ಶ್ರೀನಿವಾಸ ಪ್ರಭು ಅಂಕಣ – ಅಣ್ಣಾವ್ರ ಪ್ರಥಮ ಭೇಟಿಯ ಸಾರ್ಥಕ ಸಂದರ್ಭ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

80

1986—87 ರ ಆಜುಬಾಜಿನಲ್ಲಿಯೇ ನಾನು ನಟಿಸಿದ ಇನ್ನೆರಡು ಚಿತ್ರಗಳೆಂದರೆ ವಿಜಯ್ ಗುಜ್ಜಾರ್ ನಿರ್ದೇಶನದ ‘ಮಾರ್ಜಾಲ’ ಹಾಗೂ ‘ಕುಳಂದೈ ಏಸು’ ಖ್ಯಾತಿಯ ರಾಜನ್ ನಿರ್ದೇಶನದ ‘ಅಗ್ನಿದಿವ್ಯ’. ಆತ್ಮೀಯ ರಂಗಭೂಮಿ ಗೆಳೆಯ ವಿಜಯಕಾಶಿ ‘ಮಾರ್ಜಾಲ’ ಚಿತ್ರದ ನಾಯಕ ; ಇತ್ತೀಚೆಗಷ್ಟೇ ನಮ್ಮನ್ನಗಲಿದ ಹಿರಿಯ ರಂಗಭೂಮಿ ನಟ—ನಾಟಕಕಾರ ಲೋಹಿತಾಶ್ವ ಮುಖ್ಯ ಖಳನಾಯಕ; ನಾನು ಛೋಟಾ ಖಳನಾಯಕ! ಪ್ರತಿಭಾವಂತ ನಟಿಯೆಂದು ಆ ವೇಳೆಗಾಗಲೇ ಹೆಸರಾಗಿದ್ದ ಪದ್ಮಾ ವಾಸಂತಿಯವರದು ಮತ್ತೊಂದು ಮುಖ್ಯಪಾತ್ರ. ಆರ್.ಎನ್ ಜಯಗೋಪಾಲ್ ರ ಸೋದರರೂ ಶ್ರೇಷ್ಠ ಛಾಯಾಗ್ರಾಹಕರೆಂದು ಹೆಸರಾಗಿದ್ದವರೂ ಆದ ಆರ್.ಎನ್.ಕೃಷ್ಣ ಪ್ರಸಾದ್ ರು ಛಾಯಾಗ್ರಹಣದ ಹೊಣೆ ಹೊತ್ತಿದ್ದರು.

ಮಾಮೂಲು ವ್ಯಾಪಾರೀ ಚಿತ್ರಗಳ ಚೌಕಟ್ಟಿನಲ್ಲಿಯೇ ರೂಪುಗೊಳ್ಳುತ್ತಿದ್ದ ಚಿತ್ರವಾದರೂ ರಂಗಭೂಮಿ ಗೆಳೆಯರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದುದು, ಅವರೊಟ್ಟಿಗೆ ಒಂದಷ್ಟು ಸಾರ್ಥಕ ಸಮಯ ಕಳೆಯಲು ಅವಕಾಶವಾದದ್ದು ಹಿತವಾಗಿತ್ತು. ಪಾತ್ರವಾದರೂ ಅಷ್ಟೇ: ‘accident’ಚಿತ್ರದ ರಾಹುಲ್ ಪಾತ್ರದಷ್ಟು ಸಂಕೀರ್ಣವಾಗಿ ಇಲ್ಲದಿದ್ದರೂ ರೂಢಿಗತ ಕೆಟ್ಟ ಕಾಲೇಜ್ ಹುಡುಗನ ಪಾತ್ರ ಸ್ವಾರಸ್ಯಕರವಾಗಿಯೇ ಇತ್ತು ಎನ್ನಬಹುದು.ಕೆಟ್ಟ ಹುಡುಗನೇ ಆಗಿದ್ದರೂ ನಾಯಕಿಯನ್ನು ರಕ್ಷಿಸಲು ಹೋಗಿ ತಾನೇ ಪ್ರಾಣ ಕಳೆದುಕೊಳ್ಳುವ ಈ ಪಾತ್ರ ಕೊನೆಯಲ್ಲಿ ಪ್ರೇಕ್ಷಕರ ಸಹಾನುಭೂತಿಗೆ ಪಾತ್ರವಾಗುತ್ತದೆ.ಆದರೆ ಅದೇಕೋ ನಾನು ‘ಸಾಯುವ’ ದೃಶ್ಯವನ್ನು ಸರಿಯಾಗಿ—ಪ್ರಭಾವಿಯಾಗಿ ಚಿತ್ರಿಸಲಿಲ್ಲ. ಆ ದೃಶ್ಯದಲ್ಲಿ ಬೆನ್ನಿಗೆ ಚೂರಿ ಚುಚ್ಚಿ ನಾನು ಸಾಯಬೇಕಾಗಿತ್ತು. ಸರಿಯಾಗಿ ಆಳವಾಗಿ ಚುಚ್ಚಿದಂತೆ ಕಾಣಲು ಬೇಕಾದ ಸಾಮಗ್ರಿಗಳ ಕೊರತೆಯಿದ್ದ ಕಾರಣಕ್ಕೆ ಒಂದಿಂಚೂ ಚೂರಿ ಒಳಗೆ ಇಳಿಯದಿದ್ದರೂ ನಾನ ಸತ್ತೇ ಹೋಗುತ್ತೇನೆ!ಅದೊಂದು ಕೊರತೆಯಾಗದಿದ್ದರೆ ನನ್ನ’ಸಾವು’ ಇನ್ನಷ್ಟು ದಾರುಣವಾಗಿರುತ್ತಿತ್ತು!

