ಶ್ರೀನಿವಾಸ ಪ್ರಭು ಅಂಕಣ – ‘ಅವಾಅವಾ ಕುಚಬು ಲುತಾದೆ’..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

85

ಅಂದು ಬೆಳಿಗ್ಗೆ ನನ್ನನ್ನು ತಮ್ಮ ಛೇಂಬರ್ ಗೆ ಕರೆಸಿಕೊಂಡ ಆ ಹಿರಿಯ ಅಧಿಕಾರಿಣಿ ಏನೋ ಮಹತ್ವದ ಸಂಶೋಧನೆಯನ್ನು ಮಾಡಿದವರ ರೀತಿ ಮಾತು ಆರಂಭಿಸಿದರು:”ನನಗೆ ಎಲ್ಲಾ ಗೊತ್ತಾಗಿಹೋಯ್ತು ಪ್ರಭು ಅವರೇ.. ಎಲ್ಲಾ ವಿಷಯ ಗೊತ್ತಾಗಿಹೋಯ್ತು!” ರಹಸ್ಯ ಭೇದಿಸಿದ ಶೆರ್ಲಾಕ್ ಹೋಮ್ಸ್ ನ ಧ್ವನಿಯಲ್ಲೂ ಅಷ್ಟು ಉತ್ಸಾಹ—ಸಂಭ್ರಮ ಇರುತ್ತಿತ್ತೋ ಇಲ್ಲವೋ.. ನಮ್ಮ ಅಧಿಕಾರಿಣಿ ಮಾತ್ರ ಪರಮೋತ್ಸಾಹದಲ್ಲಿ ವಿಜೃಂಭಿಸುತ್ತಿದ್ದರು. ನಾನೂ ಸಮಾಧಾನವಾಗಿಯೇ ಕೇಳಿದೆ: “ಏನು ಮೇಡಂ? ಏನದು ನಿಮಗೆ ಪತ್ತೆಯಾಗಿರೋದು?”


ಅದೇ ಯುದ್ಧ ಗೆದ್ದ ಉಮೇದಿನಲ್ಲಿಯೇ ಕಣ್ಣು ಬಾಯಿ ಹೊರಳಿಸುತ್ತಾ ಆಕೆ ಮುಂದುವರಿಸಿದರು: “ನನಗೆ ಎಷ್ಟು ಬೇಜಾರಾಯ್ತು ಗೊತ್ತಾ? ನಿಮ್ಮಿಂದ ನಾನಿದನ್ನ ನಿರೀಕ್ಷೆ ಮಾಡಿರಲಿಲ್ಲ..ಛೆ..ಅಲ್ರೀ..ನೀವು ಕಲಾವಿದರ ಹತ್ರ ಎಲ್ಲಾ ದುಡ್ಡು ಕಲೆಕ್ಟ್ ಮಾಡ್ತಾ ಇದೀರಂತಲ್ರೀ! ಯಾಕೆ ಹೀಗೆ ಮಾಡ್ತಿದೀರಾ?..ಛೆ! ಈ ವಿಷಯ ಕೇಳಿ ನನಗೇ ಎಷ್ಟು ನಾಚಿಕೆಯಾಯ್ತು ಗೊತ್ತಾ?”. ಓಹೋ! ನಾನು ಅವರ ಊಟ ತಿಂಡಿಗೆಂದೇ ಕಲಾವಿದರ ಬಳಿ ಕೇಳಿ ಪಡೆದಿದ್ದ ಹಣಕ್ಕೆ ‘ವಸೂಲಿ’ಯ ಬಣ್ಣ ಬಳಿದು ಯಾರೋ ‘ಪರಮ ಮಿತ್ರ’ರು ಮೂಗರ್ಜಿ ರವಾನಿಸಿದ್ದಾರೆ! ಯಾಕೋ ಅವರ ಮಾತು ಕೇಳಿ ವಿಪರೀತ ಸಿಟ್ಟು ಬಂದುಬಿಟ್ಟಿತು. ‘ನಿಮ್ಮ ಮನೆಯಿಂದಲೇ 10—12ಜನಕ್ಕೆ ಕ್ಯಾರಿಯರ್ ಊಟ ಕಳಿಸಿಬಿಡಿ.. ಯಾರನ್ನೂ ಏನೂ ಕೇಳೋಲ್ಲ’ ಎಂದು ಸಿಡುಕಿಬಿಡಬೇಕೆನ್ನಿಸಿಬಿಟ್ಟಿತು. ಆದರೆ ಮೊದಲೇ ಹಿತ್ತಾಳೆ ಕಿವಿಯ ಆ ಅಧಿಕಾರಿಣಿ ನಾನು ಏನೇ ಸಮಂಜಸ ವಿವರಣೆಗಳನ್ನು ನೀಡಿದರೂ, ವಸ್ತುಸ್ಥಿತಿಯನ್ನು ವಿವರಿಸಿದರೂ ಅರ್ಥಮಾಡಿಕೊಳ್ಳುವ ಮನೋಧರ್ಮದವರಾಗಿರಲಿಲ್ಲ.

ಅವರು ಆ ವೇಳೆಗಾಗಲೇ ನನ್ನನ್ನು ಭ್ರಷ್ಟನೆಂದು ತೀರ್ಮಾನಿಸಿ ಒಂದು ಹಣೆಪಟ್ಟಿ ಹಚ್ಚಿಯಾಗಿತ್ತು. ಹಾಗಾಗಿ ಅವರ ಮುಂದೆ ಕಂಠಶೋಷಣೆ ಮಾಡಿಕೊಳ್ಳದೆ ಸೀದಾ ನಿರ್ದೇಶಕ ಗುರುನಾಥ್ ಅವರ ಬಳಿ ಹೋಗಿ ಎಲ್ಲಾ ವಿಷಯಗಳನ್ನೂ ಸವಿಸ್ತಾರವಾಗಿ ವಿವರಿಸಿ ಹೇಳಿ ಕೊನೆಗೆ, “ನಾನು ಈ ರೀತಿ ಸಲ್ಲದ ಆರೋಪಗಳನ್ನು ಹೊರಲು ಸಿದ್ಧನಿಲ್ಲ ಸರ್.. ಇಂಥ ಪ್ರಸಂಗಗಳೇ ಎದುರಾಗುವುದಾದರೆ ನಾನು ಹೊರಾಂಗಣ ಚಿತ್ರೀಕರಣ ಮಾಡುವುದನ್ನೇ ಬಿಟ್ಟುಬಿಡುತ್ತೇನೆ, ಸ್ಟುಡಿಯೋದಲ್ಲೇ ನಾಟಕಗಳನ್ನು ಮಾಡಿಕೊಂಡಿದ್ದರೆ ಈ ಬಗೆಯ ಸಮಸ್ಯೆಗಳು ಎದುರಾಗುವುದೇ ಇಲ್ಲ, ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಹಣವನ್ನೂ ಕಳೆದುಕೊಂಡು ಅಪವಾದವನ್ನೂ ಹೊತ್ತುಕೊಳ್ಳುವುದು ಸಾಧ್ಯವಿಲ್ಲ, ಈಗ ಮಾಡುತ್ತಿರುವ ಒಂದು ಪ್ರಸಂಗ ಮುಗಿಯುತ್ತಿದ್ದಂತೆ ಶೂಟಿಂಗ್ ನಿಲ್ಲಿಸಿಬಿಡುತ್ತೇನೆ” ಎಂದು ಒಂದೇ ಸಮನೆ ಪಟಪಟನೆ ಒದರಿಬಿಟ್ಟೆ.

ನಮ್ಮ ನಿರ್ದೇಶಕರು ನಸುನಗುತ್ತಾ, “ರಿಲ್ಯಾಕ್ಯ್ ಶ್ರೀನಿವಾಸ್ ರಿಲ್ಯಾಕ್ಸ್! ಯಾರ ಯಾರ ಮಾತಿಗೋ ನೀನು ತಲೆ ಕೆಡಿಸಿಕೋಬೇಕಾದ ಅಗತ್ಯ ಇಲ್ಲ.. ನಾನು ನಿನ್ನ ಜತೆಗಿದ್ದೀನಿ..ನೀನೇನೂ ಚಿಂತೆ ಮಾಡಬೇಡ..ಇನ್ನು ಯಾವತ್ತೂ ಅವರು ನಿನ್ನ ಬಗ್ಗೆ ಮಾತಾಡೋಲ್ಲ.. ಸರೀನಾ? ಶೂಟಿಂಗ್ ನಿಲ್ಲಿಸೋ ಮಾತಾಡಬೇಡ” ಎಂದು ಸಮಾಧಾನ ಮಾಡಿದರು. ಆದರೂ ಅಂಥದೊಂದು ಒಡಕು ಮಾತು ಬಂದದ್ದು ಒಂದಷ್ಟು ದಿನ ಮನಸ್ಸಿನ ನೆಮ್ಮದಿಯನ್ನೇ ಹಾಳುಮಾಡಿದ್ದಂತೂ ನಿಜ.

‘ಅಜಿತನ ಸಾಹಸಗಳು’ ಧಾರಾವಾಹಿಯ ಹೆಚ್ಚಿನಂಶ ಎಲ್ಲಾ ಕಂತುಗಳ ಛಾಯಾಗ್ರಹಣವನ್ನು ಮಾಡಿದವರು ಗಣೇಶ್ ರಾವ್ ಅವರು. ಗಣೇಶ್ ರಾವ್ ಅವರು ಬಹಳ ಒಳ್ಳೆಯ ಛಾಯಾಗ್ರಾಹಕರು, ಮಿತಭಾಷಿ ಹಾಗೂ ಸೌಜನ್ಯತೆಯ ಸಾಕಾರದಂತಿದ್ದ ಸಹೃದಯಿ. ವಾಸ್ತವವಾಗಿ ಹಾಗೆ ಒಬ್ಬರೇ ಛಾಯಾಗ್ರಾಹಕರನ್ನು ಪ್ರತಿಬಾರಿಯೂ ನೇಮಿಸಿಕೊಳ್ಳುವುದಕ್ಕೆ ನಮ್ಮ ಕೇಂದ್ರದಲ್ಲಿ ಒಂದು ತೊಡಕಿತ್ತು. ನಮ್ಮ ಚಿತ್ರೀಕರಣದ ದಿನ ಯಾರು ಅಂದಿನ ಪಾಳಿಯಲ್ಲಿರುತ್ತಾರೋ ಅವರನ್ನೇ ನಾವು ನಮ್ಮ ಚಿತ್ರೀಕರಣಕ್ಕೆ ಕರೆದೊಯ್ಯಬೇಕಿತ್ತು. ಜೊತೆಗೆ ಈ ರೀತಿಯ ಹೊರಾಂಗಣ ಚಿತ್ರೀಕರಣದ ಅನುಭವ ಎಲ್ಲಾ ಛಾಯಾಗ್ರಾಹಕರಿಗೂ ದೊರೆಯಲೆಂಬುದು ಛಾಯಾಗ್ರಹಣ ವಿಭಾಗದ ಮುಖ್ಯಸ್ಥರ ಅಭಿಲಾಷೆಯಾಗಿತ್ತು. ನಾನೋ, ಅಷ್ಟೂ ಕಂತುಗಳ ಛಾಯಾಗ್ರಹಣವನ್ನು ಒಬ್ಬರೇ ನಿರ್ವಹಿಸಿದರೆ ಚೆನ್ನಾಗಿರುತ್ತದೆಂದು ಯೋಚಿಸುತ್ತಿದ್ದೆ. ನನ್ನ ಇಚ್ಛೆ ತಾನಾಗಿಯೇ ಮೈಗೂಡುವಂತಹ ಒಂದು ಪ್ರಸಂಗ ಒದಗಿ ಬಂದಿತು! ಒಂದು ದಿನ ಅಂದಿನ ಪಾಳಿಯಲ್ಲಿದ್ದ ಛಾಯಾಗ್ರಾಹಕರು ನಮ್ಮೊಟ್ಟಿಗೆ ಶೂಟಿಂಗ್ ಗೆ ಬಂದರು. ಬೆಳಗಿನಿಂದ ಸಂಜೆಯ ತನಕ ಪರಮ ಉತ್ಸಾಹದಿಂದಲೇ ಕೆಲಸ ಮಾಡಿದರು. ಸಂಜೆಯಾದರೂ ಶೂಟಿಂಗ್ ಮುಗಿಯದೇ ಇದ್ದಾಗ ಅವರಿಗೆ ಆತಂಕ ಶುರುವಾಗಿಬಿಟ್ಟಿತು. ‘ಇನ್ನೂ ಎಷ್ಟು ಹೊತ್ತಣ್ಣಾ?’ ಎಂದು ಪದೇ ಪದೇ ಕೇಳತೊಡಗಿದರು. ‘ಇನ್ನೂ ಸ್ವಲ್ಪ ತಡ ಆಗುತ್ತೆ’ ಎಂದು ನಾನೂ ಹೇಳುತ್ತಲೇ ಬಂದೆ.

ಗಂಟೆ ಎಂಟಾಯಿತು.. ಒಂಬತ್ತಾಯಿತು.. ಹತ್ತಾಯಿತು. ಶೂಟಿಂಗ್ ಮುಗಿಯುವ ಲಕ್ಷಣವೇ ಕಾಣದಿದ್ದಾಗ ಆ ಛಾಯಾಗ್ರಾಹಕರು ಒಂದೇ ಸಮ ಹಲುಬತೊಡಗಿದರು. ‘ನನ್ನ ಕೆಲಸದ ಸಮಯ ಮುಗಿದು ಎಷ್ಟೋ ಹೊತ್ತಾಯಿತು.. ನೀನೇನಣ್ಣಾ ಹೀಗೆ ಗೋಳು ಹುಯ್ಕೋತಿದೀಯಾ!! ಇನ್ನು ಸ್ವಲ್ಪ ಹೊತ್ತಾದ್ರೆ ನನಗೆ ಕಣ್ಣು ಮಂಜಾಗಿಬಿಡುತ್ತೆˌಸರಿಯಾಗಿ ಕಾಣಿಸೋಲ್ಲ.. ಬೇಗ ಮುಗಿಸು'” ಎಂದು ಗೊಣಗತೊಡಗಿದರು! ನಮ್ಮ ಕೇಂದ್ರದಲ್ಲೋ ನಮಗೆ ಬೇಕೆಂದಾಗಲೆಲ್ಲಾ ಕ್ಯಾಮರಾ ದೊರಕುವಷ್ಟು ಸುಸ್ಥಿತಿ ಇನ್ನೂ ಬಂದಿರಲಿಲ್ಲ! ಸಿಕ್ಕಾಗಲೇ ಅದರ ಪೂರ್ತಿ ಉಪಯೋಗ ಪಡೆದುಕೊಂಡು ಬಿಡಬೇಕು ಎನ್ನುವುದು ನಮ್ಮ ಹಂಚಿಕೆ! ‘ಪ್ಯಾಕ್ ಅಪ್’ ಎಂದು ನಾನು ಘೋಷಿಸುವ ತನಕ ಗೊಣಗುತ್ತಲೇ ಇದ್ದ ಆ ಛಾಯಾಗ್ರಾಹಕರು ಹೊರಡುವ ಮುನ್ನ ಹೇಳಿದ ಒಂದು ಮಾತು ಇನ್ನೂ ನನ್ನ ಕಿವಿಗಳಲ್ಲಿ ಗುಂಯ್ ಗುಡುತ್ತಿದೆ: “ನಂದೊಂದು ಚಿಕ್ಕ ಅಡ್ವೈಸ್ ಇಷ್ಟೊಂದೆಲ್ಲಾ ಕೆಲಸ ಮಾಡೋಕೆ ಹೋಗಬೇಡ. ಸರಕಾರದ ಕೆಲಸ ದೇವರ ಕೆಲಸ ಅನ್ನೋದೇನೋ ನಿಜ. ಆದರೆ ಸರಕಾರ ಕೊಡೋ ಬೇಸಿಕ್ ಗೆ ನೀನು ಮಾಡ್ತಿರೋದು ತುಂಬಾ ಜಾಸ್ತಿ ಕೆಲಸ! ಹಾಗಂತ ಅದಕ್ಕೋಸ್ಕರ ಯಾರೂ ನಿನಗೆ ಮೆಡಲ್ ಏನೂ ಕೊಡೋದಿಲ್ಲ.. ಬೇಸಿಕ್ಕೂ ಜಾಸ್ತಿ ಮಾಡೋಲ್ಲ!ಹಾಸಿಗೆ ಇದ್ದಷ್ಟು ಕಾಲು ಚಾಚು.. ಬೇಸಿಕ್ ಇದ್ದಷ್ಟು ಕೆಲಸ ಮಾಡು! ಉದ್ಧಾರ ಆಗ್ತೀಯಾ!”

ಇದಾದ ಮೇಲೆ ಬೇರೆ ಛಾಯಾಗ್ರಾಹಕರೂ ನಮ್ಮ ಜೊತೆ ಬರಲು ಹಿಂದೇಟು ಹಾಕತೊಡಗಿದರು! ನನ್ನ ಶೂಟಿಂಗ್ ದಿನ ಡ್ಯೂಟಿ ಹಾಕಿದರೆ ‘ರಜಾ ಹಾಕಿಬಿಡ್ತೀವಿ’ ಎಂದು ಹೆದರಿಸಿದವರೂ ಉಂಟು! ಹಾಗಾಗಿ ಯಾವ ತಕರಾರಿಲ್ಲದೆ ಕೆಲಸ ಮಾಡುತ್ತಿದ್ದ ಗಣೇಶ ರಾವ್ ನಮ್ಮ ಖಾಯಂ ಛಾಯಾಗ್ರಾಹಕರಾಗಿಬಿಟ್ಟರು! ಒಮ್ಮೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ರಘುನಾಥ್ ಎಂಬ ಮತ್ತೊಬ್ಬ ಸಜ್ಜನ ಕ್ಯಾಮರಾಮನ್ ನಮ್ಮೊಟ್ಟಿಗೆ ಬಂದಿರುವುದುಂಟು ಅಷ್ಟೇ.

ಅಜಿತನ ಸಾಹಸಗಳು ಧಾರಾವಾಹಿಯ ಎಲ್ಲ ಕಂತುಗಳ ಸಂಕಲನವನ್ನೂ ಅತ್ಯಂತ ಸೊಗಸಾಗಿ ಮಾಡಿಕೊಟ್ಟವನು ಗುಣಶೇಖರ. ಪುಣೆಯಲ್ಲಿ ನಮ್ಮ ಜೊತೆಯಲ್ಲಿಯೇ ತರಬೇತಿ ಪಡೆದುಕೊಂಡ ಗುಣಶೇಖರ ಅಲ್ಲಿಯೂ ನನ್ನ ಕಿರುಚಿತ್ರಗಳ ಸಂಕಲನವನ್ನು ತುಂಬಾ ಚೆನ್ನಾಗಿ ಮಾಡಿಕೊಟ್ಟಿದ್ದ. ಹಗಲು ರಾತ್ರಿ ಅನ್ನದೇ ಕರೆದಾಗಲೆಲ್ಲಾ ಸಂಕಲನ ಕಾರ್ಯಕ್ಕೆ ಹಾಜರಾಗಿ ನಮಗೆ ಸಂಪೂರ್ಣ ಬೆಂಬಲವನ್ನು ನೀಡಿದವನು ಈ ಆತ್ಮೀಯ ಮಿತ್ರ.

ಎಷ್ಟೋ ಕುಂದು ಕೊರತೆಗಳ ನಡುವೆಯೇ ‘ಅಜಿತನ ಸಾಹಸಗಳು’ ಧಾರಾವಾಹಿಯನ್ನು ಚಿತ್ರಿಸಿದರೂ ಒಟ್ಟಾರೆ ನಿರ್ಮಾಣದ ಪ್ರಕ್ರಿಯೆ ತುಂಬಾ ಸಂತಸವನ್ನು ನೀಡಿತು. ಕಾನನ್ ಡೈಲ್ ರ ಸುಮಾರು 15 ಶೆರ್ಲಾಕ್ ಹೋಮ್ಸ್ ಕಥೆಗಳನ್ನು ನಾನು ನಮ್ಮ ಧಾರಾವಾಹಿಗೆ ಬಳಸಿಕೊಂಡೆ. ಅಲ್ಪಸಮಯದಲ್ಲೇ ‘ಅಜಿತನ ಸಾಹಸಗಳು’ ಧಾರಾವಾಹಿ ಅಪಾರ ಜನಪ್ರಿಯತೆಯನ್ನು ಗಳಿಸಿಬಿಟ್ಟಿತು. ರಾಜಾರಾಮನಂತೂ ಪತ್ತೇದಾರ ಅಜಿತನಾಗಿ ಮನೆ ಮಾತಾಗಿ ಹೋದ. ಡಾ॥ರಾವ್ (ಡಾ॥ವಾಟ್ಸನ್) ಆಗಿ ಪೃಥ್ವೀರಾಜ್ ಅವರದ್ದೂ ಸಹಾ ಬಲು ಸಂಯಮದ ಅಭಿನಯ. ಕನ್ನಡ ರಂಗಭೂಮಿಯ ಅನೇಕ ಪ್ರತಿಭಾವಂತ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿ ಧಾರಾವಾಹಿಯ ಮೌಲ್ಯವನ್ನು ಹೆಚ್ಚಿಸಿದರು. ‘ಜೂಪಿಟರ್’ ಹಾಗೂ ‘ಪಚ್ಚೆಹಾರದ ಪ್ರಕರಣ’ ಕೃಷ್ಣಶರ್ಮ ಹಾಗೂ ಸಂಧ್ಯಾಶರ್ಮ ಅವರು ಸಿದ್ಧಪಡಿಸಿಕೊಟ್ಟ ರೂಪಾಂತರ. ಇವೆರಡೂ ಪ್ರಸ್ತುತಿಗಳು ನಮಗೆ ತುಂಬಾ ತೃಪ್ತಿ—ಸಮಾಧಾನಗಳನ್ನು ನೀಡಿದ ಪ್ರಸ್ತುತಿಗಳು.

ಪಚ್ಚೆಹಾರದಲ್ಲಿ ರಾಜಾರಾಂ—ಪೃಥ್ವಿಯರ ಜತೆಗೆ ಹಿರಿಯ ನಟ ಪ್ರಸನ್ನ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಹಿರಿಯ ಅಧಿಕಾರಿಯಾಗಿದ್ದ ಅಚ್ಯುತಾನಂತ ಸ್ವಾಮಿಯವರು, ಸಂಚಯ ತಂಡದ ಶೀಲಾ ಹಾಗೂ ವೇದಪ್ರದಾ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ವಿಶೇಷ ಸಂಗತಿ ಎಂದರೆ ದೂರದರ್ಶನದಲ್ಲಿ ನನ್ನ ಸಹಾಯಕನಾಗಿದ್ದ ರಾಜೇಂದ್ರ ಕಟ್ಟಿ ಈ ಕಂತಿನಲ್ಲಿ ಮುಗ್ಧ ನಾಯಕನಾಗಿ ಸಮರ್ಥವಾಗಿ ಅಭಿನಯಿಸಿದ್ದ. ಶರ್ಮಾ ಅವರ ಸೊಗಸಾದ ರೂಪಾಂತರ ಹಾಗೂ ಕಲಾವಿದರೆಲ್ಲರ ಉತ್ತಮ ಅಭಿನಯದಿಂದಾಗಿ ಈ ಒಂದು ಪ್ರಸ್ತುತಿ ತುಂಬಾ ಜನಪ್ರಿಯವಾಗಿ ಹೋಯಿತು. ‘ಜೂಪಿಟರ್’ ಕಥೆಯಲ್ಲಿ ಒಂದು ಕುದುರೆಯೇ ಮುಖ್ಯ ಪಾತ್ರವಾದ್ದರಿಂದ ರೇಸ್ ಕೋರ್ಸ್ ನಲ್ಲಿ ಚಿತ್ರೀಕರಣ ನಡೆಸಬೇಕಿತ್ತು. ಕುದುರೆಗಳ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದ ನರೇಂದ್ರ ಅನ್ನುವವರು ರೇಸ್ ಕೋರ್ಸ್ ನಲ್ಲಿ ಚಿತ್ರೀಕರಣ ನಡೆಸಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಟ್ಟರು.

‘ನೀಲಕಂಠಯ್ಯನ ಉಯಿಲು’ ಕಥಾಭಾಗದಲ್ಲಿ ಮೈಕೋ ಚಂದ್ರು, ‘ಭವಾನಿಶಂಕರನ ದುರುಳತನ’ ಕಥಾಭಾಗದಲ್ಲಿ ನಳಿನಿ ಮೂರ್ತಿ ಹಾಗೂ ಕೃಷ್ಣಶರ್ಮ, ‘ನಾಪತ್ತೆಯಾದ ಪ್ರೇಮಿ’ ಎಪಿಸೋಡ್ ಗಳಲ್ಲಿ ಅಪರ್ಣಾ ಹಾಗೂ ಸಿಹಿಕಹಿ ಚಂದ್ರು, ‘ಭಿಕ್ಷುಕನ ಪ್ರಸಂಗ’ದಲ್ಲಿ ಸಂಕೇತ್ ಕಾಶಿ ಹಾಗೂ ಕಲ್ಪನಾ ನಾಗಾನಾಥ್ ,’ಅಬ್ಬಾ ಆ ಹೆಣ್ಣು’ ಪ್ರಕರಣದಲ್ಲಿ ಸಂಧ್ಯಾ ಎಸ್.ಕುಮಾರ್ ಹಾಗೂ ಶಿವಮೊಗ್ಗ ವೆಂಕಟೇಶ್ ,’ನರ್ತಿಸುವ ರೇಖೆಗಳು’ ಕಂತುಗಳಲ್ಲಿ ವೈಜಯಂತಿ ಕಾಶಿ ಹಾಗೂ ಕಿಟ್ಟಿ, ಮೂರು ಬೊಂಬೆಗಳ ರಹಸ್ಯ’ ಪ್ರಕರಣದಲ್ಲಿ ಸುರೇಶ್ ,ಹೊನ್ನಯ್ಯ ಹಾಗೂ ಗಾಯತ್ರಿ ಪ್ರಭಾಕರ್…ಇವರುಗಳೆಲ್ಲಾ ನೀಡಿದ ಅಭಿನಯ ಅನನ್ಯವಾದುದು. ತೀರಾ ಈಚಿನವರೆಗೂ ‘ಅಜಿತನ ಸಾಹಸಗಳು’ ಧಾರಾವಾಹಿ ಮತ್ತೆ ಮತ್ತೆ ದೂರದರ್ಶನದಿಂದ ಮರು ಪ್ರಸಾರವಾಗುತ್ತಲೇ ಇತ್ತು ಎಂದರೆ ಅದು ಗಳಿಸಿಕೊಂಡ ಜನಪ್ರಿಯತೆಯನ್ನು ನೀವೇ ಊಹಿಸಿಕೊಳ್ಳಬಹುದು. ಹೀಗೆ ದೂರದರ್ಶನದ್ದೇ ನಿರ್ಮಾಣದ ಪ್ರಪ್ರಥಮ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಿಸಿದ ಹೆಮ್ಮೆ—ಸಂತಸ ನನ್ನದು. ಜೊತೆಗೇ ಇದ್ದು ಸಂಪೂರ್ಣ ಸಹಕಾರವನ್ನು ನೀಡುತ್ತಾ ಆಗಾಗ್ಗೆ ಒಳ್ಳೆಯ ಸಲಹೆಗಳನ್ನೂ ನೀಡುತ್ತಾ ನೆರವಾದವನು ಕಿರಿಯ ಗೆಳೆಯ ರಾಜೇಂದ್ರ ಕಟ್ಟಿ. ಈಗಲೂ ಸಹಾ ಕೆಲವರು ‘ಅಜಿತನ ಸಾಹಸ’ಗಳನ್ನು ನೆನಪು ಮಾಡಿಕೊಂಡು ಬೆನ್ನು ತಟ್ಟುವುದುಂಟು!

ಈ ಧಾರಾವಾಹಿಯ ಸಮಯದಲ್ಲಿ ನಾನು ಅದೆಷ್ಟು ಕೆಲಸಗಳಲ್ಲಿ ಮುಳುಗಿರುತ್ತಿದ್ದೆನೆಂದರೆ ಎಷ್ಟೋ ದಿನ ಮುದ್ದು ಮಗಳು ರಾಧಿಕಾಳನ್ನು ನೋಡಲೂ ಆಗುತ್ತಿರಲಿಲ್ಲ. ಬೆಳಿಗ್ಗೆ ನಾನು ಎದ್ದು ಹೊರಡುವ ವೇಳೆಗೆ ಅವಳಿನ್ನೂ ಎದ್ದಿರುತ್ತಿರಲಿಲ್ಲ.. ರಾತ್ರಿ ನಾನು ಬರುವ ವೇಳೆಗೆ ಅವಳು ಮಲಗಿಬಿಟ್ಟಿರುತ್ತಿದ್ದಳು! ಹಾಗಾಗಿ ಆಗ ಒಂದಷ್ಟು ತಿಂಗಳುಗಳ ಕಾಲ ಅವಳ ತೊದಲು ಮಾತುಗಳನ್ನು ಕೇಳುವ, ತಡವರಿಸುತ್ತಾ ತಪ್ಪು ಹೆಜ್ಜೆ ಹಾಕುತ್ತಾ ‘ಅಣ್ಣ’ ‘ಅಮ್ಮ’ ಎಂದು ಉಲಿಯುತ್ತಾ ಮನೆಯ ತುಂಬಾ ಅಡ್ಡಾಡುವುದನ್ನು ನೋಡುವ ಸಂಭ್ರಮ—ಸಂತಸದಿಂದ ವಂಚಿತನಾಗಿಬಿಟ್ಟೆ ಎಂದೇ ಹೇಳಬೇಕು! ಏನೇ ಹೇಳಿ, ಮಕ್ಕಳಾದ ಮೇಲೆ ಪುರುಷನಲ್ಲಾಗುವ ಬದಲಾವಣೆಯೇ ಒಂದು ಪರಮ ಸೋಜಿಗ! ಹಿಂದೆಂದೂ ಬಹುಶಃ ಇದ್ದಿರದಿದ್ದ ಮಾರ್ದವತೆ—ಆರ್ದ್ರತೆಗಳು… ಎಚ್ಚರ—ಜವಾಬ್ದಾರಿಗಳು ಮೈಮನಗಳನ್ನು ಆವರಿಸಿಕೊಂಡುಬಿಡುತ್ತವೆ! ಬಿಡುವಿಲ್ಲದೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾಗಲೂ ಧುತ್ತೆಂದು ಮಗಳ ಆಟೋಟಗಳ ನೆನಪು ನುಗ್ಗಿಬಂದು ‘ಕೂಡಲೇ ಮನೆಗೆ ಹೋಗಿ ಪುಟ್ಟಕಂದಮ್ಮನನ್ನು ತೆಕ್ಕೆಯಲ್ಲಿ ಅವುಚಿ ಹಿಡಿದು ಸಂಭ್ರಮಿಸಬೇಕೆಂಬ ತುಡಿತ ಶುರುವಾಗಿಬಿಡುತ್ತಿತ್ತು!

ಹಾಗೊಂದು ದಿನ ನಾನು ಸಂಜೆಯ ಪಾಳಿಯಲ್ಲಿದ್ದಾಗ ಮನೆಯಲ್ಲೇ ಮಗಳೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಾ ಅವಳ ಮುದ್ದು ತೊದಲು ಮಾತುಗಳನ್ನಾಲಿಸುತ್ತಾ ಸುಖಿಸುತ್ತಿದ್ದೆ. ರಂಜನಿ ಕಾಲೇಜಿಗೆ ಹೋಗಿದ್ದಳು. ಮನೆಯಲ್ಲಿದ್ದ ಅಕ್ವೇರಿಯಂ ಮುಂದೆ ನಿಂತು ತದೇಕ ಚಿತ್ತಳಾಗಿ ಮೀನುಗಳ ಚಲನವಲನಗಳನ್ನೇ ಬೆರಗಿನಿಂದ ನೋಡುತ್ತ ನಿಂತಿದ್ದ ಪುಟಾಣಿ ರಾಧಿಕಾ ಇದ್ದಕ್ಕಿದ್ದ ಹಾಗೆ ನನ್ನ ಬಳಿ ಓಡಿ ಬಂದು ನನ್ನ ಕುತ್ತಿಗೆಯನ್ನು ತೋಳುಗಳಿಂದ ಬಳಸಿ ಹಿಡಿದು, ‘ಅವಾಅವಾ ಕುಚಬು ಲುತಾದೆ’ ಎಂದು ಮುದ್ದುಮುದ್ದಾಗಿ ತೊದಲಿದಳು! ಏನೂ ಅರ್ಥವಾಗದ ನಾನು, ‘ಓನೋ ಚಿನ್ನಮ್ಮಾ ಅದು? ನಂಗೆ ಅರ್ಥವಾಗ್ತಿಲ್ವೇ!’ ಎಂದು ನಸುನಗುತ್ತಾ ಅವಳ ತೊದಲು ವಾಕ್ಯಕ್ಕೆ ಸಂಭ್ರಮಿಸುತ್ತಾ ಕೇಳಿದೆ.

ಅದುವರೆಗೆ ‘ಅಣ್ಣ’ ‘ಅಮ್ಮ’ ಬಬ್ಬ’ ಎಂಬ ಪದಗಳನ್ನಷ್ಟೇ ಪಲುಕುತ್ತಿದ್ದ ಪುಟಾಣಿ ಹೇಳಿದ ಮೊಟ್ಟಮೊದಲ ಪದಸಮುಚ್ಚಯವೂ ಅದೇ ಆಗಿತ್ತು! ಪುಟ್ಟ ಕಂದ ಅಕ್ವೇರಿಯಂ ಪಕ್ಕದಲ್ಲೇ ಇದ್ದ ಮ್ಯೂಸಿಕ್ ಸಿಸ್ಟಂನತ್ತ ಕೈತೋರುತ್ತಾ ಮತ್ತೊಮ್ಮೆ ‘ಅವಾಅವಾ ಕುಚಬು ಲುತಾದೆ’ ಎಂದುಲಿದಳು! ಅರೆ!ಇದೇನಿದು ಈ ಮೃದುಮಧುರ ತೊದಲಿನ ಅರ್ಥ ಎಂದು ನಾನು ಯೋಚನೆಯಲ್ಲಿ ಮುಳುಗಿದ್ದಾಗಲೇ ಥಟ್ಟನೆ ಅದೇನೆಂದು ಹೊಳೆದುಬಿಟ್ಟಿತು! “ಹವಾ ಹವಾ ಖುಷಬೂ ಲುಟಾದೇ”! ಆ ಸಮಯದಲ್ಲಿ ಬಹಳ ಜನಪ್ರಿಯವಾಗಿದ್ದ ಹಸನ್ ಜಹಾಂಗೀರ್ ನ ಪ್ರಸಿದ್ಧ ಹಾಡು! ಪದೇ ಪದೇ ಆ ಕ್ಯಾಸೆಟ್ ಅನ್ನು ಹಾಕುತ್ತಿದ್ದುದರಿಂದ ಆ ಹಾಡಿನ ಸಾಲು ಕಂದಮ್ಮನನ್ನು ಸೆಳೆದುಬಿಟ್ಟಿದೆ! ಬಹುಶಃ ಮನಸ್ಸಿನಲ್ಲೇ ನೂರೆಂಟು ಸಲ ಹೇಳಿಕೊಂಡು ಅಭ್ಯಾಸ ಮಾಡಿಕೊಂಡು ಮತ್ತೊಮ್ಮೆ ಆ ಹಾಡನ್ನು ಹಾಕಲು ನನಗೆ ಹೇಳುತ್ತಿದ್ದಾಳೆ! ಮನಸೂರೆಗೊಂಡ ಆ ಮುದ್ದುಮಾತುಗಳನ್ನು ಕೇಳಿ ನಾನು ಅದೆಷ್ಟು ಹಿಗ್ಗಿದೆನೋ.. ಅದೆಷ್ಟು ಸಂಭ್ರಮ ಪಟ್ಟೆನೋ! ರಂಜನಿ ಕಾಲೇಜಿನಿಂದ ಬರುವುದನ್ನೇ ಕಾದಿದ್ದು ಅವಳು ಬಂದೊಡನೆ ಅವಳಿಗೆ ‘ಗಾಳಿ ಗಂಧವನ್ನು ಸೂರೆಗೈದ'(ಹವಾ ಹವಾ ಖುಷಬೂ ಲುಟಾದೇ) ರಮ್ಯ ಪ್ರಸಂಗವನ್ನು ವರ್ಣಿಸಿದಾಗ ಪ್ರೀತಿಯಿಂದ ಮಗಳನ್ನಪ್ಪಿ ಸಂಭ್ರಮಿಸುವ ಸರದಿ ಅವಳದಾಗಿತ್ತು! ಬಹುಶಃ ಇಂಥ ಕ್ಷಣಗಳೇ ನಮ್ಮ ನೀರಸ ಬದುಕಿನ ಏಕತಾನದ ಶ್ರುತಿಯನ್ನು ಬದಲಿಸುವ ಝೇಂಕಾರಗಳು.. ಅತ್ಯಂತ ಸಾರ್ಥಕ ಹಾಗೂ ಸುಖದ ಗಳಿಗೆಗಳು!

ಇದೇ ಸಮಯದ ಮತ್ತೊಂದು ಮಹತ್ವದ ಬೆಳವಣಿಗೆಯ ಹಂತವೆಂದರೆ ಅಣ್ಣ—ಅಂದರೆ ನನ್ನ ತಂದೆಯವರು—ಲೌಕಿಕದಿಂದ ಹೆಚ್ಚು ಹೆಚ್ಚು ವಿಮುಖರಾಗುತ್ತಾ ಆಧ್ಯಾತ್ಮದತ್ತ— ಅತಿ ಧಾರ್ಮಿಕತೆಯತ್ತ ವಾಲಿದ್ದು. ಬೆಳಗಿನ ಜಾವ 3.30 ಕ್ಕೆ ಏಳುತ್ತಿದ್ದ ಅವರು ದಿನದ ಬಹುಪಾಲು ಸಮಯವನ್ನು ಅಧ್ಯಯನ—ಬರವಣಿಗೆಗಳಲ್ಲೇ ಕಳೆಯುತ್ತಿದ್ದರು. ತಮ್ಮ ವಿಚಾರಧಾರೆಗಳನ್ನು,ಅಗಾಧ ಜ್ಞಾನವನ್ನು, ಕಾಣ್ಕೆ—ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ಅವರಿಗೆ ಅತೀವವಾಗಿ ಇತ್ತಾದರೂ ನಮ್ಮ ನಮ್ಮ ಕೆಲಸಗಳ ಒತ್ತಡ ಹಾಗೂ ಆದ್ಯತೆಗಳ ಕಾರಣವಾಗಿ ನಮಗೆ ಅವರೊಟ್ಟಿಗೆ ಕೂರಲು ಸಾಧ್ಯವಾಗಲಿಲ್ಲ. ಅಕ್ಕಂದಿರು—ಭಾವಂದಿರು—ಅಣ್ಣಯ್ಯ ಹಾಗೂ ಅತ್ತಿಗೆ ಆಗಾಗ್ಗೆ ಅಣ್ಣನೊಂದಿಗೆ ಕುಳಿತು ಒಂದಷ್ಟು ಸತ್ಸಂಗಗಳನ್ನು ನಡೆಸಿದರೂ ನಮಗದು ನಮ್ಮ ಕಾರಣಕ್ಕಾಗಿಯೇ ಸಾಧ್ಯವಾಗದೇ ಹೋದದ್ದು ಇಂದಿಗೂ ನಾನು ಪರಿತಪಿಸಿಕೊಳ್ಳುವ ಸಂಗತಿ. ಅಣ್ಣನೇ ಆಗಾಗ್ಗೆ ಹೇಳುತ್ತಿದ್ದ ಮಾತು: “ಯಾವುದಕ್ಕೂ ಪ್ರಾಪ್ತಿ ಅನ್ನುವುದಿರಬೇಕು. ನಿಮ್ಮ ಬೊಗಸೆಯಲ್ಲಿ ಹಿಡಿಸುವಷ್ಟೇ ನೀರು ತುಂಬಿಕೊಳ್ಳಲು ಸಾಧ್ಯ.. ಅದಕ್ಕೂ ಪಡೆದುಕೊಂಡು ಬಂದಿರಬೇಕು”!

ಅಣ್ಣ ಹೆಚ್ಚುಕಡಿಮೆ ಏಕಾಂಗಿಯಾಗಿಯೇ ನಿಂತು ಶ್ರಮವಹಿಸಿ ಮಾಡಿದ ಮತ್ತೊಂದು ಬಹು ದೊಡ್ಡ ಸಾಧನೆಯೆಂದರೆ ‘ಭಾಗವತ ಪ್ರಕಾಶನ ಸಮಿತಿ’ಯನ್ನು ಸ್ಥಾಪಿಸಿದ್ದು! ಈ ಪ್ರಕಾಶನ ಸಂಸ್ಥೆಯ ವತಿಯಿಂದಲೇ ಹತ್ತಾರು ವರ್ಷಗಳ ಅವರ ಅಧ್ಯಯನದ ಫಲಶ್ರುತಿಯಾಗಿ ಮೂಡಿಬಂದ ಅನೇಕ ಕೃತಿಗಳನ್ನು ಪ್ರಕಟಿಸಿ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದು! ಇದು ನಿಜಕ್ಕೂ ಅಣ್ಣನ ಬಹು ದೊಡ್ಡ ಸಾಹಸಗಾಥೆ!!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: