
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
6
‘ಓಯ್ ನಿಮಗೆಂಥಕೆ ಅವ’ ಎಂದು ಉಗುಳನ್ನು ಅಂಗಳದ ಮೂಲೆಗೆ ಉಗಿದು ನಮ್ಮ ಮುಂದಿನ ಛೇರಿನಲ್ಲಿ ಕುಳಿತರು ಖಾದರ್. ನಾವು ಮಾತನ್ನು ಶುರು ಮಾಡಿರಲೇ ಇಲ್ಲ, ಅಷ್ಟರಲ್ಲಿ ಅವರು ತಮ್ಮ ವ್ಯಾಪಾರ ವಹಿವಾಟಿನ ಬಗ್ಗೆ ಹೇಳುತ್ತಾ ಹೇಳುತ್ತಾ, ಅವರ ಲಾಭ ಲಾಸುಗಳನ್ನು ವಿವರಿಸತೊಡಗಿದರು. ಆ ಮಾತಿನ ಪ್ರಕಾರ ಅವರು ಮಾಡದ ಕೆಲಸವಿಲ್ಲ- ತರಕಾರಿಯಿಂದ ಮೀನಿನವರೆಗೆ, ಪೆನ್ಸಿಲ್ಲಿನಿಂದ ಚಪ್ಪಲಿಯವರೆಗೆ ಎಲ್ಲಾ ವ್ಯಾಪಾರ ಮುಗಿಸಿದ್ದಾರೆ. ಎಲ್ಲೂ ಲಾಭ ಕಾಣದ ಕಾರಣ ಈಗ ಯಾರೋ ಹೇಳಿದ್ದಕ್ಕೆ ಬಯಲು ಸೀಮೆಯಲ್ಲಿ ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಹಣ ಹೂಡಿ ಲಾಭಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ.
ವಾರದಲ್ಲಿ ಎರಡು ದಿನ ತಮ್ಮೂರಿನಲ್ಲಿದ್ದರೆ; ಇನ್ನು ಮಿಕ್ಕ ದಿನ ಚನ್ನಪಟ್ಟಣದ ಯಾವುದೋ ಹಳ್ಳಿ ಮೂಲೆಯಲ್ಲಿ ಇಟ್ಟಿಗೆಯ ಫ್ಯಾಕ್ಟರಿಯಲ್ಲಿ ಕಾಲ ಕಳೆಯುತ್ತಾರೆ. ‘ಯಾರೋ ಮಾಡಿದ ಅವಮಾನ ಮಾರಾಯ್ರೆ ಅವನಿಗೆ ಸಮಾ ಬುದ್ಧಿ ಹೇಳಲಿಕ್ಕುಂಟು ನೋಡಿ. ಅದಕ್ಕೆ ಎಲ್ಲ ಪ್ರಯತ್ನ. ಅವ ನನ್ನ ನೋಡಿ ನೆಗಾಡಿದ. ಈಗ ನಗಲಿ ಮಂಡೆ ಸಮಾ ಮಾಡಿಯೇ ಬಿಡುವೆ. ಬಂದವರು ನನ್ನ ಮನೆಯಲ್ಲಿ ಊಟ ಮಾಡಿ ಹೋಗ್ತಾರೆ ಈಗ…’ ಹೀಗೆ ಇತ್ಯಾದಿ. ನಮಗೋ ಕಸಿವಿಸಿ, ಬಂದ ಕೆಲಸವೇ ಮರೆತು ಹೋಗಿ ಈ ಮನುಷ್ಯನ ಬಗ್ಗೆ ಸಿನಿಮಾ ಮಾಡಿಬಿಡುತ್ತೇವಾ? ಎನ್ನುವ ಅನುಮಾನ ಕಾಡಲಿಕ್ಕೆ ಶುರುವಾಯಿತು. ಅವರನ್ನು ಟ್ರ್ಯಾಕ್‌ಗೆ ತರಲೇಬೇಕಿತ್ತು.
ನಾನು ಮೆಲ್ಲಗೆ ವಿಷಯ ಪ್ರಸ್ತಾಪಿಸಿದೆ ‘ಸರ್ ಈ ಜಕ್ಕು ಮಹಮದ್ ಅವರು ಎಷ್ಟು ಹೊತ್ತಿಗೆ ಬರಬಹುದು?’ ತಪ್ಪು ಮಾಡಿದವರಂತೆ ಮುಖಭಾವ ಹೊಮ್ಮಿಸಿ ‘ನೋಡಿ ಕೇಳಲಿಕ್ಕೆ ಮರತೆ. ಅವ ಎಂತಕ್ಕೆ ಬೇಕು ಮೊದಲು ಅದನ್ನು ಹೇಳಿ’ ಎಂದರು. ಇಷ್ಟ್ಟು ಜನ ಜಕ್ಕು ಮಹಮದ್‌ರನ್ನು ಹುಡುಕಿಕೊಂಡು ಎಂದೂ ಹೋಗೇ ಇರಲಿಲ್ಲ ಎಂದು ಕಾಣುತ್ತದೆ. ಅವರ ಮಾತಲ್ಲಿ ಕುತೂಹಲಕ್ಕಿಂತ ತನ್ನ ಈಚಿನ ಬಿಸನೆಸ್ ಬಗ್ಗೆ ಹೇಳುವ ಅವಕಾಶ ಮೊಟಕುಗೊಂಡಿದ್ದರ ಬಗ್ಗೆ ಬೇಸರವಿತ್ತು. ‘ಇಲ್ಲ ಹೀಗೆ ಒಂದು ಸಿನಿಮಾ ಮಾಡಲಿಕ್ಕಿತ್ತು, ಅದಕ್ಕೆ ಕಡಲ ತಡೆಗೋಡೆಯ ಬಳಿ ಇದೆಯಲ್ಲಾ ಆ ಮನೆ ಕೇಳಲಿಕ್ಕೆ ಬಂದೆವು’ ಎಂದರು ಚಂದ್ರಹಾಸ್.

‘ಸಿನಿಮಾಕ್ಕೆ ಅವನ ಮನೆಯೋ? ಕೊಳ್ಳಲಿಕ್ಕಾದರೆ ನನಗೆ ತಿಳಿದ ಹಾಗೆ ಅವ ಕೊಡಲಿಕ್ಕಿಲ್ಲ, ಅದು ಅವನ ಅಪ್ಪ ಹಸನಬ್ಬ ಮತ್ತು ಅಮ್ಮಿ ಪಾತುಮ್ಮಾಬಿ ಕಟ್ಟಿಸಿದ ಮನೆ. ಆ ಮನೆ ಕಟ್ಟಲಿಕ್ಕೆ ಅವರು ಪಟ್ಟ ಕಷ್ಟ ಹೇಳಲಿಕ್ಕೆ ಆಗುವುದಿಲ್ಲ. ಅಂಥಾ ಮನೆ ಪ್ರತಿ ವರ್ಷ ಸಮುದ್ರ ಇಂಚಿಂಚೇ ನುಂಗುವುದು ಮತ್ತೆ ಇವ ಕಟ್ಟುವುದು ನಡಿತಾನೇ ಇದೆ. ಈಗ ಅವನ ಹೆಂಡತಿಯೂ ಸತ್ತಿದ್ದರಿಂದ ಅಲ್ಲಿ ಇರಲಿಕ್ಕಾಗದೆ ಇಲ್ಲಿ ಬಂದಿದ್ದಾನೆ. ಎಂದಾದರೂ ಸರಿ ಮತ್ತೆ ಅಲ್ಲಿಗೆ ಅವ ಹೋಗುವವನೇ.
ಸಮುದ್ರದ ಗಾಳಿಗೆ ಈ ದೇಹ ಉಂಟಲ್ಲ ಇದು ಅಡ್ಜಸ್ಟ್ ಆಗಿಬಿಟ್ಟರೆ ಬೇರೆಲ್ಲೂ ಸರಿಯಾಗುವುದೇ ಇಲ್ಲ ನೋಡಿ’ ಎನ್ನುತ್ತ, ಸ್ವಲ್ಪ ಪಕ್ಕಕ್ಕೆ ಬಗ್ಗಿ ಗುಟ್ಟು ಹೇಳುವವರಂತೆ ಮೆಲ್ಲಗೆ ಹುಸಿ ಧ್ವನಿಯಲ್ಲಿ ‘ನಿಮಗೆ ಬೇಕೇ ಬೇಕು ಎಂದರೆ ರೇಟು ಮಾತಾಡುವಾ’ ಎಂದರು. ಅವರ ವರಸೆ ನೋಡಿ ನಮಗೆ ಗಾಬರಿಯಾಯಿತು.
ತಕ್ಷಣಕ್ಕೆ ಪಂಚಾಕ್ಷರಿ ‘ಇಲ್ಲ ನಮಗೆ ಮನೆ ಕೊಳ್ಳಲಿಕ್ಕೆ ಬೇಕಿಲ್ಲ. ಅಲ್ಲಿ ಶೂಟಿಂಗ್ ಮಾಡುತ್ತೇವೆ ಅಷ್ಟೇ. ಅದಕ್ಕೆ ಅವರಿಂದ ಪರ್ಮೀಷನ್ ಬೇಕು’ ಎಂದರು. ಖಾದರ್ ಏನೋ ಯೋಚಿಸುವವರಂತೆ ಮಾಡಿ ಬಲವಂತಕ್ಕೆ ನಗು ತಂದುಕೊಡು, ‘ಕೊಡಿಸುವಾ ಕೊಡಿಸುವಾ. ನಮ್ಮಲ್ಲಿಗೆ ಬಂದ ಮೇಲೆ ಕೆಲಸ ಆದಂತೆಯೇ ಲೆಕ್ಕ. ನಿಮಗೆ ಸಿನಿಮಾ ಆಗುತ್ತೆ, ಅದರಿಂದ ನಮ್ಮ ಜಕ್ಕುವಿಗೆ ಏನು ಲಾಭ’ ಎಂದರು. ಅವರ ನಗುವಿನ ಹಿಂದಿನ ಲೆಕ್ಕಾಚಾರದಲ್ಲಿ ಅವರ ವ್ಯಾಪಾರಿ ಗುಣ ಕಾಣುತ್ತಿತ್ತು.
‘ಲಾಭ ಅಂದರೆ ನಾವವರ ಮನೆಯನ್ನು ಬಳಸಿಕೊಂಡಿದ್ದಕ್ಕೆ ಒಂದಿಷ್ಟು ಹಣ ಕೊಡುತ್ತೇವೆ. ನಮ್ಮದು ವ್ಯಾಪಾರಿ ಚಿತ್ರವಲ್ಲ. ಇದನ್ನು ಥೇಟರ್ನಲ್ಲಿ ರಿಲೀಸ್ ಮಾಡುವುದಿಲ್ಲ. ಸುಮ್ಮನೆ ಹೀಗೇ ತಿಳುವಳಿಕೆ ಮೂಡಿಸಲಿಕ್ಕೆ ಮಾತ್ರ ಮಾಡುತ್ತಿರುವುದು’ ಎಂದರು ಪಂಚಾಕ್ಷರಿ. ಸಮಾಧಾನದ ನಿಟ್ಟುಸಿರು ಬಿಟ್ಟು ‘ಸಿನಿಮಾ ಅಂದ್ರೆ ಸಿನಿಮಾ ಅಲ್ಲವಾ? ಅಂತೂ ನಮ್ಮ ಜಕ್ಕು ಮಹಮದನ ನಸೀಬು ದೊಡ್ಡದಿದೆ ನೋಡಿ. ಎಂಥಕ್ಕೂ ಬಾರದು ಎಂದುಕೊಂಡ ಮನೆ, ಈಗ ಹೀಗೆ ಕೆಲಸಕ್ಕೆ ಬಂತು’ ಎಂದು ದೊಡ್ಡದಾಗಿ ನಕ್ಕು, ‘ಚಾ ಕುಡೀತೀರಾ? ಇನ್ನೇನು ಬಂದೇ ಬಿಡುತ್ತಾನೆ’ ಎಂದರು ಖಾದರ್. ಈ ಮನುಷ್ಯನಿಗೆ ಹೇಳುವುದು ನಮ್ಮಿಂದ ಸಾಧ್ಯವಿರಲಿಲ್ಲ. ಮನೆಯಂತೂ ಬೇಕು ಅದಕ್ಕಾಗಿ ಜಕ್ಕು ಮಹಮದ್‌ರನ್ನು ಭೇಟಿಯಾಗದೆ ಹೋಗುವಂತಿಲ್ಲವಾದ್ದರಿಂದ ಸಮ್ಮತಿಸಿದೆವು.
ಲೋಕಾಭಿರಾಮದ ಮಾತುಗಳ ನಡುವೆ ಚಾ ಕುಡಿದೆವು. ನಂತರವೂ ನಮ್ಮ ಜಕ್ಕು ಮಹಮದರ ಆಗಮನವಾಗದೆ ನಾವೆಲ್ಲಾ ಅಲ್ಲಿಂದ ಬೇಸರದಲ್ಲಿ ಹೊರಟೆವು. ಹೊರಡುವಾಗ ನಮ್ಮ ಫೋನ್ ನಂಬರ್ ಕೊಟ್ಟು, ‘ದಯವಿಟ್ಟು ಕಾಲ್ ಮಾಡಿಸಿ’ ಎಂದು ಹೇಳಿದೆವು. ‘ಖಂಡಿತಾ ಯೋಚಿಸಬೇಡಿ’ ಎಂದು ನಮ್ಮನ್ನು ಬೀಳ್ಕೊಟ್ಟರು. ಜಕ್ಕು ಮಹಮದ್ ಎನ್ನುವ ಆ ವ್ಯಕ್ತಿ ನನ್ನ ಕಣ್ಣಲ್ಲಿ ಬೃಹತ್ತಾಗಿ ಬೆಳೆಯುತ್ತಾ ನೋಡಿದ ತಕ್ಷಣ ಕಂಡು ಹಿಡಿದೇಹಿಡೀತೀನಿ ಎನ್ನುವ ದೊಡ್ಡನಂಬಿಕೆ ನನ್ನಲ್ಲಿ ಮೂಡಿಬಿಟ್ಟಿತ್ತು.

ಮಂಗಳೂರಿನ ಶಾಂತಿವನ ಗೆಸ್ಟ್ ಹೌಸಿನ ರೂಂನಲ್ಲಿ ನಮ್ಮ ಸ್ಕ್ರಿಪ್ಟ್ನ್ ಮಂಗಳೂರಿನ ಕನ್ನಡಕ್ಕೆ ಬದಲಿಸುವ ಕೆಲಸವೂ ನಡೆಯುತ್ತಿತ್ತು. ಆ ಕೆಲಸವನ್ನು ಮಂಗಳೂರು ಉಡುಪಿಯ ಚಂದ್ರಹಾಸ್ ಮತ್ತು ಚಂಚಲ ಮಾಡುತ್ತಿದ್ದರು. ನಾನೇ ಅದನ್ನು ಟೈಪ್ ಮಾಡುತ್ತಿದ್ದೆ. ಹಾಗೆ ಮಾಡುವಾಗ ಅರ್ಥಗಳೇ ಬದಲಾಗಿ ನಮ್ಮ ನಮ್ಮಲ್ಲಿ ಜಗಳಗಳೂ ನಡೆಯುತ್ತಿದ್ದವು.
ಶಾಂತಿವನದ ನಿಶ್ಯಬ್ದತೆಯನ್ನು ಸೀಳಿ ನಮ್ಮ ಮಾತುಗಳು ರೂಮಿನ ಹೊರಗೆ ಹರಿದಾಡುತ್ತಿದ್ದವು. ಎಲ್ಲ ಮುಗಿದ ನಂತರ ಏನೂ ನಡೆದಿಲ್ಲ ಎನ್ನುವಂತೆ ಹೊರಗೆ ಊಟಕ್ಕೆ ಹೊರಟಾಗ ಗೆಸ್ಟ್ ಹೌಸಿನ ಸಿಬ್ಬಂದಿ ನಮ್ಮನ್ನು ಅಚ್ಚರಿಯಿಂದ ನೋಡುತ್ತಿದ್ದರು. ನನಗೆ ಮಂಗಳೂರು ಕನ್ನಡ ಗೊತ್ತಿದ್ದರಿಂದ ಒಂದು ಸಲ ‘ಅರ್ಥ ಸರಿಯಾಗಿಲ್ಲ’ ಎಂದಿದ್ದೆ. ಅವತ್ತು ಮಾತು ವಿಕೋಪಕ್ಕೆ ಹೋಗಿತ್ತು. ‘ಆಗಲಿ ಬಿಡಿ ಏನಿಗ?’ ಎಂದಿದ್ದರು ಪಂಚಾಕ್ಷರಿ.
ಒಮ್ಮೊಮ್ಮೆ ಅವರು ಸ್ವಲ್ಪ ವಿತಂಡವಾದವನ್ನೂ ಮಾಡುತ್ತಿದ್ದರು. ಕಷ್ಟಪಟ್ಟು ಕಟ್ಟಿದ ಮಾತುಗಳು ಅರ್ಥ ಕೆಡದ ಹಾಗೆ ನೋಡುವುದು ಮುಖ್ಯವಾಗಿತ್ತು. ಪಂಚಾಕ್ಷರಿಗೆ ಕೆಲಸ ಆಗಬೇಕು ಎನ್ನುವಾಗ ಯಾವುದನ್ನು ಬೇಕಾದರೂ ಒಪ್ಪುತ್ತಾರೆ. ‘ಇನ್ನು ಸ್ವಲ್ಪ ಎಫರ್ಟ್ ಹಾಕಿ ಎಂದು ಅವರನ್ನು ಕೇಳುವುದರಲ್ಲಿ ತಪ್ಪಿಲ್ಲ’ ಎನ್ನುವುದು ನನ್ನ ಅನಿಸಿಕೆ. ಅವತ್ತು ರಾತ್ರಿ ನಾನು ಊಟಕ್ಕೂ ಹೋಗಲಿಲ್ಲ. ‘ನನಗೆ ಹಸಿವಿಲ್ಲ’ ಎಂದು ಚಂಚಲಾಗೆ ಹೇಳಿದ್ದೆ.
ಚಂದ್ರಹಾಸರು ಅವರ ಮನೆಗೆ ಹೋದದ್ದರಿಂದ ನಾವು ಮೂರೇ ಜನ ಇದ್ದೆವು. ‘ಬರಲ್ಲ ಅಂದ್ರೆ ಬಿಡಿ, ಬನ್ನಿ ನಾವು ಹೋಗೋಣ’ ಎಂದು ಪಂಚಾಕ್ಷರಿ ಚಂಚಲಾರನ್ನು ಕರಕೊಂಡು ಹೊರಟೇಬಿಟ್ಟರು. ಇದೆಂಥಾ ಮನುಷ್ಯ ಇವರಿಗಾಗಿ ತಾನೆ ನಾನು ಕೆಲಸ ಮಾಡುತ್ತಿರೋದು? ಇಷ್ಟು ಕೆಲಸ ಮಾಡಿದ ನನ್ನನ್ನು ಹೀಗೆ ನಡೆಸಿಕೊಳ್ಳುತ್ತಾರಲ್ಲಾ? ಎಂದು ಬೇಸರವಾಯಿತು. ಚಂಚಲಾ ಮಾತ್ರ ‘ಸಣ್ಣ ವಿಷಯ ಬಿಡಿ ಮೇಡಂ’ ಎಂದು ಸಮಾಧಾನ ಮಾಡಿದ್ದರು.

ಶಾಂತಿವನ ಗೆಸ್ಟ್ ಹೌಸ್ ಕ್ರಿಶ್ಚಿಯನ್ ಮಿಷನರಿಯೊಂದಕ್ಕೆ ಸಂಬಂಧಿಸಿದ್ದಾಗಿತ್ತು. ಅತ್ಯಂತ ಕಡಿಮೆ ಹಣಕ್ಕೆ ಅಲ್ಲಿ ನಮಗೆ ತುಂಬಾ ಒಳ್ಳೆಯ ವಸತಿ ಸಿಗುತ್ತದೆ ಎಂದು ಚಂದ್ರಹಾಸರೇ ಅವರಿಗೆ ತಿಳಿದವರಿಂದ ಬುಕ್ ಮಾಡಿಸಿಕೊಟ್ಟಿದ್ದರು. ವಾರದಮಟ್ಟಿಗೆ ಅಲ್ಲಿ ಉಳಿಯುವ ಯೋಚನೆಯಲ್ಲಿದ್ದದ್ದರಿಂದ ಸುಮಾರಾಗಿ ದೊಡ್ಡದಿದ್ದ ಒಂದು ಬಟ್ಟೆ ಬ್ಯಾಗ್‌ನ ಜೊತೆ ಬೆಂಗಳೂರಿನಿಂದ ಹೊರಟಾಗ ನನಗೆ ಚಂಚಲ ಮತ್ತು ಚಂದ್ರಹಾಸರಿಬ್ಬರೂ ಅಪರಿಚಿತರೇ. ಅವರ ಬಗ್ಗೆ ಪಂಚಾಕ್ಷರಿ ಹೇಳಿದ್ದರಿಂದ ಒಂದು ಕಲ್ಪನೆಯಿತ್ತು. ಚಂಚಲ ಆಗಲೇ ತುಳು ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಹೀಗಾಗಿ ಸಿನಿಮಾ ಕಲ್ಪನೆ ಅವರಿಗೆ ಇತ್ತು. ಹೀಗೆ ಮಂಗಳೂರಿನ ಕಡೆ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ಚಂದ್ರಹಾಸರು ತುಂಬಾ ಆಪ್ತರು. ಯಾಕೆಂದರೆ ತಮ್ಮ ಕೆಲಸವನ್ನೂ ಪಕ್ಕಕ್ಕೆ ಇಟ್ಟು ಖುಷಿಯಿಂದ ಸಿನಿಮಾದ ಕೆಲಸಕ್ಕೆ ತೊಡಗಿಕೊಂಡುಬಿಡುತ್ತಿದ್ದರು.
ಆ ಗೆಸ್ಟ್ ಹೌಸ್ ಹತ್ತಿರದಲ್ಲಿಯೇ ಅಂದರೆ ಒಂದೆರಡು ಫರ್ಲಾಂಗ್ ದೂರದಲ್ಲಿ ಕಾಮತರ ಹೊಟೇಲು- ಆ ಏರಿಯಾಗೆ ತುಂಬಾ ಫೇಮಸ್. ಅಲ್ಲಿ ಮಂಗಳೂರಿನ ಸ್ಪೆಷಲ್ ಬನ್ಸ್ ನನಗೆ ಇಷ್ಟವಾಗಿಬಿಟ್ಟಿತ್ತು. ಪುತ್ತೂರಿನಲ್ಲಿ ಜಾಗ ನೋಡಲಿಕ್ಕೆ ಹೋದಾಗ ಬೋಳುವಾರು ಮಹಮದ್‌ರು ಇಡ್ಲಿಗೆ ಹಾಕಿಕೊಳ್ಳುವಂತೆ ಸಾಂಬಾರು ಹಾಕಿಕೊಂಡು ತಿನ್ನುವುದನ್ನು ಹೇಳಿಕೊಟ್ಟಿದ್ದರು. ಮಂಗಳೂರಿನಲ್ಲಿ ಬನ್ಸ್ ಗೆ ಸಾಂಬಾರು ಕೇಳಿದ್ರೆ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಒಂದೆರಡು ದಿನಕ್ಕೆ ಅವರಿಗೂ ಅದು ಅಭ್ಯಾಸವಾಗಿ ನಾನು ಬನ್ಸ್ ಹೇಳಿದ ತಕ್ಷಣ ಸಾಂಬಾರನ್ನು ತಂದುಕೊಡುವಂತೆ ಆಯಿತು.
। ಇನ್ನು ಮುಂದಿನ ವಾರಕ್ಕೆ ।






0 Comments