‘ಅಗ್ನಿದಿವ್ಯ’— ವಾಮಾಚಾರ ಹಾಗೂ ಮಾಟಮಂತ್ರಗಳ ಸುತ್ತ ಹೆಣೆಯಲಾದ ಚಿತ್ರ. ಅದರಲ್ಲಿ ನನ್ನದು ಒಬ್ಬ ಸಾತ್ವಿಕ ಗುರುವಿನ ಪಾತ್ರ. ಜೈಜಗದೀಶ್, ಭವ್ಯ, ಸುಂದರಕೃಷ್ಣ ಅರಸ್, ಮೈಸೂರು ಲೋಕೇಶ್..ಮುಂತಾದವರು ನಟಿಸಿದ್ದ ಈ ಚಿತ್ರದ ಒಂದು ಪ್ರಮುಖ ದೃಶ್ಯದ ಚಿತ್ರೀಕರಣ ನಡೆದದ್ದು ನಂದಿಯಲ್ಲಿ. ಅದೂ ಸಹಾ ನನ್ನ ಸಾವಿನ ದೃಶ್ಯವೇ! ನನ್ನನ್ನು ಕೊಂದು ಗುದ್ದು ತೋಡಿ ಹೂತು ಹಾಕಿಬಿಡುವ ದೃಶ್ಯದ ಚಿತ್ರೀಕರಣವದು. ನಂದಿ ಬೆಟ್ಟದ ಮೇಲೆ ಗದಗುಟ್ಟುವ ಚಳಿಯಲ್ಲಿ ಮೇಲು ವಸ್ತ್ರಗಳೇನೋ ಇಲ್ಲದೆ ಗುದ್ದಿನಲ್ಲಿ ನಿಶ್ಚಲವಾಗಿ ಮಲಗಬೇಕಿತ್ತು. ಚಳಿಗೆ ಮೈನಡುಗುವುದನ್ನು ಬಹಳ ಕಷ್ಟದಿಂದ ನಿಯಂತ್ರಿಸಿಕೊಳ್ಳಬೇಕಿತ್ತು. ಬೆಳಗಿನ ಜಾವದ ವೇಳೆಗೆ ಶೂಟಿಂಗ್ ಮುಗಿದು ‘pack up’ ಘೋಷಣೆ ಮೊಳಗುವಷ್ಟರಲ್ಲಿ ನಾನು ಹೈರಾಣಾಗಿಹೋಗಿದ್ದೆ!

ಈ ವೇಳೆಯಲ್ಲೇ ಗೆಳೆಯ ಡಿ.ರಾಜೇಂದ್ರಬಾಬು ನಿರ್ದೇಶನದ ‘ನಾನು ನನ್ನ ಹೆಂಡ್ತಿ’ ಚಿತ್ರದ ನಾಯಕರಾಗಿ ನಟಿಸಿದ್ದ ರವಿಚಂದ್ರನ್ ಅವರಿಗೆ ಕಂಠದಾನ ಮಾಡುವ ಕೆಲಸವೂ ಮುಗಿದಿತ್ತು. ಇದೇ ಸಮಯದಲ್ಲಿ ನಟಸಾರ್ವಭೌಮ ಡಾ॥ರಾಜ್ ಕುಮಾರ್ ಅವರನ್ನು ಭೇಟಿಯಾಗುವ ಸುಸಂದರ್ಭ ಒದಗಿಬಂದಿತು. ಈ ಹಿಂದೆಯೇ ಹೇಳಿರುವಂತೆ ಡಾ॥ರಾಜ್ ನನ್ನ ಮಾನಸ ಗುರುಗಳು; ಅವರ ಚಿತ್ರಗಳನ್ನು ನೋಡುತ್ತಲೇ ಅಭಿನಯದ ಪ್ರಥಮ ಪಾಠಗಳನ್ನು ನಾನು ಕಲಿತದ್ದು! ಅವರನ್ನು ಪ್ರಥಮತಃ ಮುಖಾಮುಖಿಯಾಗಿ ಭೇಟಿಯಾಗುವ ಅವಕಾಶ ಒದಗಿ ಬಂದಿದ್ದು ಹೀಗೆ:
‘ನಾನು ನನ್ನ ಹೆಂಡ್ತಿ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಧ್ವನಿ ನೀಡುವ ಕಾರ್ಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದಿದ್ದ ಸಂದರ್ಭದಲ್ಲಿಯೇ ಡಾ॥ರಾಜ್ ಅವರ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರದ ಡಬ್ಬಿಂಗ್ ಸಿದ್ಧತೆಗಳೂ ನಡೆಯುತ್ತಿದ್ದವು. ಒಂದು ಬೆಳಿಗ್ಗೆ ಆ ಚಿತ್ರದ ಮ್ಯಾನೇಜರ್ ಅವರು ನನ್ನ ಬಳಿಗೆ ಬಂದು,”ನಮ್ಮ ಚಿತ್ರದಲ್ಲಿ ಒಂದು ಪಾತ್ರಕ್ಕೆ (ಬಹುಶಃ ಬ್ಯಾಂಕ್ ಮ್ಯಾನೇಜರ್ ಪಾತ್ರ) ನೀವು ಕಂಠದಾನ ಮಾಡಲು ಸಾಧ್ಯವೇ?” ಎಂದು ವಿನಂತಿಸಿಕೊಂಡರು.

ವಾಸ್ತವವಾಗಿ ನಾನು ಬೇರೆ ಯಾರಿಗೂ ಕಂಠದಾನ ಮಾಡಬಾರದೆಂದು ರವಿಯವರು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು. ಅವರ ಧ್ವನಿಯ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಅವರು ಹಾಗೆ ಕರಾರು ವಿಧಿಸಿದ್ದು ಒಂದು ರೀತಿಯಲ್ಲಿ ಸರಿಯಾಗಿಯೇ ಇತ್ತು ಅನ್ನಿ.ಆದರೆ ‘ಭಾಗ್ಯದ ಲಕ್ಷ್ಮಿ ಬಾರಮ್ಮಾ’ ಚಿತ್ರ ನನ್ನ ಮಾನಸ ಗುರುವಿನದು! ಅವರನ್ನು ಭೇಟಿಯಾಗುವ ಅವಕಾಶ ತಾನಾಗಿಯೇ ಒದಗಿಬಂದಿರುವಾಗ ಅದನ್ನು ನಿರಾಕರಿಸುವುದುಂಟೇ! ಜತೆಗೆ ನಾನು ಕಂಠದಾನ ಮಾಡಬೇಕಾಗಿರುವುದೂ ಒಂದು ಪುಟ್ಟ ಪಾತ್ರಕ್ಕೆ. ಏನಾದರಾಗಲಿ ಡಬ್ಬಿಂಗ್ ಮಾಡುತ್ತೇನೆಂದು ಒಪ್ಪಿಕೊಂಡುಬಿಟ್ಟೆ. ಒಪ್ಪಿಗೆಯ ಜತೆಗೇ ಒಂದು ಷರತ್ತನ್ನೂ ವಿಧಿಸಿದೆ: “ಡಾ॥ರಾಜ್ ಅವರು ಡಬ್ಬಿಂಗ್ ಮಾಡುವುದನ್ನು ಸ್ಟುಡಿಯೋದಲ್ಲಿ ಕುಳಿತು ನೋಡಲು ನನಗೆ ಅವಕಾಶ ಮಾಡಿಕೊಡಬೇಕು!” ಮ್ಯಾನೇಜರ್ ಅವರು,”ಆಗಲಿ ಬನ್ನಿ ಸರ್, ಅವಕಾಶ ಮಾಡಿಕೊಡೊಣಂತೆ ಬನ್ನಿ” ಎಂದು ನುಡಿದು ಮರುದಿನ ಬೆಳಿಗ್ಗೆಯೇ ಡಬ್ಬಿಂಗ್ ಗೆ ಬರಲು ತಿಳಿಸಿದರು.

ಮರುದಿನ ಬಲು ಸಂಭ್ರಮದಿಂದ ಸ್ಟುಡಿಯೋಗೆ ಹೋದೆ.ಅಲ್ಲಿ ಹೋಗಿ ನೋಡಿದಾಗ ನನಗೆ ಮತ್ತೊಂದು ಆಶ್ಚರ್ಯ ಕಾದಿತ್ತು:ನಾನು ಕಂಠದಾನ ಮಾಡಬೇಕಾಗಿದ್ದದ್ದು ಸತ್ಯನಾರಾಯಣ ಭಟ್ ಎಂಬ ಕಲಾವಿದನಿಗೆ! ಈ ಸತ್ಯಣ್ಣ ನನ್ನ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದ ನನ್ನ ಮೆಚ್ಚಿನ ನಟ ಹಾಗೂ ಆತ್ಮೀಯ ಗೆಳೆಯ! ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಸತ್ಯಣ್ಣ ಬೇರೆ ಊರಿಗೆ ವರ್ಗವಾಗಿ ಹೊರಟು ಹೋಗಿದ್ದರಿಂದ ಅವನ ಪಾತ್ರಕ್ಕೆ ಬೇರೆಯವರು ಕಂಠದಾನ ಮಾಡಬೇಕಾದ ಅನಿವಾರ್ಯತೆ ಒದಗಿಬಂದಿತ್ತು.30—40 ನಿಮಿಷಗಳಲ್ಲಿಯೇ ನನ್ನ ಡಬ್ಬಿಂಗ್ ಕೆಲಸ ಮುಗಿದುಹೋಯಿತು. ಆನಂತರ ಡಾ॥ರಾಜ್ ಅವರ ಡಬ್ಬಿಂಗ್ ಆರಂಭವಾಗುವುದಿತ್ತು. ತುಸುಹೊತ್ತಿನಲ್ಲೇ ಅವರ ಆಗಮನವಾಯಿತು. ಸರಳತೆ—ಸೌಜನ್ಯತೆಗಳೇ ಮೈವೆತ್ತಂತೆ ಶುಭ್ರ ಶ್ವೇತ ವಸನಧಾರಿಯಾಗಿ ಮುಗುಳ್ನಗುತ್ತಾ ಅವರು ಸ್ಟುಡಿಯೋದೊಳಗೆ ಕಾಲಿರಿಸುತ್ತಿದ್ದಂತೆ ಇಡೀ ವಾತಾವರಣದಲ್ಲಿ ವಿದ್ಯುತ್ ಸಂಚಾರವಾದಂಥ ಅನುಭವ! ಮ್ಯಾನೇಜರ್ ಅವರು ನನ್ನನ್ನು ಡಾ॥ರಾಜ್ ಅವರಿಗೆ ಪರಿಚಯ ಮಾಡಿಕೊಟ್ಟರು. ಮುಗುಳ್ನಗುತ್ತಲೇ ‘ಹೇಗಿದ್ದೀರಿ?’ ಎಂದು ಪ್ರೀತಿಯಿಂದ ಹೆಗಲುತಟ್ಟಿ ನನ್ನನ್ನು ಮಾತಾಡಿಸಿದರು ಡಾ॥ರಾಜ್. ನನ್ನ ಮಾನಸಗುರುವಿನ ಪ್ರಥಮಭೇಟಿಯ ಆ ಅಮೃತ ಗಳಿಗೆ ನನ್ನ ಮನದಲ್ಲಿ ಇನ್ನೂ ಅಚ್ಚೊತ್ತಿದಂತಿದೆ. ಆನಂತರ ಪ್ರಾರಂಭವಾಯಿತು ಅವರ ಧ್ವನಿ ನೀಡುವ ಕೆಲಸ. ಆಗಲೇ ನಡೆದದ್ದು ‘ಕಂಠದಾನ ಕಾರ್ಯದಲ್ಲಿ ತೊಡಗಿಕೊಳ್ಳುವಾಗ ಇರಬೇಕಾದ ತಲ್ಲೀನತೆ—ನಿಷ್ಠೆಗಳನ್ನು ಸಾರಿ ಹೇಳುವ’ ಒಂದು ಪ್ರಾತ್ಯಕ್ಷಿಕೆಯಂತಹ ಪ್ರಸಂಗ! ಅದು ನಡೆದದ್ದು ಹೀಗೆ:
ಒಂದು ಸುದೀರ್ಘ ಸಂಭಾಷಣೆಯನ್ನು ಹೇಳಲು ರಾಜ್ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸಂಭಾಷಣೆಯನ್ನು ಮನನ ಮಾಡಿಕೊಂಡ ಮೇಲೆ ನಾಲ್ಕಾರು ಬಾರಿ ಅಭ್ಯಾಸ (ಮಾನೀಟರ್) ಮಾಡಿಕೊಂಡು ಟೇಕ್ ಗೆ ಸಿದ್ಧರಾದರು ಡಾ॥ರಾಜ್.ಸುದೀರ್ಘ ಸಂಭಾಷಣೆಯನ್ನು ಮೊದಲ ಟೇಕ್ ನಲ್ಲೇ ಅನೂನವಾಗಿ—ಪರಿಪೂರ್ಣವಾಗಿ ಅವರು ಹೇಳಿ ಮುಗಿಸಿದಾಗ ಎಲ್ಲರ ಮೆಚ್ಚುಗೆಯ ಚಪ್ಪಾಳೆ..ಇಂಜಿನಿಯರ್ ಅವರಿಂದಲೂ ‘ಓಕೆ..ಪರ್ಫೆಕ್ಟ್’ ಎಂಬ ಸಂದೇಶ. ಒಂದು ಕ್ಷಣ ಕಳೆಯುತ್ತಲೇ ಡಾ॥ರಾಜ್ ನುಡಿದರು:”ಇಲ್ಲ..ಇದನ್ನ ಇನ್ನೊಂದು ಸಲ ಮಾಡಿಬಿಡೋಣ. ಯಾಕೋ ಸಮಾಧಾನ ಆಗ್ತಿಲ್ಲ”. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ! “ಯಾಕಣ್ಣಾ? ತುಂಬಾ ಚೆನ್ನಾಗಿ ಬಂದಿದೆ..ಏನೂ ತೊಂದರೆ ಇಲ್ಲ. ಸಿಂಕ್ ಸರಿಯಾಗಿದೆ;ಫೀಲಿಂಗ್ ಸರಿಯಾಗಿದೆ..ಇನ್ನೊಂದು ಟೇಕ್ ಅಗತ್ಯ ಇಲ್ಲ ಅನ್ನಿಸುತ್ತೆ” ಎಂದು ಸಹ ನಿರ್ದೇಶಕರು ಹೇಳಿದರೂ ರಾಜ್ ಅವರು ತಮ್ಮ ಹಠ ಬಿಡಲಿಲ್ಲ. ಮೊದಲ ಸಲವೇ ಪರಿಪೂರ್ಣವಾಗಿಯೇ ಬಂದಿದೆಯೆಂದು ಎಲ್ಲರೂ ಹೇಳಿದರೂ ಇನ್ನೊಂದು ಟೇಕ್ ಮಾಡಲು ಡಾ॥ರಾಜ್ ನೀಡಿದ ಕಾರಣ ಕೇಳಿ ನಾನು ದಂಗುಬಡಿದು ಹೋದೆ!ಅವರೆಂದರು: “ಯಾಕೋ ಸಮಾಧಾನ ಆಗ್ತಿಲ್ಲ..ಏನಿಲ್ಲ, ಆ ಸಂಭಾಷಣೆ ಹೇಳ್ತಾ ಡಬ್ಬಿಂಗ್ ಮಾಡೋವಾಗ ನನ್ನ ಮನಸ್ಸು ಬೇರೆ ಎಲ್ಲೋ ಹೊರಟುಹೋಗಿತ್ತಪ್ಪಾ.. ಕೊಂಚ ಚಂಚಲವಾಗಿಬಿಟ್ಟಿತ್ತು..ಇನ್ನೂ ಚೆನ್ನಾಗಿ ಆ ಮಾತನ್ನ ಹೇಳಬಹುದು ಅನ್ನಿಸ್ತಿದೆ..ಒನ್ ಮೋರ್ ಮಾಡಿಬಿಡೋಣ.”

ಅಭಿನಯದಲ್ಲಿ ತಾದಾತ್ಮ್ಯ—ತಲ್ಲೀನತೆಗಳ ಬಗ್ಗೆ ತಿಳಿವಿದ್ದು ಅದನ್ನು ಪಾಲಿಸುತ್ತಲೂ ಇದ್ದ ನನಗೆ ಅಣ್ಣಾವ್ರ ಮಾತು ‘ಮತ್ತೊಂದು ಮಜಲಿನದು’ ಅನ್ನಿಸಿಬಿಟ್ಟಿತು. ಸಧ್ಯ ಮುಗಿದರೆ ಸಾಕು ಎಂಬ ಧಾವಂತದಲ್ಲಿ ಕೆಲಸ ಮುಗಿಸಿ ಓಡುವ ಬಹುಸಂಖ್ಯಾತ ಮಂದಿಯ ಸಂತೆಯಲ್ಲಿ ಅಣ್ಣಾವ್ರ ಈ ‘ದನಿ’ ನನಗೆ ಬಹಳ ವಿಶಿಷ್ಟವಾಗಿ ಕೇಳಿಸಿದ್ದಷ್ಟೇ ಅಲ್ಲ, ಹೊಸದೊಂದು ಚಿಂತನೆಯ ಸಾಕ್ಷಾತ್ಕಾರವನ್ನೂ ಮಾಡಿಸಿತು.’ಎಲ್ಲ ದೃಷ್ಟಿಯಿಂದ ಟೇಕ್ ಪರಿಪೂರ್ಣವಾಗಿದ್ದರೂ, ಅವರ ಮನೋವ್ಯಾಪಾರಗಳನ್ನು ಅರಿತುಕೊಳ್ಳಲು ಯಾರಿಗೂ ಸಾಧ್ಯವಿಲ್ಲದಿದ್ದರೂ, ಯಾವ ಸಮಜಾಯಿಷಿ—ವಿವರಣೆ ನೀಡುವ ಅಗತ್ಯ ಅವರಿಗಿಲ್ಲದಿದ್ದರೂ ಅಂದು ಅಣ್ಣಾವ್ರು ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಂಡ ಆ ‘ನಿವೇದನೆ’ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರಿತು. ಇದು ನನ್ನ ಮತ್ತು ಅಣ್ಣಾವ್ರ ಪ್ರಥಮ ಭೇಟಿಯ ಸಾರ್ಥಕ ಸಂದರ್ಭ.

ನಾನು ನಾಯಕನಟನಾಗಿ ಅಭಿನಯಿಸಿದ ಒಂದು ಚಿತ್ರವೆಂದರೆ ಚಿಕ್ಕಣ್ಣ ಅವರು ನಿರ್ದೇಶಿಸಿದ ಮ.ನ.ಮೂರ್ತಿ ಅವರ ಕಾದಂಬರಿ ಆಧಾರಿತ ‘ಚಿರಕನ್ನಿಕಾ’. ನಾಯಕನೆಂದರೆ ಮರಸುತ್ತುತ್ತಾ ಹಾಡುವ—ಹತ್ತಾರು ಮಂದಿಯೊಂದಿಗೆ ಒಂಟಿಯಾಗಿ ವೀರಾವೇಶದಿಂದ ಬಡಿದಾಡಿ ಗೆಲ್ಲುವ ‘ಕಮರ್ಷಿಯಲ್’ ನಾಯಕನಲ್ಲ! ಜನಪ್ರಿಯ ಮಸಾಲೆ ಅಂಶಗಳಿಲ್ಲದ,ಕೊಂಚ ವಿಭಿನ್ನ ಮಾದರಿಯ ಈ ಚಿತ್ರದಲ್ಲಿ ಒಬ್ಬ ಆದರ್ಶ ಶಿಕ್ಷಕನ ಕೇಂದ್ರಪಾತ್ರ ಅದಾಗಿತ್ತು.ಸೋಹಿನಿ ಅನ್ನುವವರು ಕಥಾನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.ಆಕೆಯೇ ಚಿತ್ರದ ನಿರ್ಮಾಪಕಿ ಕೂಡಾ.ಬೆಂಗಳೂರು ಹಾಗೂ ಧಾರವಾಡಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಆಗ ಮಗಳು ರಾಧಿಕಾಳಿಗೆ ಮೂರು ವರ್ಷ ಇದ್ದಿರಬಹುದು. ಮುದ್ದುಮಗಳ ಆ ಬೆಳವಣಿಗೆಯ ದಿನಗಳು ಅತ್ಯಂತ ಚೇತೋಹಾರಿಯಾದ ದಿನಗಳು. ಮುದ್ದುಮುದ್ದಾಗಿ ಅವಳು ನನ್ನನ್ನು ‘ಅಣ್ಣಾ’ ‘ಅಣ್ಣಾ’ ಎಂದು ಕರೆಯುತ್ತಾ ಬಂದು ಕುತ್ತಿಗೆ ಬಳಸಿ ಅಪ್ಪಿಕೊಂಡರೆ ಸ್ವರ್ಗಕ್ಕೆ ಮೂರೇ ಗೇಣು! ನಮ್ಮ ಬದುಕಿಗೆ ರಾಧಿಕಾಳ ಆಗಮನವಾದ ಮೇಲೆ ನನಗರಿವಿಲ್ಲದಂತೆಯೇ ನಾನು ಬಹಳ ಬದಲಾಗಿ ಹೋದೆ ಅನ್ನಬೇಕು! ಬಹುಶಃ ಅದೇ ಜಗದ ನಿಯಮವೂ ಹೌದೆಂದು ಕಾಣುತ್ತದೆ..ಅಪ್ಪನಾಗುತ್ತಿದ್ದಂತೆ ಪುರುಷ ಹೆಚ್ಚು ಹೆಚ್ಚು ಮೃದುವಾಗುತ್ತಾ ಹೋಗುತ್ತಾನೆ! ಬದುಕಿನ ಅವನ ಆದ್ಯತೆಗಳು ಬದಲಾಗುತ್ತಾ ಹೋಗುತ್ತದೆ..ಅವನ ಸ್ವಕೇಂದ್ರಿತ ಅಭ್ಯಾಸ—ಹವ್ಯಾಸಗಳು ಹಿನ್ನೆಲೆಗೆ ಸರಿದು ಮಗುವಿನ ಲಾಲನೆ—ಪಾಲನೆಗಳು ಹಾಗೂ ಅದರ ಸಾಮೀಪ್ಯವೇ ಎಲ್ಲಕ್ಕಿಂತ ಪ್ರಮುಖವಾಗಿಬಿಡುತ್ತದೆ! ನನಗಾದದ್ದೂ ಹಾಗೆಯೇ! ಸಂಪ್ರದಾಯಸ್ಥ ಕುಟುಂಬದಲ್ಲೇ ಹುಟ್ಟಿ ಬೆಳೆದಿದ್ದರೂ ಒಂದು ರೀತಿಯಲ್ಲಿ ನಾಸ್ತಿಕನೆಂದೇ ಹೇಳಬಹುದಾದಂತೆ ‘ಕ್ರಾಂತಿಮಾರ್ಗ’ದಲ್ಲಿ ನಡೆದಿದ್ದ ನಾನು ಮಗಳು ಹುಟ್ಟುತ್ತಿದ್ದಂತೆ ಹೆಚ್ಚು ಹೆಚ್ಚು ಆಸ್ತಿಕನಾದದ್ದು, ಮಗುವಿನ ಕ್ಷೇಮಕ್ಕಾಗಿ ಹರಕೆ ಹೊತ್ತುಕೊಳ್ಳುವಂತಹ ‘ಪರಾವಲಂಬಿ’ಯಾದದ್ದು ನನಗೆ ಸೋಜಿಗ ಉಂಟುಮಾಡಿದ ಸಂಗತಿ. ಇರಲಿ…

‘ಚಿರಕನ್ನಿಕಾ’ ಚಿತ್ರದ ಶೂಟಿಂಗ್ ಧಾರವಾಡದಲ್ಲಿ ಎಂದಾಗ ರಂಜನಿ—ರಾಧಿಕಾರನ್ನೂ ಜೊತೆಯಲ್ಲೇ ಕರೆದುಕೊಂಡು ಹೊರಟುಬಿಟ್ಟೆ! ನಾಲ್ಕಾರು ದಿನಗಳು ಕೂಸನ್ನು ಬಿಟ್ಟಿರುವುದಾದರೂ ಹೇಗೆ?! ನಿರ್ದೇಶಕ ಚಿಕ್ಕಣ್ಣ ಅವರು ಅನೇಕ ಎಡರು ತೊಡರುಗಳ ಹೊರತಾಗಿಯೂ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದರು. ನನಗೂ ಸಹಾ ಬಹಳ ತೃಪ್ತಿ—ಸಮಾಧಾನಗಳನ್ನು ನೀಡಿದ ಪಾತ್ರವದು. ಡಬ್ಬಲ್ ರೋಡ್ ನಲ್ಲಿದ್ದ ವಸಂತ್ ಕಲರ್ ಲ್ಯಾಬ್ ನಲ್ಲಿ ಚಿಕ್ಕಣ್ಣ ಅವರು ಏರ್ಪಡಿಸಿದ್ದ ಚಿತ್ರದ ಪ್ರಥಮ ಪ್ರದರ್ಶನಕ್ಕೆ ನಾನು ಮನೆಯವರೆಲ್ಲರನ್ನೂ ಕರೆದುಕೊಂಡು ಹೋಗಿದ್ದೆ. ಎಲ್ಲರಿಗೂ ಚಿತ್ರ ಮೆಚ್ಚುಗೆಯಾಯಿತು. ಆದರ್ಶ ಶಿಕ್ಷಕನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು, ಆರೋಗ್ಯವಂತ ಸಮಾಜವನ್ನು ರೂಪಿಸಲು ಕರೆ ಕೊಡುವ ಸಂದೇಶವಿದ್ದ ಚಿತ್ರ ಅಣ್ಣನಿಗೂ(ನನ್ನ ತಂದೆಯವರು) ಬಹಳ ಇಷ್ಟವಾಗಿ ಚಿತ್ರ ಮುಗಿದ ಮೇಲೆ ನನ್ನನ್ನು ಅಪ್ಪಿಕೊಂಡು ಬೆನ್ನು ತಟ್ಟಿ ಹರಸಿದರು. ನಾಯಕ ವಿಜೃಂಭಣೆಯ, ಮನರಂಜಕ ವ್ಯಾಪಾರೀ ಚಿತ್ರಗಳ ಮಸಾಲೆಗಳಾವುವೂ ಇಲ್ಲದಿದ್ದ ಕಾರಣಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ವಿಶೇಷ ಯಶಸ್ಸೇನೂ ನಮ್ಮ ಚಿತ್ರಕ್ಕೆ ದೊರೆಯಲಿಲ್ಲ. ದೊರೆತಿದ್ದರೆ ಬಹುಶಃ ಆಗಲೇ ಚಿತ್ರರಂಗದ ಬಾಗಿಲು ನನ್ನ ಪಾಲಿಗೆ ತೆರೆದು ಬದುಕಿನ ಗತಿಯೇ ಬದಲಾಗುತ್ತಿತ್ತೇನೋ ಕಾಣೆ.. ಅದೃಷ್ಟವೋ ದುರಾದೃಷ್ಟವೋ ಹಾಗಾಗಲಿಲ್ಲ! ಆದರೂ ಈ ಚಿತ್ರದ ಸಂಬಂಧವಾಗಿ ಮುಂದಿನ ದಿನಗಳಲ್ಲಿ ನಡೆದ ಒಂದು ಸ್ವಾರಸ್ಯಕರ ಪ್ರಸಂಗವನ್ನು ಇಲ್ಲಿಯೇ ನೆನಪಿಸಿಕೊಳ್ಳುತ್ತೇನೆ.

ಒಂದು ದಿನ ಸಂಕೇತ್ ಸ್ಟುಡಿಯೋದಲ್ಲಿ ಯಾವುದೋ ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ನಿರತನಾಗಿದ್ದೆ. ಅದೇ ವೇಳೆಯಲ್ಲಿ ಸ್ಟುಡಿಯೋಗೆ ಬಂದ ಒಬ್ಬ ಮ್ಯಾನೇಜರ್ ಅವರು, “ಪ್ರಭುಗಳೇ, ಊಟದ ಬಿಡುವಿನ ಸಮಯದಲ್ಲಿ ಅಣ್ಣಾವ್ರು ಇಲ್ಲಿಗೆ ಬರ್ತಿದಾರೆ..ಅವರದೊಂದು ಹಾಡಿನ ರೆಕಾರ್ಡಿಂಗ್ ಆಗಬೇಕಾಗಿದೆ..ಸ್ವಲ್ಪ ಹೊತ್ತು ನೀವು ರೆಸ್ಟ್ ತೊಗೊಳಿ..ಆದಷ್ಟು ಬೇಗ ಮುಗಿಸಿಬಿಡ್ತೀವಿ” ಅಂದರು. ಆಹಾ! ಇದಲ್ಲವೇ ಭಾಗ್ಯ! ಅಣ್ಣಾವ್ರ ಮೊದಲ ಸಾರ್ಥಕ ಭೇಟಿಯನ್ನು ನೆನಪಿಸಿಕೊಳ್ಳುತ್ತಾ ಈ ಬಾರಿ ಮತ್ತಾವ ಲಾಭಗಳು ದಕ್ಕುತ್ತವೋ ಎಂದು ಮನದಲ್ಲೇ ಸಂಭ್ರಮ ಪಡುತ್ತಾ, “ಅಗತ್ಯವಾಗಿ ಆಗಲಿ ಸರ್…ಏನೂ ತೊಂದರೆ ಇಲ್ಲ” ಎಂದು ಆ ಮ್ಯಾನೇಜರ್ ಅವರಿಗೆ ಹೇಳಿದೆ. ಅದಾದ ತುಸು ಹೊತ್ತಿಗೇ ಅಣ್ಣಾವ್ರು ಸ್ಟುಡಿಯೋಗೆ ಬಂದರು.ಅವರ ಜತೆಗೇ ಇದ್ದ ಅವರ ಬಲಗೈ ಬಂಟ ಚೆನ್ನ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟ. ಈ ಚೆನ್ನ ರಂಗಭೂಮಿ ದಿನಗಳಿಂದಲೂ ನನಗೆ ಚಿರಪರಿಚಿತನಾಗಿದ್ದವನು. ಚೆನ್ನ ನನ್ನ ಪರಿಚಯ ಮಾಡಿಕೊಟ್ಟಾಗ ನಾನೇ ಅಣ್ಣಾವ್ರಿಗೆ ನೆನಪಿಸಿದೆ: “ಭಾಗ್ಯದ ಲಕ್ಷ್ಮಿ ಬಾರಮ್ಮಾ ಚಿತ್ರದ ಡಬ್ಬಿಂಗ್ ವೇಳೆ ನಿಮ್ಮನ್ನು ಭೇಟಿಯಾಗಿದ್ದೆ ಅಣ್ಣಾ” ಎಂದೆ. ಅವರಿಗೆ ಆ ಪ್ರಸಂಗವೇನೂ ನೆನಪಾದ ಹಾಗೆ ಭಾಸವಾಗಲಿಲ್ಲವಾದರೂ ಅದೇಕೋ ಅವರು ನನ್ನ ಮುಖವನ್ನು ದಿಟ್ಟಿಸಿ ನೋಡುತ್ತಿದ್ದರು! ಕೆಲ ಕ್ಷಣಗಳು ಹಾಗೆ ದಿಟ್ಟಿಸಿದ ನಂತರ ಇದ್ದಕ್ಕಿದ್ದ ಹಾಗೆ ಅವರ ಮುಖ ಅರಳಿತು! “ಅರೆ! ನೀವು ನಮ್ಮ ಚಿಕ್ಕಣ್ಣನ ಪಿಕ್ಚರ್ ನಲ್ಲಿ ಬ್ರಾಹ್ಮಣನ ಪಾತ್ರ ಮಾಡಿದ್ದೀರಲ್ಲವೇ” ಎಂದು ಉದ್ಗರಿಸಿದರು! ನನಗಂತೂ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ! ವಿನಮ್ರತೆಯಿಂದ ‘ಹೌದು ಅಣ್ಣಾ’ ಎಂದಷ್ಟೇ ನುಡಿದು ಸುಮ್ಮನಾದೆ.ಅಣ್ಣಾವ್ರು ನಗುತ್ತಾ, “ಅದೇ ಅಂದುಕೊಂಡೆ.. ಇವರನ್ನೆಲ್ಲೋ ನೋಡಿದೀನಲ್ಲಾ ಅಂತ! ತುಂಬಾ ಚೆನ್ನಾಗಿ ಪಾರ್ಟ್ ಮಾಡಿದೀರಿ ನೀವು! ಆ ಪಾರ್ಟು ನಿಮಗೆ ತುಂಬಾ ಚೆನ್ನಾಗಿ ಒಪ್ಪುತ್ತೆ” ಎಂದು ನುಡಿದು ಪರಮ ವಾತ್ಸಲ್ಯದಿಂದ ನನ್ನ ಬೆನ್ನು ತಟ್ಟಿದರು! ಅಸಲಿಗೆ ನಿರ್ದೇಶಕ ಚಿಕ್ಕಣ್ಣ ಅವರು ಮೊದಲು ಅಣ್ಣಾವ್ರ ಕಂಪನಿಯಲ್ಲೇ ಮ್ಯಾನೇಜರ್ ಆಗಿ, ಸಹ ನಿರ್ದೇಶಕರಾಗಿ ಹಲವಾರು ವರ್ಷ ಕೆಲಸ ಮಾಡಿದ್ದವರು. ಹಾಗಾಗಿಯೇ ಅಣ್ಣಾವ್ರ ಕುಟುಂಬದವರೆಲ್ಲರಿಗಾಗಿ ತಮ್ಮ ಚೊಚ್ಚಲು ನಿರ್ದೇಶನದ ಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ! ಅಣ್ಣಾವ್ರು ನಾನು ಮುಖ್ಯ ಪಾತ್ರ ನಿರ್ವಹಿಸಿರುವ ಚಿತ್ರ ನೋಡಿದ್ದಾರೆ ಅಷ್ಟೇ ಅಲ್ಲ,ನನ್ನ ಅಭಿನಯವನ್ನು ಮೆಚ್ಚಿ ಬೆನ್ನು ತಟ್ಟಿದ್ದಾರೆ! ಇದಲ್ಲವೇ ನನ್ನ ಸುಕೃತವೆಂದರೆ! ಸುಮ್ಮನೆ ಒಮ್ಮೆ ಶುಷ್ಕನಗೆ ಬೀರಿ ಮುಂದೆ ಸಾಗಬಹುದಾಗಿದ್ದಾಗಲೂ ಹಾಗೆ ಮಾಡದೇ ನಿಂತು ಪ್ರೀತಿಯಿಂದ ಮಾತಾಡಿದ್ದಾರೆ..ಮೆಚ್ಚಿ ಅಭಿನಂದಿಸಿದ್ದಾರೆ!
ಆಗಲೇ ಚೆನ್ನ, “ಅಣ್ಣಾ, ಇವರು ನಮ್ಮ ಜಯಶ್ರೀ ಅಕ್ಕಯ್ಯ ಅವರ ಥರಾ NSD ಲಿ ನಾಟಕ ಕಲಿತು ಬಂದೋರು..ತುಂಬಾ ನಾಟಕ ಮಾಡಿಸಿದಾರೆ” ಎಂದು ಇನ್ನಷ್ಟು ನನ್ನ ಪರಿಚಯವನ್ನು ಹೇಳಿದ.ಅಣ್ಣಾವ್ರು ಮತ್ತೊಮ್ಮೆ ಮೆಚ್ಚುನಗೆ ಬೀರುತ್ತಾ, “ಬಹಳ ಸಂತೋಷ..ನಾವು ಹಾಗೆಲ್ಲಾ ಎಲ್ಲೂ ಏನೂ ಕಲಿತು ಬಂದವರಲ್ಲಪ್ಪಾ..ಏನೋ ತೋಚಿದ್ದು ಮಾಡ್ತಾ ಬಂದಿದೀವಿ..ನಮ್ಮ ಅಭಿಮಾನಿ ದೇವರುಗಳು ಕೈಹಿಡಿದು ಮುಂದೆ ಕರಕೊಂಡು ಹೋಗ್ತಿದಾರೆ ಅಷ್ಟೇ” ಎಂದು ಭಾವುಕರಾಗಿ ನುಡಿದರು. ನಾನು ಮರುಕ್ಷಣವೇ,”ಅಣ್ಣಾ,ನೀವು ಎಲ್ಲೂ ಹೋಗಿ ಏನೂ ಕಲಿಯೋ ಅಂಥದ್ದೇನೂ ಇಲ್ಲ..ನೀವು ಕಲಿಸೋರು..ನೀವೇ ನಟನೆಯ ಒಂದು ವಿಶ್ವವಿದ್ಯಾಲಯ ಇದ್ದಹಾಗೆ!ನಾನು ಪ್ರಾರಂಭದ ದಿನಗಳಿಂದಲೂ ನಿಮ್ಮ ಅಭಿನಯವನ್ನು ನೋಡ್ತಾ ಕಲೀತಾ ಬಂದಿದೇನೆ..ನನ್ನಂಥ ನೂರಾರು ಕಲಾವಿದರಿಗೆ ನೀವು ಮಾನಸ ಗುರುಗಳಾಗಿದೀರಿ” ಎಂದು ನುಡಿದು ನಮಸ್ಕರಿಸಿದೆ. ಮತ್ತೊಮ್ಮೆ ಪ್ರೀತಿಯಿಂದ ಅಪ್ಪಿಕೊಂಡು ಬೆನ್ನುತಟ್ಟಿ ಹರಸಿ ಮುಂದೆ ಸಾಗಿದರು ಮೆಚ್ಚಿನ ಅಣ್ಣಾವ್ರು. ಹೀಗೆ ಈ ಎರಡು ಪ್ರಸಂಗಗಳಲ್ಲಿ ಅಣ್ಣಾವ್ರ ಸರಳತೆಯನ್ನೂ ಮುಕ್ತ ಮನಸ್ಸನ್ನೂ ಅವರ ವೃತ್ತಿಪರತೆ—ನಿಷ್ಠೆಗಳನ್ನೂ ಅತ್ಯಂತ ಹತ್ತಿರದಿಂದ ಕಂಡ ನನಗೆ ಅವರ ಬಗೆಗಿನ ಗೌರವ—ಅಭಿಮಾನಗಳು ಮುಮ್ಮಡಿಯಾದವು! ಕನ್ನಡದ ಪ್ರಸಿದ್ಧ ಗಾದೆಯ ಮಾತು ಅಣ್ಣಾವ್ರ ವಿಷಯದಲ್ಲಿ ಪರಮಸತ್ಯ ಎನ್ನಿಸಿಬಿಟ್ಟಿತು:

“ತುಂಬಿದ ಕೊಡ ತುಳುಕುವುದಿಲ್ಲ!!!”

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: