ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿರಾ ಅಜ್ಜಿಮನೆ to ಇಂಗ್ಲೆಂಡ್

ವಿದೇಶಿಗರ ಸ್ವದೇಸಿ ಸಂವೇದನೆಗಳು!?

ಡಾ ಪ್ರೇಮಲತ ಬಿ

ಭಾರತದಲ್ಲಿದ್ದಾಗ ಪಶ್ಚಿಮ ಘಟ್ಟಗಳಲ್ಲಿ ಪ್ರತಿ ವರ್ಷ ಎರಡೆರಡು ಬಾರಿ ಚಾರಣಕ್ಕೆ ಹೋಗ್ತಿದ್ವಿ. ಕೈಯಲ್ಲಿ ಮಚ್ಚು, ಮನಸ್ಸಲ್ಲಿ ಕೆಚ್ಚು. ಕಷ್ಟ ಬಂದ್ರೆ ಕರೆಯೋಕ್ಕೆ ದೇವರದೊಂದೆ ನಂಬರು! ನೋಡ್ತಿದ್ದ ಹಾವುಗಳೆಷ್ಟು, ಆನೆ-ಸಲಗಗಳೆಷ್ಟು. ಮರದ ಮೇಲೆ ಚಿರತೆ ಉಗುರಿನ ಗುರುತು ನೋಡ್ಕೊಂಡು ಡವಗುಡುವ ಹೃದಯಾನ ಗಟ್ಟಿ ಮಾಡ್ಕೊಂಡು ಆಕಾಶದ ಕೆಳಗೋ, ಬಟಾಬಯಲಿನಲ್ಲೋ, ಹಳೇ ಮಂಟಪದಲ್ಲೋ ಮಲಗಿಕೊಂಡ್ರೆ, ಅರೆಕ್ಷಣದಲ್ಲಿ ನಿದ್ದೆ.

ಮೊಣಕಾಲ ಕೆಳಗೆ ನಮಗೆ ಪಾದಗಳಿದ್ದದ್ದೇ ಗೊತ್ತಾಗ್ತಾ ಇರಲಿಲ್ಲ. ಇಂಬಳಗಳು ರಕ್ತ ಕುಡಿದು ಸಾಕಾಗಿ ಬಿದ್ದು ಹೋದ ನಂತರದ ರಕ್ತಸ್ರಾವವಷ್ಟೇ ಕಣ್ಣಿಗೆ ಬೀಳುತ್ತಿದ್ದುದು. ಹಸಿರು ಹಾವು, ಕೊಳಕು ಮಂಡಲ, ಕಾಳಿಂಗಗಳ ಹೇರಳ ದರ್ಶನವೂ ಆಗೀಗ ಆಗುತ್ತಿತ್ತು!

forest-tree-370x315ಇಂಗ್ಲೆಂಡ್ ದೇಶಕ್ಕೆ ಬಂದ ಹೊಸತು. ಕಾರುಚಾಲನೆ ಕಲೀತಾ ಇದ್ದೆ. ವಯಸ್ಸಾದ ಗುರುಗಳು ಪಕ್ಕದಲ್ಲಿ ಕುಳಿತು ಹೇಳಿ ಕೊಡ್ತಾ ಇದ್ರು. ಒಂದು ದಿನ ಯಾವುದೋ ಹೊಸ ರಸ್ತೆಗೆ ಹೋದ್ವಿ. ನನ್ನ ಗುರುವರ್ಯನ ಮುಖ ಯಾಕೋ ಕೆಂಪಗಾಯ್ತು!
ಬುದ್ದಿಯ ದೀವಿಗೆ ಹೊತ್ತಿಕೊಂಡಿತು!  ಆತನ ದ್ವನಿ ಆಳವಾಯ್ತು! ರಸ್ತೆ ಬದಿಯಲ್ಲಿ ನಿಧಾನವಾಗಿ ಚಲಿಸಲು ಎಚ್ಚರಿಕೆಯ ಸಲಹೆಗಳು ಬರಹತ್ತಿದವು!.

ಏನೋ ಗಂಡಾಂತರ ಬಂತಲ್ಲಪ್ಪ ಅಂತ ನಾನು ಗುರುವಿನ ಕಡೆ ಆಗಾಗ ನೋಡಹತ್ತಿದೆ. ನನ್ನ ಗುರು, ನಾನು ಏಕಾಗ್ರತೆ ಕಳಕೊಳ್ಳದಂತೆ ಎಚ್ಚರಿಕೆ ವಹಿಸಿ, ಭಾರೀ ಕಾಳಜಿಯಿಂದ ಹೇಳಿದ. ‘ಹೆದರ್ಕೋಬೇಡ, ಆದ್ರೆ ಈ ರಸ್ತೇಲಿ ಆಗಾಗ ‘ಹೇಸರಗತ್ತೆಗಳು’ (Mules) ಕಾಣಸಿಗ್ತವೆ. ಆವು ರಸ್ತೆ ದಾಟೋದನ್ನ ನಾನು ತುಂಬ ಸಾರಿ ನೋಡಿದ್ದೇನೆ’ ಅಂದ!

ಟಾಟಾ ಸುಮೊದಲ್ಲಿ ಮುತ್ತತ್ತಿ ಕಡೆ ಚಾರಣಕ್ಕೆ ದಾರಿ ಹುಡುಕಿ ತೆರಳುತ್ತಿದ್ದಾಗ ಆನೆಗಳ ಹಿಂಡೇ ಎದುರಾದದ್ದು ನನ್ನ ಮನಸ್ಸಿನಲ್ಲಿ ಹಾದುಹೋಯ್ತು. ಆ ಗಳಿಗೆ, ಮಾತುಕತೆಯ ಎಲ್ಲ ಶಿಷ್ಟಾಚಾರಗಳನ್ನ ಬದಿಗೊತ್ತಿ ನಾನು ನಗಹತ್ತಿದೆ. ಅವನಿಗೋ ಪೂರ್ತಿ ಮುಜುಗರ!! ನನ್ನ ನಗು ನಿಲ್ಲಲು ಕೆಲವು ನಿಮಿಷಗಳೇ ಬೇಕಾದವು. ಆಮೇಲೆ ‘ಸಾರಿ’ ಕೇಳಿ ವಿವರಣೆ ನೀಡಿದ್ದಾಯ್ತು. ಮೂರನ್ನು ಆರು ಮಾಡಿ ಮಾತಾಡಿ, ಪ್ರಪಂಚಾನೇ ಆಳಿದ ಇವರ ಬಣ್ಣನೆಯ ಆಳ ಯಾರಿಗೆ ಗೊತ್ತಿಲ್ಲ. ಆದ್ರೆ ‘ಹೇಸರಗತ್ತೆ’ ಗೂ ಇಷ್ಟೊಂದು ವರ್ಣನೆಯೇ!!

ಶಿರಾ ತಾಲ್ಲೂಕಿನಲ್ಲಿ ಅಜ್ಜಿ ಮನೆ. ದೊಡ್ಡ ಮರದ ಕಂಬಗಳು. ಮರದ ತೊಲೆಗಳ ಅಟ್ಟ. ಜಂತಿಗಳ ಸೂರು.
ಸಣ್ಣ ಸಣ್ಣ ಗೂಡುಗಳು.ಮಾಡಿನಲ್ಲಿ ಗವಾಕ್ಷಿ!! ಆಲ್ಲಿಗೆ ಹೋಗಿ ಮುವತ್ತು ವರ್ಷಗಳಾದವು. ದೊಡ್ಡ ನಗರಗಳಲ್ಲಿ ಬೆಳೀತಿದ್ದ ನಮಗೆ, ಸಣ್ಣ ಮಕ್ಕಳಿದ್ದಾಗ ‘ಅಜ್ಜಿ ಮನೆ’ ಅಂತ ಪ್ರೀತಿ ಇದ್ದ್ರೂ , ಏನೋ ಜಂಬ. ಅಸಡ್ದೆ. ಹಳೇ ಕಾಲದ ಮನೆ, ಹಳ್ಳಿ ವಾತಾವರಣ ಅಂತ ನಿರ್ಲಕ್ಷ್ಯ. ಜೊತೆಗೆ ನಾವು ಆಧುನಿಕ ತಲೆಮಾರು ಅನ್ನೋ ದೊಡ್ಡಸ್ತಿಕೆ!.

ಇತ್ತೀಚೆಗೆ,  ಇಂಗ್ಲೆಂಡ್ ನಲ್ಲಿ  ಮಕ್ಕಳ ಶಾಲೆಯ ಸರಹದ್ದಿನಲ್ಲಿ ಮನೆಗಳ ಹುಡುಕಾಟ ನಡೆದಿತ್ತು. ಶಾಲೆಗೆ ಹತ್ತಿರ ಇದ್ದ ಮನೆಗಳೆಲ್ಲ ಭಾರೀ ಹಳೆ ಮನೆಗಳು. ಗತಿಯಿಲ್ಲ ಅಂತ ನೋಡಲು ಹೋದ್ವಿ. ಇದು 85 ವರ್ಷದ ಹಳೆ ಮನೆ, ಈ ತೊಲೆಗಳಿರೋ ಮಾಡು, ಮುಂದಿರೋ ಜಗಲಿ, ತಲೆ ತಗ್ಗಿಸಿ ಒಳಗೋಗೊ ಕೋಣೆಗಳ ಆಕರ್ಷಣೆ, ಈ ಮಾದರಿ ಮನೆಗಳಿಗೆ ಭಾರೀ ಬೇಡಿಕೆ, ಅದಕ್ಕೆ ಈ ಮನೇಗೆ ಅರ್ಧ ಮಿಲಿಯನ್ ಪೌಂಡುಗಳು ಅಂತ ಮನೆ ತೋರಿಸಲು ಬಂದಿದ್ದ ಭಂಟ ಭಾಷಣ ಬಿಗೀತಿದ್ದ.

ಮುಂದುವರೆದ ದೇಶ, ಆಧುನಿಕ ಜೀವನ, ಹೊಚ್ಚ ಹೊಸಾ ಅನುಭವ ಅಂತ ಇಂಗ್ಲೆಂಡ್ ದೇಶಕ್ಕೆ ಬಂದರೆ ಕೊನೆಗೆ ಈ ಹಳೆ ಮನೆ ಅದರ ಜೊತೆಗೆ ಹೆಚ್ಚು ದುಡ್ದು ಬೇರೆ ಕೊಡ್ಬೇಕ ಶಿವನೆ? ಅನ್ನೋ ಯೋಚನೆ ಜೊತೆಗೆ ಭ್ರಮನಿರಸನ ಆಗದೆ ಇರಲು ಸಾದ್ಯಾನೆ? ಹಳೆಯದನ್ನು ಅತ್ಮೀಯವಾಗಿ ಉಳಿಸಿಕೊಳ್ಳುವುದರಲ್ಲಿ ಎತ್ತಿದ ಕೈ ಈ ಇಂಗ್ಲೀಷಿನವರದು. ಅಜ್ಜಿ ಮನೆ ಇದರ ನಾಲಕ್ಕರಷ್ಟು ದೊಡ್ದದಿತ್ತು ಅಂತ ನೆನೆಸಿಕೊಂಡಾಗ ‘ಜೊತೆಗೆ ಕೊಟ್ಟಿಗೆ ಇಲ್ವ?’ ಅಂತ ಕೇಳೊ ಮನಸ್ಸಾಯ್ತು!

ಭಾರತಕ್ಕೆ ಬಂದಾಗ ನಮ್ಮ ಸ್ವದೇಶಿ ಅಡುಗೆಗೆ ಬೇಕಾದ ಪರಿಕರಗಳನ್ನೆಲ್ಲ ಹೊಂಚಿಕೊಂಡು ಸೂಟುಕೇಸುಗಳಲ್ಲಿ ಹೊತ್ತುಕೊಂಡು ಹೋಗುವ ಪಾಡು ವಿದೇಶಿವಾಸಿಗಳದ್ದು. ಪ್ರತಿಬಾರಿ ಒಂದಿಲ್ಲೊಂದನ್ನು ಪ್ರಯತ್ನ ನಡೆಯುತ್ತಲೇ ಇರುತ್ತದೆ.

ಅವತ್ತು ಮಟ ಮಟ ಮಧ್ಯಾಹ್ನ ಪಾತ್ರೆ ಅಂಗಡೀಲಿ ಗುಂಡು ಇಡ್ಲಿ ಪಾತ್ರೆ, ಮಿಕ್ಸಿ ತಗೊಳೋಣ ಅಂತ ಹೋಗಿದ್ದೆ. ‘ಎಲ್ಲಿದ್ದೀರ ಮೇಡಂ?’ ಪಾತ್ರೆ ಅಂಗಡಿ ಮಾಲೀಕ ಕೇಳಿದ. ಇಲ್ಲೆ ವಿಜಯನಗರ ಕಣಪ್ಪ ಅಂದೆ. ಅಲ್ಲ ಮೇಡಂ, ಎಲ್ಲಿಂದ ಬಂದಿದ್ದೀರ ಅಂತ ಕೇಳಿದ್ದು ಅಂದ! ‘ಎಲಾ ಇವನ? ಇನ್ನೂರೈವತ್ತು ರೂಪಾಯಿ ಚೂಡಿದಾರ ಹಾಕಿದ್ದೀನಿ, ಕನ್ನಡದಲ್ಲಿ ಮಾತಾಡ್ತಾ ಇದ್ದೀನಿ, ನೋಡಕ್ಕೆ ಇವನ ಥರಾನೆ ಇದೀನಿ, ಪಟ್ ಅಂತ ಪರದೇಸಿ ಅಂತ ಕಂಡು ಹಿಡಿದನಲ್ಲ! ಭಾರೀ ಚುರುಕು’ ಅಂದುಕೊಂಡೆ.
ಮಗನಿಗೆ ದೇಸಿ ಬಟ್ಟೆ ತಗೋಳೋಣ ಅಂತ ಹೋದಾಗ್ಲೂ ಇದೇ ಅನುಭವ. ಈ ಸರ್ತಿ ಇನ್ನು ಚಿಕ್ಕ ವಯಸ್ಸಿನ ಅಂಗಡಿಯ ಮಾಲೀಕ!!!

she forestಜೊತೇಲಿದ್ದ ಅಕ್ಕ ‘ಬಹುಷಃ ನೀನು ಕನ್ನಡದಲ್ಲಿ ಮಾತಾಡಿದ್ದಕ್ಕೆ ಅವನಿಗೆ ತಿಳೀತು ಅನ್ನಿಸುತ್ತೆ ಅಂದಳು.’, ಇದ್ಯಾವ ನ್ಯಾಯ  ಸ್ವಾಮಿ, ಪರದೇಶದಲ್ಲಿ ಬರೀ ಆಂಗ್ಲ ಭಾಷೇಲಿ ಮಾತಾಡಿ, ಕರ್ನಾಟಕಕ್ಕೆ ಹೋಗಿ ಬಾಯ್ತುಂಬ ಕನ್ನಡ ಮಾತ್ತಾಡಂಗೂ ಇಲ್ವ.?! ಅಥವ ಮಾತಾಡಿದ್ರೆ ನಮ್ಮ ಪರದೇಶಿ ಸ್ಥಾನ ಬಟಾಂಬಯಲಾ? ದೂರದ ದೇಶದಲ್ಲಿ ಪರಕೀಯರಿರಲಿ, ನಮ್ಮ ದೇಶದಲ್ಲೂ ಪರಕೀಯರಾಗಿಬಿಟ್ವಲ್ಲ ಅಂತ ಹಪಹಪಿಸಿದೆ.

ಇಂಗ್ಲೆಂಡಿನ ಹೊಸ ಊರಿಗೆ ಕೆಲಸ ಅರಸಿ ಬಂದು ನೆಲೆಸಿದ್ದೆವು. ಇಲ್ಲಿ ಕನ್ನಡಿಗರು ಯಾರೂ ಇರಲಿಲ್ಲ. ಮಕ್ಕಳಿಗೆ ಕನ್ನಡ ವಾತಾವರಣ ಸ್ನೇಹಿತರ ಮೂಲಕ ದೊರೆಯುವ ಸಾಧ್ಯತೆಗಳಿರಲಿಲ್ಲ. ಮಕ್ಕಳ ಶಾಲೆಯ ರಜಾದ ಸಮಯ ಹತ್ತಿರವಾದಂತೆ, ನಾನಿರೋ ಕಡೆ ಕನ್ನಡಿಗರ್ಯಾರೂ ಗೊತ್ತಿಲ್ಲ ಕಣೆ, ಭಾರೀ ಬೇಜಾರು. ಮಕ್ಕಳ್ನ ಕರ್ಕೊಂಡು ಬಂದು, ನಿಮ್ಮನೇಲಿ ಒಂದು ತಿಂಗ್ಳು ಇದ್ದೋಗ್ತೀನಿ ಅಂತ ಭಾರತದಲ್ಲೀರೊ ಅಕ್ಕನಿಗೆ ದೂರವಾಣಿ ಕರೆ ಹಚ್ಚಿದೆ.

ಆಗತ್ಯವಾಗಿ ಬಾ, ನೀವು ಬಂದಾಗ ನಮ್ಮ ಇಂಗ್ಲಿಷೂ ಸ್ವಲ್ಪ ಸುದಾರಿಸುತ್ತೆ ಅಂದ್ಲು ಅಕ್ಕ! ಮಕ್ಕಳನ್ನ ಕರ್ನಾಟಕಕ್ಕೆ ಕರಕೊಂಡು ಹೋದ್ರೆ ಮಕ್ಕಳ ಕನ್ನಡ ಸುಧಾರಿಸುತ್ತೆ ಅನ್ನೋ ನನ್ನ ಲೆಕ್ಕಚಾರ ಕಕ್ಕರಮಕ್ಕರವಾಗಬೇಕೆ?!

ಇಂಗ್ಲೆಂಡಿನ ಗಾಜಿನ ಮನೇಲಿ ಕೂತು ಹೊರಗಿನ ವಿಶಾಲವಾದ ಹಸಿರು ಉದ್ಯಾನ ನೋಡ್ತಿದ್ದೆ. ಸುಂದರ, ಅತಿ ಸುಂದರ. ಇದನ್ನೇ ಕರ್ನಾಟಕದಲ್ಲಿ ನಿಭಾಯಿಸಬೇಕಂದ್ರೆ ಜಾಗಕ್ಕೆ ಇನ್ನಿಲ್ಲದ ಬೆಲೆ, ನೀರಿಗೆ ಬರ! ಈ ದೇಶದ ಹುಲ್ಲು ಹಾಸನ್ನು ಆರಾಮಾಗಿ ಅನುಭವಿಸೋಣ ಅಂದ್ರೆ, ಬಹುಷಃ ವರ್ಷಕ್ಕೆ ಮೂರು ದಿನ ಅದರಲ್ಲೂ ಮೂರುತಾಸು ಮಾತ್ರ ಸಾಧ್ಯ. ಮಿಕ್ಕಂತೆ ಒಂದಿಲ್ಲೊಂದು ಹವಾಮಾನ ವೈಪರೀತ್ಯ!

ಅಕ್ಕ ಮತ್ತು ಅಕ್ಕನ ಮಗಳು ನಮ್ಮ ದೇಶದಿಂದ ಇಲ್ಲಿಗೆ ಬಂದಿದ್ದರು. ಹದಿನೈದು ವರ್ಷದ ಅಕ್ಕನ ಮಗಳು ‘ಮಾರ್ಕ್ ಅಂಡ್ ಸ್ಪೆನ್ಸರಿನ’ ಅಂಗಿ, ‘ಆಡಿದಾಸ್ ಶೂ’ , ‘ಡೆಬೆನ್ಹ್ಯಮಿನ’ ಗನ್ ಷಾಟ್ ಜೀನ್ಸ್ ಧರಿಸಿ ನಮ್ಮನೆಗೆ ಕಾಲಿಟ್ಟಾಗ, ನಮಗೇ ಅರೆಗಳಿಗೆ ದಂಗು!.

‘ಹೊಸಾ ಸ್ಟ್ಯೆಲು ಬರ್ತಿದ್ದಂಗೆ, ನಾನು, ನನ್ನ ಗೆಳತೀರು ಎಲ್ಲ ಹೋಗಿ ಕೊಂಡುಕೋತೀವಿ ಚಿಕ್ಕಮ್ಮ’ ಅಂತ ಹೇಳ್ದಾಗ ಭಾಸುಮತಿ ಅಕ್ಕಿ ಎರಡು ಪೌಂಡು ಅಗ್ಗ ಅಂತ ಹದಿನೈದು ಮೈಲಿ ಗಾಡಿ ಚಲಾಯಿಸಿ, ಸೇಲಿನಲ್ಲಿ ಉಡುಪು ಖರೀದಿಸಿ, ಮಕ್ಕಳಿಗೆ ಕನ್ನಡ ಕಲಿಸಿ, ದೇಸೀ ಉಡುಪು ಹಾಕಿ ಸಂತೋಷ ಪಡೋ ನಮ್ಮ ಕನ್ನಡಿಗರ ಪರದೇಸಿ ಬದುಕು ಗಾಜಿನ ಮನೇಲಿ ಕೂತು, ಹೊರಗಿನ ಹುಲ್ಲು ಹಾಸನ್ನು ನೋಡಿ ಆನಂದಿಸೋ ಲೆಕ್ಕಾನೇ ಹೌದಾ ಅನ್ನೋ ಕೌತುಕ ನನ್ನನ್ನು ಬಾಧಿಸದೆ ಬಿಡಲಿಲ್ಲ!. ಬದುಕೇ ಹೀಗಲ್ಲವೇ?

‍ಲೇಖಕರು admin

20 December, 2016

4 Comments

  1. Sarojini Padasalagi

    ಮನುಷ್ಯ ಸ್ವಭಾವದ ಸರಳ ,ಸಹಜ ,ಸುಂದರ ಚಿತ್ರಣ ಪ್ರೇಮಲತಾ ಅವರೇ !! ತನ್ನಲ್ಲಿಲ್ಲದರತ್ತಾನೇ ಆಕರ್ಷಣೆ ಹೆಚ್ಚಲ್ಲವೇ !? ಅಲ್ಲಿ ಹುಲ್ಲು ಹಾಸಿನ ಸೌಂದರ್ಯ ಸವಿಯಲಾಗದಿದ್ದರೂ ,ಆ ಹವಾಮಾನ ವೈಪರೀತ್ಯದಲ್ಲೂ ಏನೋ ಒಂದು ಅನಿರ್ವಚನೀಯ ರಮಣೀಯತೆ ನಾ ಕಂಡೆ ನನ್ನ ಮಗನ ಕಡೆ ಹೋದಾಗ.ಪ್ರಕೃತಿ ಚಿರ ನೂತನ ತಾನೇ ? ಅದರಂತೆಯೇ ಮಾನವ ಸ್ವಭಾವವೂ ಹೊಸ ಹೊಸತನ್ನೇ ಬಯಸುವ ,ಅರಸುವ ಚಂಚಲತೆಯ ಗೂಡು .ಪಾಶ್ಚಿಮಾತ್ಯರ ಉತ್ಪ್ರೇಕ್ಷಣೆಯ ನಡತೆಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ .ನಾವು ದಿನ ನಿತ್ಯ ನೋಡುವ ,ಅನುಭವಿಸುವ ಘಟನೆಗಳ ಚೆಂದದ ಬರಹ ವಿದೇಶದಲ್ಲಿರುವ ಸ್ವದೇಶೀಯರ ತಾಯ್ನಾಡಿನ ,ತನ್ನತೆಯ ಹಂಬಲ ,ಮಿಡಿತ ಮನ ತಟ್ಟುವಂಥದು .

  2. Sumithra.lc

    ಇಲ್ಲಿ ನೀರಿನ ಸಮಸ್ಯೆ ಇಲ್ಲ …..ಎಲ್ಲರ ಮನೇಯಲ್ಲು ಲಾನ್ ಹೂಗಿಡ ಸಾಮಾನ್ಯ. ಡೆಕಾತ್ಲಾನ್ ನಲ್ಲಿ ನೀವು ಹೇಳಿದ ಎಲ್ಲ ವಸ್ತುಗಳೂ ಸಿಗುತ್ತವೆ. ಮನೆಯಲ್ಲಿ ಕುಳಿತು ಅಮೆಝಾನ್ ಮೂಲಕ ಬೇಕಾಗಿದ್ದನ್ನು ತರಿಸ ಬಹುದು..

  3. Anonymous

    ಪರದೇಶ ಸ್ವದೇಶಗಳ ಸುಂದರ ಚಿತ್ರಣ… ಲೇಖನ ತುಂಬಾ ಚೆನ್ನಾಗಿದೆ….

  4. H.R.Sujatha

    Uttama Baraha. Hosadannu hudukuvudu
    Haleyadannu tadaki midityuvudu badukina niyamavenu?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading