ಎಂ ಆರ್ ಗಿರಿಜಾ ಅವರ ಪ್ರವಾಸ ಕಥನ : ಅವಸರವೂ ಸಾವಧಾನದ ಬೆನ್ನೇರಿ…

(ಇಲ್ಲಿಯವರೆಗೆ…)

ಟಿಂಪುವಿನಿಂದ ಪುನಾಖಾಗೆ ಹೊರಟಾಗಲೂ ಫುಬ್ಜಿಕ ಕಣಿವೆಗೆ ಹೋಗುವ ಇರಾದೆ ಇರಲಿಲ್ಲ. ಪುನಾಖಾ ಕಣಿವೆಯಲ್ಲಿರುವ ಮೊನಾಸ್ಟರಿ, ಝಾಂಗ್ ಮತ್ತು ತ್ಸೆಚು ಗಳನ್ನು ನೋಡಿಕೊಂಡು ಕಣಿವೆಯಲ್ಲಿ ಒಂದೆರಡು ದಿನ ಇರುವುದಷ್ಟೇ ನನ್ನ ಪ್ಲಾನ್ ಆಗಿತ್ತು.
ಟಿಂಪುವಿನಿಂದ ಪುನಾಖಾಗೆ ಹೋಗುವ ರಸ್ತೆ ಅಗಲ ಕಾಮಗಾರಿ ನಡೆಯುತ್ತಿದ್ದುದರಿಂದ ಎರಡು ಬಾರಿ 45 ನಿಮಿಷ ಕಾಯಬೇಕಾಯಿತು. ಕೆಲವು ನಿಗದಿತ ಸಮಯದಲ್ಲಿ ಮಾತ್ರ ಈ ರಸ್ತೆ ಓಪನ್ ಆಗುತ್ತೆ. ರಸ್ತೆಯ ಇಬ್ಬದಿಗಳಲ್ಲೂ ಬಿರಿದು ನಿಂತ ಮ್ಯಾಗ್ನೋಲಿಯಾ ಹೂವುಗಳ ಸುಗಂಧ ಹಾಗೂ ಅದರ ಸೌಂದರ್ಯ ನನ್ನನ್ನು ಕಾರ್ನಿಂದ ಹೊರಬರೋ ಹಾಗೆ ಮಾಡ್ತು. ಆಗ ನನ್ನಂತೆಯೇ ಕಾಯುತ್ತಿದ್ದ ಕೆಲವು ಪ್ರವಾಸಿಗಳ ಜತೆ ಹಾಗೇ ಮಾತಾಡುವಾಗ ಅನೇಕರು ಫುಬ್ಜಿಕ valleyಗೆ ಹೋಗ್ತಾ ಇದೀವಿ ಅಂದ್ರು.
ಅರೆ! how I don’t have it in my itinerary ಅಂದ್ಕೊಂಡು ಗೈಡ್ ಬಳಿ ವಿಚಾರಿಸಿದೆ. ಲಾಲ್ ಪುಬ್ಜಿಕ ಬಗ್ಗೆ ಉತ್ಸಾಹ ಬರೋ ಹಾಗೇನೂ ಮಾತಾಡ್ಲೇ ಇಲ್ಲ. ಇರಲಿ, ರಾತ್ರಿ decide ಮಾಡಿದ್ರಾಯ್ತು ಅಂತ ಆ ವಿಷಯ ಅಲ್ಲೇ ಕೈಬಿಟ್ಟಿದ್ದೆ. ಸಾಮಾನ್ಯವಾಗಿ ಎಲ್ಲಿಗಾದ್ರೂ ಹೋಗುವಾಗ ಗೂಗಲ್ ಮಾಹಿತಿಯನ್ನು ಬಳಸಿಕೊಂಡು ನನ್ನ logistics ಪ್ಲಾನ್ ಮಾಡ್ತೀನಾದ್ರೂ ಆ ಸ್ಥಳಗಳ ಬಗ್ಗೆ ಜಾಸ್ತಿ ತಿಳಿದುಕೊಳ್ಳುವುದಕ್ಕೆ ಹೋಗಲ್ಲ. ಅತಿಯಾಗಿ ಗೂಗಲ್ ಮಾಡಿ ಆ ಜಾಗದ ಬಗ್ಗೆ ತಿಳಿದುಕೊಳ್ಳುವುದು ನಾವು ಆ ಜಾಗಕ್ಕೆ ಹೋದಾಗ ಸಿಗುವ ತಾಜಾ ತಾಜಾ ಅನುಭವದ ಮಜವನ್ನ ಕೊಂದು ಹಾಕುತ್ತದೆ ಅಂತ ನನ್ನ ಭಾವನೆ.
ರಾತ್ರಿ ಊಟದ ಹೊತ್ತಿನಲ್ಲಿ ಹೋಟೆಲ್ ನ ಡೈನಿಂಗ್ ಹಾಲಿನಲ್ಲಿ ಸಿಕ್ಕವರೆಲ್ಲರೂ ಫುಬ್ಜಿಕ ಬಗ್ಗೆ ಒಳ್ಳೋಳ್ಳೇ ಮಾತನಾಡಿದರು. ಅವರೆಲ್ಲಿ ಅನೇಕರು ಅಲ್ಲಿ ಒಂದು ರಾತ್ರಿ ತಂಗಿ ಬಂದಿದ್ದರು. ನನಗೆ ಅಷ್ಟು ಸಮಯ ಇಲ್ಲದ್ದರಿಂದ ಬೆಳಿಗ್ಗೆ ಹೋಗಿ ರಾತ್ರಿ ಬರೋಣ ಅಂತ ಅಂದ್ಕೊಂಡೆ. ಸರಿ ಹೋಗೇ ಬಿಡೋಣ ಅಂತ ನಿರ್ಧಾರ ಮಾಡಿ ಗೈಡ್ಗೆ ಬೆಳಿಗ್ಗೆ 7.45 ಕ್ಕೆ ತಯಾರಾಗಿರಲು ಹೇಳಿದೆ.
ಬೆಳಿಗ್ಗೆ ಗುಬ್ಬಚ್ಚಿಗಳ ಚಿಲಿಪಿಲಿಗೆ ಎಚ್ಚರಾಯ್ತು. ತಮಾಷೆಯಲ್ಲ…ನಿಜವಾಗಿಯೂ. .. . ನನ್ನ ಕಾಟೇಜ್ ನ ಕಿಟಕಿಯ ಹೊರಗೆ ಒಂದಿಪ್ಪತ್ತು ಗುಬ್ಬಚ್ಚಿಗಳ ಸಮಾವೇಶ ನಡೆಯುತ್ತಿತ್ತು. . It was such a pleasant morning. ನದಿ ದಡದಲ್ಲಿರೋ ನನ್ನ ಕಾಟೇಜ್ ನಿಂದ ನದಿ ಮೃದು ಮಧುರವಾಗಿ ಕಾಣುತ್ತಿತ್ತು, ಅದರ ಹರಿಯುವಿಕೆ ಕಿವಿಗೆ ಮಂಜುಳವಾಗಿ ಕೇಳಿಬರುತ್ತಿತ್ತು.
ಬೆಳಿಗ್ಗೆ ಉಪಾಹಾರದ ನಂತರ ನಮ್ಮ ಪ್ರಯಾಣ ಆರಂಭವಾಯಿತು. ಫುಬ್ಜಿಕ ಪುನಾಖಾ ಇಂದ ಮೂರು ಗಂಟೆಗಳ 80 ಕಿ ಮೀಗಳ ಹಾದಿ. ದೂರವಿರದಿದ್ದರೂ ರಸ್ತೆ ಅವಸ್ಥೆ ಸರಿ ಇರದಿರುವುದರಿಂದ ಹೆಚ್ಚು ಸಮಯ ತಗಲತ್ತೆ. ಹೊರಟ ಕೆಲವೇ ನಿಮಿಷಗಳಲ್ಲಿ ಎದುರಾಗೋದು ಗುಡ್ಡದ ಮೇಲಿರೋ ವಾಂಗ್ಡಿ ಝಾಂಗ್(ಕೋಟೆ)ನ ಭಗ್ನ ಚಿತ್ರ. ಕೋಟೆಯ ಅವಶೇಷ ಬೇಡ ಅಂದ್ರೂ ಕಣ್ಣು ಅತ್ತ ಹೋಗೋ ಹಾಗೆ ಮಾಡುತ್ತೆ. ಎರಡು ವರ್ಷಗಳ ಹಿಂದೆ, ಶಾರ್ಟ್ ಸರ್ಕೀಟ್ ನಿಂದಾಗಿ ಸುಟ್ಟು ನಿಂತ ಖೊಟ್ಟಿ ನಸೀಬು ಈ ಕೋಟೆಯದ್ದು. ಇದು ಕೆಲವೇ ವರ್ಷಗಳ ಹಿಂದೆ ಭೂತಾನಿನ ಸುಂದರ ಝಾಂಗ್ ಗಳಲ್ಲಿ ಒಂದಾಗಿ ಪ್ರವಾಸಿಗರನನ್ನು ಕೈಬೀಸಿ ಕರೆಯುತ್ತಿದ್ದ ಝಾಂಗ್. ಭೂತಾನಿನಲ್ಲಿ electric ಅಪಘಾತಗಳು ತುಂಬಾ ಮಾಮೂಲಿ ಅಂತ ಅನ್ನಿಸ್ತು. ಇನ್ನೂ 2-3 ಜಾಗಗಳಲ್ಲಿ ಬೆಂಕಿಯ ಅನಾಹುತಗಳ ಬಗ್ಗೆ ಕೇಳಿದೆ. ಅದು ಖಂಡಿತಾ ಅವರ ಬೇಜವಾಬುದಾರಿ. ಮೊದಲೇ ಈ ಝಾಂಗ್ ಗಳಲ್ಲಿ ಮರದ ಬಳಕೆ ಹೆಚ್ಚು. ಸಣ್ಣ ಬೆಂಕಿ ಸಾಕು ವಾಂಗ್ಡಿ ಝಾಂಗ್ ಗೆ ಆದಂತಹ ಅನಾಹುತ ಆಗಲು. ಸರಕಾರ ಕೋಟೆಯನ್ನು ಮೊದಲಿನ ಭವ್ಯ ರೂಪಕ್ಕೆ ತರೋ ಪ್ರಯತ್ನದಲ್ಲಿದೆ.

ತನ್ನ ಅತಿಥಿಯೊಬ್ಬರನ್ನು ಈ ಕೋಟೆಯ ಮೂಲಕ ಭೂಮ್ತಾಂಗ್ ಕಣಿವೆಗೆ ಕರೆದೊಯ್ದು, ವಾಪಸ್ ಬರುವಾಗ ಅದರ ಭಗ್ನಾವಶೇಷಗಳನ್ನು ತೋರಿಸಿಕೊಂಡು ಬರಬೇಕಾಯ್ತು ಅಂತ ಲಾಲ್ ಹಳೆಯದನ್ನು ನೆನಪಿಸಿಕೊಂಡ.
ಪ್ರಯಾಣ ಮುಂದುವರಿದಂತೆಲ್ಲಾ ಹೆಚ್ಚು ಹೆಚ್ಚು ಎತ್ತರಕ್ಕೆ ಅಂದರೆ 1200 ಮೀಟರ್ನಿಂದ 3000ಮೀಟರ್ ಎತ್ತರಕ್ಕೆ ಹೋಗ್ತಾ ಇದ್ದೆವು. ರಸ್ತೆ ಹೇಳಲಾಗದಷ್ಟು ಕೆಟ್ಟದಾಗಿತ್ತು. ಕೆಲವು ಕಡೆ ಎಷ್ಟು ಧೂಳು ಏಳುತ್ತಿತ್ತು ಎಂದರೆ ಮುಂದಿನ ರಸ್ತೆಯೇ ಕಾಣಿಸುತ್ತಿರಲಿಲ್ಲ.
ರಸ್ತೆ ಪರಿಸ್ಥಿತಿ ನೋಡಿ ನಾನು ಈ ಪ್ರಯಾಣಕ್ಕೆ ಚೌಕಾಶಿ ಮಾಡಿದ ಹಣ ಪರವಾಗಿಲ್ಲ ಅನಿಸಿ ನನಗೆ ನಾನೇ ಶಹಭಾಷ್ ಹೇಳಿಕೊಂಡೆ. ವಾಹನ ಮೇಲಕ್ಕೆ ಚಲಿಸಿದಂತೆಲ್ಲಾ ಹಿಮದ ಟೋಪಿ ಹಾಕಿಕೊಂಡಿರುವ ಬೆಟ್ಟಗಳು ತೆರೆದುಕೊಳ್ಳ ತೊಡಗಿದವು. ಇವುಗಳಿಗೆಲ್ಲಾ ಒಂದೊಂದು ಹೆಸರಿರಬೇಕು ಅಂತ ಲಾಲ್ ಗೆ ಇದ್ಯಾವುದು ಅದ್ಯಾವುದು ಅಂತ ಕೇಳಿದೆ. ಅವನು ನಾನು ತಲೆ ತಿನ್ನಬಾರದು ಅಂತನೋ ಏನೋ ಇದಕ್ಕೆಲ್ಲಾ ಹೆಸರಿಲ್ಲ. ಇವೆಲ್ಲಾ just lower parts of Himalayas ಅಂದು ಸುಮ್ಮನಾದ.
ಓ ಹಿಮಾಲಯ ನೀನೆಷ್ಟು ಸುಂದರ ಅಂತ ಅದಕ್ಕೆ ಅಲ್ಲಿಂದಲೇ ಒಂದು ಸಲಾಂ ಹೊಡೆದೆ.
ಅನೇಕ ಪರ್ವತಗಳನ್ನು, ಚಿಕ್ಕ ಚಿಕ್ಕ ಝರಿ ಜಲಪಾತಗಳನ್ನು, ಸುಂದರವಾದ ಹೊಲಗಳನ್ನು ಹಾದು ಹೋದೆವು. ಮೂರು ಗಂಟೆ ಪ್ರಯಾಣ ಮಾಡಿ ಫುಬ್ಜಿಕ ತಲುಪಿದೆ. ಆಗ ಇನ್ನೂ 10.30 ಬೆಂಗಳೂರಿನಲ್ಲಿದ್ದಿದ್ದರೆ ಆಫೀಸಿಗೆ ಹೋಗುವ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡಿರುವ ಪೀಕ್ ಅವರ್. (ನಾನು 9.00ಕ್ಕೆ ಆಫೀಸ್ ತಲುಪುವವಳಲ್ಲ) ಆದರೆ ಇಲ್ಲಿ ಈ ಪೀಕ್ ಗಳಿಗೆ ಯಾವುದೇ ಪೀಕ್ ಅವರ್ನ ಧಾವಂತವಿಲ್ಲ. ನನಗೆ ಕುವೆಂಪು ಅವರು ತಮ್ಮ ಕಾದಂಬರಿಯ ಮೊದಲಲ್ಲಿ ಹೇಳಿರುವ ‘ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ’ ಎಂಬ ಮಾತು ಎಷ್ಟು ನಿಜ ಎನಿಸಿಬಿಟ್ಟಿತು. ಅಲ್ಲಿ ಜನ ಜಂಗುಳಿಯಿಲ್ಲ್ಲ, ಗದ್ದಲವಿಲ್ಲ, ನಿಶ್ಯಬ್ದ. ಅದು 3000 ಮೀಟರ್ ಎತ್ತರದ ಮೌನ. ಮಾರ್ಚ್ ಮಧ್ಯವಾದರೂ 2-3 ದಿನಗಳ ಹಿಂದೆ ಹಿಮ ಬಿದ್ದಿತ್ತು ಅನ್ನೋದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಹಿಮದ ಗುಪ್ಪೆಗಳು ಹಗೂರಾಗಿ ಬಿದ್ದಿದ್ದವು. ಅಲ್ಲಿಂದ ಸುಮಾರು ಒಂದೆರಡು ಫರ್ಲಾಂಗ್ ಕೆಳಕ್ಕಿಳಿದರೆ ಕಣಿವೆ ಆರಂಭವಾಯಿತು. ಅದೊಂದು ವಿಸ್ತಾರವಾದ ಕಣಿವೆ. ಕಣಿವೆಯ ಎರಡೂ ಬದಿಯಲ್ಲಿ ಪೈನ್ ಮರಗಳು ಸಾಲು ಸಾಲಾಗಿದ್ದವು. ಇದು ಭೂತಾನಿನ ಅತಿ ಸುಂದರ ಕಣಿವೆಗಳಲ್ಲಿ ಒಂದು. ಇಲ್ಲಿಯ ನೋಡಬೇಕಾದ ವಿಶೇಷಗಳು- ಕಪ್ಪು ಕತ್ತಿನ ಕೊಕ್ಕರೆಗಳು, ಗಾಂಟೆ ಮೊನೆಸ್ಟರಿ ಮತ್ತು ಸ್ವತಃ ಆ ಕಣಿವೆ!

ಚಳಿಗಾಲದಲ್ಲಿ ಕಪ್ಪು ಕುತ್ತಿಗೆ ಕೊಕ್ಕರೆಗಳು ಟಿಬೇಟಿನಿಂದ ಇಲ್ಲಿಗೆ ಅಕ್ಟೋಬರ್ ನಲ್ಲಿ ಬಂದು ಫೆಬ್ರವರಿ ತನಕ ಭೂತಾನಿನಲ್ಲಿ ವಾಸಿಸುತ್ತವೆ. ಇದು ಅವುಗಳಿಗೆ ಚಳಿಗಾಲದ ಮನೆ. ಬರುವಾಗ ಮತ್ತು ಇಲ್ಲಿಂದ ಹೊರಡುವಾಗ ಕೊಕ್ಕರೆಗಳು ತಪ್ಪದೆ ಗಾಂಟೆ ಮೊನಾಸ್ಟರಿಯನ್ನು ಮೂರು ಸುತ್ತು ಹಾಕಿ ಹೋಗುತ್ತವೆಯಂತೆ. ಇದು ತಪ್ಪದೆ ನಡೆಯುವ ವಿಸ್ಮಯ. ಇದು ಹೇಗೆ ನಡೆಯುತ್ತದೆ ಎಂದು ನಾನು ಯೋಚಿಸುತ್ತಿದ್ದೆ. ಆದರೆ ನಾನು ಅಲ್ಲಿರುವ ವೇಳೆಗಾಗಲೆ ಎಲ್ಲಾ ಕೊಕ್ಕರೆಗಳೂ ಮರಳಿ ಹೋಗಿದ್ದವು. ಆರೋಗ್ಯ ಸರಿ ಇರದ ಕಾರಣ ಐದು ಕೊಕ್ಕರೆಗಳು ಅಲ್ಲೇ ಉಳಿದಿವೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಅಲ್ಲಿಂದ ಬಂದ ಮೇಲೆ ಕಾಟೇಜಿನಲ್ಲಿ ಮಾರನೆ ದಿವಸದ ಭೂತಾನಿನ ಪೇಪರ್ ಓದುವಾಗ ನಿನ್ನೆ ಉಳಿದಿದ್ದ ಕೊಕ್ಕರೆಗಳು ಮೊನಸ್ಟರಿಯನ್ನು ಮೂರು ಸುತ್ತು ಹಾಕಿ ವಾಪಸ್ ಹೋದವು ಎಂದು ವರದಿಯಾಗಿತ್ತು.

ಅಲ್ಲಿ ಒಂದು ಕೊಕ್ಕರೆ ಮಾಹಿತಿ ಕೇಂದ್ರವಿದೆ. ಅಲ್ಲಿ ಪಕ್ಷಿಗಳನ್ನು ನೋಡಲು ಟೆಲಿಸ್ಕೋಪ್ ಇಟ್ಟಿದ್ದಾರೆ. ಅದೂ ಸಹ ನಾನು ಹೋದಾಗ ಮುಚ್ಚಿತ್ತು. ಉತ್ಸವ ಪ್ರಿಯರಾದ ಭೂತಾನಿಗರು ಚಳಿಗಾಲದಲ್ಲಿ ಕೊಕ್ಕರೆಗಳ ಉತ್ಸವ ಮಾಡುತ್ತಾರೆ. ಅವರ ಪಾಲಿಗೆ ಕೊಕ್ಕರೆಗಳು ಶುಭ ಸಂಕೇತ. ಆಗತಾನೆ ಚಳಿಗಾಲ ಮುಗಿದಿದ್ದರಿಂದ ಗಿಡಮರಗಳೆಲ್ಲಾ ಒಣಗಿ ನಿಂತಿದ್ದವು. ಮಳೆಗಾಲದಲ್ಲಿ ಮತ್ತು ಮಳೆ ಕಳೆದ ಮೇಲೆ ಮತ್ತೊಮ್ಮೆ ಭೂತಾನ್ ಗೆ ಬರಬೇಕು ಅಂದುಕೊಂಡೆ. ಹಾಗೆ ಯೋಚಿಸುವಾಗಲೇ ಗೊತ್ತಿತ್ತು. ಅದು ಆಗುವುದು ಯಾವ ಕಾಲಕ್ಕೋ ಅಂತ.
(ಮುಂದುವರಿಯುವುದು…)

‍ಲೇಖಕರು avadhi

May 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: