'ಶಿಕ್ಷಕರ ದಿನಾಚರಣೆ- ಕೆಲವು ಅನಿಸಿಕೆಗಳು' – ನಾ ದಿವಾಕರ

divakar

ನಾ ದಿವಾಕರ

ಕೆಲವೇ ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮತ್ತು ಭ್ರಷ್ಟಾಚಾರ ವಿರೋಧಿ ಅಂದೋಲನ ದೇಶದ ಪ್ರಜ್ಞಾವಂತ ಸಮಾಜದ ಮುಂದೆ ಒಂದು ಬೃಹತ್ ಸವಾಲನ್ನು ತಂದು ನಿಲ್ಲಿಸಿತ್ತು. ಹಜಾರೆ ತಂಡದ ಹೋರಾಟ ಮತ್ತು ತದನಂತರದ ಬೆಳವಣಿಗೆಗಳ ಸಾಫಲ್ಯ ವೈಫಲ್ಯಗಳು, ಫಲಾಫಲಗಳು ಏನೇ ಇರಲಿ, ಈ ದೇಶದ ಆಂತರಿಕ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟಾಚಾರವನ್ನು ಹೋಗಲಾಡಿಸುವ ಪ್ರಜ್ಞೆಯಂತೂ ಜನಸಾಮಾನ್ಯರಲ್ಲಿ ಮೂಡಿರುವುದು ಸತ್ಯ. ಆದರೆ ಹೋರಾಟದ ಯಶಸ್ಸಿನ ಮತ್ತಿನಲ್ಲಿ ಕೆಲವು ವಾಸ್ತವ ಸಂಗತಿಗಳನ್ನು ಮರೆಯುವ ಸಂಭವವೂ ಇರುವುದರಿಂದ ಭ್ರಷ್ಟಾಚಾರದ ವ್ಯಾಪ್ತಿ ಮತ್ತು ಆಳವನ್ನು ಸೂಕ್ತ ರೀತಿಯಲ್ಲಿ ಗ್ರಹಿಸಿ ಒಂದು ಪ್ರಬುದ್ಧ ಸಮಾಜದ ನಿರ್ಮಾಣದತ್ತ ಹೆಜ್ಜೆ ಹಾಕುವುದು ಇಂದಿನ ತುರ್ತು ಅಗತ್ಯತೆಯಾಗಿದೆ. ಹಜಾರೆ ಹೋರಾಟವನ್ನೂ ಮೀರಿ ನೋಡಿದಾಗ ಅರಿವಾಗುವ ವಾಸ್ತವಗಳು ನಮ್ಮ ಆಧುನಿಕ ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಸಂಕೀರ್ಣತೆಗಳ ವಿರಾಟ್ ದರ್ಶನವನ್ನೇ ಮಾಡಿಸುತ್ತವೆ.
ಲೋಕಪಾಲ್ ಅಥವಾ ಜನಲೋಕಪಾಲ್ ಮಸೂದೆ ಸಾಂಸ್ಥಿಕ ಭ್ರಷ್ಟಾಚಾರವನ್ನು ತಡೆಗಟ್ಟುವ ಒಂದು ಸಾಂವಿಧಾನಿಕ ಸೂತ್ರ. ಒಂದು ಪ್ರತಿಬಂಧಕ ಕಾಯ್ದೆಯ ರೂಪದಲ್ಲಿ ದೇಶದ ಆಡಳಿತ ನಿರ್ವಹಣಾ ವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಡುವ ಒಂದು ಪ್ರಯತ್ನವನ್ನು ಇಲ್ಲಿ ಕಾಣಬಹುದಷ್ಟೆ. ಹಾಗಾಗಿ ಈ ಮಸೂದೆಯನ್ನು ಜಾರಿಗೊಳಿಸುವುದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೆಂದು ಭಾವಿಸಲಾಗದು. ಬದಲಾಗಿ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಬಹುದು. ಆದರೆ ಭ್ರಷ್ಟಾಚಾರವನ್ನು ಬೇರುಸಹಿತ ನಿರ್ಮೂಲ ಮಾಡಬಹುದಾದ, ಸಾಂವಿಧಾನಿಕ ಅಥವಾ ಶಾಸನ ಬದ್ಧ ಸಂಹಿತೆಗಳನ್ನೂ ಮೀರಿದ ಒಂದು ಸಾಮಾಜಿಕ ವಿದ್ಯಮಾನವೇನಾದರೂ ಇದಲ್ಲಿ ಅದು ಶಿಕ್ಷಣ ಕ್ಷೇತ್ರ ಮಾತ್ರ ಎಂಬ ಸಂಗತಿಯನ್ನು ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಒತ್ತಿ ಹೇಳಬೇಕಾಗಿದೆ. ಸಾಮಾಜಿಕ ಸ್ವಾಸ್ಥ್ಯತೆ ಮತ್ತು ಸಾಂಸ್ಕೃತಿಕ ಪರಿಶುದ್ಧತೆಯನ್ನು ಕಾಪಾಡುವುದೇ ಅಲ್ಲದೆ, ಭವಿಷ್ಯದ ಪೀಳಿಗೆಗೂ ಪರಭಾರೆ ಮಾಡುವ ಗುರುತರ ಹೊಣೆಗಾರಿಕೆ ಶಿಕ್ಷಕ ವೃಂದದ ಮೇಲಿರುವುದನ್ನು ಈ ಸಂದರ್ಭದಲ್ಲಿ ಮನಗಾಣಬೇಕಿದೆ.
images
ಹಜಾರೆ ನೇತೃತ್ವದ ಆಂದೋಲನದಲ್ಲಿ ಪ್ರಮುಖವಾಗಿ ಕಂಡುಬಂದಿದ್ದು ಈ ದೇಶದ ವಿದ್ಯಾರ್ಥಿ ಯುವಜನತೆ. ಇದು ಹೊಸ ವಿದ್ಯಮಾನವೇನೂ ಅಲ್ಲ. ವಸಾಹತುಶಾಹಿ ಕಾಲಘಟ್ಟದಿಂದಲೂ ಭಾರತದ ಇತಿಹಾಸದಲ್ಲಿ ಸಾಮಾಜಿಕ ಆಂದೋಲನಗಳಲ್ಲಿ ಈ ಸಮೂಹ ಸಕ್ರಿಯವಾಗಿದೆ. ಸ್ವಾತಂತ್ರ್ಯಾಂದೋಲನ, ಜಾತಿವಿನಾಶ ಆಂದೋಲನ, 1967ರ ಕ್ರಾಂತಿಕಾರಿ ಅಂದೋಲನ, 70ರ ದಶಕದ ದಲಿತ ಚಳುವಳಿ, ನಂತರದ ಜೆಪಿ ಆಂದೋಲನ ಹೀಗೆ ಎಲ್ಲಾ ಪ್ರಮುಖ ಹೋರಾಟಗಳಲ್ಲೂ ವಿದ್ಯಾರ್ಥಿ ಸಮುದಾಯ ಹೋರಾಟದ ಹಾದಿ ಕ್ರಮಿಸಿವೆ. ಆದರೆ ನವ ಉದಾರವಾದ ಮತ್ತು ಜಾಗತೀಕರಣದ ಪಾದಾರ್ಪಣೆಯ ನಂತರದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯಾರ್ಥಿ ಸಮುದಾಯ ಸಾರ್ವಜನಿಕ ಹೋರಾಟದಲ್ಲಿ ಭಾಗಿಯಾಗಿರುವುದು ಹಜಾರೆ ಅಂದೋಲನದ ವೈಶಿಷ್ಟ್ಯ. ಹೋರಾಟದ ಹುರುಪಿನಿಂದಲೇ ಭಾಗವಹಿಸಿರುವವರ ಸಂಖ್ಯೆ ಹೆಚ್ಚಾಗಿದ್ದರೂ, ಈ ಆಂದೋಲನದ ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಒಂದು ಸಾಮಾಜಿಕ ಪ್ರಜ್ಞೆ ಮೂಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ.
ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ಮೂಡಿರಬಹುದಾದ ಈ ಸಾಮಾಜಿಕ ಪ್ರಜ್ಞೆಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿ ರಕ್ಷಿಸುವ ಜವಾಬ್ದಾರಿ ಹಿರಿಯ ನಾಗರಿಕರ ಮೇಲಿದೆ. ಶಿಕ್ಷಕರ ದಿನಾಚರಣೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಆಚರಿಸಲಾಗುವುದಾದರೂ, ದೇಶದ ಜನಸಾಮಾನ್ಯರಲ್ಲಿ ಸಾಮಾಜಿಕ ಮೌಲ್ಯಗಳನ್ನು ಮೂಡಿಸಿ, ಪ್ರಬುದ್ಧ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುವ ನಿಟ್ಟಿನಲ್ಲಿ ಇದು ನಿತ್ಯಾಚರಣೆಯಾಗಿಯೇ ಕಾಣುತ್ತದೆ. ಇಂದು ದೇಶದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ, ಅಪ್ರಾಮಾಣಿಕತೆ, ದುರಾಚಾರ ಮತ್ತು ಪಾತಕೀ ಮನೋಭಾವಗಳೇನಾದರೂ ಹೆಚ್ಚಾಗಿದ್ದಲ್ಲಿ ಅದರ ಮೂಲ ಕಾರಣವನ್ನು ನಶಿಸಿಹೋಗುತ್ತಿರುವ ಸಾಮಾಜಿಕ ಮೌಲ್ಯಗಳಲ್ಲೇ ಕಾಣಬಹುದಾಗಿದೆ. ಶಿಕ್ಷಣ ಎಂದರೆ ಓದು-ಬರಹ ಕಲಿಸಿ, ಅನಕ್ಷರಸ್ತರನ್ನು ಅಕ್ಷರಸ್ತರನ್ನಾಗಿ ಪರಿವರ್ತಿಸಿ, ತಮ್ಮ ವ್ಯಕ್ತಿಗತ ಜೀವನ ರೂಪಿಸಿಕೊಳ್ಳಲು ಜನತೆಗೆ ನೆರವಾಗುವ ಒಂದು ಸಾಧನ ಎಂದೆಣಿಸಿದಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಸಾಧನೆ ಅಪಾರ ಎಂದೇ ಹೇಳಬಹುದು.
ಶಿಕ್ಷಣ ಕೇವಲ ಜೀವನ ನಿರ್ವಹಣೆಗೆ ಮಾರ್ಗ ಮಾತ್ರವಲ್ಲ. ಒಂದು ಸಮಾಜ ನಿಮರ್ಾಣದ ಹೆದ್ದಾರಿಯಾಗಿರುತ್ತದೆ. ಈ ಹಾದಿಯಲ್ಲಿ ಎದುರಾಗುವ ಸಂದಿಗ್ಧತೆಗಳು, ಎಡರು ತೊಡರುಗಳು, ಸವಾಲುಗಳು ಅನೇಕ ಬಾರಿ ಒಂದು ಸದೃಢ ಸಮಾಜವನ್ನೂ ವಿಚಲಿತಗೊಳಿಸಿಬಿಡುತ್ತವೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಮಾಜಿಕ ಮೌಲ್ಯಗಳು ಒಂದು ಪ್ರತಿಬಂಧಕ ವಿದ್ಯಮಾನವಾಗಿ ಪರಿಣಮಿಸುತ್ತವೆ. ಸಾಮಾನ್ಯವಾಗಿ ಮೌಲ್ಯಗಳನ್ನು ಧಾರ್ಮಿಕ-ಸಾಂಸ್ಕೃತಿಕ ನೆಲೆಗಟ್ಟಿನಲ್ಲೇ ವ್ಯಾಖ್ಯಾನಿಸಲಾಗುವುದಾದರೂ, ಭಾರತದಂತಹ ಬಹುಮುಖೀ, ಬಹುಸಂಸ್ಕೃತಿಯ ಸಮಾಜದಲ್ಲಿ ಮೌಲ್ಯಗಳನ್ನು ಮಾನವೀಯ ನೆಲೆಗಟ್ಟಿನಲ್ಲೇ ವಿಶ್ಲೇಷಿಸುವ ಅಗತ್ಯತೆ ಹೆಚ್ಚಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ತೀವ್ರತೆರನಾದ ಕೊರತೆ ಇರುವುದನ್ನು ಕಾಣಬಹುದು. ಈ ನ್ಯೂನತೆಯೂ ಸಹ ವ್ಯವಸ್ಥೆಯ ಒಂದು ಅಂಶಿಕ ಭಾಗವೇ ಆಗಿರುವುದರಿಂದ ಶಿಕ್ಷಕ ಸಮೂಹವನ್ನು ದೂಷಿಸಲಾಗುವುದಿಲ್ಲ.
ಈ ನ್ಯೂನತೆಗಳನ್ನು ಮೀರಿದ ದಾರ್ಶನಿಕ ದೃಷ್ಟಿಕೋನದಿಂದ ದೇಶದ ಯುವಪೀಳಿಗೆಯಲ್ಲಿ ಮೌಲ್ಯಗಳನ್ನು ಬಿತ್ತುವುದು ಶೈಕ್ಷಣಿಕ ಕ್ಷೇತ್ರದ ಆದ್ಯತೆಯಾಗಬೇಕಿದೆ. ವಿಪರ್ಯಾಸವೆಂದರೆ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಮಾಧ್ಯಮ, ಪಠ್ಯಕ್ರಮ ಮತ್ತು ಶೈಕ್ಷಣಿಕ ಕ್ಷೇತ್ರದ ಒಡೆತನಗಳು ಚರ್ಚೆಯಲ್ಲಿರುವುದೇ ಹೊರತು, ಶಿಕ್ಷಣದ ಮೂಲಕ ಒದಗಿಸಬಹುದಾದ ಮೌಲ್ಯಗಳನ್ನು ಕುರಿತ ಗಂಭೀರ ಚರ್ಚೆಗಳು ನಡೆಯುತ್ತಿಲ್ಲ.
ಸಂಸ್ಕೃತಿ ಎಂದರೆ ಪಾಶ್ಚಿಮಾತ್ಯ-ಪೌರ್ವಾತ್ಯ, ಮೌಲ್ಯವೆಂದರೆ ಸಾಂಪ್ರದಾಯಿಕ-ಆಧುನಿಕ ಎಂಬ ಸೀಮಿತ ದೃಷ್ಟಿಕೋನದ ವ್ಯಾಖ್ಯಾನಗಳು ನೈಜ ಮಾನವೀಯ ಮೌಲ್ಯಗಳ ಪ್ರಾಧಾನ್ಯತೆಯನ್ನೇ ಗೌಣವಾಗಿಸಿವೆ. ಇಂದು ಭಾರತೀಯ ಸಮಾಜದಲ್ಲಿ ಅವಶ್ಯಕವಾಗಿರುವುದು ಈ ಮಾನವೀಯ ಮೌಲ್ಯಗಳೇ. ಈ ನಿಟ್ಟಿನಲ್ಲಿ ಭ್ರಷ್ಟಾಚಾರವನ್ನೂ ವ್ಯಾಖ್ಯಾನಿಸಿದಾಗ, ಒಂದು ಮನಃಸ್ಥಿತಿಯಾಗಿ ಭ್ರಷ್ಟತೆ ಸಮಾಜದ ಎಲ್ಲ ರಂಗಗಳಲ್ಲೂ ವ್ಯಾಪಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಪ್ರಾಥಮಿಕ ಪೂರ್ವ ಶಿಕ್ಷಣದಲ್ಲೇ ವ್ಯಾಪಿಸಿರುವ ಡೊನೇಷನ್ ಹಾವಳಿ, ಶಿಕ್ಷಣ ವ್ಯವಸ್ಥೆಯಲ್ಲಿನ ಮೇಲು ಕೀಳುಗಳ ತಾರತಮ್ಯ, ಪಠ್ಯಕ್ರಮದಲ್ಲಿನ ತಾರತಮ್ಯ, ಶಿಕ್ಷಣ ಕ್ಷೇತ್ರದ ಖಾಸಗೀಕರಣ, ಶಿಕ್ಷಕರ ನೇಮಕಾತಿಯಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರ ಇವೆಲ್ಲವೂ ಸಾಮಾಜಿಕ ಮೌಲ್ಯಗಳನ್ನು ವಿನಾಶಗೊಳಿಸುವ ಪ್ರಭುತ್ವ ಪ್ರೇರಿತ ವಿದ್ಯಮಾನಗಳು. ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕ-ಅಧ್ಯಾಪಕ ಸಮುದಾಯಗಳಿಗೆ ಈ ವಿದ್ಯಮಾನಗಳನ್ನೂ ಮೀರಿ ನಿಲ್ಲುವ ದಾರ್ಶನಿಕತೆ, ದಾಷ್ಟ್ರ್ಯತೆ ಮತ್ತು ಪ್ರಬುದ್ಧತೆ ಇಂದಿನ ತುರ್ತು ಅಗತ್ಯತೆಯಾಗಿದೆ. ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಮನೋಭಾವಗಳಿಂದ ಜರ್ಝರಿತವಾಗಿರುವ ಆಧುನಿಕ ಸಮಾಜದಲ್ಲಿ ಈ ಮಾನವ ನಿರ್ಮಿತ ಬೇಲಿಗಳನ್ನೂ ದಾಟಿ ಮುನ್ನಡೆಯುವುದು ಅನಿವಾರ್ಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ಸಮುದಾಯವು ವಿದ್ಯಾರ್ಥಿಗಳಲ್ಲಿ ಸಮಾಜ ಮುಖೀ ಮನೋಭಾವವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಹೊತ್ತಿರುವುದು ಸ್ಪಷ್ಟ.
ನ್ಯಾಯ, ನೀತಿ ಮತ್ತು ಧರ್ಮಗಳೆಂಬ ಮೂಲಭೂತ ಪರಿಕಲ್ಪನೆಗಳನ್ನಾಧರಿಸಿಯೇ ವಿದ್ಯಾರ್ಥಿಗಳಲ್ಲಿ ಪರಸ್ಪರ ಪ್ರೀತಿಸುವ, ಆದರಿಸುವ, ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸಂಸ್ಕೃತಿಯನ್ನು ಬೆಳೆಸುವುದು ಅತ್ಯಗತ್ಯ. ಭಿನ್ನಾಭಿಪ್ರಾಯವನ್ನೇ ಸ್ವೀಕರಿಸದ, ಪ್ರತಿರೋಧವನ್ನು ದಮನಿಸುವ ಒಂದು ವ್ಯವಸ್ಥಿತ ಸನ್ನಿವೇಶವನ್ನು ಆಳುವ ವರ್ಗಗಳು ಸೃಷ್ಟಿಸುತ್ತಿರುವ ಸಂದರ್ಭದಲ್ಲಿ, ಸ್ವೀಕೃತಿಯ ಮನೋಭಾವವನ್ನು ಮೂಡಿಸುವುದು ಅಗತ್ಯ. ಭಾರತದ ಸಾಮಾಜಿಕ ಚೌಕಟ್ಟಿನಲ್ಲಿ ಗಟ್ಟಿಯಾಗಿ ಬೇರೂರುತ್ತಿರುವ ನಾವು-ಅವರು ಸಂಸ್ಕೃತಿಯನ್ನು ಹೋಗಲಾಡಿಸಿ, ದಾರ್ಶನಿಕರು ಕಾಲಕಾಲಕ್ಕೆ ಹೇಳುತ್ತಾ ಬಂದಿರುವ ವಿಶ್ವಮಾನವ ಪರಂಪರೆಯನ್ನು ಪೋಷಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಶ್ರಮಿಸಬೇಕಿದೆ. ಮಾನವ ಸಮಾಜ ತನ್ನ ಅಸ್ಮಿತೆಗಳನ್ನು ಒಂದು ಭೌಗೋಳಿಕ ಚೌಕಟ್ಟಿಗೆ ಸೀಮಿತಗೊಳಿಸುವ ಬದಲು ಸಹಜೀವಿಗಳನ್ನೊಳಗೊಂಡ ಹೃದಯಸ್ಪಶರ್ಿ ಮಾನವೀಯ ಚೌಕಟ್ಟಿಗೆ ಒಳಪಡಿಸುವುದು ಇಂದಿನ ತುರ್ತು ಅಗತ್ಯತೆಯಾಗಿದೆ.
ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ದೇಶದ ಆಳ್ವಿಕರು, ಪ್ರಜ್ಞಾವಂತ ಸಮುದಾಯ ಮತ್ತು ಶಿಕ್ಷಕ ಸಮುದಾಯ ಈ ನಿಟ್ಟಿನಲ್ಲಿ ಯೋಚಿಸಿದರೆ ಈ ದಿನದ ಸಾರ್ಥಕತೆಯನ್ನು ಕಾಣಬಹುದಾಗಿದೆ.
 

‍ಲೇಖಕರು avadhi-sandhyarani

September 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: