ಶೋಭಾ ಹಿರೇಕೈ
ಮುಂಬಾಗಿಲು ಮುಚ್ಚಿಯೇ ಇರುವ
ಮುಂದಿನ ಕಟ್ಟೆಯ
ತುತ್ತ ತುದಿಗೆ ಎಳೆ ಬಿಸಿಲ
ಎಳೆ ಹಿಡಿದು ಕುಳಿತ ಆ ಗೂರಲು ಅಜ್ಜಿ
ಆಗಾಗ ಕರೆಯುತ್ತಾಳೆ ನನ್ನ
ನಾನೋ….
ಮಕ್ಕಳ ಪಾಟಿಚೀಲಕ್ಕೆ ಅಡ್ಡ ಬಂದೋ
ದಾರಿಗುಂಟದ ಗಿಡ ಗಂಟೆಗಳ
ಮರೆ ಮಾಚಿಕೊಂಡೋ
ಇನ್ನಾರೋ ಕರೆದರೆಂದು ನಟಿಸುತ್ತಲೋ..
ಅಜ್ಜಿ ಕಟ್ಟೆಯ ದಾಟಿ ಬಿಡುತ್ತೇನೆ.

ನಾನು ಶಹರ ಸೇರುವ ಮುನ್ನ
ಇಲ್ಲೇ ಅಲ್ಲವೇ ಇದ್ದದ್ದು
ಅಜ್ಜಿ ಕೊಡುವ ಕಳಲೆ ಪಲ್ಯ
ನುಚ್ಚಣಬೆ ಸಾರು
ಕಾರೇಡಿ ಮುಂಡಿ
ಚಗಳಿ ಚಟ್ನಿ, ಎಲ್ಲವನ್ನು ಸವಿದದ್ದು
ಎರಡೂ ಸೊಟ್ಟ
ಅಡ್ಡಡ್ಡ ಕಾಲನ್ನು ಎಳೆಯುತ್ತಾ
ಕೈಯ್ಯ ರುಚಿಯನ್ನು ಕರಡಿಗೆಯಲ್ಲಿ
ತಂದಿಟ್ಟು ಬಿಡುವ ಅಜ್ಜಿ
ಅದೆಷ್ಟು ಸಲ ಅವ್ವಳಾಗಿಲ್ಲ.
ಹಳ್ಳಿ ಬಿಟ್ಟು ಶಹರ ಸೇರಿದ ಮೇಲೆ
ನಾನೂ ನಾಜೂಕು ಕಲಿತಿದ್ದೇನೆ
ಗೂರಲು ಅಜ್ಜಿ ಎದುರಿಗೇ..
ಕೆಮ್ಮಿ ಬಿಡುತ್ತಾಳೆಂದು
ಹೋಗುವುದನ್ನೇ ಮರೆತಿದ್ದೇನೆ..
ಈ ನಗರದ ಬಿಸಿಯಲ್ಲೂ
ನಡುಗುತ್ತಿರುವ ಈ ರಾತ್ರಿ
ಅಜ್ಜಿ ಕೇಳಿದ ಚಳಿ ಅಂಗಿ ನೆನಪಾಗುತ್ತಿದೆ.
ಹಾಳು ಮರೆವು
ಜಗದೆಲ್ಲಾ ಚಿಂತೆ ನನಗೊಬ್ಬಳಿಗೆ ಕೊಟ್ಟಂತೆ
ದ್ಯಾಸೇ ಇಡದೆ ಮರೆತೇ ಬಿಡುತ್ತೇನೆ
‘ಮಗಾ ಒಂದು ಹಳೆಯ ಜೆರ್ಸಿ ಆದರೂ ಕೊಡು’ ಎಂದದ್ದು.
ಹೌದು, ನಿನ್ನೆ ಸಹ ಕರೆದಿದ್ದಳು
‘ಮಗಾ….’ ಅಂದ ದನಿ
ರಸ್ತೆ ತುದಿ ಮುಟ್ಟಿದ ನನಗೆ
ಕಿವಿ ತಟ್ಟಿ ಹೋಗಿತ್ತು.
ನಾನು ಇಂದು ಹೋಗಿದ್ದೆ,
ಒಂದು ಹೊಸ ಜೆರ್ಸಿಯೊಂದಿಗೆ..
ಅಲ್ಲಿ ಸುತ್ತ ನೆರೆದವರ ಬಾಯಲ್ಲಿ ಅಜ್ಜಿಯದ್ದೇ ಗುಣಗಾನ

ಬಿದಿರ ಭತ್ತ ಹೆಕ್ಕಿ ಮಕ್ಕಳ ಸಾಕಿದ್ದು
ಮಣ್ಣು ಹೊತ್ತು ಗೋಡೆ ಕಟ್ಟಿದ್ದು
ಗಂಡೇ ಆಗಿ ನೇಗಿಲ ಹಿಡಿದದ್ದು
ಗಂಡನಿಂದ ಕಾಲು ಮುರಿಸಿಕೊಂಡಿದ್ದು,
ಊರ ತುಂಬಾ ಈ ಅಕ್ಕೂರೆ
ನನ್ನ ಹೆಣ್ಣು ಮಗಳು ಅನ್ನುತಿದ್ದದ್ದು
ಅಜ್ಜಿಯ ಕೈಯ್ಯ ರುಚಿ
ಕಾಲ ಗುಣ
ಒಂದೇ.. ಎರಡೇ..
ನಾನೀಗ ಅಜ್ಜಿಯ ಸಮೀಪಿಸಿದೆ
ಅಜ್ಜಿ ಕೆಮ್ಮಲಿಲ್ಲ.
ಕಣ್ಣೀರು ಸಹ ನನ್ನ ಸಮಾಧಾನಿಸಲಿಲ್ಲ
ಒಯ್ದ ಚಳಿಯಂಗಿಯ ಹೊದೆಸಿದೆ
ಅಜ್ಜಿ ಏಳಲೂ ಇಲ್ಲ.
ಅಯ್ಯೋ..!
ದಾರಿಯ ಗಿಡಗಳೆಲ್ಲಾ ಯಾಕೋ..
ತಲೆ ತಗ್ಗಿಸಿವೆಯಲ್ಲ.!!!






ಚೆಂದದ ಕವಿತೆ ಶೋಭಾ
ತುಂಬಾ ಚಂದದ ಪದ್ಯ