ಶಾಂತಿ. ಕೆ. ಅಪ್ಪಣ್ಣ
ಮಲಗಿದೆ ಬದುಕು..
ಏಟು ತಿಂದು ನೆಲಕಚ್ಚಿದೆ..ಗುಬ್ಬಿಮರಿ..
ಸೋತಿವೆ ರೆಕ್ಕೆಗಳು.
ಮೆಲ್ಲನೊಮ್ಮೆ ತಲೆ ನೇವರಿಸಿ
ಮುದ್ದುಮಾಡಿ ಮುತ್ತಿಟ್ಟು
ಎಬ್ಬಿಸುತ್ತಿದ್ದೇನೆ..
ಏಳು ಬದುಕೇ…
ನಡಿ ..
ಕಾವಳದ ರಾತ್ರಿಗಳು ಮುಗಿದರೆ
ಹಗಲ ಸೊಬಗಿದೆ..ನಂಬು..
ಮಳೆ ಬಿಸಿಲಿನ ಮಿಲನದಲ್ಲೇ
ಹುಟ್ಟುವುದು ಕಾಮನ ಬಿಲ್ಲು..
ಝಾಡಿಸಿ ಬಿಡು ರೆಕ್ಕೆಗಂಟಿದ
ಅವಮಾನದ ಧೂಳು …
ಮೈ ಕೊಡವಿ ನಿಲ್ಲೆದ್ದು..
ಮುಂದೆಲ್ಲೋ ದಾರಿಯಲಿ
ಬರಬಹುದು ನಲಿವ ಮಳೆ..
ಸುರಿಯಬಹುದು ನಮ್ಮ ಮೇಲೂ
ಸುಖದ ಸೋನೆ..
ಗರಿಗೆದರಿ ಎದ್ದುಬಿಡು ಬದುಕೇ..
ಮೊಳಕೆಯೊಡೆ ಯಲಿ ಬಿಡು
ಎದೆಯೊಳಗೆ ಆಸೆ ಬೀಜ..
ಸಸಿ ಹುಟ್ಟಿ ಮರವಾಗಿ ಫಲತೂಗಲಿ..
ತಾಕಬಹುದು ನಮ್ಮ ಮತ್ತದೇ
ಸಿಡಿಲು ಮಿಂಚುಗಳು..ಅಬ್ಬರದ ಬಿಸಿಲು..
ಮತ್ತೆ ಸೋಲಲೂ ಬಹುದು ರೆಕ್ಕೆ ..
ಕುಗ್ಗದಿರು ಬದುಕೇ..
ಏರುತಗ್ಗಿನ ಹಾದಿಯಲಿ ಪಯಣ ಸೊಗಸು..
ನಡಿ ,ರೆಕೆ ಬಿಚ್ಚು ..
ಹಾರೋಣ ಬಾ ನಾವು
ದೂರ ದಿಗಂತದಲಿ ಸೂರ್ಯ ಕರೆಯುತ್ತಿದ್ದಾನೆ..
ಚಂದ್ರ ನಗುತ್ತಿದ್ದಾನೆ.
ರಾತ್ರಿಯಲಿ ತಾರೆಗಳು ಹೊಳೆಯುತ್ತ
ಜೊತೆಯಾಗುತ್ತವೆ ..
ನಡಿ ಬದುಕೇ..
ಸಾಗಿ ಬಿಡೋಣ ಎದ್ದು..
ನಡೆವ ದಾರಿಗೊಂದು ಕೊನೆಯಿರಲೇ ಬೇಕು..
ತಲುಪುವ ತನಕ ಹೀಗೆ ಸಾಗಿ ಬಿಡೋಣ..
ಕ್ಷಿತಿಜದಾಚೆ ಹಾರಿ ಬಿಡೋಣ.








ಬದುಕಿನ ಎಲ್ಲ ಕ್ಷಣಗಳನ್ನೂ ಸವಿಯಬೇಕು,ಬದುಕಬೇಕು ಎಂಬ ಜೀವನಪರ,ಕ್ಷಿತಿಜದಾಚೆ ಹಾರಿಬಿಡೋಣ ಎನ್ನುವ ಸಾಹಸಪರ ಬಯಕೆ ಮತ್ತು ಅದರ ಅಭಿವ್ಯಕ್ತಿ ಸುಂದರವಾಗಿದೆ.
ಸುಖವಾಗಲೀ ದುಃಖವಾಗಲೀ ತನ್ನಿಂದ ತಾನೇ ಬರುತ್ತವೆ, ನಾವು ಅನುಭವಿಸಬೇಕು ಸೋಲಬಾರದು ಅಷ್ಟೇ ಎಂಬ ವಿಧಿವಾದದ ಸೆಳಕು ಇದರಲ್ಲಿ ಅಡಗಿರುವಂತೆ ತೋರುತ್ತದೆ. ಆದರೆ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು,ನಮ್ಮ ಜೊತೆಯವರ ಜೊತೆಗೂಡಿ.ಕಷ್ಟ ಬಂದೆರಗಿದ್ದಕ್ಕೆ ಕಾರಣಗಳನ್ನು ಅನ್ವೇಷಿಸುತ್ತಾ,ಅವುಗಳನ್ನು ತೊಡೆಯಲು ಎಲ್ಲರೊಡನೆ ಶ್ರಮಿಸುತ್ತಾ.ಅದುವೆ ಬಾಳ್ವೆಯ ಜಿದ್ದು ಎಂದು ನನ್ನ ಅನ್ನಿಸಿಕೆ.
ಚಂದದ ಕವಿತೆ, ಮರುಗಿ ಮಲಗಿರುವ ಬದುಕಿಗೆ ಚೈತನ್ಯವಿತ್ತು ಎದ್ದು ನಿಲ್ಲಿಸುತ್ತಿರುವ ಪರಿ ಬಲು ಸೊಗಸು
ಮಳೆ ಬಿಸಿಲಿನ ಮಿಲನದಲ್ಲೇ
ಹುಟ್ಟುವುದು ಕಾಮನ ಬಿಲ್ಲು..
ಎಂಬುದು ಸುಂದರವಾದ ಉಪಮಾ ಪ್ರಯೋಗ, ಹಿಡಿಸಿತು ಕವಿತೆ.
– ಪ್ರಸಾದ್.ಡಿ.ವಿ.
super
ಸಕಾರಾತ್ಮಕ ಭಾವ ಪಡೆದುಕೊಂಡು ಹಂತ ಹಂತವಾಗಿ ಬೆಳೆದ ಕಾವ್ಯ ಪಕ್ವತೆಗೆ ಶರಣು. ಚೆನ್ನಾಗಿದೆ ಅಕ್ಕ… 🙂
great metaphor which sail over emotions. simply superb complexly as well.
ನಡಿ ಬದುಕೇ..
ಸಾಗಿ ಬಿಡೋಣ ಎದ್ದು..
ನಡೆವ ದಾರಿಗೊಂದು ಕೊನೆಯಿರಲೇ ಬೇಕು..
ತಲುಪುವ ತನಕ ಹೀಗೆ ಸಾಗಿ ಬಿಡೋಣ..
ಕ್ಷಿತಿಜದಾಚೆ ಹಾರಿ ಬಿಡೋಣ…..ultimate…
manasu bettaleyaadaga maatra kaayva bettaleyaagodu…
nimmolaginagina kavayitrige ondu priitiya appuge haagu sharanu….