ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಕಾಣದ ಕಡಲಿಗೆ..

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಸ ರಿ ಗ ಮ ಪ ದ ನಿ ಸ… ಬೆರಳಣಿಕೆಯ ಇಂಪಾದ ಧ್ವನಿಗಳನ್ನು ಒಂದಷ್ಟು ಕರ್ಕಶ ಧ್ವನಿಗಳು ಮರೆ ಮಾಚಲು ಪ್ರಯತ್ನಿಸುತ್ತಿದ್ದವು. ‘ಹಾಡುವಾಗ ಯಾಕೆ ಕತ್ತೆ ಥರ ಕಿರುಚೋದು?.’ ಮೇಡಮ್ ಸ್ಟ್ರಿಕ್ಟ್ ಆಗಿ ಕೇಳಿದರು. ಅವರ ನೀಳವಾದ ಬೆರಳುಗಳು ಟೇಬಲ್ ಮೇಲೆ ತಡಕಾಡಿ ಶ್ರುತಿ ಪೆಟ್ಟಿಗೆಯನ್ನು ಆಫ಼್ ಮಾಡಿತು. ಕ್ಲಾಸ್ ನಿಶ್ಶಬ್ದವಾದಾಗ ಮೇಡಮ್ ಕೈನ ವಾಚ್ ನ ಬಟನ್ ಒತ್ತಿದರು. ವಾಯ್ಸ್ – ಇಲೆವೆನ್ ಟ್ವೆಂಟಿಟು ಎ.ಎಂ ಎಂದಿತು.

ಮೂವತ್ತೈದರ ಆಸುಪಾಸಿನ ಶ್ರೀದೇವಿ ಮೇಡಮ್ ಬೆಂಗಳೂರಿನ ಸಾಂದೀಪನಿ ಶಾಲೆಯಲ್ಲಿ ಸಂಗೀತ ಟೀಚರ್ ಆಗಿ ಸೇರಿ ಏಳು ವರ್ಷಗಳು ಕಳೆದಿದ್ದವು. ಅವಳ ಲಕ್ಷಣವಾದ ಮುಖಕ್ಕೆ ದೃಷ್ಟಿಬೀಳಬಾರದೆಂದು ದೇವರೇ ದೃಷ್ಟಿ ದೋಷ ಕೊಟ್ಟುಬಿಟ್ಟಿದ್ದರು. ‘ಮೇಡಮ್ ತಲೆ ನೋವ್ ಬರೋ ಹಾಡನ್ನೆಲ್ಲಾ ಬಿಟ್ಟು ಯಾವ್ದಾದ್ರು ಐಟಮ್ ಸಾಂಗ್ ಹೇಳಿಕೊಡಿ.’ ಟೀಚರ್ ಗೆ ಕಣ್ಣುಕಾಣಲ್ಲ ಅನ್ನೋ ಧೈರ್ಯದಿಂದ ಏಳನೇ ತರಗತಿಯ ಹುಡುಗ ಡೈಲಾಗ್ ಹೇಳಿ ಕ್ಲಾಸ್ ನಲ್ಲಿ ಹೀರೋ ಆಗೋಕ್ ಹೊರಟಿದ್ದ. ‘ಯಾವ್ ಹಾಡು ಬೇಕು ನಿಂಗೆ?’ ಮೇಡಮ್ ಕೇಳಿದಾಗ ಹುಡುಗ್ರೆಲ್ಲ ಗುಸು ಗುಸು ಶುರು ಮಾಡಿದ್ರು. ‘ಬಸಣ್ಣಿ ಬಾ.. ಬಸಣ್ಣಿ ಬಾ..’ ಗಂಟಲು ಒಡೆದ ಧ್ವನಿಯಲ್ಲಿ ಅದೇ ಹುಡುಗ ಹಾಡಲು ಶುರುಮಾಡಿದ.

ಮೊದಲ ಸಾಲು ಮುಗಿಯುವ ಮುನ್ನ ಅವನ ಬೆನ್ನ ಮೇಲೆ ಏಟು ಬಿದ್ದಿದ್ದವು. ಧ್ವನಿ ಬಂದ ಕಡೆ ಹೆಜ್ಜೆ ಹಾಕಿದ ಶ್ರೀದೇವಿ ಮೂರನೇ ಬೆಂಚಿನ ಮೂಲೆಯಲ್ಲಿ ಕೂತಿದ್ದವನ ಭುಜವನ್ನು ಗಟ್ಟಿಯಾಗಿ ಹಿಡಿದು ಇನ್ನೊಂದು ಸಲ ಅಶಿಸ್ತು ತೋರಿಸದಂತೆ ಪೆಟ್ಟು ಕೊಟ್ಟಳು. ತಪ್ಪಿಸಿಕೊಳ್ಳಲು ಹೋದರೆ ಬೆನ್ನು ಬಿಟ್ಟು ಬೇರೆಬೇರೆ ಕಡೆಯೂ ಏಟು ಬಿದ್ದಿರುತ್ತಿತ್ತು. ದೃಷ್ಟಿ ಕಮ್ಮಿಯಾದವರ ಶ್ರವಣಜ್ಞಾನವನ್ನು ಕಡೆಗಣಿಸಿದ ಹುಡುಗ ಹೀರೋ ಆಗೋ ಬದಲು ಕಮಿಡಿಯನ್ ಆಗಿದ್ದ.

ಶ್ರೀದೇವಿಗೆ ಹುಟ್ಟಿದಾಗಲಿಂದ ಕಣ್ಣು ಬರಲ್ಲ. ತಂದೆ ತಾಯಿ ಸುತ್ತದ ದೇವಸ್ಠಾನವಿಲ್ಲ, ಮಾಡದ ವ್ರತವಿಲ್ಲ. ತೋರಿಸದ ಕಣ್ಣಾಸ್ಪತ್ರೆಯಿಲ್ಲ. ಆಪ್ಟಿಕ್ ನರ ದುರ್ಬಲವಾಗಿದ್ದರಿಂದ ಮಗುವಿನ ಸಮಸ್ಯೆಗೆ ಪರಿಹಾರವೇ ಇರಲಿಲ್ಲ. ವಾಸ್ತವವನ್ನು ಒಪ್ಪಿಕೊಂಡು, ಸಾಮಾನ್ಯ ಮಕ್ಕಳಂತೆಯೇ ತಮ್ಮ ಮಗಳ ಭವಿಷ್ಯ ರೂಪಿಸಲು ಹೊರಟರು. ಮಗಳನ್ನು ಕಂಡವರ್ಯಾರಾದರೂ ಅಂಗವಿಕಲೆ ಅಂತ ಸಂಬೋಧಿಸಿದರೆ, ವಿಕಲಚೇತನರು ಅಂತ ಕರೀರಿ ಅಂತ ನೋವನ್ನು ಮರೆಮಾಚಿ, ಭಂಡತನದಿಂದ ಹೇಳುತ್ತಿದ್ದರು.

ಅಪ್ಪ ಅಮ್ಮನ ಕಣ್ಮಣಿ ಬೇರೆ ಮಕ್ಕಳಿಗಿಂತೆ ಹೆಚ್ಚಿನ ಶ್ರದ್ಧೆ, ನೆನೆಪಿನ ಶಕ್ತಿ ಹೊಂದಿದ್ದರಿಂದ ಕ್ಲಾಸ್ ಗೆ ಮೊದಲು ಬರುತ್ತಿದ್ದಳು. ಬ್ರೈಲ್ ನಲ್ಲೇ ಓದಿ ಪಿಯುಸಿ ಪಾಸ್ ಮಾಡಿದಳು. ಸಾಮಾನ್ಯವಾಗಿ ಕಣ್ಣು ಕಾಣದವರು ಪರಾವಲಂಬಿಗಳಾಗಿರುತ್ತಾರೆ, ನಾನು ಹಾಗೇ ಆಗಬಾರದೆಂಬ ಛಲದಿಂದ ಸಣ್ಣ ವಯಸ್ಸಿನಿಂದ ಕಲಿತ ಶಾಸ್ತ್ರೀಯ ಸಂಗೀತವನ್ನೇ ವೃತ್ತಿಯಾಗಿ ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡಿ ಸಂಗೀತದಲ್ಲಿ ಎಂ.ಎ ವ್ಯಾಸಂಗ ಮಾಡಿ ಸ್ಪೆಶಲ್ ಅಪಾಯಿಂಟ್ಮೆಂಟ್ ಕೋಟದಲ್ಲಿ ಕೆಲಸಗಿಟ್ಟಿಸಿಕೊಂಡಳು.

‘ಬಿಪಿ ಚೆಕ್ ಮಾಡಿದ್ಯಾ? ಎಷ್ಟಿದೆ?’ ಶ್ರೀದೇವಿ ಕೇಳಿದಾಗ ಅಪ್ಪ ತಡವರಿಸಿದ್ದರಲ್ಲೇ ಪರೀಕ್ಷೆ ಮಾಡಿಲ್ಲ ಅಂತ ಗೊತ್ತಾಗಿತ್ತು.  ಅಪ್ಪ ಕೂತಿದ್ದ ಸೋಫಾ ಇದ್ದ ದಿಕ್ಕಲ್ಲಿ ಅಡೆತಡೆಯಿಲ್ಲದೆ ನಡೆದು ಬಂದು ಇವತ್ತು ಬಿಪಿ ಪರೀಕ್ಷೆ ಮಾಡೋತನಕ ಬಿಡೋದಿಲ್ಲ ಅನ್ನುವಂತೆ ಕೈಕಟ್ಟಿ ನಿಂತಳು. ‘೨೨೦ ಬೈ ೧೦೫ ತೋರಿಸ್ತಿದ್ಯಮ್ಮ’. ‘ಸರಿಯಾಗಿ ಹೇಳ್ತಿದ್ಯ ತಾನೇ? ನನ್ನ ಟಾಕಿಂಗ್ ವಾಚಿನ ಹಾಗೆ ಈ ಬಿಪಿ ಮಿಶನ್ನೂ ಧ್ವನಿ ಬರೋತರ ಸಿಗುತ್ತಾ ಅಂತ ತಿಳಿದುಕೊಳ್ಬೇಕು’. ಯಶೋಧೆ ಕೃಷ್ಣನ ತುಂಟಾಟವನ್ನು ಪ್ರಶ್ನಿಸಿದ ಧಾಟಿಯಲ್ಲಿ ತರಾಟೆಗೆ ತಗೊಂಡಳು.

ಅಪ್ಪ ತಿಂಡಿ ತಿಂದು ಮಾತ್ರೆ ತಗೊಂಡಮೇಲೆ ಶ್ರೀದೇವಿ ಸುಮ್ಮನಾದಳು. ತನ್ನ ಪಾಡಿಗೆ ಹಾರ್ಮೋನಿಯಮ್ ನುಡಿಸುತ್ತಿದ್ದ, ಯಾವುದೋ ಆಲಾಪನೆ ಶುರು ಮಾಡಿದ ಮಗಳನ್ನು ನೋಡಿ ನೋವಿನಿಂದ ಮಾತು ಶುರುಮಾಡಿದರು. ‘ನಿನ್ನನ್ನ ನಾನು ನೋಡಿಕೊಳ್ಳಬೇಕು, ನೀನೇ ನನ್ನ ನೋಡ್ಕೋಳ್ಳೋ ಹಾಗಾಯ್ತಲ್ಲಮ್ಮ. ನಿಮ್ಮಮ್ಮ ಬದುಕಿದ್ದಿದ್ರೆ ನಿಂಗೆಷ್ಟೋ ಎಷ್ಟು ಸಹಾಯ ಆಗ್ತಿತ್ತು. ಆಗ ಮದ್ವೇ ಅಂತೂ..’ ಅಪ್ಪಾ! ಅಂತ ಜೋರಾಗಿ ಬಂದ ಶ್ರೀದೇವಿಯ ಧ್ವನಿ ಮಾತನ್ನು ಮುಂದುವರಿಸಲು ಬಿಡಲಿಲ್ಲ.

ಲಂಚ್ ಟೈಮ್ ಆದ್ದರಿಂದ ಕಾರಿಡಾರ್ ನಲ್ಲಿ ಮಕ್ಕಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದರು. ಶ್ರೀದೇವಿ ಊಟ ಮಾಡಿ ಸ್ಟಾಫ಼್ ರೂಮ್ ಕಡೆಗೆ ನಿಧಾನವಾಗಿ ನಡೆಯುತ್ತಿದ್ದಳು. ‘ಮ್ಯಾಮ್ ಪ್ಲೀಸ್ ಸ್ವಲ್ಪ ಬೇಗ ಹೋಗ್ತೀರಾ?’ ಅಪರಿಚಿತ ಧ್ವನಿಯೊಂದು ಅಸಮಧಾನದಲ್ಲಿ ಮಾತನಾಡಿತು. ಶ್ರೀದೇವಿ ನಡೆಯೋದನ್ನ ನಿಲ್ಲಿಸಿ ಕಾರಿಡಾರ್ ನ ಗೋಡೆಗೆ ಒರಗಿ ಜಾಗಬಿಟ್ಟಾಗ ಜಾಗ ಕೇಳಿದವಳು ಶ್ರೀದೇವಿಯ ಕೈಲಿದ್ದ ವಾಕಿಂಗ್ ಸ್ಟಿಕ್ ನೋಡಿದಳು. ‘ಸಾರಿ, ನಂಗೆ ಗೊತ್ತಾಗ್ಲಿಲ್ಲ. ನಾನು ಇಲ್ಲಿಗೆ ಹೊಸದಾಗಿ ಕೆಲ್ಸಕ್ ಸೇರಿದ್ದು ಇವತ್ತೇ ಮೊದಲ ದಿನ’ ಆಕೆ ಮಹಾಪರಾಧ ಮಾಡಿದವಳಂತೆ ಗಡಿಬಿಡಿಯಲ್ಲಿ ಹೇಳಿದಳು.

ಶ್ರೀದೇವಿ ನಗುತ್ತಾ ಪರವಾಗಿಲ್ಲ ನೀವು ಅರ್ಜೆಂಟ್ ನಲ್ಲಿದ್ರಿ ಅಂತ ಕಾಣುತ್ತೆ, ಮೊದಲ ದಿನ ಎಲ್ಲಾ ಗೊಂದಲಮಯವಾಗಿರುತ್ತೆ ಅಂತ ಸಮಾಧಾನದಿಂದ ಹೇಳಿದಳು. ಕಣ್ಣು ಕಾಣದ ಹೆಣ್ಣು ಇಷ್ಟು ಸಕಾರಾತ್ಮಕವಾಗಿರೋದನ್ನು ನೋಡಿ ಆಶ್ಚರ್ಯವಾಗಿ ಶ್ರೀದೇವಿಯ ವ್ಯಕ್ತಿತ್ವದ ಮೇಲೆ  ಆಕೆಗೆ ಆಸಕ್ತಿಯೂ ಹುಟ್ಟಿತು. ‘ನನ್ ಹೆಸ್ರು ಕುಮುದ ಅಂತ. ಬನ್ನಿ ನಾನು ಸ್ಟಾಫ಼್ ರೂಮಿಗೆ ಹೋಗ್ತಿರೋದು’. ಶ್ರೀದೇವಿಯ ಕೈಲಿದ್ದ ವಾಕಿಂಗ್ ಸ್ಟಿಕ್ ಅನ್ನು ಮಡಚಿಟ್ಟು ಅವಳ ಕೈ ಹಿಡಿದು ಜೋಪಾನವಾಗಿ ಕರೆದುಕೊಂಡು ಹೋದಳು.

ಶಾಲೆಯಲ್ಲಿ ಇಷ್ಟ್ ಜನ ಇದ್ದಾರೆ, ಮಕ್ಕಳು ಬೇಡ, ಟೀಚರ್ಸ್ ನಾದ್ರೂ ಜೊತೇಗೆ ಕರೆದುಕೊಂಡು ಓಡಾಡಬಹುದಲ್ಲ ಅಂತ ಕೇಳಿದ ಪ್ರಶ್ನೆಗೆ ಶ್ರೀದೇವಿ ನಂಗೆ ಒಬ್ಬಳೇ ಓಡಾಡಿ ಅಭ್ಯಾಸ ಇದೆ ಎಂದು ಮುಗುಳ್ನಗುತ್ತಾ ಉತ್ತರಿಸಿದಳು. ಶ್ರೀದೇವಿ ಬೇರೆಯವರ ಸಹಾಯ ಅಪೇಕ್ಷಿಸದ ಸ್ವಾಭಿಮಾನಿ ಅನ್ನೋದು ಎಷ್ಟು ಸತ್ಯವೋ ಅವಳ ಸುತ್ತ ಸಹಾಯಕ್ಕೆ ಮುಂದಾಗುವ ಜನಗಳೂ ಇಲ್ಲ ಅನ್ನೋದು ಅಷ್ಟೇ ಸತ್ಯ ಅನ್ನೋದು ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಕುಮುದಾಗೆ ಅರ್ಥವಾಗಿತ್ತು.

‘ರೆಹ್ಮಾನ್ ಅಣ್ಣ, ಎಷ್ಟಾಯ್ತು ಹೇಳಿ. ನಾನ್ ತಾನೇ ಬೀನ್ಸು ಕ್ಯಾರೆಟ್ಟು ತಂದುಕೊಡು ಅಂದಿದ್ದು’. ಶ್ರೀದೇವಿ ಆಟೋದಿಂದ ಇಳಿದು ಹೇಳಿದಳು. ಏಳು ವರ್ಷದಿಂದ ಶಾಲೆಗೆ ಕರೆದುಕೊಂಡು ಹೋಗಿಬರೋ ಅಟೋ ಡ್ರೈವರ್ ಒತ್ತಾಯ ಮಾಡಿದ್ದಕ್ಕೆ ಮೆಲ್ಲಗೆ ಎಪ್ಪತ್ತೈದು ಅಂದ. ಶ್ರೀದೇವಿ ತನ್ನ ಪರ್ಸ್ ನಿಂದ ಹಣವನ್ನು ತೆಗೆದು ನೋಟಿನ ಆಕಾರ ಮತ್ತು ಗಾತ್ರವನ್ನು ಬೆರಳಿನಲ್ಲಿ ಮುಟ್ಟಿ, ಇದು ಐವತ್ತು, ಇದು ಇಪ್ಪತ್ತು, ದಪ್ಪಗಿರೋ ಕಾಯಿನ್ ಐದು ರುಪಾಯಿ. ಸರಿಯಾಗಿದ್ದೀಯ? ಅಂತ ಎಣಿಸಿಕೊಟ್ಟಾಗ ರೆಹ್ಮಾನ್ ನಿಮ್ ಲೆಕ್ಕಾನ ಗಲತ್ ಅನ್ನೋಕಾಗುತ್ತಾ ಅಕ್ಕ ಅಂದು ಅವಳನ್ನು ಗೇಟ್ ತನಕ ಬಿಟ್ಟು ಆಟೋ ತಿರುಗಿಸಿಕೊಂಡು ಹೋದ.

ಮನೆಯೊಳಗೆ ಹೋಗುವಷ್ಟರಲ್ಲಿ ನೀವಿಲ್ಲೇ ಇರೋದಾ..? ಅನ್ನೋ ಪರಿಚಿತ ಧ್ವನಿ ಕೇಳಿಸಿತು. ‘ಅರೇ ಕುಮುದಾ, ಬನ್ನಿ ಒಳಗೆ’ ಶ್ರೀದೇವಿ ಖುಷಿಯಾಗಿ ಸ್ವಾಗತ ಮಾಡಿದಳು. ‘ನಾನು ಎಂಟನೇ ಕ್ರಾಸ್ ನಲ್ಲೇ ಇರೋದು.. ನನ್ ಮಗ ಇಲ್ಲೇ ಸ್ಕೇಟೀಂಗ್ ಕ್ಲಾಸ್ ಗೆ ಬರ್ತಾನೆ, ಮನೆಯೋರು ಕೆಲ್ಸ ಇದೆ ಅಂದ್ರು’. ತಾನಿಲ್ಲಿ ಹೇಗೆ ಅನ್ನೋದನ್ನ ಕುಮುದ ವಿವರವಾಗಿ ಹೇಳಿದಳು. ಹಾಗಾದ್ರೆ ನಾವಿಬ್ರೂ ನಮ್ಮ ಆಟೋಲೇ ಒಟ್ಟಿಗೇ ಸ್ಕೂಲಿಗ್ ಹೋಗಿಬರ್ಬೋದಲ್ಲ  ಅಂತ ಕೇಳಿದಾಗ ಕುಮುದಾ ಸಂಕೋಚಪಟ್ಟುಕೊಂಡಳು. ಶ್ರೀದೇವಿ ‘ನೀವು ಆಟೋದಲ್ಲೆಲ್ಲಾ ಬರಲ್ಲ ಅಂದ್ರೆ ನಾನು ಡ್ರೈವರ್ ಲೆಸ್ ಕಾರ್ ತೊಗೊಳ್ತೀನಿ, ಅದ್ರಲ್ಲಿ ಅಳವಡಿಸಿರೋ ರೋಬೋ ನೇ ಕಾರ್ ಓಡಿಸುತ್ತೆ, ಅದ್ರಲ್ಲಿ ಹೋಗೋಣ’ ತುಂಟನಗೆ ಬೀರುತ್ತಾ ಹೇಳಿದಳು. ಅಂದು ಅಚಾನಕ್ಕಾಗಿ ಸಿಕ್ಕು, ‘ಒಂದು ನಿಮಿಷ ಬಂದು ಹೋಗಿ’ ಅನ್ನೋ ಒತ್ತಾಯಕ್ಕೆ ಮನೆಯೊಳಗೆ ಕಾಲಿಟ್ಟ ಕುಮುದಾಗೆ ಅವರ ಅಡುಗೆ ಮನೆಯಲ್ಲಿ ತಾನೇ ಕಾಫಿ ಮಾಡುವಷ್ಟು ಆಪ್ತತೆ ಬೆಳೆಯಿತು. ‘ಆ ಡಬ್ಬಿಯಲ್ಲ ಪಕ್ಕದ ಸ್ಟೀಲ್ ಡಬ್ಬಿಯಲ್ಲಿ ಸಕ್ಕರೆ ಇದೆ’ ಮುಚ್ಚಳ ತೆಗೆಯೋ ಶಬ್ದದಲ್ಲೇ ಯಾವ ಡಬ್ಬಿ ಅಂತ ಹೇಳೋ ಶಬ್ದವೇಧಿ ವಿದ್ಯೆಯನ್ನರಿತ ಸ್ನೇಹಿತೆಯನ್ನು ಕುಮುದಾ ಹುಬ್ಬೇರಿಸಿ ನೋಡಿದಳು.

ಶ್ರೀದೇವಿಯ ಕೋಣೆ ತುಂಬಾ ವಿಭಿನ್ನವಾಗಿತ್ತು. ಸಾಕಷ್ಟು ಪುಸ್ತಕಗಳು, ಬ್ರೈಲ್ ನಲ್ಲಿ ಬರೆದಿರುವಂತದ್ದು, ಜನಪದ ಹಾಡು, ಚಲನಚಿತ್ರಗೀತೆ, ದೇವರನಾಮ, ಶಾಸ್ತ್ರೀಯ ಸಂಗೀತ, ಭಾವಗೀತೆಗಳ ಸಾಹಿತ್ಯಗಳನ್ನು ಬೇರೆ ಬೇರೆ ಪುಸ್ತಕಗಳಲ್ಲಿ ಪ್ರತ್ಯೇಕವಾಗಿ ಬರೆದಿಟ್ಟುಕೊಂಡಿದ್ದಳು. ಇನ್ನೊಂದೆಡೆ ಹಾರ್ಮೋನಿಯಮ್, ಶೃತಿಪೆಟ್ಟಿಗೆ ಇದ್ದ ಸಂಗೀತಮಯವಾದ ಕೋಣೆ ಅದು.

ಪೇಪರ್ ಮೇಲೆ ಪಿನ್ನಿನಿಂದ ತೂತು ಮಾಡಿ ಚುಕ್ಕಿ ರಂಗೋಲಿ ಇಟ್ಟಂತೆ ಕಾಣುತ್ತಿದ್ದ ಪುಸ್ತಕವನ್ನು ನೋಡುತ್ತಿದ್ದ ಕುಮುದ ಈ ಬ್ರೈಲ್ ನ ಓದೋದು ಹೇಗೆ ಹೇಳಿಕೊಡೆ, ನಾನೂ ಒಂದಷ್ಟು ಹಾಡುಗಳನ್ನು ಕಲೀಬಹುದು ಅಂತ ಆಸಕ್ತಿಯಿಂದ ಕೇಳಿದಳು. ಶ್ರೀದೇವಿ ಅದೇನು ದೊಡ್ಡ ವಿದ್ಯೆ ಅಲ್ಲ. ಪ್ರಪಂಚದ ಕುರುಡರಿಗೆಲ್ಲಾ ಇದೊಂದೇ ಭಾಷೆ. ನಮ್ಮ ಭಾಷೆ ದೊಡ್ಡದು! ನಮ್ಮ ಭಾಷೆ ಹೆಚ್ಚು! ಅನ್ನೋರ ಮಧ್ಯೆ, ತಾರತಮ್ಯವಿಲ್ಲದೆ ‘ನಾವು ಬೈಲ್ ಲಿಪಿಯವರು’ ಅಂತ ಒಗ್ಗಟ್ಟು ತೋರಿಸಬಹುದು ಎಂದು ನಕ್ಕಳು.

ಕುಮುದಾ ಕಣ್ಣು ಮುಚ್ಚಿ ಬೆರಳಲ್ಲಿ ಫೀಲ್ ಮಾಡುತ್ತಾ ನಿಧಾನವಾಗಿ ಬ್ರೈಲ್ ಕಲಿಕೆ ಶುರುಮಾಡಿದಳು. ಎರಡು ನಿಮಿಷ ಕಣ್ಣು ಮುಚ್ಚಿದರೆ ತಲೆ ತಿರುಗಿದಂತಾಗುತ್ತಿದೆ ಆದರೆ ಶ್ರೀದೇವಿಯ ಬಾಳೇ ಕತ್ತಲೆಯಾಗಿದೆಯಲ್ಲ ಎಂದು ಮೊದಮೊದಲು ಕುಮುದಾಗೆ ಅನ್ನಿಸಿತು, ಆದರೆ ಬರ್ತಾ ಬರ್ತಾ, ಕಣ್ಣು ಮುಚ್ಚಿದರೆ ಅದೊಂದು ಧ್ಯಾನ ಸ್ಥಿತಿ ಅನ್ನಿಸಿತು. ಕಣ್ಣುಕಾಣದವರಿಗೆ ಈ ಬಾಹ್ಯಪ್ರಪಂಚದ ವಿಷಯಗಳು ವಿಚಲಿತಗೊಳಿಸಲ್ಲ. ಅವರು ಬೆಳ್ಳಗಿದ್ದಾರೆ, ಇವರ ಮುಖದಲ್ಲಿ ಮೊಡವೆಯಿದೆ, ಇವರ ಹತ್ತಿರ ಚಿನ್ನದ ನೆಕ್ಲೇಸ್ ಇದೆ, ಅವರ ಹತ್ರ ಐ ಫೋನ್ ಇದೆ.. ಊಹೂ. ಕಣ್ಣಿಗೆ ಕಾಣೋ ಪ್ರಪಂಚದಲ್ಲಿ ಎಷ್ಟೆಲ್ಲಾ ಡಿಸ್ಟ್ರಾಕ್ಶನ್ ಗಳು! ಒಳಗಣ್ಣಲ್ಲಿ ತಮ್ಮದೇ ಪ್ರಪಂಚವನ್ನು ಕಂಡುಕೊಳ್ಳಲು, ಅಂತರಂಗಕ್ಕೆ ಹತ್ತಿರವಿರಲು ಈ ಊನ ಒಂದು ವರವೇ ಸರಿ ಅನ್ನಿಸಿತು.

ಅಂದು ಮೋಡ ಕವಿದು ಮಧ್ಯಾಹ್ನ ಎರಡು ಗಂಟೆಗೇ ಸಾಯಂಕಾಲವಾದಂತಿತ್ತು. ವಾತಾವರಣವನ್ನು ಗಮನಿಸಿ ಮಳೆ ಬರೋತರ ಇದೆ, ನಮ್ಮನೆ ಉಪ್ಪಿಟ್ ವರ್ಲ್ಡ್ ಫ಼ೇಮಸ್ ತಿಂದು ಆಮೇಲೆ ಹೊರಡು ಅಂದು ಶ್ರೀದೇವಿ ಈಳಿಗೆ ಮಣೆಯಲ್ಲಿ ತರಕಾರಿ ಹೆಚ್ಚೋಕೆ ಶುರು ಮಾಡಿದಳು. ಪ್ಲಾಟ್ ಫ಼ಾರ್ಮ್ ಮೇಲೆ ಕೂತ ಕುಮುದಾ ಅವಳ ಕೆಲ್ಸವನ್ನು ವಿಶ್ವದ ಎಂಟನೇ ಅದ್ಭುತ ಅನ್ನುವಂತೆ ಕಣ್ಣಗಲಿಸಿ ನೋಡುತ್ತಿದ್ದಳು. ಈಳಿಗೆಮಣೆಯ ಚೂಪದ ಅಂಚಿಗೆ ಒಂದು ಬೆರಳನ್ನು ಅಡ್ಡಕೊಟ್ಟು, ಆ ಅಂದಾಜಿನ ಮೇಲೆ ಈರುಳ್ಳಿ ಟೊಮ್ಯಾಟೋ ಕ್ಯಾರೆಟ್ ಬೀನ್ಸ್ ಹೆಚ್ಚಿದಳು. ಎಲ್ಲಿ ಕೈ ಕುಯ್ದುಕೊಳ್ತಾಳೋ ಅನ್ನೋ ಭಯದಿಂದ ಉಸಿರಿಡಿದು ಕೂತಿದ್ದ ಕುಮುದಾ ಅಚ್ಚುಕಟ್ಟಾಗಿ ಹೆಚ್ಚಿದ ತರಕಾರಿಗಳನ್ನು ನೋಡಿದ ಮೇಲೆ ಸಮಾಧಾನದಲ್ಲಿ ಉಸಿರಾಡಿದಳು.

ಶ್ರೀದೇವಿ, ‘ನಾನು ಸ್ಟೀಲ್ ಪಾತ್ರೇಲಿ ಅಡುಗೆ ಮಾಡಲ್ಲ, ಬೇಗ ಸೀದು ಹೋಗುತ್ತೆ’ ಎಂದು ಸ್ಟೋವ್ ಮೇಲಿಟ್ಟಿದ್ದ ಅಲ್ಯುಮಿನಿಯಮ್ ಪಾತ್ರೆ ಎಷ್ಟು ಕಾದಿದೆ ಅಂತ ಕೈಅಡ್ಡ ಇಟ್ಟು ನೋಡಿ ಚಮಚದಲ್ಲಿ ಎಣ್ಣೆಯನ್ನು ಹಾಕಿದಳು. ಒಗ್ಗರಣೆ ಡಬ್ಬಿಯಿಂದ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆಯನ್ನು ಸರಿಯಾದ ಅಳತೆಯಲ್ಲಿ ಹಾಕಿದ ಕೈಗಳಿಗೆ ಕಣ್ಣುಗಳ ಅಗತ್ಯವೇ ಇರಲಿಲ್ಲ. ನೋಡು ನೋಡುತ್ತಿದ್ದಂತೆ ಶ್ರೀದೇವಿಯ ಪಾಕಶಾಲೆಯಲ್ಲಿ ಉಪ್ಪಿಟ್ಟಿನ ಘಮಲು ಹರಡಿತು. ‘ನಾನೇ ಎಷ್ಟೋ ಸಲ ಸೀದಿಸಿಬಿಡ್ತೀನಿ, ಇಲ್ಲಿ ನೋಡಿದ್ರೆ ಪಾತ್ರೆಯ ತಳ ಕೂಡ ಹಿಡಿದಿಲ್ಲ ಗ್ರೇಟ್ ಕಣೇ’ ತಟ್ಟೆಗೆ ಉಪ್ಪಿಟ್ಟು ಹಾಕಿಕೊಳ್ಳುತ್ತಾ ಕುಮುದಾ ಗೆಳತಿಗೆ ಮೆಚ್ಚುಗೆ ಸೂಚಿಸಿದಳು.

ಪ್ರತಿಭಾಕಾರಂಜಿ ಸ್ಪರ್ಧೆಗೆ ಶ್ರೀದೇವಿಯ ತಯಾರಿಯಲ್ಲಿ ಕಲಿತ ಮಕ್ಕಳು ನಾಡಗೀತೆ, ದೇಶಭಕ್ತಿಗೀತೆ, ಖವ್ವಾಲಿ ಸ್ಪರ್ಧೆಯಲ್ಲಿ ಕ್ಲಸ್ಟರ್, ತಾಲ್ಲೂಕ್, ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಶಿವಮೊಗ್ಗದಲ್ಲಿ ನಡೀತಿದ್ದ ರಾಜ್ಯಮಟ್ಟದ ಸ್ಪರ್ಧೆಗೆ ಮಕ್ಕಳ ಜೊತೆ ಅವರಿಗೆ ತರಬೇತಿ ಕೊಟ್ಟ ಶಿಕ್ಷಕರೂ ಹೋಗಬೇಕೆಂದಿದ್ದ ಸೂಚನೆ ಬಗ್ಗೆ ಬ್ರೇಕಿಂಗ್ ನ್ಯೂಸಿನ ಹಾಗೆ ಸ್ಟಾಫ಼್ ರೂಮಿನಲ್ಲಿ ಚರ್ಚೆಯಾಗುತ್ತಿತ್ತು.

ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕರು ಶ್ರ‍ೀದೇವಿ ಬಂದ್ರೆ ಅವರ ಕೈಹಿಡಿದು ಕರೆದುಕೊಂಡು ಹೋಗೋದು, ಅವರ ಯೋಗ ಕ್ಷೇಮ ನೋಡಿಕೊಳ್ಳೋದೇ ಸಮಯ ಮುಗಿದುಹೋಗುತ್ತೆ, ಸ್ಪರ್ಧೆ ಮುಗಿದ ಮೇಲೆ ಒಂದು ದಿನ, ಸುತ್ತ-ಮುತ್ತ ಸಾಗರ ಜೋಗ ಅಂತ ಟ್ರಿಪ್ ಮಾಡೋಣ ಅಂದುಕೊಂಡಿದ್ವಿ ಅದೆಲ್ಲ ಕಷ್ಟವಾಗುತ್ತೆ. ಹೇಗಾದರೂ ಮಾಡಿ ಶ್ರೀದೇವಿಯನ್ನು ಅವಾಯ್ಡ್ ಮಾಡ್ಬೇಕು ಅಂತ ಮಾತನಾಡಿಕೊಳ್ಳೋದನ್ನ ಕೇಳಿಸಿಕೊಳ್ಳುತ್ತಾ ಕುಮುದ ತನ್ನ ಮುಂದಿದ್ದ ಹೋಮ್ ವರ್ಕ್ ಪುಸ್ತಕಗಳ ಕರೆಕ್ಶನ್ ಮಾಡುತ್ತಿದ್ದಳು. ‘ಒಂದ್ ಕೆಲ್ಸ ಮಾಡೋಣ, ಮಕ್ಕಳ ಎಗ್ಸಾಮ್ ತಪ್ಪಿಹೋಗುತ್ತೆ ಅಂತ ನಾವು ಸ್ಪರ್ಧೆಗೆ ಹೋಗ್ತಾನೇ ಇಲ್ಲ’ ‘ಪ್ರಿನ್ಸಿಪಾಲರೂ ಬೇಡ ಅಂದ್ರು ಅಂತ ಶ್ರ‍ೀದೇವಿಗೆ ಹೇಳಿಬಿಡೋಣ’ ‘ಅದೂ, ಸರಿ.. ಶ್ರೀದೇವಿಗೆ ಹೇಗ್ ಗೊತ್ತಾಗುತ್ತೆ? ನಾವು ಕರ್ಕೊಂಡ್ ಹೋಗಿ ಬಂದರಾಯಿತು’ ತಲೆಗೊಬ್ಬರಂತೆ ಉಪಾಯಗಳನ್ನು ಮಂಡಿಸಿ, ತಮ್ಮ ತಮ್ಮ ಚಾಣಕ್ಷತನವನ್ನು ಹೋಹೋ ಅಂತ ತಾವೇ ಮೆಚ್ಚಿಕೊಂಡರು.

ಪಾಪ ಮಕ್ಕಳು ಅಷ್ಟು ಕಷ್ಟಪಟ್ಟು ಆಯ್ಕೆಯಾದ ರಾಜ್ಯ ಮಟ್ಟದ ಸ್ಪರ್ಧೆಗೆ ಪರೀಕ್ಷೆಯಿಂದಾಗಿ ಹೋಗ್ತಿಲ್ವಂತೆ ಕಣೇ ಅಂತ ಶ್ರೀದೇವಿ ಬೇಜಾರು ಮಾಡಿಕೊಂಡು ಹೇಳಿದಳು. ಮನುಷ್ಯರ ಹಾವ ಭಾವ, ಕಪಟತನ ಅರಿವಾಗದ ಗೆಳತಿಯನ್ನು ನೋಡಿ ಕುಮುದಾಗೆ ಪಾಪ ಅನ್ನಿಸಿತು. ‘ಸ್ಪರ್ಧೆಗೆ ಹೋದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಕೊಡ್ಬೋದಿತ್ತಲ್ಲ?’ ಕುಮುದಾ ಪ್ರಶ್ನೆಗೆ ಶ್ರೀದೇವಿ, ಮಕ್ಕಳಿಗೆ ಮೊದ್ಲು ಪಠ್ಯ ಆಮೇಲೆ ಪಠ್ಯೇತರ ಚಟುವಟಿಕೆ ಅಂತ ಪ್ರಿನ್ಸಿಪಾಲರು ಹೇಳ್ತಿರುತ್ತಾರೆ ಅದಕ್ಕೇ ಕಳಿಸಿಲ್ಲ. ಪಾಪ ಸ್ಪರ್ಧೆ ಆದ್ಮೇಲೆ ಪ್ರವಾಸಕ್ಕೂ ಹೋಗ್ಬೇಕು ಅಂತಿದ್ರು ಎಲ್ಲಾ ನಿರಾಸೆ ಆಯ್ತ ಅಂದಳು.

ಜೊತೆ ಕೆಲಸ ಮಾಡುವ ಶಿಕ್ಷಕರು ತಾತ್ಸಾರ ಮಾಡಿದಾಗಲೂ ಒಳ್ಳೆಯದನ್ನೇ ಕಾಣೋ ಸ್ನೇಹಿತೆಯ ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳೋದಕ್ಕೆ ಬಿಡಬಾರ್ದು ಅನ್ನಿಸಿತು. ‘ಶ್ರೀ, ಜಗತ್ತಲ್ಲಿ ಬರೀ ಒಳ್ಳೇವ್ರೇ ಇರಲ್ಲ, ಅದಕ್ಕೆ ಗಾದೆ ಮಾಡಿರೋದು ಬೆಳ್ಳಗಿರೋದೆಲ್ಲಾ ಹಾಲಲ್ಲ’ ಬುದ್ಧಿವಾದ ಹೇಳೋ ಟೀಚರ್ ನ ಹಾಗೆ ಕುಮುದಾ ಕೈಕಟ್ಟಿಕೊಂಡು ಹೇಳಿದಳು. ಶ್ರೀದೇವಿ ಅವಳ ಮಾತನ್ನು ಅರ್ಥಮಾಡಿಕೊಂಡವಳಂತೆ ನಕ್ಕು, ‘ಒಂದು ಸಲ ಕುರುಡರನ್ನ ಜ಼ೂ ಗೆ ಕರೆದುಕೊಂಡು ಹೋದರಂತೆ. ಆನೆಯ ಹತ್ತಿರ ಹೋಗಿಬಂದ ಮೇಲೆ ಒಬ್ಬ ಕುರುಡ ಆನೆಯ ಕಾಲನ್ನು ಮಾತ್ರ ಮುಟ್ಟಿ ಆನೆ ಅಂದರೆ ಕಂಬದ ಹಾಗೆ ಇರುತ್ತೆ ಅಂದ್ನಂತೆ, ಇನ್ನೊಬ್ಬ ಆನೆ ಬಾಲವನ್ನು ಹಿಡಿದು ಅದು ಹಗ್ಗದ ಹಾಗೆ ಉದ್ದ ಇರುತ್ತೆ ಅಂದ್ನಂತೆ, ಇನ್ನೊಬ್ಬ ಹೊಟ್ಟೆ ಮುಟ್ಟಿ ಆನೆ ಬಂಡೆಯ ಹಾಗೆ ಇರುತ್ತೆ ಅಂದ್ನಂತೆ. ನಾನ್ ಅಂಥ ದಡ್ಡಿಯಲ್ಲ ಕಣೇ, ಆನೆ ನಾಲ್ಕು ಕಾಲು, ದೊಡ್ಡ ಹೊಟ್ಟೆ, ಸೊಂಡಿಲು, ಬಾಲ ಎಲ್ಲ ಇರೋ ದೊಡ್ಡ ಪ್ರಾಣಿ ಅಂತ ತಿಳ್ಕೊಂಡಿದ್ದೀನಿ ಅಂತ ತನ್ನ ಬಗ್ಗೆ ತಾನೇ ತಮಾಷೆ ಮಾಡಿಕೊಂಡಳು.

ಶಾಲೆಗೆ ಒಟ್ಟಿಗೆ ಆಟೋದಲ್ಲಿ ಹೋಗೋದು ಸಾಯಂಕಾಲ ಮಗನನ್ನು ಕರಾಟೆಗೆ ಕ್ಲಾಸಿಗೆ ಬಿಟ್ಟು ಶ್ರೀದೇವಿಯ ಜೊತೆ ಹರಟೆ ಹೊಡೆಯೋದು, ಶ್ರೀದೇವಿ ಸಂಗೀತದ ರಾಗಗಳ ಪರಿಚಯ ಮಾಡಿಕೊಟ್ಟರೆ ಕುಮುದ ಹೊಸ ಕೈರುಚಿಗಳ ಪರಿಚಯ ಮಾಡಿಕೊಡುತ್ತಿದ್ದಳು. ಸ್ನೇಹಿತೆಯರಿಬ್ಬರೂ ಶಾಲೆಯಲ್ಲಿದ್ದಾಗಲೂ ಮನೆಗೆ ಬಂದಾಗಲೂ ಸಮಯ ಮಾಡಿಕೊಂಡು ಜೊತೆಗಿರುತ್ತಿದ್ದರು. ‘ನನ್ ಮಗಳು ಜೀವನದಲ್ಲಿ ನಿಮ್ಮಷ್ಟು ಯಾರನ್ನೂ ಹಚ್ಚಿಕೊಂಡಿರ್ಲಿಲ್ಲ, ಅವರಮ್ಮ ಹೋದ್ಮೇಲಂತೂ ಒಂಟಿಯಾಗ್ಬಿಟ್ಟಿದ್ಲು’ ಅಪ್ಪ ಭಾವುಕರಾಗಿ ಹೇಳಿದ್ರು. ಕುಮುದ ಸಂದರ್ಭವನ್ನು ತಿಳಿಮಾಡುವಂತೆ ‘ಅಂಕಲ್ ನಿಮ್ ಮಗಳು ಮದ್ವೆ ಆದ್ರೆ ಇನ್ನೂ ಬಿಸಿಯಾಗಿರ್ಬೋದು ಏನಂತೀರ? ಈ ಕಾಲದಲ್ಲಿ ಸುಮಾರು ಹೆಣ್ಣುಮಕ್ಕಳು ಮೂವತ್ತರ ನಂತರವೇ ಮದ್ವೆ ಆಗ್ತಾರೆ’. ತಮಾಷೆಗೆ ಶುರು ಮಾಡಿದ ಮಾತಿನಿಂದ ಅಪ್ಪ ಮಗಳ ಮುಖದಲ್ಲಿ ಯಾವುದೋ ಹಿಂದಿನ ನೆನಪು ಮರುಕಳಿಸಿದಂತೆ ತೋರಿತ್ತು.

ಅಂದು ಭಾನುವಾರವಾದ್ದರಿಂದ ಕುಮುದಾಗೆ ಅಷ್ಟೇನು ಕೆಲ್ಸವಿರಲಿಲ್ಲ. ತಿಂಡಿ ಮುಗಿಸಿ ಸ್ನೇಹಿತೆಯನ್ನು ಹುಡುಕಿ ಬಂದಿದ್ದಳು. ‘ಹುಚ್ಚು ಕೋಡಿ ಮನಸು’ ಭಾವಗೀತೆ ಯಾವ ಪುಸ್ತಕದಲ್ಲಿದೆಯೇ?’ ಶ್ರೀದೇವಿಯ ಕೋಣೆಯ ಪುಸ್ತಕದ ರ್ಯಾಕ್ ತಡಕಾಡುತ್ತಾ ಕುಮುದ ಕೇಳಿದಳು. ಉತ್ತರ ಏನು ಬಂದಿತೋ ಗೊತ್ತಿಲ್ಲ ಆದರೆ ಶ್ರೀದೇವಿಯ ಪರ್ಸನಲ್ ಡೈರಿ ಕುಮುದಾ ಕೈಸೇರಿ ಅವಳು ಬಂದಕೆಲ್ಸವನ್ನು ಮರೆತಳು. ‘ಕಾಣದ ಕಡಲಿಗೇ ಹಂಬಲಿಸಿದೇ ಮನ’ ಹಾಡಿನ ಮೊದಲ ಸಾಲನ್ನೇ ತನ್ನ ಡೈರಿಯ ಶೀರ್ಷಿಕೆಯನ್ನಾಗಿ ಬರೆದಿದ್ದಳು. ಓದುವುದೋ ಬೇಡವೋ ಅಂತ ಮನಸ್ಸು ಒಂದು ಕ್ಷಣ ಹಿಂದೇಟು ಹಾಕಿದರೂ, ಮದುವೆಯ ವಿಷಯ ಮಾತನಾಡಿದಾಗ ಶ್ರೀದೇವಿ ಯಾವಾಗಲೂ ಮಾತು ತಪ್ಪಿಸುತ್ತಾಳೆ. ಅದನ್ನ ತಿಳಿದುಕೊಂಡು ನನ್ನ ಕೈಲಾದ ಸಹಾಯ ಮಾಡೋದು ಸರಿ ಎನಿಸಿತು. ಪುಸ್ತಕವನ್ನು ಹಿಡಿದು ಕಣ್ಣು ಮುಚ್ಚಿ ಬ್ರೈಲ್ ಲಿಪಿಯನ್ನು ಬೆರಳಲ್ಲಿ ಸವರುತ್ತಾ ಓದುತ್ತಾ ಹೋದಳು.

ಸಂಗೀತದಲ್ಲಿ ಎಂ ಎ ಮಾಡುವಾಗ ಕಾಲೇಜಿಗೆ ವಯಲಿನ್ ಕಲಿಯೋಕೆ ಅವರು ಬರ್ತಿದ್ರು. ನನ್ನ ಹಾಡು ಅಂದ್ರೆ ಅವರಿಗೆ ತುಂಬಾ ಇಷ್ಟ. ನಾನು ಹಂಸಧ್ವನಿ ರಾಗ ಹಾಡುತ್ತಿದ್ರೆ ಅವ್ರು ವಯಲಿನ್ ನಲ್ಲಿ ನನ್ ಜೊತೆ ಜುಗಲ್ಬಂದಿ ಮಾಡ್ತಿದ್ರು. ಸಂಗೀತದ ಜೊತೆ ಸ್ನೇಹದ ಪ್ರಯಾಣ ಶುರುವಾಗಿತ್ತು. ಅಪ್ಪನ ಮುಂದೆ ನಾನು ‘ದಾಸನ ಮಾಡಿಕೋ ಎನ್ನ’ ಹಾಡನ್ನ ಹಾಡಿದಾಗ ಅವರು ವಯಲಿನ್ ವಾದನ ಸೇರಿಕೊಂಡಿತ್ತು. ಅಂದು ನಮ್ಮಿಬ್ಬರ ರಾಗಕ್ಕೆ ತಾಳ ಸೇರಿದಂತಿದೆ ನಿಮ್ಮಿಬ್ಬರ ಜೋಡಿ ಎಂದು ಹೇಳಿ ಅಪ್ಪ ನಮ್ಮಿಬ್ಬರ ಬಗ್ಗೆ ಪರೋಕ್ಷವಾಗಿ ಒಪ್ಪಿಗೆ ತಿಳಿಸಿದ್ದರು. ಅವರ ಪೂರ್ವಾಪರವನ್ನು ವಿಚಾರಿಸಿದರು.

ನಮ್ಮಿಬ್ಬರ ಪ್ರೀತಿ ಮದುವೆ ಹಂತಕ್ಕೆ ತಲುಪುತ್ತಿದೆ ಅನ್ನೋ ಯೋಚನೆಯೇ ಪುಳಕ ತರಿಸಿತ್ತು. ಅದೊಂದು ದಿನ ಅವರ ಹತ್ತಿರ ನಾನು ನನ್ನನ್ನು ಎಂದಿಗೂ ಕನ್ನಡಿಯಲ್ಲಿ ನೋಡಿಕೊಂಡಿಲ್ಲ ಅಂತ ಹೇಳಿದಾಗ, ಅಂದ ಇರೋದು ನೋಡೋರ ಕಣ್ಣಿಗೆ, ನೀನು ನೋಡೋಕಾಗಲ್ಲ ಅಂತ ಯಾಕೆ ಬೇಜಾರಾಗ್ತೀಯ? ನೀನ್ ಹೇಗಿದ್ದೀಯ ಗೊತ್ತಾ ಎಂದು ನನ್ನ ಸಮ್ಮತಿ ತೆಗೆದುಕೊಂಡು ನನ್ನ ರೂಪವನ್ನು ವರ್ಣಿಸಿದರು. ದುಂಡು ಮುಖ, ನೀಳವಾದ ಕಣ್ಣು, ಸಣ್ಣ ತುಟಿ, ತುಸು ಕಂದು ಬಣ್ಣದ ಕೂದಲು ಅಂತ ಇಡೀ ಮೈಮಾಟವನ್ನು ಹೊಗಳುತ್ತಾ ಹೋದರು. ‘ಶ್ರೀದೇವಿ ನೀನು ಎಷ್ಟು ಕಳೆಕಳೆಯಾಗಿದ್ದೀಯ ಗೊತ್ತಾ? ಕೈಲೊಂದು ವೀಣೆ ಹಿಡಿದುಕೊಂಡರೆ ಸಾಕ್ಷಾತ್ ಸರಸ್ವತಿ ಹಾಗೆ ಇದ್ದೀಯ’ ಎಂದರು. ತಂದೆ ತಾಯಿಯಲ್ಲದೆ ಬೇರೆಯವರಿಂದ ಸ್ನೇಹವನ್ನೂ ಕಾಣದಿದ್ದ ನನಗೆ, ನಿಷ್ಕಲ್ಮಶ ಪ್ರೀತಿಯನ್ನು ತೋರಿದ ಆ ವ್ಯಕ್ತಿಗೆ ಅಂದೇ ನನ್ನ ದೇಹ ಮನಸ್ಸುಗಳನ್ನು ಮುಡುಪಾಗಿಟ್ಟಿದ್ದೆ.

ಎರಡೂ ಮನೆಯವರ ಸಮ್ಮುಖದಲ್ಲಿ ಮದುವೆಯ ವಿಷ್ಯ ಪ್ರಸ್ತಾಪವಾದಾಗ ಅವರ ತಾಯಿ ಹೇಳಿದ ಒಂದೇ ಮಾತಿಗೆ ಇಬ್ಬರ ನಡುವೆ ದೊಡ್ಡ ಜಗಳವೇ ಆಗಿ ಹೋಯಿತು. ನಿಮ್ಮ ಮಗಳಿಗೆ ನಮ್ಮ ಮಗ ಬಾಳು ಕೊಡುತ್ತಿದ್ದಾನೆ ಅಂತ ಹೇಳಿದ್ದು ಅಪ್ಪನಿಗೆ ಸಹಿಸಿಕೊಳ್ಳಲಿಕ್ಕಾಗಿರಲಿಲ್ಲ. ಬಾಳು ಯಾಕೆ ಕೊಡಬೇಕು? ನನ್ನ ಮಗಳು ಓದಿದ್ದಾಳೆ, ಕೆಲಸದಲ್ಲಿದ್ದಾಳೆ, ಸಾಮಾನ್ಯರಿಗಿಂದ ಸ್ವಾವಲಂಬಿಯಾಗಿದ್ದಾಳೆ, ಅವಳಿಗೆ ಸಿಂಪತಿ ಬೇಕಾಗಿಲ್ಲ, ಸಂಗಾತಿ ಬೇಕಾಗಿದ್ದಾನೆ ಅಂತ ನುಡಿದ ಮಾತುಗಳೇ ಆ ಮನೆಯವರ ಜೊತೆಗಿನ ಕೊನೇ ಮಾತಾಗಿ ಉಳಿದು ಹೋಯಿತು.

ಎಲ್ಲಾ ಚೆನ್ನಾಗಿರುವ ಹೆಣ್ಣುಮಕ್ಕಳನ್ನೇ ದೊಡ್ಡ ಜವಾಬ್ದಾರಿಯೆಂದುಕೊಂಡು ವರದಕ್ಷಿಣಿ ಕೊಟ್ಟು ಸಾಗುಹಾಕುವಂಥ ಸಮಾಜದಲ್ಲಿ ನನ್ನ ಬಗ್ಗೆ ಅವರು ಹೇಳಿದ ಮಾತುಗಳಲ್ಲಿ ಮಹಾ ತಪ್ಪೇನಿರಲಿಲ್ಲ. ‘ಸುದರ್ಶನ್ ನಿಮ್ಮ ಮಾತು, ನಿಮ್ಮ ವಯಲಿನ್ ತಂತಿಯಿಂದ ಹೊರಹೊಮ್ಮಿದ್ದ ನಾನೇ ವೀಣೆ, ನೀನೇ ತಂತಿ, ಅವನೇ ವೈಣಿಕ ಹಾಡು ನನ್ನ ಎದೆಯಲ್ಲಿ ಸದಾ ಹಸಿರು. ಲವ್ ಯು ಸುದರ್ಶನ್’ ಬ್ರೈಲ್ ಲಿಪಿಯಲ್ಲಿ ಬರೆದಿದ್ದ ಸಾಲುಗಳು ಕುಮುದಾಳ ಕಣ್ಣಿಂದ ಧಾರಾಕಾರವಾಗಿ ನೀರು ತರಿಸಿದವು.

ಕೊನೆಯಲ್ಲಿ ಬರೆದಿದ್ದ ಹೆಸರು ದಿಗಿಲು ಮೂಡಿಸಿತ್ತು. ಸುದರ್ಶನ್! ತನ್ನ ಗಂಡನ ಹೆಸರು. ಅವರೂ ವೈಲಿನ್ ನುಡಿಸುತ್ತಾರೆ. ಇವರೇ ಅವರಾ? ಶ್ರೀದೇವಿ ಎಂ ಎ ಮಾಡಿದ್ದ ಕಾಲೇಜ್ ಸರ್ಟಿಫಿಕೇಟ್ ಸತ್ಯವನ್ನು ಹುಡುಕಿಕೊಟ್ಟಿತ್ತು. ಶ್ರೀದೇವಿ ಓದಿದ್ದ ಕೃಪಾನಿಧಿ ಕಾಲೇಜಿನ ಗುರುಗಳಿಂದಲೇ ಸುದರ್ಶನ್ ವಯಲಿನ್ ಕಲಿತಿದ್ದು. ನೇರವಾಗಿ ಶ್ರೀದೇವಿಯ ಬಗ್ಗೆ ಹೇಳದೆ, ಸುದರ್ಶನ್ ಹತ್ತಿರ ಅದೂ ಇದೂ ಮಾತನಾಡುತ್ತಾ ಡೈರಿಯಲ್ಲಿದ್ದ ಇಸವಿ, ಜಾಗಗಳನ್ನು ತಾಳೆ ಮಾಡಿದಳು. ಯಾವುದು ಸುಳ್ಳಾಗಲಿ ಅಂತ ಮನಸ್ಸು ಹಾತೊರೆಯುತ್ತಿತ್ತೋ ಅದೇ ಕಟುಸತ್ಯವಾಗಿ ಕಣ್ಣ ಮುಂದಿತ್ತು.

ಸುದರ್ಶನ್ ಶ್ರೀದೇವಿಯನ್ನು ನಿಜವಾಗಿಯೂ ಪ್ರೀತಿಸ್ತಿದ್ನಾ ಇಲ್ಲ ಅಮಾಯಕ ಹುಡುಗಿಯ ಜೊತೆ ಪ್ರೀತಿ ಹೆಸರಲ್ಲಿ ಟೈಮ್ ಪಾಸ್ ಮಾಡಿದ್ನಾ? ಬಾಣಗಳಂತೆ ಚುಚ್ಚುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮನಸ್ಸು ಇನ್ನೊಂದು ಆಯಾಮವನ್ನು ಹಿಡಿಯಿತು. ಶ್ರೀದೇವಿಯನ್ನು ಸುದರ್ಶನ್ ನಿಜ್ವಾಗಿ ಪ್ರೀತಿಸಿದ್ರೂ ನಮ್ಮ ಮನೆಯ ಸಂಬಂಧ ಅವನಿಗೆ ಅನುಕೂಲದ ಆಯ್ಕೆಯಾಗಿತ್ತು, ನನ್ನ ತಂದೆಯಿಂದ ಅವರ ಅಣ್ಣನಿಗೆ ಕೆಲ್ಸ ಸಿಕ್ಕಿತು, ನನ್ನಪ್ಪನ ಒಬ್ಬಳೇ ಮಗಳಾದ ನನ್ನ ಆಸ್ತಿಗೆ ಅವನು ಹಕ್ಕುದಾರನಾದ. ಇಷ್ಟು ದೊಡ್ಡ ಆಫ಼ರ್ ನ ಒಂದು ಕಾಂಪ್ಲಿಕೇಟೆಡ್ ಪ್ರೀತಿಗಾಗಿ ಕಳೆದುಕೊಳ್ಳೋ ಧೈರ್ಯ ಅವನು ಮಾಡಲಿಲ್ಲ ಅನ್ನೋ ಲಾಜಿಕಲ್ ಉತ್ತರ ಸಿಕ್ಕಿತು.

ಇವತ್ತಿಗೂ ಶ್ರೀದೇವಿ ಅವನ ನೆನಪುಗಳ ಜೊತೆ ಬದುಕುತ್ತಿದ್ದಾಳೆ. ಸ್ನೇಹಿತೆಯಾಗಿ ಈಗ ನನ್ನ ನಿಲುವೇನು? ತನ್ನ ಗಂಡನೇ ಸ್ನೇಹಿತೆಗೆ ಮೋಸ ಮಾಡಿದ ಪ್ರಿಯತಮ ಅಂತ ಗೊತ್ತಾಗಿ ಮುಂದೆ ಏನು ಮಾಡಬೇಕೆಂದು ತೋಚದಾಯಿತು. ಎಂದೋ ಆದ ವಿಷಯ ಇಟ್ಟುಕೊಂಡು ಜಗಳವಾಡಿ ನನ್ನ ಸಂಸಾರವನ್ನು ಹಾಳುಮಾಡಿಕೊಳ್ಳೋದ? ಅಥವಾ ಶ್ರೀದೇವಿಗೆ ಸತ್ಯ ಹೇಳಿ ಅವಳ ಸ್ನೇಹ ಕಳೆದುಕೊಳ್ಳೋದ? ಎಷ್ಟೆಲ್ಲಾ ಆದರೂ ಡೈರಿಯಲ್ಲಿ ಶ್ರೀದೇವಿ ಅವನ ಪ್ರೀತಿ ನಿಷ್ಕಲ್ಮಶ ಅಂತಲೇ ಬರೆದಿದ್ದಾಳೆ, ಅವಳ ತಾಯಿ ಆಡಿದ ಮಾತು ಮಹಾಪರಾಧವಲ್ಲ ಎಂದಿದ್ದಾಳೆ. ಅವಳ ಕಲ್ಪನಾಲೋಕ ನಿಜಜೀವನಕ್ಕಿಂತ ಸುಂದರವಾಗಿದೆ. ಕನಸುಗಳು ಸುಂದರ, ಆದ್ರೆ ಜೀವನ ಹಾಗಲ್ಲ. ಅದರ ವಾಸ್ತವತೆ ಕ್ರೂರ ಅನ್ನಿಸಿತು.

ಶ್ರೀದೇವಿಯ ಸುಂದರವಾದ ಲೋಕಕ್ಕೆ ಸತ್ಯದ ಕಲ್ಲನ್ನೆಸೆದು ಘಾಸಿಮಾಡಬಾರದೆಂದು ಕುಮುದಾ ನಿರ್ಧರಿಸಿಬಿಟ್ಟಿದ್ದಳು. ಅಂದು ಶ್ರೀದೇವಿ ಆಟೋ ಹತ್ತುವಾಗ ಕುಮುದಾ ಬರಲಿಲ್ಲವೆಂದು ರೆಹೆಮಾನ್ ಅಣ್ಣ ತಿಳಿಸಿದ. ಶಾಲೆಯಲ್ಲಿ ಕೇಳಿದಾಗ ಕುಮುದಾ ಕೆಲಸ ಬಿಟ್ಟಿದ್ದಾಳೆ ಅಂತ ತಿಳೀತು. ದಿನಗಳು ಕಳೆದರೂ ಸ್ನೇಹಿತೆಯ ಪತ್ತೆಯಿಲ್ಲದಿದ್ದಾಗ, ಶ್ರೀದೇವಿ ಅವಳಿಗೆ ಇನ್ನೂ ಒಳ್ಳೇ ಕೆಲಸ ಸಿಕ್ಕಿರಬಹುದು, ಅಥ್ವಾ ಮನೆಯಲ್ಲಿ ಏನೋ ಸಮಸ್ಯೆ ಇರಬಹುದು, ಸಮಯವಾದಾಗ ಭೇಟಿಯಾಗುತ್ತಾಳೆ ಅಂದುಕೊಂಡು ಯಾರೂ ಕಾಣದ ತನ್ನ ಲೋಕದಲ್ಲಿ ಸ್ನೇಹಿತೆಗಾಗಿ ಕಾದಳು.

‍ಲೇಖಕರು Admin

July 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Iampriyapriyaa

    Akka ee kathe alli namma bhashi doddadu namma bhashi hecchu ano salu thumba esta aytu prathi ondu kathe sogaragi mudi baruthide nimge ruthpurvaka dhanyavadagallu

    ಪ್ರತಿಕ್ರಿಯೆ
    • Sunil Alabal

      Medam Nim Kathe bared kelataiddre nanna javanada Kathe nenapagutte nanu esto heroins galannu nodidinni adre nimmamtha Olle heroin nodilla Nimma thinking tumba vibinna super medam I love you medam

      ಪ್ರತಿಕ್ರಿಯೆ
      • Rajeshwari kamadhenu

        Satyavanna tilida kumada avala gelati shrideviya gelatanavanna hage munduvaresiddare avalige vandasvalpavadru samadan iratittu Mattu Tanna ganda madida anyayadinda avalige svalpamattigadu nyaya sikkanta agutittu.

        ಪ್ರತಿಕ್ರಿಯೆ
      • Prathiba.rajanna

        Hi Bhuvi

        I liked you as a Bhuvi,, so addresing with the same name pls dont mind…

        Your stories all having good content and meaningful..
        kumuda & Sridevi ‘s friendship was so beautiful but u would have give happy ending..
        By continuing their friendship

        ಪ್ರತಿಕ್ರಿಯೆ
  2. Arpitha

    ನಿಮ್ಮ ಕಲ್ಪನಾಲೋಕ ಕಥೆಗಳು ತುಂಬಾ ಚೆನ್ನಾಗಿದೆ ಸಿಸ್ಟರ್…

    ಪ್ರತಿಕ್ರಿಯೆ
  3. ನಯನ ಪಾಟೀಲ್

    ತುಂಬಾ ಚೆನ್ನಾಗಿದೆ ಮೇಡಂ …ನೀವು ಬರೆದಿರುವ ಎಲ್ಲ ಕಥೆಗಳು ಸೂಪರ್ …

    ಪ್ರತಿಕ್ರಿಯೆ
  4. ಲಲಿತಾ ಸಿದ್ಧಬಸವಯ್ಯ

    ಬಹಳ ಚೆನ್ನಾಗಿದೆ. ಕುಮುದಾ ಗೆಳತಿಗೆ ನಿಜ ಹೇಳದೆ ಗೆಳತಿಯಾಗಿಯೇ ಉಳಿದಿದ್ದರೆ ಒಂದು ಕೊರತೆಯಾದರೂ ನೀಗುತ್ತಿತ್ತು. ಗಂಡನ ತಪ್ಪಿಗೆ ಹೆಂಡತಿ ತಪ್ಪು ಕಾಣಿಕೆ ಕಟ್ಟಬೇಕಿಲ್ಲವಾದರೂ ಕಟ್ಟಿದ ತೃಪ್ತಿ ಇರುತ್ತಿತ್ತು.

    ಪ್ರತಿಕ್ರಿಯೆ
  5. Anitha Rao

    Fantastic Ranjini avare.
    Tumba chennagide, Shridevige avara preeti sigabekithu. Ivarige ondu jeevanene illaveno ansbidtu… Illi Kumuda avaru swalpa, tyaaga maadbekittu…

    ಪ್ರತಿಕ್ರಿಯೆ
  6. ಪೂಜ

    ಕಥೆಯ ಶೀದೇವಿ ನಾನೇ ಆಗಿದ್ದೆ..
    ಭಾವನೆಗಳ ಬೆನ್ನೇರಿ ಮನಸು ಹೋರಟ್ಟಿತ್ತು,
    ಧನ್ಯವಾದಗಳು.

    ಪ್ರತಿಕ್ರಿಯೆ
  7. Bhavani

    its an amazing story!! I definitely believe that Kumuda should have stayed with her friend and supported her as long as possible… Shreedevi deserved to have 1 friend who had seen the goodness in her and didn’t judge her like the rest of the world..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: