ಶವಸಂಸ್ಕಾರದ ಬಗ್ಗೆ..

ರಾಮಕೃಷ್ಣ ಸುಗತ

ರೇಣುಕಾ ಕೋಡಗುಂಟಿ ಅವರದು ರಾಯಚೂರು ಜಿಲ್ಲೆಯ ಮಸ್ಕಿ. ಸಧ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯಿಕ ಮತ್ತು ಸಂಶೋಧನಾತ್ಮಕ ಕ್ರಿಯೆಗಳಲ್ಲಿ ತೊಡಗಿಕೊಂಡಿರುವ ಇವರು ಹಲವಾರು ಗ್ರಂಥಗಳನ್ನು ಪ್ರಕಟಿಸಿದ್ದಾರೆ.. ‘ಕರ್ನಾಟಕದಲ್ಲಿ ಶವಸಂಸ್ಕಾರ’ ಎನ್ನುವ ಹೆಸರಿನಲ್ಲಿ, ೨೦೦೯ ರಲ್ಲಿ ಇದರ ಮೊದಲ ಭಾಗವು ಪ್ರಕಟವಾಗಿದೆ. ಸಧ್ಯದ ಈ ಶವಸಂಸ್ಕಾರ ಕುರಿತ ಸಂಪಾದಿತ ಕೃತಿಯು ಎರಡನೇ ಭಾಗವಾಗಿದೆ. ಮೊದಲನೇಯದು ಬಂಡಾರ ಪ್ರಕಾಶನ, ಮಸ್ಕಿ ಇವರಿಂದ ಪ್ರಕಟವಾಗಿದೆ ಮತ್ತು ಎರಡನೇ ಈ ಭಾಗವು ಸಾಧನ ಪ್ರಕಾಶನ, ಬೆಂಗಳೂರು ಇವರಿಂದ ಹೊರಬಂದಿದೆ.

ಮನುಷ್ಯ ಮೊದಮೊದಲು ಶುರುಮಾಡಿದ ಆಚರಣೆಗಳಲ್ಲಿ ಈ ಶವಸಂಸ್ಕಾರವೂ ಒಂದು. ಇದು ಎಲ್ಲೆಡೆ ಒಂದೇ ರೀತಿಯದಲ್ಲ. ಭಿನ್ನ ಪ್ರದೇಶಗಳ ಭಿನ್ನ ಸಮುದಾಯಗಳು ತಮಗೆ ಅನುಕೂಲವೆನಿಸುವ ಮತ್ತು ತಮ್ಮ ಧಾರ್ಮಿಕ/ ಸಾಮಾಜಿಕ/ ಪ್ರಾಕೃತಿಕ ಸನ್ನಿವೇಶ ಅಥವ ಭಾವನೆಗಳಿಗೆ ಅನುಗುಣವಾಗಿ ವಿವಿಧ ಪದ್ಧತಿಗಳನ್ನು ಅಳವಡಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಹೂಳುವುದು, ಸುಡುವುದು, ನೀರಿನಲ್ಲಿ ಬಿಡುವುದು, ಬಯಲಿಗೆ ಇರಿಸುವುದು ಮುಂತಾದ ವಿಧಾನಗಳನ್ನು ಈ ಶವಸಂಸ್ಕಾರದಲ್ಲಿ ಕಾಣಬಹುದು. ಮಾನವನ ಸಾಮಾಜಿಕ ಇತಿಹಾಸದ ಅಧ್ಯಯನದಲ್ಲಿ ಶವಸಂಸ್ಕಾರ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದೊಂದು ಜನಪದ ಆಚರಣೆಯಂತೆಯೂ ಅಧ್ಯಯನಕ್ಕೆ ಒಳಪಟ್ಟಿದೆ. ಅದರಂತೆಯೇ ಈ ಗ್ರಂಥದಲ್ಲಿ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಕುರಿತಂತೆ ಸುಮಾರು ೨೧ ಲೇಖನಗಳಿದ್ದು ವಿವಿಧ ಮಾದರಿಯಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಈ ಪುಸ್ತಕದಲ್ಲಿರುವ ೨೧ ಲೇಖನಗಳು ೨೧ ವಿವಿಧ ಸಮುದಾಯಗಳ ಕುರಿತು ಮಾತನಾಡುತ್ತವೆ. ಅವುಗಳೆಂದರೆ- ಇರುಳಿಗ, ಕರ್‌ಕರ್ ಮುಂಡ, ಕಾಡುಕುರುಬ, ಕಾಡುಗೊಲ್ಲ, ಕುಡುಬಿ, ಕೊರಚ, ಗಂಟಿಚೋರ್, ಗೊಂದಲಿಗ, ಗೊರವ, ಚೆನ್ನದಾಸ್, ಜೇನುಕುರುಬ, ತಿಗಳ, ದುರುಗಿ ಮರಗಿ, ಮ್ಯಾಸಬೇಡ, ಪಾರ್ದಿ, ಪುರಾಣಿ ಸೋಲಿಗ, ಲಂಬಾಣಿ, ವಡ್ಡ (ಭೋವಿ), ಹಂಡಿಜೋಗಿ, ಹಕ್ಕಿಪಿಕ್ಕಿ, ಮಾಂಗ್‌ಗಾರುಡಿ. ಇವುಗಳಲ್ಲದೆ ಕರ್ನಾಟಕದಲ್ಲಿ ಹಲವಾರು ಬುಡಕಟ್ಟುಗಳಿವೆ.

ಆ ಎಲ್ಲಾ ಬುಡಕಟ್ಟುಗಳ ಪಟ್ಟಿಯನ್ನು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ. ಮೊದಲ ಮತ್ತು ಈ ಸಂಪುಟ ಸೇರಿ ಬಹುತೇಕ ಸಮುದಾಯಗಳನ್ನು ಅಧ್ಯಯನದ ಅಡಿ ತರಲಾಗಿದೆ. ಉಳಿದಂತೆ ಈ ಯೋಜನೆಯನ್ನು ಇನ್ನೂ ಸಹ ಮುಂದುವರೆಸುವ ಸುಳಿವನ್ನು ಸಂಪಾದಕರು ನೀಡಿದ್ದಾರೆ. ಅಲ್ಲದೆ ಒಂದು ಲೇಖನದಿಂದ ಒಂದು ಸಮುದಾಯದ ಶವಸಂಸ್ಕಾರ ಪದ್ಧತಿಯನ್ನು ಸಂಪರ‍್ಣವಾಗಿ ಹಿಡಿದಿಡುವುದು ಕಷ್ಟ. ಅಲ್ಲದೇ ಸಮುದಾಯ ಒಂದೇ ಆಗಿದ್ದರೂ ಬೇರೆ ಬೇರೆ ಆಚರಣೆಗಳು ಇರುವುದನ್ನು ಕಾಣಬಹುದು. ಅದನ್ನೂ ಸಹ ಪ್ರಸ್ತುತ ಗ್ರಂಥದಲ್ಲಿ ಚರ್ಚಿಸಲಾಗಿದೆ.

ಬಹುತೇಕ ಸಿನಿಮಾಗಳು, ಅಥವ ಇನ್ನಿತರೆ ಜನಪ್ರಿಯ ಮಾಧ್ಯಮಗಳಲ್ಲಿ ನಾವು ಕಾಣುವುದು ಸುಡುವುದು ಇಲ್ಲವೆ ಹೂಳುವುದು. ಅದೂ ಸಹ ಒಂದೇ ರೀತಿಯ ಆಚರಣೆಗಳನ್ನು ತೋರಿಸುವುದರಲ್ಲಿ ಅವು ಸುಮ್ಮನಾಗಿಬಿಡುತ್ತವೆ. ಅಷ್ಟಕ್ಕೂ ಶವಸಂಸ್ಕಾರವನ್ನು ವಿವರವಾಗಿ ತೋರಿಸಲಿಕ್ಕೆ ಅದೇನೂ ಅವುಗಳ ಮೂಲ ಉದ್ದೇಶವಲ್ಲವಲ್ಲ. ಕಾಲಬದಲಾದಂತೆ ಎಲ್ಲಾ ಆಚರಣೆಗಳು ಬದಲಾವಣೆಗೆ ಒಳಪಡುತ್ತಿರುವುದನ್ನು ನಾವು ಕಾಣುತ್ತೇವೆ. ಇದೂ ಸಹ ಅದರಿಂದ ಹೊರತೇನಲ್ಲ. ಆದರೆ ಬೇರೆ ಆಚರಣೆಗಳಿಗೆ ಹೋಲಿಸಿದರೆ ಇದರ ಬದಲಾವಣೆಯ ವೇಗ ಕಡಿಮೆಯಷ್ಟೆ.

ಮಹಾನಗರಗಳ ಆಧುನಿಕ ಜೀವನದ ಗತಿಯಲ್ಲಿ ಶವಸಂಸ್ಕಾರವು ಶವಾಗಾರ/ಚಿತಾಗಾರಗಳ ಮೂಲಕವೇ ನೇರವೇರುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರವೇ ಈ ಆಚರಣೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಅದೂ ಸಹ ಕಣ್ಮರೆಯಾಗುವ ದಿನಗಳು ಸಹ ಬರಬಹುದು. ಆ ಕಾಲ ಬರುವ ಮುನ್ನವೇ ಅಥವಾ ಆಧುನಿಕತೆಗೆ ಆಚರಣೆಗಳು ಬದಲಾಗುವ ಮುನ್ನವೇ ಇಂತಹ ಅಧ್ಯಯನಗಳ ಮೂಲಕ ಆ ಆಚರಣೆಗಳನ್ನು ದಾಖಲುಮಾಡುವುದು ಮಹತ್ತರವಾದ ಮತ್ತು ಅನಿವಾರ್ಯವಾದ ಕಾರ್ಯವಾಗಿದೆ. ಮತ್ತದನ್ನು ಈ ಸಂಪುಟಗಳು ಮಾಡಿವೆ ಎಂದು ಹೇಳಬಹುದು.

ಬಹುಸಂಸ್ಕೃತಿಯನ್ನು ನಿರಾಕರಿಸುತ್ತಿರುವ ಈ ಹೊತ್ತಿನಲ್ಲಿ ಅದನ್ನು ಕಾಪಿಡುವುದು ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಒಂದೊಂದು ಆಚರಣೆಯೂ ಸಹ ತನ್ನದೇಯಾದ ಹಿನ್ನೆಲೆಯನ್ನು ಒಳಗೊಂಡಿರುತ್ತದೆ. ಅದನ್ನು ಹುಡುಕಿ ತೆಗೆಯುವುದು ಸಂಶೋಧನೆಯ ಮುಖ್ಯ ಕೆಲಸ. ಪ್ರತಿ ಸಮುದಾಯವೂ ಸಹ ತನ್ನ ಸುತ್ತಮುತ್ತಲ ಪರಿಸರದ ಸಸ್ಯಗಳೊಂದಿಗೆ, ಪ್ರಾಣಿಗಳೊಂದಿಗೆ ಅವಿನಾಭಾವ ಸಂಬAಧವನ್ನು ಹೊಂದಿರುತ್ತದೆ. ಅದನ್ನು ಶವ ಸಂಸ್ಕಾರದಲ್ಲಿಯೂ ಕಾಣಬಹುದು.

ತಮ್ಮ ಪುರಾತನರಿಗೆ ಪೂಜಿಸಲು ಕುರಿ, ಕೋಳಿ ಮುಂತಾದುವನ್ನು ಬಲಿಕೊಡುವ ಪದ್ಧತಿಗಳು ಸಹ ಇದರ ಹಿನ್ನೆಲೆಯವೆ. ಆದರೆ ಕಾಲಬದಲಾದಂತೆ ಅನಿವಾರ್ಯವಾಗಿ ಹಲವಾರು ಆಚರಣೆಗಳು ಬದಲಾವಣೆಗೆ ಒಳಪಡಬೇಕಾಗುತ್ತದೆ. ಉದಾಹರಣೆಗೆ ಇರುಳಿಗರು ಸತ್ತವರ ಶವವನ್ನು ಕಲ್ಲುಗಳಿಂದ ಮುಚ್ಚಿಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಇತರೆ ಸಮುದಾಯದವರೊಂದಿಗೆ ಕೂಡಿ ಬದುಕಬೇಕಾದುದರಿಂದ, ಹಾಗೆ ಕಲ್ಲುಗಳಿಂದ ಮುಚ್ಚಿಡುವುದರಿಂದ ಶವ ವಾಸನೆ ಬರುವುದರಿಂದ ಆಚರಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗುತ್ತದೆ.

ಆತ್ಮದ ಇರುವಿಕೆ ಮತ್ತು ಮರುಜನ್ಮದ ಮೇಲಿನ ನಂಬಿಕೆಗಳಿಗನುಗುಣವಾಗಿ ಸಹ ಆಚರಣೆಗಳು ರೂಢಿಯಲ್ಲಿರುತ್ತವೆ. ಸೂತಕದ ಹಿನ್ನೆಲೆಯೂ ಸಹ ಇದರ ವ್ಯಾಪ್ತಿಯಲ್ಲಿದೆ. ಸಾಮಾನ್ಯವಾಗಿ ಗಂಡ ಸತ್ತರೆ ಹೆಣ್ಣನ್ನು ವಿಧವೆ ಮಾಡುವ ಪದ್ಧತಿಯನ್ನು ಎಲ್ಲೆಡೆ ಕಾಣುತ್ತೇವೆ. ಆದರೆ ಕಾಡುಗೊಲ್ಲರಲ್ಲಿ ಇದು ಬೇರೆಯದೇ ರೀತಿಯಲ್ಲಿದೆ. ಗಂಡ ಸತ್ತರೂ ಕೃಷ್ಣನೇ ಅವರ ಗಂಡ ಎನ್ನುವ ನಂಬಿಕೆ ಅವರಲ್ಲಿರುವುದರಿಂದ, ಹೆಣ್ಣಿನ ತಾಳಿ ಕೀಳುವುದಾಗಲೀ, ಕುಂಕುಮ ಅಳಿಸುವುದಾಗಲೀ, ಬಳೆ ಒಡೆಯುವುದಾಗಲೀ ಮಾಡುವುದಿಲ್ಲ. ಮದುವೆಯಾಗಿ ಸತ್ತರೆ, ಮದುವೆಯಾಗದೆ ಸತ್ತರೆ, ಅದು ಗಂಡೋ ಅಥವಾ ಹೆಣ್ಣಾಗಿದ್ದರೆ ಅವರ ಸಂಸ್ಕಾರಕ್ಕೆ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸುತ್ತರೆ.

ಕೆಲವೊಮ್ಮೆ ಸತ್ತ ಸ್ಥಳ ಮತ್ತು ರೀತಿಯಿಂದಲೂ ಸಹ ಆಚರಣೆಯ ಕ್ರಮವು ವಿಭಿನ್ನವಾಗುತ್ತದೆ. ಪ್ರಾಣಿ ಪಕ್ಷಿಗಳಿಗೆ ಎಡೆ ಇಡುವುದು, ದಿವಸ ಮಾಡುವುದು, ಇಷ್ಟುದಿನದ ಮಟ್ಟಿಗೆ ಮನೆಬಿಡುವುದು, ಮನೆಯಲ್ಲಿ ದೀಪ ಹಚ್ಚುವುದು, ಸಮಾಧಿಯೊಂದಿಗೆ ವಸ್ತುಗಳನ್ನು ಇಡುವುದು ಇನ್ನು ಮುಂತಾದ ವಿವಿಧ ಆಚರಣೆಗಳನ್ನು ಅನುಸರಿಸುವುದನ್ನು ಕಾಣಬಹುದು. ಈ ಎಲ್ಲಾ ಮತ್ತು ವಿವಿಧ ವಿಷಯಗಳನ್ನು ಈ ಗ್ರಂಥದಲ್ಲಿ ದಾಖಲು ಮಾಡಲಾಗಿದೆ. ಒಟ್ಟಿನಲ್ಲಿ ಶವಸಂಸ್ಕಾರ ಕುರಿತಂತೆ ಬಿಡಿಬಿಡಿಯಾದ ಜೊತೆಗೆ ಸಮಗ್ರವಾದ ವಿವರಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.

‍ಲೇಖಕರು Avadhi

May 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: