ಶ್ರಾವಣವೆಂದರೆ ಮನದೊಳಗೆಲ್ಲ ಕೃಷ್ಣನದೇ ಕಡು ನೆನಪು..

ಜ್ಯೋತಿ ಮಹದೇವ್ ‘ಸುಪ್ತದೀಪ್ತಿ’ ಎಂದೇ ಅಕ್ಷರ ಲೋಕಕ್ಕೆ ಪರಿಚಿತರು.

ಅವರ ‘ಅಗ್ನಿಮುಡಿ’ಸಂಕಲನಕ್ಕೆ ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಅವರು ಬರೆದ ಮುನ್ನುಡಿ ಇಲ್ಲಿದೆ

ಮುನ್ನುಡಿಯ ಹರಕೆತಿಲಕ

muralidhara upadhya hiriyadka

ಮುರಳೀಧರ ಉಪಾಧ್ಯ ಹಿರಿಯಡ್ಕ

`ಸುಪ್ತದೀಪ್ತಿ’ ಕಾವ್ಯನಾಮದ ಜ್ಯೋತಿ ಮಹಾದೇವ್, ಪುರಾಣ ಲೋಕ ಹಾಗೂ ಮಧುರ ಕನಸಿನ ಲೋಕದಲ್ಲಿ ವಿಹರಿಸುವ ಸೊಗಸಾದ ಭಾವಗೀತೆಗಳ ಮೂಲಕ ಗಮನ ಸೆಳೆದಿರುವ ಕವಯಿತ್ರಿ. ಅವರ `ಭಾವಲಹರಿ’ (1997), `ಭಾವಗಾನ’ (2003), `ಭಾವಬಿಂಬ’ (2008), `ಭಾವಲೋಕ’ (2011) ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. `ಅಗ್ನಿಮುಡಿ’ ಸುಪ್ತದೀಪ್ತಿಯವರ ಐದನೆಯ ಸಂಕಲನ. ಈ ಸಂಕಲನದ ಶೀರ್ಷಿಕೆಯೇ ಈ ಕವಯಿತ್ರಿಯ ಕಾವ್ಯವು ಹೊರಳುದಾರಿಯಲ್ಲಿದೆ ಎಂಬುವುದನ್ನು ಸೂಚಿಸುತ್ತದೆ.

ತನ್ನ ಮೊದಲ ಬರವಣಿಗೆ ಹೊತ್ತಿನ ತವಕ ತಲ್ಲಣಗಳನ್ನು ಕುರಿತ `ನಮ್ಮ ಕೈತೋಟದೊಳಗೆ ತುಂಟನೊಬ್ಬ ನುಗ್ಗಿಬಿಟ್ಟ’ ಎಂಬ ತನ್ನ ಲೇಖನದಲ್ಲಿ ಅವರು, “ಬರವಣಿಗೆಯನ್ನು ದೈವೀಕವೆಂದವರಿದ್ದಾರೆ. ಸಮಾಧಿಸ್ಥಿತಿಯಲ್ಲಿ ಮಾತ್ರ ಬರೆಯಲು ಸಾಧ್ಯವೆನ್ನುವವರಿದ್ದಾರೆ. ಯಾವುದೇ ಕೃತಿರಚನೆ ಬೌದ್ಧಿಕ ಕಸರತ್ತು ಎನ್ನುವವರೂ ಇದ್ದಾರೆ. ಇವೆಲ್ಲವನ್ನೂ ಮೀರಿ ಬೇರೆಯೇ ಸ್ತರದಲ್ಲಿರುವ ಸಾಹಿತ್ಯ ಸಾಧ್ಯತೆಯನ್ನು ಇದಮಿತ್ಥಂ ಎಂದಳೆದಿರಿಸಿ ಬಯಲುಗೊಳಿಸಿದವರು ಮಾತ್ರ ಯಾರೂ ಇಲ್ಲವೇನೋ! ಇಂತಹ ಲೋಕಾತೀತ ಸಾಹಿತ್ಯಕೃಷಿ `ಅನ್ನ ಕೊಟ್ಟೀತೆ? ಮಾನ್ಯ ಕೊಟ್ಟೀತೆ?’ ಅನ್ನುವ ವ್ಯಾವಹಾರಿಕ ಪ್ರಶ್ನೆಗಳನ್ನೂ ಅರಗಿಸಿಕೊಂಡು ಬಹುಕಾಲ ನನ್ನಂಥ ಬಹುಜನರ ಆತ್ಮಶಕ್ತಿಯ ಹಾಗೂ ಅಂತಶರ್ಾಂತಿಯ ಅಲೌಕಿಕ ನೆಲೆಯಾಗಿರುವುದು ಸಾರ್ವಕಾಲಿಕ ಬಹಿರಂಗ ಸತ್ಯ.” ಎಂದಿದ್ದಾರೆ.

`ಅಗ್ನಿಮುಡಿ’ಯಲ್ಲಿ ನಲುವತ್ತಾರು ಕವನಗಳು ಮತ್ತು ಕೆಲವು ಹನಿಗವನಗಳಿವೆ. `ನಮ್ಮ ಮನೆಯಲ್ಲಿ ಪೂಜೆ ನಿಲ್ಲುವುದೇ ಇಲ್ಲ’ ಎನ್ನುವ ಕವಯಿತ್ರಿ ಜ್ಯೋತಿ ಮಹಾದೇವರಿಗೆ ಕೃಷ್ಣನ ಬಾಲಲೀಲೆಗಳು ತುಂಬ ಇಷ್ಟ. `ಅಲಂಕಾರ’, `ಸುರಗೌಳಿಗ’, `ಗೊಲ್ಲನಲ್ಲ’, `ತಾಪ’, `ಬೆಣ್ಣೆಕಳ್ಳ’- ಇವು ಬಾಲಕೃಷ್ಣನನ್ನು ಬಣ್ಣಿಸಿರುವ ಕವನಗಳು. ಯಶೋದೆಯ ವಾತ್ಸಲ್ಯ, ಸಂಭ್ರಮ, ಕೃಷ್ಣನ ತುಂಟಾಟಗಳು, ಗೋಪಿಕೆಯರ ವಿರಹದ ವರ್ಣನೆ ಈ ಕವನಗಳಲ್ಲಿದೆ. ಹದಿಹರೆಯದ ಕೃಷ್ಣನ ಬಳಿ ಚುಂಬಕಗಾಳಿ ಬೀಸುವುದನ್ನು ಕಂಡ ತಾಯಿ ಯಶೋದೆಯ ತಲ್ಲಣ `ಅಮ್ಮ ಸಂಕಟ’ದಲ್ಲಿದೆ. ಕೃಷ್ಣ, ಈ ಕವಯಿತ್ರಿಗೆ `ಕಾಡುವ ದೇವ’- “ಶ್ರಾವಣವೆಂದರೆ ಮನದೊಳಗೆಲ್ಲ ಕೃಷ್ಣನದೇ ಕಡು ನೆನಪು”. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಕೃಷ್ಣನ ಬಾಲಲೀಲೆಗಳಿಗಿರುವ ಜನಪ್ರಿಯತೆಗೆ, ಗಂಡುಮಗು ಶ್ರೇಷ್ಠ ಎಂಬ ಪುರುಷಪ್ರಧಾನ ಸಮಾಜದ ನಂಬಿಕೆ ಕಾರಣವಲ್ಲವೆ?

ಈ ಸಂಕಲನದ `ಅಗ್ನಿಮುಡಿ’, ಸುಪ್ತದೀಪ್ತಿಯವರ ಪ್ರಾತಿನಿಧಿಕ ಕವನ. ಕಡೆಂಗೋಡ್ಲು ಶಂಕರಭಟ್ಟರ `ಮಾದ್ರಿಯ ಚಿತೆ’ಯನ್ನು ನೆನಪಿಸುವ ಈ ಕವನ- ಪತ್ನೀ ವ್ರತಸ್ಥೆ, ಕಿಚ್ಚು-ಸಾಗರ, ಹಿಮಾಗ್ನಿ, ನೀನೊಂಟಿಯಾಗಿದ್ದೆ, ನೀರೆ -ಎಂಬ ಐದು ಭಾಗಗಳಲ್ಲಿದೆ. `ಐದು ಅಂತಃಪುರದ ಅರಸಿಯಾಗಿದ್ದವಳೆ ನಿನ್ನ ಸ್ವಂತಕ್ಕೇನು ಒದಗಿಬಂದಿತ್ತು?’ ಎಂದು ಪ್ರಶ್ನಿಸುತ್ತಾರೆ –
“ಹೆತ್ತಮಕ್ಕಳ ರಕ್ತ-ಸಿಕ್ತ ಸಿಂಹಾಸನದಿ
ಮತ್ತೆ ರಾಜ್ಯವನಾಳ್ದ ಧೀರರಿವರು
ಒಮ್ಮೆಯಾದರೂ ನಿನ್ನ ಕಣ್ಣಸಾಗರಕಿಳಿದ
ಸಾಹಸಿಗರವರೇನು, ಹೇಳು ನೀನೇ?”
`ಹೆತ್ತಮಕ್ಕಳ ರಕ್ತ-ಸಿಕ್ತ ಸಿಂಹಾಸನ’ ಎಂಬುದು ಧ್ವನಿಪೂರ್ಣ ಸಾಲು. ಮಹಾಭಾರತದ ಕೊನೆಯಲ್ಲಿ ದ್ರೌಪದಿಯ ಐವರು ಮಕ್ಕಳನ್ನು ರಕ್ಷಿಸಲು ಪಾಂಡವರಿಗಾಗಲೀ ಕೃಷ್ಣನಿಗಾಗಲೀ ಸಾಧ್ಯವಾಗುವುದಿಲ್ಲ. ಸ್ತ್ರೀಶೋಕಪರ್ವದಲ್ಲಿ ದ್ರೌಪದಿ ಅಸಹಾಯಕಳಾಗಿದ್ದಾಳೆ. “ಊರೊಡೆಯನೂರು ಕೈ ಊರಿ ಎಳೆದಾಡಿದರೆ ಊರು ಮುರಿದೆದ್ದಿತ್ತು ಸಾವಿನೆಡೆಗೆ” ಎಂಬ ಸಾಲುಗಳಲ್ಲಿರುವ ಶ್ಲೇಷೆ ಸೊಗಸಾಗಿದೆ. ಮುಡಿಯಲ್ಲೂ ಉಡಿಯಲ್ಲೂ ಕೆಂಡ ತುಂಬಿಕೊಂಡ ದ್ರೌಪದಿಯನ್ನು ಕುರಿತ `ಅಗ್ನಿಮುಡಿ’ ಜ್ಯೋತಿ ಮಹಾದೇವರ ಮುಂದಿನ ಕವನಗಳ ಕುರಿತು ಕುತೂಹಲ ಮೂಡಿಸುತ್ತದೆ.

34b50adf-cd7c-41d3-ae06-3cc1970ec69d`ಅಡುಗೆ’ – ಈ ಸಂಕಲನದ ಅಸಾಧಾರಣ ಕವನಗಳಲ್ಲೊಂದು. ಈ ಕವನದ ನಿರೂಪಕಿ ಅಡುಗೆಮನೆ ಕೆಲಸವನ್ನು ಕುರಿತ ತನ್ನ ಗೆಳತಿಯರ ಇಷ್ಟ-ಅನಿಷ್ಟಗಳನ್ನು ವಿವರಿಸುತ್ತಾಳೆ- “ನನ್ನೊಬ್ಬ ಗೆಳತಿಗೆ ಅಡುಗೆಯೆಂದರೆ ಸಂಭೋಗವಂತೆ”, “ಇನ್ನೊಬ್ಬಳಿಗೆ ಅದು ಪೂಜೆಯಂತೆ”, “ಮತ್ತೊಬ್ಬಳಿಗೆ ಅಡುಗೆ ನಿತ್ಯಕಾಯಕದ ಕರ್ಮ”, “ಅವಳಿಗೆ ಆ ಕೆಲಸ ಮಕ್ಕಳಾಟದಂತೆ”, “ಇವಳಿಗೆ ಈ ಕ್ರಿಯೆ ತಲೆಯ ಮೇಲಿನ ಹೊರೆ”. ಇವರಾರಿಗೂ ಅಡುಗೆಮನೆಯಿಂದ ಬಿಡುಗಡೆ ಇಲ್ಲ. ಸ್ವಾರಸ್ಯದ ಸಂಗತಿಯೆಂದರೆ ಇವುಗಳಲ್ಲಿ ನಿರೂಪಕಿಯ ಆಯ್ಕೆ ಯಾವುದು ಎಂಬುದು ನಿಗೂಢವಾಗಿಯೇ ಉಳಿಯುತ್ತದೆ. ಹಳೆಯ ನೆನಪುಗಳನ್ನು ಮನದಾಳದಲ್ಲಿ ತುಂಬಿಸಿ ಕಾಪಿಟ್ಟ ಹೆಣ್ಣಿನ ಆತ್ಮೀಯ ಚಿತ್ರಣ `ಮಿಡಿ-ಜಾಡಿ’ಯಲ್ಲಿದೆ. “ಬರಲೇಬೇಡಿ ನೀವು ನನ್ನಂಗಳಕ್ಕೆ, ಪುಟ್ಟಮಲ್ಲಿಗೆ ಡೊಂಕು ಸಹಿಸದವರು” (`ನನ್ನ ಅಂಗಳದ ಮಲ್ಲಿಗೆ’) – ಎನ್ನುವ ಜ್ಯೋತಿ ಮಹಾದೇವ್ ಸ್ವವಿಮಶರ್ೆಯ ಸ್ವಾಭಿಮಾನದ ಸಿದ್ಧಮಾದರಿಗಳನ್ನು ಒಪ್ಪದ ಕವಯಿತ್ರಿ.

ಸುಪ್ತದೀಪ್ತಿ ಹಳೆಯದ್ದನ್ನೆಲ್ಲ ಅಪನಂಬಿಕೆಯಿಂದ ಕಾಣುವ ಕವಯಿತ್ರಿಯಲ್ಲ. ಹಳೆಯದ್ದನ್ನು ವೈಭವೀಕರಿಸದೆ, ಪ್ರಶ್ನಿಸುತ್ತ, ಸ್ವಯಾಜರ್ಿತಗೊಳಿಸುವ ಮನೋಧರ್ಮ ಇವರದ್ದು. ಪುರಾಣಲೋಕದಲ್ಲಿ ವಿಹರಿಸುವಾಗಲೂ ಇವರ ಸ್ವಗತದ ದನಿ ದುರ್ಬಲವಾಗುವುದಿಲ್ಲ. ಈಕೆ, ಗತಕಾಲದ ವಿಷಣ್ಣ ನೆನಪುಗಳಲ್ಲಿ ಭಾವುಕಳಾಗುವ ಕವಯಿತ್ರಿಯಲ್ಲ. ದಿನನಿತ್ಯದ ಬದುಕು ರಿಕ್ತವಾದುದು ಎಂದು ಈ ಕವಯಿತ್ರಿಗೆ ಅನ್ನಿಸುವುದಿಲ್ಲ. “ಮುದುಡದಿರು ಮನವೆ, ಮುದುಡಿದರೆ ಕಸವೆಂದು ಎಸೆಯುವುದು ನಿನ್ನ” ಎನ್ನುವ ಆಶಾವಾದ ಇಲ್ಲಿದೆ. ಹಲವು ವರ್ಷ ಅಮೇರಿಕದಲ್ಲಿ ನೆಲೆಸಿದ್ದ ಈ ಕವಯಿತ್ರಿಯ ಕನ್ನಡದಲ್ಲಿ ಅಮೇರಿಕನ್ನಡದ ಪ್ರಭಾವವೇನೂ ಇಲ್ಲ. `ಅಗ್ನಿಮುಡಿ’ಯ ಕವನಗಳು ವಾಚಾಳಿತನವಿಲ್ಲದ, ವಾಚನೀಯತೆ ಇರುವ ಕವನಗಳು. ಕಾವ್ಯದ ಮುಖವಾಡ ತೊಟ್ಟು ಲಯರಹಿತ, ಪ್ರತಿಭಾರಹಿತ ರಚನೆಗಳನ್ನು ಓದಿ ಬೇಸತ್ತವರಿಗೆ `ಅಗ್ನಿಮುಡಿ’ಯ ಕವನಗಳು ಖುಷಿ ಕೊಡುತ್ತವೆ.

ಕವಿಯ ಕವನಗಳು ಇಂದಿನ ಸಮಾಜದಲ್ಲಿ ಎಷ್ಟು ಪ್ರಸ್ತುತ ಎಂಬುದನ್ನು ವಿವರಿಸುವ-
“ಕನಸೆ? ಕಲ್ಪನೆಯೆ? ಇಲ್ಲವಾದರೇನಿದೆ ಇಲ್ಲಿ
ಕಣ್ಣು ಕೀಳುವ ಸೂಜಿ, ಕೈ ಕೊಲುವ ಬಡಿಗೆ”
-ಎಂಬ ಅಡಿಗರ ಸಾಲುಗಳನ್ನು ನೆನಪಿಸಿಕೊಳ್ಳುತ್ತ, ಕವಯಿತ್ರಿ `ಸುಪ್ತದೀಪ್ತಿ’ ಜ್ಯೋತಿ ಮಹಾದೇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

‍ಲೇಖಕರು Admin

January 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anonymous

    ಅಮ್ಮ ಸಂಕಟ ಕವನ ಇಲ್ಲಿ ಹಾಕಿದರೆ ಓದಬಹುದಿತ್ತು. ಸಾಧ್ಯವಾದರೆ ಹಾಕಿರಿ

    ಪ್ರತಿಕ್ರಿಯೆ
  2. ಸುಪ್ತದೀಪ್ತಿ (ಜ್ಯೋತಿ ಮಹಾದೇವ್)

    ಅಮ್ಮ ಸಂಕಟ

    ಯಾರು ಮಂತ್ರ ಮಾಡಿದರೋ ರಂಗ ಅಳುತಿರುವ
    ಯಾರ ಕಣ್ಣು ನಾಟಿದೆಯೋ ಕೃಷ್ಣ ಕನಲಿರುವ
    ಯಾವ ಗಾಳಿ ಸೋಕಿತೇನೊ ಚೆನ್ನ ಬೆಂದಿರುವ
    ಯಾಕೆ ಹೀಗೆ ಮನವ ಹಿಂಡಿ ಚೆಲುವ ನೊಂದಿರುವ

    ಏನ ತಿನ್ನಲಿಕ್ಕಿದರೋ ಗೋಪಕನ್ನೆಯರು
    ಎಲ್ಲಿ ಆಟಕೆಳೆದಿಹರೋ ಗೊಲ್ಲಬಾಲರು
    ಎಂಥ ಮರದ ಕೆಳಗೆ ಓಡಿಯೋಡಿಬಂದನೋ
    ಏಳಲೊಲ್ಲ ಮುದ್ದುಮಲ್ಲ, ನಲುಗಿ ಕೊರಗುವ

    ಏನ ಕಂಡು ಬೆದರಿ ಬಂದು ನಡುಗುತಿರುವನೋ
    ಎಲ್ಲಿ ನಗುವ ಕಳೆದುಕೊಂಡು ಮುದುರುತಿರುವನೋ
    ಎಂಥ ಹೊಳೆಯ ಸುಳಿಯ ಒಳಗೆ ಸೆಳೆಗೆ ಸಿಲುಕಿದ
    ಏರುತಿಹುದು ತಾಪ, ರವಿಯೆ ಹಣೆಯಲಿಳಿದನೋ

    ಕಾಡಿಬೇಡಿ ಬೆಣ್ಣೆ ಮೊಸರು ಕೇಳುತಿದ್ದವ
    ಕಾಣದಂತೆ ಕಣ್ಣ ಹಿಂದೆ ಕದ್ದು ಮೆದ್ದವ
    ನೋಡು ಈಗ, ಬೇಡವೆಂದು ಮೊಗವ ತಿರುವಿದ
    ನೋಟವೆಲ್ಲೊ, ಮುರಳಿಯೆಲ್ಲೊ, ಮನವ ಕಳೆದವ

    ಅಣ್ಣ ರಾಮ ಹೇಳಿದಂಥ ಮಾತು ಸತ್ಯವೆ?
    ಬಣ್ಣ ಎರಚಿ ಮಾಯಗಾತಿ ಮರುಳು ಗೈದಳೆ?
    ಮೋಹನಾಂಗ ನನ್ನ ಕುವರ ಅವಳ ಒಲಿದನೆ?
    ಮೋಹದಲ್ಲಿ ಮುಳುಗಿ ಮರೆತು ಮೋದ ತೊರೆದನೆ?
    (೨೪-ಎಪ್ರಿಲ್-೨೦೧೪)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: