ಶಿವು ಮೋರಿಗೇರಿ
‘ಒಂದು ವರ್ಷಕ್ಕ 365 ದಿನಗುಳು ಅದಾವು ಆದ್ರ ರಾತ್ರಿಗುಳು ಮಾತ್ರ ನವರಾತ್ರಿ ಮತ್ತೊಂದು ಶಿವರಾತ್ರಿ ಒಟ್ಟು ಹತ್ತಾ ರಾತ್ರಿಗುಳು ಇರಾದು’ ಈ ಜೋಕನ್ನ ನಾನು ನೋಡಿದ ಕೂಡ್ಲೆ ಶಿವರಾತ್ರಿ ಸ್ಪೆಷಲ್ ಆಫರ್ ಬಂತು ನೋಡ್ರಲೇ, ಅಂತ ನನ್ನ ಗೆಣಕಾರರಿಗೆ ಹೇಳಿ ನಗುತ್ತಿದ್ದೆ. ಇಡೀ ನಮ್ಮ ದೇಶದೊಳಗ ಹೆಂಗ ಶಿವರಾತ್ರಿ ನಡಿತೈತೋ ಅದಕ್ಕಿಂತ್ಲು ನಮ್ಮೂರ ಶಿವರಾತ್ರಿ ಬ್ಯಾರೆ ಏನೂ ಆಗಿರಲ್ಲ. ಆದ್ರ ನಮ್ಮೂರಿನ ಶಿವರಾತ್ರಿಯ ಬಗ್ಗೆ ಏನಾರ ಹೇಳಬೇಕು ಅಂತ ಕುಂತಾಗ ಮಾತ್ರ ಒಂಚೂರು ಬೇಜಾರು ಆಗೋದು ಗ್ಯಾರೆಂಟಿ. ನಮ್ಮೂರಾಗ ಒಟ್ಟು ದೊಡ್ಡ ಕಲ್ಲಪ್ಪ, ಸಣ್ಣ ಕಲ್ಲಪ್ಪ, ಅನ್ನೋ ಎರಡು (ಲಿಂಗ, ಈಶ್ವರ) ದೇವ್ರು ಅದಾವು. ಇವರಿಬ್ರೂ ಅಣ್ಣ ತಮ್ಮ ಅಕ್ಕಾರ ಅನ್ನೋರನ್ನ ನೋಡಿದಾಗ, ‘ಇವ್ರೆಲ್ಲಾ ಪರಮಾತ್ಮನ ಪ್ಯಾಮಿಲಿ ಸರ್ವೇ ಮಾಡಿರೋರು ನೋಡ್ರಪಾ’ ಅಂತೇಳಿ ನಗುತಿರ್ತಿನಿ. ಪ್ರತೀ ಜನವರಿ ತಿಂಗಳಾಗ ನಮ್ಮೂರ ಬಜಾರದೊಳಗ ದೊಡ್ಡ ಕಲ್ಲಪ್ಪನ ಜಾತ್ರಿ ನಡಿತೈತಿ. ಆ ತೇರು, ಜಾತ್ರಿ ಮುಗುದು ಹದಿನೈದು ದಿನಕ್ಕ ನಮ್ಮೂರ ಬಸ್ ಸ್ಟ್ಯಾಂಡಿನ ಮುಂದೊಂದು ಸಣ್ಣ ಕಲ್ಲಪ್ಪನ ತೇರು ಎಳಿತೈತಿ. ಮೋರಿಗೇರಿ ಯವರು ಬರೀ ಮೋಜು ಮಾಡೋರು ಅಂತ ನಮ್ಮೂರಿನ ಸುತ್ತ ಮುತ್ತಲ ಮುಟುಗನ ಹಳ್ಳಿ, ಬ್ಯಾಸಗಿದೇರಿ, ನಂದಿಪುರ,ಗದ್ದಿಕೇರಿ, ಬನ್ನಿಕಲ್ಲು, ಕೊಂಡೇನಹಳ್ಳಿ, ಸಾಲು ಮೂರುಹಳ್ಳಿ, ಬಾವಿಹಳ್ಳಿ, ಹೊಳಗುಂದಿ, ಉತ್ತಂಗಿ, ಸೋಗಿ, ಇಟಗಿ, ಉಲವತ್ತಿ ಈ ಹಳ್ಳಿಗುಳ ಹಳೇ ತಲಿಮಾರಿನೋರು ಈಗಲೂ ಅನ್ನೋದು ಸುಳ್ಳೆಂಗಾದೀತು? ಅನ್ನುವಂಗ ನಮ್ಮೂರ ಜನಾ ಒಂದು ಅಮಾಸಿನೂ ಬಿಡಲ್ಲ, ಒಂದು ಹುಣ್ಮಿನೂ ಬಿಡಲ್ಲ. ಬರದ್ರ, ಇದು ಬ್ಯಾರ್ಯಾನಾ ಕತಿ ಅಕೈತಿ, ಆದ್ರ ಈ ಸಣ್ಣ ಕಲ್ಲಪ್ಪನ ತೇರು ನಡದ, ಮಾರನೇ ದಿವಸಾ ಶಿವರಾತ್ರಿ ಜಾಗರಣಿ ನಡಿತೈತಿ. ಹೆಂಗೂ ಜನವರಿ ತಿಂಗಳಾಗಿನ ದೊಡ್ಡ ಕಲ್ಲಪ್ಪನ ಜಾತ್ರಿಗೆ ಅಂತ ಮನಿನೆಲ್ಲಾ ಸಾರಿಸಿರ್ತಾಲ್ಲಾ, ಹಂಗಾಗಿ ಶಿವರಾತ್ರಿ ಜಾಗರಣಿಗೆ ಬರೀ ನೆಲ ವರಸ್ಕೊಂಡು, ಅಂಗಳ ಸಾರಿಸಿಬಿಟ್ರ, ಶಿವರಾತ್ರಿಗೆ ಜನಾ ರೆಡಿಯಾದ್ರು ಅಂತನಾ ತಿಳ್ಕಂಬುಡಾದ.
ಶಿವರಾತ್ರಿ ಜಾಗರಣಿ ದಿನ ಮುಂಜಾನೆ ಔರೋರಿಗೆ ತಿಳದಿದ್ದು ನಾಷ್ಟಾ ಮಾಡಿಕಂಡು ತಿಂತಾರ. ಅವತ್ತು ಮಧ್ಯಾಹ್ನದಿಂದನಾ ಎಷ್ಟಕಂದು ಮಂದಿಗೆ ಅದೇನೋ ಸಡಗರ ಇರತೈತಿ.ರಾತ್ರೆಲ್ಲಾ ನಿದ್ದಿಗೆಡೋದು ಖಯಮೈತಿ ಅಂತಂದು ಮನಿಯಾಗಿನ ಕೆಲಸನೆಲ್ಲಾ ಬಿಟ್ಟು ಮಧ್ಯಾಹ್ನನಾ ನಿದ್ದಿ ಹೊಡಿಯಾಕ ಚಾಲೂ ಮಾಡೋ ಮಂದಿನ ನೋಡಿ’ಇಷ್ಟತ್ತಿನಾಗೇನು ಮಕ್ಕಂಡಾರಲ್ಲ, ಇವ್ರಿಗೆಲ್ಲಾ ಪರಮಾತ್ಮ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾನ ನೋಡ್ರಪ್ಪಾ’ ಅಂತಾನೂ ನಕಲಿ ಮಾಡೋದನ್ನ ನಾನಂತೂ ಬಿಟ್ಟಿಲ್ಲ ಬಿಡ್ರಿ. ಆದ್ರೂ ಮಧ್ಯಾಹ್ನದೊತ್ತು ಮಕ್ಕಂಡಿದ್ದೊರೆಲ್ಲಾ ಬೇಗ್ನತ್ತು ಆಗೊಷ್ಟತ್ತಿಗೆ ಪ್ರೆಷ್ ಆಗಿ ಎದ್ದಿರ್ತಾರಲ್ಲ, ಅವಾಗ ನೋಡಬೇಕ್ರಿ ಔರ ಜಾಗರಣಿ ಸಡಗರಾನ, ಕಸಾ ಉಡುಗೋ ಬರ್ಲು, ನವಿಲು ಗರಿಯೇನೋ ಬಿಡಪಾ ಅನ್ನಂಗ ಸ್ಮೂತಾಗಿ ಹಿಡ್ಕೊಂಡು, ಅಂಗಳ ಅನ್ನೋದು ದೇವ್ರ ಜಗಲೇನೋಪಾ ಅನ್ನಂಗ ಕಸ ಹೊಡಿತಾರ. ಹಿಂಗ ಕಸ ಹೊಡಿಬೇಕಾದ್ರ ಮಗ್ಗಲು ಮನಿ ಅಂಗಳದಾಕಿನೂ ಕಸ ಹೊಡಿಯಾಕ ನಿಂತ್ರಂತೂ ಜಾಗರಣಿ ಡಿಟೇಲ್ ಮಾತಾಡಿಕೋತ ಕಸ ಹೊಡದು, ನೀರು ಚುಮುಕಿಸಿ, ಎಂಟು ಚುಕ್ಕಿ, ಎಂಟು ಸಾಲು. ಹದ್ನಾರು ಚುಕ್ಕಿ ಹದ್ನಾರು ಸಾಲು ಅಂತ ಏನೇನೋ ಲೆಕ್ಕದ ಚುಕ್ಕಿ ರಂಗೋಲಿ ಹಾಕಿ ಒಳಗೋಗಿ ಮುಂಜಾಲಿಂದ ಬಿದ್ದಿರಾ ಮುಸುರಿನೆಲ್ಲಾ ಅಂಗಳಕ್ಕ ತಂದು ವಾಣಾ ಮಾಡ್ಕಣಷ್ಟೊತ್ತಿಗೆ ಕತ್ತಲಾಗಿರತೈತಿ,
ಒಳಗಾ ಒಲಿಮ್ಯಾಗ ಮನಿಯೊಳಗಿದ್ದ ಇತಳಾರು ( ಇತರೆ ಮಹಿಳೆಯರು ) ಕಡಾಣಿ ಇಟ್ಕೊಂಡು ಕುಂತಿರತಾರ. ಇಲ್ಲಿಂದ ಚಾಲೂ ಅಕೈತಿ ವರ್ಜಿನಲ್ ಜಾಗರಣಿ. ರಾತ್ರಿ ಏಳು ಘಂಟಿಲಿಂದ ನಮ್ಮೂರಿನ ಎಲ್ಲಾ ಒಲಿಗುಳ ಮ್ಯಾಗೂ ಒಗ್ಗರಣಿ, ಉಪ್ಪಿಟ್ಟು, ಪಡ್ಡು, ದೋಸಿ, ಹಲಸಂದಿ ವಡಿ, ಮಿರ್ಚಿ, ಭಜಿ, ಖಾರ ಮಂಡಕ್ಕಿ, ಹಪ್ಪಳ, ಸಂಡಿಗೆ, ಚಕ್ಕಲಿ, ಡಾಣಿ, ಬುಗ್ಗಿ, ಹಿಂಗ ತರೇವಾಗಿ ತಿನಸುಗಳನ್ನ ಕರಿಯಾಕತ್ತಿರತಾರ. ಈ ಟೈಮಿನಾಗ ನೀವು ಓಣಿಯೊಳಗ ನಿಂತ್ಕಂಡು ಯಾವ ಮನಿ ಮಾಳಗಿ ಕಡಿಗೆ ತಿರುಗಿ ನೋಡಿದ್ರೂ ಪ್ಯಾಕ್ಟರಿ ಹೊಗಿ ಹೋದಂಗ ಹೋಗ್ತಾನಾ ಇರತೈತಿ. ಸುತ್ತು ಒಮ್ಮಿ ನೋಡಿಬಿಟ್ರಂತೂ ಹೊಗಿಯ ಕೋಲುಗಳು ಮುಗಿಲು ಬೀಳದ್ಹಾಂಗ ನೆಟ್ಟಗ ನಿಂತಾವೇನೋ ಅನ್ನಿಸತೈತಿ. ಹಿಂಗ, ಮನ್ಯಾಗಿನ ಹೆಣ್ಮಕ್ಳು ಹೊಗಿ ಎಬ್ಬಿಸ್ಯಾರಪಾ ಅಂದ್ರ, ಓಣಿ ತುಂಬಾ ಬರೀ ಕರದ ಪದಾರ್ಥಗಳ ಘಾಟು ಕುಡುಕೋತ ಓಣಿಯೊಳಗಿನ ಬೈಲ ಕಟ್ಟಿಗಳ ಮ್ಯಾಲ ನಮ್ಮಂಥಾ ಹುಡುಗ್ರು ಕುಂತಿರ್ತೀವಿ. ಯಾರ್ಯಾರ ಮನಿಯೊಳಗ ತಿನ್ನೋದು ರೆಡಿ ಅಕ್ಕೈತೋ ಕಟ್ಟಿಗೆ ಕುಂತಿರೋರ ಹತ್ರ ಔರ ಮನಿಯ ಸಣ್ಣ ಹುಡ್ರಾಗ್ಲೀ, ಇಲ್ಲಾ ಔವ್ವಾರೋ, ಅಕ್ಕ ತಂಗ್ಯಾರೋ ಔರ ಮನಿ ಅಂಗಳಕ್ಕ ಬಂದು ಕೈ ಸನ್ನಿ ಮಾಡಿ ಕರಿತಾರ, ಈ ಹುಡ್ರು ಆ ಕಡಿ ನೋಡ್ಲಿಲ್ಲಪಾ ಅಂದ್ರ ಕೂಗಿ ಕರಿತಾರ. ಹಿಂಗ ಯಾವಾಗ ಯಾರನ್ನರ ಕರದಾಗ, ಇನ್ನುಳಿದೋರ ಪೈಕಿ,ಯಾರಾರ ಒಬ್ರು ‘ಹೇ ನಿಮ್ಮನ್ಯಾಗಿಂದ ಆರ್ಡ್ ಕಾಫಿ ಬರಕತೈತಿ ನೋಡಲೇ, ಹೋಗಿ ಡ್ಯೂಟಿಗೆ ಜಾಯಿನ್ ಆಗಿ, ಹಂಗಾ ಹೊಳ್ಳಿ ಬರಾಕರ ಒಂದು ಪ್ಲಾಸ್ಟಿಕ್ ಚರಗೀನ ತುಂಬಿಕಂಡಾ ಬಂದುಬುಡು, ಹಗಲಲ್ಲಾ ಮನಿಗ್ಯಾರು ಒಕ್ಕಾರ’ ಅಂತೇಳಿ ನಗುತಾರ.
ಶಿವರಾತ್ರಿ ಜಾಗರಣಿಗೂ ಪ್ಲಾಸ್ಟಿಕ್ ಚಂಬ್ಗಿಗೂ ಬಾಳ ನಂಟೈತಿ. ಈ ಜಾಗರಣಿ ಮುಂಜಾಲಿಂದನೂ ಬರೀ ಕರದ ಪದಾರ್ಥ, ಕಡ್ಲಿಬ್ಯಾಳಿ ಪದಾರ್ಥನಾ ತಿಂದರ್ತಾರಲ್ಲ ಹಂಗಾಗಿ ಯಾರ್ಯಾರ ಹೊಟ್ಟಿಯೊಳಗ ಯಾವಾಗ ಗುಡುಗು ಎದ್ದೇಳತೈತೋ ಯಾರಿಗೊತ್ತು ? ಈ ಊಟದ ಎಫೆಕ್ಟು ಎಷ್ಟು ಇರತೈತಿ ಅಂದ್ರ, ಜಾಗರಣಿಗೆ ನಿದ್ದಿಗೆಡಬೇಕು ಅಂತೇಳಿ ಮನಿ ಮಂದೆಲ್ಲಾ, ಟಿವಿ ನೋಡಾಕ ಕುಂತ್ರ ಎಲ್ಲಾರೂ ಒಂದೀಟು ಡಿಸ್ಟೆನ್ಸ್ ಮೆಂಟೇನ್ ಮಾಡೇ ಕುಂದ್ರತಾರ. ಯಾಕಂದ್ರ, ಯಾರ ಕಡ್ಯಾಗಿದ್ದ ಬಿರುಗಾಳಿ ನುಗ್ಗುತೈತೋ ಹೇಳಕ್ಕಾಗಲ್ಲ. ಹಿಂಗೆಲ್ಲಾ ಹುಡುಗ್ರು ತಮಾಷೆ ಮಾಡಿಕೋತ ಕೂತು ಮಾತಾಡಿಕೋತನ ರಾತ್ರಿ ಹತ್ತುವರೆನೋ ಹನ್ನೊಂದುವರೆನೋ ಕಳದೋಗಿಬಿಡತೈತಿ. ಇನ್ನು ಶಿವರಾತ್ರಿ ದಿನ ನಮ್ಮೂರ ಕಲ್ಲಪ್ಪನ ಗುಡಿಯ ಮೈಕ್ನಾಗ ಸಂಜಿಮುಂದ ಆರುವರಿಲಿಂದನಾ ಭಕ್ತಿಗೀತಿಗಳನ್ನ ಹಾಕಿರ್ತಾರ. ನಾವಿದನ್ನ ಕಲ್ಲಪ್ಪನ ಗುಡಿಯಾಗ ರಿಕಾಟ ಹಚ್ಚಿ ವದ್ರಸಾಕಚ್ಚಾರನೋಡು ಅಂತೀವಿ. ರಾತ್ರಿ ಮನ್ಯಾಗ ಮಾಡಿದ ಸ್ಪೆಷಲ್ಲಿನ ಜೊತಿಗೆ ಹನ್ನೊಂದೋ, ಐವತ್ತೊಂದೊ, ನೂರಾಒಂದೋ, ಬತ್ತಿ ಹೊಸ್ಕಂಡು, ಗುಡಿಗೆ ಹೋಗೋ ಹೆಣ್ಮಕ್ಕಳನ್ನ ನೋಡಿದಾಗಂತೂ ನಾನು ನಕ್ಕಿರೋದು ಅಷ್ಟಿಷ್ಟಲ್ಲ. ಅದ್ರಲ್ಲೂ ಪ್ರತಿ ವರ್ಷ ಶಿವರಾತ್ರಿ ದಿನ ಮುಂಜಾಲೆ ತಲಿ ಎರ್ಕೊಂಡು ಒಂದು ಬುಕ್ಕ ಪೆನ್ನು ತಗೊಂಡು 1001 ಸರ್ತಿ ‘ಓಂ ನಮಃ ಶಿವಾಯ’ ಅಂತ ಬರಿಯೋ ಹುಡ್ಗೀನ ನೋಡಿ, ನಿನಗೇನು ಬಂತು ಇಂಥಾದ್ದು ? ಅಂತಾನೂ ಕೇಳಿದಿನಿ. ಅದಾ ಪೆನ್ನನ್ನ ಯಾರಿಗೋ ಕೊಡಿಸಿದಿನಿ. ಶಿವರಾತ್ರಿ ದಿನ ನಮ್ಮೂರ ಎಲ್ಲಾ ದೇವ್ರು ಬಿಜಿನಾ ಇರ್ತಾರ. ಅದ್ರಲ್ಲೂ ದೊಡ್ಡ ಕಲ್ಲಪ್ಪ, ಸಣ್ಣ ಕಲ್ಲಪ್ಪ ಬಾಳ ಬಿಜಿ ಷೆಡ್ಯೂಲ್ ನೊಳಗ ಇರ್ತಾರ. ಹಂಗಾಗಿ ಆ ಟೈಮಿನೊಳಗ ಇವರ ಮೆಮೊ ನೋಡಬೇಕಂದ್ರ ಇಂಥಾ ಲಂಚಾನ ಚಾಲ್ತಿ ಇಟ್ಟಾರ ನೋಡು ಅಂತೇಳಿದಾಗ ನಮ್ಮ ಹುಡುಗ್ರು ‘ಆ ಕಲ್ಲಪ್ಪ ನಿನ್ನ ರೆಸ್ಯೂಮನ್ನ ರಿಜೆಕ್ಟ್ ಮಾಡ್ಯಾನ ಅದ್ಕಾ ಹೊಟ್ಟಿಕಿಚ್ಚಿಗೆ ಹಿಂಗ ಮಾತಾಡ್ತೀ ನೀ’ ಅಂತಾನೂ ಅನ್ನಿಸಿಕೊಂಡೀನಿ.
ಶಿವರಾತ್ರಿ ಜಾಗರಣಿ ಅನ್ನೋ ಒಂದು ಧಾರ್ಮಿಕ ಆಚರಣಿ, ನಮ್ಮ ಅಜ್ಜ ಅಮ್ಮನ ಕಾಲಕ್ಕ ಹೆಂಗಿತ್ತು ಅಂದ್ರ, ಅದು ಬರಿ ಭಯ ಭಕುತಿಯ ಭಾವವಾಗಿತ್ತು. ಈ ವರ್ಸ ಮಳಿ ಬೆಳಿ ಬೇಸಾಗ್ಲಪ್ಪಾ ದೇವ್ರಾ ಅಂತ ನಮ್ಮೂರಿನ ಅಷ್ಟೂ ಗುಡಿಗುಳ ದೇವರಿಗೆ ಬೆಳತನ್ನ ಸೇವಾ ಮಾಡತಿದ್ದರಂತೆ. ಕಲ್ಲಪ್ಪನ ಗುಡಿಯೊಳಗ ಭಜನಿ ಸೆಟ್ ನೋರು ಆಗಿನ ಕಾಲದ ಜಾಗರಣಿ ಹೀರೋಗಳಾ ಆಗಿದ್ರು. ಹಂಗಾಗಿ ಭಜನಿ ಮಾಡಿಕೋತನಾ,
‘ಮಳಿ ಮುಗಿ ಬೀಳಲಿ ಮೋರಿಗೇರಿ ಮ್ಯಾಗ,
ಕರುಣಾ ಇರಲೋ ಕಲ್ಲಪ್ಪ ನಿನಗ,ಬಡವರ ಗುಡಿಸಲ ಮ್ಯಾಗ,
ಹಸುರನ ನೆಚ್ಚಿದ ಬಸವನ ಮ್ಯಾಗ,
ಅಂತ ಬೇಡಿಕೊಳ್ಳತಿದ್ದರಂತೆ. ಕಾಲ ಸರಿತಾ ಸರಿತಾ, ಜಾಗರಣಿ ಕಳಿಯಾಕ, ರೇಡಿಯೋ, ಟಿವಿ, ವಿ ಸಿ ಪಿ, ಸಿ ಡಿ ಪಿ, ಅಂತ ತರೇವಾರಿ ಮಾರ್ಗಗಳು ಬಂದ ಮ್ಯಾಗ ಶಿವರಾತ್ರಿ ಕೂಡಾ ಹೈಟೆಕ್ ಆಗಿ ಬದ್ಲಾಗ್ತಾ ಬಂದೈತಿ. ದೇವರ ಧ್ಯಾನ ಮಾಡ್ತಾ ಹೊತ್ತು ಕಳಿತಿದ್ದ ನಮ್ಮ ಯಜಮಾನ್ರು, ಬ್ಯಾಡ್ರ ಕಣ್ಣಪ್ಪ, ಶಿವ ಮೆಚ್ಚಿದ ಕಣ್ಣಪ್ಪ, ಭಕ್ತ ಸಿರಿಯಾಳ, ಭಕ್ತ ಮಾರ್ಕಂಡೇಯ, ಭಕ್ತ ಪ್ರಹ್ಲಾದ, ಶ್ರೀಮಂಜುನಾಥ, ಇಂಥಾ ಸಿನಿಮಾ ನೋಡಿಕೋತ, ನಡು ನಡುವಿ ಮನ್ಯಾಗ ಮಾಡಿದ ಕರದ ಪದಾರ್ಥಗಳನ್ನ ಮೊಲುಕು ಹಾಕ್ತಾ, ತೀರಾ ನಿದ್ದಿ ಕಾಡ್ತಪಾ ಅಂದ್ರ ಚಾ ಮಾಡಿಕಂಡು ಕುಡುದು ಕೊಡಬತ್ತಕ ತಾಂಬೂಲ ಹಾಕಿ ಕುಟ್ಟಿಕೊಂಡು ಹಲ್ಲಿಲ್ಲದ ದವಡಿಗೆ ತಾಂಬೂಲ ತುರುಕ್ಕಂಡು ಹೊತ್ತು ಕಳಿತಾರ. ಇನ್ನು ನಮ್ಮ ವಾರಿಗಿ ಹುಡ್ರು ನಮಿಗೆ ಬೇಕಾದ್ದ ಹೊಸ ಸಿನ್ಮಾಗಳ ಕ್ಯಾಸೆಟ್ ತಂದು ನೋಡ್ತಾ ಹೊತ್ತು ಕಳಿತೀವಿ, ಎಲ್ಲಿಮಟಾ ಸಿನ್ಮಾ ನೋಡಾದು, ಬರ್ರಿ ಒಂದೆರಡು ಆಟ ಆಡಾನು ಅಂತ ಇಸ್ಪಿಟ್ ಆಡೋ ದಂಡಿಗೇನೂ ಕಡ್ಮೆಯಿಲ್ಲ. ನಿಜವಾದ ಭಕ್ತಿ ಇದ್ರ ಇಸ್ಪೇಟಿನ ಗರಿಯೊಳಗೂ ಶಿವ ಕಾಣ್ತಾನ ಅಂತ ನಕಲಿ ಮಾಡೋರನ್ನ ವರ್ಷಾ ನೋಡತೀನಿ.
ಒಂದು ವರ್ಷ ಏನಾಗಿತ್ತಪಾ ಅಂದ್ರ, ಮೋಹನ್ ಅನ್ನೋ ಒಬ್ಬ ಅಣ್ಣ ನಮ್ಮೂರ ಆಸ್ಪತ್ರ್ಯಾಗ ಕೆಲಸ ಮಾಡಿಕಂಡಿದ್ದ. ಆತ ಗೌರ್ಮೆಂಟ್ ಕ್ವಾರ್ಟಸ್ ನ್ಯಾಗ ಇದ್ದುದು, ಆಸ್ಪತ್ರಿ ಗ್ರೌಂಡಿನೊಳಗ ನಾನು, ನನ್ನಣ್ಣ ವಿನಯ, ಗೆಳೆಯರಾದ ಚುಟ್ಟ ಕೊಟ್ರ ( ನಮ್ಮಣ್ಣನ ಜೊತಿ ಟೂರ್ನಿಮೆಂಟ್ ಗಳಲ್ಲಿ ಪೇಸ್ ಹೋಗ್ತಿದ್ದ ಇವನು ಸ್ಕ್ರೀಜ್ ಗೆ ಹೋಗುತ್ತಲೇ ಬೀಡಿ ಹಚ್ಚಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದ ಅದಕ್ಕೆ ಇವನ ಹೆಸ್ರು ಚುಟ್ಟ ಕೊಟ್ರ ) ಮೇಘ, ಲಂಗಟದ ಕೊಟ್ರ, ಖಾನಾವಳಿ ಕನಕ (ಕರಿಬಸಣ್ಣ), ಮುತ್ತಿಗಿ ಮಲ್ಲಿ, ಎಲ್ಲರೂ ದಿನಾ ಬೇಗ್ನತ್ತು ಕ್ರಿಕೆಟ್ ಆಡ್ತಿದ್ವಿ. ನಮ್ಮ ಜತಿಗೆ ಮೋಹನಣ್ಣನೂ ಆಡಾಕ ಬರ್ತಿದ್ದ, ಹಂಗಾಗಿ ನಾವು ಬ್ಯಾಟು ಬಾಲು ಅತನ ಮನಿಯಾಗ ಇಡತಿದ್ವಿ. ಈ ಮೋಹನಣ್ಣ ಸಾಬ್ರ ಮುನ್ನಿ ಅನ್ನೊ ಹಳೇ ಹಗರಿ ಬೊಮ್ಮನಹಳ್ಳಿಯ ಅಕ್ಕಳನ್ನ ಲವ್ ಮ್ಯಾರೇಜ್ ಆಗಿದ್ದ. ಮುನ್ನಿ ಅಕ್ಕ ನಮಗೆಲ್ಲಾ ಫೇವರೆಟ್. ನಮಿಗೆಲ್ಲಾ ಔರ ಮನಿಗೋದಾಗ, ಚಾ, ನಾಷ್ಟಾ, ಸಿಗ್ತಾನ ಇತ್ತು.
ಹಿಂಗಾ ಒಂದು ಜಾಗರಣಿನ ರಾತ್ರಿ ಪೂರ್ತಿ ಗ್ರೌಂಡಿನಾಗಿನ ಲೈಟಿನ ಬೆಳಕಿಗೆ ಟೆಸ್ಟ್ ಆಡಿ ಕಾಲ ಕಳಿಯೋನು ಅಂತ ಹೇಳಿ ಮೋನಣ್ಣ ನಮ್ಮನ್ನೆಲ್ಲಾ ಕರದಿದ್ದ, ಒಂದೆರಡು ಇನ್ನಿಂಗ್ಸ್ ಮುಗಿಸಿ, ಟೀ ಕುಡುದು ಮತ್ತೆ ಆಡೋನಂತೆ ಅಂತೇಳಿ ಮನಿಗೋದಾಗ ಮುನ್ನಿ ಅಕ್ಕ ಎಲ್ಲರಿಗೂ ಟೀ ಕೊಟ್ಟು, ಸುಮ್ನ ಟಿ ವಿ ನೋಡ್ರಿ, ಆಡಿದ್ದು ಸಾಕು ಅಂದಿದ್ಲು, ಆ ಟೈಮಿಗೆ ನಮ್ಮ ಚುಟ್ಟ ಕೊಟ್ರ, ‘ಎಲ್ಲರೂ ಚಾ ಕುಡಿರಲೇ, ಮುಂದ್ಲ ಜಾಗರಣಿಗೆ ಇರೋರ್ಯಾರೋ ಸಾಯೋರ್ಯಾರೋ,’ ಅಂದಿದ್ಕ. ಔನ ಮ್ಯಾಲ ಎಲ್ಲರೂ ಸಿಟ್ಟು ಮಾಡಿಕಂಡಿದ್ವಿ. ಅದಾಗಿ ಒಂದಷ್ಟು ದಿನಗಳು ಆಗಿದ್ವು, ಗಂಡ ಹೆಂಡ್ತಿ ನಡುವಿ ಅದೇನು ಜಗಳ ಬಂತೋ ಏನೋ ಒಂದಿನ ಮುಂಜಾನೆ ಮುನಿ ಅಕ್ಕ ಚಿಮ್ನೆಣ್ಣಿ ಹಾಕ್ಕೊಂಡು ಬೆಂಕಿ ಹಚ್ಚಿಕೊಂಡುಬಿಟ್ಟಿದ್ಲು. ಸುದ್ದಿ ತಿಳದ ಮೋಹನಣ್ಣ ಆಸ್ಪತ್ರಿ ಡ್ಯೂಟ್ಯಾಗಿದ್ದ ಎದ್ದೆನೋ ಬಿದ್ದೆನೋ ಅಂತ ಓಡಿ ಬಂದಿದ್ದ ಅಷ್ಟರಾಗ ಇಡೀ ಊರಾ ಸೇರಿ ಜೀವ ಇರೋ ಮುನ್ನಕ್ಕನ ಹಗರಿ ಬೊಮ್ಮನ ಹಳ್ಳಿ, ಬಳ್ಳಾರಿ ಅಂತೆಲ್ಲಾ ಆಸ್ಪತ್ರಿಗೆ ತಗೊಂಡೋದ್ರೂ ಮುನ್ನಕ್ಕ ತೀರಿಕೊಂಡ್ಲು. ಪ್ರೀತ್ಸಿ ಮದ್ವಿಯಾಗಿದ್ದ ಮೋನಣ್ಣ ಮುನ್ನಕ್ಕನ್ನ ಕಳಕಂಡ ದುಃಖದಾಗ ಇರೋ ಟೈಮಿನೊಳಗಾ, ಮುನ್ನಕ್ಕನ ತಂದಿ ತಾಯಿಗುಳು, ನನ್ನ ಮಗಳ ಸಾವಿಗೆ ಗಂಡನೆ ಕಾರಣ ಅಂತ ಕಂಪ್ಲೇಂಟ್ ಕೊಟ್ಟಾಗ ಈತನ ಕೆಲ್ಸ, ಜೀವನ, ಭಾವನಿ, ಎಲ್ಲಾ ಅಂದ್ರ ಎಲ್ಲಾನೂ ಹಾಳಾಗಿ ಹೋಗಿದ್ವು. ಆದ್ರ ದೇವ್ರು ದೊಡ್ಡೋನು, ಮುನ್ನಕ್ಕ, ಮೋಹನಣ್ಣ ಇಬ್ಬರ ಬ್ಲಡ್ ಗ್ರೂಫ್ ಬಿ + ಆಗಿದ್ದಕ್ಕ ಕೇಸ್ ಖುಲಾಸ್ಸಾಯಿತು ಅನ್ನೊ ಸುದ್ದಿ ಕೇಳಿದ್ದೆ. ಈ ಘಟನೆ ನಡದ ಮಾರನೆ ಶಿವರಾತ್ರಿ ಜಾಗರಣಿ ದಿನ ಚುಟ್ಟ ಕೊಟ್ರನ ಜತಿಗೆ ನಾನೀ ಘಟನಿ ನೆಪ್ಪು ಮಾಡಿಕೊಂಡಿದ್ದೆ.
ಪ್ರತಿ ಶಿವರಾತ್ರಿಗೂ ಎಲ್ಲರನ್ನೂ ಹಾಸ್ಯ ಮಾಡುತಿದ್ದ ನನಗೆ ನಮ್ಮ ಹುಡ್ರೆಲ್ಲಾ ‘ಹಂಗಾರ ನಿನಿಗೆ ಶಿವನ ಮ್ಯಾಗ ಭಕ್ತಿನಾ ಇಲ್ಲೇನು? ಹೇಳಿಬಿಡಲೇ ನೋಡಾನು, ನಿನ್ನ ಲೆಕ್ಕದಾಗ ಪರಮಾತ್ಮ ಹೆಂಗದಾನ ಹೇಳಲೆ ನೋಡಾನು’ ಅಂತ ಕೇಳಿದ್ದಾಗ ‘ ಆಡಂಬರನ ಆಚೆಗಿಟ್ಟು, ಜೈನ ಬಸದಿಯ ಬಳಸಿ, ಬುದ್ಧನ ಜೊತಿಗೆದ್ದು, ಕೇರಿಯೊಳಗಿನ ಮನಿ ಮನಿಯೊಳಗೂ ಬೆಳಕಾಗಿ ಬೆಳಗಿ, ನಿಲ್ಲೋಕೂ ಆಗದ ವೃದ್ದರಿಗೆ ಆಸರೆ ನೀಡುವ ಕೋಲಾಗಬೇಕು ನನ್ನ ಪರಮಾತ್ಮ’ ಇದು ನಾನು ಕಾಣಲು ಬಯಸುವಂಥಹ ಪರಮಾತ್ಮ, ಅಂತ ಹೇಳಬೇಕು ಅನ್ನಿಸಿದಾಗಲೆಲ್ಲಾ ಮಾತು ಹೊರಳಿಸಿ, ಏನೋ ಒಂದು ಉಡಾಫಿ ಉತ್ರ ಕೊಡತಿದ್ದೆ.








Siva chennagi bareyakhattana. Shubha Shivarathri.
Lekhana sakattagide …aadre adenadu B+ blood groupina kathe !!! Aa bolld group irakkoo case biddogakkoo en connection arthavaglilla …
aaDu bhaasheyalli barediruva lEKana sulabhavaagi OdisikonDu hOgutte. Chennaagide.
chennagide shivu……nam bomnalli suttamutta idda vaatavarana bhalu hidisitu…….naanu alle iddangha aatu nodapa……
ಭಾರತಿ ಮೇಡಮ್ಮರಾ, ಅದೂ ಮುನ್ನಕ್ಕ ಬೆಂಕಿ ಹಚ್ಚಿಗೊಂಡ ಸುದ್ದಿ ಕೇಳಿ ಆಸ್ಪತ್ರಿಲಿಂದ ಓಡಿ ಬಂದದ್ದ ಮೋಹನಣ್ಣ, ಅಕಿ ಬೆಂಕಿ ನಂದಿಸ್ಲಿಕ್ಕ ಟ್ರೈ ಮಾಡಿದ್ಕ, ಇತನ ಮಖಾ, ಎದಿ, ಕೈ ಚೂರು ಚೂರು ಬೆಂಕಿ ಹತ್ತಿ, ಅಕಿ ಜತಿಗೆ ಈತನೂ ಟ್ರೀಟ್ ಮೆಂಟ್ ತಗೊಂಡಿದ್ದ ಆದ್ರ ಮುನ್ನಕ್ಕಗ ಅಕಿ ಗಂಡನಾ ಬೆಂಕಿ ಹಚ್ಚಾನ ಅಂತ ಅವರಪ್ಪ ಅವ್ವಾರು ಕಂಪ್ಲೇಂಟ್ ಮಾಡಿದ್ರು,ಬಳ್ಳಾರಿ ಕೋರ್ಟ್ ನೊಳಗ ಕೇಸ್ ವಿಚಾರಣಿಗೆ ಇನ್ನೂ ಸಾಕ್ಷಿ ಬೇಕು ಅಂತ ಅದೇನೋ ಪರೀಕ್ಷೆ ಮಾಡಿದ್ರಂತ್ಯ, ಅವಾಗ ರಕ್ತ ಪರೀಕ್ಷದಾಗ ಮೋನಣ್ಣನಂಗಾ ಕೇಸ್ ಆತಂತ ಅಂತ ಸುದ್ದಿ ಕೇಳಿದ್ದು ಬರದೀನಿ, ಆತೀಗ ಬಳ್ಳಾರಿ ಓಪಿಡಿಯೊಳಗ ಕೆಲ್ಸ ಮಾಡತಾನ. ಅತನ್ನ ಈ ಕೇಸಿನ ಬಗ್ಗೆ ಪೂರಾ ಕೇಳಿ ನಡದ ಕತಿನ ಮತ್ತೊಮ್ಮಿ ಬರಿತೀನೇಳ್ರಿ…