
ಎಂ ಎ ಶ್ರೀರಂಗ
ನಾನು ಈಗ ತಾನೇ ಓದಿ ಮುಗಿಸಿದ ಪುಸ್ತಕ ಎಂ ಎಸ್ ಶ್ರೀರಾಮ್ ಅವರ ‘ಶನಿವಾರ ಸಂತೆ’
ಇಂದು ಅಭಿವೃದ್ಧಿ ಮತ್ತು ವಿಕಾಸದ ಬಗ್ಗೆ ನಾನಾ ರೀತಿಯ ವ್ಯಾಖ್ಯೆಗಳು, ಅಪವ್ಯಾಖೆಗಳು ಚಾಲ್ತಿಯಲ್ಲಿವೆ. ಒಂದು ಪಕ್ಷದ ಸರ್ಕಾರ ‘ಬನ್ನಿ ನಮ್ಮಲ್ಲಿ ಇನ್ವೆಸ್ಟ್ ಮಾಡಿ, ನಿಮಗೆ ಬೇಕಾದ ಸಕಲ ಸವಲತ್ತು ಭೂಮಿ ಕೊಡುತ್ತೇವೆ’ ಎಂದರೆ ಅದು ರೈತ ವಿರೋಧಿಯಾಗುತ್ತದೆ. ಭಾರತಾದ್ಯಂತ ಎಲ್ಲಕಡೆ ಅದರ ವಿರೋಧ ಬರುತ್ತದೆ. ಆದರೆ ಅದರ ಕಡುವಿರೋಧಿ ಪಕ್ಷ ಅದೇ ಅಜೆಂಡಾ ಇಟ್ಟು ಇನ್ವೆಸ್ಟ್ ಮಾಡಿ ಎಂದರೆ ಅದರ ವಿರುದ್ಧ ದನಿ ಎತ್ತುವವರು ಬೇರೆ ಬೇರೆ ಕೆಲಸದಲ್ಲಿ ನಿರತರಾಗಿ ಬ್ಯುಸಿ ಆಗಿರುತ್ತಾರೆ!
ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ಡೆಫಿನಿಷನ್ ಏನು? ಅದು ಸಾಪೇಕ್ಷವೋ? ನಿರಪೇಕ್ಷವೋ? ಪಕ್ಷಾತೀತವೋ?ಪಕ್ಷಪಾತವೋ? ಇವು ತಿಳಿಯದೆ ನಮ್ಮಂತಹ ಸಾಮಾನ್ಯರು ಗೊಂದಲದಲ್ಲಿ ಬೀಳುವುದು ಸಹಜ. ಶ್ರೀರಾಮ್ ಅವರು ತಮ್ಮ ಶನಿವಾರದ ಸಂತೆಯ ಈ ಬುಟ್ಟಿಯಲ್ಲಿ ವಿಕಾಸದ ವಿಚಾರಗಳನ್ನು ನಮ್ಮಂತಹ ಸಾಮಾನ್ಯರಿಗೆ ಅರ್ಥ ಮಾಡಿಸುತ್ತಾರೆ.
ಮುಖ್ಯವಾದ ಮಾತೆಂದರೆ ಇದನ್ನು ಹೇಳುವಾಗ ನಮ್ಮನ್ನು ಯಾವ ಪಾರಭಾಷಿಕ ಪದಗಳ ಕಾಡಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಗಲಿಬಿಲಿ ಮಾಡುವುದಿಲ್ಲ. ಯಾವುದೋ ಒಂದು ಪಕ್ಷದ ಅಜೆಂಡಾ ಹಿಡಿದು ಬರೆಯುವುದಿಲ್ಲ. ಇಂತಹ ಬರಹಗಳೇ ಇಂದು ನಮಗೆ ಬೇಕಾಗಿರುವುದು. ಇಲ್ಲಿಯ ಬರಹದ ಹರಹೂ ವಿಶಾಲವಾದುದು. ಬಾಂಗ್ಲಾದಿಂದ ಪ್ರಾರಂಭಿಸಿ,ನಮ್ಮ ಆಂಧ್ರದ ರಂಗಾರೆಡ್ಡಿ ಜಿಲ್ಲೆ, ಮಧ್ಯಪ್ರದೇಶದ ಮೂಲಕ ಹಾದು ಯುದ್ಧಾನಂತರದ ಅಫಘಾನಿಸ್ಥಾನದಲ್ಲಿ ಮುಕ್ತಾಯಗೊಳ್ಳುತ್ತದೆ. ತ
ಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ (micro finance) ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಮುಹಮ್ಮದ್ ಯೂನುಸ್ ಅದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದವರು. ಆ ನಂತರ ಅದು ಪಡೆದ ರೂಪಾಂತರಗಳು, ಅದರ ಸಾಫಲ್ಯ, ವೈಫಲ್ಯವಾಗಿದ್ದರೆ ಕಾರಣಗಳು ಇವೆಲ್ಲದರ ಬಗ್ಗೆ ವಿಶ್ಲೇಷಣೆಯಿದೆ. ಇದಕ್ಕೆ ಸಮಾನಾಂತರವಾಗಿ ನಮ್ಮ ಬಡ್ಡಿವ್ಯಾಪಾರಿಗಳ ಕಥೆಗಳು, ಸಾಲಮನ್ನಾದ ರಾಜಕಾರಣಗಳು, ರೈತ್ಯರು ಏತಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ? ಈ ಆತ್ಮಹತ್ಯೆಗಳ ಹಿಂದಿರುವ ನಿಜವಾದ ಕಾರಣಗಳೇನು?. ಇವೆಲ್ಲ ತಿಳಿಯಲು ಈ ಪುಸ್ತಕವನ್ನು ಒಮ್ಮೆ ಓದಿ ನೋಡಿ.
ಈ ಪುಸ್ತಕದ ಎಲ್ಲಾ ವಿಚಾರಗಳು ಅಧ್ಯಯನ ಆಧಾರಿತವಾದವುಗಳು (field work based). ಆರಾಮ ಖುರ್ಚಿಯ ಮಾತುಕತೆಗಳಲ್ಲ.




0 Comments