ಶ್ರವಣಕುಮಾರಿ ಸರಣಿ: ದುಡ್ಡು ಬೇಡವಾಗಿದೆಯೇ?!

ಹಾಗೆಂದು ಬರಬೇಕಾದ ಹಣಕ್ಕೆ ಮಾತ್ರ ತಲೆಕೆಡಿಸಿಕೊಳ್ಳದೆ, ಅಷ್ಟೇ ಕಾಳಜಿಯಿಂದ ಗ್ರಾಹಕರಿಗೆ ತಲುಪಬೇಕಾದ ಮೊತ್ತಕ್ಕೂ ನ್ಯಾಯ ಒದಗಿಸಿದ್ದೇನೆ. ಗ್ರಾಹಕನ ಖಾತೆ ಋಣಿತವಾಗಿ ಅವನಿಗೆ ಹಣಬಾರದ ಪ್ರಸಂಗಗಳಲ್ಲಿ ಅವನು ಶಾಖೆಗೆ ಬಂದಾಗಲೀ, ಕರೆ ಕೇಂದ್ರ(ಕಾಲ್‌ ಸೆಂಟರ್‌)ದ ಮೂಲಕವಾಗಲೀ ದೂರು ಸಲ್ಲಿಸುತ್ತಾನೆ. ಹೀಗೆ ದೂರು ಸಲ್ಲಿಸಿದಾಗ ಆಯಾ ಬ್ಯಾಂಕುಗಳಿಂದ ಹಣವನ್ನು ಮರಳಿ ಪಡೆದು ನಮ್ಮ ದೂರು ನಿರ್ವಹಣಾ ಕೇಂದ್ರ ನೇರವಾಗಿ ಗ್ರಾಹಕನ ಖಾತೆಗೆ ಇಲ್ಲವೇ ಪ್ರತಿ ಶಾಖೆಗೆ ಅವರವರಿಗೆ ಸೇರಬೇಕಾದ ಹಣವನ್ನು ಅದರ ವಿವರಗಳೊಂದಿಗೆ ಶಾಖೆಯ ಖಾತೆಗೆ ಜಮಾ ಮಾಡುತ್ತಾರೆ.

ವಹಿವಾಟು ವಿಫಲವಾದಾಗ ಕೆಲವು ಬಾರಿ ಸ.ನಿ.ಹ. ದ ಸ್ವಿಚ್ ಕೇಂದ್ರದಿಂದಲೂ ಈ ಖಾತೆಗೆ ಕೆಲವು ಮೊತ್ತಗಳು ವಿವರಗಳ ಸಹಿತ ಜಮೆಯಾಗುತ್ತವೆ. ಅಂತಹ ಮೊತ್ತಗಳಿಗೆ ಗ್ರಾಹಕನ ದೂರುಗಳಿದ್ದಲ್ಲಿ ನೇರವಾಗಿ ಅವರ ಖಾತೆಗಳಿಗೆ ಹಾಕಿ ಬಿಡಬಹುದು. ದೂರುಗಳಿಲ್ಲದಿದ್ದಲ್ಲಿ ಇದನ್ನು ಸೀದಾ ಗ್ರಾಹಕರ ಖಾತೆಗೆ ಹಾಕುವುದು ಕೊಂಚ ಮಟ್ಟಿಗೆ ಅಪಾಯವೇ. ಏಕೆಂದರೆ ಇನ್ನೆಂದೋ ಸ್ವಿಚ್‌ ಕೇಂದ್ರದವರು ನಮ್ಮ ಖಾತೆಗೆ ಮರಳಿ ಋಣಿಸಬಹುದು.

ಅಲ್ಲದೆ ʻಗ್ರಾಹಕ ದುಡ್ಡು ಕಳೆದುಕೊಂಡಿದ್ದರೂ ದೂರೇಕೆ ಇಲ್ಲʼ ಎನ್ನುವುದು ಪ್ರಶ್ನೆ! ಅಂತಹ ಸಮಯದಲ್ಲಿ ಆ ಗ್ರಾಹಕನ ಖಾತೆಯ ವಹಿವಾಟುಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ. ಕೆಲವು ಉನ್ನತ ಹುದ್ದೆಯಲ್ಲಿರುವ ಗ್ರಾಹಕರ ಉಳಿತಾಯ ಖಾತೆಯಲ್ಲೇ ಕನಿಷ್ಠ ಮೊತ್ತ ಕೆಲವು ಲಕ್ಷಗಳಲ್ಲಿರುತ್ತವೆ. ಅಂತಹ ಕೆಲವು ಗ್ರಾಹಕರು ಸ್ವ.ಸ.ಯಂನಿಂದ ಹಣ ಬಾರದಿದ್ದರೆ ಅದು ಕೆಲಸ ಮಾಡುತ್ತಿಲ್ಲವೇನೋ ಎಂದು ಭಾವಿಸಿ, ಬೇರೆ ಇನ್ನೊಂದು ಸ್ವ.ಸ.ಯಂ ನಿಂದ ಹಣ ಪಡೆದುಕೊಂಡಿರುತ್ತಾರೆ.

ವಹಿವಾಟಿನ ನಂತರ ಅದರ ವಿವರಗಳನ್ನೂ ಪಡೆದುಕೊಂಡಿರುವುದಿಲ್ಲ. ಅವರು ಬ್ಯಾಂಕಿಗೆ ಬರುವಂತ ಅಭ್ಯಾಸವನ್ನೇ ಇಟ್ಟುಕೊಂಡಿರುವುದಿಲ್ಲ. ಬ್ಯಾಂಕಿಗೆ ಸಂಬಂಧಪಟ್ಟ ತಮ್ಮ ಎಲ್ಲಾ ಕೆಲಸಗಳನ್ನೂ ತಮ್ಮ ಸಹಾಯಕರ ಮೂಲಕ ಮಾಡಿಸಿಕೊಳ್ಳುತ್ತಿರುತ್ತಾರೆ. ತಮ್ಮ ಖಾತೆಯಲ್ಲಿ ಹಣ ಋಣಿತವಾಗಿರುವುದು ಸಹಾ ಗೊತ್ತಿರುವುದಿಲ್ಲ. ವಹಿವಾಟುಗಳಲ್ಲಿ ಐದಂಕೆಯ ವಹಿವಾಟು ಸರ್ವೇ ಸಾಮಾನ್ಯ.

ಒಮ್ಮೆ ಇಂತಹ ಇಪ್ಪತ್ತು ಸಾವಿರ ರೂಪಾಯಿಗಳ ಎರಡು ಮೊತ್ತಗಳು ದೂರಿಲ್ಲದೆ ಹಲವು ಕಾಲ ನಮ್ಮ ಖಾತೆಯಲ್ಲೇ ಉಳಿದುಕೊಂಡಿತ್ತು. ಗ್ರಾಹಕನ ವಿವರಗಳಲ್ಲಿದ್ದ ಮೊಬೈಲ್ ಸಂಖ್ಯೆಗೆ ಫೋನಾಯಿಸಿದೆ. ವಿವರಗಳ ಪ್ರಕಾರ ಆ ಗ್ರಾಹಕ ಒಬ್ಬ ಮಹಿಳೆ. ಆದರೆ ಕರೆ ಸ್ವೀಕರಿಸಿದ್ದು ಒಂದು ಗಂಡು ದನಿ. ನಾನು ʻಇಂತವರ ಜೊತೆ ಮಾತನಾಡಬೇಕಿತ್ತುʼ ಎಂದೆ. ʻಇದು ಅವರ ಸಂಖ್ಯೆಯಲ್ಲ, ಅವರ ತಂದೆಯದು. ನಾನು ಅವರ ಆಪ್ತ ಕಾರ್ಯದರ್ಶಿ. ಏನಾಗಬೇಕಿತ್ತು?ʼ ಎಂದರು.

ʻನಾನು ಬ್ಯಾಂಕಿನಿಂದ ಮಾತನಾಡುತ್ತಿರುವುದು. ಕೆಲವು ವಿವರಗಳನ್ನು ಆಕೆಯಿಂದಲೇ ಪಡೆಯಬೇಕಿತ್ತು. ಆಕೆಯ ಸಂಪರ್ಕ ಸಂಖ್ಯೆಯನ್ನು ಕೊಡಲು ಸಾಧ್ಯವೇ?ʼ ಎಂದೆ. ʻಸ್ವಲ್ಪ ನಿಲ್ಲಿ; ಅವರ ತಂದೆಯವರಿಗೇ ಕೊಡುತ್ತೇನೆʼ ಎಂದವರು ಅದನ್ನು ತಮ್ಮ ಮೇಲಧಿಕಾರಿಯ ಕೈಗೆ ಕೊಟ್ಟರು. ಕೆಲಕಾಲದ ನಂತರ ಸಂಪರ್ಕಕ್ಕೆ ಬಂದವರು ʻತಾವು ಇಂತವರುʼ ಎಂದು ಪರಿಚಯಿಸಿಕೊಂಡಾಗ ನನಗೆ ಶಾಕ್!‌ ಅವರು ನಮ್ಮ ಶಾಖೆಯ ಅತಿ ಮುಖ್ಯ ಗ್ರಾಹಕ ಕಂಪನಿಯ ಉಪ ನಿರ್ದೇಶಕರು!!

ಕೇವಲ ಶಾಖೆಯ ಹಿರಿಯ ಅಧಿಕಾರಿಗಳು ಮಾತ್ರಾ ಸಂಪರ್ಕಿಸುವ ಅಂತವರೊಡನೆ ಮಾತಾಡುವುದೆಂದರೇ ಒಂದು ನಡುಕ. ನನ್ನ ಯಾವ ಮಾತು ಹೆಚ್ಚೋ, ಯಾವುದು ಕಡಿಮೆಯೋ. ಆದರೆ ಈಗ ಅವರು ಕರೆಯ ಮೇಲಿದ್ದಾರೆ; ನಾನು ಫೋನಿನ ದೋಣಿಯ ಮೇಲೆ. ಮಾತಾಡಲೇ ಬೇಕು. ಹೆದರುತ್ತಾ ನನ್ನನ್ನು ಪರಿಚಯಿಸಿಕೊಂಡೆ.

ʻನಿಮ್ಮ ಮಗಳು ಇಂತಹ ದಿನ ಎಟಿಎಂನಲ್ಲಿ ಹಣ ಪಡೆಯುವಾಗ ಅವರಿಗೆ ಏನೋ ತೊಂದರೆಯಾಗಿದೆ ಎಂದು ನಮಗೆ ಸಂದೇಶ ಬಂದಿದೆ. ಏನು ತೊಂದರೆಯಾಯಿತು ಎಂದು ಕೇಳಲು ಕರೆಮಾಡಿದೆ. ಅವರ ಗ್ರಾಹಕ ವಿವರಗಳಲ್ಲಿ ಈ ಮೊಬೈಲ್‌ ಸಂಖ್ಯೆ ಮಾತ್ರಾ ಇದ್ದುದರಿಂದ ನಿಮಗೆ ಕರೆಮಾಡಿ ತೊಂದರೆ ಕೊಡಬೇಕಾಯಿತು. ದಯವಿಟ್ಟು ಅವರ ಸಂಪರ್ಕ ಸಂಖ್ಯೆಯನ್ನು ನೀಡಲು ಸಾಧ್ಯವೇ?ʼ ವಿನಂತಿಸಿಕೊಂಡೆ.

ʻನಾನು ಅವಳನ್ನು ಕೇಳಿ ತಿಳಿದುಕೊಂಡು ಮತ್ತೆ ಕರೆಮಾಡುತ್ತೇನೆʼ. ಕರೆಯನ್ನು ಮುಗಿಸಿದರು. ʻನನಗೇಕೆ ಬೇಕಿತ್ತು ಈ ಉಪದ್ವಾಪ್ಯ, ದೊಡ್ಡವರ ಸಹವಾಸ, ತೆಪ್ಪಗಿರದೆ ಮಾಡಿದ್ದು ತಪ್ಪಾಯಿತೇನೋ. ಏನು ಕಾದಿದೆಯೋ ಮುಂದೆʼ ಎಂದು ನನ್ನನ್ನೇ ನಾನು ಹಲವು ಸಲ ಹಳಿದುಕೊಂಡೆ. ಮಾಡಿದ್ದಾದ ಮೇಲೆ ಹಿಂದೆ ಹೋಗಲು ಸಾಧ್ಯವಿಲ್ಲವಲ್ಲ!

ಇದಾಗಿ ಎರಡನೆಯ ದಿನ ಬ್ಯಾಂಕಿನ ದೂರವಾಣಿಗೆ ನನ್ನನ್ನು ಕೇಳಿಕೊಂಡು ಕರೆಯೊಂದು ಬಂತು. ಅಷ್ಟು ಹೊತ್ತಿಗೆ ಈ ವಿಷಯ ನನ್ನ ಮನಸ್ಸಿನ ಹಿಂದಿನ ಕೋಣೆಗೆ ಹೋಗಿತ್ತು. ಕರೆಯ ಮೇಲಿದ್ದವರು ಅದೇ ಉಪ ನಿರ್ದೇಶಕರು. ಭಯದಿಂದಲೇ ಕರೆಯನ್ನು ಸ್ವೀಕರಿಸಿದೆ. ಆದರೆ ಅಂತಹ ಭಯಕ್ಕೆ ಅವಕಾಶವನ್ನು ನೀಡದೇ ಅವರು ಫೋನ್ನಿನ ಸಂಭಾಷಣೆಯ ಪೀಠಿಕೆಯನ್ನು ಹೇಳಿ ತಮ್ಮ ಮಗಳಿಗೆ ಅಂದು ಯಾವುದೋ ಮಾಲ್‌ನಲ್ಲಿದ್ದ ನಮ್ಮ ಸ್ವ.ಸ.ಯಂ.ನಿಂದ ಪ್ರಯತ್ನಿಸಿದಾಗ ದುಡ್ಡು ಎಣಿಸುತ್ತಿರುವ ಸದ್ದು ಕೇಳಿಸಿದರೂ, ಹಲವು ನಿಮಿಷಗಳವರೆಗೂ ಹಣ ಬರಲಿಲ್ಲವೆಂದು, ಇನ್ನೊಮ್ಮೆ ಪ್ರಯತ್ನಿಸಿದರೂ ಹಾಗೇ ಆದ ಮೇಲೆ ಆ ಎ.ಟಿ.ಎಂ. ಕೆಲಸ ಮಾಡುತ್ತಿಲ್ಲವೆಂದು ಸನಿಹದಲ್ಲೇ ಇದ್ದ ಇನ್ನೊಂದು ಬ್ಯಾಂಕಿನ ಸ್ವ.ಸ.ಯಂ.ನಿಂದ ಹಣ ಪಡೆದುಕೊಂಡಳೆಂದು ತಿಳಿಸಿದರು.

“ನಂತರ ಅವರು ತಮ್ಮ ವಹಿವಾಟಿನ ವಿವರವನ್ನು ಪಡೆದುಕೊಳ್ಳಲಿಲ್ಲವೇ” ಎಂದು ಕೇಳಿದೆ. “ಪ್ರಾಯಶಃ ಇಲ್ಲ. ಏಕೆ ಏನು ತೊಂದರೆಯಾಗಿದೆ?” ಎಂದರು. ನಾನು “ತೊಂದರೆಯಲ್ಲ; ಆ ವಹಿವಾಟಿನಲ್ಲಿ ನಿಮ್ಮ ಮಗಳ ಖಾತೆಯಲ್ಲಿ ಹಣ ಕಡಿತವಾಗಿದೆ. ಆದರೆ ಅದಕ್ಕಾಗಿ ಅವರು ದೂರೇಕೆ ಸಲ್ಲಿಸಿಲ್ಲ?” ಎಂದೆ.

“ಹೌದೇ? ಪ್ರಾಯಶಃ ಅದು ಅವಳ ಗಮನಕ್ಕೆ ಬಂದಿಲ್ಲ. ಏಕೆಂದರೆ ಅವಳು ಪಾಸ್‌ ಬುಕ್ಕು, ಚೆಕ್‌ ಬುಕ್ಕು ಎಲ್ಲವನ್ನೂ ನಮ್ಮಲ್ಲಿಯೇ ಬಿಟ್ಟು ಬರಿಯ ಡೆಬಿಟ್‌ ಕಾರ್ಡನ್ನು ಮಾತ್ರ ತನ್ನೊಂದಿಗೆ ಒಯ್ದಿದ್ದಾಳೆ. ಅವಳ ಸಂಬಳದ ಖಾತೆಯಿರುವುದು ಬೇರೊಂದು ಬ್ಯಾಂಕಿನಲ್ಲಿ. ಅವಳು ಓದುತ್ತಿದ್ದಾಗ ಈ ಖಾತೆಯನ್ನು ಉಪಯೋಗಿಸುತ್ತಿದ್ದಳು. ಈಗ ಅಪರೂಪದಲ್ಲಿ ಒಮ್ಮೊಮ್ಮೆ ಇದರಲ್ಲಿ ವಹಿವಾಟು ನಡೆಸುತ್ತಾಳೆ. ಅವಳಿರುವುದು ದೆಹಲಿಯಲ್ಲಿ. ಒಂದು ಕಂಪನಿಯ ಕಾನೂನು ಸಲಹೆಗಾರಳಾಗಿ ಕೆಲಸ ಮಾಡುತ್ತಿದ್ದಾಳೆ. ನಾನೂ ಬಹಳ ದಿನಗಳಿಂದ ಅವಳ ಪಾಸ್‌ ಬುಕ್ಕನ್ನು ಭರ್ತಿಮಾಡಿಸಿಲ್ಲ. ಅವಳ ಸಂಪರ್ಕ ಸಂಖ್ಯೆಯನ್ನು ತೆಗೆದುಕೊಳ್ಳಿ. ಇದನ್ನು ನಿಮ್ಮ ಕಂಪ್ಯೂಟರಿನಲ್ಲಿ ಭರ್ತಿ ಮಾಡಿಕೊಳ್ಳಿ. ನಾನು ಅವಳೊಂದಿಗೆ ಮಾತಾಡುತ್ತೇನೆ. ಸಾಧ್ಯವಾದರೆ ನೀವೂ ಸಂಪರ್ಕಿಸಿ” ಎನ್ನುತ್ತಾ ಆಕೆಯ ನಂಬರನ್ನು ಕೊಟ್ಟು ಕರೆಯನ್ನು ಮುಗಿಸಿದರು.

ನಂತರ ಅವರ ಮಗಳಿಗೆ ಕರೆಮಾಡಿ, ಇನ್ನೊಮ್ಮೆ ಪ್ರತಿಯೊಂದು ವಿವರವನ್ನೂ ಖಚಿತಪಡಿಸಿಕೊಂಡು, ಅವಳಿಗೆ ಬ್ಯಾಂಕಿನ ಇ-ಮೇಲ್‌ ವಿಳಾಸವನ್ನು ನೀಡಿ ಒಂದು ದೂರನ್ನು ದಾಖಲಿಸಲು ಹೇಳಿದೆ. ಈ ಘಟನೆಯಿಂದ ಅವಳಿಗೆ ತುಂಬಾ ಸಂತೋಷವಾಗಿತ್ತು. ʻಬ್ಯಾಂಕಿನಲ್ಲಿ ನಮ್ಮ ದುಡ್ಡು ಸುಭದ್ರವಾಗಿದೆʼ ಎಂದು ಖುಷಿಯಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದಳು. ಮುಂದೆ ಯಾವಾಗಲೋ ಏನೋ ಕೆಲಸದ ಮೇಲೆ ಬಂದಿದ್ದ ಆ ಉಪ ನಿರ್ದೇಶಕರು ನಮ್ಮ ಶಾಖಾ ವ್ಯವಸ್ಥಾಪಕರೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಆ ನಂತರವೂ ಯಾವುದಾದರೂ ವಿಷಯಕ್ಕೆ ನನ್ನನ್ನು ಸಂಪರ್ಕಿಸುತ್ತಿದ್ದರು. ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ ಅವರೇ ಖುದ್ದಾಗಿ ತಮ್ಮ ಕೆಲಸಗಳಿಗೆ ಬರುತ್ತಿದ್ದರು. ಮುಂಗಟ್ಟೆಯಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಅವರೂ ತಾವಾಗಿ ತಮ್ಮ ಪರಿಚಯವನ್ನು ಹೇಳಿಕೊಂಡಾಗಲೀ, ಮೇಲಿರುವ ಶಾಖಾ ವ್ಯವಸ್ಥಾಪಕರ ಕೋಣೆಯಲ್ಲಿ ಕುಳಿತಾಗಲೀ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಿರಲಿಲ್ಲ.

ನಾನು ಗಮನಿಸಿದರೆ ಅವರ ಕೆಲಸವನ್ನು ತಕ್ಷಣ ಮಾಡಿಕೊಡುತ್ತಿದ್ದೆ. ಇಲ್ಲದಿದ್ದರೆ ಅವರು ತಮ್ಮ ಕೆಲಸವಾದ ನಂತರ ಬಂದು ನನ್ನೊಂದಿಗೆ ಒಂದೆರಡು ಕ್ಷೇಮ ಸಮಾಚಾರದ ಮಾತುಗಳನ್ನು ಆಡದೇ ಹೋಗುತ್ತಿರಲಿಲ್ಲ. ಮಗಳನ್ನೂ ಒಮ್ಮೆ ಕರೆದುಕೊಂಡು ಬಂದು ಪರಿಚಯ ಮಾಡಿಸಿದರು. ಮಗಳು ಬೆಂಗಳೂರಿನ ನ್ಯಾಷನಲ್‌ ಸ್ಕೂಲ್‌ ಆಫ್‌ ಲಾ ನಿಂದ ಪದವೀಧರೆ. ಚಿಕ್ಕ ವಯಸ್ಸಿಗೇ ಅತಿ ದೊಡ್ಡ ಸ್ಥಾನವನ್ನೇರಿದ್ದಳು. ಆದರೆ ಗುಣದಲ್ಲಿ ತಂದೆಯಂತಿದ್ದಳೇನೋ. ಭಿಡೆಯಿಲ್ಲದೆ ಸಂತೋಷದಿಂದ ಕೆಲವು ನಿಮಿಷ ಹರಟಿದಳು.

ಅವರ ಮಗನ, ಮಗಳ ಮದುವೆಗೆ ಆತ ಆಮಂತ್ರಣವನ್ನೂ ಕೊಟ್ಟಿದ್ದರು. ನನ್ನ ಮಗಳ ಮದುವೆಗೂ ಮಡದಿಯೊಂದಿಗೆ ಬಂದು ಶುಭ ಹಾರೈಸಿದರು. ಇಂದಿಗೂ ಹಬ್ಬಗಳಂದು ಅವರ ಶುಭಾಶಯದ ಸಂದೇಶಗಳು ಬರುತ್ತಲೇ ಇರುತ್ತವೆ. ಗ್ರಾಹಕನ ಹಣ ಅವನ ಖಾತೆಗೇ ಸೇರಬೇಕು ಎನ್ನುವ ಒಂದು ಪ್ರಯತ್ನ ಒಬ್ಬ ಒಳ್ಳೆಯ ವ್ಯಕ್ತಿಯ ಪರಿಚಯಕ್ಕೆ ಕಾರಣವಾಯಿತು ಎನ್ನಿಸಿ ಖುಷಿಯಾಗುತ್ತದೆ.

ದೂರು ಕೊಟ್ಟರೂ ದುಡ್ಡೇಕೆ ವಾಪಸ್ಸು ಬರಲಿಲ್ಲ?

ಹೀಗೇ ಇನ್ನೊಂದು ಪ್ರಸಂಗದಲ್ಲಿ ಒಬ್ಬ ಅನಿವಾಸಿ ಗ್ರಾಹಕರೊಬ್ಬರು ಆಭರಣಗಳ ಮಳಿಗೆಯಲ್ಲಿ ಮಾಡಿದ ಒಂದು ವಹಿವಾಟಿನ ಮೊತ್ತ ಬಂದು ನಮ್ಮ ಖಾತೆಯಲ್ಲಿ ಜಮೆಯಾಗಿತ್ತು. ಆ ಸಮಯದಲ್ಲಿ ನಾನು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಮರಳಿ ಬಂದ ನಂತರ ಆ ಕೆಲಸವನ್ನು ನೋಡಿಕೊಳ್ಳುತ್ತಿದ್ದ ಸಹೋದ್ಯೋಗಿಯನ್ನು ʻಅದರ ಬಗ್ಗೆ ಏನಾದರೂ ದೂರು ಬಂದಿತ್ತೆ?ʼ ಎಂದು ಕೇಳಿದರೆ ಅವಳು ಇಲ್ಲವೆಂದಳು. ಅವರ ವಿದೇಶದ ಸಂಖ್ಯೆಗೆ ಫೋನಾಯಿಸಲು ಸಾಧ್ಯವಾಗಲಿಲ್ಲ. ಕಡೆಗೆ ಅವರ ಖಾತೆಯ ವಿವರಗಳನ್ನೆಲ್ಲಾ ನೋಡುತ್ತಾ ಹೋದರೆ ಅವರ ಖಾತೆಯಿಂದ ಇನ್ನೊಂದು ಖಾತೆಗೆ ಆಗಾಗ ಹಣ ವರ್ಗಾವಣೆಯಾಗುತ್ತಿತ್ತು. ನಮ್ಮ ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿರುವ ಶಾಖೆಯದು. ಆ ಗ್ರಾಹಕನ ವಿವರಗಳನ್ನು ತೆಗೆದು ಗ್ರಾಹಕನ ಪೂರ್ಣ ಹೆಸರನ್ನು ನೋಡಿದರೆ ಅದು ನಮ್ಮ ಗ್ರಾಹಕನ ತಂದೆಯದೆಂದು ತಿಳಿಯಿತು.

ಅವರಿಗೆ ಕರೆಮಾಡಿ, ಅವರ ಮಗನನ್ನು ಬ್ಯಾಂಕಿನ ಯಾವುದೋ ವಿಚಾರಕ್ಕಾಗಿ ಸಂಪರ್ಕಿಸಬೇಕಾಗಿದೆ ಎಂದೆ. ಅವರು ತಕ್ಷಣವೇ ʻಆಭರಣ ಮಳಿಗೆಯ ವಹಿವಾಟಿಗೆ ಸಂಬಂಧಿಸಿದ್ದೇʼ ಎಂದು ಕೇಳಿದರು. ನಾನು ಏನೂ ತಿಳಿಯದವಳಂತೆ, “ಯಾವ ವಹಿವಾಟು, ಏನು ವಿಚಾರ” ಎಂದು ಕೇಳಿದೆ. ಅವರು “ಮಗ ಇಲ್ಲಿಗೆ ಬಂದಿದ್ದಾಗ ತಾಯಿಗೆ ಉಡುಗೊರೆಯಾಗಿ ಸರವನ್ನು ಖರೀದಿಸಲು ಹೋದಾಗ ನಮ್ಮ ಡೆಬಿಟ್‌ ಕಾರ್ಡ್‌ ಕೆಲಸ ಮಾಡದೆ, ತನ್ನೊಂದಿಗಿದ್ದ ಇನ್ನೊಂದು ಬ್ಯಾಂಕಿನ ಕಾರ್ಡನ್ನು ಉಪಯೋಗಿಸಿ ಹಣವನ್ನು ಪಾವತಿ ಮಾಡಿದ. ಆದರೆ ಆಮೇಲೆ ಅವನ ಖಾತೆಯಲ್ಲಿ ಹಣ ಕಡಿತವಾದ ಸಂದೇಶ ಬಂದಿತ್ತು. ದೂರು ದಾಖಲಿಸಿದರೆ ʻಒಂದು ವಾರದಲ್ಲಿ ಹಣ ಮರಳಿ ಖಾತೆಗೆ ಜಮೆಯಾಗುತ್ತದೆʼ ಅಂದರು. ಅವನು ಇಲ್ಲಿರುವ ತನಕವೂ ಬರಲಿಲ್ಲ; ಇಂದಿನವರೆಗೂ ಬಂದಿಲ್ಲ.

ನಾನು ಇಲ್ಲಿ ಮನೆಯ ಬಳಿ ಇರುವ ಶಾಖೆಗೆ ಹೋದಾಗೆಲ್ಲಾ ಅವನ ಪಾಸ್‌ಬುಕ್ಕನ್ನು ತೆಗೆದುಕೊಂಡು ಹೋಗಿ ಭರ್ತಿ ಮಾಡಿಸುತ್ತಿರುತ್ತೇನೆ. ನನಗೂ ವಯಸ್ಸಾಗಿದೆ. ಅಷ್ಟು ದೂರದವರೆಗೂ ಬರಲಾಗಿಲ್ಲ. ಅವನು ಫೋನ್‌ ಮಾಡಿದಾಗೆಲ್ಲಾ ವಿಚಾರಿಸುತ್ತಾನೆ” ಎಂದರು. “ದೂರಿನ ಸಂಖ್ಯೆ ಇದೆಯೇ?” ಎಂದು ಕೇಳಿದೆ. “ಅವನ ಬಳಿ ಇದೆ. ಎಲ್ಲೋ ಬರೆದಿಟ್ಟು ಹೋಗಿದ್ದ. ನನಗೀಗ ನೆನಪಿಗೆ ಬರುತ್ತಿಲ್ಲ” ಎಂದರು.

“ಹಾಗಾದರೆ ಅವರು ಆ ದೂರಿನ ಸಂಖ್ಯೆಯನ್ನು ಉಲ್ಲೇಖ ಮಾಡಿ ನಮ್ಮ ಬ್ಯಾಂಕಿನ ಇ-ಮೇಲ್‌ ವಿಳಾಸಕ್ಕೆ ಒಂದು ಅಂಚೆಯನ್ನು ಕಳುಹಿಸಲಿ, ನಾನು ದುಡ್ಡು ವಾಪಸ್ಸು ತರಿಸಲು ಪ್ರಯತ್ನ ಪಡುತ್ತೇನೆ” ಎಂದೆ. ಮರುದಿನವೇ ಆ ಗ್ರಾಹಕ ಇ-ಅಂಚೆಯಲ್ಲಿ ದೂರಿನ ಸಂಖ್ಯೆಯೊಂದಿಗೆ ಎಲ್ಲವನ್ನೂ ವಿವರವಾಗಿ ಬರೆದು, ಎರಡು ತಿಂಗಳಾದರೂ ಆತನಿಗೆ ದುಡ್ಡು ಮರಳಿ ಬಾರದಿರುವ ಬಗ್ಗೆ ತನ್ನ ಅಸಮಾಧಾನವನ್ನು ತೋಡಿಕೊಂಡಿದ್ದ.

ದೂರಿನ ವಿವರವನ್ನು ನೋಡಿದರೆ ʻಖಾತೆಗೆ ಜಮೆ ಮಾಡಲಾಗುತ್ತದೆʼ ಎನ್ನುವ ಷರಾದಿಂದ ಮುಚ್ಚಲಾಗಿತ್ತು. ದೂರನ್ನು ಒಂದು ವಾರದೊಳಗೆ ಮುಗಿಸಲೇಬೇಕು ಎನ್ನುವ ಮೇಲಿನವರ ಒತ್ತಾಯದಿಂದ ಈ ರೀತಿ ಆಗಿತ್ತು. ದೂರನ್ನು ನೋಡಿದವರು ಯಾರೋ… ಮುಚ್ಚಿದವರು ಯಾರೋ!! ಒಟ್ಟಿನಲ್ಲಿ ನಮ್ಮ ಖಾತೆಯಲ್ಲಿ ಮೊತ್ತ ಭದ್ರವಾಗಿ ಕುಳಿತಿತ್ತು.

ತಕ್ಷಣವೇ ಆತನ ಖಾತೆಗೆ ಹಣವನ್ನು ಜಮೆ ಮಾಡಿ ಆತನ ಇ-ಅಂಚೆಗೆ ಉತ್ತರಿಸಿದೆ. ಆತ ತುಂಬ ಸಂತೋಷದಿಂದ ನನ್ನ ಕಾಳಜಿಗೆ ಧನ್ಯವಾದವನ್ನು ಹೇಳಿ ಮರು ಉತ್ತರಿಸಿದ. ತಲುಪಬೇಕಾಗಿರುವ ವ್ಯಕ್ತಿಗೆ ತಲುಪಿಸಿದ ಧನ್ಯತೆ ನನ್ನಲ್ಲಿತ್ತು. ಇಂತಹ ಹಲವು ಪ್ರಸಂಗಗಳು ಇದ್ದರೂ ಉದಾಹರಣೆಯಾಗಿ ಇವೆರಡು ಸಾಕು. ಬ್ಯಾಂಕಿಗೆ ಯಾವ ಕಾರಣದಿಂದಲೂ ನಷ್ಟವಾಗಬಾರದು; ಗ್ರಾಹಕನಿಗೆ ಎಂತಹ ಪ್ರಸಂಗಗಳಲ್ಲೂ ಅನ್ಯಾಯವಾಗಬಾರದು ಎನ್ನುವ ನಿಯಮದಿಂದ ನಾನು ಇಂತಹ ಪ್ರಸಂಗಗಳನ್ನು ನಿಭಾಯಿಸುತ್ತಿದ್ದೆ.

ಗ್ರಾಹಕರ ದೂರುಗಳಲ್ಲಿ ಕೆಲವು ಪ್ರಸಂಗಗಳು

ದುಡ್ಡು ಕಟ್ಟಾದ್ರೂ ಕಾಸು ಬರ್ನಿಲ್ಲ

“ಮೇಡಂ ನನ್ನ ಅಕೌಂಟಲ್ಲಿ ದುಡ್ಡು ಕಟ್ಟಾಗಿದೆ. ಕಾಸು ಬಂದಿಲ್ಲ” ಪೋಲೀಸೊಬ್ಬ ಎದುರು ಬಂದು ಕುಳಿತ. ನಮ್ಮಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪೋಲೀಸರ ಸಂಬಳದ ಖಾತೆಗಳಿದ್ದವು. “ನಾನು ದೀಪಾವಳಿಗೆ ಮಾವನ ಮನೆಗೆ ಮಧುಗಿರಿಗೆ ಹೋಗಿದ್ನಾ, ಅಲ್ಲಿ ಪಟಾಕಿ ಕೊಡ್ಸೂಂತ ಬಾಮೈದ ಹಿಂದೆ ಬಿದ್ದ. ಮೊದಲ್ನೇ ದೀಪಾವಳಿಗೆ ಪಟಾಕಿ ತರ್ನಿಲ್ಲ ಅಂತ ನಮ್ಮೆಂಗುಸ್ರೂ ಮುನ್ಸಿಕೊಂಡಿದ್ರು. ಸರಿ, ಒಂದೆರಡ್ಸಾವರ ರೂಪಾಯ್ನ ಪಟಾಕಿ ಕೊಡ್ಸೇ ಬಿಡಮಾ ಅಂತ ಅಲ್ಲಿದ್‌ ಸಿಂಡಿಕೇಟ್‌ ಬ್ಯಾಂಕಿನ ಎಟಿಎಂಗೆ ಓದ್ನಾ, ಎಲ್ಲಾ ಸರಿಯಾಗೇ ಮಾಡ್ದೆ, ಒಳೀಕೆ ದುಡ್ಡು ಗಲಗಲಾಂತಂದಿದ್ದೂ ಕೇಳಿಸ್ತಾ, ಕಾಸು ಬರ್ನಿಲ್ವೇ… ಇನ್ನೊಂದಪ ನೋಡೋನ ಅಂದ್ರೆ ಮೆಸೀನು ಪೂರಾ ನಿಂತೇ ಓಗದೆ. ಬಾಮೈದ ಬೇರೆ ಜತೇಗಿದ್ನಾ, ಅವ್ನು ಭಾವ ಪಟಾಕಿ ಕೊಡ್ಸೋಕೆ ನಾಮ ಆಕಕ್ಕೆ ಇಂಗೆ ಆಟ ಕಟ್ತವ್ನೆ ಅಂದ್ಕಂಬಿಟ್ಟ ಮೇಡಂ. ಅಂಗೇ ಓಗಿ ಅಕ್ಕನತ್ರವೂ ದೂರು ಏಳವ್ನೆ. ನಮ್ಮೆಂಗುಸ್ರು ಅವತ್ತೆಲ್ಲಾ ನನ್ತಾಕೆ ಮಾತಾಡ್ಲೇ ಇಲ್ಲ. ಆಮ್ಯಾಕೆ ಅಬ್ಬದ್‌ ದಿನ್ವೇ ಅದೇ ಊರ್ನಾಗಿದ್ದ ಮೈಸೂರು ಬ್ಯಾಂಕಿನ ಎಟಿಎಂನಿಂದ ದುಡ್ಡು ತೆಗ್ದು ಮಾನ ಉಳಿಸ್ಕಂಡೆ. ಅಬ್ವಾದ್‌ ಮೇಲೆ ಸಿಂಡಿಕೇಟ್‌ ಬ್ಯಾಂಕಿಗೋಗಿ ಇಂಗಾಯ್ತೂಂತ ಕೇಳಿದ್ರೆ ನಿಮ್ಮ ಬ್ಯಾಂಕಿಗೋಗಿ ದೂರು ಕೊಡಿ ಅಂದ್ರು” ಪೂರಾ ಪ್ರಸಂಗವನ್ನು ಸಿನಿಮಾ ತೋರಿಸಿದ ರೀತಿ ಹೇಳಿದ.

ಹೊಸ ಹೆಂಡತಿ, ಬಾಮೈದನೆದುರಿಗೆ ಅವಮಾನವಾಗಿದ್ದಕ್ಕೆ ಅವನಿಗೆ ತುಂಬಾ ಬೇಜಾರಾಗಿತ್ತು; ಕತೆ ಕೇಳಿ ನನಗೆ ನಗು ಬಂದರೂ ತಡೆದುಕೊಂಡು ಅವನ ದೂರನ್ನು ದಾಖಲಿಸಿಕೊಂಡೆ. ʻಒಂದು ವಾರದೊಳಗೆ ನಿಮ್ಮ ಖಾತೆಗೆ ಜಮೆಯಾಗತ್ತೆʼ ಎಂದು ಅಭಯ ನೀಡಿ ಕಳುಹಿಸಿದೆ. ಆದರೆ ನಾಲ್ಕನೇ ದಿನವೇ ದೂರನ್ನು ʻವಹಿವಾಟು ಫಲಪ್ರದವಾಗಿದೆʼ ಎಂದು ಷರಾ ಬರೆದು ಮುಚ್ಚಿದ್ದರು. ಪೋಲೀಸಪ್ಪನ ಗೋಳು ಹೇಳತೀರದು.

ಅವನಿಗೆ ತನ್ನ ಪ್ರಾಮಾಣಿಕತೆಯನ್ನು ಹೆಂಡತಿಗೆ ಸಾಬೀತು ಪಡಿಸುವ ಚಿಂತೆ. “ಅದು ಹೇಗೆ ಸಾಧ್ಯ? ನಂಗೆ ಖಂಡಿತಾ ಬರ್ನಿಲ್ಲ ಮೇಡಂ” ಎಂದು ಅಲವತ್ತುಕೊಂಡ. ಇನ್ನೊಂದು ಬಾರಿ ದೂರು ದಾಖಲಿಸಿ ಅವನನ್ನು ಕಳುಹಿಸಿದ ಮೇಲೆ ನೋಡೋಣವೆಂದುಕೊಂಡು ಸಿಂಡಿಕೇಟ್‌ ಬ್ಯಾಂಕಿನ ಮಧುಗಿರಿ ಶಾಖೆಗೆ ಫೋನಾಯಿಸಿದೆ. ಅಲ್ಲಿನ ಲೆಕ್ಕಾಧಿಕಾರಿ ತಮ್ಮಲ್ಲಿ ಆ ದಿನ ತಿರಸ್ಕೃತ ಕೋಶದಲ್ಲಿ ಎರಡು ಸಾವಿರ ರೂಪಾಯಿಗಳು ಇತ್ತು; ಆದರೆ ದೂರು ಬಾರದ ಕಾರಣ ನಾವೇನೂ ಮಾಡುವಂತಿಲ್ಲ ಎಂದರು.

ಸಿಂಡಿಕೇಟ್‌ ಬ್ಯಾಂಕಿನ ದೂರು ನಿರ್ವಹಣಾ ಕೇಂದ್ರದವರು ಆ ವಹಿವಾಟಿನ ಇ.ಜೆ.ಲಾಗ್‌ ಪ್ರಕಾರ ಯಶಸ್ವಿಯಾಗಿದೆ ಎನ್ನುವ ಷರಾ ಬರೆದಿದ್ದರು; ಆದರೆ ದುಡ್ಡು ಹೊರಬೀಳುವ ಮುನ್ನವೇ ಸ್ಚಿಚ್‌ ಕೇಂದ್ರದೊಂದಿಗೆ ಸಂಪರ್ಕ ಕಡಿತವಾಗಿದೆ. ವಾಸ್ತವವಾಗಿ ಆ ದೂರು ಆ ಶಾಖೆಯನ್ನು ತಲುಪಿರಲೇ ಇಲ್ಲ. ಕಡೆಗೆ ನಾನು ಅವರ ದೂರು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿ, ವಿಷಯ ಹೀಗಿದೆ; ದುಡ್ಡು ನಿಮ್ಮ ಆ ಶಾಖೆಯಲ್ಲಿದೆ ದಯವಿಟ್ಟು ನಮ್ಮ ಗ್ರಾಹಕನಿಗೆ ಮರಳಿಸಿ ಎಂದು ಕೋರಿದೆ.

ಅವರಿಗೆ ಸ್ವಲ್ಪ ಮಟ್ಟಿಗೆ ಕೋಪವೇ ಬಂದು ʻನೀವು ಹಾಗೆಲ್ಲಾ ನಮ್ಮ ಶಾಖೆಯನ್ನು ಸಂಪರ್ಕಿಸುವಂತಿಲ್ಲ; ಕೇವಲ ದೂರು ದಾಖಲಿಸಬೇಕಷ್ಟೇʼ ಎಂದರು. ನಾನೂ ಅಷ್ಟೇ ಸಮಾಧಾನದಿಂದ ಎರಡನೇ ಬಾರಿಯ ದೂರೂ ವಿಫಲವಾದ್ದರಿಂದ, ಮತ್ತು ಗ್ರಾಹಕನ ದೂರಿನಲ್ಲಿ ಸತ್ಯವಿದೆ ಎಂದು ಮನಗಂಡಿದ್ದರಿಂದ ನಾನು ಸಂಪರ್ಕಿಸಲೇ ಬೇಕಾಯಿತು. ನೀವು ದಯವಿಟ್ಟು ಗ್ರಾಹಕನಿಗೆ ಹಣವನ್ನು ಮರಳಿಸಿ. ಈಗ ಮತ್ತೊಮ್ಮೆ ದೂರನ್ನು ದಾಖಲಿಸುತ್ತಿದ್ದೇನೆʼ ಎಂದು ಕೋರಿಕೊಂಡೆ.

ನಂತರ ಎರಡು ದಿನದಲ್ಲಿ ಆತನ ಖಾತೆಗೆ ಹಣ ಮರಳಿ ಬಂತು. ಭಲೆ ಖುಷಿಯಾಗಿ ಬಂದ ಆ ಪೋಲೀಸಪ್ಪ “ನನ್ದುಡ್ಡು ಓಗೇಬಿಡ್ತೇನೋ, ನಮ್ಮೆಂಗುಸ್ರು ನನ್ನ ಸುಳ್ಳ ಅನ್ಕಂಬಿಟ್ರಲ್ಲ ಅಂತ ಶಾನೇ ಬೇಜಾರಾಗಿತ್ತು. ಸದ್ಯ ತರ್ಸಿಕೊಟ್ಟು ನನ್ನ ಮಾನ ಉಳಿಸಿದ್ರಿ. ನಾನು ಸಿದ್ದಾಪುರ ಪೋಲಿಸ್‌ ಸ್ಟೇಷನ್ನಾಗೆ ಕೆಲ್ಸ ಮಾಡೋದು. ನಿಮ್ಗೇನಾದ್ರೂ ಸಹಾಯ ಬೇಕಾದ್ರೆ ನಂಗೊಂದು ಫೋನ್‌ ಮಾಡ್ಬಿಡಿ ಮೇಡಂ. ಖಂಡಿತಾ ನಿಮ್ಗೆ ನಾನು ಎಲ್ಪ್‌ ಮಾಡ್ತೀನಿ” ಎಂದು ಕೈ ಮುಗಿದ. “ನಿಮ್ದುಡ್ಡು ನಿಮ್ಗೆ ತರ್ಸಿಕೊಟ್ಟೆ ಅಷ್ಟೇ” ಎಂದು ಕೈಮುಗಿದು ಮನದಲ್ಲೇ ʻನಿನ್ನ ಹತ್ರ ಸಹಾಯ ಬೇಡೋ ಪರಿಸ್ಥಿತೀನ ದೇವರು ನನಗೆ ಕರುಣಿಸದಿರಲಿʼ ಎಂದು ಪ್ರಾಮಾಣಿಕವಾಗಿ ಬೇಡಿಕೊಂಡೆ.

ಪೋಲೀಸನ ಜೇಬಿಗೂ ಕತ್ತರಿ ಹಾಕಿದ ಕಳ್ಳ

ಇನ್ನೊಬ್ಬ ಪೋಲೀಸನ ಕತೆಯನ್ನೂ ಹೇಳ್ತೀನಿ ಕೇಳಿ. ಆ ದಿನ ಬ್ಯಾಂಕು ಶುರುವಾಗುವಾಗಲೇ ನನ್ನ ಮೊತ್ತ ಮೊದಲ ಗ್ರಾಹಕನಾಗಿ ಕುರ್ಚಿಯ ಎದುರು ಪೋಲೀಸಪ್ಪನೊಬ್ಬ ನಿಂತುಕೊಂಡ. “ಕೂತ್ಕೊಳಿ. ಏನಾಗ್ಬೇಕು?” ಎಂದೆ ಸಹಜವಾಗಿ. ʻಕಾರ್ಡಿಗೆ ಪಿನ್ನೋ, ಇಲ್ಲವೇ ದುಡ್ಡು ಬಾರದ್ದಕ್ಕೆ ದೂರೋ ಏನು?ʼ ಎನ್ನುವಂತೆ ಅವನನ್ನೇ ನೋಡಿದೆ. “ಮೇಡಮ್ಮೋರೆ ನನ್ನ ಕಾರ್ಡು ಕಳ್ಳತನವಾಗಿದೆ” ಎಂದ. ನನಗೋ ಅಚ್ಚರಿ ʻಪೋಲೀಸಪ್ಪನ ಜೇಬಿಗೆ ಕತ್ತರಿ ಹಾಕಿದ ಚಾಣಾಕ್ಷ ಕಳ್ಳ ಯಾರು? ಅದು ಹೇಗೆ ಮಾಡಿದ?ʼ ಹಾಗೆಯೇ ಕೇಳೂ ಬಿಟ್ಟೆ. “ಅದೂ… ಒಂದ್ಕತೆ ಮೇಡಂ…” ಶುರು ಹಚ್ಚಿಕೊಂಡ…

“ನಿನ್ನೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ದು ಆಟ ನಡೀತಿತ್ತಾ…ಅಲ್ಲಿಗೆ ಡ್ಯೂಟಿಗೆ ಹಾಕಿದ್ರು…” ಅಲ್ಲಿಗೆ ನಿಲ್ಲಿಸಿದ. “ಮುಂದೇನಾಯ್ತು?” ನನ್ನ ಪ್ರಶ್ನೆ. “ನಿಮ್ಗೇ ಗೊತ್ತಲ್ಲಾ ಮೇಡಂ” ಮತ್ತೆ ನಿಲ್ಲಿಸಿದ. “ಏನು ಗೊತ್ತು?” ಬೆಪ್ಪಾಗಿ ಕೇಳಿದೆ. “ಅಲ್ಲಿ ಫ್ರೀ ಡ್ರಿಂಕ್ಸೂ…… ನಾವು ಅಲ್ಲಿ ಡ್ಯೂಟಿ ಮೇಲಿದ್ದೋರೆಲ್ಲಾ… ಬಿಟ್ಟಿ ಅಲ್ವರಾ… ಸ್ವಲ್ಪ ಎಚ್ಚಾಗೇ ತಗಂಡ್ವಿ…” ನಾನು ಬಿಟ್ಟ ಕಣ್ಣು ಬಿಟ್ಟ ಬಾಯಿ ಬಿಟ್ಕೊಂಡು ಅವನನ್ನೇ ನೋಡ್ದೆ.

“ಡ್ಯೂಟೀಲಿರೋವಾಗ್ಲೇ…” ನನ್ನ ಮಾತಿನ್ನೂ ಮುಗ್ದೇ ಇರ್ಲಿಲ್ಲ, “ಬಿಟ್ಟಿ ಅಲ್ವಾ ಮೇಡಂ. ಒಳ್ಳೊಳ್ಳೇ ಮಾಲು… ನಾವು ಕೊಂಡ್ಕೊಂಡು ಕುಡ್ಯೋಕಾಗ್ತದಾ… ಡ್ಯೂಟಿ ತಪ್ಪಿದ್ಯಾವತ್ತು? ಬಿಟ್ರೆ ಇನ್ನೊಂದಿನ ಅಂತಾ ಮಾಲು ಸಿಕ್ತದಾ…! ಅದ್ಯಾವಾಗ ನಂಗೆ ನಶೆ ಏರ್ತೋ ಗೊತ್ತಾಗ್ನೇ ಇಲ್ಲ… ಎಚ್ಚರಾದಾಗ ಆಟ ಮುಗಿದೋ ಗಿತ್ತು. ಜನವೆಲ್ಲಾ ಒಂಟೋಗಿದ್ರು. ಸ್ಟೇಡಿಯಂ ಒರಗೆ ಮನಗಿದ್ದೆ. ನನ್ನ ಜೇಬಲ್ಲಿದ್ದ ಎರಡ್ಸಾವರ ರೂಪಾಯಿ, ಎಟಿಎಂ ಕಾರ್ಡು ಎಲ್ಲಾ ತಗಂಡು ಖಾಲಿ ಪರ್ಸನ್ನ ನನ್ನ ಎದೇಮ್ಯಾಗೆ ಆಕಿ ಓಗವ್ರೆ ಚಂಡಾಲ್ರು…”

ನಗು ಉಕ್ಕಿ ಬಂದ್ರೂ ಕಷ್ಟಪಟ್ಟು ತಡೆದುಕೊಂಡು “ಕಾರ್ಡಿನ ಹಿಂದೇನೇ ಪಿನ್‌ ಬರ್ದಿಟ್ಟಿದ್ರಾ” ಕೇಳಿದೆ. “ಅದ್ರ ಹಿಂದೆ ಬರ್ದಿರ್ನಿಲ್ಲ. ಒಂದು ಸಣ್ಣ ನೋಟ್‌ ಬುಕ್ನಾಗೆ ಬರ್ಕೊಂಡು ಅದ್ರಲ್ಲೇ ಇಟ್ಕಂಡಿದ್ದೆ. ಅದು ಪರ್ಸಲ್ಲೇ ಅದೆ” ಅಂದ. ಆತನ ಖಾತೆಯನ್ನು ತೆರೆದು ನೋಡಿದೆ. ಅವನ ಪುಣ್ಯಕ್ಕೆ ಇನ್ಯಾವುದೇ ವಹಿವಾಟು ಆಗಿರಲಿಲ್ಲ. ತಕ್ಷಣವೇ ಕಾರ್ಡನ್ನು ಬ್ಲಾಕ್‌ ಮಾಡಿ ಹೊಸ ಕಾರ್ಡಿಗೆ ಅರ್ಜಿಯನ್ನು ತೆಗೆದುಕೊಂಡು “ಹೊಸ ಕಾರ್ಡಿಗೆ ಇನ್ನೂರೈವತ್ತು ಶುಲ್ಕ ಆಗತ್ತೆ. ನಿಮ್ಮ ಖಾತೆಗೆ ಖರ್ಚು ಹಾಕ್ತೀವಿ” ಅಂದೆ.

“ಅಷ್ಟೊಂದಾಯ್ತದಾ?! ಯಾಕೆ ಮೇಡಂ, ಸ್ವಲ್ಪ ಕಮ್ಮಿ ಮಾಡ್ಕಳಿ” ಅಂದ. “ಇದು ತರಕಾರಿ ವ್ಯಾಪಾರ ಅಲ್ಲಪ್ಪ. ಬ್ಯಾಂಕಿನ ವ್ಯವಹಾರ. ಇನ್ಮುಂದೆ ಕ್ರಿಕೆಟ್‌ ಸ್ಟೇಡಿಯಂ ಡ್ಯೂಟಿ ಇದ್ದಾಗ ಪರ್ಸು, ಎಟಿಎಂ ಕಾರ್ಡು ತೊಗೊಂಡು ಹೋಗ್ಬೇಡಪ್ಪ” ಎಂದೆ. “ಎಲ್ಲಾವಾಗ್ಲೂ ಅಂಗೆ ಸಿಕ್ತದಾ ಮೇಡಂ. ನಿನ್ನೆ ಏನೋ ರಾಯಲ್‌ ಚಾಲೆಂಜರ್ಸ್‌ ಅಲ್ವರಾ ಅದಕ್ಕೇ ಒಂದು ಚಾನ್ಸ್‌ ಅಷ್ಟೇಯಾ” ಎನ್ನುತ್ತಾ ಎದ್ದ. ಅವನು ಹೋಗುವುದನ್ನೇ ಕಾಯುತ್ತಿದ್ದ ಪಕ್ಕದಲ್ಲಿದ್ದ  ಗೆಳತಿ ʻಪಕ್‌ʼ ಎಂದು ನಗಲಾರಂಬಿಸಿದಳು… ಈಗ ಸರ್ಕಲ್‌ಗೆ ಹೋಗೋಷ್ಟರಲ್ಲಿ ಅವ್ನು ಇನ್ನೂರೈವತ್ತು ಸಂಪಾದ್ನೆ ಮಾಡ್ಕೊಂಡಿರ್ತಾನೆ ಬಿಡು” ಅಂದಳು. “ಹೋಗಿರೋದು ನಿನ್ನೇ ಸಂಪಾದ್ನೇನೆ. ಇವತ್ತು ದಿನ ಮುಗ್ಯೋಷ್ಟರಲ್ಲಿ ಆ ಎರಡ್ಸಾವ್ರವೂ ವಾಪಸ್ಸು ಬರತ್ತೆ ಬಿಡು” ನಾನೂ ದನಿಗೂಡಿಸಿದೆ. “ಏನೇ ಆದ್ರೂ ಆ ಕಳ್ಳನ್ನ ತಾರೀಫ್‌ ಮಾಡ್ಬೇಕು” ಎನ್ನುತ್ತಾ ಮುಂದಿನ ಗ್ರಾಹಕನತ್ತ ತಿರುಗಿದೆ.

‍ಲೇಖಕರು Avadhi

September 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: