ಶೇಷಗಿರಿ ಜೋಡೀದಾರ್
ನೆನಪುಗಳ ಹೊರೆ ಹೆಣಭಾರವಾದಾಗ ಕೆಳಗಿಳಿಸಿ ವ್ಯಾಮೋಹ,
ಹೊರಟ ಧರ್ಮರಾಯ ಒಂಟಿಯಾಗಿ,
ಒಬ್ಬನೇ ತನ್ನದಾರಿಯ ಹಿಡಿದು ಮುಕ್ತಿಯ ಹೆದ್ದಾರಿಗೆ.
ಬೇರಲ್ಲಿ ಹಸಿರು ಚಿಗುರುವುದಿಲ್ಲ,
ಕಂಡರೂ ಕಾಂಡದಲಿ ಬೇರು, ಅದು ನೆಲದಮೇಲೆಯೇ
ಗುರುತ್ವ ಪ್ರೇಮಿಯ ಬೆಳಕಿನ ದ್ವೇಶ.
ಬೆಳಕು, ಹಸಿರ ಪ್ರೇಮಿಗಳ ಸಂಭೋಗದ ಅಸ್ತಿತ್ವ
ಮೇಲೆ, ಕೆಳಗಿನ ಅಂತರ
ಭೂಮಿ, ಆಕಾಶದಷ್ಟೇ, ನಿಖರ
ಹುಟ್ಟುಸಾವಿನ ನಿಲ್ಲದ ಓಂಕಾರ.
ಸ್ಠಿತ್ಯಂತರ ಚಕ್ರ ನಿರಂತರ…ಅನೂಹ್ಯ ಬೃಹತ್ ಆಕರ.

ಇಳಿಸು ನಿನ್ನ ಅತಿಭಾರಹೊರೆ ವಯಕ್ತಿಕ ಇತಿಹಾಸ
ಬಿಲಿಯಾಂತರ ನೋವು,ನಲಿವುಗಳ ಇರುವಿಕೆ
ಪರಮ ಸತ್ಯ, ನಿನ್ನ ಸುತ್ತ, ಮುತ್ತ.
ಬಡಿದಾಟದ ಅಸ್ತಿತ್ವ, ಜೀವಸೂತ್ರ,ಸಂದೇಶ,
ಸಂಕೇತ,
ಕೆಳಗಿಳಿಸಿ ಭಾರ ಒಂದೊಂದಾಗಿ ಬಿಡಿಸಿ ಪ್ರತ್ಯೇಕಿಸು ಹೊರೆ
ಬಿಡಿ,ಬಿಡಿಯಾಗಿ ಜೋಡಿಸು ಈ ಕಾರ್ಯಾಗಾರದಲ್ಲಿ.
ಅಲ್ಲಿ ತೆರೆಯೂ ಇಲ್ಲ, ಹರಿವೂ ಇಲ್ಲ
ಕೇವಲ ಅರೆಪಾರಗಮ್ಯ ಪೊರೆ,
ನಿಲ್ಲದ ನೆರೆ, ಇಲ್ಲಿ ಸೆರೆ
ಸರಿದಾಗ ನಿನ್ನ ಪೊರೆ, ಕರಗಿದಾಗ ಆಸೆಗಳ ನೊರೆ
ನಿನ್ನದೇ ಪ್ರತಿಬಿಂಬ ಕಂಡರೂ ಕಾಣಬಹುದು.






0 Comments