ಶ್ರೀನಿವಾಸ ಪ್ರಭು ಅಂಕಣ – ಆ ಮಾತಿಗೆ ನಾನು ಶರಣಾಗಿ ಹೋದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

59

ಮೈಸೂರಿನಲ್ಲಿ ರವೀಶನ ತಂಡಕ್ಕೆ ‘ಹೆಜ್ಜೆಗಳು’ ನಾಟಕ ಮಾಡಿಸಿದ್ದೆನಲ್ಲಾ, ಆ ಸಮಯದಲ್ಲಿ ಮೈಸೂರಿಗೆ ಹೋದಾಗಲೆಲ್ಲಾ ರವೀಶನ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆ. ಒಂದು ದಿನ ಬೆಳಗಿನ ತಿಂಡಿ ಮುಗಿಸಿ ರವೀಶನೊಟ್ಟಿಗೆ ನಾಟಕದ ರಂಗಸಜ್ಜಿಕೆ ಕುರಿತಾಗಿ ಚರ್ಚಿಸುತ್ತಾ ಕುಳಿತಿದ್ದ ವೇಳೆಯಲ್ಲಿ ಹೊರಗಿನಿಂದ ಸುಶ್ರಾವ್ಯ ದನಿಯಲ್ಲಿ ಯಾರೋ ಜನಪದ ಗೀತೆಗಳನ್ನು ಹಾಡುತ್ತಿರುವುದು ಕೇಳಿಸಿತು. ನನ್ನ ಪ್ರಶ್ನಾರ್ಥಕ ನೋಟಕ್ಕೆ ರವೀಶ ಉತ್ತರಿಸಿದ: “ಅದು ಕಂಸಾಳೆ ಮಹದೇವ ಅಂತ..ಇಲ್ಲೇ ಪಕ್ಕದ ಹಳ್ಳಿಯವನು.. ಆಗಾಗ್ಗೆ ಹೀಗೆ ಜೋಳಿಗೆ ಹಿಡಕೊಂಡು ಹಾಡಿಕೊಂಡು ಬರ್ತಾನೆ.. ಅದ್ಭುತವಾದ ಸಿರಿಕಂಠ ಅವನದು.. ಬೀದಿಗುಂಟ ಹಾಡಿಕೊಂಡು ಬರ್ತಾನೆ..ಪ್ರೀತಿಯಿಂದ ಯಾರು ಏನು ಕೊಟ್ಟರೂ ಜೋಳಿಗೆಗೆ ಹಾಕಿಸಿಕೊಂಡು ಹೋಗ್ತಾನೆ.”

ನಾನು ತಕ್ಷಣವೇ ಹೊರಗೋಡಿ ಬಂದೆ. ಅದೇ ವೇಳೆಗೆ ಮಹದೇವನೂ ರವೀಶನ ಮನೆಯ ಸನಿಹಕ್ಕೆ ಬಂದ. ಅವನ ಹಾಡುಗಳು—ಹಾಡುಗಾರಿಕೆ ನನ್ನನ್ನು ಅದಾವ ಪರಿಯಲ್ಲಿ ಆಕರ್ಷಿಸಿತೆಂದರೆ ಮಹದೇವನನ್ನು ‘ನಿಮಗೆ ತೊಂದರೆಯಾಗದಿದ್ದರೆ ಮನೆಯೊಳಗೆ ಬಂದು ನಮಗಾಗಿ ಒಂದಷ್ಟು ಹಾಡುಗಳನ್ನು ಹೇಳಬಹುದೇ “ಎಂದು ಕೇಳಿಕೊಂಡೆ. ಆತನೂ ಅಷ್ಟೇ ಪ್ರೀತಿ-ಗೌರವದಿಂದ, “ತೊಂದರೆ ಏನು ಬಂತು ನನ್ನ ದೊರೆಯೇ..ಹಾಡೋದೊಂದು ನನ್ನ ಕಸುಬು—ಹಾಡೋದು ನಂದೊಂದು ಖುಷಿ” ಎನ್ನುತ್ತಾ ಒಳಬಂದು ಕುಳಿತು, “ಅಯ್ನೋರೇ,ನಿಮಗೋಸ್ಕರ ಒಂದಷ್ಟು ಕಂಸಾಳೆ ಪದಗಳನ್ನ ಅನ್ನತೀನಿ..ಕೇಳಿ ಸಂತೋಸ ಪಡ್ರಿ” ಎಂದು ನುಡಿದು ತನ್ನ ಖಂಜರದಂತಹ ಪುಟ್ಟ ವಾದ್ಯವನ್ನು ಒಂದು ಸಲ ಡಮಡಮಗುಟ್ಟಿಸಿ ಗಂಟಲು ಸರಿಪಡಿಸಿಕೊಂಡು ಜನಪದ ಕಥೆಯೊಂದರ ಭಾಗಗಳನ್ನು ಹಾಡತೊಡಗಿದ:
“ತಂದನಾನ ತನ ತಾನಿ ತಂದಾನ, ತಂದನ್ನೇನ ತಂದನಾನ ತನ ತಾನಿ ತಂದಾನ…ಅರೆ ಸಿರಿಗನ್ನಡ ಮೈಸೂರು ದೇಸದಲ್ಲಿ…ಇರುವಾ ಊರು ನೋಡ್ರೀ ನಮ್ಮ ಬಸವನಾಪುರ..”

ಹೀಗೇ ಸಾಗಿತ್ತು ಮಹದೇವನ ಗಾನಲಹರಿ. ಅನೇಕ ವೈವಿಧ್ಯಮಯ ‘ತಂದನಾನಾ’ ಪದಗಳೂ ಹಾಡುಗಳೂ ಅವನು ಬಿತ್ತರಿಸಿದ ಕಥಾಭಾಗದಲ್ಲಿ ಅಡಕವಾಗಿದ್ದವು. ರವೀಶನ ಮನೆಯಲ್ಲೇ ಇದ್ದ ಒಂದು ಪುಟ್ಟ ಟೇಪ್ ರೆಕಾರ್ಡರ್ ನ ಸಹಾಯದಿಂದ ಒಂದು ಕ್ಯಾಸೆಟ್ ನಲ್ಲಿ ಮಹದೇವು ಹಾಡಿದ ಎಲ್ಲಾ ಪದ—ಹಾಡುಗಳನ್ನೂ ರಿಕಾರ್ಡ್ ಮಾಡಿಕೊಂಡೆ. ಅಂಥ ಅಪರೂಪದ ಅವಕಾಶ ಅನಾಯಾಸವಾಗಿ ಒದಗಿ ಬಂದಿರುವಾಗ ಬಿಡುವುದುಂಟೇ?! ಸುಮಾರು ಒಂದು ತಾಸು ಹಾಡಿ ನಿಲ್ಲಿಸಿದ ಮಹದೇವು. ಒಂದಷ್ಟು ಅಕ್ಕಿಯನ್ನು ಅವನ ಜೋಳಿಗೆಗೆ ಹಾಕಿ 50 ರೂಪಾಯಿಗಳ ಸಂಭಾವನೆಯನ್ನೂ ನೀಡಿ ಅವನನ್ನು ಬೀಳ್ಕೊಟ್ಟ ರವೀಶ.ಮಹದೇವನ ಆ ಹಾಡುಗಳಲ್ಲಿ ಅಂತರ್ಗತವಾಗಿದ್ದ ವಿಶಿಷ್ಟ ನಾಟಕೀಯ ಗುಣಗಳಿಗೆ ಮನಸೋತಿದ್ದ ನಾನು ಆ ಮುದ್ರಿತ ಕ್ಯಾಸೆಟ್ ಅನ್ನು ಬಹಳ ಜತನದಿಂದ ಕಾಪಾಡಿಕೊಂಡು ಬಂದದ್ದಷ್ಟೆ ಅಲ್ಲ,ಆ ಹಾಡುಗಳನ್ನು ಆಗಾಗ್ಗೆ ಗುನುಗಿ ಮನದಟ್ಟು ಮಾಡಿಕೊಳ್ಳುತ್ತಿದ್ದೆ.

‘ಬೇಲಿ ಮತ್ತು ಹೊಲ’ ನಾಟಕ ರೂಪಾಂತರ ಕೆಲಸವನ್ನು ಮಂಗಳೂರಿನಲ್ಲಿ ಕುಳಿತು ಮುಗಿಸಿಕೊಂಡು ಬಂದಮೇಲೆ ಆದಷ್ಟು ಬೇಗ ರಿಹರ್ಸಲ್ ಆರಂಭಿಸಿ ಬಿಡಬೇಕೆಂದು ವಿಚಾರ ಮಾಡುತ್ತಿದ್ದೆ. ಹಾಗೆಯೇ ನಾಟಕದ ರಂಗಸಜ್ಜಿಕೆಯ ಕುರಿತಾಗಿ ಚಿಂತಿಸುತ್ತಿದ್ದಾಗ ಥಟ್ಟನೆ ಒಂದು ವಿಚಾರ ಮಿಂಚಿನ ಹಾಗೆ ಮನಸ್ಸಿನಲ್ಲಿ ಸುಳಿಯಿತು: ಮಹಾದೇವನ ಕಂಸಾಳೆ ಪದಗಳ ಧಾಟಿಯನ್ನು ಅಳವಡಿಸಿಕೊಂಡು ನಾಲ್ಕಾರು ಹಾಡುಗಳನ್ನು ಸಿದ್ಧಪಡಿಸಿಕೊಂಡು ‘ಬೇಲಿ ಮತ್ತು ಹೊಲ’ ನಾಟಕದ ಶಿಲ್ಪ ವಿನ್ಯಾಸದಲ್ಲಿ ಬೆಸೆದರೆ ತುಂಬಾ ಪರಿಣಾಮಕಾರಿಯಾಗಿರುತ್ತದೆ!
ಈ ವಿಚಾರ ಮನಸ್ಸಿಗೆ ಬಂದದ್ದೇ ತಡ, ನಾಟಕ ರೂಪವನ್ನು ಮತ್ತೆ ಸ್ವಲ್ಪಮಟ್ಟಿಗೆ ತಿದ್ದುವ —ಪರಿಷ್ಕರಿಸುವ ಕೆಲಸ ಆರಂಭಿಸಿದೆ. ಕುಂ. ವೀ. ಅವರ ಕಥೆಯಲ್ಲೇ ಅನೇಕ ನಾಟಕೀಯ ಸನ್ನಿವೇಶಗಳಿದ್ದು ಅವು ಗ್ರಾಮ್ಯ ಭಾಷೆಯ ಸೊಗಡಿನೊಡನೆ ಚೇತೋಹಾರಿಯಾಗಿ ನಿರೂಪಿತವಾಗಿದ್ದವು.

ನಾಟಕದಲ್ಲಿ ಕಥೆಯ ಬಹಳಷ್ಟು ಅಂಶಗಳನ್ನು ಹಾಗೆಯೇ ಉಳಿಸಿಕೊಂಡು ದುರಂತದ ತೀವ್ರತೆಗೆ ಹೆಚ್ಚಿನ ಮೊನಚನ್ನು ನೀಡುವ ಉದ್ದೇಶದಿಂದಷ್ಟೇ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದೆ. (ಕಥೆಯ ಕೇಂದ್ರಪಾತ್ರ ಚಂಬಸಯ್ಯ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ಯಾದಿ). ಈಗ ಈ ಹಾಡುಗಳನ್ನು ಬಳಸಿಕೊಳ್ಳುವುದರಿಂದ ಕಥೆಯನ್ನು ಸರಾಗವಾಗಿ ನಿರೂಪಿಸಲು ಅನುಕೂಲವಾಗುವುದಲ್ಲದೇ ರಂಗಸಜ್ಜಿಕೆಯ ಬದಲಾವಣೆಗಳಿಗೂ ಸಮಯಾವಕಾಶ ದೊರೆಯುತ್ತದೆ; ಭಾವನಾತ್ಮಕ ಸನ್ನಿವೇಶಗಳ ತೀವ್ರತೆಯನ್ನು ಹೆಚ್ಚಿಸಲೂ ನೆರವಾಗುತ್ತದೆ ಎನ್ನಿಸಿತು. ಒಂದೆರಡು ದಿನಗಳಲ್ಲೇ ಕಥಾನಿರೂಪಣೆಯಲ್ಲಿ ಹಿತವಾಗಿ-ಹದವಾಗಿ ಬೆರೆತುಕೊಳ್ಳುವಂತಹ ನಾಲ್ಕೈದು ಹಾಡುಗಳನ್ನು ಕಂಸಾಳೆ ಧಾಟಿಯಲ್ಲಿ ಬರೆದು ಸಿದ್ಧ ಪಡಿಸಿದೆ. ಗುಳ್ಳೆನರಿ ನಾಟಕದಲ್ಲಿ ಬಳಸಿದ್ದಂತೆ ಇಲ್ಲಿಯೂ ಒಂದು ‘ಅರೆ ಪರದೆ’ಯನ್ನು(half curtain) ಬಳಸಿಕೊಂಡು ರಂಗ ವಿನ್ಯಾಸವನ್ನು ರೂಪಿಸಿದೆ. ಬಿಳಿಯ ಅರೆ ಪರದೆಯ ಮೇಲೆ ಹಲವಾರು ಗ್ರಾಮಗಳ ಹೆಸರುಗಳು, ಮೈಲುಗಲ್ಲುಗಳು ಚಿತ್ರಿತವಾಗಿ ರಸ್ತೆಯ ವಾತಾವರಣಕ್ಕೆ ಸೂಕ್ತ ಹಿನ್ನೆಲೆ ಒದಗಿಸುವಂತಿದ್ದವು. ಹಿಂಬದಿಗೆ ಚಂಬಸಯ್ಯನ ಮನೆ ಯಾ ಪೋಲೀಸ್ ಸ್ಟೇಷನ್ ಯಾ ಪ್ರೆಸ್.. ಹೀಗೆ ಅಗತ್ಯಕ್ಕೆ ತಕ್ಕಂತೆ ರಂಗಸಜ್ಜಿಕೆಯನ್ನು ಮಾರ್ಪಡಿಸಿಕೊಳ್ಳುವ ವ್ಯವಸ್ಥೆ ರೂಪಿತವಾಯಿತು.

ನಾಟಕದಲ್ಲಿ ಹಲವಾರು ಅತಿ ಮುಖ್ಯ ಪಾತ್ರಗಳಿದ್ದವು. ನಮ್ಮ ನಾಟ್ಯದರ್ಪಣ ತಂಡದಲ್ಲಿ ಪ್ರತಿಭಾವಂತ ಕಲಾವಿದರಿಗೆ ಎಂದೂ ಕೊರತೆಯಾದದ್ದೇ ಇಲ್ಲ! ಕ್ರೌರ್ಯವೇ ಮೈವೆತ್ತಂತಹ ಇನ್ಸ್ ಪೆಕ್ಟರ್ ಪೋತರಾಜುವಿನ ಪಾತ್ರಕ್ಕೆ ಕೃಷ್ಣೇಗೌಡರನ್ನು ಆರಿಸಿದೆ. ಕಂಚಿನ ಕಂಠದ, ಎತ್ತರದ ನಿಲುವಿನ, ಗಡಸು ಚಹರೆಯ ಕೃಷ್ಣೇಗೌಡರು ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಆಯ್ಕೆಯಾಗಿದ್ದರು. ದಫೇದಾರ್ ಚಿನ್ನಪ್ಪನಾಗಿ ಸಾಯಿ ಪ್ರಕಾಶ್, ಪೇದೆ ಖಾದರ್ ಆಗಿ ರಿಚರ್ಡ್ ಜಿ ಲೂಯಿಸ್, ಉರುಕುಂದಿಯಾಗಿ ವೆಂಕಟೇಶ್, ಚಂಬಸಯ್ಯನಾಗಿ ಸುಧೀಂದ್ರ, ಪಾರವ್ವನಾಗಿ ನಳಿನಿ ಅಕ್ಕ ,ನಾಯಿಂದ ಗೋವಿಂದನಾಗಿ ಗಣೇಶ್, ಕುಡಿತಿನಿ ಮಗ್ಗಿ ರಾಮನಾಗಿ ಸುಶೀಲೇಂದ್ರ ಪುರೋಹಿತ್, ಪತ್ರಕರ್ತ ಪಾಟೀಲನಾಗಿ ಶಿವಶಂಕರ್, ಇಟೋಬನಾಗಿ ಶ್ರೀನಿವಾಸ ಮೇಷ್ಟ್ರು ಅಭಿನಯಿಸಲು ಸಿದ್ಧರಾದರು. ಮೇಳಕ್ಕಂತೂ ಅಬ್ಬೂರು ವೆಂಕಟರಾಮ್ ನೇತೃತ್ವದ ಸುಶ್ರಾವ್ಯ ಕಂಠದ ಗಾಯಕರ ತಂಡವೇ ಸಿದ್ಧವಾಗಿತ್ತು. ರಿಹರ್ಸಲ್ ಭರದಿಂದ ಸಾಗತೊಡಗಿತು.

‘ಬೇಲಿ ಮತ್ತು ಹೊಲ’ ಹೆಸರೇ ಸೂಚಿಸುವಂತೆ ಕಾಯಬೇಕಾದ ವ್ಯವಸ್ಥೆಯೇ ಕಾಡತೊಡಗಿದಾಗ ರಕ್ಷಣೆ ನೀಡುವವರಾರು? ಎಂಬ ಪ್ರಶ್ನೆಯೇ ಕಥೆಯ ಕೇಂದ್ರಬಿಂದುವಾಗಿದ್ದು, ನಾಟಕದುದ್ದಕ್ಕೂ ಪೋಲೀಸ್ ದೌರ್ಜನ್ಯ—ದಬ್ಬಾಳಿಕೆಗಳನ್ನು ಬಯಲಿಗೆಳೆಯುವಂತಹ ಅನೇಕ ಸನ್ನಿವೇಶಗಳಿದ್ದವು. ಪೋಲೀಸರಿಗೆ ಲಂಚ ಕೊಡಲು ಹಣವಿಲ್ಲವೆಂದು ಪರಿತಪಿಸುತ್ತಿರುವ ಸಮಯದಲ್ಲಿ ಕೊರಳ ತಾಳಿಯನ್ನೇ ಬಿಚ್ಚಿಸಿ ಕಸಿದು ಕೊಳ್ಳುವಂತಹ, ಲಾಕಪ್ ನಲ್ಲಿ ನಿರಪರಾಧಿಗಳನ್ನು ಅಮಾನವೀಯವಾಗಿ ಹಿಂಸಿಸುವಂತಹ ಹೃದಯ ಸ್ಪರ್ಶಿ ಸನ್ನಿವೇಶಗಳೂ ಇದ್ದವು. ಎಲ್ಲಕ್ಕಿಂತ ಮುಖ್ಯವಾಗಿ ‘ನಗಿಸುತ್ತಲೇ ವಿಷಾದಕ್ಕೆ ದೂಡುವ— ತಲ್ಲಣಗೊಳಿಸುವ—ಬೆಚ್ಚಿಬೀಳಿಸುವ ಹಾಸ್ಯ ಪ್ರಸಂಗಗಳನ್ನು ಕುಂ. ವೀ. ಅವರು ಕಥೆಯಲ್ಲಿ ಕಟ್ಟಿಕೊಟ್ಟಿರುವ ರೀತಿ ಅನನ್ಯವಾದುದು..dark comedy ಅನ್ನುತ್ತಾರಲ್ಲಾ, ಹಾಗೆ. ಅವೆಲ್ಲಾ ಅಂಶಗಳನ್ನೂ ಸಾಧ್ಯವಾದಷ್ಟೂ ನಾಟಕದಲ್ಲೂ ಉಳಿಸಿಕೊಳ್ಳಲು ನಾನು ಪ್ರಯತ್ನಿಸಿದ್ದೆ. ನಿಜಕ್ಕೂ ಅಂಥ ಸನ್ನಿವೇಶಗಳಲ್ಲಿ ನಟಿಸುವುದು ಕಲಾವಿದರಿಗೆ ದೊಡ್ಡ ಸವಾಲು.ಅಂಥ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿದ ನನ್ನ ತಂಡದ ಕಲಾವಿದರು ಪಾತ್ರ ಸಿದ್ಧತೆಯಲ್ಲಿ ತೋರುತ್ತಿದ್ದ ಶ್ರದ್ಧೆ—ತನ್ಮಯತೆಗಳು ನನಗೆ ನೂರಾನೆ ಬಲ ತಂದುಕೊಟ್ಟವೆಂದರೆ ಅತಿಶಯೋಕ್ತಿಯಲ್ಲ. ಈ ನಡುವೆ ಮತ್ತೊಂದು ಸಮಸ್ಯೆ ಎದುರಾಯಿತು. ‘ಪೋಲೀಸರ ದೌರ್ಜನ್ಯಗಳನ್ನು ಎತ್ತಿ ತೋರಿಸುವಂತಹ ನಾಟಕ ಮಾಡುತ್ತಿದ್ದಾರೆ ಎಂಬ ವಿಚಾರ ಪೋಲೀಸ್ ಇಲಾಖೆಗೂ ತಲುಪಿ ಅವರು ನಮ್ಮ ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ’ ಎಂಬ ಸುದ್ದಿಯೂ ಹರಡಿದ್ದು ನಮ್ಮನ್ನು ಕೊಂಚ ಚಿಂತೆಗೆ ಈಡುಮಾಡಿದ ಸಂಗತಿಯಾಯಿತು. ನಮ್ಮ ಒಂದಿಬ್ಬರು ಕಲಾವಿದರು ತಾಲೀಮು ಮುಗಿಸಿಕೊಂಡು ತಡರಾತ್ರಿ ನಡೆದು ಹೋಗುತ್ತಿದ್ದಾಗ ಮಿನರ್ವ ಸರ್ಕಲ್ ಬಳಿ ಅವರನ್ನು ತಡೆದ ಬೀಟ್ ಪೋಲೀಸರು, “ಇಷ್ಟುಹೊತ್ತಿನಲ್ಲಿ ಎಲ್ಲಿಗೆ ಹೋಗುತ್ತಿದ್ದೀರಿ?” ಎಂದು ಕೇಳಿದರಂತೆ. ನಾಟಕದ ರಿಹರ್ಸಲ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೇವೆ ಎಂದು ನಮ್ಮ ಹುಡುಗರು ಉತ್ತರಿಸಿದ್ದಕ್ಕೆ, “ಗೊತ್ತಿದೆ…ನೀವೆಲ್ಲಾ ಎಂಥಾ ನಾಟಕ ಮಾಡ್ತಿದೀರಿ ಅಂತ ನಮಗೆ ಗೊತ್ತಿದೆ..ಸುಮ್ಮನೆ ಬಿಟ್ಟುಬಿಡ್ತೀವಾ?ನೋಡಿಕೋತೀವಿ” ಎಂದು ಗದರಿಸಿ ಕಳಿಸಿದರಂತೆ. ಆ ಹುಡುಗರು ಮರುದಿನ ತಾಲೀಮಿಗೆ ಬಂದಾಗಲೂ ಹಿಂದಿನ ರಾತ್ರಿಯ ಘಟನೆಯನ್ನು ನೆನಪಿಸಿಕೊಂಡು ನಡುಗುತ್ತಿದ್ದರು! ಇದೆಲ್ಲದರ ಮಧ್ಯೆ ರಿಹರ್ಸಲ್ ಮಾತ್ರ ತುಂಬಾ ಚೆನ್ನಾಗಿ ನಡೆಯುತ್ತಿದ್ದು ರಂಗ ಕೃತಿ ನಿಧಾನವಾಗಿ ಸ್ಪಷ್ಟ ರೂಪ ಗಳಿಸಿಕೊಳ್ಳುತ್ತಿತ್ತು.

ರಿಹರ್ಸಲ್ ನೋಡಲು ಬರುತ್ತಿದ್ದ ನಮ್ಮ ಕೆಲ ಗೆಳೆಯರಂತೂ ‘ನಾಟಕ ತುಂಬಾ ಚೆನ್ನಾಗಿ ಬರುತ್ತಿದೆ..ತುಂಬಾ ಪರಿಣಾಮಕಾರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.ರಿಚಿಯ ಆತ್ಮೀಯ ಮಿತ್ರ, ಮುಂದಿನ ದಿನಗಳಲ್ಲಿ ಸುಪ್ರಸಿದ್ಧ ನಿರ್ದೇಶಕನಾಗಿ ಹೆಸರು ಮಾಡಿದ ಡಿ.ರಾಜೇಂದ್ರಬಾಬು ಒಂದು ದಿನ ಬಂದು ಪೂರ್ತಿ ರಿಹರ್ಸಲ್ ನೋಡಿ ಸಂಕಟ ತಡೆಯಲಾರದೆ ಕಣ್ಣೀರು ಬಿಟ್ಟುಕೊಂಡು ಹೋದದ್ದು ನನಗಿನ್ನೂ ನೆನಪಿದೆ! ಒಟ್ಟಿನಲ್ಲಿ ತುಂಬು ಉತ್ಸಾಹ..ಕೊಂಚ ಕಾತರ..ಕೊಂಚ ಆತಂಕದ ನಡುವೆಯೇ ‘ಬೇಲಿ ಮತ್ತು ಹೊಲ’ ನಾಟಕ ರಂಗದ ಮೇಲೆ ಬರಲು ಸಿದ್ಧವಾಯಿತು.

ನಾಟಕದ ಮೊದಲ ಪ್ರದರ್ಶನದ ದಿನ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳತೊಡಗಿದೆವಾದರೂ ಕೊನೆಯ ಕ್ಷಣದಲ್ಲಿ ಏನಾದರೂ ಪ್ರದರ್ಶನವನ್ನು ರದ್ದು ಪಡಿಸಬೇಕೆಂಬ ಆದೇಶ ಬಂದುಬಿಟ್ಟರೆ ಗತಿಯೇನು ಎಂದು ಎದೆ ಹೊಡೆದುಕೊಳ್ಳುತ್ತಿತ್ತು.ಸಧ್ಯ ಅಂಥ ತೊಂದರೆಯೇನೂ ಎದುರಾಗದೇ ಹೋದರೂ ಕೆಲ ಪೋಲೀಸ್ ಅಧಿಕಾರಿಗಳು ಮಫ್ತಿಯಲ್ಲಿ ನಾಟಕ ನೋಡಲು ಬಂದಿದ್ದಾರೆಂಬ ಸುದ್ದಿ ಕಿವಿಗೆ ಮುಟ್ಟಿ ನಮ್ಮ ಆತಂಕವನ್ನು ಜೀವಂತವಾಗಿಟ್ಟಿತು!

ಮೂರನೆಯ ಬೆಲ್ ಆಗಿ ಪ್ರೇಕ್ಷಾಗೃಹದಲ್ಲಿ ಕತ್ತಲು ಕವಿದು ರಂಗದ ಮೇಲೆ ಬೆಳಕು ಮೂಡಿ ಢಮ ಢಮ ತಮಟೆ ವಾದ್ಯದೊಂದಿಗೆ ಬಿಳಿಯ ಪರದೆಯ ಮುಂದೆ ಬಂದು ನಿಂತು ಮೇಳದವರು, “ತಂದನಾನ ತನ ತಾನಿ ತಂದಾನ ತಂದನ್ನೇನ ತಂದನಾನ ತನ ತಾನಿ ತಂದಾನ…ಅರೆ ಸಿರಿಗನ್ನಡ ಮೈಸೂರು ದೇಸದಲ್ಲಿ ಇರುವಾ ಊರು ಬೆಂಗಾಡಿನಂಥಾ ಊರು ಬೊಟ್ಟೂರು” ಎಂದು ಹಾಡುತ್ತಾ ನಾಟಕಕ್ಕೆ ಚಾಲನೆ ನೀಡಿಯೇ ಬಿಟ್ಟರು! ಮೊದಲ ದೃಶ್ಯದಿಂದಲೇ ಪ್ರೇಕ್ಷಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಾಟಕ ಉದ್ದಕ್ಕೂ ಆಸಕ್ತಿಯನ್ನು ಉಳಿಸಿಕೊಂಡು ಹೋದದ್ದಷ್ಟೇ ಅಲ್ಲ, ಅನೇಕ ಮುಖ್ಯ ಹಂತಗಳಲ್ಲಿ ಅವರ ಧನಾತ್ಮಕ ಪ್ರತಿಕ್ರಿಯೆಯನ್ನು ಗಳಿಸಿಕೊಳ್ಳುವುದರಲ್ಲಿಯೂ ಯಶಸ್ವಿಯಾಯಿತು. ಕಲಾವಿದರೆಲ್ಲರೂ ತಂತಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು. ಪೋತ್ರಾಜು ಹಾಗೂ ಇಟೋಬ—ಈ ದುಷ್ಟ ಪಾತ್ರಗಳಲ್ಲಿ ಅಮೋಘ ಅಭಿನಯ ನೀಡಿದ ಕೃಷ್ಣೇಗೌಡ ಹಾಗೂ ಶ್ರೀನಿವಾಸ ಮೇಷ್ಟ್ರು ‘ಮಣಗಟ್ಟಲೆ ಬೈಗುಳ ತಿನ್ನುವುದರ’ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರೆ ಮುಗ್ಧ ಚಂಬಸಯ್ಯ—ಪಾರವ್ವ—ಕುಡಿತಿನಿ ಮಗ್ಗಿ ರಾಮ ಮೊದಲಾದ ಪಾತ್ರಗಳು ಅಪಾರ ಸಹಾನುಭೂತಿಯನ್ನು ಗಳಿಸಿಕೊಳ್ಳುತ್ತಾ ಶಭಾಷ್ ಎನ್ನಿಸಿಕೊಂಡರು! ‘ಬೇಲಿ ಮತ್ತು ಹೊಲ’ ನಾಟಕ ರಂಗದ ಮೇಲೆ ಗೆದ್ದಿತ್ತು!

ನಾಟಕ ಮುಗಿದ ಮೇಲೆ ನಾವು ನಿರೀಕ್ಷಿಸಿದ್ದಂತೆಯೇ ನಾಟಕ ನೋಡಲು ಬಂದಿದ್ದ ಕೆಲ ಪೋಲೀಸ್ ಅಧಿಕಾರಿಗಳೊಂದಿಗೆ ಚರ್ಚೆಯೂ ನಡೆಯಿತು! ಒಬ್ಬ ಅಧಿಕಾರಿ, “ಪೋಲೀಸರೆಂದರೆ ಭ್ರಷ್ಟರು..ನೀಚರು
ಅನ್ನುವಂತೆ ತೋರಿಸಿದ್ದೀರಿ.. ಯಾಕೆ? ಒಳ್ಳೆಯ ಪೋಲೀಸ್ ಅಧಿಕಾರಿಗಳು ನಿಮ್ಮ ಕಣ್ಣಿಗೆ ಬಿದ್ದೇ
ಇಲ್ಲವೇನು?” ಎಂದು ನನ್ನನ್ನು ಪ್ರಶ್ನಿಸಿದರು. “ಸರ್..ನಾವು ಕೆಲ ಅಧಿಕಾರಿಗಳ ಭ್ರಷ್ಟತನದ ಕಥೆಯನ್ನು
ಹೇಳಿದ್ದೇವೆಯೇ ಹೊರತು ಇಡೀ ಇಲಾಖೆ ಹಾಳು ಬಿದ್ದು ಹೋಗಿದೆ ಎಂದಾಗಲೀ ಭ್ರಷ್ಟರ ಕೂಪವಾಗಿಬಿಟ್ಟಿದೆ
ಎಂದಾಗಲೀ ಎಲ್ಲಿಯೂ ಹೇಳಿಲ್ಲ.. ಅಷ್ಟು ಯಾಕೆ ಸಾರ್?..ಈಗಷ್ಟೇ ತೆರೆಗೆ ಬಂದಿರೋ ‘ಶಕ್ತಿ’
ಅನ್ನೋ ಹಿಂದಿ ಸಿನೆಮಾದಲ್ಲಿ ಒಬ್ಬ ಪೋಲೀಸ್ ಅಧಿಕಾರಿಯನ್ನು ಅತ್ಯಂತ ಪ್ರಾಮಾಣಿಕ
ಹಾಗೂ ನಿಷ್ಠಾವಂತ ಅಂತ ಬಿಂಬಿಸಿದ್ದಾರೆ..ಅಂದಮಾತ್ರಕ್ಕೆ
ಇಲಾಖೆಯವರೆಲ್ಲರೂ ಪ್ರಾಮಾಣಿಕರಾಗಿ ಬಿಡುವುದಿಲ್ಲ ಅನ್ನುವ ಸತ್ಯ ನಿಮಗೂ ಗೊತ್ತು.. ಅಂದರೆ ಈ ಎರಡೂ ಮುಖಗಳು ಕಥೆಯ ಸಂದರ್ಭಾನುಸಾರವಾಗಿ ಅನಾವರಣಗೊಳ್ಳುತ್ತಾ ಹೋಗುತ್ತವೆ, ಅಲ್ಲವಾ ಸರ್” ಎಂದು ಆ ಕ್ಷಣಕ್ಕೆ ತೋಚಿದ ಮಾತುಗಳನ್ನಾಡಿದೆ. ಒಬ್ಬ ಅಧಿಕಾರಿ, “ತಾಳಿ ಕಿತ್ತುಕೊಂಡಿದ್ದು ತುಂಬಾ ಅಮಾನವೀಯವಾಗಿತ್ತು.. ನಾವೆಲ್ಲಾ ತೀರಾ ತಲೆ ತಗ್ಗಿಸೋ ಹಾಗೆ ಮಾಡಿಬಿಟ್ರಿ” ಎಂದು ಪೇಚಾಡಿಕೊಂಡರೆ ಮತ್ತೊಬ್ಬ ಅಧಿಕಾರಿ, “ಅಯ್ಯೋ ಬಿಡಿ ಸರ್..ಇದಕ್ಕಿಂತ ಘೋರವಾದ ಪ್ರಸಂಗಗಳನ್ನ ನಾನೇ ನನ್ನ ಸರ್ವೀಸ್ ನಲ್ಲಿ ಕಂಡಿದೀನಿ..ಅವು ಯಾವುವೂ ಬೆಳಕಿಗೆ ಬರೋಲ್ಲ ಅಷ್ಟೇ” ಎಂದು ಜೋರಾಗಿಯೇ ಗೊಣಗಿಕೊಂಡರು. “ಏನೇ ಆದರೂ ಶಿಸ್ತು—ಕಾನೂನನ್ನು ರಕ್ಷಿಸುವ, ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಗುರುತರ ಹೊಣೆ ಹೊತ್ತ ಒಂದು ಇಲಾಖೆಯ ಬಗ್ಗೆ ಜನರಿಗೆ ಅಸಹ್ಯ—ಸಿಟ್ಟು ಹುಟ್ಟುವ ರೀತಿಯಲ್ಲಿ ಸನ್ನಿವೇಶಗಳನ್ನು ರೂಪಿಸಬೇಡಿ..ಜನರಿಗೆ ಇಲಾಖೆಯ ಬಗ್ಗೆ ಅಗೌರವ—ಅಪನಂಬಿಕೆ ಮೂಡುವ ರೀತಿಯಲ್ಲಿ ನೀವು ನಮ್ಮ ಇಲಾಖೆಯನ್ನು ಬಿಂಬಿಸುವುದು ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ..ನಿಮ್ಮ ನಿರೂಪಣೆ ಸಾಧ್ಯವಾದಷ್ಟೂ ಸಮತೋಲವನ್ನು ಕಾಪಾಡಿಕೊಂಡು ಬರುವಂತಿರಲಿ” ಎಂದು ಒಬ್ಬ ಅಧಿಕಾರಿ ನುಡಿದದ್ದು ನನ್ನ ಮನಸ್ಸಿಗೆ ನಾಟಿದ್ದಲ್ಲದೇ ಅವರ ವಾದದಲ್ಲೂ ಹುರುಳಿದೆ ಅನ್ನಿಸಿತು. ಹಾಗಾಗಿ ಮುಂದಿನ ಕೆಲ ಪ್ರದರ್ಶನಗಳಲ್ಲಿ ದಫೇದಾರ ಚಿನ್ನಪ್ಪನ ಪಾತ್ರಕ್ಕೆ ಒಂದು ಬೇರೆಯ ಆಯಾಮವನ್ನು ಕಲ್ಪಿಸಿಕೊಡುವ ಪ್ರಯತ್ನವನ್ನೂ ಮಾಡಿದೆ. ಭ್ರಷ್ಟ ವ್ಯವಸ್ಥೆಯ ಭಾಗವೇ ಆಗಿದ್ದರೂ ಅದಕ್ಕೆ ಹೊಂದಿಕೊಳ್ಳಲಾಗದೇ, ಹೊರಬರಲೂ ಆಗದೇ ಚಡಪಡಿಸುವ, ಜನರ ಕಷ್ಟಗಳಿಗೆ ಮಿಡಿಯುವ ಸಂವೇದನಾಶೀಲ ವ್ಯಕ್ತಿಯಾಗಿ ಚಿನ್ನಪ್ಪನ ಪಾತ್ರವನ್ನು ರೂಪಿಸಿ ಕೆಲ ಬದಲಾವಣೆಗಳನ್ನು ಮಾಡಿದೆ.ಈ ತೆಳು ಹಾಸ್ಯ ಮಿಶ್ರಿತ, ಮೃದು ಮನಸ್ಸಿನ ಪಾತ್ರದಲ್ಲಿ ಸಾಯಿ ಪ್ರಕಾಶ್ ಗಮನಾರ್ಹ ಅಭಿನಯ ನೀಡಿದ್ದರು.

ಬೇಲಿ ಮತ್ತು ಹೊಲ ರಂಗ ಪ್ರಯೋಗ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ ಅನೇಕ ವಿಮರ್ಶಕರಿಂದಲೂ ಸೈ ಅನ್ನಿಸಿಕೊಂಡದ್ದು ತಂಡದವರೆಲ್ಲರಿಗೂ ಹೆಮ್ಮೆಯ ಸಂಗತಿಯಾಯಿತು.ಒಂದೆರಡು ವಿಮರ್ಶಾ ಭಾಗಗಳನ್ನು ಗಮನಿಸುವುದಾದರೆ:

“ಸಮರ್ಥ ನಿರೂಪಣೆಯ ‘ಬೇಲಿ ಮತ್ತು ಹೊಲ’…ಭಾಷಾಂತರಗಳ ಹಾವಳಿಗಳ ನಡುವೆ ಕನ್ನಡದ ಕತೆ ಕಾದಂಬರಿಗಳು ವಿವಿಧತೆಯಿಂದ ರಂಗದ ಮೇಲೆ ಬರುತ್ತಿರುವುದು ಗಮನಾರ್ಹ…ಬಿಗಿಯಾದ ಕಥಾವಸ್ತುವನ್ನು ಹೆಚ್ಚೇನೂ ಕಸರತ್ತು ಮಾಡದೆ ರಂಗದ ಮೇಲೆ ನೇರವಾಗಿ ಸರಳವಾಗಿ ಹೇಳುವಂತೆ ನಿರ್ದೇಶಕರು ರೂಪಾಂತರಿಸಿ ನಿರ್ದೇಶಿಸಿದ ಜಾಣ್ಮೆ ಮೆಚ್ಚುವಂಥದ್ದು..”

“ಕುಂ.ವೀರಭದ್ರಪ್ಪ ಅವರ ಕಿರು ಕಾದಂಬರಿಯನ್ನು ಆಧರಿಸಿ ರಚಿಸಿರುವ ನಾಟಕ ‘ಬೇಲಿ ಮತ್ತು ಹೊಲ’ ಒಂದು ಉತ್ತಮ ಪ್ರದರ್ಶನ.ಬೇಲಿಯೇ ಎದ್ದು ಹೊಲವನ್ನು ಮೇದಂತೆ,ರಕ್ಷಣೆ ಕೊಡಬೇಕಾದ ಪೋಲೀಸರೇ ಮುಗ್ಧ ಹಳ್ಳಿಗರನ್ನು ಶೋಷಣೆ ಮಾಡುವುದು ಈ ನಾಟಕದ ವಸ್ತು.ದಕ್ಷ ನಿರ್ದೇಶನ,ಉತ್ತಮ ಅಭಿನಯ,ಸುಮಧುರ ಮೇಳ,ಸೂಕ್ತ ರಂಗಸಜ್ಜಿಕೆ ಮತ್ತು ಬೆಳಕು ಇವುಗಳಿಂದ ಕೂಡಿ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ ನಾಟಕವಿದು. ಚಂಬಸಯ್ಯನಾಗಿ ಸುಧೀಂದ್ರ,ಪೋತರಾಜುವಾಗಿ ಕೃಷ್ಣೇಗೌಡ,ಇಟೋಬನಾಗಿ ಶ್ರೀನಿವಾಸ ಮೇಷ್ಟ್ರು,ಉರುಕುಂದಿಯಾಗಿ ವೆಂಕಟೇಶ್ ,ಕಾದರ್ ಆಗಿ ರಿಚರ್ಡ್ ಜಿ ಲೂಯಿಸ್ ಪಾತ್ರಗಳಲ್ಲಿ ಜೀವ ತುಂಬಿದರು.”

ಒಟ್ಟಿನಲ್ಲಿ ‘ಬೇಲಿ ಮತ್ತು ಹೊಲ’ ರಂಗಪ್ರಯೋಗ ನನಗೆ ತೃಪ್ತಿ—ಸಮಾಧಾನಗಳನ್ನು ನೀಡಿದ ಯಶಸ್ವೀ ಪ್ರಯೋಗ.

ಮುಂದೆ ಹೊನ್ನಾವರದ ಕರ್ಣಾಟಕ ಸಂಘದವರು ಅಲ್ಲಿ ಒಂದು ಶಿಬಿರವನ್ನು ನಡೆಸಿಕೊಡಲು ನನ್ನನ್ನು ಆಹ್ವಾನಿಸಿದಾಗ ಆ ಶಿಬಿರದ ಅಂಗವಾಗಿಯೂ ಬೇಲಿ ಮತ್ತು ಹೊಲ ನಾಟಕವನ್ನೇ ಮಾಡಿಸಿದ್ದೆ. ಆ ಸಂಸ್ಥೆಯ ಮುಖ್ಯಸ್ಥರಾಗಿದ್ದ ಜಿ.ಯು.ಭಟ್ ಅವರೇ ಪೋತರಾಜುವಿನ ಪಾತ್ರ ನಿರ್ವಹಿಸಿದ್ದರು.ಪ್ರಸಿದ್ಧ ಕವಿಗಳಾದ ಜಿ.ಎಸ್.ಅವಧಾನಿ ಹಾಗೂ ಆರ್.ವಿ.ಭಂಡಾರಿ ಅವರು ಈ ಪ್ರಯೋಗದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರೆನ್ನುವುದೊಂದು ವಿಶೇಷ. ಭಂಡಾರಿಯವರು ಉರುಕುಂದಿಯಾಗಿ, ಅವಧಾನಿಯವರು ಇಟೋಬನಾಗಿ ಗಮನಾರ್ಹ ಅಭಿನಯವನ್ನೇ ನೀಡಿ,’ತಾವು ಉತ್ತಮ ಕವಿಗಳಷ್ಟೇ ಅಲ್ಲ,ನುರಿತ ನಟರೂ ಹೌದು’ ಎಂದು ಸಾಬೀತು ಪಡಿಸಿದರು!

ಈ ಸಂದರ್ಭದಲ್ಲಿ ನನ್ನದೇ ತಪ್ಪಿನಿಂದಾಗಿ ನಡೆದ ಒಂದು ಅಹಿತಕರ ಘಟನೆಯನ್ನು ನೆನಪಿಸಿಕೊಳ್ಳಲೇ ಬೇಕು.ನಾಟಕದಲ್ಲಿ ಅತಿ ಮುಖ್ಯವಾದ ಪೋತರಾಜುವಿನ ಪಾತ್ರಕ್ಕೆ ಆ ರಂಗತಂಡದ ಮುಖ್ಯಸ್ಥರೂ ಆಗಿದ್ದ ಜಿ.ಯು.ಭಟ್ ಅವರು ತುಂಬಾ ಸಮರ್ಪಕವಾಗಿ ಹೊಂದುವಂತಿದ್ದರು. ಎತ್ತರದ ನಿಲುವಿನ, ದೊಡ್ಡ ದನಿಯ ಭಟ್ ಅವರು ಸೊಗಸಾಗಿ ಮಾತಾಡುತ್ತಿದ್ದರು ಕೂಡಾ.ಹಾಗಾಗಿ ಅವರನ್ನೇ ಪೋತರಾಜುವಿನ ಪಾತ್ರ ನಿರ್ವಹಣೆಗೆ ನಾನು ಆರಿಸಿಕೊಂಡೆ. ಆದರೆ ಭಟ್ ಅವರು, “ದಯವಿಟ್ಟು ನನಗೆ ಯಾವ ಪಾತ್ರವನ್ನೂ ಕೊಡಬೇಡಿ..ನನ್ನ ವ್ಯಾಪಾರ—ವಹಿವಾಟುಗಳ ಸಂಬಂಧವಾಗಿ ನಾನು ಆಗಾಗ್ಗೆ ಊರು ಬಿಟ್ಟು ಹೋಗುತ್ತಿರುತ್ತೇನೆ…ಜೊತೆಗೆ ನೇಪಥ್ಯದ ವ್ಯವಸ್ಥೆಗಳ ಜವಾಬ್ದಾರಿ ಬೇರೆ ನನ್ನ ಹೆಗಲ ಮೇಲಿದೆ..ನನ್ನನ್ನು ಬಿಟ್ಟುಬಿಡಿ” ಎಂದು ಇನ್ನಿಲ್ಲದಂತೆ ಕೇಳಿಕೊಂಡರು. ಅವರ ಮಾತು ಸರಿ ಎನ್ನಿಸಿದರೂ ನನಗೆ ಪೋತರಾಜುವಿನ ಪಾತ್ರಕ್ಕೆ ಮತ್ತೊಬ್ಬ ಸೂಕ್ತ ಕಲಾವಿದ ದೊರೆಯದ ಕಾರಣವಾಗಿ ಭಟ್ ಅವರೇ ಆ ಪಾತ್ರ ನಿರ್ವಹಿಸಬೇಕೆಂದು ಹಠ ಹಿಡಿದುಬಿಟ್ಟೆ. ವಿಧಿಯಿಲ್ಲದೇ ಅವರೂ ಒಪ್ಪಿಕೊಂಡರು. ಅಲ್ಲೇ ಎಡವಟ್ಟಾದದ್ದು ನೋಡಿ! ಭಟ್ಟರಿಗೆ ನಿಯಮಿತವಾಗಿ ನಿಗದಿತ ಸಮಯಕ್ಕೆ ಬರಲಾಗುತ್ತಿರಲಿಲ್ಲ.. ಬಂದರೂ ಪಾತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ…ಮಾತುಗಳೂ ಬೇಗ ಕಂಠಸ್ಥವಾಗದೇ ಪರದಾಡುತ್ತಿದ್ದರು. ಇದೆಲ್ಲದರ ಜೊತೆಗೆ ಚಂದ ಮಾತಾಡುವವರೆಲ್ಲಾ ಒಳ್ಳೆಯ ನಟರಾಗಲೇಬೇಕೆಂದೇನಿಲ್ಲ ಎಂಬ ಕಠೋರ ಸತ್ಯವೂ ನನಗೆ ಅರಿವಾಗತೊಡಗಿತು! ಹೆಚ್ಚಿನ ಸಮಯ ನೀಡಿ ಶ್ರಮ ವಹಿಸಿದ್ದರೆ ಆ ಕೊರತೆಯನ್ನು ಸರಿ ಪಡಿಸಬಹುದಾಗಿದ್ದರೂ ಅದಕ್ಕೆ ಅವಕಾಶವಾಗಲಿಲ್ಲ.

ಒಮ್ಮೆಯಂತೂ ಇದ್ದಕ್ಕಿದ್ದ ಹಾಗೆ ಎರಡು ದಿನ ಭಟ್ಟರು ತಾಲೀಮಿಗೆ ಬರಲೇ ಇಲ್ಲ! ವಿಚಾರಿಸಿದಾಗ ಅವರು ಊರಲ್ಲಿಯೇ ಇಲ್ಲ ಎಂಬ ವರ್ತಮಾನ ಬಂದು ನನ್ನ ಮನಸ್ಸು ವ್ಯಗ್ರವಾಗಿ ಹೋಯಿತು. ಮುಖ್ಯಪಾತ್ರಧಾರಿಯೇ ಇಲ್ಲದೆ ಇತರರ ತಾಲೀಮೂ ಸರಿಯಾಗಿ ನಡೆಯದೆ ಹಿಂಸೆಯಾಗತೊಡಗಿತು. ಆದರೆ ವಿಧಿಯಿಲ್ಲ.. ಅನುಭವಿಸಲೇಬೇಕು! ಬೇಡ ಬೇಡ ಎಂದವರನ್ನು ನಾನಾಗಿಯೇ ಕಟ್ಟಿಹಾಕಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡಿದ್ದೇನೆ! ಅವರು ಬಾರದ ಒಂದು ಸಂಜೆ ಎಲ್ಲಾ ಕಲಾವಿದರೊಂದಿಗೆ ಮಾತಾಡುತ್ತಾ ಕುಳಿತಿದ್ದಾಗ ಲೋಕಾಭಿರಾಮವಾಗಿ ರಂಗಭೂಮಿಯ ಶಿಸ್ತಿನ ಬಗ್ಗೆ ಹೇಳತೊಡಗಿದೆ. “ಶಿಸ್ತು ಪಾಲಿಸದ ಕಲಾವಿದರು ರಂಗಭೂಮಿಯಲ್ಲಿ ಇರಲು ಅನರ್ಹರು… ಅಂಥವರನ್ನು ನಾನೆಂದೂ ಸಹಿಸುವುದೂ ಇಲ್ಲ, ನನ್ನ ತಂಡದಲ್ಲಿ ಇಟ್ಟುಕೊಳ್ಳುವುದೂ ಇಲ್ಲ.. ನೀವುಗಳಾದರೂ ಅಷ್ಟೇ.. ಮುಂದೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಶಿಸ್ತು ಪಾಲನೆಗೆ ಹೆಚ್ಚಿನ ಗಮನ ಕೊಡಿ” ಎಂದು ಮುಂತಾಗಿ ಒಂದು ಪುಟ್ಟ ಭಾಷಣವನ್ನೇ ಮಾಡಿದೆ. ನೇರವಾಗಿ ಯಾರ ಹೆಸರನ್ನೂ ನಾನು ಹೇಳದೆ ಸಾಮಾನ್ಯವಾಗಿಯೇ ಹೇಳಿದ್ದರೂ ಮಾತು ಗುರಿ ಮುಟ್ಟಿಬಿಟ್ಟಿತ್ತು.. ತಂಡದ ಒಂದಿಬ್ಬರ ಮುಖೇನ ಭಟ್ಟರಿಗೆ ನನ್ನ ಭಾಷಣದ ವಿವರಗಳೆಲ್ಲವೂ ರವಾನೆಯಾಗಿದ್ದವು—ವಿಶೇಷ ಒಗ್ಗರಣೆಯ ಸಮೇತ!

ಮರುದಿನ ರಿಹರ್ಸಲ್ ಗೆ ಬಂದ ಭಟ್ಟರು ಸಿಟ್ಟಿನಿಂದ ಧುಮುಗುಡುತ್ತಿದ್ದರು. ಸಹಜವೇ! ತಂಡದ ಮುಖ್ಯಸ್ಥನಿಗೇ ಶಿಸ್ತಿನ ಪಾಠವನ್ನು ಹೇಳಹೊರಟರೆ ಸೈರಿಸಲಾದೀತೇ! ಬರುತ್ತಿದ್ದಂತೆಯೇ ಎಲ್ಲರನ್ನೂ ಕೂರಿಸಿಕೊಂಡು ಮಾತು ಆರಂಭಿಸಿದರು: “ನಾವು ಕಾರಂತರಾದಿಯಾಗಿ ಬಹಳ ದೊಡ್ಡ ದೊಡ್ಡ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ್ದೇವೆ.. ಎಂದೂ ಯಾವ ತೊಂದರೆಯೂ ಆಗಿಲ್ಲ. ನಿಮ್ಮಿಂದ ಶಿಸ್ತಿನ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ನನಗೆ.ನನ್ನ ಅನಿವಾರ್ಯತೆಗಳ ಬಗ್ಗೆ ಮೊದಲೇ ನಿಮಗೆ ತಿಳಿಸಿದ್ದೆ..ಆದರೂ ಹಠ ಹಿಡಿದು ನನಗೆ ಪಾತ್ರ ಕಟ್ಟಿದವರು ನೀವು! ಈಗ ‘ಅದು ಸರಿಯಿಲ್ಲ’ ‘ಇದು ಸರಿಯಿಲ್ಲ’ ಎಂದು ರಾಗ ಎಳೆದರೆ ನಾನೇನು ಮಾಡಲಾದೀತು? ದಯವಿಟ್ಟು ತಂಡದ ಕಲಾವಿದರ ಮುಂದೆ ತೇಜೋವಧೆ ಮಾಡುವ ಕೆಲಸ ಮಾಡಬೇಡಿ..ನನಗೆ ಸಹಿಸುವುದಿಲ್ಲ” ಎಂದು ಮುಂತಾಗಿ ಹದಿನೈದು ನಿಮಿಷ ಮಾತಾಡಿ ತಮ್ಮ ಅಸಮಾಧಾನವನ್ನೆಲ್ಲಾ ಹೊರಹಾಕಿಬಿಟ್ಟರು.

ಒಂದು ಕ್ಷಣ ಸುಮ್ಮನಿದ್ದು ಅವರ ಟೀಕೆಗಳೆಲ್ಲವನ್ನೂ ಜೀರ್ಣಿಸಿಕೊಂಡು ನಾನು ಹೇಳಿದೆ: ” ನಾನು ಸಾಮಾನ್ಯವಾಗಿ ರಂಗಭೂಮಿಯಲ್ಲಿರಬೇಕಾದ ಶಿಸ್ತಿನ ಬಗ್ಗೆ ಹೇಳಿದ್ದೇನೆಯೇ ಹೊರತು ವೈಯಕ್ತಿಕವಾಗಿ ಯಾರ ತೇಜೋವಧೆಯನ್ನೂ ಮಾಡಿಲ್ಲ. ಹೌದು..ನನ್ನದೇ ನಿರ್ಧಾರಕ್ಕೆ ನೀವು ಕಟ್ಟುಬಿದ್ದಿರಿ, ನಿಜ. ಆದರೆ ಈ ಮಟ್ಟಿಗೆ ನಿಮ್ಮ ‘ಅನಿವಾರ್ಯತೆ’ಗಳು ಬಾಧಿಸಿ ತೊಂದರೆ ಕೊಡುತ್ತವೆ ಎಂಬುದು ನನ್ನ ಊಹೆಗೆ ನಿಲುಕಿರಲಿಲ್ಲ.. ಹೋಗಲಿ ಬಿಡಿ.. ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ.. ಯಾಕೋ ನಮ್ಮ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ.. ನಾನು ಶಿಬಿರವನ್ನು ಇಲ್ಲಿಗೇ ಮುಗಿಸುತ್ತಿದ್ದೇನೆ.. ಇದು ಅಕಾಡಮಿಯ ಪ್ರಾಯೋಜಿತ ಶಿಬಿರವಾದ್ದರಿಂದ ಅವರಿಗೆ ಶಿಬಿರ ನಿಲ್ಲಿಸಿದ್ದಕ್ಕೆ ಕಾರಣ ಕೊಡಬೇಕಾಗುತ್ತದೆ.. ಚಿಂತಿಸಬೇಡಿ.. ನನ್ನ ವೈಯಕ್ತಿಕ ಕಾರಣಗಳನ್ನೇ ನೀಡುತ್ತೇನೆ.. ಮುಂದೆ ಬೇರೆ ಯಾರಾದರೂ ಒಳ್ಳೆಯ—ದೊಡ್ಡ ನಿರ್ದೇಶಕರನ್ನೇ ಕರೆಸಿ ನೀವು ಶಿಬಿರ ಮಾಡಿಸಬಹುದು”.

ಇಷ್ಟು ಹೇಳಿದವನೇ ಅಲ್ಲಿಂದ ಎದ್ದು ಸೀದಾ ತುಸು ದೂರದಲ್ಲಿದ್ದ ಅತಿಥಿ ಗೃಹದ ನನ್ನ ಕೋಣೆಗೆ ಹೋಗಿ ಬಟ್ಟೆಬರೆಗಳನ್ನು ಕಿಟ್ ಗೆ ತುಂಬಿಕೊಳ್ಳತೊಡಗಿದೆ.

ರಾತ್ರಿಯ ಬಸ್ ಹತ್ತಿ ಸೀದಾ ಮಂಗಳೂರಿಗೆ ಹೋಗಿ ಶ್ರೀಧರ—ಲೂಸಿಯವರೊಟ್ಟಿಗೆ ಎರಡು ದಿನ ಕಳೆದು ಬೆಂಗಳೂರಿಗೆ ಮರಳುವುದೆಂದು ಮನಸ್ಸಿನಲ್ಲೇ ತೀರ್ಮಾನಿಸಿಕೊಂಡೆ. ಕಿಟ್ ಸಿದ್ಧ ಪಡಿಸಿಕೊಂಡು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಭಂಡಾರಿಯವರೂ ಅವಧಾನಿಯವರೂ ಅಲ್ಲಿಗೆ ಬಂದರು. “ಹೀಗೆ ಅರ್ಧದಲ್ಲಿ ಶಿಬಿರ ನಿಲ್ಲಿಸಿ ಹೊರಟುಹೋಗುವುದು ನಿಮಗೂ ಶೋಭೆ ತರುವುದಿಲ್ಲ, ನಮಗೂ ಕೆಟ್ಟ ಹೆಸರು.. ಹೇಗೋ ಹೊಂದಾಣಿಕೆ ಮಾಡಿಕೊಂಡು ಶಿಬಿರವನ್ನು ಪೂರ್ಣಗೊಳಿಸೋಣ.. ಭಟ್ಟರಿಗೂ ನಾವು ತಿಳಿಹೇಳುತ್ತೇವೆ.. ದಯವಿಟ್ಟು ಸಹಕರಿಸಿ” ಎಂದು ಪರಿಪರಿಯಾಗಿ ನನಗೆ ಸಮಾಧಾನ ಹೇಳಿದರು. ನಾನು ಖಡಾಖಂಡಿತವಾಗಿ ಹೇಳಿಬಿಟ್ಟೆ: “ದಯವಿಟ್ಟು ಬಲವಂತ ಮಾಡಬೇಡಿ. ನನಗೆ ಯಾಕೋ ಸರಿಹೋಗುತ್ತಿಲ್ಲˌ.. ಮನಸ್ಸು ತೀರಾ ಕೆಟ್ಟಿದೆ.. ತೇಪೆಗಳಿಂದ ಸರಿಹೋಗುವಂಥದಲ್ಲ ಇದು.. ನನ್ನನ್ನು ಬಿಟ್ಟುಬಿಡಿ.”

ಆದರೆ ಕವಿಗಳು ಸುಮ್ಮನಾಗಲಿಲ್ಲ. “ಹೋಗಲಿ.. ಇದೊಂದು ದಿನ ಉಳಿದುಕೊಳ್ಳಿ.. ನಾವು ಭಟ್ಟರೊಂದಿಗೂ ಒಮ್ಮೆ ಮಾತಾಡುತ್ತೇವೆ..ಆಮೇಲೆ ನೀವು ಹೇಗೆ ಹೇಳಿದರೆ ಹಾಗೆ” ಎಂದೆಲ್ಲಾ ಹೇಳಿದಮೇಲೆ ಯಾಕೋ ಹಠ ಸಾಧಿಸಲು ಮನಸ್ಸಾಗಲಿಲ್ಲ. ‘ಆಯಿತು..ನೀವು ದೊಡ್ಡವರು.. ನಿಮ್ಮ ಮಾತುಗಳನ್ನು ಧಿಕ್ಕರಿಸುವಷ್ಟು ಉದ್ಧಟತನ ನನಗಿಲ್ಲ.. ಇದೊಂದು ದಿನ ಉಳಿದುಕೊಳ್ಳುತ್ತೇನೆ’ ಎಂದು ನುಡಿದು ಅವರನ್ನು ಕಳಿಸಿಕೊಟ್ಟೆ. ಇಂಥದೊಂದು ಪ್ರಸಂಗ ನನ್ನ ಬದುಕಿನಲ್ಲಿ ಘಟಿಸಿದ್ದು ಇದೇ ಮೊದಲಿನದ್ದಾಗಿ ಮನಸ್ಸು ತುಂಬಾ ಗಲಿಬಿಲಿಗೊಂಡುಬಿಟ್ಟಿತು. ಏನು ಮಾಡಲೂ ತೋಚದೇ ಹಾಗೇ ಹಾಸಿಗೆಯ ಮೇಲುರುಳಿಕೊಂಡು ಶೂನ್ಯವನ್ನೇ ದಿಟ್ಟಿಸುತ್ತಾ ಮಲಗಿದ್ದೆ. ಅರ್ಧ ತಾಸು ಕಳೆದಿರಬಹುದು.. ಬಾಗಿಲು ಬಡಿದ ಸದ್ದಾಗಿ ಎದ್ದು ಹೋಗಿ ನೋಡಿದರೆ ಅವಧಾನಿಗಳು, ಭಂಡಾರಿಯವರು ಭಟ್ಟರನ್ನೂ ಕರೆದುಕೊಂಡು ಬಂದಿದ್ದಾರೆ! ಮತ್ತೆ ಸಮರಾತ್ರಿಯವರೆಗೂ ಮಾತುಕತೆ—ಚರ್ಚೆ ನಡೆಯಿತು.

“ಒಮ್ಮೊಮ್ಮೆ ಹತೋಟಿ ತಪ್ಪಿ ಒಂದು ಮಾತು ಹೆಚ್ಚಾಗಿ ಆಡಿಬಿಡುತ್ತೇವೆ.. ಸಂಬಂಧ ಪಟ್ಟವರಿಗೆ ಅದರಿಂದ ನೋವೂ ಆಗುತ್ತದೆ..ನಿಜ. ಆದರೆ ಅದನ್ನು ಅಲ್ಲಿಗಲ್ಲಿಗೇ ಬಿಟ್ಟುಬಿಡುವುದು ಒಳ್ಳೆಯದು. ನೀವಿಬ್ಬರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಈಗೀಗ ನಮ್ಮ ಈ ಭಾಗದಲ್ಲಿ ರಂಗಭೂಮಿ ಚಟುವಟಿಕೆ ಗರಿಗೆದರುತ್ತಿದೆ.. ನಿಮ್ಮ ಮುನಿಸುಗಳು ಬೀರುವ ಕೆಟ್ಟ ಪರಿಣಾಮದಿಂದ ಅದು ಕುಂಠಿತವಾಗಿಬಿಡಬಾರದು.. ಇನ್ನೊಂದೇ ಒಂದು ಮಾತನ್ನೂ ಆಡದೇ ನಾಳೆಯಿಂದ ತಾಲೀಮು ಮುಂದುವರಿಸಿ” ಎಂದು ಭಂಡಾರಿಯವರು ಭರತವಾಕ್ಯ ನುಡಿದರು. ಅವರ ಆ ಮಾತಿಗೆ ನಾನು ಶರಣಾಗಿ ಹೋದೆ. ಭಟ್ಟರೂ ಮೌನವಾಗಿ ತಲೆಯಾಡಿಸಿ ಸಮ್ಮತಿ ಸೂಚಿಸಿದರು. ಹೀಗೆ ಅಹಿತಕರ ಪ್ರಸಂಗವೊಂದು ಘಟಿಸಿ ಸುಖಾಂತವನ್ನು ಕಂಡಿತಲ್ಲದೇ ನಾಟಕವೂ ಯಶಸ್ವಿಯಾಗಿ ಪ್ರದರ್ಶಿತವಾಗಿ ಅಲ್ಲಿಯ ಜನರ ಮೆಚ್ಚುಗೆಗೆ ಪಾತ್ರವಾಯಿತು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: