಾಗಬೇಕು?” ಎಂದೆ ನಾನು. ಅಕ್ಕ ನಿಧಾನವಾಗಿ ತಮ್ಮ ಕನಸಿನ ಯೋಜನೆಯನ್ನು ವಿವರಿಸತೊಡಗಿದರು. ಅವರ ವಿವರಣೆಯ ಸಾರಾಂಶವನ್ನು ಅಡಕವಾಗಿ ಹೇಳುವುದಾದರೆ:

ʻಸುವರ್ಣ ಭಾರತʼ ಅನ್ನುವ ಒಂದು ರೂಪಕವನ್ನು ಬಹಳ ದೊಡ್ಡ ರೀತಿಯಲ್ಲಿ ಅದ್ದೂರಿಯಾಗಿ, ವೈಭವಯುತವಾಗಿ ಪ್ರದರ್ಶನಕ್ಕೆ ಸಿದ್ಧಪಡಿಸಬೇಕೆನ್ನುವುದು ಅವರ ಪರಿಕಲ್ಪನೆ. ಭಾರತ ದೇಶದ ಅದ್ಭುತ – ಭವ್ಯ ಪರಂಪರೆಯನ್ನು ಒಂದು ಸುಂದರ ದೃಶ್ಯಕಾವ್ಯದಂತೆ ರಂಗಕ್ಕೆ ಅಳವಡಿಸಬೇಕೆಂಬುದು ಅವರ ಯೋಜನೆಯಾಗಿತ್ತು. ಭಾರತದ ಭವ್ಯ ಇತಿಹಾಸದ ಪ್ರಮುಖ ಮೈಲುಗಲ್ಲುಗಳನ್ನು ದೃಶ್ಯರೂಪದಲ್ಲಿ ದಾಖಲಿಸುತ್ತಾ, ನಮ್ಮ ರಾಷ್ಟ್ರದ ಅದ್ಭುತ ಪರಂಪರೆಯನ್ನೂ ಹಲವು ಹತ್ತು ಕ್ಷೇತ್ರಗಳಲ್ಲಿ ಆಗಿರುವ ಅಪರೂಪದ ಸಾಧನೆಗಳನ್ನೂ, ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಮನ್ನಣೆಗೆ ಪಾತ್ರರಾಗಿರುವ ಅನೇಕ ಮಹಾನ್ ವಿಭೂತಿ ಪುರುಷರನ್ನೂ ಒಂದು ಸಿಂಹಾವಲೋಕನದಲ್ಲಿ ಪರಿಚಯಿಸುವುದು ಈ ರಂಗ ಪ್ರದರ್ಶನದ ಮುಖ್ಯ ಉದ್ದೇಶವಾಗಿತ್ತು.

ಸಂಗೀತ, ನೃತ್ಯ ಹಾಗೂ ನಾಟಕ – ಈ ಮೂರೂ ಕಲಾಪ್ರಕಾರಗಳು ಒಂದು ಸುಂದರ ಸಮನ್ವಯದಲ್ಲಿ ಮೇಳೈಸಿದಂತಹ ಒಂದು ಚೇತೋಹಾರಿ ಪ್ರದರ್ಶನವನ್ನು ಸಿದ್ಧಪಡಿಸಬೇಕೆನ್ನುವುದು ಅಕ್ಕನ ಚಿಂತನೆಯಾಗಿತ್ತು. ಸಂಗೀತ ಸಂಯೋಜನೆಯ ಹೊಣೆ ಅವರದೇ ಆಗಿತ್ತು; ನೃತ್ಯಭಾಗಗಳನ್ನು ಸುಪ್ರಸಿದ್ಧ ಕಲಾವಿದೆ – ನಾಟ್ಯ ಸರಸ್ವತಿ ಉಷಾ ದಾತಾರ್ ಅವರು ಸಂಯೋಜಿಸುವವರಿದ್ದರು. ನಾಟಕದ ರೂಪಕ್ಕೆ ಅಳವಡಿಸಿದ್ದಂತಹ ದೃಶ್ಯಭಾಗಗಳನ್ನು ನಿರ್ದೇಶಿಸುವ ಹೊಣೆ ನನ್ನ ಹೆಗಲೇರಿತ್ತು. ಈ ಮಹತ್ವಾಕಾಂಕ್ಷೆಯ ರೂಪಕವನ್ನು ಸೊಗಸಾದ ರೀತಿಯಲ್ಲಿ ಪರಿಭಾವಿಸಿಕೊಂಡು ಅತ್ಯಂತ ಸುಂದರ ರೂಪಕವನ್ನು ಕಟ್ಟಿಕೊಟ್ಟವರು ಪ್ರಸಿದ್ಧ ಸಾಹಿತಿ ಸು. ರುದ್ರಮೂರ್ತಿ ಶಾಸ್ತ್ರಿಗಳು.

ನಾನು ಸೆಂಟ್ರಲ್ ಕಾಲೇಜ್‌ನಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಆನರ್ಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗ ಶಾಸ್ತ್ರಿಗಳು ಎಂ.ಎ. ಪದವಿಯ ಅಂತಿಮ ವರ್ಷದಲ್ಲಿದ್ದರು. ಇದುವರೆಗೆ ಸುಮಾರು ನಲವತ್ತು ಐತಿಹಾಸಿಕ ಹಾಗೂ ಪೌರಾಣಿಕ ಕಾದಂಬರಿಗಳನ್ನು ರಚಿಸಿರುವ ಶಾಸ್ತ್ರಿಗಳಿಗೆ ಸಾಹಿತ್ಯಲೋಕದಲ್ಲಿ ಸಿಗಬೇಕಿದ್ದಷ್ಟು ಮನ್ನಣೆ – ಗೌರವಗಳು ದೊರೆತಿಲ್ಲ ಎನ್ನುವುದು ನಿಜಕ್ಕೂ ಖೇದಕರ ಸಂಗತಿ. ಇವರ ಮಹತ್ವಾಕಾಂಕ್ಷೆಯ ಐತಿಹಾಸಿಕ ಕಾದಂಬರಿ ʻಚಾಣಕ್ಯʼ ಸಾವಿರ ಪುಟಗಳಷ್ಟು ವಿಸ್ತಾರ ಹರಹಿನದಾಗಿದ್ದು, ಅಪಾರ ಜನಪ್ರಿಯತೆಯನ್ನೂ ಗಳಿಸಿಕೊಂಡು ಈಗಾಗಲೇ ಆರು ಮರುಮುದ್ರಣಗಳನ್ನು ಕಂಡಿದೆ. ʻಕುಮಾರ ರಾಮʼ, ʻಅಶೋಕ ಚಕ್ರವರ್ತಿʼ, ʻಶ್ರೀಕೃಷ್ಣʼ, ʻಊರ್ಮಿಳೆʼ, ಮೃಚ್ಛಕಟಿಕ ಆಧಾರಿತ ʻಮಹೇಶ್ವರಿʼ, ʻಕನಕದಾಸರುʼ, ʻಹೊಯ್ಸಳೇಶ್ವರ ವಿಷ್ಣುವರ್ಧನʼ ಮೊದಲಾದವು ಇವರ ಇತರ ಜನಪ್ರಿಯ ಕಾದಂಬರಿಗಳು. ʻಸುವರ್ಣ ಭಾರತʼ ರೂಪಕದಲ್ಲಿ ಸಹಾ ಶಾಸ್ತ್ರಿಗಳು ಭಾರತದ ಸಮಗ್ರ ಇತಿಹಾಸವನ್ನು ಅಡಕವಾಗಿ, ಸಮರ್ಥವಾಗಿ ಹಾಗೂ ಸೃಜನಾತ್ಮಕವಾಗಿ ಕಟ್ಟಿಕೊಟ್ಟಿದ್ದರು. ಹದ ನಿರೂಪಣೆಯೊಂದಿಗೆ ಕೆಲ ಪ್ರಮುಖ ಸನ್ನಿವೇಶಗಳನ್ನು ನೃತ್ಯಕ್ಕೆ ಒಗ್ಗುವಂತೆಯೂ ಮತ್ತೆ ಕೆಲವು ಸನ್ನಿವೇಶಗಳನ್ನು ನಾಟಕಕ್ಕೆ ಒಗ್ಗುವಂತೆಯೂ ಒಂದು ವಿಶಿಷ್ಟ ರಸಪಾಕದಲ್ಲಿ ಸಿದ್ಧಪಡಿಸಿಕೊಟ್ಟ ರೀತಿ ಅನನ್ಯವಾಗಿತ್ತು; ಕಲಾತ್ಮಕವಾಗಿತ್ತು. ನಾಲ್ಕಾರು ದಿನಗಳಲ್ಲಿಯೇ ತಾಲೀಮು ಆರಂಭವಾಗಿಬಿಟ್ಟಿತು.

ಶ್ಯಾಮಲಕ್ಕ ಹಾಗೂ ವಾಗೀಶ್ ಭಟ್ ಅವರ ನೇತೃತ್ವದಲ್ಲಿ ಹಿನ್ನೆಲೆ ಸಂಗೀತಗಾರರ ತಂಡ ತುರುಸಿನಿಂದ ಸಿದ್ಧವಾಗುತ್ತಿತ್ತು. ನೃತ್ಯಪಟುಗಳು ಉಷಾ ದಾತಾರ್ ಅವರ ನಿರ್ದೇಶನ – ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಾ ತಯಾರಾಗುತ್ತಿದ್ದರು. ಪ್ರಸಿದ್ಧ ನೃತ್ಯಪಟು ಷಡಕ್ಷರಿಯವರು ಉಷಾ ದಾತಾರ್ ಅವರಿಗೆ ಸಹಾಯಕರಾಗಿದ್ದರು. ಶ್ಯಾಮಲಕ್ಕನವರ ಯಾವುದೇ ಕಾರ್ಯಕ್ರಮವಾಗಲೀ ಅಲ್ಲಿ ಷಡಕ್ಷರಿ ಇರಲೇಬೇಕು! ʻಮನೆ ಮಗʼ ಎಂದೇ ಕರೆಯಬಹುದಾದಷ್ಟು ಅಕ್ಕನಿಗೆ ಹತ್ತಿರದವರು ಈ ಷಡಕ್ಷರಿ. ಇತ್ತೀಚೆಗಂತೂ ತಮ್ಮ ಸೊಗಸಾದ, ಅಧಿಕೃತ ಹಾಗೂ ಪಾಂಡಿತ್ಯಪೂರ್ಣ ನಿರೂಪಣೆಯಿಂದ ರಸಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಷಡಕ್ಷರಿಯವರು. ಇವರು ರುದ್ರಮೂರ್ತಿ ಶಾಸ್ತ್ರಿಗಳ ಕಿರಿಯ ಸೋದರರೂ ಹೌದು.

ಇನ್ನು ನಾಟಕ ಭಾಗಗಳ ಜವಾಬ್ದಾರಿ ನನ್ನ ಹೆಗಲೇರಿತ್ತಲ್ಲಾ, ನಾನು ಪ್ರಸಿದ್ಧ ರಂಗಕರ್ಮಿಗಳಾದ ಕೃಷ್ಣಶರ್ಮ, ಸುಬ್ರಹ್ಮಣ್ಯ ಶಾಸ್ತ್ರಿ, ʻಸಂಜಯʼ ಸೂರಿ, ವೆಂಕಿ ಮೊದಲಾದವರನ್ನು ಸೇರಿಸಿಕೊಂಡು ತಾಲೀಮು ನಡೆಸಿದ್ದೆ. ತಿಮ್ಮನಗೌಡ ನನಗೆ ಸಹಾಯಕನಾಗಿದ್ದ. ಮತ್ತೊಬ್ಬ ಆತ್ಮೀಯ ಕಿರಿಯ ಮಿತ್ರ ʻತಬರʼ – ನಂದಕಿಶೋರ ಬೆಳಕಿನ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದ. ನಿರ್ದೇಶನದ ಜತೆಗೆ ನಿರೂಪಕನ ಪಾತ್ರವನ್ನೂ ನಾನು ನಿರ್ವಹಿಸಬೇಕಾಗಿತ್ತು. ಅಕ್ಕನ ಆದೇಶದ ಮೇರೆಗೆ ಇಬ್ಬರು ನಿರೂಪಕರು ರಂಗ ಚಟುವಟಿಕೆಗಳನ್ನು ನಿಭಾಯಿಸುವುದು ಎಂದಾಗಿ, ನನ್ನ ಸಹ ನಿರೂಪಕಿಯಾಗಿ ಬಾಳ ಗೆಳತಿ ರಂಜನಿಯೇ  ಬಂದಳು!

ಮೊದಲು ಮೂರೂ ವಿಭಾಗಗಳ ತಾಲೀಮು ಪ್ರತ್ಯೇಕವಾಗಿ ನಡೆದು ಕೊನೆಯ ಒಂದು ವಾರ ಎಲ್ಲರೂ ಒಟ್ಟಿಗೆ ಸೇರಿ ಒಂದು ಓಘದಲ್ಲಿ ತಾಲೀಮು ನಡೆಸಿ ಪ್ರದರ್ಶನಕ್ಕೆ ಸಿದ್ಧರಾದೆವು. ಎಲ್ಲ ವಿಭಾಗಗಳೂ ಸೇರಿ ಒಟ್ಟು ಕಲಾವಿದರ ಸಂಖ್ಯೆ ಅರುವತ್ತನ್ನು ದಾಟಿತ್ತು! ನಾಟಕದ ಪ್ರಥಮ ಪ್ರದರ್ಶನಗಳು ನಡೆದದ್ದು ಅಥಣಿ ಹಾಗೂ ಧಾರವಾಡಗಳಲ್ಲಿ. ಆನಂತರ ಬೆಂಗಳೂರಿನಲ್ಲಿಯೂ ಪ್ರದರ್ಶನಗಳು ನಡೆದವು. ಭವ್ಯ ಭಾರತದ ಅದ್ಭುತ ಐತಿಹಾಸಿಕ ಕ್ಷಣಗಳು ರಂಗದ ಮೇಲೆ ಅತ್ಯಂತ ವಿಜೃಂಭಣೆಯಿಂದ – ವರ್ಣರಂಜಿತವಾಗಿ ತೆರೆದುಕೊಂಡು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದವು. ಅಕ್ಕ ಸಂಯೋಜಿಸಿದ್ದ ಮತ್ತೆ ಮತ್ತೆ ಮೆಲುಕು ಹಾಕುವಂತಹ ಸುಶ್ರಾವ್ಯ ಹಾಡುಗಳು, ಉಷಾ ದಾತಾರ್ ಅವರ ಅಪೂರ್ವ ಸಂಯೋಜನೆಯ ನೃತ್ಯಭಾಗಗಳು, ನಮ್ಮ ಕಲಾವಿದರ ಚೇತೋಹಾರಿ ಅಭಿನಯ… ಎಲ್ಲವೂ ʻಸುವರ್ಣ ಭಾರತʼ ರೂಪಕದ ಪ್ರಚಂಡ ಯಶಸ್ಸಿಗೆ ಮುಖ್ಯ ಕಾರಣಗಳಾದವು. ಒಟ್ಟಾರೆ ʻಸುವರ್ಣ ಭಾರತʼ ಒಂದು ಯಶಸ್ವಿ ಪ್ರದರ್ಶನವೇ ಆದರೂ ಭಾಗವಹಿಸಿದ್ದ ಕಲಾವಿದರ ಸಂಖ್ಯೆ ವಿಪರೀತವಾಗಿದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮರುಪ್ರದರ್ಶನಗಳನ್ನು ನಡೆಸಲು ಸಾಧ್ಯವಾಗಲಿಲ್ಲ.

ಒಂದು ದಿನ ಬೆಳಿಗ್ಗೆ ಪ್ರೊಡಕ್ಷನ್ ಮ್ಯಾನೇಜರ್ ರಾಮಚಂದ್ರ ಅವರು ಫೋನ್ ಮಾಡಿ, “ಬಿಡುವಾಗಿದೀರಾ ಪ್ರಭುಗಳೇ?” ಎಂದು ಕೇಳಿದರು. “ಹೂಂ ರಾಮಣ್ಣ, ಇವತ್ತೇನೂ ಶೂಟಿಂಗ್ ಇಲ್ಲ… ಬಿಡುವಾಗಿದ್ದೇನೆ” ಎಂದೆ ನಾನು. “ಹಾಗಾದರೆ ಈಗಲೇ ಹೊರಟು ಗಿರೀಶ್ ಕಾರ್ನಾಡ್ ಅವರ ಮನೆಗೆ ಬಂದುಬಿಡಿ… ನಿಮ್ಮ ಜೊತೆ ಸರ್ ಮಾತಾಡಬೇಕಂತೆ” ಎಂದರು ರಾಮಣ್ಣ. ಓಹೋ! ಇದಕ್ಕಿಂತ ಸುಂದರವಾದ ಕರೆ ಮತ್ತಾವುದಾದರೂ ಜಗತ್ತಿನಲ್ಲಿರುವುದು ಸಾಧ್ಯವೇ! ಗಿರೀಶರಂತಹ ಪ್ರಸಿದ್ಧ ನಾಟಕಕಾರ – ನಿರ್ದೇಶಕ ಮಾತಾಡಲು ಕರೆಸುತ್ತಿದ್ದಾರೆನ್ನುವುದೇನು ಸಾಧಾರಣ ಸಂಗತಿಯೇ! ಮುಂದಿನ ಮುಕ್ಕಾಲು ಗಂಟೆಯಲ್ಲಿ ನಾನು ಗಿರೀಶ್‌ರ ಮನೆಯಲ್ಲಿದ್ದೆ!

ʻಕನಕ ಪುರಂದರʼ ಚಿತ್ರದ ಒಂದಷ್ಟು ಸಂಗತಿಗಳನ್ನು ಮೆಲುಕು ಹಾಕಿಕೊಳ್ಳುತ್ತಾ ಮಾತು ಆರಂಭಿಸಿದ ಗಿರೀಶ್ ಅವರು ಇದ್ದಕ್ಕಿದ್ದಂತೆ, “ಶ್ರೀನಿವಾಸ್, ಈಗ ನೀವು ನಮಗಾಗಿ ಎಷ್ಟು ಸಮಯ ಕೊಡಬಲ್ಲಿರಿ? ಐ ಮೀನ್ ಟು ಸೇ, ವಾಟ್ ಆರ್ ಯುವರ್ ಪ್ರೆಸೆಂಟ್ ಕಮಿಟ್ಮೆಂಟ್ಸ್?” ಎಂದರು! ನಾನು ದೂರದರ್ಶನಕ್ಕೆ ರಾಜೀನಾಮೆ ಕೊಟ್ಟು ಪೂರ್ಣಪ್ರಮಾಣದ ವೃತ್ತಿಪರ ನಟನಾಗಿ ತೊಡಗಿಕೊಂಡಿರುವುದು ಕೇಳಿ ಅವರಿಗೆ ಪರಮ ಸಂತೋಷವಾಗಿ ಹೋಯಿತು. “ವಂಡರ್‌ಫುಲ್! ಅಲ್ಲಿಗೆ ಸಮಯದ ಒಂದು ಸಮಸ್ಯೆ ತೀರಿದಂಗಾತು… ಯಾಕೆ ಹೇಳಿದೆ ಅಂದರೆ, ನನಗೆ ನಿಮ್ಮ ಡೇಟ್ಸ್ ಭಾಳ ಬೇಕಾಗಬಹುದು… ಕಡೇಪಕ್ಷ 20 – 25 ದಿನ… ಒಟ್ಟಿಗೇ ಅಲ್ಲದಿದ್ದರೂ ಎರಡು ಮೂರು ಷೆಡ್ಯೂಲ್‌ನಲ್ಲಿ ನೀವು ಅಷ್ಟು ಸಮಯ ಹೊಂದಿಸಿಕೋಬೇಕಾಗುತ್ತೆ… ಆಗ್ತದಲ್ಲಾ?” ಎಂದರು ಗಿರೀಶ್. “ಖಂಡಿತ ಹೊಂದಿಸಿಕೋತೀನಿ ಸರ್… ಏನೂ ಸಮಸ್ಯೆ ಇಲ್ಲ” ಎಂದೆ ನಾನು.

“ಅಡ್ಡಿಯಿಲ್ಲ… ಈಗ ಇನ್ನೊಂದು ಮುಖ್ಯವಾದ ವಿಷಯಕ್ಕೆ ಬರ್ತೇನೆ… ನಿಮ್ಮ ಹಿಂದಿ ಹ್ಯಾಂಗದ? ಡೈಲಾಗ್ ನೆನಪಿಟ್ಟುಕೊಂಡು ಹೇಳಲಿಕ್ಕಾಗ್ತದೇನು?” ಎಂದರು ಗಿರೀಶ್. ನಾನು ದೆಹಲಿಯ ನಾಟಕಶಾಲೆಯಲ್ಲಿ ಕಲಿತದ್ದನ್ನೂ ಅಲ್ಲಿ ಅನೇಕ ಹಿಂದಿ ನಾಟಕಗಳಲ್ಲಿ ಮುಖ್ಯಪಾತ್ರ ವಹಿಸಿದ್ದನ್ನೂ ನೆನಪಿಸಿಕೊಟ್ಟ ಮೇಲೆ ಗಿರೀಶ್ ಆನಂದತುಂದಿಲರಾಗಿಬಿಟ್ಟರು. “ಅಬ್ಬಾ! ಈಗ ನನಗೆ ಸಮಾಧಾನ ಆತು ನೋಡ್ರೀ! ನನ್ನ ಎಲ್ಲಾ ಸಮಸ್ಯೇನೂ ಬಗೆಹರಿಧಂಗಾತು! ಈಗ ವಿಷಯಕ್ಕೆ ಬರ್ತೀನಿ… ನಾನೀಗ ಕುವೆಂಪು ಅವರ ʻಕಾನೂರು ಹೆಗ್ಗಡಿತಿʼ ಕಾದಂಬರಿಯನ್ನು ಫಿಲ್ಮ್ ಮಾಡ್ತಿದೀನಿ… ಅದರಲ್ಲಿ ಒಂದು ಮುಖ್ಯಪಾತ್ರಕ್ಕೆ ನಿಮ್ಮನ್ನ ತೊಗೋಬೇಕಂತ ವಿಚಾರ ಮಾಡೀನಿ… ಅದು ಸೇರೆಗಾರನ ಪಾತ್ರ… ಬಹಳ ವಿಶಿಷ್ಟವಾದ ಪಾತ್ರ ಅದು… ಕಾದಂಬರಿಗಿಂತ ಬೇರೆ ರೀತಿಯಲ್ಲೇ ಆ ಪಾತ್ರಾನ ರೂಪಿಸೋದು ನನ್ನ ವಿಚಾರ ಅದ… ನಿಮ್ಮ ಕಡೀಂದ ಏನೂ ಅಭ್ಯಂತರ ಇಲ್ಲದಿದ್ರ ನಿಮ್ಮ ಸಂಭಾವನೆ ಬಗ್ಗೆ ಮಾತಾಡಬಹುದು” ಎಂದರು ಗಿರೀಶ್. “ನನಗೆ ಯಾವ ಅಭ್ಯಂತರವೂ ಇಲ್ಲ ಸರ್… ಮೊಟ್ಟಮೊದಲಿಗೆ ನೀವು ನನಗೆ ನೀಡ್ತಿರೋ ಈ ಪಾತ್ರವೇ ನನಗೆ ದೊಡ್ಡ ಸಂಭಾವನೆ… ಬೇರೇನೂ ಮಾತಾಡೋ ಅಗತ್ಯ ನನಗಿಲ್ಲ… ತಾವೇ ಈ ಬಗ್ಗೆ ತೀರ್ಮಾನ ತೊಗೋಬಹುದು… ನನ್ನದೇನೂ ಬೇಡಿಕೆಯೂ ಇಲ್ಲ… ತಕರಾರೂ ಇಲ್ಲ… ಷರತ್ತುಗಳೂ ಇಲ್ಲ” ಎಂದು ಕೃತಜ್ಞತಾಪೂರ್ವಕವಾಗಿ ನುಡಿದೆ. ಗಿರೀಶರಿಗೂ ನನ್ನ ಮಾತಿನಿಂದ ತುಂಬಾ ಸಮಾಧಾನವಾದಂತೆನ್ನಿಸಿತು. ಅನಂತರ ಅವರ ಸಂಪೂರ್ಣ ಯೋಜನೆಯನ್ನು ವಿವರಿಸತೊಡಗಿದರು:

ʻಕಾನೂರು ಹೆಗ್ಗಡಿತಿʼ ಕನ್ನಡ ಚಿತ್ರವಾಗಿ ರೂಪುಗೊಳ್ಳುವುದರ ಜೊತೆಗೆ ದೆಹಲಿ ದೂರದರ್ಶನಕ್ಕಾಗಿ ಒಂದು ಧಾರಾವಾಹಿಯಾಗಿಯೂ ಸಿದ್ಧವಾಗಬೇಕಿತ್ತು – ಅದೂ ಹಿಂದಿ ಭಾಷೆಯಲ್ಲಿ! ಎರಡೂ ವಿಭಿನ್ನ ಪ್ರಕಾರಗಳಾದುದರಿಂದ ಹಾಗೂ ಎರಡರ ಹರಹಿನಲ್ಲಿಯೂ ವಿಶೇಷ ವ್ಯತ್ಯಾಸವಿದ್ದುದರಿಂದ ಮತ್ತು ಚಿತ್ರೀಕರಣದ ಮಾಧ್ಯಮವೂ ಬೇರೆ ಬೇರೆಯಾದ್ದರಿಂದ ಚಿತ್ರೀಕರಣವನ್ನು ಬೇರೆಬೇರೆಯಾಗಿಯೇ ನಡೆಸುವ ಜರೂರಿತ್ತು. ಇಡೀ ಚಿತ್ರ ಹಾಗೂ ಧಾರಾವಾಹಿಯ ಚಿತ್ರೀಕರಣವನ್ನು ತೀರ್ಥಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಸುವುದೆಂದು ತೀರ್ಮಾನವಾಗಿತ್ತು. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಹೆಗ್ಗಡಿತಿ ಕಾದಂಬರಿಯನ್ನು ಎರಡು ಮೂರು ಬಾರಿ ಓದಿ ಬೆರಗುಗೊಂಡಿದ್ದರೂ, ಈಗ ನಿರ್ವಹಿಸುವ ಪಾತ್ರದ ಹಿನ್ನೆಲೆಯಲ್ಲಿ ಮತ್ತೆ ಒಂದೆರಡು ಬಾರಿ ಮನನ ಮಾಡಿಕೊಳ್ಳುವ ಅಗತ್ಯವಿತ್ತು.

ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕಾನೂರು ಹೆಗ್ಗಡಿತಿ ಕಾದಂಬರಿಯ ಪ್ರಾರಂಭದ ʻಅರಿಕೆʼಯಲ್ಲಿ ಹೀಗೆಂದಿದ್ದಾರೆ: “ಈ ನನ್ನ ಪ್ರಥಮ ಕಾದಂಬರಿಯನ್ನು ಓದುವವರಲ್ಲಿ ಒಂದು ವಿಜ್ಞಾಪನೆ. ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ. ಸಾವಧಾನವಾಗಿ, ಸಚಿತ್ರವಾಗಿ, ಸಜೀವವಾಗಿ ಓದಿ. ಇಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿ. ಅನೇಕರಿಗೆ ಅದು ಹೊಸ ಪ್ರಪಂಚವಾಗಿರುತ್ತದೆ. ಹೊಸ ಊರಿಗೆ ಹೋಗುವವರು ಅಲ್ಲಿಯ ಜನ ಮತ್ತು ಜೀವನದ ವಿಚಾರವಾಗಿ ತಟಕ್ಕನೆ ಯಾವ ನಿರ್ಣಯಗಳನ್ನೂ ಮಾಡಿಕೊಳ್ಳದೆ ಸ್ವಲ್ಪಕಾಲ ತಾಳ್ಮೆಯಿಂದಿದ್ದು ಕ್ರಮೇಣ ಬಳಕೆಯಿಂದ ಜನರನ್ನೂ, ಜೀವನವನ್ನೂ ಪರಿಚಯ ಮಾಡಿಕೊಳ್ಳುವಂತೆ ಈ ಕಾದಂಬರಿಯ ಅರಣ್ಯ ಜಗತ್ತನ್ನು ಪ್ರವೇಶಿಸುವ ವಾಚಕರು ವರ್ತಿಸಬೇಕಾಗುತ್ತದೆ”

ನಿಜವೇ! ಒಂದು ಓದಿನಲ್ಲಿ ಕಾದಂಬರಿಯ ವೈವಿಧ್ಯಮಯ ಪಾತ್ರ ಜಗತ್ತನ್ನಾಗಲೀ ಕೆಲವೊಮ್ಮೆ ನಗಿಸಿ, ಕೆಲವೊಮ್ಮೆ ವಿಷಾದಕ್ಕೆ ದೂಡಿ ಮತ್ತೆ ಕೆಲವೊಮ್ಮೆ ರೋಮಾಂಚನಗೊಳಿಸಿ, ಮಗುದೊಮ್ಮೆ ಪರಮ ಸಮಾಧಾನದ ಸ್ಥಿತಿಗೆ ದೂಡುವ ಕೌಶಲ್ಯಪೂರ್ಣ ಕಥಾಸಂವಿಧಾನವನ್ನಾಗಲೀ ಗ್ರಹಿಸಿದ್ದೇನೆಂದು ಭ್ರಮಿಸುವುದು ಸಲ್ಲ! ಅದೂ ಅಂತಹ ಅದ್ಭುತ ಕಾದಂಬರಿಯ ಮುಖ್ಯಪಾತ್ರವೊಂದನ್ನು ಚಿತ್ರಮಾಧ್ಯಮದಲ್ಲಿ ಅಭಿನಯಿಸುವ ಅವಕಾಶ ಬಂದಾಗ ಹೆಚ್ಚಿನ ಪೂರ್ವಸಿದ್ಧತೆ ಅತ್ಯಗತ್ಯ. ಹಾಗಾಗಿಯೇ ಮತ್ತೆ ಮತ್ತೆ ಕಾದಂಬರಿಯನ್ನು ಓದಿ ಅಲ್ಲಿ ಚಿತ್ರಿತ ಬದುಕಿನ ಪರಿಚಯವನ್ನು ಪಡೆಯುವ ಪ್ರಯತ್ನ ಮಾಡಿದೆ.

ಕನ್ನಡ ಚಲನಚಿತ್ರದ ಅವತರಣಿಕೆಯಲ್ಲಿ ಹೆಗ್ಗಡಿತಿಯ ಪಾತ್ರವನ್ನು ತಾರಾ ಅವರೂ, ಚಂದ್ರೇಗೌಡರ ಪಾತ್ರವನ್ನು ಗಿರೀಶ್ ಕಾರ್ನಾಡರೂ, ಹೂವಯ್ಯನ ಪಾತ್ರವನ್ನು ಸುಚೇಂದ್ರ ಪ್ರಸಾದ್ ಅವರೂ, ಸೀತೆಯ ಪಾತ್ರವನ್ನು ಮಲ್ಲಿಕಾ ಪ್ರಸಾದ್ ಅವರೂ  ನಿರ್ವಹಿಸುವವರಿದ್ದರು. ಅರುಂಧತಿ ನಾಗ್, ಹರೀಶ್ ರಾಜ್, ಅರುಂಧತಿ ಜತ್ಕರ್, ಪ್ರಕಾಶ್ ಬೆಳವಾಡಿ, ಲಕ್ಷ್ಮಿ ಕಬ್ಬೇರಳ್ಳಿ, ವೆಂಕಟರಾವ್, ಜಿ.ಕೆ. ಗೋವಿಂದ ರಾವ್  ಮುಂತಾದವರು ಇತರ ಮುಖ್ಯಭೂಮಿಕೆಗಳನ್ನು ನಿರ್ವಹಿಸುವವರಿದ್ದರು. “ಕನ್ನಡದಾಗ ಅಭಿನಯಿಸ್ತಿರೋ ಒಂದಿಷ್ಟು ಮಂದೀಗೆ ಎದೆ ಸೀಳಿದರೂ ಒಂದಕ್ಷರ ಹಿಂದಿ ಬರಂಗಿಲ್ಲ… ಅದಕ್ಕ ಹಿಂದಿ ಧಾರಾವಾಹಿಗೆ ಕೆಲವು ಬದಲಾವಣೆ ಮಾಡಿಕೊಂಡೀನಿ… ಹಿಂದಿ ಧಾರಾವಾಹಿಯಲ್ಲಿ ಹೆಗ್ಗಡಿತಿ ಪಾತ್ರಾನ ಭಾಗೀರಥಿ ಬಾಯಿಯವರು ಮಾಡ್ತಾರ ನೋಡ್ರೀ…” ಎಂದು ಮೊದಲ ಭೇಟಿಯಲ್ಲೇ ಗಿರೀಶ್ ಹೇಳಿದ್ದರು. ನಾನು ನಿರ್ವಹಿಸಬೇಕಿದ್ದ ಸೇರೆಗಾರ ರಂಗಪ್ಪ ಸೆಟ್ಟಿಯ ಪಾತ್ರವನ್ನು ಸಾಕಷ್ಟು ಬದಲಿಸಿದ್ದರು ಗಿರೀಶ್. ಮೂಲ ಕಾದಂಬರಿಯಲ್ಲಿ ಸೇರೆಗಾರ ಒಬ್ಬ ಲಂಪಟ; ʻಸ್ವಾನʼಬುದ್ಧಿಯವ. ಹೆಗ್ಗಡಿತಿಯನ್ನು ಬಲೆಗೆ ಹಾಕಿಕೊಳ್ಳುವುದೇ ಅವನ ಪರಮ ಉದ್ದೇಶವಾಗಿದ್ದು, ತನ್ನ ಅಭೀಪ್ಸೆ ಪೂರ್ಣವಾಗುತ್ತಿದ್ದಂತೆ ಮುಂಬರುವ ತೊಂದರೆಗಳಿಂದ ಪಾರಾಗಲು ಪಲಾಯನ ಮಾಡಿಬಿಡುವ ರಣಹೇಡಿ. ಗಿರೀಶ್ ಈ ಲಂಪಟ ಸೇರೆಗಾರನನ್ನು ಒಬ್ಬ ʻಪ್ರೇಮಿ ಸೇರೆಗಾರʼನನ್ನಾಗಿ ರೂಪಾಂತರಿಸಿದ್ದರು. ಅದು ಚಿತ್ರದ ಅಂತ್ಯದ ವಿಷಾದಕ್ಕೆ ಮತ್ತಷ್ಟು ತೀವ್ರತೆಯನ್ನು ತುಂಬಲು ನೆರವಾಗಿತ್ತು.

ತೀರ್ಥಹಳ್ಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿತ್ರೀಕರಣ ಆರಂಭವಾಗಿಯೇ ಬಿಟ್ಟಿತು. ಹೆಚ್‌.ಜಿ. ನಾರಾಯಣ್ ಅವರು ಈ ಚಿತ್ರದ ನಿರ್ಮಾಪಕರು. ಎಸ್. ರಾಮಚಂದ್ರ ಅವರು ಛಾಯಾಗ್ರಹಣದ ಹೊಣೆ ಹೊತ್ತಿದ್ದರು. ಶಶಿಧರ್ ಅಡಪ ಅವರು ಕಲಾ ನಿರ್ದೇಶಕರಾಗಿ, ಕೆ.ಎಂ. ಚೈತನ್ಯ ಅವರು ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಿ.ವಿ. ಕಾರಂತ ಮೇಷ್ಟ್ರು ಸಂಗೀತ ನಿರ್ದೇಶಕರಾಗಿದ್ದರು; ಜಯಂತಿ ಮರುಳಸಿದ್ದಪ್ಪನವರು ವಸ್ತ್ರವಿನ್ಯಾಸದ ಹೊಣೆ ಹೊತ್ತಿದ್ದರು. ಒಟ್ಟಿನಲ್ಲಿ ಖ್ಯಾತನಾಮರ ದಂಡೇ ಅಲ್ಲಿ ನೆರೆದಿತ್ತು ಎನ್ನಬಹುದು!

‍ಲೇಖಕರು avadhi

August 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: