ಇರುವೆ ಸಾವು
-1-
ಶತ
ಮಾನದ ಹಿಂದೆ
ಮೈ ಅಂಗಿ ಬಿಚ್ಚೆಸೆದ ದಿನ
ಲೋಕದ ಸಾವಿರಾರು ಕ್ಯಾಮರಾಕಣ್ಣುಗಳು
ಕಿಲಕಿಲನೆ ಕ್ಲಿಕ್ಕಿಸಿದವು
ಬುಸುಗುಡುವ ನೂರಾರು ಮಿಡಿನಾಗರಗಳು
ಸಟ್ಟನೆ ಸೆಟೆದೆದ್ದು ನಿಂತು ಚೀತ್ಕರಿಸಿದವು
ಬ್ರಹ್ಮಾಂಡ ಜಯಿಸಿದ ಮಂಗವೊಂದು
ಆಕಾಶದೆತ್ತರಕೆ ಬೆಳೆದು ಇನ್ನಷ್ಟು ಕಾಣಲೆಂದು
ಠಣ್ಣನೆ ಕಪಿಗುಡ್ಡವೇರಿ ಥಕಥೈ ಥಕಥೈ ಕುಣಿಯುತ್ತಿತ್ತು
ಕಂಡಕಂಡವರನು ಬಯ್ಯುತಲಿತ್ತು
ಕಾಣುವುದೆಲ್ಲ ಕಂಡದ್ದಾಯ್ತು; ಕೇಳುವುದೆಲ್ಲ ಕೇಳಿದ್ದಾಯ್ತು
ಮಾಡುವುದೆಲ್ಲ ಮಾಡಿದಂತೊಮ್ಮೆ
ಚರಿತ್ರೆ ಸೇರುವ ಸುಳಿಯಿಂದೊಮ್ಮೆ
ಸುಂಯ್ಯಿಗುಟ್ಟಿತು
ದೇಹದ ಒಳಗೆ ಪ್ರಾಣದ ಓಟ
ತೊಂಡೆಕಾಟ ಆಡಿಸಿದಂತೆ- ಬರಿಮೈ ಗೋಣಾಟ
ಗುಡುಗುಡು ಮುತ್ಯಾ ಬಾರೋ ಗುಡಿಗೋಪುರಗಳ ತೋರೋ…
ಅಟ್ಟಹಾಸದಿ ನಗುನಗುತಿರಲು
ಥಟ್ಟನೆ ಏನೋ ಆದಂತಾಗಿ…
ಯಾರದು ಕೂಗು: ಬೇಡ ಬೇಡ ಬೇಡ, ಬೇಡವೋ ಬೇಡ
ಎಗರಬೇಡ…
ಹಿಡಿರಲೆ ಅವನ್ನ … ತಡಿರಲೆ ಅವನ್ನ…
ಹನುಮನ ಬಾಲಕೆ ಯಾರೋ ಲಗ್ಗೆ
-2-
ಇಂದು ನಿನ್ನೆಯಾಗಿ
ನಿನ್ನೆ ಮೊನ್ನೆಯಾಗಿ
ಇದೇನು ಕಾಲಕಂಬ ಹಿಂದಕ್ಕೆ
ಜಗ್ಗಿ, ಸದ್ದುಗದ್ದಲವಿರದ ಅಖಂಡ ಪ್ರದೇಶದೊಳಕ್ಕೆ
ನೂಕೇ ಬಿಟ್ಟರು; ಮಾನವಂತ ಮನುಷ್ಯನೆಂದು ಬೆನ್ನು ತಟ್ಟಿದರು
ದಾರಿಬಿಡಿ ದಾರಿಬಿಡಿ ಮಹಾಮಾನವರು ಬರುತ್ತಿದ್ದಾರೆ
ಅಂದು ಯಾರಂದಿಲ್ಲ? ದಾರಿ
ತನ್ನಿಂದ ತಾನೆ ಚದುರಿ ನಿಂತು
ಚಿಂತಿಸಿತು
-3-
ಅಕ್ಷರಗಳನ್ನು ಪಕಪಕನೆ ಮುಕ್ಕುತಲಿದ್ದೆ
ಕಡಲ ಹೊಟ್ಟೆಯಲಿ ಶಂಖದ ಚಿಟ್ಟೆ
ಮೈಯ ತುಂಬ ಸಂಗೀತ ಬಟ್ಟೆ;
ಸಿಡಿಲ ಮಳೆ ಮೂಗಿಗೆ
ಅದೇ ಆಗ ಹೊಡೆದ ಎಂಡ್ರೆಣ್ಣೆ ನಾತ
ಮೆದುಳಲಿ ಹಸಿಬಿಸಿ ಕಗ್ಗನ್ನಡ
ಗೀಚೆಗೀಚುತ್ತ ಹೀಚಿ ಹೀಚಿ ತಿನ್ನು
ತಿನ್ನು ಅನ್ನುತಲಿತ್ತು: ಪೆನ್ನು
ಕಣ್ಣ ಮುಂದೆ ಇರುವೆ ಸಾವು
ಚಿತ್ರವೂ ಆಗದ ಚಿತ್ತಕ್ಕೂ ಸಿಗದ
ಕಾಮರ್ೊಡ ಕತ್ತಲು
ಓ ಅಯ್ಯ ಸ್ವಾಮಿ ಗುರು ಅಪ್ಪದೇವರೇ
ಬೆಳಕು ತೋರಿಸಿ ನನಗೆ
ನಿಮ್ಮ ಶಿಷ್ಯತ್ವವನ್ನು ದಯಪಾಲಿಸಿ
ಆಗದು… ಎಂದಾದರೆ
ನಿಮ್ಮ ಅಂಗಾಲ ಕಿರುಬೆರಳನ್ನಾದರೂ
ಸ್ಪಶರ್ಿಸುವ ಭಾಗ್ಯ ಕಲ್ಪಿಸಿ
–
ಕ್ರೌರ್ಯ
ಢಾವು ಹಾಕಿ ಕೂತಿದೆ ಇಲಿಗೆ
ನಿಶ್ಚಲವಿರುವ ಯಾವುದನು ತಡುವಕೂಡದೆಂದು
ನಿಶ್ಚಯಿಸಿದಂತಿರುವ ಬಾವುಗವೊಂದು
ಉಗುರಿನಿಂದ ಕಾಲು ಕೆದರಿ
ಕತ್ತಿಯಂತೆ ಝಳಪಿಸುತ್ತ
ಮೀಸೆ ಮೈ ನಿಮಿರಿಸಿ
ಮುಷ್ಠಿಯನು ಮೆಲ್ಲಗೆ ಸಡಲಿಸುತ್ತ
ಗದ್ದಲಕೆ ಒಂದಿನಿತೂ ಆಸ್ಪದವೀಯದೆ
ಗಾಳಿಯನು ಕತ್ತರಿಸುವದು, ಬಾಯಿ ಅಗಲಿಸುವದು
ಅರೆಗಣ್ಣು ಬಿಟ್ಟ ಇಲಿ
ಕಣ್ಣಲ್ಲೇ ಜೀವ ಹಿಡಿದು ಭಯದಿ
ಠಕ್ಕು ನಿದ್ರೆಗೊರಳಿದೆ
ಕ್ರೌರ್ಯ ಕರಗಿ ನೀರಾಗಿ ಹರಿವ ಸಂಭವದಲ್ಲಿ
ಇರುವೆಯೊಂದು ಎಡತಾಕಿ
ದುರುಗುಡುತ್ತ ನಡೆದಿದೆ







ANUBHAAVI KAVITEYANTIDE–RAJU HEGDE