ಶೈಲಜಾ ಹಾಸನ ಓದಿದ ಒಂದು ಕಪ್‌ ಕಾಫಿ…

ಎನ್ ಶೈಲಜಾ ಹಾಸನ

ಪ್ರಬಂಧ ರಚನೆಯು ಸಾಮಾನ್ಯವಾಗಿ ಲೇಖಕನ ವ್ಯಕ್ತಿತ್ವ ವೈಶಿಷ್ಟ್ಯದಿಂದ ಕೂಡಿದ, ಸ್ವತಂತ್ರ ನಿರ್ದಿಷ್ಟ ಲಘು ಬರೆವಣಿಗೆ, ವ್ಯಕ್ತಿಯ ವೈಚಾರಿಕ ಆಲೋಚನೆಗಳನ್ನು ಸಹೃದಯರಿಗೆ ಗದ್ಯಾತ್ಮಕ ಕಾವ್ಯ ಶೈಲಿಯಲ್ಲಿ ವಿಷಯ ಪ್ರಸ್ತಾಪ ಮಾಡುವ ಬಗೆಯಿದು. ಸರಳ ಭಾವ ಪ್ರಧಾನ ಶೈಲಿಯಲ್ಲಿ ಗಾಢ ಆಲೋಚನಾ ಲಹರಿಯನ್ನು ಸ್ವತಂತ್ರ ವಿವೇಚನಾ ಪ್ರಕ್ರಿಯೆಯಲ್ಲಿ ಸೃಜನಶೀಲತೆಗೆ ಎಡೆ ಮಾಡಿ ಕೊಡುವ ಭಾಷಾ ಸಾಹಿತ್ಯಿಕ ಕ್ರಿಯೆ. ಸೃಜನಶೀಲ ಬರೆವಣಿಗೆಯ ಸಿದ್ಧಿ ಕೂಡ ಹೌದು.

ಜಗತ್ತಿನ ಯಾವುದೇ ಸಾಹಿತ್ಯವು ಯುಗಧರ್ಮದ ಮೂಸೆಯಿಂದ ಹೊರಬಂದು ತನಗೆ ತಕ್ಕ ಆಕಾರವನ್ನು ಪಡೆಯುತ್ತದೆ. ಕನ್ನಡ ಸಾಹಿತ್ಯದಲ್ಲಿ  ಪ್ರಬಂಧ ಎಂಬ ಸಾಹಿತ್ಯ ಪ್ರಕಾರ ಇಪ್ಪತ್ತನೆಯ ಶತಮಾನದ ಮೊದಲಲ್ಲಿ ಹುಟ್ಟಿಕೊಂಡಿತು. ಈ ಪ್ರಬಂಧ ಪ್ರಕಾರದ ಸಾಹಿತ್ಯಕ್ಕೂ ಇಂಗ್ಲಿಷ್ ಭಾಷೆಯ ಪ್ರಬಂಧಗಳೇ ಮೂಲ ಪ್ರೇರಣೆ. ಓದುಗರೊಂದಿಗೆ ಸಲುಗೆಯಿಂದ ಆತ್ಮೀಯವಾಗಿ ತನ್ನ ಮನಸ್ಸನ್ನು ಬಿಚ್ಚಿಡುವ ರೀತಿ ಪ್ರಬಂಧದ ಪ್ರಮುಖ ಲಕ್ಷಣವಾಗಿದೆ.

ಸಾಮಾನ್ಯವಾಗಿ ಪ್ರಬಂಧದಲ್ಲಿ ವಿಚಾರದ ಏಕತೆ, ವಿಷಯ ಸಂಗ್ರಹ, ಕ್ರಮಬದ್ಧತೆ, ವಿಷಯ ವಿಸ್ತಾರ, ವೈವಿಧ್ಯತೆ, ಸರಳ ಶೈಲಿ, ಸಂಕ್ಷಿಪ್ತತೆ, ವೈಯಕ್ತಿಕತೆ, ಸೂಕ್ತ ವಿಷಯ ನಿರೂಪಣೆ, ಸುಸಂಬದ್ಧತೆ, ಸಮತೋಲನದ ವಿಷಯದ ತಾರ್ಕಿಕ ಜೋಡಣೆ ಹಾಗೂ ಪರಿಣಾಮಕಾರಿಯಾದ ಶುದ್ಧ ಸುಲಭ  ಶೈಲಿ ಇರಬೇಕು. ಇವೇ ಉತ್ತಮ ಪ್ರಬಂಧದ ಲಕ್ಷಣಗಳು. ಪ್ರಬಂಧ ಎನ್ನುವುದು ಕೇವಲ ಶಭ್ಧಗಳ ಶ್ರೀಮಂತಿಕೆಯಿಂದ ಕೂಡಿದ ಸಾಲುಗಳಷ್ಟೆ ಅಲ್ಲದೆ ಓದುಗರ ಭಾವನಾತರಂಗಗಳನ್ನು ಆವರಿಸುವ ಕಲೆ.ಅಂತಹ ಪ್ರಬಂಧ ಮಾಧ್ಯಮವನ್ನು ಆರಿಸಿಕೊಂಡು ಲೇಖಕಿ ನಳಿನಿ ಭೀಮಪ್ಪ ತಮ್ಮ ಬದುಕಿನ ಸುತ್ತ ಮುತ್ತ ನಡೆಯುವ ಅನೇಕ ವಿಚಾರಗಳನ್ನು ಸುಲಲಿತವಾಗಿ, ನವಿರಾಗಿ ತೆರೆದಿಡುತ್ತಾ ಓದುಗರಿಗೆ ಆಪ್ತವಾಗುತ್ತಾ ಹೋಗುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಪದೇ ಪದೇ ಕಾಣಸಿಗುವ ಬರಹಗಾರರ ಹೆಸರುಗಳಲ್ಲಿ ನಳಿನಿ ಭೀಮಪ್ಪ ಕೂಡ ಒಬ್ಬರು. ಯಾವುದಾದರೂ ಒಂದು ಪತ್ರಿಕೆಯಲ್ಲಿ ನಳಿನಿಯವರ ಬರಹ ಇದ್ದೆ ಇರುತ್ತದೆ. ತುಂಬಾ ಕ್ರಿಯಾಶೀಲವಾಗಿ ಬರವಣಿಗೆಯಲ್ಲಿ ತೊಡಗಿಸಿ ಕೊಂಡಿರುವ ನಳಿನಿಯವರು  ತಮ್ಮ ಅನುಭವದ ಮೂಸೆಯಲ್ಲಿ ಅರಳಿದ ಅನೇಕ ವಿಚಾರಗಳನ್ನು ಆಸಕ್ತಿ ದಾಯಕವಾಗಿ ಲವಲವಿಕೆಯಿಂದ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಅತಿ ಸಾಮಾನ್ಯ ವಿಷಯವನ್ನೂ ಕೂಡಾ ರಂಜನೀಯವಾಗಿ ಹೇಳುವ ಪ್ರತಿಭೆ ಸಿದ್ಧಿಸಿದೆ. ಈ ವಿಶಿಷ್ಟತೆಯಿಂದಾಗಿಯೇ ನಳಿನಿಯವರು ಓದುಗರಿಗೆ ಹತ್ತಿರವಾಗುತ್ತಾರೆ. ಯಾವುದೊ ಒಂದು ವಿಚಾರ, ಸಂಗತಿ, ಸಾಮತಿಯನ್ನು ತೆಗೆದುಕೊಂಡು ವಿನೋದವಾಗಿ ನಿರೂಪಿಸುವ ಕಲೆ ನಳಿನಿಯವರಿಗೆ ಸಿದ್ಧಿಸಿದೆ. ಆಡುಮಾತಿನ ಸೊಬಗು, ತನಿ ಬನಿ, ಬಾಗು ಬಳುಕುಗಳನ್ನು ಸಹಜ ಸಲೀಲವಾಗಿ ಅನಾವರಣ ಗೊಳಿಸುವ ಶಕ್ತಿ ನಳಿನಿ ಭೀಮಪ್ಪರವರಿಗೆ ಇದೆ.

ನಳಿನಿಯವರು ಅನೇಕ ವಿಚಾರಗಳ ಬಗ್ಗೆ ಪ್ರಬಂಧ ಬರೆದಿದ್ದಾರೆ. ಅವರು  ಬಾಣಂತಿ ಕೋಣೆ ಪ್ರಬಂಧ ಈ ಕಾಲದಲ್ಲಿ ಮರೆತೇ ಹೋಗಿರುವ
ಬಾಲ್ಯದಲ್ಲಿ ಕಂಡಿದ್ದ ಬಾಣಂತಿ ಕೋಣೆಯನ್ನು, ಅದರ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ನೆನಪಿಸಿಕೊಂಡು ನೀಡಿರುವ ವಿವರಣೆಗಳು ಅತ್ಯಂತ ಅಪ್ಯಾಯಮಾನವಾಗಿ ಕಾಣುತ್ತದೆ, ಈ ಪ್ರಬಂಧದಲ್ಲಿ ಅತ್ತೆ ಸೊಸೆಯ ಬಾಂಧವ್ಯ, ಸೊಸೆಯ ಮೇಲಿನ ಕಾಳಜಿ, ಬಾಣಂತನ ಮಾಡಲು ವಾರಕ್ಕೆ ಮುಂಚೆಯೇ ಬಾಣಂತಿ ಕೋಣೆ ಸಿದ್ದಪಡಿಸಿ ಕೊಂಡು, ಸೊಸೆಯ ಹೆರಿಗೆ ಆದ ಕೊಡಲೇ ಬಾಣಂತನದ ಸಂಭ್ರಮ ಇಡೀ ಮನೆಯಲ್ಲಿ ತುಂಬುವುದು ಕಾಣುತ್ತದೆ.

ಬಾಣಂತಿಗೆಂದೆ ಸಿದ್ದಪಡಿಸಿದ ಹಳೆಯ ಹಸುವಿನ ತುಪ್ಪ, ಮೆಂತ್ಯ ಪುಡಿ, ಸಾಣೆ ಕಲ್ಲು, ಗ್ರಂಥಿಗೆ ಸಾಮಾನು, ಮಿಳ್ಳೆ, ಗ್ರೈಪ್ ವಾಟರ್, ಮಗುವಿಗೆ ಹಾಕಲು ಸಂಬಂಧಿಕರ ಮನೆಯಿಂದ ಸಂಗ್ರಹಿಸಿ ದ ಹಳೆಯ ಬಟ್ಟೆ ಹೀಗೆ ಸಾಂಗೋಪವಾಗಿ ಸಿದ್ದ ಬಾಣಂತಿ ಕೋಣೆ ಯಲ್ಲಿ. ಮಗುವಿಗೆ ಸ್ನಾನ ಮಾಡಿಸುವುದೇ ಒಂದು ಖುಷಿಯ ವಿಚಾರ.ಬಾಣಂತಿಯ ಊಟದ ವರ್ಣನೆ ಓದಿಯೆ ಬಾಣಂತಿಯಾಗುವ ಆಸೆ ಓದುಗರಲ್ಲಿ ಹುಟ್ಟಿಸಿದರೆ ಆಶ್ಚರ್ಯವೆನಿಸದು. ಸಾಕಷ್ಟು ವಿವರಣೆ ಯಿಂದ ಕೂಡಿದ ಈ ಇಡಿ ಪ್ರಬಂಧ ಓದಿ ಬಿಟ್ಟರೆ ಎಂತಹ ಹೊಸಬರಾದರೂ ಬಾಣಂತನ ಮಾಡಿಬಿಡಲು ಕಲಿತು ಬಿಡುತ್ತಾರೆ.

ಕಾಫಿಯ ಘಮಲು ಇದು ಒಂದು ಅಚ್ಚುಕಟ್ಚಾದ ಪ್ರಬಂಧ. ಕಾಫಿಯ ಬಗ್ಗೆ ಎಷ್ಟು ಮತ್ತು ಹೇಗಾದರೂ ಬರೆಯಬಹುದು. ಅದು ದಿನನಿತ್ಯದ ಮತ್ತು ಸಾಮಾನ್ಯದ ವಿಚಾರ. ಆ ವಸ್ತುವನ್ನಾಯ್ದು ಒಂದು ಹೊಸ ರೀತಿಯಲ್ಲಿ ಮಂಡನೆ ಮಾಡಬಹುದು ಎಂದು ನಿರೂಪಿಸಿರುವ ಈ ಪ್ರಬಂಧ ಕಾಫಿ ಇಲ್ಲದೆ ಬದುಕೆ ಇಲ್ಲ ಅನ್ನುವ ಕಾಫಿ ಪ್ರಿಯರ ಬಗ್ಗೆ ತಿಳಿಸಿಕೊಡುತ್ತದೆ.

ಅಪಘಾತವಾಗಿ ಕೈ ಮುರಿದು ಕೊಂಡರೂ, ಅದರಿಂದಾಗಿಯೆ ಶುಕ್ರ ದೆಸೆ ಶುರುವಾಗಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಲೇಖಕಿ ಮನೆ ಕೆಲಸದಿಂದ ಮುಕ್ತಿ ಸಿಕ್ಕಿತಲ್ಲದೆ, ಮನೆಯವರು ಮತ್ತು ಮಕ್ಕಳ ವಿಶೇಷ ಆರೈಕೆಯಿಂದ ತಾವು ಕುಂಬಳಕಾಯಿಯಂತೆ ಊದಿಕೊಳ್ಳುವುದು, ಯಜಮಾನರ ದುಂಡಾದ ಹೊಟ್ಟೆ ಕರಗಲು ಶುರುವಾಗಿದೆ ಪಾಪ ಅಂತ ಕನಿಕರಿಸುವುದನ್ನು ಓದಿದಾಗ ನಗು ಬಾರದೆ ಇರದು.

ಮನೆಗೆ ಅತ್ಯಗತ್ಯವಾಗಿರುವ ಬಚ್ಚಲು ಮನೆ ಬಗ್ಗೆ ತಾವು ಕಂಡ, ನೋಡಿದ ಅನುಭವಿಸಿದ ಹಲವಾರು ಪ್ರಕರಣಗಳನ್ನು ಉದಾಹರಣೆಗಳೊಂದಿಗೆ ಹಾಸ್ಯ ಮಿಶ್ರಿತವಾಗಿ ವರ್ಣನೆ ಮಾಡುತ್ತಾ, ಅಜ್ಜಿಯ ಮನೆಯ ಬಚ್ಚಲು ಮನೆಯ ಅವಸ್ಥೆ, ಅದರಿಂದ ಆಗುತ್ತಿದ್ದ ಪೇಚಾಟ, ನಂತರದ ದಿನಗಳ ಬಚ್ಚಲುಮನೆಯ ಪರಿಪಾಡಲುಗಳನ್ನು ರಸವತ್ತಾಗಿ ಹೇಳಿ ತಾವು ಕಟ್ಟಿಸಿದ ಮನೆಗೆ ಕೋಣೆಗಳಿಗಿಂತ ಹೆಚ್ಚಾಗಿ ಬಚ್ಚಲುಮನೆ ಕಟ್ಟಿಸಿ, ಅದನ್ನು ನಿಭಾಯಿಸಲಾರದೆ ಹುಚ್ಚು ಹಿಡಿಯುತ್ತಿದೆ ಅಂತ ಗೋಳಾಡುವುದು ಯಾರಿಗೇಳೋಣ ನನ್ನ ಪ್ರಾಬ್ಲಮ್ಮು ಅನ್ನೋ ಪ್ರಬಂಧ ದಲ್ಲಿ ಪಾಪ ಅನಿಸುತ್ತದೆ.

ಅಂದಿನ ಪಾಟೀಚೀಲದಲ್ಲಿ ಪುಸ್ತಕ, ಲೇಖನಿಗಳಷ್ಟೆ ಅಲ್ಲದೆ, ಗೋಲಿ, ಆಲಿಕಲ್ಲು, ಹುಣಸೆ ಬೀಜ, ಗಜ್ಜುಗದ ಬೀಜ, ಮಂಡಕ್ಕಿ, ಪುಟಾಣಿ, ಶೇಂಗಾ ಬೀಜಾ  ಹೀಗೆ ಬ್ರಹ್ಮಾಂಡವನ್ನೇ ತುಂಬಿಸಿಕೊಂಡು ಇರುತ್ತಿದ್ದ ಪಾಟಿ ಚೀಲ ಕೆಲವೋಮ್ಮೆ ಮನೆಗೆ  ಕಿರಾಣಿ ಸಾಮಾನು ತರುವ ಚೀಲವಾಗಿಯೂ ಮಾರ್ಪಾಡು ಆಗಿರುವ ಬಗ್ಗೆ ಆಸಕ್ತಿ ದಾಯಕವಾಗಿ ತಿಳಿಸಿದ್ದಾರೆ.

ಎಲ್ಲರಿಗೂ ನಾಯಿ ಗಳೆಂದರೆ ಬಹು ಪ್ರೀತಿ, ಆದರೆ ಲೇಖಕಿಗೆ ಮಾತ್ರ ಶುನಕ ಕಂಡರೆ ಪುಕ ಪುಕ. ಗೆಳತಿಯ ಮನೆ ನಾಯಿ ಹಂದಿ ಅಟ್ಟಿಸಲು ಓಡಿಬಂದಿದ್ದನ್ನು ನೋಡಿ ತನ್ನನ್ನೆ ಅಟ್ಟಿಸಲು ಬಂದಿತೆಂದು ಹೆದರಿ ಓಡಿ ಹೋಗುವಾಗ ಬಿದ್ದು ಸೊಂಟ, ಮೈಕೈ ನೋಯಿಸಿ ಕೊಂಡು ನಾಯಿಗೆ ಇಂದಿಗೂ ಹೆದರುತ್ತಾ, ಮಕ್ಕಳು ನಾಯಿ ಸಾಕೋಣ ಎಂದಾಗಲೆಲ್ಲ ಬಿಪಿ ಹೆಚ್ಚಿಸಿಕೊಳ್ಳುವ ಪರಿಗೆ ಅಯ್ಯೋ ಎನಿಸುತ್ತದೆ.

ಒಲ್ಲದ ಪಯಣಿಗರೊಂದಿಗೆ ಪರದಾಟ ಅಂದರೆ ಒಲ್ಲದ ಮನುಷ್ಯರೊಂದಿಗೆ ಅಲ್ಲ. ಕ್ರಿಮಿ, ಕೀಟ, ಪಶು, ಪಕ್ಷಿ ಯ ಜೊತೆಗಿನ ಪಯಣವನ್ನು ಹೇಗೆ ಏಗುವುದೆಂದು ಹಾಸ್ಯಭರಿತವಾಗಿ ಹೇಳುತ್ತಾರೆ. ಸೊಳ್ಳೆಯು ಜೊತೆ ಸರಸವಾಡಲು ಚಪ್ಪಾಳೆ, ಸೊಳ್ಳೆ ಬ್ಯಾಟು, ಕಾಯಿಲ್, ಮ್ಯಾಟ್, ಸೊಳ್ಳೆ ಕ್ರೀಮು, ಸೊಳ್ಳೆ ಪರದೆ, ಲಿಕ್ವಿಡ್ ಗಳು ನಂಟು ಬ್ರಹ್ಮ ಗಂಟು, ರಕ್ತಬೀಜಾಸುರನಾದ ತಿಗಣೆ, ಅದರ ಕಡಿತಕ್ಕೆ ಸಿಕ್ಕಾಗ ಚುಟುಚುಟು ಅಂತೈತೆ ಅಂತ ಹಾಡುತ್ತಾ ಮೈ ಪರಚಿ ಕೊಳ್ಳುವುದು, ನೊಣ, ಕಣಜ, ಇರುವೆಗಳ ಕಾಟ, ಲಕ್ಷ್ಮಣ ರೇಖೆ ರಂಗೋಲಿ ಹಾಕಿದರೂ ಪಕ್ಕದಿಂದ ಹೋಗುವ ಜಿರಲೆ ಮಾಡುವ ಅನಾಹುತ, ಹಲ್ಲಿ, ಇಲಿ, ಬೆಕ್ಕು, ಝರಿ, ಹಾವು, ಚೇಳು, ಜಿಗಣೆ ಅಬ್ಬಾಬ್ಬ, ಒಂದೇ ಎರಡೇ, ಇವು ಬಾಳಸಂಗಾತಿಯಂತೆ ಸದಾ ಕಾಲ ಜೊತೆಜೊತೆಯಲಿ ಅನ್ನೊ ಪಂಚು ಕೊಟ್ಟುಬಿಡುತ್ತಾರೆ.

ಸೀರೆ ನಿನಗೆ ಸರಿಸಾಟಿ ಯಾರೇ ಪ್ರಬಂಧದಲ್ಲಿ ಸೀರೆಯಲ್ಲಿ ಅಡಗಿದ ಅಂತರಂಗ, ಸೀರೆಯ ಮಹತ್ವ, ಅದರ ಉಪಯೋಗ, ಮಾರುಕಟ್ಟೆ, ಸೀರೆ ಬಗೆಗಿನ ವ್ಯಾಮೋಹ, ಅದರ ಸಿನಿಮಾ ಹಾಡುಗಳು ಎಲ್ಲವನ್ನೂ ತಿಳಿಸುವ ಈ ಪ್ರಬಂಧ ಲಲಿತ ಪ್ರಬಂಧದಲ್ಲಿರಬಹುದಾದ ಉತ್ತಮ ಲಕ್ಷಣಗಳನ್ನು ಹೊಂದಿದೆ.. ಒಂದು ವಿಷಯವನ್ನು ಆಯ್ದು ಅದರ ಅನೇಕ ಆಯಾಮಗಳನ್ನು ಪದರಪದರವಾಗಿ ಬಿಚ್ಚುತ್ತಾ, ಕಟ್ಟುತ್ತಾ ಹೋಗುವ ಈ ಪ್ರಬಂಧದಲ್ಲಿ ವಿಷಯ ವಿಸ್ತಾರವೂ ಇದೆ, ಇದು ಸುಪುಷ್ಟವಾದ ಚಿಂತನೆಯೂ ಇದೆ ಹಾಗೂ ಪ್ರಬಂಧಕ್ಕಿರಬೇಕಾದ ಲಾಲಿತ್ಯವೂ ಇದೆ. 

ಹಸಿಮೆಣಸಿನ ಕಾಯಿ ಖಾರಬಾರು, ಮೋಬೈಲಿನ ಐಲು, ಉಪ್ಪಿನಕಾಯಿ ರುಚಿ, ಆಕಾಶವಾಣಿಯ ನಂಟು, ದಿನಪತ್ರಿಕೆಗಳ ಮಹತ್ವ, ಭಾನುವಾರದ ಪರಿಪಾಡು, ಹೋಳಿಗೆಯ ರುಚಿ ಗಮ್ಮತ್ತು, ಈ ರೀತಿಯ ಅನೇಕ ವಿಚಾರಗಳು ಪ್ರಬಂಧ ಸಂಕಲನದಲ್ಲಿವೆ. ಕಥೆ ಕಾದಂಬರಿಗಳಷ್ಟು ಲಲಿತಪ್ರಬಂಧ ಮತ್ತು ಪ್ರಬಂಧಗಳಿಗೆ ನಮ್ಮ ಸಾಹಿತ್ಯದಲ್ಲಿ ಪ್ರಾಮುಖ್ಯವನ್ನು ನಾವು ನೀಡಿಲ್ಲ. ಪ್ರಬಂಧ ಅನ್ನುವ ಬರವಣಿಗೆಯ ಪರಿ ಗಂಭೀರವಾಗಿ ಬರಬಹುದಾದ ಸಾಮಾಜಿಕ ಸಾಂಸ್ಕೃತಿಕ ವಿಶ್ಲೇಷಣೆ ಮತ್ತು ಹಾಸ್ಯದಿಂದ ಬರುವ ನಗೆಬರಹಗಳ ನಡುವೆ ನಲುಗಿ ಹೋಗಿದೆ.

ಆದಾಗ್ಯೂ ಪ್ರಬಂಧ ಗಳು ಓದುಗರ ಮನಸೆಳೆಯುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನಳಿನಿ ಭೀಮಪ್ಪನಂತಹ ಪ್ರತಿಭಾವಂತ ಲೇಖಕರು ಪ್ರಬಂಧ ಪ್ರಕಾರದತ್ತ ಆಸಕ್ತಿ ತೋರುತ್ತಾ ತಮ್ಮ ಬರಹದ ವಿಶಿಷ್ಟ ತೆಯಿಂದಲೇ ಓದುಗರನ್ನು ತಲುಪಿ ಮೆಚ್ಚುಗೆ ಗಳಿಸುತ್ತಿರುವುದು ಸಂತಸದ ವಿಷಯವಾಗಿದೆ. ನಳಿನಿ ಭೀಮಪ್ಪ ಮತ್ತಷ್ಟು ಪ್ರೌಢ ಬರಹಗಳಿಂದ ಕನ್ನಡದ ಒಳ್ಳೆಯ ಪ್ರಬಂಧಕಾರರಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.

‍ಲೇಖಕರು Admin

August 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಪುಸ್ತಕ ಕೊಂಡಿದ್ದೇನೆ, ಇನ್ನೂ ಓದಬೇಕಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: