ಶೋಭಾ ಹಿರೇಕೈ ಗಡಿಯೂರಿನ ನೆನಪು- ‘ಆ ವೇದಿಕೆ ಹತ್ತಲು ಭಾಗ್ಯ ಬೇಕು ತಾಯಿ’

4

ಶೋಭಾ ಹಿರೇಕೈ ಕಂಡ್ರಾಜಿ

**

ಗಡಿಯೂರಿನ ವೇದಿಕೆಯ ಬಗ್ಗೆ ಹೇಳ ಹೊರಟರೆ, ನನ್ನ ಬಾಲ್ಯದ ಮೊದಲ ವೇದಿಕೆಯ ನೆನಪೇಕೋ ದಾಂಗುಡಿಯಿಡುತ್ತಿದೆ. ಹೇಳದಿದ್ದರೆ ಎಳೆಕೂಸಂತ ಆ ನೆನಪಿಗೂ ನೋವಾಗಬಹುದು . ಹಾಗಾಗಿ ಮೊದಲು ಅದನ್ನೇ ಹೇಳಿ ಮತ್ತೆ ಮರಾಠಿ ಊರಿಗೆ ಹೊರಳುವೆ.

ಅದು ಐದನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿದು ಶಾಲಾ ವಾರ್ಷಿಕೋತ್ಸವದ ಸಮಯ. ನಮ್ಮೂರಲ್ಲಿ ಶಾಲೆ ಇರಲಿಲ್ಲ. ನಾನು ಪಕ್ಕದೂರಿನ ಶಾಲೆಗೆ ಹೋಗುತ್ತಿದ್ದೆ. ಆ ಊರವರು ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವದಂದು ನಾಟಕವನ್ನು ಮಾಡುತಿದ್ದರು. ಆಗಿನ ಕಾಲಕ್ಕೆ ಹಳ್ಳಿಗರಿಗೆ ಅದೇ ಜನಪ್ರಿಯ ಮನರಂಜನೆಯ ಮಾರ್ಗ. ಆ ವರುಷ ಮಾಡಬೇಕೆಂದು ನಿರ್ಧರಿಸಿಕೊಂಡ ‘ಮಹಾತ್ಯಾಗಿ’ ಎಂಬ ಬರೋಬ್ಬರಿ ನಾಲ್ಕೈದು ತಾಸಿನ ನಾಟಕದಲ್ಲಿ ಹತ್ತು ವರ್ಷದ ಪುಟ್ಟ ಪೋರಿಯದ್ದೆ ಕಥಾನಾಯಕಿಯ ಪಾತ್ರ.

ಕುರುಡ ಅಣ್ಣನಿಗೆ ಆಸರೆಯಾದ ತಂಗಿ ಆಕೆ. ಉಳಿದ ಹೆಣ್ಣು ಪಾತ್ರಗಳನ್ನೇನೋ ಗಂಡಸರೇ ಮಾಡಲು ಒಪ್ಪಿ ಪಾತ್ರ ಹಂಚಿಕೆಯಾಯಿತು. ಆದರೆ ಬಾಲೆಯ ಪಾತ್ರಕ್ಕೆ ಶಾಲೆಯ ಅಷ್ಟೂ ಮಕ್ಕಳನ್ನು ಬಿಟ್ಟು ಮುಖ್ಯ ಗುರುಗಳು ನನ್ನ ಹೆಸರು ಸೂಚಿಸಿದ್ದರು. ಕಾರಣ ನಂಗೂ ಗೊತ್ತಿರಲಿಲ್ಲ. ನಾನು ತಲೆ ಅಲ್ಲಾಡಿಸಿದ್ದೆ.

ನಾಟಕದ ಪುಸ್ತಕದಲ್ಲಿನ ಮಾತುಗಳನ್ನು ಒಂದೊಂದೇ ಲೆಕ್ಕ ಹಾಕಿದ ಉಳಿದ ಪಾತ್ರದಾರಿಗಳೇನೋ ನಾನು ಆ ಪಾತ್ರ ನಿಭಾಯಿಸುವ ಶಂಕೆ ವ್ಯಕ್ತ ಪಡಿಸಿ, ಸಣ್ಣ ಮಕ್ಕಳಿಗೆ ಬೇಡ, ಸ್ವಲ್ಪ ಬದಲಾವಣೆ ಮಾಡಿ ದೊಡ್ಡೋರಿಗೆ ಆ ಪಾತ್ರ ಹಂಚುವುದೆಂದು ಮಾತಾಡಿಕೊಂಡಿದ್ದನ್ನು ನಾಟಕದ ಮಾಸ್ತರರು ಮತ್ತೆ ಮುಖ್ಯ ಗುರುಗಳು ಕೇಳಿಸಿಕೊಂಡು, ನನ್ನ ಅಪ್ಪನನ್ನು ಕರೆಯಿಸಿ ಟ್ರಯಲ್ ಗೆ ಕರೆಸಿ ಕಳಿಸುವ ಜವಾಬ್ದಾರಿ ಒಪ್ಪಿಸಿ ಆ ಪಾತ್ರವನ್ನು ನಾಟಕದ ಪುಸ್ತಕದಲ್ಲಿ ಇದ್ದಹಾಗೆ ಸಣ್ಣ ಹುಡುಗಿಗೇ ಕೊಡಲು ನಿರ್ಧರಿಸಿದ್ದರು. ನಂಗೆ ಆ ಪಾತ್ರ ಸಿಕ್ಕಿತ್ತು.

ನಾಟಕದ ಮಾಸ್ತರರು ಯಾವುದೋ ನಂಬುಗೆಯಲ್ಲಿ ನಂಗೆ ಹಂಚಿದ ‘ ಗೀತಾ’ ಎನ್ನುವ ಹತ್ತರ ಪುಟ್ಟ ಹುಡುಗಿಯ ಪಾತ್ರಕ್ಕೆ ಅದೆಷ್ಟು ನ್ಯಾಯ ಒದಗಿಸಿದ್ದೆನೆಂದರೆ ನಾಟಕ ಮುಗಿದ ಮೇಲೆ ಬಹುಮಾನದ ಸುರಿಮಳೆ!. ನಾಟಕದ ಗುರುಗಳು “ಮಗಳೆ ನಿನಗೆ ದುಡ್ಡಿನ ಮಾಲೆ ಮಾಡಿ ವೇದಿಕೆಯಲ್ಲಿ ಹಾಕುವ ಯೋಚನೆಯಿತ್ತು ” ಅಂದಿದ್ದರು.

ನಂಗೋ ಆಗ ಅವೆಲ್ಲ ಅಷ್ಟು ಮಹತ್ವ ಆಗದಿದ್ದರೂ ಎಲ್ಲರ ಹೊಗಳಿಕೆ ಕೇಳಿ ಉಬ್ಬಿ ಹೋಗಿದ್ದಂತೂ ಸತ್ಯ. ಮತ್ತೆ ಹಲವಾರು ವರ್ಷಗಳವರೆಗೆ ಆ ಪಾತ್ರ ಕೆಲವರಿಗೆ ನನ್ನ ಮೂಲ ಹೆಸರನ್ನು ಮರೆಸಿ ಗೀತಾಳನ್ನಾಗಿಯೇ ಉಳಿಸಿತ್ತು. ಅದೇ ನನ್ನ ಮೊದಲ ದೊಡ್ಡ ವೇದಿಕೆ.‌ ಆಮೇಲೆ ನಮ್ಮೂರಿನ ನಾಟಕದಲ್ಲಿ ಹಿರೋಯಿನ್ ( ಕಥಾನಾಯಕಿ) ಆಗಿಯೂ ಶಾಲಾ ಕಾಲೇಜುಗಳಲ್ಲಿ ಹಲವಾರು ವೇದಿಕೆಗಳಲ್ಲಿ ಬೇರೆ ಬೇರೆ ಪಾತ್ರಗಳಿಗೆ ಅಭಿನಯಿಸಿದ್ದೆ. ನನ್ನ ಆಟೋಗ್ರಾಫ್ ತೆಗೆದು ನೋಡಿದರೆ ಅಲ್ಲೂ ಸಹ ನಾನು ಅಭಿನಯಿಸಿದ ಪಾತ್ರಗಳದ್ದೆ ಹೆಸರು. ನನ್ನ ಮೂಲ ಹೆಸರನ್ನೇ ನನ್ನ ಸ್ನೇಹಿತರೆಲ್ಲ ಮರೆತಿದ್ದಾರೆ.! ಆಗೆಲ್ಲಾ ಒಂಥರಾ ಹೆಮ್ಮೆ. ಅದೇ ಬಹುದೊಡ್ಡ ಖುಷಿ ಆಗ. ಆಮೇಲೆಯೇ ಅಭಿನಯಕ್ಕೆ ಅಭಿವ್ಯಕ್ತಿಯೂ ಸೇರಿಕೊಂಡು ಕವಯತ್ರಿಯಾಗಿ ಕೆಲವು ವೇದಿಕೆಗಳನ್ನು ಹತ್ತಿಳಿದಿದ್ದೆ. ಈ ವೇದಿಕೆ ಗಳು ನನ್ನ ಗುರುತನ್ನು ಕೆಲವು ಜನರಲ್ಲಾದರೂ ಉಳಿಸುವುದಕ್ಕೆ ನಾನು ಹತ್ತಿಳಿದ ಎಲ್ಲಾ ವೇದಿಕೆಗಳನ್ನು ಮತ್ತಿಂದು ಪ್ರೀತಿಯಿಂದ ನೆನೆದೆ.
.

ಈಗ ಮತ್ತೆ ಗಡಿಯೂರಿಗೆ ಬರುವೆ.
ನಮ್ಮ ಊರಲ್ಲಿ ( ನಾನಿದ್ದ ಮರಾಠಿಯೂರಲ್ಲಿ ) ಒಮ್ಮೆ ನಾಟಕ ಏರ್ಪಡಿಸಿದ್ದರು. ನಾನು ಆ ಊರಿಗೆ ಬಂದು ಐದಾರು ತಿಂಗಳುಗಳಾಗಿತ್ತಷ್ಟೇ. ಅವರ ನಾಟಕದ ಟ್ರಯ ಲ್ ನನ್ನ ರೂಮಿನ ಹತ್ತಿರ ಮಾವುಲಿ ಮಂದಿರದ ಕಟ್ಟೆಯಲ್ಲಿ ನಡೆಯುತಿತ್ತು. ಬೇಡವೆಂದರೂ ತಯಾರಿ ನನ್ನ ಕಿವಿ ಮುಟ್ಟುತಿತ್ತು. ನಂಗೋ ಅದು ನಮ್ಮೂರಲ್ಲಿ ಮಾಡುತಿದ್ದ ನಾಟಕದ ರೀತಿಯಲ್ಲಿರದೆ ಬಯಲಾಟದ ರೀತಿಯಲ್ಲಿ ಅನ್ನಿಸಿದ್ದರಿಂದ, ಮತ್ತೆ ನನಗೆ ಅವರ ಭಾಷೆ ಅನ್ಯ ಭಾಷೆಯಾಗಿದ್ದು ಏನೂ ಅರ್ಥ ಆಗದೆ ಇರುವುದರಿಂದ ನನಗದೂ ಆಸಕ್ತಿದಾಯಕವಾದ ವಿಷಯವಾಗಿರಲಿಲ್ಲ. ( ಈಗ ಆ ಊರ ನಾಟಕ ನೋಡಬೇಕೆನಿಸುತ್ತಿದೆ)

ನಾಟಕ ಇನ್ನೇನು ನಾಲ್ಕೈದು ದಿನ ಇರುವಾಗ ಆಮಂತ್ರಣ ಪತ್ರಿಕೆ ಹಿಡಿದು ನಾಟಕದ ಕಮಿಟಿಯವರು ಬಂದು, ‘ಬಾಯಿ ನಿಮ್ಮ ಹೆಸರು ಹಾಕಿದ್ದೀವಿ. ನೀವು ಬರಲೇ ಬೇಕು ಅಂದರು’. ಆಯ್ತು ಎನ್ನುತ್ತ ಆಮಂತ್ರಣ ಪತ್ರ ತೆಗೆದು ನೋಡಿದರೆ ಆ ಊರಿಗೆ ಬರುವ ಪೋಸ್ಟ್ ಮ್ಯಾನ್ ಅವರಿಂದ ಹಿಡಿದು, ಅರಣ್ಯ ಇಲಾಖೆಯವರು, ಶಿಕ್ಷಕರು ಎಲ್ಲಾ ಸೇರಿ ಹೆಚ್ಚುಕಮ್ಮಿ ಒಂದೈವತ್ತು ಜನರಿದ್ದರು ನಾಟಕಕ್ಕೆ ಶುಭಾಶಯ ಕೋರುತ್ತಾ ವೇದಿಕೆಯಲ್ಲಿ ಉಪಸ್ಥಿತರಿರಾಗಿ!! ಅಬ್ಬಾ ಎನ್ನುತ್ತಾ… ಓದಿ ಮುಗಿಸಿ ಮುಖ್ಯ ಗುರುಗಳ ಮುಖ ನೋಡಿದೆ.‌ ಮುಖ್ಯ ಅತಿಥಿಗಳ ಮುಖ ಮಂದಹಾಸ ಬೀರುತಿತ್ತು.

ನಾಟಕಕಿನ್ನು ಎರಡೇ ದಿನ ಬಾಕಿ. ಊರಿನಿಂದ ಹೊರಗಿದ್ದ ಹುಡುಗರೆಲ್ಲ ಒಬ್ಬೊಬ್ಬರಾಗಿ ಮನೆ ದಾರಿ ಹಿಡಿದು ಬರುತಿದ್ದಾರೆ. ಎಲ್ಲರ ಬಾಯಲ್ಲೂ…ನಾಟಕದ ಕುರಿತೇ ಮಾತು. ಏನೋ ಸಡಗರ. ಹೊಸ ಹುರುಪೊಂದು ಬಣ್ಣ ಹಚ್ಚಿಕೊಂಡು ಓಣಿ ಓಣಿಯಲ್ಲಿ ಓಡಾಡುತ್ತಿದ್ದಂತೆ. ಊರಲ್ಲೋ ಪಾತ್ರದಾರಿಗಳ ಬಗ್ಗೆಯೇ ಚರ್ಚೆ. ಪಾತ್ರದಾರಿಗಳೋ ನಾಟಕದ ಮಾತು ಬರೆದುಕೊಂಡ ಪಟ್ಟಿ ಹಿಡಿದುಕೊಂಡೇ ಓಡಾಟ. ಹೋದಲ್ಲಿ ಬಂದಲ್ಲಿ ನಾಟಕದ ಮಾತುಗಳದ್ದೇ… ಬಾಯಿಪಾಠ. ನಂಗೋ ನಾಟಕ ನೋಡುವ ಕುತೂಹಲ.

ಇನ್ನೇನು ನಾಳೆಯೇ.. ನಾಟಕ. ಅಷ್ಟರಲ್ಲೇ ನಂಗೆ ತಿಂಗಳ ಹೊಟ್ಟೆ ನೋವು ಬಂದು ಮಲಗಿದ ಸುದ್ದಿ ಮನೆಯ ಓನರ್ ಆಂಟಿಗೂ ತಲುಪಿ, ಅಲ್ಲಿಂದ ಅಕ್ಕ ಪಕ್ಕದ ಹೆಂಗಸರವರೆಗೂ ಹೋಗಿ ಮುಟ್ಟಿತ್ತು. ಅವರೋ ನಾನಿರುವಲ್ಲಿ ಬಂದು, ಏನೋ ಆಗಿ ಹೋಗಿದೆ ಅನ್ನುವ ರೀತಿಯಲ್ಲಿ
“ಬಾಯಿ ನೀವು ನಾಟಕ ನೋಡಲು ಹೋಗುವಂತಿಲ್ಲ. ಮಂದಿರದ ಮುಂದೆಯೇ ನಾಟಕ ನಡೆಯೋದರಿಂದ ನೀವು ಎಲ್ಲೋ ದೂರ ನಿಂತು ನಾಟಕ ನೋಡಬಹುದು! ಯಾರಾದರೂ ಇದ್ದೇ ಇರುತ್ತಾರೆ ರಜೆ ಆದವರು. ಅವರ ಜೊತೆ ನೀವೂ ನಾಟಕ ನೋಡಬಹುದು. ಚಿಂತೆ ಮಾಡಬೇಡಿ.”ಎಂದು ಕಾಳಜಿ , ಕನಿಕರ ಎಲ್ಲಾ ಸೇರಿದಂತೆ ಮಾತಾಡಿ ಹೋಗುತ್ತಿದ್ದರು.

ನನಗೋ ಬಾಯಿ ತಪ್ಪಿ ಹೊಟ್ಟೆ ನೋವಿನ ವಿಷಯ ಹೇಳಿದ್ದಕ್ಕೆ ಇಂತಹ ಪಜೀತಿ ಬಂತಲ್ಲಪ್ಪ ಎಂದು ಚಿಂತೆಗೀಡಾಗಿತ್ತು. ಹಾಳಾದ ಹೊಟ್ಟೆ ನೋವಿಗೆ ಹಿಡಿ ಶಾಪ ಹಾಕಿ ಗೆಳತಿಯ ಸಲಹೆ ಕೇಳಿದರೆ ಅವಳೂ ಸಹ “ದೀದಿ ಹೇಳಿ ಕೇಳಿ ಮಾವುಲಿ ಮಂದಿರ. ಮುಟ್ಟಾದವರ ಗಾಳಿ ಸಹ ಸುಳಿಯೋ ಹಾಗಿಲ್ಲ , ಬೇಡ ದೀದಿ, ನಾನೇ ನಿಮ್ಮ ಜೊತೆಗೆ ಇರುವೆ. ಕಾಳಜಿ ಮಾಡಬೇಡಿ” ಅಂತ ಹೇಳಿ ನಾಟಕದ ಬಣ್ಣದ ರೂಮಿಗೆ ಹೋಗಿ ತಾನೇ ಬಣ್ಣ ಬಡಿದುಕೊಳ್ಳುವವಳೋ ಎಂಬಂತೆ ಮುಖದ ತುಂಬಾ ಗಲಗಲ ನಗು ಉಕ್ಕಿಸಿಕೊಂಡು ಹೊರಟೇ ಬಿಟ್ಟಳು.

ನಂಗೋ.. ನಾಟಕ ನೋಡುವುದಿರಲಿ.. ಅಂದು ಒಬ್ಬಳೇ ಮನೆಯಲ್ಲಿ ಹೇಗಿರಲಿ ಎಂಬ ಚಿಂತೆ ಶುರುವಾಯಿತು. ವರ್ಷಕ್ಕೊಂದೇ ಬಾರಿ ಸಿಗುವ ಅಪರೂಪದ ಮನರಂಜನೆಯ ಕಣ್ ತುಂಬಿಕೊಳ್ಳದೆ ನನ್ನ ಧೈರ್ಯಕ್ಕೆ ನನ್ನ ಜೊತೆಯಿರಲು ಯಾವ ದೀದಿಯರು ಬರಲು ಸಾಧ್ಯ? .ಯಾಕಾದರೂ ಹೊಟ್ಟೆ ನೋವೆಂದು ಮಲಗಿದೆನೋ… ಅನ್ನಿಸಿತ್ತು. ಹೊಟ್ಟೆ ನೋವೆಂದು ಹೇಳುವಾಗ ಈ ನಾಟಕದ ನೆನಪೆಲ್ಲ ಎಲ್ಲಿರುತ್ತೆ ಹೇಳಿ? ಗೌರವದಿಂದ ವೇದಿಕೆಗೆ ಕರೆದಾಗ ಹೋಗುವ ಒಂದು ಸೌಜನ್ಯದ ನೆನಪಾಗಿದ್ದರೆ, ಮತ್ತಿದೆಲ್ಲ ಇಷ್ಟೆಲ್ಲಾ ಇಷ್ಯೂ ಆಗಿ ನಂಗೊಳ್ಳೆ ಪಜೀತಿ ತಂದಿಡುತ್ತೆ ಅಂತ ಗೊತ್ತಿದ್ದರೆ ಸುಳ್ಳೆ ಜ್ವರ ಎಂದು ಹೊದ್ದು ಮಲಗುತ್ತಿದ್ದೆನೆನೋ… ಮುಚ್ಚಿಡುವ ವಿಷಯವನ್ನು ಬಚ್ಚಿಡಲು ನಂಗೆ ಬರುವ ಅಗಾಧ ಹೊಟ್ಟೆ ನೋವು ಬಿಡುತ್ತಲೇ ಇರಲಿಲ್ಲ. ಅಂದು ಸಹ ಬಿಡಲೇ ಇಲ್ಲ.

ಒಂದು ನಿರ್ಧಾರ ಮಾಡಿ ನನ್ನ ಬೆನ್ನಿಗಿರುವ ಖಾನಾಪುರದ ಟೀಚರ್ ರವರಿಗೆ ವಿಷಯ ತಿಳಿಸಿದೆ. ನಾಳೆ ನೀವು ಇಲ್ಲಿಗೆ ಬರಲೇ ಬೇಕು ಎಂದೆ. ಅವರು ಆಯಿತೆಂದು ಬಂದರು. ಇಬ್ಬರೂ ವೇದಿಕೆಯ ಬಳಿಗೂ ಹೋಗದೆ ನಮ್ಮ ರೂಮಿನಲ್ಲೇ ಇರುವ ನಿರ್ಧಾರ ಮಾಡಿದೆವು. ನಂಗೋ ಸಮಾಧಾನ.

ವೇದಿಕೆಯ ಕಾರ್ಯಕ್ರಮ ಶುರುವಾಯಿತು. ವೇದಿಕೆಗೆ ಆಹ್ವಾನಿಸಲು ಒಂದೆರಡು ಕರೆ. ಶಾಳೆಚ ಕನ್ನಡ ಬಾಯಿ ಎಯಲಾ ಪಾಯಜೆ…. ಕರೆ ರೂಮಿನ ವರೆಗೂ ಕೇಳುತ್ತಿದೆ. ಆದರೆ ಬಾಯಿ ಹೋಗುವಂತಿಲ್ಲ.

ನೂರು ಮಾರಿನಾಚೆಯೇ ಇರುವ ವೇದಿಕೆ.. ನನ್ನ ಕರೆ ಮುಗಿಸಿ ಮುಂದಿನ ಅತಿಥಿಗಳ ಕರೆಯಿಂದ ಹಿಡಿದು ಬೆಳಗಾಗುವವರೆಗೂ ನಾಟಕ. ಕಿವಿಯಲ್ಲೇ ನಡೆಯಿತು. ಕಣ್ಣು ನಿದ್ದೆಗೆ ಸಹಕರಿಸಲಿಲ್ಲ. ಮರುದಿನ ನೀರಿಗೆಂದು ಹೋದರೆ ಬೋರ್ ವೆಲ್ ಬಳಿ, ಶಾಲೆಯ ದಾರಿಯಲ್ಲಿ ಎಲ್ಲಿ ಕಂಡಲ್ಲೆಲ್ಲ ಕೇಳುವವರೇ … ಬಾಯಿ ಅಷ್ಟೊಂದು ಕರೆದರೂ ವೇದಿಕೆಗೆ ಯಾಕೆ ಬರಲಿಲ್ಲ?. ಊರಿಂದ ಬಂದ ಸಂಬಂಧಿಕರನ್ನು ಕರಕೊಂಡು ಬರಬೇಕಿತ್ತು. ಹೀಗೆ ಮಾಡಬಾರದಿತ್ತು ನೀವು…

ಮತ್ತೂ…ನಾನು ಬೇಕೆಂದೇ ಬರಲಿಲ್ಲೆಂದೂ ಕೆಲವರಿಗೆ ಅನ್ನಿಸಿರಬೇಕು..

ಅವರನ್ನುವುದು ಕೇಳಿಸುತಿತ್ತು..ವ್ಯಾಸ್ ಪೀಠಾವರ್ ಛಡಲಾಪನ್ ಭಾಗ್ಯ ಪಾಯಿಜೆ ಬಾಯಿ. ತುಮ್ಹಾಲಾ ಭಾಗ್ಯ ನಾಹಿ.
(ಆ ವೇದಿಕೆ ಹತ್ತಲು ಭಾಗ್ಯ ಬೇಕು ಬಾಯಿ. ನಿಮಗೆ ಭಾಗ್ಯವಿಲ್ಲ!)

‍ಲೇಖಕರು Admin MM

February 13, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: