ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಫಿ, ಸಂವಾರ್ಥ ಮತ್ತು ಶಮಾ… ಈ ವಾದಗಳಲ್ಲಿ ಮುಖ್ಯವಾದ ಒಂದು ವಿಷಯ ಗಣನೆಗೆ ಬಂದಿಲ್ಲ.

ರೋಹಿತ್ ವೇಮುಲ ಆತ್ಮಹತ್ಯೆಗೆ Just Shafi ಪ್ರತಿಕ್ರಿಯಿಸಿದ್ದರು ಆತ್ಮಹತ್ಯೆ ಯಾಕೆ ಎನ್ನುವುದು ಅವರ ಬರಹದ ಮುಖ್ಯ ಪ್ರಶ್ನೆಯಾಗಿತ್ತು.

ಅದು ಇಲ್ಲಿದೆಅದಕ್ಕೆ ಸಂವರ್ಥ ಸಾಹಿಲ್ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ. ಸಂವರ್ಥ ಕೊಟ್ಟ ಪ್ರತಿಕ್ರಿಯೆಗೆ ಶಮ ನಂದಿಬೆಟ್ಟ ತೀವ್ರವಾಗಿ ಪ್ರತಿಕ್ರಿಯಿಸಿದ್ದರು

ಈ ಮೂರೂ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಜಿ ಎನ್ ನಾಗರಾಜ್ ನೀಡಿರುವ ನೋಟ ಇಲ್ಲಿದೆ 

ನೀವೂ ಚರ್ಚೆಯಲ್ಲಿ ಭಾಗವಹಿಸಿ  

g n nagaraj

ಜಿ ಎನ್ ನಾಗರಾಜ್ 

ಶಫಿ, ಸಂವಾರ್ಥ, ಮತ್ತು ಶಮಾ -ಈ ಮೂರೂ ಜನರ ನಡುವಣ ಸಂವಾದ ಓದಿದೆ.

ಇದೇ ಸಂವಾದ ಬೇರೆ ಬೇರೆ ಗುಂಪುಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ನಡೆದಿದೆ. ನಾವೆಲ್ಲರೂ ಇಂತಹ ಪರಿಸ್ಥಿತಿಯನ್ನು ಯಾರೇ ಆಗಲಿ ದಿಟ್ಟತನದಿಂದ ಎದುರಿಸಬೇಕೆಂದು ಬಯಸುತ್ತೇವೆ. ನಿಜ. ಆದರೆ ಮಾನವ ಮನಸ್ಸಿನ ವಾಸ್ತವದ ಬಗ್ಗೆ ಕೂಡ ಅರಿವು ಬೇಕು. ಈ ವಾದಗಳಲ್ಲಿ ಮುಖ್ಯವಾದ ಒಂದು ವಿಷಯ ಗಣನೆಗೆ ಬಂದಿಲ್ಲ.

rohith vemula fan

ಅದು ಆತ್ಮಹತ್ಯೆ ಮತ್ತು ಮಾನವ ಮನಸ್ಸು ಮತ್ತು ಮೆದುಳಿನ ರಚನೆಯ ನಡುವಣ ಸಂಬಂಧ. ವ್ಯಕ್ತಿಗಳ ನಡುವೆ ಅನೇಕ ವ್ಯತ್ಯಾಸಗಳಿದ್ದಂತೆ ಅವರ ಮೆದುಳಿನ ರಾಸಾಯನಿಕ ರಚನೆ ಮತ್ತು ಮನಸ್ಸಿನ ಭಾವನೆಗಳ ನಡುವೆ ಬಹಳ ಹತ್ತಿರದ ಸಂಬಂಧ ಇದೆ. ಪ್ರಜ್ಞೆ ಮತ್ತು ಸುಪ್ತ ಪ್ರಜ್ಞೆ ಎಂಬುದೂ ಇದೆ. ಪರಿಸ್ಥಿತಿಯ ವ್ಯತ್ಯಾಸಗಳು ವಿವಿಧ ವ್ಯಕ್ತಿಗಳ ಮೇಲೆ ಕೇವಲ ಸುಪ್ತ ಪ್ರಜ್ಞೆಯ ಮಟ್ಟದಲ್ಲಿ ಹಾಗೂ ರಾಸಾಯನಿಕಗಳ ಉತ್ಪಾದನೆಯ ಮಟ್ಟದಲ್ಲಿ ಮಾನವ ಪ್ರಜ್ಞೆಗೆ ಅರಿವೇ ಇಲ್ಲದಂತೆ ಪರಿಣಾಮಗಳನ್ನು ಉಂಟು ಮಾಡುತ್ತಿರುತ್ತವೆ. ಅದು ಅವನ ವಂಶವಾಹಿಗಳ ಮೇಲೆ , ಬಾಲ್ಯದ ಅನುಭವ ಮತ್ತು ಬೆಳವಣಿಗೆ ಮೇಲೆ ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿ ಪ್ರೌಢನಾದ ಮೇಲೆ ಪಡೆಯುವ ಬೌದ್ಧಿಕ ಬೆಳವಣಿಗೆ ಇದನ್ನು ಪೂರ್ಣವಾಗಿ ನಿವಾರಿಸಿಬಿಡುವುದಿಲ್ಲ.

ಪರಿಸ್ಥಿತಿಯಲ್ಲಿ ಉಂಟಾಗುವ ಪೂರ್ತಿಯಾದ ನೆಗಟಿವ್ ಆದ ಬೆಳವಣಿಗೆ ಅಂತಹ ವ್ಯಕ್ತಿಗಳಲ್ಲಿ ಮಾನಸಿಕ ಭಾವನೆಗಳನ್ನು ಏರು ಪೇರು ಮಾಡುವಂತಹ ರಾಸಾಯನಿಕಗಳನ್ನು ಉತ್ಪಾದನೆಯನ್ನು ಟ್ರಿಗ್ಗರ್ ಮಾಡುತ್ತದೆ. ಪ್ರತಿಕೂಲ ಪರಿಸ್ಥಿತಿ ಮುಂದುವರೆದಂತೆ ಆ ವ್ಯಕ್ತಿಗೆ ಅರಿವೇ ಇಲ್ಲದಂತೆ ಈ ರಾಸಾಯನಿಕಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಅವು ಆ ವ್ಯಕ್ತಿಯ ವರ್ತನೆಯ ಮೂಲಕ ಕೆಲವು ಸಂಜ್ಞೆಗಳನ್ನು ನೀಡುತ್ತವೆ . ಇದು ಆ ವ್ಯಕ್ತಿಗೆ ಅರಿವಿರುವುದಿಲ್ಲ. ಬದಲಾಗಿ ಸುತ್ತ ಮುತ್ತಲಿನವರು ಸೂಕ್ಷ್ಮವಾಗಿದ್ದರೆ ಮಾತ್ರ ಅರಿವಿಗೆ ಬರುತ್ತದೆ.

ರೋಹಿತ್ ನ ವಿಚಾರದಲ್ಲಿ ಇಂತಹ ಹಲವು ಪ್ರತಿಕೂಲ ಬೆಳವಣಿಗೆಗಳಾಗಿವೆ. ಹಲವು ತಿಂಗಳುಗಳಿಂದ ವಿದ್ಯಾರ್ಥಿ ವೇತನ ಬಾರದೆ ಅವನು ಮತ್ತು ಇತರ ಗೆಳೆಯರಿಗೂ ತೊಂದರೆಯಾಗುತ್ತದೆ. ನಂತರ ನೊಂದು ಡಾಕ್ಯುಮೆಂಟರಿ ತೋರಿಸಲಾಗದ ಅಸಹಾಯಕತೆ, ಅದರಿಂದ ಏಬಿವಿಪಿ ನಾಯಕರ ಮೇಲೆ ಹುಟ್ಟಿದ ಕೋಪ, ಅವರ ಟೀಕಾ ಧಾಳಿಯಿಂದ ಮತ್ತಷ್ಟು ಬೆಳೆದು ಸಂಘರ್ಷಕ್ಕೆ ಈಡು ಮಾಡಿದ್ದು. ವಿವಿ ಉಪಕುಲಪತಿಯಿಂದ ರಸ್ಟಿಕೇಷನ್ ಮತ್ತು ನಾಲ್ಕಾರು ತಿಂಗಳ ನಂತರ ಹಾಸ್ಟೆಲಿನಿಂದ ಹೊರದಬ್ಬಿದ್ದು..  ಇಂತಹ  ಪರಿಸ್ಥಿತಿಯಲ್ಲಿ ಮನೆಯಿಂದ, ಗೆಳೆಯರಿಂದ ಕೂಡ ಯಾವುದೇ ನೆರವು ಸಿಗದ ಸ್ಥಿತಿ. ಅವರ ಪ್ರತಿಭಟನೆಗೆ ಸ್ಪಂದನೆ ಸಿಗದೇ ಹೋದದ್ದು.

ಈ ಎಲ್ಲ ಸೇರಿ ಅವನು ವಿಷ ಕೊಡಿ ಅಥವಾ ನೇಣು ಹಗ್ಗ ಕೊಡಿ ಎಂದು ವಿಸಿಗೆ ಪತ್ರ ಬರೆದದ್ದು ಅವನಲ್ಲೆ ಬೆಳೆಯುತ್ತಿದ್ದ ಹತಾಶೆಯ ಮೊದಲ ಸೂಚನೆ ಅದನ್ನು ನಿರ್ಲಕ್ಷಿಸಿದಾಗ ಅವನ ಮೆದುಳಿನಲ್ಲಿ ಪ್ರತಿಕೂಲ ರಾಸಾಯನಿಕಗಳ ತಯಾರಿಕೆ ತೀವ್ರಗೊಂಡು ಅದರ ಪ್ರಮಾಣ-ಕಾನ್ಸಂಟ್ರೇಷನ್ ಅವನ ವಿಚಾರಶೀಲತೆಯನ್ನು ಮಂಕುಗೊಳಿಸುವಂತಹ ಪ್ರಮಾಣಕ್ಕೆ ಬೆಳೆಸಿರುತ್ತದೆ. ಅವನ ಜೊತೆ ಯಾರಾದರೂ ಹಿಂದಿನ ದಿನ ಕೂಡ ನಿರಾಶಾ ಭಾವನೆಯ ಮಾತುಗಳನ್ನಾಡಿದ್ದರೆ ಅವನೇ ಅವರಿಗೆ ಧೈರ್ಯ ಹೇಳುವ ಸಂಭವವೇ ಇರುತ್ತಿತ್ತೇನೋ.

ಅದೇ ಸಮಯದಲ್ಲಿ ಅವನ ಜೊತೆ ಹೊರದೂಡಲ್ಪಟ್ಟ ಇತರರಲ್ಲಿ ಈ ಪರಿಸ್ಥಿತಿ ಕೆಚ್ಚು ಮೂಡಿಸಿ ಮತ್ತಷ್ಟು ಗಟ್ಟಿಯಾಗಿಸಬಹುದು. ಇದು ಆಯಾ ವ್ಯಕ್ತಿಗಳ ಮೆದುಳಿನ ರಚನೆಗೆ ಸಂಬಂಧಿಸಿದ್ದು. ದೊಡ್ಡ ಪ್ರಮಾಣದ ಮತ್ತು ಬಹಳ ಜನರ ಮೇಲೆ ಪರಿಣಾಮ ಬೀರುವ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ರೈತ ಆತ್ಮಹತ್ಯೆಗಳು , ವಿದ್ಯಾರ್ಥಿ ಆತ್ಮ ಹತ್ಯೆಗಳು ಇಂತಹವು ಜರುಗುತ್ತವೆ. ಏಕೆಂದರೆ ಇವು ವಿವಿಧ ರೀತಿಯ ಮೆದುಳಿನ ರಾಸಾಯನಿಕ ರಚನೆಯ ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತ ಅವರಲ್ಲಿ ಕೆಲವರ ಮೇಲೆ ಆತ್ಮಹತ್ಯೆಯಂತಹ ವರ್ತನೆಯನ್ನು ಟ್ರಿಗ್ಗರ್ ಮಾಡುವಂತಹ ಪರಿಣಾಮ ಮಾಡುತ್ತದೆ.

ಅಂತಹ ಸಂದರ್ಭಗಳಲ್ಲಿ ಮಾತ್ರವಲ್ಲ ಎಂತಹುದೇ ಆತ್ಮಹತ್ಯೆಗಳ ಸಂದರ್ಭದಲ್ಲಿಯೂ ಜರಿಯುವುದಕ್ಕಿಂತ ಅರಿಯುವ ಪ್ರಯತ್ನವೇ ವೈಜ್ಞಾನಿಕ ಮತ್ತು ಮಾನವೀಯ . ಪ್ರತಿಯೊಂದನ್ನೂ ತಮ್ಮ ಅನುಭವ ಮಾತ್ರದಿಂದಲೆ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅಳೆಯಲಾಗುವುದಿಲ್ಲ. ಇಂತಹ ವರ್ತನೆಗೆ ಕಾರಣವಾದ ಪರಿಸ್ಥಿತಿಯನ್ನು ದೂಷಿಸುವ , ಬದಲಾಯಿಸುವ ಬದಲು ರೈತರನ್ನು, ವಿದ್ಯಾರ್ಥಿಗಳನ್ನು, ಪ್ರೇಮಿಗಳನ್ನು, ರೋಹಿತ್ ನನ್ನು ದೂರುವುದು ಈ ಆತ್ಮಹತ್ಯೆ ಮಾತ್ರವಲ್ಲ ಮುಂದಿನ ಆತ್ಮಹತ್ಯೆಗಳನ್ನೂ ನಿಲ್ಲಿಸಲಾಗುವುದಿಲ್ಲ.

ಜಾತಿ ವ್ಯವಸ್ಥೆ ಎಂಬ ಬಂಡೆಗಲ್ಲು ಒಂದು ಕಡೆ ಪ್ರೇಮ ವೈಫಲ್ಯ ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುವಂತೆಯೇ ಮೀಸಲಾತಿಯ ಬಗ್ಗೆ ದ್ವೇಷ ಮತ್ತು ಅದರ ಪ್ರಯೋಜನ ಪಡೆದ ವಿದ್ಯಾರ್ಥಿಗಳಿಗೆ ನರಕವನ್ನೂ ಸೃಷ್ಠಿಸಿದೆ. ಅದರಲ್ಲಿಯೂ ಮೇಲ್ಜಾತಿ ಹಿಡಿತ ಪ್ರಬಲವಾಗಿರುವ ಉನ್ನತ ಐಐಟಿ, ಐಐಎಂ ಗಳಂತಹ ಸಂಸ್ಥೆಗಳಲ್ಲಿ ಇಂತಹ ಘಟನೆಗಳನ್ನು ಆಗಾಗ್ಗೆ ಕಾಣುತ್ತೇವೆ. . ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವರ ರೆಕ್ಕೆಗೆ ನೀರು ತಟ್ಟಿದಂತಾಗಿ ಮತ್ತು ಉನ್ನತ ಹುದ್ದೆಗಳಿಗೆ ಇಂತಹವರ ನೇಮಕಗಳಿಂದ ಈ ಪರಿಸ್ಥಿತಿ ಬಿಗಡಾಯಿಸಿದೆ. ಈ ಮೂಲಭೂತ ಸಂಗತಿಯನ್ನು ಕಡೆಗಿಟ್ಟು ರೋಹಿತನಂತಹ ವ್ಯಕ್ತಿಯನ್ನು ಜರಿಯುವುದು ಸರಿಯಲ್ಲ. ಅವನು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂಬವರ ಭಾವನೆಯನ್ನು ಗೌರವಿಸುತ್ತಲೇ ಈ ವಿವರಣೆ ಕೊಡಬಯಸುತ್ತೇನೆ. ನಮ್ಮ ಗುರಿ ಇಂತಹ ಆತ್ಮಹತ್ಯೆಗಳಿಗೆ ಕಾರಣವಾದ ಪರಿಸ್ಥಿತಿಗಳ ವಿರುಧ್ಧವೇ ಇರಬೇಕಾಗುತ್ತದೆ.

‍ಲೇಖಕರು Admin

21 January, 2016

6 Comments

  1. Anonymous

    Basavaraj Puranik

    suicides of talented students at university and researchers at top establishments is a legacy in our country. it is a serious problem to be probed deeply by social scientists and psychologists. but attempts in this regard have not fruitful. students welfare authorities are not well trained to handle such serious issues. my own experience at a well set up engineering college tells a pathetic state of ‘such’ shaken students, who can offer solace? parents, not all can help, institutions almost little,inspite of students advisors, society where is it? geligious heads , none approaches Lastly, the politicians and politically soft teachers. they have a great opportunity to settle the score. draw the opposition into scene and twist the whole episode. as one commentator stressed, it is the creature of present political set up. the cartoon at the top of the write up is the story of education all through the years after independence. thinkers are happy to point at a political party,forgetting the long history of such cases. the psychological state of the mind that may trigger for suicide is put forth. but who can reach him at that critical [point? Shama’s write up is meaningful as it written after undergoing all the tests and trials. I conratulate her for her positivism. poet Iqbal writes
    “tu shaheen hai,parvaj hai kaam thera
    tere saamne aasma aur bhi hai”
    “An eagle you are, born to soar
    Skies galore for you to scale”
    bravo Shama!
    A question : When the students were one the roads, no sympethetic soul seemed to have shared their agony and supported on or off the campus , If so,WHY?

    • ಶಮ, ನಂದಿಬೆಟ್ಟ

      ಧನ್ಯವಾದಗಳು ಸರ್. ನಿಮ್ಮ ದೃಷ್ಟಿಕೋನವನ್ನು ನಾನೂ ಒಪ್ಪುತ್ತೇನೆ. ಯಾವುದೇ ವಿದ್ಯಾಸಂಸ್ಥೆಗಳು ವಿದ್ಯಾರ್ಥಿ ಮತ್ತು ಅವನ/ಳ ಕಲ್ಯಾಣ ಕೇಂದ್ರಿತ (Student and his/her welfare centered) ಆಗಿರದೇ ಇತರ ಹಿತಾಸಕ್ತಿಗಳ ಕಪಿಮುಷ್ಟಿಯೊಳಗಿದ್ದು ಕೆಲಸ ಮಾಡುವುದು ನಿಂತಾಗ ಮಾತ್ರ ನಮ್ಮ ಯುವಜನ ನಕ್ಷತ್ರಗಳ ಹಿಡಿಯುವ ಕನಸು ನನಸಾಗಲು ಸಾಧ್ಯ.

      “An eagle you are, born to soar
      Skies galore for you to scale” touched me.

      An extra thanks for that.

  2. Anonymous

    Basavaraj Puranik

    passing all the kills and ills at university to the target political party seems to be the pastime of thinkers at large. suicides at universities and at top research institutions is a bitter legacy of the post independence. When were the appointments free from political bias? when a student is under mental stress, who nears him? no effective solution. when the students were on the roads, no empathetic soul seemed to have heard and helped them on or off campus.Has charity gone dry? these issues trouble every one. Shama’s realistic assessment is sound as it is backed by her own bitter experiences. hats off to her.

  3. ಚಂದ್ರಪ್ರಭಾ ಬಿ.

    ನಾಗರಾಜ್ ರವರ ವಿಶ್ಲೇಷಣೆ ಸಮಯೋಚಿತ, ಸಂದರ್ಭೋಚಿತ. ಆತ್ಮಹತ್ಯೆಯಂಥ ವಿಷಮ ಸ್ಥಿತಿಗೆ ಕಾರಣವಾಗಬಹುದಾದ ಒತ್ತಡಕ್ಕೆ ಇರಬಹುದಾದ ಆಯಾಮಗಳು ಹಲವು. ವಾದಸರಣಿಗೆ ನಿಲುಕದವುಗಳು. ಒಟ್ಟಾರೆ ಸಮಾಜ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಇದಕ್ಕೆ ಕಾರಣವಾದ ಹಿನ್ೆಲೆಯಲ್ಲಿ ವ್ಯಕ್ತಿಗಳು ವಿಶಾಲ ದೃಷ್ಟಿಕೋಣ ಹೊಂದುವ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಿದೆ…ನಿಮ್ಮ ಅರ್ಥವತ್ತಾದ ಆಲೊೋಚನೆಗಳಿಗೆ ಅಭಿನಂದನೆಗಳು ಸರ್.

  4. Gn Nagaraj

    ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಾತ್ಮಹತ್ಯೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಅವರಿಗೆ ಅಲ್ಲಿ ಆತ್ಮೀಯ ಬೆಂಬಲ ನೀಡುವ ವ್ಯವಸ್ಥೆಯಿಲ್ಲ. ಿದೆಲ್ಲ ನಿಜ ಾದರೆ ಅದರಲ್ಲಿ ದಲಿತ ವಿದ್ಯಾರ್ಥಿಗಳ ಡ್ರಾಪ್ ಔಟ್ ದರ ಮತ್ತು ಅವರ ಾತ್ಮಹತ್ಯೆಯ ದರ ಇತರೆಲ್ಲರಿಗಿಂತ ಏಕೆ ಹೆಚ್ಚು ? ಈ ವಿದ್ಯಾರ್ಥಿಗಳಲ್ಲಿ ಹಲವರು ಉಳಿದೆಲ್ಲಾ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದರೂ ಕೆಲ ಉಚ್ಛ ಜಾತಿಗಳ ಜಾತಿವಾದಿ ಪ್ರಾಧ್ಯಾಪಕರುಗಳ ವಿಷಯದಲ್ಲಿ ಮತ್ತೆ ಮತ್ತೆ ಫೇಲಾಗಿ ಕೋರ್ಟ್ ಗಳಿಗೆ ಹೋಗಿ ಕೋರ್ಟ್ ನೇಮಿಸಿದ ಪರೀಕ್ಷಕರಿಂದ ಉತ್ತಮ ಅಂಕಗಳನ್ನು ಗಳಿಸಿದ ುದಾಹರಣೆಗಳೂ ಇವೆ. ಇಂತಹವುಗಳ ಬಗ್ಗೆ ಯೂಜಿಸಿ ಒಂದು ಅಧ್ಯಯನವನ್ನೆ ನಡೆಸಿತು.ಅದರ ವರದಿ ಲಭ್ಯವಿದೆ.
    ಇನ್ನು ರೋಹಿತನ ವಿಷಯದಲ್ಲಿ ಬಹಳ ಸ್ಪಷ್ಟವಾದ ಮತ್ತು ಮೇಲಿಂದ ಮೆಲೆ ಅನ್ಯಾಯ ನಡೆದಿರುವಾಗ ಅದೂ ರಾಜಕೀಯ ಪ್ರೇರಿತವಾಗಿ ಅದರ ಬಗ್ಗೆ ಕಣ್ಣು ಮುಚ್ಚಿಕೊಳ್ಳುವುದೆಂದರೆ ಅದು ಸತ್ಯದ ವಿರೂಪ. ಮೇಲೆ ಅಂತಹ ವಿರೂಪ ಮಾಡಲು ಹೋಗಿಲ್ಲ ಅಷ್ಟೆ.

  5. ಶಮ, ನಂದಿಬೆಟ್ಟ

    ನಾಗರಾಜ್ ಸರ್,

    ನನ್ನ ವಿಜ್ಞಾನದ ತಿಳುವಳಿಕೆ ಬಹಳ ಕಡಿಮೆಯಿರುವ ಕಾರಣವಿರಬಹುದು; ನಿಮ್ಮ ರೀತಿ ಯೋಚನೆ ಮಾಡುವುದು ನನ್ನಿಂದಾಗಲಿಲ್ಲ. ನಿಮ್ಮ ವೈಜ್ಞಾನಿಕ ಒಳನೋಟ, ವಿಶ್ಲೇಷಣೆಗಳನ್ನು ಮತ್ತು ಅದರ ವಿವಿಧ ಆಯಾಮಗಳ ಬಗ್ಗೆಯೂ ಯೋಚನೆ ಮಾಡಬೇಕಾಗಿದೆ ಎಂಬ ನಿಮ್ಮ ನಿಲುವನ್ನು ಪೂರ್ತಿ ಒಪ್ಪಿಕೊಳ್ಳುತ್ತಲೇ…

    ರೋಹಿತ್ ಮಾಡಿದ್ದು ಸರಿ ಅಥವಾ ತಪ್ಪು ಅನ್ನುವುದಾಗಲೀ, ದೂರುವುದಾಗಲೀ ನನ್ನ ಪ್ರಯತ್ನವಲ್ಲ. ಅದರಿಂದ ಯಾವ ಉಪಯೋಗವೂ ಇಲ್ಲ ಬಲ್ಲೆ ನಾನು. ವ್ಯವಸ್ಥೆಯನ್ನು, ಅದರ ಹುಳುಕುಗಳನ್ನು ಚೆನ್ನಾಗಿ ಬಲ್ಲವರು, ಅದರ ಕಪಿಮುಷ್ಟಿಗೆ ಬಲಿಯಾಗಿಯೂ ಎದುರಿಸಿ ಗೆದ್ದು ಬರುವ ಛಾತಿಯುಳ್ಳವರು ಮತ್ತು ಸಾಧನೆಯ ಹುರುಪು, ಕೆಚ್ಚು ಜತೆಗೆ ಬುದ್ಧಿವಂತಿಕೆ ಇರುವವರು ಮಾತ್ರ ಮುಂಬರುವ ನಾಳೆಗಳಲ್ಲಿ ವ್ಯವಸ್ಥೆಯನ್ನು ಸ್ವಲ್ಪ ಮಟ್ಟಿಗಾದರೂ ಸರಿ ಪಡಿಸುವ ಕಡೆ ಗಮನ ಕೊಡಬಹುದು ಎನ್ನುವುದು ನನ್ನ ನಿಲುವು. ನಕ್ಷತ್ರಗಳನ್ನು ಸೇರಲು ಹೋದ ಹುಡುಗ ಇವೆಲ್ಲ ಕ್ವಾಲಿಟಿಗಳೂ ಇದ್ದ ನಕ್ಷತ್ರವೇ ಆಗಿದ್ದನಲ್ಲ; ಅಂಥ ವ್ಯಕ್ತಿತ್ವವೊಂದು ಸಮಾಜಕ್ಕೆ ನಷ್ಟವಾಯಿತು ಅನ್ನುವುದು ನನ್ನ ವಿಷಾದ. ಜತೆಗೇ ಇದನ್ನೇ ನೆಪವಾಗಿಟ್ಟುಕೊಂಡು ತಮ್ಮ ಬೇಳೆಕಾಳು ಬೇಯಿಸಿಕೊಂಡು ಫ್ಲೆಕ್ಸ್ ಬ್ಯಾನರ್ ಹಾಕಿಸಿ ಬೊಬ್ಬಿರಿಯುವ ಮಂದಿ ಹೀಗೆ ಆತ್ಮಹತ್ಯೆ ಮಾಡಿಕೊಂಡರೆ ಅದು ಹೀರೋಯಿಸಂ ಅನ್ನೋ ಥರ ಬಿಂಬಿಸಿದರೆ ಮುಂದಿನ ಪೀಳಿಗೆಗಳಿಗೆ ಇದೇ ಆದರ್ಶವಾಗಿಬಿಟ್ಟರೆ ಎಂಬ ಆತಂಕ ಕೂಡ. ಇಂದು ಈ ಹುಡುಗನ ಬಾವಚಿತ್ರ ಎಲ್ಲೆಡೆ ರಾರಾಜಿಸುವುದ ಕಂಡು ವಿವೇಕ ಸ್ವಲ್ಪ ಕಡಿಮೆ ಇರುವ ಇನ್ನೊಬ್ಬ/ಳು ಪ್ರೇರಿತವಾಗಿ ಬಿಟ್ಟರೆ ಇದು ನಿಲ್ಲುವುದಾದರೂ ಹೇಗೆ ?

    ಇನ್ನು ನೀವನ್ನುವ “ಜಾತಿ ವ್ಯವಸ್ಥೆ ಎಂಬ ಬಂಡೆಗಲ್ಲು ಮೀಸಲಾತಿಯ ಬಗ್ಗೆ ದ್ವೇಷ ಮತ್ತು ಅದರ ಪ್ರಯೋಜನ ಪಡೆದ ವಿದ್ಯಾರ್ಥಿಗಳಿಗೆ ನರಕವನ್ನೂ ಸೃಷ್ಠಿಸಿದೆ.” ಇದೇ ಮೀಸಲಾತಿ ಎಂಬ ವ್ಯವಸ್ಥೆ ಓದಲು ಬಿಡಿಗಾಸಿಲ್ಲದೇ ಒದ್ದಾಡುವ ಕಡು ಬಡತನದಲ್ಲಿರುವ ಮೇಲ್ಜಾತಿಯೆನಿಸಿಕೊಂಡ ಅರ್ಹ ಬಡ ವಿದ್ಯಾರ್ಥಿಗಳಿಗೆ ಸಿಗಬೇಕಾಗಿರುವ ಸೌಲಭ್ಯಗಳಿಂದ ವಂಚಿತರನ್ನಾಗಿಯೂ ಮಾಡಿದೆ. ನಾನು PUC ಓದುತ್ತಿದ್ದ ಕಾಲದಲ್ಲಿ ಹೀಗಾಗಿತ್ತು. ಒಬ್ಬಳು ಬ್ರಾಹ್ಮಣರ ಹುಡುಗಿಗೆ ತಲೆ ತುಂಬ ಬುದ್ಧಿ; ಮನ ತುಂಬ ಕನಸು ಆದರೆ ಮನೆಯಲ್ಲಿ ಊಟಕ್ಕಿಲ್ಲದ ಬಡತನ. ಒಂದು scholarship ಗೆ ಅರ್ಜಿ ಕಳಿಸುವ ಎಲ್ಲ ಅರ್ಹತೆ ಇದ್ದ ಹುಡುಗಿ ಪ್ರಯತ್ನದಲ್ಲಿದ್ದಳು. scholarship ಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿತ್ತು. ಪಡಕೊಳ್ಳಲು ಹೋದರೆ ತಾಲೂಕಾಫೀಸಿನಲ್ಲಿ “ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ಕೊಡೋ ರೂಲ್ಸ್ ಇಲ್ಲ. ಅವರಿಗೆ ಯಾವ ಸೌಲಭ್ಯವೂ ಇಲ್ಲ; ಆದ್ದರಿಂದ ಕೊಡೋಲ್ಲ” ಅಂದರು. “ನಂಗೆ ಬೇರೆ ಜಾತಿ ಅಂತ ಪ್ರಮಾಣ ಪತ್ರ ಬೇಡ; ಬ್ರಾಹ್ಮಣಳು ಅಂತಲೇ ಕೊಡಿ” ಅವಳು ಕಣ್ಣೀರಿಟ್ಟರೂ ಕೊಡಲಿಲ್ಲ. ಕೊನೆಗೆ “ಬ್ರಾಹ್ಮಣರಲ್ಲಿ ಬಡವರೇ ಇಲ್ಲರೀ” ತಮಾಷೆ ಮಾಡಿ ಕಳಿಸಿದರು. ಕೊನೆಗೆ ಅವಳು ದುಡ್ಡಿಲ್ಲದೇ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಸಾಯಲಿಲ್ಲ ಅನ್ನೋದು ಬಿಟ್ಟರೆ ಅವಳಿಗಾದ ಶೋಷಣೆಯೂ ರೋಹಿತನಿಗಾದಂಥದ್ದೇ. ಸತ್ತಿದ್ದು ಇಬ್ಬರದೂ ಕನಸುಗಳೇ; ರೀತಿ ಬೇರೆ ಅಷ್ಟೇ. ಇದು ನಮ್ಮ ವ್ಯವಸ್ಥೆಯ ವ್ಯಂಗ್ಯವೇ ಹೊರತು ಒಬ್ಬ ವ್ಯಕ್ತಿ ಅಥವಾ ಸಮುದಾಯದಿಂದ ಉಂಟಾದುದಲ್ಲ. ದಲಿತರಾಗಲೀ ಉಳಿದವರಾಗಲೀ ಹೇಗೆ ಈ ಜಾತಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುತ್ತಾರೋ ಹಾಗೇ ಉಳಿದವರೂ ಆಗುತ್ತಿದ್ದಾರೆ. ಆದರೆ ಅದನ್ನು ವಿಜೃಂಭಿಸಿ ಲಾಭ ಪಡೆಯಲಾಗುವುದಿಲ್ಲ ಅನ್ನೋ ಒಂದೇ ಕಾರಣಕ್ಕೆ ಯಾರೂ ಅವರ ಪರವಾಗಿ ಹೋರಾಟಕ್ಕೆ ಇಳಿಯಲಿಲ್ಲ. ಇದು ನನಗೆ ಗೊತ್ತಿರುವ ಕಥೆ. ಕೆದಕಿದರೆ ಇಂಥ ಅದೆಷ್ಟೋ ಸಿಕ್ಕಾವು. ಮೇಲ್ವರ್ಗದವರು ಬೇರೆಯವರನ್ನು ಶೋಷಿಸಲಿಕ್ಕಾಗಿಯೇ ಇದ್ದಾರೆ ಎಂಬ ಪೂರ್ವಾಗ್ರಹ ಆಳವಾಗಿ ಬೇರೂರಿದ ಕಾರಣ ಯಾರಿಗೂ ಕೆದಕುವ ಕೈ, ಕೇಳಿಸಿಕೊಳ್ಳುವ ಕಿವಿಯಿಲ್ಲವಷ್ಟೇ!!!

    ನಿಮ್ಮ ಮಾತಿನಂತೆ “ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವರ ರೆಕ್ಕೆಗೆ ನೀರು ತಟ್ಟಿದಂತಾಗಿ ಮತ್ತು ಉನ್ನತ ಹುದ್ದೆಗಳಿಗೆ ಇಂತಹವರ ನೇಮಕಗಳಿಂದ ಈ ಪರಿಸ್ಥಿತಿ ಬಿಗಡಾಯಿಸಿದೆ. ಮತ್ತು ಇದು ಮೂಲಭೂತ ಸಂಗತಿ ಅಂದಿದ್ದೀರಿ” ಹೀಗೆ ನನಗನಿಸುವುದಿಲ್ಲ. (ನಾನು ಯಾವುದೇ ಪಕ್ಷಕ್ಕೆ ಸೇರಿದವಳಲ್ಲದಿದ್ದರೂ) ಇಂದಿನಿಂದ ಹತ್ತು ವರ್ಷ ಹಿಂದಿನ ದಾಖಲಾತಿಗಳನ್ನು ತೆರೆದು ನೋಡಿದರೆ ಎಲ್ಲ ಸರ್ಕಾರದ ಕಾಲದಲ್ಲೂ ಇಂಥವು ನಡೆದಿತ್ತು; ಮತ್ತು ಸರ್ಕಾರದ ಮೇಲೆ ಕೆಸರೆರಚುವುದೂ ನಡೆದಿತ್ತು. ಹೈದರಾಬಾದ್ ವಿವಿಯಲ್ಲಿ 2013 ರಲ್ಲಿ ವೆಂಕಟೇಶ್ ಎಂಬ ಪಿ.ಎಚ್.ಡಿ ವಿದ್ಯಾರ್ಥಿ ಕ್ಯಾಂಪಸ್ ನಲ್ಲಿ ಅವಮಾನಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಂಡಾಗ, 2008 ರಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದ ವಿದ್ಯಾರ್ಥಿ ಸೆಂಥಿಲ್ ಕುಮಾರ್ ಎಂಬುವವರಿಗೆ ನೀಡುತ್ತಿದ್ದ ಫೆಲೋಶಿಪ್ ಅನ್ನು ನಿಲ್ಲಿಸಿದ ಕಾರಣಕ್ಕೆ ಆತ್ಮಹತ್ಯೆಯ ದಾರಿ ಹಿಡಿದಾಗಿನ ಸಂದರ್ಭ ಗಮನಿಸಿದರೆ ಇವತ್ತು ಸುಭಗರಂತೆ ಮಾತನಾಡುತ್ತಿರುವ ಯಾವ ರಾಜಕೀಯ ಪಕ್ಷಗಳೂ ತಮ್ಮ ಬಳಿ ಅಧಿಕಾರವಿದ್ದಾಗ ಏನೂ ಮಾಡಿರಲಿಲ್ಲ ಎಂಬುದು ಅಂಗೈ ಗೆರೆಯಷ್ಟೇ ಸ್ಪಷ್ಟ. ದಲಿತರು ವರ್ಸಸ್ ಮೇಲ್ವರ್ಗ ಎಂಬ ತಳಹದಿ ಇಟ್ಟುಕೊಂಡು ಅಕ್ರೋಶದ ಕವನ, ಸ್ಲೋಗನ್ ಬರೆದು ನಿಟ್ಟುಸಿರಾಗುವಷ್ಟು ಸರಳವಿಲ್ಲ ಸಮಸ್ಯೆ. ಭಾರತದ ಅತ್ಯಂತ ಸಣ್ಣ ಕುಗ್ರಾಮದಂಥ ಹಳ್ಳಿ ಮೂಲೆಯಲ್ಲಿ ಹುಟ್ಟಿದ ನಾನು ದಲಿತರೆಂದು ಕರೆಯಲ್ಪಡುವವರಲ್ಲಿ ಕೂಡ ಉಪವರ್ಗಗಳಿದ್ದು ಅವರೂ ತಮ್ಮ ತಮ್ಮೊಳಗೆ ಕೀಳಾಗಿ ಕಾಣುವದನ್ನು ಕಂಡು ಬೆಳೆದವಳು ನಾನು. ಆದರೆ ಅದನ್ನು ಯಾರೂ ಎಲ್ಲೂ ಉದಾಹರಿಸಿದ್ದು ಕಾಣೆ. ಈ ನಿಟ್ಟಿನಲ್ಲಿ ತುಂಬ ಅಧ್ಯಯನ ಮಾಡಿದವಳಾಗಲೀ, ತುಂಬ ಶಿಕ್ಷಣ ಪಡೆದವಳಾಗಲೀ ಅಲ್ಲದಿದ್ದರೂ ನಮ್ಮ ವ್ಯವಸ್ಥೆಯ ತಳಪಾಯವಾಗಿ ಕೆಲಸ ಮಾಡುವ ಇಂಥ ಶೋಷಣೆಗಳನ್ನು ಕಂಡು, ಕೇಳಿ, ಅನುಭವಿಸಿ ಬಲ್ಲೆ. ಈ ಬೆಳಕಿನಲ್ಲಿ ನಿಂತು ನೋಡಿದಾಗ ಮೂಲಭೂತ ಸಮಸ್ಯೆ ಜಾತಿಯದು. ಪುರೋಹಿತಶಾಹಿಯದಾಗಲೀ, ದಲಿತರದಾಗಲೀ ಅಲ್ಲವೆನಿಸುತ್ತದೆ.

    ಅವಶ್ಯಕತೆ ಇಲ್ಲದಲ್ಲೆಲ್ಲ ಧೀಂಕಿಟ ನಡೆಸುವ ಜಾತಿಯೆಂಬ ಭೂತ ಪೂರ ನಿರ್ಮೂಲನ ಆಗದ ಹೊರತು ಇದ್ಯಾವುದೂ ನಾಶವಾಗುವ ಭರವಸೆ ಇಲ್ಲ ನನಗೆ. ಮೀಸಲಾತಿ ಎಂಬುದು ಅಸಹಾಯಕರಿಗೆ ಇರಲಿ, ಬಡವರಿಗಿರಲಿ, ಅರ್ಹ ಅಂಗವಿಕಲರಿಗಿರಲಿ ಹೊರತು ಆ ಜಾತಿ ಈ ಜಾತಿಯೆಂದು ಹಣೆ ಪಟ್ಟಿ ಹಚ್ಚಿಕೊಳ್ಳುವವರಿಗಲ್ಲ.

    “ನಮ್ಮ ಗುರಿ ಇಂತಹ ಆತ್ಮಹತ್ಯೆಗಳಿಗೆ ಕಾರಣವಾದ ಪರಿಸ್ಥಿತಿಗಳ ವಿರುಧ್ಧವೇ ಇರಬೇಕಾಗುತ್ತದೆ.” ಎಂಬ ನಿಮ್ಮ ಮಾತಿಗೆ “ಹೊರತು ಯಾವುದೇ ಸಮುದಾಯ ಅಥವಾ ವ್ಯಕ್ತಿಯ ವಿರುದ್ಧವಲ್ಲ” ಎಂಬ ನನ್ನದನ್ನೂ ಸೇರಿಸಬಯಸುವೆ. ಜಾತಿಯ ಪೊರೆ ಕಳಚಿ “ಜಾತಿ ಭಾಷೆ ಪಂಥ ಹಲವು; ಅವುಗಳ ಹಿಂದೆ ಒಂದೇ ಒಲವು” ಎಂದು ನಿಜಕ್ಕೂ ಭಾವಿಸಿ ಒಟ್ಟಾದಾಗ ಮಾತ್ರ ಇಂಥ ದುರಂತಗಳ ನಿರ್ಮೂಲನೆ. ಅಲ್ಲೀ ವರೆಗೂ “ಉಹುಂ ಇಲ್ಲ”.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading