ಪ್ರಯಾಣ ದರ : ಹೊಣೆಗಾರಿಕೆ ಮರೆತ ಸರ್ಕಾರ
ಜಿ ಪಿ ಬಸವರಾಜು
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ತನ್ನ ಪ್ರಯಾಣ ದರಗಳನ್ನು ಏರಿಸಿದೆ. ಈ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕಾರಣಗಳನ್ನು ನೀಡಿದ್ದಾರೆ: ಮೊದಲನೆಯ ಕಾರಣ ಡೀಸೆಲ್ ಬೆಲೆಯಲ್ಲಿ ಆಗಿರುವ ಏರಿಕೆ. ಎರಡನೆಯದು ಸಿಬ್ಬಂದಿಯ ವೇತನ, ಸೌಲಭ್ಯ ಇತ್ಯಾದಿ ವೆಚ್ಚಗಳು. ಮೇಲು ನೋಟಕ್ಕೆ ಮುಖ್ಯಮಂತ್ರಿಗಳು ನೀಡಿರುವ ಕಾರಣಗಳು ಸರಿಯಾಗಿಯೇ ಇವೆ. ಆದರೂ ಈ ದರ ಏರಿಕೆ ಮತ್ತು ಸರ್ಕಾರ ನೀಡಿರುವ ಕಾರಣಗಳು ಸಮರ್ಥನೀಯವೇ ಎಂಬ ಪ್ರಶ್ನೆಯಂತೂ ಉಳಿಯುತ್ತದೆ.
ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳು ಚೆನ್ನಾಗಿವೆ. ದಕ್ಷಿಣ ಭಾರತದ ಯಾವುದೇ ರಾಜ್ಯದ ಬಸ್ಸುಗಳ ಜೊತೆಯಲ್ಲಿ ಹೋಲಿಸಿ ನೋಡಿದಾಗಲೂ ಕರ್ನಾಟಕ ಸಾರಿಗೆ ಬಸ್ಸುಗಳು ಕುಳಿತುಕೊಳ್ಳಲು ಬಹಳ ಹಿತಕರ; ನೋಡಲು ಅಂದ ಹಾಗೂ ಪ್ರಯಾಣಿಸಲು ಸುರಕ್ಷಿತ. ಇಷ್ಟರಿಂದಲೇ ಈ ದರ ಏರಿಕೆಯನ್ನು ಸಮರ್ಥಿಸಲು ಆಗದು. ಸುರಕ್ಷೆಯ ಪ್ರಶ್ನೆ ಬಂದಾಗ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿರುವ ಸೌಲಭ್ಯಗಳನ್ನೂ ಪರಿಶೀಲಿಸಬೇಕು. ಪ್ರಥಮ ಚಿಕಿತ್ಸೆಗಾಗಿ ಪ್ರತಿ ಬಸ್ಸಿನಲ್ಲಿಯೂ ಇರುವ ಪೆಟ್ಟಿಗೆಗಳು, ಅವುಗಳಲ್ಲಿರುವ ಔಷಧಿ, ಬ್ಯಾಂಡೇಜು ಬಟ್ಟೆಗಳು ಇತ್ಯಾದಿಯನ್ನು ಯಾರೂ ನೋಡಿದಂತಿಲ್ಲ. ಈ ಪೆಟ್ಟಿಗೆಗಳು ಖಾಲಿ ಇದ್ದರೂ ಆಶ್ಚರ್ಯವಿಲ್ಲ. ಅಪಘಾತದ ಸಂದರ್ಭಗಳಲ್ಲಿ ತುರ್ತಾಗಿ ಹೊರಹೋಗಲು ಇರಬೇಕಾದ ಎಮರ್ಜನ್ಸಿ ಬಾಗಿಲುಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಮೊನ್ನೆಯ ಒಂದು ಅಪಘಾತದ ಪ್ರಕರಣ ಹೇಳುತ್ತಿದೆ. ಇಂಥ ಇನ್ನೂ ಹಲವಾರು ಅಂಶಗಳನ್ನು ನಾವು ಪರೀಕ್ಷಿಸಬೇಕಾದ ಅಗತ್ಯವಿದೆ.
ನಷ್ಟದಲ್ಲಿ ನಡೆಯುವ ಯಾವ ಸಂಸ್ಥೆಯೂ ಬಹುಕಾಲ ಉಳಿಯುವುದಿಲ್ಲ. ಸಕರ್ಾರಿ ವಲಯದಲ್ಲಿದ್ದ ಅನೇಕ ಕಾರ್ಖಾನೆಗಳು ಮುಚ್ಚಿ ಇತಿಹಾಸ ಸೇರಿರುವುದನ್ನು ನಾವು ನೋಡುತ್ತ ಬಂದಿದ್ದೇವೆ. ಖಾಸಗೀ ವಲಯ, ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪೊರೇಟ್ ಸಂಸ್ಥೆಗಳೇ ಇಡೀ ಜಗತ್ತನ್ನು ಆಳುತ್ತಿರುವ ಈ ಸನ್ನಿವೇಶದಲ್ಲಿ ಸರ್ಕಾರಿ ವಲಯದ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಲಾಭ ನಷ್ಟದ ವಿಚಾರವನ್ನಂತೂ ಅತ್ಯಂತ ಜಾಗರೂಕತೆಯಿಂದಲೇ ಅಭ್ಯಾಸ ಮಾಡಬೇಕು. ಸಿದ್ಧರಾಮಯ್ಯನವರ ವಿವರಣೆಯ ಹಿಂದೆ ಈ ಜಾಗರೂಕತೆ ಇರುವಂತಿದೆ.
ಆದರೆ ಈ ಲಾಭ ನಷ್ಟದ ಆಚೆಗೆ ಸರ್ಕಾರಕ್ಕೆ ಕೆಲವು ಮುಖ್ಯ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳೂ ಇವೆ. ಇದನ್ನೂ ನಾವು ಮರೆಯಬಾರದು. ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಶಿಕ್ಷಣ, ಸಾರಿಗೆ ಇತ್ಯಾದಿ ಸಂಗತಿಗಳು ಭಾರತದಂಥ ಹಿಂದುಳಿದ ರಾಷ್ಟ್ರಗಳಲ್ಲಿ ಬಹಳ ಮುಖ್ಯವಾಗುತ್ತವೆ. ಈ ಕ್ಷೇತ್ರಗಳಲ್ಲಿ ಸರ್ಕಾರ ಲಾಭ-ನಷ್ಟವನ್ನು ಕರಾರುವಾಕ್ಕಾಗಿ ನೊಡಬಾರದು. ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಶಿಕ್ಷಣ ಮತ್ತು ಆರೋಗ್ಯದ ಹೊಣೆಗಾರಿಕೆಯಿಂದ ಸರ್ಕಾರ ಹಿಂದೆ ಸರಿಯುವುದು ಆಗದ ಮಾತು. ಹಾಗೆಯೇ ಸಾರಿಗೆ ಕೂಡಾ ಮುಖ್ಯವಾದದ್ದು.
ಕಮ್ಯುನಿಷ್ಟರ ಹಿಡಿತ ಈಗಲೂ ಬಲವಾಗಿರುವ ಕೇರಳದಲ್ಲಿ ಸರ್ಕಾರ ಸಾರಿಗೆ ಸಂಸ್ಥೆಯ ದರಗಳನ್ನು ಯದ್ವಾತದ್ವ ಏರಿಸಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಹೋಲಿಸಿದರೆ ಕೇರಳದ ಬಸ್ಸುಗಳಲ್ಲಿ (ಖಾಸಗೀ ಬಸ್ಸುಗಳಲ್ಲೂ)ಜನ ಸಮಾನ್ಯರು ತಮ್ಮ ಕೈಗೆಟುಕುವ ದರಗಳಲ್ಲೇ ಓಡಾಡಬಹುದು. ತಮಿಳ್ನಾಡಿನಲ್ಲಿಯೂ ಬಸ್ ದರಗಳು ಸಹನೀಯವಾಗಿಯೇ ಇವೆ. ಮಹಾರಾಷ್ಟ್ರ ಮತ್ತು ಆಂಧ್ರಗಳಲ್ಲೂ ಪರಿಸ್ಥಿತಿ ಹದಗೆಟ್ಟಂತಿಲ್ಲ. ಜೊತೆಗೆ ತಮಿಳ್ನಾಡಿನ ರಸ್ತೆಗಳನ್ನು ಗಮನಿಸಬೇಕು. ಅಲ್ಲಿ ಓಡಾಟ ಹಿತಕರ ಮತ್ತು ಸುಗಮ. ಇದನ್ನು ನಾವು ಗಮನಿಸಬೇಕು. ಅಲ್ಲಿನ ಬಸ್ಸುಗಳು ನಮ್ಮಷ್ಟು ಚೆನ್ನಾಗಿಲ್ಲ ಎಂಬ ಒಂದೇ ಕಾರಣದಿಂದ ನಾವು ಪ್ರಯಾಣ ದರಗಳನ್ನು ಏರಿಸಬಾರದು.
ಗಮನಿಸಬೇಕಾದ ಇನ್ನೊಂದು ಸಂಗತಿಯೂ ಇದೇ: ಬಹುಸಂಖ್ಯಾತ ಪ್ರಯಾಣಿಕರ ಮಿತ್ರನಂತಿರುವ ರೈಲ್ವೇ ಇಲಾಖೆಯನ್ನು, ರೈಲಿನ ಪ್ರಯಾಣ ದರಗಳನ್ನು ಮತ್ತು ಸೌಲಭ್ಯಗಳನ್ನು. ಕಳೆದ ಅನೇಕ ವರ್ಷಗಳಿಂದ ರೈಲು ಪ್ರಯಾಣದ ದರಗಳು ಸ್ವಲ್ಪ ಹೆಚ್ಚು ಕಮ್ಮಿ ಹಾಗೇಯೇ ಏರದೆ ಉಳಿದು ಬಂದಿವೆ. ರೈಲ್ವೆ ಇಲಾಖೆಗೆ ನಷ್ಟವಾಗಿಲ್ಲವೇ? ಸರಕು ಸಾಗಣೆಯಲ್ಲಿ ಅದು ನಷ್ಟವನ್ನು ತುಂಬಿಕೊಂಡಿತು. ಅಲ್ಲದೆ ನಷ್ಟವಾದರೂ ಅದನ್ನು ಜನರಿಗಾಗಿ ಸರ್ಕಾರ ಭರಿಸುತ್ತಿದೆ. ಸಾಮಾನ್ಯ ಜನ ಇವತ್ತು ಅತ್ಯಂತ ಸಂತೋಷದಿಂದ, ಹಗುರಾಗಿ ಪ್ರಯಾಣಿಸುತ್ತಿರುವುದು ರೈಲುಗಳಲ್ಲಿ. ಇದೇ ಪ್ರಯಾಣವನ್ನು ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಾಡಿದರೆ ಸಾಮಾನ್ಯ ಜನ ದಿವಾಳಿಯೆದ್ದು ಹೋಗುತ್ತಿದ್ದರು. ಇಲ್ಲವೇ ಪ್ರಯಾಣವನ್ನು ನಿಲ್ಲಿಸಿಬಿಡುತ್ತಿದ್ದರು. ಕೇಂದ್ರ ಸರ್ಕಾರ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಈ ಅಗ್ಗದ ದರಗಳನ್ನು ಉಳಿಸಿಕೊಂಡಿತು ಎನ್ನುವವರಿದ್ದಾರೆ. ತನ್ನ ಪಾಲಿನ ಸೇವಾ ಹೊಣೆಗಾರಿಕೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಮೆಚ್ಚುವವರಿದ್ದಾರೆ. ಇದೆಲ್ಲ ಬೇರೆಯ ಸಂಗತಿ. ಆದರೂ ಪ್ರಯಾಣಿಕರು ಇವತ್ತು ಸರ್ಕಾರಕ್ಕೆ ಶಾಪ ಹಾಕದೆ ರೈಲುಗಳಲ್ಲಿ ಓಡಾಡುತ್ತಿದ್ದಾರೆ ಎಂಬುದು ಮುಖ್ಯ.
ಸರ್ಕಾರ ತನ್ನ ನಷ್ಟವನ್ನು ತುಂಬಿಕೊಳ್ಳಲು ಅನೇಕ ಮಾರ್ಗಗಳಿವೆ. ಮೊದಲು ನಮ್ಮ ಶಾಸಕರು ಮತ್ತು ಮಂತ್ರಿಗಳ ಖರ್ಚುಗಳ ಮೇಲೆ ಮಿತಿಯನ್ನು ಹೇರಬೇಕು. ತಮ್ಮ ಕಚೇರಿಗಳು, ಮನೆಗಳ ದುರಸ್ತಿಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರಲ್ಲ ಇದನ್ನು ನಿಯಂತ್ರಿಸುವುದು ಸಾಧ್ಯವಿಲ್ಲವೇ? ವಾಸ್ತು ದೋಷ ಹೇಳಿಕೊಂಡು ಕಚೇರಿಗಳನ್ನು ನವೀಕರಿಸುವ ಮೂರ್ಖ ಮಂತ್ರಿಗಳೂ ಇದ್ದಾರಲ್ಲ! ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿಗಳು ಇಂಥದನ್ನೆಲ್ಲ ಹೇಗೆ ಸಹಿಸುತ್ತಾರೆ?
ಇನ್ನ ಶಾಸಕರ ಮತ್ತು ಮಂತ್ರಿಗಳ ವಿದೇಶೀ ಪ್ರವಾಸ. ಇದು ‘ಅಧ್ಯಯನ’ ಪ್ರವಾಸ ಎಂದು ಹೇಳುವವರಿದ್ದಾರೆ. ಅಧ್ಯಯನ ಮೊದಲು ನಮ್ಮ ರಾಜ್ಯದಲ್ಲಿ ಜರೂರಾಗಿ ಆಗಬೇಕು. ರಾಜ್ಯ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ಸುಗಳಲ್ಲಿ ಯಾವ ಶಾಸಕರೂ, ಮಂತ್ರಿಗಳು ಪ್ರಯಾಣಿಸಿದ ಉದಾಹರಣೆಯೇ ಕಾಣುತ್ತಿಲ್ಲ. ವಿಧಾನ ಸೌಧಕ್ಕೆ ಸೈಕಲ್ ಹೊಡೆಯುವುದು ಅಗ್ಗದ ಪ್ರಚಾರಕ್ಕೆ ಹುಡುಕಿಕೊಂಡ ಸ್ಟಂಟ್. ಈ ಬಸ್ಸುಗಳು ಹೇಗಿವೆ, ಹೇಗೆ ಓಡುತ್ತಿವೆ, ಎಲ್ಲಿ ನಿಲ್ಲುತ್ತಿವೆ. ಪ್ರಯಾಣಿಕರ ಊಟ ತಿಂಡಿಗಾಗಿ ಈ ಬಸ್ಸುಗಳು ದಾರಿ ಮಧ್ಯದಲ್ಲಿ ನಿಲ್ಲವ ಹೋಟೆಲುಗಳ ಸ್ಥಿತಿಗತಿ, ಶುಚಿತ್ವ, ದರಪಟ್ಟಿ ಹೇಗಿವೆ? ಪ್ರಯಾಣಿಕರು ಸಂತೋಷದಿಂದ ಅವುಗಳನ್ನು ಉಪಯೋಗಿಸುತ್ತಿದ್ದಾರಾ? ಬಸ್ ನಿಲ್ದಾಣಗಳಲ್ಲಿರುವ ಶೌಚಾಲಯಗಳು ಸಹ್ಯವಾಗಿವೆಯಾ? ಇತ್ಯಾದಿ ನೂರಾರು ಸಂಗತಿಗಳು ಶಾಸಕರ ಮತ್ತು ಮಂತ್ರಿಗಳ ಅಧ್ಯಯನಕ್ಕಾಗಿ ಕಾಯುತ್ತಿವೆ. ಈ ಅಧ್ಯಯನವನ್ನು ಬಿಟ್ಟು ಬೇರೆ ಯಾವ ದೇಶಕ್ಕೆ ಹೋಗಿ ನಮ್ಮ ಶಾಸಕರು ಅಧ್ಯಯನ ಮಾಡಬೇಕು? ಇವೆಲ್ಲ ಸರಿಯಾದ ನಂತರ ಅವರು ವಿದೇಶಗಳಿಗೆ ಹೋಗಿ ಬೇರೆ ಏನನ್ನಾದರೂ ಅಧ್ಯಯನ ಮಾಡಿ ಬರಲಿ. ಜನರೂ ಅವರನ್ನು ಗೌರವಿಸುತ್ತಾರೆ. ಇಲ್ಲವಾದರೆ ವಿದೇಶ ಪ್ರವಾಸ ಎಂಬುದು ಶಾಸಕರ ಮೋಜಿಗಿರುವ ಒಂದು ನೆಪ ಎನ್ನುವುದು ಜನರಿಗೆ ಈಗಾಗಲೇ ತಿಳಿದಿರುವ ಸಂಗತಿ. ನಮ್ಮ ಶಾಸಕರು ವಿದೇಶಗಳಲ್ಲಿ ಮಾಡಿಬಂದ ಆವಾಂತರಗಳನ್ನೂ ಜನ ಅರಿತಿದ್ದಾರೆ. ಇದು ನಮ್ಮ ಶಾಸಕರಿಗೆ ಗೊತ್ತಿರಬೇಕು.
ಜನ ಪ್ರತಿಭಟಿಸುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಪ್ರತಿದಿನವೂ ಅವರು ದುಡಿಯಲೇ ಬೇಕು. ಇಲ್ಲವಾದರೆ ಖರ್ಚುವೆಚ್ಚಗಳನ್ನು ನಿಭಾಯಿಸುವುದು ಕಷ್ಟ. ಇಂಥ ಸನ್ನಿವೇಶದಲ್ಲಿ ಪ್ರತಿಭಟನೆಗೆ ಯಾರೂ ಬರುವುದಿಲ್ಲ. ಇನ್ನು ಕಾರ್ಮಿಕ ಸಂಘಟನೆಗಳಲ್ಲಿ ಮೊದಲಿನ ಉತ್ಸಾಹವಾಗಲೀ, ಸಾಮಥ್ರ್ಯವಾಗಲೀ ಉಳಿದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜನ, ಸರ್ಕಾರ ಎಷ್ಟೇ ಏರಿಕೆಯನ್ನು ಮಾಡಿದರೂ ಅದನ್ನು ಶಪಿಸುತ್ತಲೇ ಕೊಟ್ಟು ಪ್ರಯಾಣಿಸುತ್ತಾರೆ. ಅವರಿಗೆ ಅದು ಅನಿವಾರ್ಯ. ಹೀಗೆಂದು ಸರ್ಕಾರ ಇದನ್ನು ಸಾರ್ವಜನಿಕರ ಅನುಮತಿ ಎಂದು ಪರಿಗಣಿಸಿ ಪ್ರಯಾಣ ದರ ಹೆಚ್ಚಳವನ್ನು ಒಂದು ಅಸ್ತ್ರವಾಗಿ ಬಳಸಬಾರದು.
ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿರುವ ಪ್ರಯಾಣ ದರವೂ ಬಹಳ ದುಬಾರಿಯಾದದ್ದು. ಬಸ್ಸುಗಳನ್ನು ಹೆಚ್ಚು ಹೆಚ್ಚು ಕೊಂಡುಕೊಳ್ಳುವುದು, ಹೆಚ್ಚು ಹೆಚ್ಚು ಪ್ರಯಾಣಿಕ ಸೌಲಭ್ಯಗಳನ್ನು ಕೊಡುವುದು ಸರ್ಕಾರದ ಹೊಣೆ. ಇದೇ ಪ್ರಯಾಣ ದರ ಏರಿಕೆಗೆ ಕಾರಣವಾಗಬಾರದು. ಕನಿಷ್ಠ ಗುಣಮಟ್ಟದ ರಸ್ತೆಗಳನ್ನು ಕೊಡಲಾಗದ ಸರ್ಕಾರ ಪ್ರಯಾಣ ದರವನ್ನು ಯಾವ ನೈತಿಕ ಧೈರ್ಯದಿಂದ ಹೆಚ್ಚಿಸುತ್ತದೆ?
ಸಾಮನ್ಯರ ಬದುಕಿನ ಕಷ್ಟನಷ್ಟಗಳು ಸರ್ಕಾರದ ಕಣ್ಣಮುಂದಿರಬೇಕು. ಹಾಗೆಯೇ ತಾನು ಕೈಗೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆಯೂ ನೈತಿಕ ಪ್ರಶ್ನೆಯೂ ಇರಬೇಕು. ಇಲ್ಲವಾದರೆ ಅದು ಜನತೆಯ ಸರ್ಕಾರವಾಗುವುದಿಲ್ಲ.
(ಸೌಜನ್ಯ: ಸಂಯುಕ್ತ ಕರ್ನಾಟಕ)






ಲೇಖನಕ್ಕಾಗಿ ಥ್ಯಾಂಕ್ಸ್. ಈಗಿನ ದರದಲ್ಲಿ ಸಾಮಾನ್ಯ ಜನ ಸರ್ಕಾರಿ ಬಸ್ಸಿನಲ್ಲಿ ಪಯಣಿಸಿದರೆ ದಿವಾಳಿಯೆದ್ದು ಹೋಗುವುದು ಅಕ್ಷರಶಃ ನಿಜ. ಒಂದು ಸಣ್ನ ಕೆಲಸಕ್ಕೂ ಹಳ್ಳಿಗಳಿಂದ ಜನ ಹತ್ತಿರದ ಪಟ್ಟಣಗಳಿಗೆ ಬರಬೇಕು. ಇದಕ್ಕೆ ಕನಿಷ್ಠ ೫೦ರಿಂದ ೧೦೦ ರೂಪಾಯಿ ಬಸ್ ಚಾರ್ಜಿಗೇ ಹೋಗುತ್ತದೆ. ಕೆಲವೇ ಮಾರ್ಗಗಳಿಗೆ ಮೀಸಲಾಗಿರುವ ರೈಲು ಸಾಮಾನ್ಯ ಜನರ ಪಾಲಿಗೆ ಮರೀಚಿಕೆ. ಗ್ರಾಮೀಣ ಪ್ರದೇಗಳಲ್ಲಿನ ಆದಾಯ ಈಗಿನ ಬಸ್ ದರಗಳಿಗೆ ಹೊಂದಾಣಿಕೆಯಾಗುವುದೇ ಇಲ್ಲ. ಅಗತ್ಯ ವಸ್ತುಗಳಿಗೆ ಆಗುವ ಖರ್ಚಿಗೆ ಹೋಲಿಸಿದರೆ ಪ್ರಯಾಣ ದರ ಎಷ್ಟೋ ಪಟ್ಟು ಹೆಚ್ಚು.
ಇನ್ನೊಂದು ವಿಪರ್ಯಾಸವೆಂದರೆ, ಕ.ರಾ.ರ.ಸಾ. ಬಸ್ಸುಗಳು ಬಹುತೇಕ ಸಮಯಗಳಲ್ಲಿ ಪ್ರಯಾಣಿಕರ ಕೊರತೆಯಿಂದ ಬಳಲುತ್ತವೆ. ಉದಾ,. ಉತ್ತರ ಕರ್ನಾಟಕದ ಊರುಗಳಿಂದ ಬೆಂಗಳೂರಿಗೆ ಬರುವ ಬಸ್ಸುಗಳು ಚಿತ್ರದುರ್ಗದಲ್ಲಿ ಬಹುತೇಕ ಖಾಲಿಯಾಗಿಬಿಡುತ್ತವೆ. ೪-೫ ಜನ ಪ್ರಯಾಣಿಕರಿಗೆ ೩೦೦-೪೦೦ ಕಿಮೀ ಬಸ್ಸು ಓಡಿಸುವುದು ಸರ್ವೇಸಾಮಾನ್ಯ. ಮಂಗಳೂರು ಕಡೆಗೆ ಹೋಗುವ ಬಸ್ಸುಗಳದ್ದೂ ಇದೇ ಪಾಡು. ಇದರಿಂದ ಎಷ್ಟು ನಷ್ಟವಾಗುತ್ತದೆ ಎಂದು ಸಂಸ್ಥೆ ಅಂದಾಜು ಮಾಡಿದೆಯೇ? ಇದನ್ನು ಪ್ರಯಾಣಿಕರು ಭರಿಸಬೇಕೆ?
V G