ಶೌಚಲೋಕದಲ್ಲೂ ಕಾವ್ಯ, ಸಾಹಿತ್ಯ…!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಶೌಚದ ಬಗೆಗಿನ ಕತೆಗಳೇ ಹಾಗೆ. ಹೇಳುವುದಕ್ಕೂ, ಕೇಳುವುದಕ್ಕೂ ಕೊಂಚ ವಿಚಿತ್ರ.

ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಸಿಗರೇಟಿಗೂ ಶೌಚಕ್ಕೂ ಇರುವ ಸಂಬಂಧದ ಬಗ್ಗೆ ತನ್ನದೊಂದು ಅನುಭವ ಹೇಳಿದ್ದರು. ಮುಂಜಾನೆ ಎದ್ದಾದ ನಂತರ ಒಂದು ಸಿಗರೇಟು ಸೇದಿದರೆ ಮಾತ್ರ ಹೊಟ್ಟೆಯು ನಿರಾಳವಾಗಿ ಖಾಲಿಯಾಗುತ್ತದೆ ಎಂಬ ಮಾತನ್ನು ಧೂಮಪಾನಿಗಳು ಸಾಮಾನ್ಯವಾಗಿ ಹೇಳುವುದನ್ನು ನಾವೆಲ್ಲರೂ ಕೇಳಿರುತ್ತೇವೆ.

ಇವರೂ ಅದನ್ನು ಸತ್ಯವೆಂದೇ ನಂಬಿದ್ದರಂತೆ. ಮುಂದೇನಾಯಿತೆಂದರೆ ಆರೋಗ್ಯ ಸಂಬಂಧಿ ಕಾರಣಗಳಿಂದಾಗಿ ಇವರು ಧೂಮಪಾನವನ್ನು ಶಾಶ್ವತವಾಗಿ ತ್ಯಜಿಸಿದ್ದರು. ಅದೂ ಬರೋಬ್ಬರಿ ನಲವತ್ತು ವರ್ಷಗಳ ನಿರಂತರ ಸೇದುವಿಕೆಯ ನಂತರ.

”ಇದೆಲ್ಲಾ ಬರೀ ಭ್ರಮೆ ಸಾರ್. ಅಂಥದ್ದೇನೂ ಇರೋದಿಲ್ಲ. ಅಸಲು ಸಂಗತಿಯೇನೆಂದರೆ ನಮ್ಮ ಬುದ್ಧಿಗೆ ನಾವೇ ಮಂಕುಬೂದಿ ಎರಚುತ್ತೇವೆ. ನಮ್ಮ ಚಟವನ್ನು ಸಮರ್ಥಿಸಿಕೊಳ್ಳಲು ಏನೇನೋ ಕತೆ ಕಟ್ಟಿ, ನಂತರ ಅದನ್ನೇ ಸತ್ಯವೆಂದು ನಂಬುತ್ತೇವೆ”, ಎಂದಿದ್ದರು ಅವರು. ಕಳೆದ ಹಲವು ವರ್ಷಗಳಿಂದ ಅವರು ಒಂದೇ ಒಂದು ಸಿಗರೇಟನ್ನೂ ಮುಟ್ಟಿಲ್ಲ. ಇದರಿಂದಾಗಿ ಅವರ ಪ್ರಾತಃಕರ್ಮಗಳಿಗೆ ತೊಂದರೆಯೂ ಆಗಿಲ್ಲವಂತೆ.

ಕಳೆದ ಅಂಕಣದ ಕಂತಿನಲ್ಲಿ ಹೇಳಿರುವಂತೆ ಶೌಚದ ಕತೆಗಳು ಇಂದು ನಿನ್ನೆಯದ್ದಲ್ಲ. ಈ ಕತೆಗಳಿಗೆ ಹಲವು ಶತಮಾನಗಳ ಇತಿಹಾಸವಿದೆ. ಉದಾಹರಣೆಗೆ ಹದಿನಾರನೇ ಶತಮಾನದ ಕಾಲದಲ್ಲಿ ಶೌಚ ಮತ್ತು ಶೌಚಸಂಬಂಧಿ ರೂಢಿಗಳ ಬಗ್ಗೆ ಒಟ್ಟಾರೆಯಾಗಿ ವಿನೋದದ ನೋಟವಿತ್ತು. ಕೆಲವರಂತೂ ಈ ವಿಷಯವನ್ನೇ ಪ್ರಮುಖ ಥೀಮ್ ಆಗಿರಿಸಿಕೊಂಡು, ರೂಪಕಗಳನ್ನು ಸೃಷ್ಟಿಸಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆದರು.

ಇಂಗ್ಲೆಂಡ್ ಮೂಲದ ಸ್ವಿಫ್ಟ್, ಫ್ರಾನ್ಸ್ ಮೂಲದ ಪೌಲ್ ಸ್ಕಾರನ್, ಗಿಲ್ಲೊಸ್ ಕೊರೋಝಲ್, ಯೂಸ್ಲ್ರೋಗ್ ದೆ ಬೌಲಿಯೋ ಮುಂತಾದವರು ಇದರಲ್ಲಿ ಪ್ರಮುಖರು.

ಫ್ರೆಂಚ್ ಲೇಖಕಿ ಮದಾಮ್ ದೆ ಜೆನ್ಲಿಸ್ ರವರು ತಮ್ಮ ಕೃತಿಯೊಂದರಲ್ಲಿ, 1770 ರ ಕಾಲದಲ್ಲಿ ಸಮಾಜದ ಉನ್ನತ ವರ್ಗದ ಮಹಿಳೆಯರ ಮಧ್ಯೆ ಭಾರೀ ಜನಪ್ರಿಯವಾಗಿದ್ದ ಹಾಡೊಂದರ ಬಗ್ಗೆ ಬರೆಯುತ್ತಾರೆ. ಅದು ಶೌಚದ ಬಗೆಗಿನ ಹಾಡಾಗಿತ್ತು. ಕಲಾಪೋಷಕಿಯಾಗಿದ್ದ ಮದಾಮ್ ದು ದೆಫಾಂಡ್ ಎಂಬವರು ಸಾಮಾಜಿಕ ನೆಲೆಯಲ್ಲಿ ಉಚ್ಚ ಸ್ತರದಲ್ಲಿದ್ದ ತನ್ನ ಸ್ನೇಹಿತೆಯೊಬ್ಬರಿಗೆ ಬರೆದಿದ್ದ ಪತ್ರದಲ್ಲಿ ತನಗೆ ಉಡುಗೊರೆಯಾಗಿ ನೀಡಲಾಗಿದ್ದ ಚೇಂಬರ್ ಪಾಟ್ (ಮಲ/ಮೂತ್ರವನ್ನು ಸಂಗ್ರಹಿಸಲು ಬಳಸಲಾಗುವ ಪಾತ್ರೆ) ಒಂದರ ಬಗ್ಗೆ ಮನಃಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ.

ಕಲಾತ್ಮಕ ಕುಸುರಿ ಕೆತ್ತನೆಗಳಿಂದ ಕೂಡಿದ್ದ ಆ ಪಾಟ್ ಅದೆಷ್ಟು ಸುಂದರವಾಗಿತ್ತೆಂದರೆ ದೆಫಾಂಡ್ ರವರ ಸೇವಕಿಯೊಬ್ಬಳು ‘ಇದನ್ನು ಸೂಪ್ ಕುಡಿಯುವ ಬೌಲ್ ಆಗಿ ಬಳಸಬಹುದಲ್ಲವೇ’ ಎಂದಿದ್ದಳಂತೆ.

ಶೌಚದ ಬಗ್ಗೆ ಫ್ರೆಂಚ್ ಚಕ್ರವರ್ತಿಯಾಗಿದ್ದ ಹದಿನಾಲ್ಕನೇ ಲೂಯಿಯ ಬಗ್ಗೆ ವಿಚಿತ್ರ ಕಥೆಗಳಿವೆ. ಈತನಿಗೆ ಮಲ ವಿಸರ್ಜನೆಯೆನ್ನುವುದು ಖಾಸಗಿ ಸಂಗತಿಯಾಗಿರಲಿಲ್ಲ. ಲೂಯಿ ತನ್ನ ಆಡಳಿತ ಸಂಬಂಧಿ ಕೆಲಸಗಳನ್ನೂ ಈ ಸಮಯದಲ್ಲೇ ಮಾಡುತ್ತಿದ್ದ. ಅಸಲಿಗೆ ಮಲವಿಸರ್ಜನೆಗಾಗಿ ಆತನ ಸಿಂಹಾಸನದಲ್ಲೇ ಅಗಲವಾದ, ವೃತ್ತಾಕಾರದ ರಂಧ್ರವೊಂದನ್ನು ಕೊರೆದಿಡಲಾಗಿತ್ತು.

ಹೀಗೆ ಕುಳಿತ ಭಂಗಿಯಲ್ಲಿ ಲೂಯಿ ನಿರಾಳನಾಗುತ್ತಲೇ, ಆಡಳಿತದ ಸುತ್ತೋಲೆ-ಆದೇಶಗಳನ್ನು ಜಾರಿಗೊಳಿಸುತ್ತಿದ್ದ. ಹಲವು ಅಧಿಕಾರಿಗಳು, ಅತಿಥಿಗಳು ಈ ವೇಳೆಗೆ ರಾಜನ ಸಮ್ಮುಖದಲ್ಲಿ ಹಾಜರಿರುತ್ತಿದ್ದರು. ಇವಿಷ್ಟೂ ಸಾಲದ್ದೆಂಬಂತೆ ಪಾಟ್ ತುಂಬಿದ ಕೂಡಲೇ ಸೇವಕರು ಬಂದು, ಅಲ್ಲಿ ನೆರೆದಿದ್ದ ಅಷ್ಟೂ ಜನರ ಸಮ್ಮುಖದಲ್ಲಿ ಪಾತ್ರೆಯನ್ನೆತ್ತಿ ಮಲವನ್ನು ಹೊರಗೆ ಸುರಿದು ಬರುತ್ತಿದ್ದರಂತೆ. ತರುವಾಯ ಮತ್ತದೇ ಮಾಮೂಲಿನಂತೆ ವ್ಯವಹಾರಗಳು ಮುಂದುವರಿಯುತ್ತಿದ್ದವು. 

ಪ್ಯಾರಿಸ್ಸಿನಿಂದ ಕೊಂಚ ದೂರದಲ್ಲಿರುವ, ಲೂಯಿಯ ಕಾಲದ ಭವ್ಯ ವರ್ಸಾಯ್ಲಸ್ ಅರಮನೆಯು ತನ್ನ ವೈಭವಕ್ಕಾಗಿ ಅದೆಷ್ಟು ಖ್ಯಾತಿಯನ್ನು ಪಡೆದಿತ್ತೋ, ತನ್ನ ದುರ್ವಾಸನೆಗಾಗಿ ಅಷ್ಟೇ ಅಪಖ್ಯಾತಿಗೂ ಒಳಗಾಗಿತ್ತು. ಆ ಕಾಲದ ಅವೈಜ್ಞಾನಿಕ ಶೌಚರೂಢಿಗಳು ಒಂದೆಡೆಯಾದರೆ, ಇನ್ನೊಂದೆಡೆ ಫ್ರೆಂಚ್ ಚಕ್ರವರ್ತಿಯಾಗಿದ್ದ ಹದಿನಾಲ್ಕನೇ ಲೂಯಿಯ ಜೀವನಶೈಲಿಯೂ ವಿಲಕ್ಷಣವಾಗಿತ್ತು.

ಈಗಿನ ಕಾಲಕ್ಕೆ ವಿಚಿತ್ರವೆನ್ನಿಸುವಂತಹ ಹಲವು ರೂಢಿಗಳನ್ನು ಲೂಯಿ ‘ರಾಜದರ್ಬಾರಿನ ಸಂಪ್ರದಾಯ’ವೆಂದು ಕರೆದು ಅದಕ್ಕೆ ವಿಶೇಷ ಜನಪ್ರಿಯತೆಯನ್ನು ತಂದಿದ್ದ.

ಈ ನಿಟ್ಟಿನಲ್ಲಿ ವರ್ಸಾಯ್ಲಸ್ ಅರಮನೆಯಲ್ಲಿ ದಟ್ಟವಾಗಿ ಬೀಡುಬಿಟ್ಟಿದ್ದ ವಾಸನೆಯನ್ನು ಹೋಗಲಾಡಿಸಲು ಬಗೆಬಗೆಯ ಹೂವುಗಳನ್ನು ವಿಶೇಷವಾಗಿ ತರಿಸಲಾಗುತ್ತಿತ್ತು. ಸಾಮ್ರಾಜ್ಯದೆಲ್ಲೆಡೆ ಸುಗಂಧದ್ರವ್ಯಗಳಿಗೆ ಭಾರೀ ಬೇಡಿಕೆಯಿತ್ತು. ಇನ್ನು ಗಣ್ಯಾತಿಗಣ್ಯರ ನೆಚ್ಚಿನ ಸುಗಂಧಗಳಿಗೆ ವರ್ತಕ-ಮಧ್ಯವರ್ತಿಗಳಿಂದ ಪ್ರತ್ಯೇಕವಾದ ಪೂರೈಕೆ ಬೇರೆ. ಲೂಯಿ ಬಳಸುತ್ತಿದ್ದ ಕಮೋಡ್ ಸಿಂಹಾಸನದ ಮಾದರಿಯೊಂದನ್ನು ಸುಲಭ್ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ನಾವಿಂದು ಕಾಣಬಹುದು.

ಇನ್ನು ಮಲಮೂತ್ರಗಳಿಗೆ ವಿಶೇಷ ಔಷಧೀಯ ಗುಣಗಳಿವೆಯೆಂದು ಹೇಳಿಕೊಳ್ಳುತ್ತಿದ್ದ ಮತ್ತು ಈ ಬಗೆಯ ಕತೆಗಳಲ್ಲಿ ಗಾಢವಾದ ನಂಬಿಕೆಯಿದ್ದ ದಿನಗಳೂ ಮಾನವನ ಇತಿಹಾಸದಲ್ಲಿದ್ದವು. ಉದಾಹರಣೆಗೆ ಕತ್ತೆಯ ಮಲ ಮತ್ತು ಮನುಷ್ಯನ ಮಲದ ಮಿಶ್ರಣವು ಮೊಡವೆಗೆ ಪರಿಹಾರವೆಂದೂ, ಮಂಗಳಮುಖಿಯರ ಮೂತ್ರವು ಬಂಜೆಯರಲ್ಲಿ ಗರ್ಭವನ್ನು ಸೃಷ್ಟಿಸಬಲ್ಲ ಶಕ್ತಿಯುಳ್ಳ ಪದಾರ್ಥವೆಂದೂ ನಂಬಲಾಗುತ್ತಿತ್ತಂತೆ.

ಇತ್ತ ಮಧ್ಯಯುಗದ ಯೂರೋಪಿನಲ್ಲೂ ಇಂತಹ ಹಲವು ನಂಬಿಕೆಗಳು ಚಾಲ್ತಿಯಲ್ಲಿದ್ದವು. ಅದರಲ್ಲೂ ವಿಶೇಷವಾಗಿ ಸಮಾಜದ ಉಚ್ಚಸ್ತರದ ವ್ಯಕ್ತಿಯೊಬ್ಬ ಪ್ಲೇಗಿನಂತಹ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದರೆ, ಆ ವ್ಯಕ್ತಿಯನ್ನು ದೊಡ್ಡದಾದ ಟ್ರಾಲಿಯೊಂದರಲ್ಲಿ ಕುಳ್ಳಿರಿಸಿ ಒಳಚರಂಡಿಯ ಬಳಿ ಕರೆದೊಯ್ಯಲಾಗುತ್ತಿತ್ತು. ಭಾರವಾದ ಈ ಟ್ರಾಲಿಯನ್ನು ಎತ್ತಿಕೊಳ್ಳಲು ಹಲವು ಸೇವಕರ ನೆರವನ್ನು ಪಡೆಯಲಾಗುತ್ತಿತ್ತು. ಒಳಚರಂಡಿಯ ಗಬ್ಬು ವಾಸನೆಯು ಪ್ಲೇಗಿಗೆ ರಾಮಬಾಣವೆಂದು ಮಧ್ಯಯುಗದ ಫ್ರಾನ್ಸ್ ದೇಶದಲ್ಲಿ ನಂಬಲಾಗುತ್ತಿತ್ತಂತೆ. 

ಇನ್ನು ಶೌಚಸಂಬಂಧಿ ಸಾಹಿತ್ಯಲೋಕದಲ್ಲಿ ಭಾರತದ ಕವಿಗಳೂ ಹಿಂದುಳಿಯಲಿಲ್ಲ. ಉರ್ದು  ಕವಿಯಾಗಿದ್ದ ಚಿರ್ಕೀನ್ (1737-1832) ಈ ವರ್ಗದಲ್ಲಿ ಬರುವ ಪ್ರಮುಖ ಹೆಸರು. ಕೇವಲ ಮೂವತ್ತಾರು ವರ್ಷಗಳ ಕಾಲ ಬದುಕಿದ್ದ ಚಿರ್ಕೀನ್ ಪ್ರತಿಭಾವಂತ ಕವಿಯಾಗಿದ್ದರೂ ಉರ್ದು ಸಾಹಿತ್ಯ ಲೋಕವು ಆತನನ್ನು ದಿಗ್ಗಜರ ಸಾಲಿನಲ್ಲಿ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ.

ಮಲ-ಮೂತ್ರ ಇತ್ಯಾದಿಗಳ ಬಗ್ಗೆಯೇ ಸಾಕಷ್ಟು ಉರ್ದು ಕವಿತೆಗಳನ್ನು ಬರೆದಿದ್ದ ಚಿರ್ಕೀನನ ರಚನೆಗಳನ್ನು ಅಶ್ಲೀಲವೆಂದು ಪರಿಗಣಿಸಿ, ಅವುಗಳನ್ನು ಸಾಹಿತ್ಯದ ಮುಖ್ಯವಾಹಿನಿಯಿಂದ ದೂರವಿಡಲಾಗಿತ್ತು.

ಇಂದು ‘ಚಿರ್ಕೀನ್’ ಎಂಬ ಹೆಸರಿನಲ್ಲಿ ಅಷ್ಟಿಷ್ಟು ನೆನಪಿನಲ್ಲಿರುವ ಈ ಉರ್ದು ಕವಿಯ ಪೂರ್ಣ ಹೆಸರು ಶೇಖ್ ಬಾಬರ್ ಅಲಿ ಚಿರ್ಕೀನ್. ಈತನನ್ನು ‘ಚಿರ್ಕೀನ್ ಲಕ್ನವೀ’ ಎಂದೂ ಕರೆಯಲಾಗುತ್ತಿತ್ತಂತೆ. ತನ್ನ ಅದ್ಭುತವಾದ ರಚನೆಗಳನ್ನು ಯಾರ್ಯಾರೋ ಕದ್ದು, ತಮ್ಮ ಹೆಸರಿನಲ್ಲಿ ಹೇಳಿಕೊಂಡು ಬೀಗುತ್ತಿದ್ದುದ್ದನ್ನು ಕಂಡು ರೋಸಿಹೋದ ಚಿರ್ಕೀನ್ ಯಾರೂ ಕದಿಯಲು ಧೈರ್ಯ ಮಾಡದಂತಹ ಕವಿತೆಗಳನ್ನು ಬರೆಯಲಾರಂಭಿಸಿದ ಎಂದು ಹೇಳಲಾಗುತ್ತದೆ.

ಬಹುಷಃ ಈ ರೆಬೆಲ್ ಮನೋಭಾವದಲ್ಲೇ ಸಮಾಜದ ಮುಖ್ಯವಾಹಿನಿಗೆ ವಜ್ರ್ಯವಾಗಿದ್ದ ಶೌಚ-ಮಲ-ಮೂತ್ರ ಇತ್ಯಾದಿಗಳು ಆತನ ರಚನೆಗಳಲ್ಲಿ ಗತ್ತಿನಿಂದ ಕಾಣಿಸಿಕೊಂಡವು. ಒಟ್ಟಿನಲ್ಲಿ ಚಿರ್ಕೀನನ ಸಮಕಾಲೀನರಿಗೆ ಹೋಲಿಸಿದರೆ ಆತನ ಪ್ರತಿಭೆಯೂ, ಖ್ಯಾತಿಯೂ ಇಂದು ಶೌಚದ ಪುಟ್ಟ ಪರಿಧಿಗಷ್ಟೇ ಸೀಮಿತವಾಗಿ ಉಳಿದಿರುವುದು ವಿಪರ್ಯಾಸ.

ಇನ್ನು ಶೌಚಸಂಬಂಧಿ ನೆಲೆಯಲ್ಲಿ ಮತ್ತೆ ಪ್ರಾಚೀನ ಭಾರತಕ್ಕೆ ಮರಳುವುದಾದರೆ ಮನುಸ್ಮಂತಿ ವಿಷ್ಣುಪುರಾಣದಲ್ಲಿ ಉಲ್ಲೇಖಿಸಲಾಗಿದೆಯೆಂದು ಹೇಳಲಾಗುವ ಸಂಸ್ಕಂತ ಶ್ಲೋಕಗಳು ಇಲ್ಲಿ ನಮ್ಮ ಗಮನ ಸೆಳೆಯುತ್ತವೆ. ಶೌಚರೂಢಿಗಳು ಬ್ರಹ್ಮಚಾರಿಗಳು, ಸಂಸಾರಸ್ಥರು ಮತ್ತು ಸನ್ಯಾಸಿಗಳಿಗೆ ವಿಭಿನ್ನವಾಗಿದ್ದು ರೋಗಿಗಳಿಗೆ ಅವರ ಶಕ್ತ್ಯಾನುಸಾರ ವಿನಾಯಿತಿಯನ್ನು ನೀಡಲಾಗಿದೆ.

ಸಂಸಾರಸ್ಥರನ್ನು ಒಂದು ರೆಫರೆನ್ಸ್ ಆಗಿಟ್ಟುಕೊಂಡು ಬ್ರಹ್ಮಚಾರಿಗಳು ಈ ನಿಯಮಗಳನ್ನು ದುಪ್ಪಟ್ಟು ಎಚ್ಚರಿಕೆಯಿಂದ ಅನುಸರಿಸಬೇಕೆಂದೂ, ವಾನಪ್ರಸ್ಥದಲ್ಲಿರುವ ವ್ಯಕ್ತಿಗಳು ಮೂರು ಪಟ್ಟು ಮತ್ತು ಸನ್ಯಾಸಿಗಳು ನಾಲ್ಕು ಪಟ್ಟು ಎಚ್ಚರಿಕೆಯಿಂದ ನಿಯಮಗಳನ್ನು ಅನುಸರಿಸಬೇಕೆಂದೂ ಇಲ್ಲಿ ಹೇಳಲಾಗಿದೆ. 

ಅಂದಹಾಗೆ ಈ ಶೌಚನಿಯಮಗಳ ಷರತ್ತುಗಳು ದಿನದ ಹೊತ್ತಿನಲ್ಲಿ ಮಾಡಲಾಗುವ ಮಲ ಮತ್ತು ಮೂತ್ರವಿಸರ್ಜನೆಗೆ ಮಾತ್ರ ಅನ್ವಯಿಸುತ್ತದೆ ಎಂಬುದು ಮನುಸ್ಮಂತಿಯಲ್ಲಿ ದಾಖಲಿಸಲಾಗಿರುವ ಮತ್ತೊಂದು ನಿಯಮಾವಳಿ. ರಾತ್ರಿಯ ಹೊತ್ತಿನ ವಿಸರ್ಜನೆಗಳಿಗೆ ಸಂಬಂಧಪಟ್ಟಂತೆ ಈ ನಿಯಮಗಳಲ್ಲಿ ಅರ್ಧದಷ್ಟು ವಿನಾಯಿತಿಯಿದ್ದರೆ, ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದರೆ ಮತ್ತಷ್ಟು ಅರ್ಧ ವಿನಾಯಿತಿಯಿದೆ ಎಂಬುದು ಇಲ್ಲಿಯ ಸ್ವಾರಸ್ಯಕರ ಅಂಶ.

ಇನ್ನು ಶೌಚಸಂಬಂಧಿ ದುರ್ನಾತಗಳಿಗೆ ಯಾವ್ಯಾವ ದೇಶದವರು ಹೇಗೆ ಪ್ರತಿಕ್ರಯಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕೇ? ಇಂತಹ ‘ಫನ್ ಫ್ಯಾಕ್ಟ್’ ಮಾಹಿತಿಗಳೂ ಇಲ್ಲಿ ಸಿಗುತ್ತವೆ. ‘ಸಾಯುವಷ್ಟು ಗಬ್ಬು ನಾರುತ್ತಿದೆ’, ಎನ್ನುತ್ತಾರಂತೆ ಚೈನಾದವರು. ಜರ್ಮನ್ನರದ್ದು ‘ಈ…’, ‘ಬಾಯಾ’ ಇತ್ಯಾದಿ ಗೊಣಗುವಿಕೆಗಳು. ರಷ್ಯನ್ನರದ್ದು ‘ಫೂ…’ ಎಂದಾದರೆ ಅರ್ಜೆಂಟೀನಾ ದೇಶದವರದ್ದು ‘ಉಫ್’ ಎಂಬ ನಿಟ್ಟುಸಿರು.

ನಮ್ಮ ದೇಶದಲ್ಲಿ ವಾಸನೆ ಮೂಗಿಗೆ ಬಡಿದರೆ ನಾವು ಕೈಯನ್ನೋ, ಬಟ್ಟೆಯ ತುಂಡೊಂದನ್ನೋ ಮೂಗಿಗೆ ಅಡ್ಡ ಹಿಡಿಯುತ್ತೇವೆ. ಈ ರೂಢಿಗಳೂ ಕೂಡ ಒಂದೊಂದು ದೇಶದಲ್ಲಿ ಒಂದೊಂದು ಬಗೆ. ವಾಸನೆಗೆ ಪ್ರತಿಕ್ರಿಯೆಯಾಗಿ ಮುಖ ಕಿವುಚುವುದರಲ್ಲೂ, ಕೈಗಳನ್ನಾಡಿಸಿ ಅಸಮಾಧಾನವನ್ನು ತೋರಿಸುವುದರಲ್ಲೂ, ಕತ್ತು-ತಲೆ-ಕಣ್ಣುಗಳನ್ನು ವಿಚಿತ್ರವಾಗಿ ಆಡಿಸುವುದರಲ್ಲೂ ಈ ಪ್ರಪಂಚದಲ್ಲಿ ವೈವಿಧ್ಯತೆಯೇ ವೈವಿಧ್ಯತೆ.

ಹೀಗೆ ಸುಲಭ್ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಆಸಕ್ತಿಯಿಂದ ನೋಡುತ್ತಾ ಹೋದರೆ ಹೊಸದೊಂದು ಜಗತ್ತೇ ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಇಲ್ಲಿ ಬಗೆದಷ್ಟೂ ವಿಶ್ವ! 1970 ರಲ್ಲಿ ಸುಲಭ್ ಇಂಟನ್ರ್ಯಾಷನಲ್ ಎಂಬ ಹೊಸ ಕನಸಿನ ಬೀಜವನ್ನು ಡಾ. ಬಿಂದೇಶ್ವರ್ ಪಾಠಕ್ ಎಂಬ ಕನಸುಗಾರ ಪಾಟ್ನಾದ (ಬಿಹಾರ) ನೆಲದಲ್ಲಿ ಬಿತ್ತಿದ್ದರು. ಅಲ್ಪ ಮೊತ್ತವನ್ನು ಪಾವತಿ ಮಾಡಿ ಶೌಚಾಲಯವನ್ನು ಬಳಸುವ ಈ ಹೊಸ ಐಡಿಯಾ ದೇಶಕ್ಕೇ ಹೊಸದು. ಆ ಆರಂಭದ ದಿನಗಳಲ್ಲಿ ಪಾಠಕ್ ಬಹುತೇಕರ ಪಾಲಿಗೆ ಹಾಸ್ಯದ ವಸ್ತುವಾಗಿದ್ದರಂತೆ.

ಆದರೆ ಮುಂದೆ ನಡೆದಿದ್ದೆಲ್ಲಾ ಇತಿಹಾಸವೇ ಹೌದು. ಇಂದು `ಸುಲಭ್’ ಎಂಬ ಹೆಸರು ಭಾರತದ ನೈರ್ಮಲ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತಂದಿದೆ. ಕೋಟ್ಯಾಂತರ ಮಂದಿ ಭಾರತೀಯರು ಇಂದು ದೇಶದೆಲ್ಲೆಡೆ ಸುಲಭ್ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಇಂದು ‘ಸುಲಭ್’ ಎಂದರೆ ‘ಶೌಚಾಲಯ’, ‘ಶೌಚಾಲಯ’ ಎಂದರೆ ‘ಸುಲಭ್’ ಎಂಬ ಪರಿಕಲ್ಪನೆಯು ನಮ್ಮೆಲ್ಲರೊಳಗೆ ಬಲವಾಗಿ ಬೇರೂರಿದ್ದರೆ ಅದರ ಹಿಂದಿರುವ ಪಾಠಕ್ ಮತ್ತು ಅವರ ತಂಡದ ದೂರದೃಷ್ಟಿ ಮತ್ತು ಶ್ರಮವು ಅಸಾಮಾನ್ಯವಾದದ್ದು.

ನಂತರದ ಹಂತವಾಗಿ 1992 ರಲ್ಲಿ ನವದೆಹಲಿಯಲ್ಲಿ ಸ್ಥಾಪಿಸಲ್ಪಟ್ಟ ಈ ವಿಶಿಷ್ಟ ಮ್ಯೂಸಿಯಂ ಪಾಠಕ್ ರವರ ಕನಸಿನ ಕೂಸು. ವಿಶ್ವದೆಲ್ಲೆಡೆಯ ಶೌಚಾಲಯಗಳು, ಶೌಚ ಸಂಬಂಧಿ ಪರಿಕರಗಳು, ಶೌಚದ ರೂಢಿಗಳು, ಜೊತೆಗೆ ತಳುಕು ಹಾಕಿಕೊಂಡಿರುವ ಸಾಮಾಜಿಕ-ಸಾಂಸ್ಕøತಿಕ ಆಯಾಮಗಳು, ನವೀನ ವಿನ್ಯಾಸದ ಶೌಚಾಲಯಗಳು, ಅತ್ಯಂತ ಕಡಿಮೆ ವೆಚ್ಚದಿಂದ ನಿರ್ಮಿಸಬಹುದಾದ ಶೌಚಾಲಯಗಳು, ತ್ಯಾಜ್ಯ ನಿರ್ವಹಣೆ, ನಂಬಿಕೆ-ಸಂಪ್ರದಾಯಗಳು, ಕತೆ-ಜನಪದ, ಆಧ್ಯಾತ್ಮ, ಜೀವನಶೈಲಿ…

ಹೀಗೆ ಹತ್ತಾರು ಸಂಗತಿಗಳನ್ನು ಅದೆಷ್ಟು ಮುತುವರ್ಜಿಯಿಂದ, ಕಾಲಾನುಕ್ರಮದಲ್ಲಿ ಇಲ್ಲಿ ಪ್ರಸ್ತುತಪಡಿಸಲಾಗಿದೆಯೆಂದರೆ ಇಂಥದ್ದೂ ಸಾಧ್ಯವೇ ಎಂದು ಅಚ್ಚರಿಪಡುವಂತಾದರೆ ಅತಿಶಯೋಕ್ತಿಯೇನಲ್ಲ. ಭಾರತ ಸರ್ಕಾರದಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ‘ಪದ್ಮಭೂಷಣ’ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಡಾ. ಬಿಂದೇಶ್ವರ್ ಪಾಠಕ್ ರವರ ವಿಶಿಷ್ಟ ಸೇವೆಯನ್ನು ಗುರುತಿಸಿ, ಅವರನ್ನು ಸನ್ಮಾನಿಸಿವೆ.

ಇಂದು ದೇಶ-ವಿದೇಶಗಳಿಂದ ಅದೆಷ್ಟೋ ಮಂದಿ ಈ ಮ್ಯೂಸಿಯಂ ಅನ್ನು ನೋಡಲೆಂದೇ ಇತ್ತ ಹುಡುಕಿಕೊಂಡು ಬರುತ್ತಾರೆ. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಸಂಶೋಧಕರವರೆಗೂ, ಸರಕಾರಿ ಅಧಿಕಾರಿಗಳಿಂದ ಹಿಡಿದು ತೀರಾ ಪ್ರವಾಸಿಗರಿಗೂ ಇದೊಂದು ಅಚ್ಚರಿಯ ತಾಣ. ಖುಷ್ವಂತ್ ಸಿಂಗ್ ರಂತಹ ಖ್ಯಾತ ಲೇಖಕರನ್ನೂ ಸೇರಿದಂತೆ ಭಾರತದ ಹಲವು ನುರಿತ ರಾಜಕಾರಣಿಗಳನ್ನು ಈ ಸ್ಥಳವು ಆಕರ್ಷಿಸಿದೆ.

ಹಲವು ದೇಶಗಳ ರಾಜಮನೆತನದವರೂ, ಪ್ರಧಾನಮಂತ್ರಿ-ರಾಷ್ಟ್ರಾಧ್ಯಕ್ಷರಂತಹ ಗಣ್ಯಾತಿಗಣ್ಯರೂ ಇಲ್ಲಿ ಬಂದು ಹೋಗಿದ್ದಾರೆ. ಫ್ರೆಂಚ್ ಸಾಕ್ಷ್ಯಚಿತ್ರ ನಿರ್ದೇಶಕನಾದ ಬೆಂಜಮಿನ್ ಝಿಲ್ಬರ್ಮನ್ ಈ ಮ್ಯೂಸಿಯಮ್ಮಿಗೆಂದೇ ವಿಶೇಷ ಕೊಡುಗೆಯಾಗಿ ನೀಡಿರುವ ‘ಪೀ’ ಮತ್ತು ‘ಪೂ’ ಎಂಬ ಮುದ್ದಾದ ಗೊಂಬೆಗಳು ಇತರ ಗಣ್ಯರಿಂದ ನೀಡಲ್ಪಟ್ಟ ಉಡುಗೊರೆಗಳೊಂದಿಗೆ ಇಲ್ಲಿ ಹೆಮ್ಮೆಯಿಂದ ವಿರಾಜಮಾನವಾಗಿವೆ.

ಲಾಸ್ಟ್ ಪಂಚ್: ಟಾಯ್ಲೆಟ್ ಗಳನ್ನು ಪ್ರೀತಿಯ ಉಡುಗೊರೆಯಾಗಿಯೂ ನೀಡಬಹುದು. ಹಾಲಿವುಡ್ ನಟಿ-ಗಾಯಕಿ ಜೆನಿಫರ್ ಲೊಪೆಝ್ ರ ಮಾಜಿ ಬಾಯ್-ಫ್ರೆಂಡ್ ಬೆನ್ ಅಫ್ಲಾಕ್ ಒಂದು ಲಕ್ಷ ಅಮೆರಿಕನ್ ಡಾಲರ್ ವೆಚ್ಚವನ್ನು ತೆತ್ತು ಕಮೋಡ್ ಸೀಟ್ ಒಂದನ್ನು ಲೊಪೆಝ್ ಅವರಿಗೆ ಉಡುಗೊರೆಯಾಗಿ ನೀಡಿದ್ದನಂತೆ (2003). ಈ ಟಾಯ್ಲೆಟ್ ಸೀಟನ್ನು ದುಬಾರಿ ಮುತ್ತು-ರತ್ನ-ವಜ್ರಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.  

September 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: