ಶ್ರೀನಿವಾಸ ಪ್ರಭು ಅಂಕಣ – ಒಂದು ಅನಿರೀಕ್ಷಿತ ಕರೆ ನನ್ನನ್ನು ಚಕಿತಗೊಳಿಸಿಬಿಟ್ಟಿತು!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

82

1988 ರ ವೇಳೆಗೆ ದೂರದರ್ಶನ ಕೇಂದ್ರದ ಹೊಸ ಕಟ್ಟಡ ಜೆ.ಸಿ.ನಗರದಲ್ಲಿ ಸಂಪೂರ್ಣವಾಗಿ ಸಿದ್ಧವಾಗಿ ಸಜ್ಜುಗೊಂಡು ಅಲ್ಲಿಂದಲೇ ನಮ್ಮ ಕಾರ್ಯಾಚರಣೆ ಪ್ರಾರಂಭವಾಗಿತ್ತು. ದೊಡ್ಡ ಸ್ಟುಡಿಯೋ…ಹೆಚ್ಚಿದ ಸೌಲಭ್ಯಗಳ ಜೊತೆಗೇ ದೊಡ್ಡ ಜವಾಬ್ದಾರಿಯೂ ಹೆಗಲೇರಿತ್ತು! ‘ಹೊಸ ಸ್ಟುಡಿಯೋಗೆ ಸ್ಥಳಾಂತರವಾಗುತ್ತಿದ್ದಂತೆ ಕನ್ನಡದ ಶ್ರೇಷ್ಠ ಹಾಗೂ ಮಹತ್ವಾಕಾಂಕ್ಷೆಯ ನಾಟಕಗಳನ್ನು ದೂರದರ್ಶನಕ್ಕೆ ಅಳವಡಿಸಿಕೊಳ್ಳಬೇಕು’ ಎಂದು ನಿರ್ದೇಶಕ ಸಿ.ಗುರುನಾಥ್ ಅವರು ಮೊದಲೇ ಸೂಚನೆಗಳನ್ನು ನೀಡಿಬಿಟ್ಟಿದ್ದರು. ನಾಡಿನ ಪ್ರಮುಖ ನಾಟಕ ತಂಡಗಳನ್ನು ನಮ್ಮ ಸ್ಟುಡಿಯೋಗೆ ಕರೆಸಿ ನಾಟಕಗಳನ್ನು ಮೂರು ಕ್ಯಾಮರಾಗಳ ನೆರವಿನಿಂದ ಒಂದೇ ಓಘದಲ್ಲಿ ಚಿತ್ರೀಕರಿಸುವುದು ಒಂದು ಮುಖ್ಯ ಯೋಜನೆಯಾಗಿತ್ತು. ಜೊತೆಗೆ ಕನ್ನಡದ ಉತ್ತಮ ಕಥೆಗಳನ್ನು ಟೆಲಿಚಿತ್ರಗಳಾಗಿ ರೂಪಿಸುವ ನಿಟ್ಟಿನಲ್ಲಿಯೂ ಚಿಂತನೆ ಆರಂಭವಾಯಿತು. ಒಂದು ಹೊಸ ಹುರುಪು—ಹುಮ್ಮಸ್ಸಿನಿಂದ ಹೊಸ ಕೇಂದ್ರದಲ್ಲಿ ಕೆಲಸ ಆರಂಭವಾಯಿತು.

ಇತ್ತ ರವಿಚಂದ್ರನ್ ಅವರ ಚಿತ್ರಗಳು ಭರ್ಜರಿ ಯಶಸ್ಸನ್ನು ಕಂಡು ಅವರು ದೊಡ್ಡ ಸ್ಟಾರ್ ನಟರಾಗಿ ಬೆಳೆದು ಅವರ ಹಲವಾರು ಚಿತ್ರಗಳು ನಿರ್ಮಾಣಗೊಳ್ಳತೊಡಗಿದವು. ಈ ನಡುವೆ ಡಬ್ಬಿಂಗ್ ಕ್ಷೇತ್ರದಲ್ಲಾದ ಒಂದು ಮಹತ್ವದ ತಾಂತ್ರಿಕ ಬೆಳವಣಿಗೆಯೆಂದರೆ ಡಬ್ಬಿಂಗ್ ಗಣಕೀಕರಣಗೊಂಡಿದ್ದು (computarsed dubbing).ಈ ಸೌಲಭ್ಯದಿಂದಾಗಿ ಹಲವು ಹತ್ತು ಟ್ರ್ಯಾಕ್ ಗಳಲ್ಲಿ ಕಲಾವಿದರ ಸಂಭಾಷಣೆಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮುದ್ರಿಸಿಕೊಂಡು ನಂತರ ಒಂದು ಸೂತ್ರದಲ್ಲಿ ಎಲ್ಲವನ್ನೂ ಏಕತ್ರಗೊಳಿಸುವುದು ಶಕ್ಯವಿತ್ತು. ನನ್ನ ಪಾಲಿಗಂತೂ ಇದೊಂದು ವರದಾನವೇ ಆಯಿತೆನ್ನಬಹುದು. ಇಲ್ಲದಿದ್ದರೆ ಹೊಸ ಕೇಂದ್ರದಲ್ಲಿ ಹೆಚ್ಚಿದ ಜವಾಬ್ದಾರಿಗಳ ನಡುವೆ ನಾನು ವಾರಗಟ್ಟಲೆ ಡಬ್ಬಿಂಗ್ ಗಾಗಿ ಮೀಸಲಿಡುವುದು ದೊಡ್ಡ ತಲೆನೋವಿನ ಸಂಗತಿಯೇ ಆಗಿಬಿಡುತ್ತಿತ್ತು.

ಪ್ರಥಮ ವಿಶ್ವ ಕನ್ನಡ ಸಮ್ಮೇಳನ ನಡೆದದ್ದು ಮೈಸೂರಿನಲ್ಲಿ,1985ರಲ್ಲಿ. ಕಡಲ ತೀರದ ಭಾರ್ಗವ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಅವರು ಉದ್ಘಾಟಿಸಿದ್ದರು. ಈ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳನ್ನೂ ದೂರದರ್ಶನಕ್ಕೆ ಅಳವಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಪಾಲಿಗೆ ಬಂದಿತ್ತು ಎಂಬ ಸಂಗತಿಯನ್ನು ಗೆಳೆಯ ರಾಜೇಂದ್ರ ಕಟ್ಟಿ ಇತ್ತೀಚೆಗಷ್ಟೇ ನನಗೆ ನೆನಪಿಸಿದ! ಅದೇನೋ, ಈ ಒಂದು ವಿಶೇಷ ಸಂದರ್ಭದ ವಿವರಗಳು ನನ್ನ ನೆನಪಿನಿಂದ ಜಾರಿಯೇ ಹೋಗಿಬಿಟ್ಟಿವೆ. ಇರಲಿ.

ನಮ್ಮ ನಾಡಿನಿಂದ ಹೊರಗೆ, ವಿದೇಶದಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನವೆಂದರೆ 1988ರಲ್ಲಿ— ಮ್ಯಾಂಚೆಸ್ಟರ್ ನಲ್ಲಿ ನಡೆದ ಸಮ್ಮೇಳನ. ಈ ಸಮ್ಮೇಳನವನ್ನು ಕುರಿತಾದ ಹಲವಾರು ಸಂಗತಿಗಳು ನನ್ನ ನೆನಪಿನಂಗಳದಲ್ಲಿ ಇನ್ನೂ ಹಸಿರಾಗಿವೆ. ಅವನ್ನೊಂದಿಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

1983 ರಲ್ಲಿ ನಮ್ಮ ‘ನಾಟ್ಯದರ್ಪಣ’ ತಂಡ ಒಡೆದು ಹೋಳಾದ ವಿಚಾರವನ್ನು ಈಗಾಗಲೇ ಹಿಂದಿನ ಪುಟಗಳಲ್ಲಿ ದಾಖಲಿಸಿದ್ದೇನಷ್ಟೇ. ಅದಾದನಂತರ ನಮ್ಮ ತಂಡ ಯಾವುದೇ ಚಟುವಟಿಕೆಗಳಿಲ್ಲದೆ ಹೆಚ್ಚುಕಡಿಮೆ ಸ್ಥಗಿತವೇ ಆಗಿಬಿಟ್ಟಿತ್ತು. ಹಾಗಿರುವಾಗ ಒಂದು ದಿನ ಆಫೀಸ್ ನಲ್ಲಿದ್ದ ನನಗೆ ಒಂದು ಅನಿರೀಕ್ಷಿತ ಕರೆ ಬಂದು ನನ್ನನ್ನು ಚಕಿತಗೊಳಿಸಿಬಿಟ್ಟಿತು! ಅದರ ಸಾರಾಂಶವಿಷ್ಟು: ‘ಸಂಜೆ ತಪ್ಪದೆ ಕಲಾಕ್ಷೇತ್ರಕ್ಕೆ ಬರಬೇಕು..ನಾಟ್ಯದರ್ಪಣ ತಂಡದ ಎಲ್ಲ ಸದಸ್ಯರೂ ಸೇರುತ್ತಿದ್ದಾರೆ… ಒಂದು ಪ್ರಮುಖ ವಿಚಾರವನ್ನು ಕುರಿತು ಚರ್ಚೆ ಇದೆ’! ಇದೇನಿದು ಹೊಸ ಬೆಳವಣಿಗೆ! ತಂಡವನ್ನು ಮತ್ತೆ ಜಾಗೃತಗೊಳಿಸಿ ನಾಟಕ ಚಟುವಟಿಕೆಯನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ವಿಚಾರ ಮಂಥನವಿರಬಹುದೇ? ಎಂದೆಲ್ಲಾ ಯೋಚಿಸುತ್ತಾ ಕಲಾಕ್ಷೇತ್ರಕ್ಕೆ ಹೋದವನಿಗೆ ಅಲ್ಲಿ ಮತ್ತೂ ದೊಡ್ಡ ಆಶ್ಚರ್ಯದ ಸಂಗತಿ ಕಾದಿತ್ತು: ‘ಮ್ಯಾಂಚೆಸ್ಟರ್ ನಲ್ಲಿ ಆಗಸ್ಟ್ ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನಗೊಳ್ಳಲು ನಮ್ಮ ತಂಡದ ‘ಸಿಕ್ಕು’ ನಾಟಕ ಆಯ್ಕೆಯಾಗಿದೆ! ಹಲವಾರು ನಾಟಕಗಳ ನಡುವೆ ತೀವ್ರ ಪೈಪೋಟಿ ಇದ್ದರೂ, ಉಳಿದ ತಂಡಗಳಿಗಿದ್ದಂತಹ ‘ವಶೀಲಿ’ ‘ದೊಡ್ಡವರ ಆಶೀರ್ವಾದ’ಗಳಂತಹ ಯಾವ ಸವಲತ್ತುಗಳಿಲ್ಲದಿದ್ದರೂ ಘನ ಸರ್ಕಾರ ನನ್ನ ‘ಸಿಕ್ಕು’ ನಾಟಕವನ್ನು ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಿದೆ! ಖುಷಿ..ಅಚ್ಚರಿ..ಹೆಮ್ಮೆ..ಎಲ್ಲವನ್ನೂ ಒಟ್ಟಿಗೇ ಅನುಭವಿಸಿದ ಕ್ಷಣವದು! ನಮ್ಮ ತಂಡದ ಚುಕ್ಕಾಣಿ ಹಿಡಿದು ನಡೆಸಿಕೊಂಡು ಬಂದಿದ್ದ ರಿಚರ್ಡ್ ಜಿ ಲೂಯಿಸ್—ಅಲಿಯಾಸ್ ರಿಚಿ, ಆವರೆಗೆ ನಡೆದ ಆಯ್ಕೆಯ ಪ್ರಕ್ರಿಯೆಯನ್ನು ಎಳೆ ಎಳೆಯಾಗಿ ನಮ್ಮೆದುರು ಬಿಡಿಸಿಟ್ಟು ‘ಸಿಕ್ಕು’ವನ್ನು ಗೆಲ್ಲಿಸಲು ತಾನು ಪಟ್ಟ ಪ್ರಯತ್ನವನ್ನು ವಿವರವಾಗಿ ನಮ್ಮೊಂದಿಗೆ ಹಂಚಿಕೊಂಡ.

ಈ ಸಂತೋಷದ ಸುದ್ದಿಯೊಂದಿಗೇ ನಮ್ಮನ್ನು ಒಂದಷ್ಟು ಚಿಂತೆಗೆ ದೂಡುವ ಒಂದೆರಡು ಸಂಗತಿಗಳೂ ಇದ್ದವು.ಅದರಲ್ಲಿ ಬಹಳ ಮುಖ್ಯವಾದುದೆಂದರೆ ನಾಟಕ ತಂಡದ ಒಟ್ಟು ಸದಸ್ಯರ ಸಂಖ್ಯೆ ಯಾವುದೇ ಕಾರಣಕ್ಕೂ ಎಂಟನ್ನು ಮೀರುವಂತಿಲ್ಲ!ಆದರೆ ‘ಸಿಕ್ಕು’ ನಾಟಕ ಪ್ರದರ್ಶನಕ್ಕೆ ಕನಿಷ್ಠ ಹನ್ನೊಂದು ಕಲಾವಿದರ ಅವಶ್ಯಕತೆಯಿತ್ತು! ಏನು ಮಾಡಿದರೂ ಎಷ್ಟೇ ಕೇಳಿಕೊಂಡರೂ ಸರ್ಕಾರದ ‘ಎಂಟು ಕಲಾವಿದ’ರ ನಿಲುವಿನಲ್ಲಿ ಬದಲಾವಣೆಯಾಗಲಿಲ್ಲ.ಸರ್ಕಾರವೇ ಇಷ್ಟು ಜಿಪುಣತನದ ಲೆಕ್ಕಾಚಾರಕ್ಕಿಳಿದ ಮೇಲೆ ನಾವು ಮಾಡುವುದಾದರೂ ಏನಿದೆ? ಹಾಗಾದರೆ ಸಮಸ್ಯೆಗೆ ಪರಿಹಾರ? ಒಂದೆರಡು ಚಿಕ್ಕ ಪಾತ್ರಗಳಿಗೆ ಅಲ್ಲಿನ ಕಲಾವಿದರನ್ನೇ ಬಳಸಿಕೊಳ್ಳಬಹುದೇ ಎಂಬ ಆಲೋಚನೆಯೂ ತೂರಿ ಬಂತು.ನನಗೇಕೋ ಈ ಸಲಹೆ ಅಷ್ಟು ಸರಿಕಾಣಲಿಲ್ಲ.ಅಲ್ಲಿ ಕಲಾವಿದರು ದೊರೆತು ಅವರ ಸಮಯ ಹೊಂದಿಸಿಕೊಂಡು ತಾಲೀಮು ನಡೆಸಿ ಪ್ರದರ್ಶನ ನೀಡುವುದು ಕಷ್ಟದ ಕೆಲಸವೇ ಸರಿ..ಏನೋ ಕಾರಣಕ್ಕೆ ಹೆಚ್ಚು ಕಮ್ಮಿಯಾಗಿ ಪ್ರದರ್ಶನ ಕಳೆಗಟ್ಟದಿದ್ದರೆ ಆಭಾಸವಾಗುವುದಿಲ್ಲವೇ? ಎನ್ನಿಸಿ ಆ ವಿಚಾರವನ್ನು ತಳ್ಳಿಹಾಕಿದೆವು.ಮತ್ತಷ್ಟು ತಲೆಕೆಡಿಸಿಕೊಂಡು ಯೋಚಿಸಿದ ಬಳಿಕ ಎಲ್ಲರಿಗೂ ಬಹುತೇಕ ಒಪ್ಪಿಗೆಯಾದ ಒಂದು ತೀರ್ಮಾನಕ್ಕೆ ಬರಲಾಯಿತು: ನಮಗೆ ಬೇಕೇ ಬೇಕಿರುವುದು ಹನ್ನೊಂದು ಕಲಾವಿದರು;ಸರ್ಕಾರ ಒಪ್ಪಿ ಕಳಿಸುತ್ತಿರುವುದು ಎಂಟು ಕಲಾವಿದರನ್ನು;ಉಳಿದ ಮೂವರು ಕಲಾವಿದರ ಪ್ರಯಾಣದ ಖರ್ಚನ್ನು ತಂಡದ ಎಲ್ಲರೂ ಸಮನಾಗಿ ಹಂಚಿಕೊಂಡು ಅವರನ್ನು ಕರೆದುಕೊಂಡು ಹೋಗುವುದು.ಖರ್ಚಿನ ಮೇಲೆ ಮತ್ತಷ್ಟು ಖರ್ಚಾಗುತ್ತದೆಯಾದರೂ ಅವಕಾಶವನ್ನು ತಪ್ಪಿಸಿಕೊಳ್ಳುವಂತಿಲ್ಲ! ಮ್ಯಾಂಚೆಸ್ಟರ್ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಮ್ಮ ‘ಸಿಕ್ಕು’ ನಾಟಕ ಪ್ರದರ್ಶನಗೊಳ್ಳುತ್ತದೆ ಅನ್ನುವುದೇನು ಸಾಧಾರಣ ಸಂಗತಿಯೇ!! ಸರಿ,ಭರದಿಂದ ತಯಾರಿಗಳು ಪ್ರಾರಂಭವಾದವು.

ಮನೆಯಲ್ಲಿ ರಂಜನಿಗೆ ಈ ಸಂತಸದ ಸುದ್ದಿಯನ್ನು ತಿಳಿಸಿದಾಗ ಅವಳ ಕಣ್ಣುಗಳಲ್ಲಿ ಕಾಮನಬಿಲ್ಲೇ ಮೂಡಿಬಿಟ್ಟಿತು! ‘ನಾನೂ ನಿಮ್ಮೊಂದಿಗೆ ಬರಲೇ?’ ಎಂದು ತುಂಬು ಉತ್ಸಾಹದಿಂದ ಕಣ್ಣುಗಳಲ್ಲಿ ಕಾತರ—ಆಸೆಗಳನ್ನು ತುಳುಕಿಸುತ್ತಾ ಕೇಳಿದಾಗ ಒಂದು ಕ್ಷಣ ಏನು ಹೇಳಲೂ ತೋಚಲಿಲ್ಲ ನನಗೆ.ಮೊದಲೇ ಊರು ಸುತ್ತುವುದು ಅವಳಿಗೆ ಬಲು ಪ್ರಿಯವಾದ ಸಂಗತಿ. ಅಂಥದರಲ್ಲಿ ವಿದೇಶ ಪ್ರವಾಸದ ಅವಕಾಶ ಕದ ಬಡಿಯುತ್ತಿರುವಾಗ ತಡೆದುಕೊಳ್ಳಲಾದೀತೇ? ಆದರೆ ಅವಳನ್ನು ಕರೆದುಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ..ಮುದ್ದು ಮಗಳು ರಾಧಿಕಾಳಿಗೆ ಇನ್ನೂ ಒಂದು ವರುಷ ಕೂಡಾ ತುಂಬಿಲ್ಲ! ಅವಳನ್ನು ಬಿಟ್ಟು ಹೋಗುವುದಾದರೂ ಹೇಗೆ?ಮತ್ತೂ ಒಂದು ಮುಖ್ಯ ಸಮಸ್ಯೆ ಎಂದರೆ ಹಣ ಹೊಂದಿಸುವುದು.ನನ್ನ ಅಲ್ಲಿನ ಮೇಲುಖರ್ಚಿನ ಜೊತೆಗೆ ಮೂರು ಕಲಾವಿದರ ಟಿಕೆಟ್ ದುಡ್ಡಿನ ಪಾಲೂ ಸೇರಿ ಅದಾಗಲೇ ದೊಡ್ಡ ಮೊತ್ತವಾಗಿ ಅದನ್ನು ಹೊಂದಿಸುವುದಕ್ಕೇ ಪರದಾಡುತ್ತಿದ್ದೆ.ಹಾಗಾಗಿ ‘ಈ ಬಾರಿ ಖಂಡಿತ ಆಗುವುದಿಲ್ಲ ರಂಜು..ಬೇಸರ ಮಾಡಿಕೊಳ್ಳಬೇಡ’ ಎಂದು ಸಮಾಧಾನ ಹೇಳಿದೆ. ಸಪ್ಪೆ ಮುಖ ಹಾಕಿಕೊಂಡು ಸರಿ ಎಂದರೂ ಅವಳಿಗಾದ ನಿರಾಸೆ ಅವಳ ಮುಖದಲ್ಲಿ ಎದ್ದುಕಾಣುತ್ತಿತ್ತು.

ವಾಸ್ತವವಾಗಿ ಪುಟಾಣಿ ರಾಧಿಕಾಳ ಮೊದಲನೇ ಹುಟ್ಟುಹಬ್ಬವನ್ನು ಕೊಂಚ ವಿಜೃಂಭಣೆಯಿಂದಲೇ ಆಚರಿಸಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು. ಮೂರು ವಾರದ ಕೂಸಾಗಿದ್ದಾಗಲೇ ದೊಡ್ಡ ಗಂಡಾಂತರದಿಂದ ಪಾರಾಗಿ ಬಂದ ಮುದ್ದು ಕೂಸು ಅದು! ಆದರೆ ಈ ಮ್ಯಾಂಚೆಸ್ಟರ್ ಪ್ರವಾಸದ ಗಲಾಟೆಯಲ್ಲಿ ಒಲ್ಲದ ಮನಸ್ಸಿನಿಂದ ಆ ಸಡಗರವನ್ನೂ ಮುಂದೂಡಬೇಕಾಯಿತು. ಅದು ರಂಜನಿಯ ನಿರಾಸೆಯನ್ನು ಮತ್ತಷ್ಟು ಹೆಚ್ಚಿಸಿತು. ಇದೆಲ್ಲದರ ಮಧ್ಯೆ ನನಗೆ ಅಗತ್ಯವಿದ್ದ ಹಣವನ್ನು ಹೊಂದಿಸುವ ಸಮಸ್ಯೆಗೆ ಪರಿಹಾರ ದೊರಕದೆ ನಾನು ಚಿಂತೆಯಲ್ಲಿ ಮುಳುಗಿದ್ದೆ. ಅದೇ ವೇಳೆಯಲ್ಲಿ ರವಿಚಂದ್ರನ್ ಅವರ ಹೊಸ ಚಿತ್ರವೊಂದರ ಡಬ್ಬಿಂಗ್ ಗೆ—ಬಹುಶಃ ರಾಮಣ್ಣ ಶಾಮಣ್ಣ ಇರಬೇಕು—ಕರೆಬಂತು.ಆ ಕರೆಯ ಜೊತೆಗೇ ಒಂದು ಆಲೋಚನೆಯೂ ಮನದಲ್ಲಿ ಸುಳಿದಾಡತೊಡಗಿತು! ‘ರವಿಚಂದ್ರನ್ ಅದಾಗಲೇ ಆರೆಂಟು ಚಿತ್ರಗಳಲ್ಲಿ ನಟಿಸತೊಡಗಿದ್ದಾರೆ; ಒಂದೈದು ಚಿತ್ರಗಳ ನನ್ನ ಡಬ್ಬಿಂಗ್ ಸಂಭಾವನೆಯನ್ನು ನನಗೆ ಮುಂಗಡವಾಗಿ ಕೊಟ್ಟುಬಿಟ್ಟರೆ ನನ್ನ ಮ್ಯಾಂಚೆಸ್ಟರ್ ಖರ್ಚು ಕಳೆದುಹೋಗುತ್ತದೆ! ಈ ಆಲೋಚನೆ ಬಂದಿದ್ದೇ ತಡ,ರವಿಯವರ ಮ್ಯಾನೇಜರ್ ಒಂದಿಗೆ ಈ ಕುರಿತು ಮಾತಾಡಿದೆ. “ಪ್ರಭುಗಳೇ,ನಮ್ಮ ಕಂಪನಿಯ ನಿರ್ಮಾಣದ ಚಿತ್ರಗಳಾದರೆ ನಾವೇ ನಿಮಗೆ ಸಂಭಾವನೆ ಕೊಡುತ್ತೇವೆ; ಬೇರೆ ನಿರ್ಮಾಪಕರ ಚಿತ್ರಗಳಲ್ಲಿ ರವಿ ಸರ್ ನಟಿಸುತ್ತಿದ್ದರೆ ನೀವು ಆ ನಿರ್ಮಾಪಕರಿಂದಲೇ ಸಂಭಾವನೆ ಪಡೆಯಬೇಕು.. ಅದಕ್ಕೂ ನಮಗೂ ಸಂಬಂಧವೇ ಇಲ್ಲ” ಎಂದುಬಿಡುವುದೇ ಆ ಪುಣ್ಯಾತ್ಮ! ಅವರ ಮಾತು ಕೇಳಿ ನನಗೆ ದಿಗ್ಭ್ರಮೆಯಾಗಿಹೋಯಿತು.”ಅಲ್ಲ ಸ್ವಾಮೀ, ನಾನು ಕಂಠದಾನ ಮಾಡಲು ಬರುತ್ತಿರುವುದು ನಿಮ್ಮ ಆಯ್ಕೆ—ಆಹ್ವಾನದ ಮೇರೆಗೆ.ಅಂದಮೇಲೆ ನನ್ನ ಸಂಭಾವನೆ ಇತ್ಯಾದಿಗಳನ್ನು ಗಮನಿಸಿಕೊಳ್ಳುವುದು ನಿಮ್ಮ ಕರ್ತವ್ಯವಲ್ಲವೇ? ನಾನು ಸಂಭಾವನೆಯ ವಿಷಯಕ್ಕೆ ನಿರ್ಮಾಪಕರುಗಳ ಆಫೀಸಿಗೆ ಎಡತಾಕುತ್ತಿರಬೇಕೇ? ಸಾಧ್ಯವೇ ಇಲ್ಲದ ಮಾತು ಸ್ವಾಮೀ..ನೀವು ಜವಾಬ್ದಾರಿ ವಹಿಸಿಕೊಂಡರೆ ನಾನೂ ನನ್ನ ಕೆಲಸ ಮುಂದುವರಿಸಿಕೊಂಡು ಹೋಗುತ್ತೇನೆ..ಇಲ್ಲದಿದ್ದರೆ ನೀವು ಬೇರೆಯವರನ್ನು ನೋಡಿಕೊಳ್ಳಿ” ಎಂದು ನಾನೂ ಖಾರವಾಗಿಯೇ ನುಡಿದುಬಿಟ್ಟೆ. ವಿಷಯ ಮತ್ತೆ ದೊಡ್ಡವರ ತನಕ ಹೋಯಿತು! ಅಂದೇ ಸಂಜೆ ಡಬ್ಬಿಂಗ್ ಸ್ಟುಡಿಯೋಗೆ ಬಂದ ರವಿಚಂದ್ರನ್ ಅವರು ನಗುನಗುತ್ತಲೇ, “ಏನ್ರೀ ವಾಯ್ಸೂ! ಬಿಟ್ಟುಹೋಗ್ತೀನಿ ಅಂದ್ರಂತೆ! ಯಾಕ್ರೀ? ಏನು ಪ್ರಾಬ್ಲಮ್ಮೂ?” ಎಂದರು. ನಾನೂ ನಗುನಗುತ್ತಲೇ ಎಲ್ಲವನ್ನೂ ಅವರಿಗೆ ವಿವರಿಸಿ, ನನ್ನ ಮ್ಯಾಂಚೆಸ್ಟರ್ ಪ್ರವಾಸದ ಬಗ್ಗೆಯೂ ಹೇಳಿ ನನಗೆ ಮುಂಗಡ ಹಣ ಅಗತ್ಯವಿರುವುದನ್ನು ವಿವರಿಸಿದೆ.ಒಂದು ಕ್ಷಣ ಆಲೋಚನೆಯಲ್ಲಿ ಮುಳುಗಿದ ರವಿಯವರು ನಂತರ ಏನೋ ನಿರ್ಧರಿಸಿಕೊಂಡು, “ಆಯ್ತು..ಏನೋ ಒಂದು ವ್ಯವಸ್ಥೆ ಮಾಡೋಣ ಬಿಡಿ..ಬಿಟ್ಟುಹೋಗೊ ಮಾತೆಲ್ಲಾ ಬೇಡ” ಎಂದು ನುಡಿದು ಹೊರಟುಹೋದರು. ಮರುದಿನ ಡಬ್ಬಿಂಗ್ ಸ್ಟುಡಿಯೋಗೆ ಬಂದ ರವಿಯವರ ಮ್ಯಾನೇಜರ್, ತಲಾ ಐದು ಸಾವಿರ ರೂಪಾಯಿಗಳ ಐದು ಬೇರೆ ಬೇರೆ ಕಂಪನಿಯ ಚೆಕ್ಕುಗಳನ್ನು ನನ್ನ ಕೈಗಿತ್ತು ಶುಭ ಹಾರೈಸಿದರು! ಅಲ್ಲಿಗೆ ಗುಡ್ಡದ ಹಾಗೆ ಎದುರಾಗಿದ್ದ ಸಮಸ್ಯೆಯೊಂದು ಮಂಜಿನ ಹಾಗೆ ಕರಗಿಹೋಗಿತ್ತು!

ಅಲ್ಲಿಂದ ಮುಂದೆ ಪಾಸ್ ಪೋರ್ಟ್ ಮಾಡಿಸುವುದರಿಂದ ಹಿಡಿದು ಕರೆನ್ಸಿ ಬದಲಾವಣೆ..ನಾಟಕದ ತಾಲೀಮು..ಇತ್ಯಾದಿ ಎಲ್ಲ ಕೆಲಸಗಳೂ ಕ್ಷಿಪ್ರಗತಿಯಲ್ಲಿ ಸಾಗಿ ಕೊನೆಗೆ ಹೊರಡುವ ದಿನ ಬಂದೇಬಿಟ್ಟಿತು.

ಮ್ಯಾಂಚೆಸ್ಟರ್ ಗೆ ಹೊರಟ ನಮ್ಮ ಕರ್ನಾಟಕದ ಸಾಂಸ್ಕೃತಿಕ ತಂಡದಲ್ಲಿ ಅನೇಕ ಶ್ರೇಷ್ಠ ಕಲಾವಿದರೂ,ಕ್ರೀಡಾಪಟುಗಳೂ ಇದ್ದರು.ಸರ್ಕಾರದ ಪ್ರತಿನಿಧಿಯಾಗಿ ಐ.ಎಂ.ವಿಠಲಮೂರ್ತಿಯವರು, ಚಲನಚಿತ್ರ ಕಲಾವಿದರಾದ ಶಂಕರ್ ನಾಗ್ , ಶ್ರೀನಾಥ್ ಹಾಗೂ ಗೀತಾ ಅವರು, ಕ್ರಿಕೆಟ್ ಕಲಿ ಜಿ.ಆರ್.ವಿಶ್ವನಾಥ್ ,ನೃತ್ಯಪಟುಗಳಾದ ಪ್ರತಿಭಾ ಪ್ರಹ್ಲಾದ್ ,ಶುಭಾ ಧನಂಜಯ್ ಹಾಗೂ ರಾಮು(ರಚಿತಾ ರಾಂ—ನಿತ್ಯಾ ರಾಂ ರ ತಂದೆ), ಸುಗಮ ಸಂಗೀತ ಕ್ಷೇತ್ರದಿಂದ ಸಿ.ಅಶ್ವಥ್ ಹಾಗೂ ರೋಹಿಣಿ ಅವರು, ಸಂಗೀತ ಕ್ಷೇತ್ರದಿಂದ ಗಾಯಕಿಯರಾದ ಸರಳಾಯ ಸೋದರಿಯರು ಹಾಗೂ ಪ್ರಸಿದ್ಧ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಟ್ಟಿ…ಇವರೆಲ್ಲರ ಜತೆಗೆ ನಮ್ಮ ಹನ್ನೊಂದು ಜನರ ತಂಡ! ಮ್ಯಾಂಚೆಸ್ಟರ್ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ,ಆಗಷ್ಟೇ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದ ಎಸ್.ಆರ್.ಬೊಮ್ಮಾಯಿ,ಡಾ॥ಶಿವರಾಮ ಕಾರಂತ,ಸಚಿವರಾಗಿದ್ದ ಎಂ ಪಿ ಪ್ರಕಾಶ್ ಹಾಗೂ ಜೆ ಹೆಚ್ ಪಟೇಲ್ ,ಮ್ಯಾಂಚೆಸ್ಟರ್ ನ ಮೇಯರ್ ಮೊದಲಾದ ಗಣ್ಯರ ಸಮಕ್ಷಮದಲ್ಲಿ ವೈಭವದಿಂದ ನೆರವೇರಿತು.ಕನ್ನಡದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರೆದಿದ್ದ ಅಪಾರ ಜನಸ್ತೋಮದ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದವು.ನಮ್ಮ ‘ಸಿಕ್ಕು’ ನಾಟಕವೂ ಸಹಾ ಅನೂನವಾಗಿ ಪ್ರದರ್ಶನಗೊಂಡು ಕೊನೆಯ ಕ್ಷಣದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಯಶಸ್ವಿಯಾಗಿ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಮ್ಯಾಂಚೆಸ್ಟರ್ ನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಕನಸು ಕಂಡು,ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಲು ಟೊಂಕ ಕಟ್ಟಿ ನಿಂತವರೆಂದರೆ ಯು.ಕೆ.ಕನ್ನಡ ಬಳಗದ ಡಾ॥ಭಾನುಮತಿ,ಡಾ॥ಅಪ್ಪಾಜಿ ಗೌಡರು,ಶ್ರೀ ಶೆಟ್ಟಿಯವರು,ಶ್ರೀ ರಾಮಮೂರ್ತಿ ಹಾಗೂ ಬಳಗದ ಇತರ ಸದಸ್ಯರು.ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಪ್ರಸ್ತುತಿಯನ್ನು ಯೋಜಿಸಿದ್ದಲ್ಲದೆ ಆದರಾತಿಥ್ಯಗಳಲ್ಲೂ ಯಾವ ಕೊರತೆಯೂ ಆಗದಂತೆ ಮುತುವರ್ಜಿ ವಹಿಸಿ ಬಲು ಪ್ರೀತಿಯಿಂದ ನಮ್ಮೆಲ್ಲರನ್ನೂ ಸತ್ಕರಿಸಿದವರು ಈ ಮಹನೀಯರು.ಒಂದು ವಿಶೇಷ ಬಸ್ ನಲ್ಲಿ ನಮ್ಮೆಲ್ಲರನ್ನೂ ಕರೆದುಕೊಂಡು ಹೋಗಿ ಮ್ಯಾಂಚೆಸ್ಟರ್ ನ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನಮಗೆ ಪರಿಚಯಿಸಿದರು.ಹಾಗೇ ಒಂದೆರಡು ಸ್ವಾರಸ್ಯದ ಪ್ರಸಂಗಗಳನ್ನು ನೆನೆಯುವುದಾದರೆ:
ಪ್ರತಿಭಾವಂತ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಟ್ಟಿ ಅವರು ಬೆಳಗಿನ ಜಾವದಲ್ಲೇ ಎದ್ದು ಹೋಟಲ್ ರೂಂನಲ್ಲಿಯೇ ತಮ್ಮ ರಿಯಾಜ಼್ ಆರಂಭಿಸಿ ಬಿಡುತ್ತಿದ್ದರು! ಅಕ್ಕ ಪಕ್ಕದ ರೂಂಗಳಲ್ಲಿ ಮಲಗಿದ್ದ ಅನೇಕ ವಿದೇಶಿ ಪ್ರವಾಸಿಗರು ಈ ವಾದನದಿಂದ ಎಚ್ಚರಗೊಂಡು ಹೊರಬಂದು ಕೊಂಚ ಹೊತ್ತು ಆ ಅಪೂರ್ವ ವಾದನವನ್ನು ಕೇಳಿ ತಲೆದೂಗುತ್ತಾ ‘ most wonderful! he plays it so beautifully’! ಎಂದು ಮೆಚ್ಚುತ್ತಲೇ,’ but he plays so early in the morning..that is the problem!’ ಎಂದು ಸಣ್ಣಗೆ ಗೊಣಗುತ್ತಿದ್ದರು!

ಇನ್ನೊಂದು ಸ್ವಾರಸ್ಯದ ಪ್ರಸಂಗವೆಂದರೆ ನಾವು ಅಲ್ಲಿಗೆ ಹೋದ ಮರುದಿನವೇ ಹತ್ತಿರದ ಮಾರ್ಕೆಟ್ ನಲ್ಲಿ ನಡೆಯುತ್ತಿದ್ದ ಸೇಲ್ ನಲ್ಲಿ ನಮ್ಮ ಸುಧೀಂದ್ರ ಸಿಕ್ಕಿದ್ದೆಲ್ಲವನ್ನೂ ಖರೀದಿ ಮಾಡಿ ಇದ್ದ ಬದ್ದ ಪೌಂಡ್ ಗಳನ್ನೆಲ್ಲಾ ಮುಗಿಸಿಕೊಂಡುಬಿಟ್ಟಿದ್ದ! ಅವನು ಖರೀದಿ ಮಾಡಿದ್ದು ಹೆಚ್ಚಿನಂಶ ಸರಗಳು—ಬಳೆ—ಓಲೆಯಂತಹ ಶೃಂಗಾರ ಸಾಮಗ್ರಿಗಳು. ಹೋಟಲಿಗೆ ಮರಳಿ ಬಂದ ಮೇಲೆ, “ಅಯ್ಯೋ ಶಿವನೇ! ಅಲ್ಲಿದ್ದ ಬಿಳಿ ಬೊಂಬೆಗಳ ಮಾತಿಗೆ ಮರುಳಾಗಿ ಜೇಬೆಲ್ಲಾ ಖಾಲಿಮಾಡಿಕೊಂಡುಬಿಟ್ಟೆ! ಇನ್ನೂ ಒಂದು ವಾರ ಇಲ್ಲಿ ಹ್ಯಾಗಪ್ಪಾ ಜೀವನ ಮಾಡೋದು? ಭವತಿ ಭಿಕ್ಷಾಂದೇಹಿ! ಒಂದೈದು ಪೌಂಡ್ ಸಾಲ ಕೊಡ್ರೋ..ರೂಪಾಯಲ್ಲಿ ಬಡ್ಡಿ ಸಮೇತ ಕೊಡ್ತೀನಿ..ಇಲ್ಲಾಂದ್ರೆ ನಾನು ಖರೀದಿ ಮಾಡಿ ತಂದಿರೋ ಸರ—ಓಲೇನಾದ್ರೂ ತೊಗೊಂಡು ದುಡ್ಡು ಕೊಡ್ರಯ್ಯಾ!” ಎಂದು ನಾಟಕೀಯವಾಗಿ ಪೇಚಾಡಿಕೊಳ್ಳುತ್ತಾ ಎಲ್ಲರನ್ನೂ ನಗಿಸುತ್ತಿದ್ದ.ತಮಾಷೆ ಎಂದರೆ ನಮ್ಮಲ್ಲಿ ಬಹಳಷ್ಟು ಜನರ ಪರಿಸ್ಥಿತಿಯೂ ಹಾಗೆಯೇ ಆಗಿ ಹೋಗಿತ್ತು!

ಶಂಕರ ನಾಗ್ ಇದ್ದೆಡೆ ಸಂಭ್ರಮ—ಉಲ್ಲಾಸ—ರಂಜನೆಗಳಿಗೆ ಕೊರತೆಯೆಲ್ಲಿ? ಹೋಟಲ್ ನ ಕಾರಿಡಾರ್ ನಲ್ಲಿಯೇ ಗೋಷ್ಠಿ ಏರ್ಪಡಿಸಿ ಎಲ್ಲರಿಂದಲೂ ಹಾಡಿಸಿ ಕುಣಿಸಿ ನಗೆಚಟಾಕಿ ಹಾರಿಸಿ ರಂಗು ತುಂಬಿಬಿಡುತ್ತಿದ್ದ! ಜತೆಗೆ ನಮ್ಮ ರಿಚಿಯ ‘ಕಣ್ವ ರಿಸಿಯ ಸಾಕುಮಗಳು ಪೆಸರು ಸಾಕುಂತಲೆ’..ಜಾಲಿಬಾರು’ ಮೊದಲಾದ ಹಾಡುಗಳೂ ಅವನ ವಿಶಿಷ್ಟ ನೃತ್ಯಗಳೂ ಹಾಸ್ಯ ಚಟಾಕಿಗಳೂ ನಗಿಸಿ ನಗಿಸಿ ಸುಸ್ತುಗೆಡವುತ್ತಿದ್ದವು.

ಹೀಗೆ ಮೂರು ನಾಲ್ಕು ದಿನಗಳನ್ನು ಮ್ಯಾಂಚೆಸ್ಟರ್ ನಲ್ಲಿ ಕಳೆದು ನಾವು ಲಂಡನ್ ಗೆ ಬಂದೆವು.ಅಲ್ಲಿ ನಾವು ತಂಗಿದ್ದು ಭಾರತೀಯ ವಿದ್ಯಾಭವನದಲ್ಲಿ.ಸನ್ಮಾನ್ಯ ಡಾ॥ಮತ್ತೂರು ಕೃಷ್ಣಮೂರ್ತಿಗಳು ಆಗ ಭವನದ ನಿರ್ದೇಶಕರಾಗಿದ್ದರು.ಲಂಡನ್ ನಂತಹ ನಗರದಲ್ಲಿ ಭಾರತೀಯ ವಿದ್ಯಾಭವನದ ಚುಕ್ಕಾಣಿ ಹಿಡಿದು ಅತ್ಯಂತ ಸಮರ್ಥವಾಗಿ ನಡೆಸಿಕೊಂಡು ಬಂದಿದ್ದ ಡಾ॥ಮತ್ತೂರು ಕೃಷ್ಣಮೂರ್ತಿಗಳು ಸ್ವತಃ ಬಹಳ ದೊಡ್ಡ ವಿದ್ವಾಂಸರು.ಗಮಕ ಕಲೆಯ ಜತೆಗೆ ಅವಿನಾಭಾವದಂತೆ ತಳುಕು ಹಾಕಿಕೊಂಡಿರುವ ಹೆಸರು ಡಾ॥ಕೃಷ್ಣಮೂರ್ತಿಗಳದು.ನಿಜವಾದ ಅರ್ಥದಲ್ಲಿ ಅವರು “ಭಾರತೀಯ ಸಂಸ್ಕೃತಿಯ ರಾಯಭಾರಿ.ಅಂತೆಯೇ ಅವರ ಸರಳತೆ—ಸೌಜನ್ಯಗಳೂ ಸಹಾ ಅವರ ಧೀಮಂತ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ತಂದಿದ್ದವು. ನಮಗೆ ಭವನದಲ್ಲಿ ಸೊಗಸಾದ ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟು ನಮ್ಮ ಸಾಂಪ್ರದಾಯಿಕ ಅಡುಗೆಯನ್ನು ಮಾಡಿಸಿ ತಾವೇ ಖುದ್ದು ನಿಂತು ಬಡಿಸಿ ಉಪಚರಿಸಿದ ಮತ್ತೂರರ ಆತಿಥ್ಯವನ್ನು ನಾವು ಮರೆಯುವಂತೆಯೇ ಇಲ್ಲ.ಇದರ ಜತೆಗೆ ಒಂದು ಸುಂದರ ಸಂಜೆ ಪಂಡಿತ್ ಶಿವಕುಮಾರ ಶರ್ಮ ಅವರ ಅದ್ಭುತ ಸಂತೂರ್ ವಾದನವನ್ನು ಕೇಳಿ ಸಂಭ್ರಮಿಸುವ ಭಾಗ್ಯ ಬೇರೆ! ಇವೆಲ್ಲಾ ಸದಾ ನೆನಪಿನಲ್ಲಿ ಹಸಿರಾಗಿರುವ ಸಂಗತಿಗಳು. ಅಷ್ಟೇ ಹಸಿರಾಗಿರುವ ಮತ್ತೊಂದು ಸಂಗತಿಯೆಂದರೆ ಕಿಸೆಗಳನ್ನು ಬರಿದು ಮಾಡಿಕೊಂಡು ನಾವು ಪಡುತ್ತಿದ್ದ ಬವಣೆಗಳು! ಮ್ಯಾಂಚೆಸ್ಟರ್ ನಲ್ಲಿದ್ದಂತೆ ಇಲ್ಲಿ ಯಾರೂ ‘ಪ್ರಾಯೋಜಕ’ರಿಲ್ಲದೆ(ಭವನವನ್ನು ಹೊರತುಪಡಿಸಿ) ನಮಗೆ ಕಣ್ಣುಕಣ್ಣು ಬಿಡುವಂತಾಗಿಹೊಯಿತು. ಯಾವೊಂದು ಸ್ಥಳವನ್ನೂ ನೆಟ್ಟಗೆ ನೋಡಲು ಸಾಧ್ಯವಾಗದೆ ಕೊನೆಗೆ ಲಂಡನ್ ನಗರದ ಸಿಂಹಾವಲೋಕನವನ್ನು ನಾವು ಮಾಡಿದ್ದು ತೆರೆದ ಮಹಡಿ ಬಸ್ ನ ಮೇಲೆ ಕುಳಿತು! ಅದಕ್ಕೆ ನಿಗದಿಯಾಗಿದ್ದ ಶುಲ್ಕ ತಲಾ ಏಳು ಪೌಂಡ್ ಗಳು. ಅಷ್ಟು ಹಣವೂ ನಮ್ಮ ಕಿಸೆಯಲ್ಲಿಲ್ಲದೆ ನಾವು ಪೇಚಾಡಿಕೊಳ್ಳುತ್ತಿದ್ದಾಗ ಬಸ್ ನ ಚಾಲಕ ನಮ್ಮ ಸ್ಥಿತಿಗೆ ಕನಿಕರಿಸಿ ನಮ್ಮ ಬಳಿ ಇದ್ದಷ್ಟು ಹಣವನ್ನೇ ಪಡೆದುಕೊಂಡು ನಗರದರ್ಶನ ಮಾಡಿಸಿದ!

ಹೀಗೆ ಅಂತೂ ಇಂತೂ ಮ್ಯಾಂಚೆಸ್ಟರ್ —ಲಂಡನ್ ಪ್ರವಾಸ ಮುಗಿಸಿಕೊಂಡು ಯಶಸ್ವೀ ನಾಟಕ ಪ್ರದರ್ಶನವನ್ನು ನೀಡಿದ ಖುಷಿಯೊಂದಿಗೆ ಎಲ್ಲರೂ ಬೆಂಗಳೂರಿಗೆ ಮರಳಿದೆವು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shrivatsa Desai

    ನಿಮ್ಮ ಅಂಕಣವನ್ನು ಆಸ್ಥೆಯಿಂದ ಓದಿದೆ. ಆ ವಿಶ್ವಕನ್ನಡ ಸಮ್ಮೇಳನದಲ್ಲಿ ನಾನು ಪ್ರೇಕ್ಷಕನಾಗಿದ್ದೆ. ಇನ್ನೂ ಯಾರ್ಕ್ ಶೈರಿನಲ್ಲೇ ವಾಸವಾಗಿದ್ದೇನೆ. ಮೂರು ದಿನಗಳ ಅದ್ಭುತ ಅನುಭವವನ್ನು ನಾವು ಮರೆಯುವಂತಿಲ್ಲ! ಆ ನೆನಪನ್ನು ನಾವು ಮೆಲಕು ಹಾಕುತ್ತಿರುತ್ತೇವೆ. ನಾವು ಮೂರೂ ದಿನ ಮುಂದೆ ಸಭೆಯಲ್ಲಿ ಕುಳಿತು ಆನಂದಿಸಿದ್ದಷ್ಟೇ ಗೊತ್ತು. ಶ್ರೀಯುತ ಪ್ರಭು ಮತ್ತಿತರ ಈ ನಟರ ‘ತೆರೆಯ ಹಿಂದಿನ’ ಅನುಭವ ಈಗಲೇ ಗೊತ್ತಾದುದು. ಅದು ಕಷ್ಟದ ಕಾಲ. ದುಡ್ಡು ಪೌಂಡು ಸುಲಭ ಸಾಧ್ಯವಿರಲಿಲ್ಲ. ಅಗ್ಗದ ಮಾರ್ಕೆಟ್ಟಿನ ‘ಬಿಳಿಬೊಂಬೆ’ಗಳ ಮಾತಿನ ಬಣ್ಣದ ಮೋಡಿಯಲ್ಲಿ ‘ಸಿಕ್ಕಿ’ ಸಿಕ್ಕ ಸಿಕ್ಕ ಸರಗಳನ್ನು ಕೊಂಡು ಸಾಲದ ಸಂಕೋಲೆಯಲ್ಲಿ ಸೆರೆಸಿಕ್ಕ ನಟರ ವೃತ್ತಾಂತ ತಮಾಷೆಯಾಗಿದ್ದಷ್ಟು ಕನಿಕರವನ್ನೂ ಹುಟ್ಟಿಸುತ್ತದೆ. ಅವರ ಪಾಡು ಮತ್ತು ಕ್ಲಾರಿನೆಟ್ ವಾದಕ ವಡವಟ್ಟಿಯವರ ರಿಯಾಜಿನ ‘ಶಿಕ್ಷೆ’ಗೆ ಗುರಿಯಾದ ಅಕ್ಕ ಪಕ್ಕದ ರೂಮಿನ ಬಿಳಿ ಬೊಂಬೆಗಳು ಕಿವಿಗೆ ‘ಇಯರ್ ಪ್ಲಗ್ ‘ ಗೆ ಮೊರೆ ಹೋಗುವ ಸಂಗತಿ ಎಲ್ಲ ರೋಚಕ! ವಿಠ್ಲಲ ಮೂರ್ತಿಯವರ ಸವಿ. ನೆನಪುಗಳನ್ನು ಹಿಂದೊಮ್ಮೆ ಓದಿದ್ದೆ! ಇನ್ನೂ ಇದೆಯಾ, ವಿಶ್ವಕನ್ನಡ. ರಾಮಾಯಣದ ರಸ ಕವಳ? ಶ್ರೀವತ್ಸ ದೇಸಾಯಿ

    ಪ್ರತಿಕ್ರಿಯೆ
  2. srinivasa prabhu

    ಧನ್ಯವಾದಗಳು ಶ್ರೀವತ್ಸ ಅವರೇ!ತಮ್ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷವಾಯಿತು.ನೆನಪಿನಂಗಳದಲ್ಲಿ ದಾಖಲಾಗಿದ್ದಷ್ಟನ್ನು ದಾಖಲಿಸಿದ್ದೇನೆ! ಸಧ್ಯಕ್ಕೆ ಈ ಪ್ರಸಂಗ ಇಷ್ಟೇ. ನನ್ನ ಕಥೆ ಮುಂದುವರಿಯುತ್ತದೆ. ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: