ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೋಧಿಸುವ ಕಯಾಲಿಗೆ ಬಿದ್ದವರು, ಪ್ರೀತಿಯನ್ನೇ ಕಳೆದುಕೊಂಡರು…

ಶಶಿಕಾಂತ ಯಡಹಳ್ಳಿ

ಚಿಕ್ಕವನಾಗಿದ್ದಾಗ ನನಗೆ
ಗುರಿ ಇತ್ತು ದಾರಿ ಗೊತ್ತಿರಲಿಲ್ಲ.
ಈಗ ದೊಡ್ಡವನಾಗಿದ್ದೇನೆ
ದಾರಿ ಸಿಕ್ಕಿದೆ ಗುರಿ ಮರೆತಿದೆ.

* * *

ಪರಿಚಿತ ಸ್ನೇಹಿತರ
ಅಪರಿಚಿತ ಮುಖಗಳು
ಒಟ್ಟಿಗೆ ಕಾಣುವುದಿಲ್ಲ.
ಕಾಲನ ಓಟದಲ್ಲಿ ಮುಖವಾಡ
ಕಳಚಿ ಬಿದ್ದಂತೆಲ್ಲಾ
ಸಂಬಂಧಗಳು ಉಳಿಯುವುದಿಲ್ಲ.

* * *

ಇತ್ತೀಚೆಗೆ ಮೆಟ್ರೋ ಸಿಟಿಯಲ್ಲಿ
ಸಂಬಂಧಗಳ ಸಾಚಾತನದ ಬಗ್ಗೆ ಗುಮಾನಿಯಿದೆ.
ಹಣದ ಹಿಂದೆ ಬಿದ್ದ ಸ್ವಾರ್ಥಿಗಳ
ನೀಚತನ ನಿರಂತರವಾಗಿ ಸಾಗಿದೆ.

* * *

ಪ್ರೀತಿಯ ಬಲೆಯಲಿ ಸಿಕ್ಕ ಮೇಲೆ
ಅದರ ನೆಲೆಯನರಸಿ ಹೋಗದಿರು….
ಶೋಧಿಸುವ ಕಯಾಲಿಗೆ ಬಿದ್ದವರು
ಪ್ರೀತಿಯನ್ನೇ ಕಳೆದುಕೊಂಡರು….

* * *

ಯಾಕೀ ನಿರಾಶೆ, ಯಾತಕೀ ಹತಾಶೆ
ನನ್ನ ನಿರೀಕ್ಷೆ ಅತಿಯಾಯಿತೇನೋ?
ಯಾಕೆ ಈ ವ್ಯವಸ್ಥೆ ಇಷ್ಟೊಂದು ದುರಾವಸ್ಥೆ
ದುರಸ್ತಿ ಮಾಡಲು ಸಾಧ್ಯವೇ ಇಲ್ಲವೇನೋ?

* * *

ಬದುಕು ಬಲು ರೋಚಕ ಎಂದುಕೊಂಡು
ಸೂಚನೆಗಳನ್ನು ಮೀರಿ ಮೆರೆದವನ
ಮನೆಯಲ್ಲೀಗ ಸೂತಕ…..

* * *

ಪರಿಚಿತ ಲೋಕದ ಅಪರಿಚಿತ ಮಜಲುಗಳು ಕಾಣುವುದಿಲ್ಲ ಕಣ್ಣಿಗೆ
ಒಟ್ಟಿಗಿದ್ದೂ ನೆಟ್ಟಗಿದ್ದರೂ ಮುಚ್ಚುಮರೆ ನಿಗೂಢಗಳು ಚುಚ್ಚುತ್ತವೆ ತಣ್ಣಗೆ.

* * *

ಬದುಕಿನ ದ್ವಂದ್ವ-ವೈರುಧ್ಯ ಅಸಾಂಗತ್ಯಗಳನ್ನು
ಯಾವ ತತ್ವ-ಸಿದ್ದಾಂತಗಳೂ ಪರಿಪೂರ್ಣವಾಗಿ ವಿವರಿಸಲಾರವು…
ನಾವು ಮನುಷ್ಯರು ಇರೋದೇ ಹೀಗೆ
ಯಾವ ಧರ್ಮ-ಕರ್ಮಗಳೂ ಅಪೂರ್ಣತೆಯನ್ನು ಪರಿಹರಿಸಲಾರವು…

* * *

ಆಗ ತ್ರಿಕರಣ ಶುದ್ದೀಕರಣ
ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ.
ಈಗ ಜಾಗತೀಕರಣ
ಗುರಿಯೂ ಇಲ್ಲಾ, ಗುರುವೂ ಇಲ್ಲಾ
ಯಾಕೆಂದರೆ ಗುರುವಿಗೆ ಗುರಿ ಗೊತ್ತಿಲ್ಲ.

* * *

ಗಂಡು ಹೆಣ್ಣಿನ ನಡುವಿನ ಮಜಲುಗಳು
ಯಾವ ಕಾಲವಾದರೂ ಗೋಜಲುಗಳೇ…
ಪ್ರೀತಿ ಪ್ರೇಮದ ಪರಾಕಾಷ್ಟೆಯಲ್ಲಿ ಎಲ್ಲಾ ಗೋಜಲುಗಳೂ
ಗಮ್ಯ ತಲುಪುವ ಮಜಲುಗಳೇ…..

* * *

ಗಂಡು ಹೆಣ್ಣುಗಳು ಅರ್ಥೈಸಿಕೊಳ್ಳುವ
ವ್ಯರ್ಥ ಪ್ರಯತ್ನ ನಿರಂತರ..
ಮೊದಲು ಒಬ್ಬರಿಗೊಬ್ಬರು
ಮಾನಸಿಕವಾಗಿ ಆಗಲೇಬೇಕು ರೂಪಾಂತರ…..

* * *

ಇನ್ನೂ ಎಷ್ಟೂಂತ ಹುಡುಕಲಿ, ಎಲ್ಲೀಂತ ಹುಡುಕಲಿ
ಕಳೆದುಕೊಂಡ ನೆಮ್ಮದಿಯನ್ನ….
ಪ್ರೀತಿ ಆಯ್ತು..ಮದುವೆ ಆಯ್ತು.. ಮಕ್ಕಳೂ ಆಯ್ತು
ನೆಮ್ಮದಿಯ ನೆಲೆ ಎಂದುಕೊಂಡಿದ್ದೆಲ್ಲಾ ಕೊಟ್ಟಿದ್ದು ಬರೀ ನಿರಾಶೆಯನ್ನ……

* * *

ಯಾವುದೇ ಕೋಮುದಳ್ಳುರಿ ಬರೀ-
ಸಂತ್ರಸ್ತರನ್ನು ಮಾತ್ರ ಸುಡುವುದಿಲ್ಲ…
ಮನುಷ್ಯತ್ವ ಇರುವವರ ಎದೆಗೆ
ಕೊಳ್ಳಿ ಇಡದೇ ಬಿಡುವುದಿಲ್ಲ.

* * *

ಈ ಜಾತಿವಾದ ಯಾರನ್ನೂ ಬಿಟ್ಟಿಲ್ಲ
ಸತ್ತವರನ್ನೂ ಸಹ..
ಹುಟ್ಟದವರನ್ನು ಇನ್ನೂ ತಟ್ಟಿಲ್ಲ
ಯಾಕೆಂದರೆ ಅವರಿನ್ನೂ ಹುಟ್ಟಿಲ್ಲ…..

* * *

ಸಂಕಟ ಸಂಕೋಲೆಗಳೊಳಗೂ
ಕ್ಷೀಣವಾಗದು ಬದುಕುವ ಆಸೆ..
ಕಾರಣ……
ನೆಮ್ಮದಿಯ ನಾಳೆಯತ್ತ ಇರುವ
ಅದಮ್ಯ ಭರವಸೆ…

* * *

ರಾಗ ತಾಳಬದ್ದವಾಗಿ
ಹಾಡುತ್ತಾರೆ ಗಾಯಕರು
ಅವರದು ಕೊರಳಿನ ದ್ವನಿ….
ಗಾರ್ದಭ ರಾಗದಲ್ಲಿ
ಕರ್ಕಶವಾಗಿ ಹಾಡುತ್ತಾರೆ ಭಿಕ್ಷುಕರು
ಅವರದು ಕರುಳಿನ ದ್ವನಿ….

* * *

ದೇಶದ ಆರ್ಥಿಕತೆ ಛಿದ್ರಗೊಂಡಿದೆ
ಸಾಮಾಜಿಕ ಭದ್ರತೆ ಭಗ್ನಗೊಂಡಿದೆ
ಆದರೂ ಆಳುವವರ ಹೇಳುತ್ತಾರೆ
ಭಾರತ ಬೆಳಗುತ್ತಿದೆ.

 

‍ಲೇಖಕರು avadhi

28 June, 2014

4 Comments

  1. mmshaik

    vaastaavika sthiti tereditta kavanagaLu..nice..very nice..

  2. pratibha kage

    vAstavakke hattiravada kavite

  3. Ajit

    ಹುಟ್ಟದವರನ್ನು ಇನ್ನೂ ತಟ್ಟಿಲ್ಲ
    ಯಾಕೆಂದರೆ ಅವರಿನ್ನೂ ಹುಟ್ಟಿಲ್ಲ…..
    What kind of poetry is this 🙁

  4. Jayashree B kadri

    very realistic and poignant sir. nice.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading