ನಮ್ಮ ಪೊಲೀಸರನ್ನು, ವಕೀಲರನ್ನು ಕೂಡಾ ಸಾಹಿತ್ಯ ಮೃದುಗೊಳಿಸಲು ಸಾಧ್ಯ..

ಮನುಷ್ಯರನ್ನು ಮಿದುವಾಗಿಸುವ ಸಾಹಿತ್ಯದ ಒಡನಾಟ

g p basavaraju

ಜಿ.ಪಿ.ಬಸವರಾಜು

ಮೊನ್ನೆ ಮೈಸೂರಿನಲ್ಲಿ ಕುಮಾರವ್ಯಾಸ ಭಾರತದ ವಾಚನ ಮತ್ತು ವ್ಯಾಖ್ಯಾನ ನಡೆಯಿತು. ಹಲವಾರು ವರ್ಷಗಳಿಂದ ಇಂಥ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ‘ಪರಂಪರೆ’ ಎನ್ನುವ ಸಂಸ್ಥೆ ಈ ವಾಚನವನ್ನು ಏರ್ಪಡಿಸಿತ್ತು. ಪ್ರಖ್ಯಾತ ಗಮಕಿಗಳು ಮತ್ತು ವ್ಯಾಖ್ಯಾನಕಾರರು ಭಾಗವಹಿಸಿದ್ದ ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಆಸಕ್ತರು ಉತ್ಸಾಹದಿಂದಲೇ ಬಂದಿದ್ದರು.

black and redವ್ಯಾಖ್ಯಾನಕಾರರಲ್ಲಿ ಗಮನಸೆಳೆದ ಒಂದು ಹೆಸರೆಂದರೆ ವೈ.ಎಸ್.ವಿ.ದತ್ತ ಅವರದು. ದತ್ತ ಸಕ್ರಿಯ ರಾಜಕಾರಣಿ; ಜಾತ್ಯತೀತ ಜನತಾ ದಳದ ಹಿಂದಿರುವ ಮಿದುಳು ಎಂದರೆ ಈ ದತ್ತ ಅವರೇ ಎಂದು ಹೇಳುವವರೂ ಇದ್ದಾರೆ. ಅದೇನೇ ಇರಲಿ, ದತ್ತ ಒಬ್ಬ ರಾಜಕಾರಣಿ. ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ರಾಜಕೀಯ ದಾಳವನ್ನು ಹೇಗೆ ಉರುಳಿಸಬೇಕು ಎಂಬ ಜಿಜ್ಞಾಸೆಯಲ್ಲಿಯೇ ಮುಳುಗಿರುವ ದತ್ತ ಈ ಕುಮಾರವ್ಯಾಸನ ಜೊತೆಗೆ ಹೇಗೆ ನಂಟನ್ನು ಬೆಳಸಿಕೊಂಡರು ಎಂಬುದು ಸೋಜಿಗದ ಸಂಗತಿಯೇ.

ದತ್ತ ಅವರ ವ್ಯಾಖ್ಯಾನ ಮೆಚ್ಚುವಂತಿತ್ತು ಎಂದೊಬ್ಬರು ಬೆಲೆಕಟ್ಟಿದರು. ಇದಕ್ಕೆ ಪೂರಕವೆನ್ನುವಂತೆ ಮತ್ತೊಬ್ಬರು ಹೇಳಿದರು: ಆತ ಬುದ್ದಿವಂತ; ಸಿಇಟಿ ವಿದ್ಯಾರ್ಥಿಗಳಿಗೆ ಗಣಿತವನ್ನು ಬೋಧಿಸುತ್ತಿದ್ದ. ರಾಜಕಾರಣಿಯೊಬ್ಬ ಹೀಗೆ ಅಕೆಡಮಿಕ್ ವ್ಯಕ್ತಿಯಾಗಿರುವುದನ್ನು ಜನ ಮೆಚ್ಚಿ ಗೌರವಿಸುತ್ತಾರೆ. (ಚುನಾವಣೆಯಲ್ಲಿ ಮತ ಚಲಾಯಿಸುವಾಗ ಇಂಥ ಮೆಚ್ಚುಗೆ ಮತ್ತು ಗೌರವಗಳು ಲೆಕ್ಕಕ್ಕೆ ಬರುವುದಿಲ್ಲ ಎನ್ನುವ ಎಚ್ಚರ ರಾಜಕಾರಣಿಗಳಿಗೂ ಇರುತ್ತದೆ; ಮತದಾರರಿಗೂ ಇರುತ್ತದೆ)

ಸಾಹಿತ್ಯದ ಜೊತೆ ಒಡನಾಟ ಇಟ್ಟುಕೊಳ್ಳುವ, ಅಕ್ಷರ ಮತ್ತು ಅರಿವಿನ ಬಗ್ಗೆ ಗೌರವ ಇಟ್ಟುಕೊಳ್ಳುವ ಪರಂಪರೆಯೇ ನಮ್ಮಲ್ಲಿ ಇತ್ತು. ಕೆಂಗಲ್ ಹನುಮಂತಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಮಾರವ್ಯಾಸ ಭಾರತವನ್ನು ಅಚ್ಚುಮಾಡಿಸಿ ಅದಕ್ಕೆ ಕೇವಲ ಎರಡು ರೂಪಾಯಿ ಬೆಲೆ ಇರುವಂತೆ ನೋಡಿಕೊಂಡಿದ್ದರು. ನಮ್ಮ ಜನ ಇಂಥ ಕೃತಿಗಳನ್ನು ಓದಬೇಕು, ಅದರ ತತ್ವ ಮೌಲ್ಯಗಳನ್ನು ಅರಿಯಬೇಕು, ಅದು ಸಮಾಜದ ಮುನ್ನಡೆಗೆ ನೆರವಾಗುತ್ತದೆ ಎಂಬುದು ಕೆಂಗಲರ ನಂಬಿಕೆಯಾಗಿತ್ತು.

ಯಾವುದಾದರೂ ವಿಚಾರದಲ್ಲಿ ಸಾಹಿತಿಗಳ ಸಲಹೆ ಪಡೆಯಬೇಕೆಂದರೆ ಈ ಹನುಮಂತಯ್ಯನವರು ಮುಖ್ಯಮಂತ್ರಿಯ ಕಚೇರಿಗೆ ಸಾಹಿತಿಗಳನ್ನು ಕರೆಸುತ್ತಿರಲಿಲ್ಲ. ಸ್ವತಃ ತಾವೇ ಸಾಹಿತಿಗಳ ಮನೆಗೆ ತೆರಳುತ್ತಿದ್ದರು. ಅಲ್ಲಿ ಅವರು ತೋರುತ್ತಿದ್ದ ವಿನಯ, ಗೌರವ ಮಾದರಿಯಾಗುವಂತಿರುತ್ತಿದ್ದವು. ಕುವೆಂಪು ಅವರ ಮನೆಗೆ ಕೆಂಗಲ್ ತೆರಳಿ, ಕುವೆಂಪು ಮನೆ ‘ಉದಯರವಿ’ಯಲ್ಲಿ ನಡೆದುಕೊಂಡ ರೀತಿ ಕನ್ನಡಿಗರ ಪ್ರೀತಿಗೆ ಪಾತ್ರವಾಗಿತ್ತು.

ಇಂಥ ಮುಖ್ಯಮಂತ್ರಿಗಳು ನಮ್ಮಲ್ಲಿ ಆಗಿ ಹೋಗಿದ್ದಾರೆ. ಎಸ್. ನಿಜಲಿಂಗಪ್ಪ ಈ ಸಾಲಿನಲ್ಲಿಯೇ ಬರುವ ಮುಖ್ಯಮಂತ್ರಿಯಾಗಿದ್ದರು. ಸಾಹಿತಿಗಳ ಜೊತೆ ಅವರ ಒಡನಾಟ ಗೌರವಯುತವಾಗಿಯೇ ಇರುತ್ತಿತ್ತು ಎಂದು ಬಲ್ಲವರು ಹೇಳುತ್ತಾರೆ. ಡಿ. ದೇವರಾಜ ಅರಸು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪಿ. ಲಂಕೇಶ್ ಅವರು ಕೊಟ್ಟ ಕಾಣಿಕೆ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂಬ ಪುಸ್ತಕ.

ಅರಸು ಅದನ್ನು ಬಹಳ ಶ್ರದ್ಧೆಯಿಂದ ಓದಿದರು. ಅಷ್ಟೇ ಅಲ್ಲ, ಅವರು ಗಂಭೀರ ಓದುಗರಾಗಿದ್ದರು. ಅವರಿಗೆ ಬರಹಗಾರರು ಮತ್ತು ಕಲಾವಿದರ ಬಗೆಗೆ ಇದ್ದ ಗೌರವವೇ ಕಾರಣವಾಗಿ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಅನೇಕ ಕಲಾವಿದರು ಮತ್ತು ಬರಹಗಾರರು ಜೈಲು, ಪೊಲೀಸು ಸೇರಿದಂತೆ ಹಲವಾರು ಗಂಡಾಂತರಗಳಿಂದ ಹೆಚ್ಚಿನ ತೊಂದರೆಗೆ ಒಳಗಾಗಲಿಲ್ಲ. ರಾಮಕೃಷ್ಣ ಹೆಗಡೆ ಅವರ ಸಭ್ಯ ನಾಗರಿಕ ನಡವಳಿಕೆಯ ಹಿಂದೆ ಅವರ ಸಾಹಿತ್ಯ ಮತ್ತು ಕಲಾಪ್ರೇಮ ಕ್ರಿಯಾಶೀಲವಾಗಿತ್ತು ಎಂದು ಹೇಳುವವರಿದ್ದಾರೆ.

voilence2ಜೆ.ಎಚ್.ಪಟೇಲ್ ಅವರ ಓದು, ಸಂವಾದ, ಚಿಂತನೆ ಅದ್ಭುತವಾಗಿತ್ತು. ಸಮಾಜವಾದವನ್ನು ವಿಶೇಷವಾಗಿ ಲೋಹಿಯಾ ಅವರ ಸಮಾಜವಾದಿ ಚಿಂತನೆಯನ್ನು ಪಟೇಲ್ ವ್ಯಾಖ್ಯಾನಿಸುತ್ತಿದ್ದ ರೀತಿ ಪ್ರಬುದ್ಧವಾಗಿತ್ತು. ಲಂಕೇಶ್, ಅನಂತಮೂರ್ತಿ, ಖಾದ್ರಿ ಶಾಮಣ್ಣ ಹೀಗೆ ಅನೇಕ ಸಮಾಜವಾದಿ ಚಿಂತಕರ ಜೊತೆ ಅವರು ನಡೆಸುತ್ತಿದ್ದ ಸಂವಾದ ಅರ್ಥಪೂರ್ಣವಾಗಿರುತ್ತಿತ್ತು. ಬಂಗಾರಪ್ಪ ಶಾಸ್ತ್ರೀಯ ಸಂಗೀತದ ಬಗ್ಗೆ ಅಪಾರ ಒಲವಿದ್ದವರಾಗಿದ್ದರು. ಸಂಗೀತ ಕಛೇರಿಯನ್ನು ಕೊಡುವಷ್ಟು ಹಿಂದೂಸ್ತಾನೀ ಸಂಗೀತವನ್ನು ಅವರು ಕಲಿತಿದ್ದರು. ವೀರಪ್ಪ ಮೊಯ್ಲಿ ಅವರ ಮಹಾಕಾವ್ಯಗಳ ಬಗ್ಗೆ ಮಾತನಾಡುವ ಧೈರ್ಯ ನನಗಿಲ್ಲ. ಆದರೆ ಅವರ ‘ಕೊಟ್ಟ’ ಕಾದಂಬರಿಯನ್ನು ಉಲ್ಲೇಖಿಸಬಹುದು.

ಸಮಾಜವಾದಿ ಚಿಂತಕ ಶಾಂತವೇರಿ ಗೋಪಾಲಗೌಡರ ಸಾಹಿತ್ಯ ಮತ್ತು ಸಂಸ್ಕೃತಿ ಅಭಿರುಚಿಯ ಬಗ್ಗೆ ಹಲವಾರು ಕತೆಗಳೇ ಇವೆ. ಅವರು ಕುಮಾರವ್ಯಾಸ ಭಾರತವನ್ನು ಚೆನ್ನಾಗಿ ಓದಿಕೊಂಡವರಾಗಿದ್ದರು. ಅಡಿಗರ ಕಾವ್ಯದ ಬಗ್ಗೆ ಅವರ ಅರಿವು ಆಳವಾಗಿತ್ತು. ರಾಜಕೀಯ ನಿಲುವಿನ ವಿಚಾರ ಬಂದಾಗ ಅಡಿಗರು ಮತ್ತು ಗೋಪಾಲಗೌಡರು ಎಡ ಮತ್ತು ಬಲಗಳ ಅಂತರದವರೇ. ಆದರೆ ಅಡಿಗರ ಕಾವ್ಯದ ಬಗ್ಗೆ ಗೌಡರಿಗೆ ಅಪಾರ ಪ್ರೀತಿ ಇತ್ತು. ಅಡಿಗರಿಗೂ ಶಾಂತವೇರಿಯವರ ಬಗ್ಗೆ ಅಷ್ಟೇ ಗೌರವ ಇತ್ತು. ‘ಶಾಂತವೇರಿಯ ಅಶಾಂತ ಸಂತ’ ಎಂದು ಹೇಳಿದವರು ಅಡಿಗರೇ.

ಹಾಗೆ ನೋಡಿದರೆ ಇವತ್ತಿನ ನಮ್ಮ ಅನೇಕ ರಾಜಕಾರಣಿಗಳ ಕೊರಳಲ್ಲಿ ದೊಡ್ಡ ದೊಡ್ಡ ಡಿಗ್ರಿಗಳೇ ಇರುತ್ತವೆ. ಆಕ್ಸ್ ಫರ್ಡ್  ಕೇಂಬ್ರಿಡ್ಜ್ ಗಳಲ್ಲಿ ಓದಿ ಬಂದವರೂ ಇದ್ದಾರೆ. ಹಲವಾರು ವಿಚಾರಗಳಲ್ಲಿ ಅವರ ಜ್ಞಾನ ಹರಿತವಾಗಿಯೂ ಇರುತ್ತದೆ. ಆದರೆ ಸಾಹಿತ್ಯ-ಸಂಸ್ಕೃತಿ ವಿಚಾರಗಳಲ್ಲಿ ಅವರ ಒಲವು ಹೇಗಿರುತ್ತದೆ? ಸಾಹಿತ್ಯ ಮನುಷ್ಯರನ್ನು ಸಜ್ಜನಿಕೆಯತ್ತ, ಸದಭಿರುಚಿಯತ್ತ ಕೊಂಡೊಯ್ಯುತ್ತದೆಯೇ? ಹಾಗಾದರೆ ನಮ್ಮ ಸಾಹಿತಿಗಳೆಲ್ಲ ಸದಭಿರುಚಿಯ ಸಜ್ಜನರೇ ಆಗಿರಬೇಕಾಗಿತ್ತಲ್ಲವೇ? ಇಂಥ ಪ್ರತಿಪ್ರಶ್ನೆಗಳನ್ನು ಬದಿಗಿಟ್ಟು ನಿಜವಾದ ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರೀತಿಯನ್ನು ಗಮನಿಸೋಣ.

ಸಾಹಿತ್ಯ ಎಂದರೆ ಅದು ಡಿಗ್ರಿಗಳಿಗಲ್ಲ; ದೊಡ್ಡ ದೊಡ್ಡ ಪುಸ್ತಕಗಳನ್ನು ಕೈಯ್ಯಲ್ಲಿ ಹಿಡಿದು ಪ್ರದರ್ಶಿಸುವುದಕ್ಕೂ ಅಲ್ಲ. ತನ್ನ ಒಳಗನ್ನು ನೋಡಿಕೊಳ್ಳಲು ಸಾಹಿತ್ಯ ನೆರವಾಗುವುದಾದರೆ, ಆಗ ವ್ಯಕ್ತಿಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಅವನ ಅಥವಾ ಅವಳ ಸಂವೇದನೆ ಸೂಕ್ಷ್ಮಗೊಳ್ಳುತ್ತದೆ. ನಿಜವಾದ ಕಲಿಕೆಯ ಕೇಂದ್ರಗಳ ಬಗ್ಗೆ ಗೌರವ ಹುಟ್ಟುತ್ತದೆ. ಇಂಥ ರಾಜಕಾರಣಿಗಳ ಸಂಖ್ಯೆ ಹೆಚ್ಚಾದರೆ ರಾಜಕಾರಣದ ರೂಪರೇಷೆಗಳ ಬದಲಾಗುತ್ತವೆ.

faces lookingರಾಜಕಾರಣಿಗಳನ್ನಷ್ಟೆ ಅಲ್ಲ, ನಮ್ಮ ಪೊಲೀಸರನ್ನು, ವಕೀಲರನ್ನು ಕೂಡಾ ಸಾಹಿತ್ಯ ಮೃದುಗೊಳಿಸಲು ಸಾಧ್ಯ. ನ್ಯಾಯಾಲಯಕ್ಕೆ ಬರುವ ವಿದ್ಯಾರ್ಥಿ ಕನ್ಹಯ್ಯ ನಂಥವರನ್ನು ಪೊಲೀಸರಾಗಲಿ, ವಕೀಲರಾಗಲಿ ಅಮಾನುಷ ರೀತಿಯಲ್ಲಿ ಚಚ್ಚಲಾರರು. ವ್ಯಕ್ತಿ ಘನತೆ, ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಮೂಲಭೂತ ಪ್ರಶ್ನೆಗಳನ್ನು ಹಗುರವಾಗಿ ಕಾಣುವಂಥ ಒರಟರ ಸಂಖ್ಯೆ ಕಡಿಮೆಯಾಗಬಹುದು. ಕ್ಯಾಂಪಸ್ ಗಳ ಬಗ್ಗೆ ಅವರ ಗೌರವ ಹೆಚ್ಚಾಗಬಹುದು.

ಕ್ಯಾಂಪಸ್ ಗಳಲ್ಲಿ ಎಡ, ಬಲ, ಆತ್ಯಂತಿಕ ನಿಲುವು ಇತ್ಯಾದಿ ಯಾವುದೇ ಗುಂಪಿನ ವಿದ್ಯಾರ್ಥಿಗಳಿರಬಹುದು. ಆದರೆ ಒಬ್ಬರು ಇನ್ನೊಬ್ಬರನ್ನು ಸಹಿಸಲಾರದ ಸ್ಥಿತಿ ಇರಬಾರದು. ಅಧಿಕಾರ, ದರ್ಪ, ತೋಳ್ಬಲಗಳಿಂದ ಚಿಂತನೆಯನ್ನು ಹತ್ತಿಕ್ಕುವ ಪ್ರಯತ್ನ ವಿಚಾರಹೀನರದು; ಜ್ಞಾನವನ್ನು ಗೌರವಿಸದ ಮನೋಧರ್ಮದವರದು. ವಿವೇಚನೆ, ವಿಚಾರ, ವಿವೇಕವನ್ನು ಅರಳಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ನಿಜವಾದ ಸಾಹಿತ್ಯವನ್ನು ಪ್ರೀತಿಸಿದವನು ರಾಕ್ಷಸೀ ವರ್ತನೆಗೆ ಎಡೆಮಾಡಿಕೊಡುವುದಿಲ್ಲ. ಸಂವಾದಕ್ಕೆ ತಯಾರಾದನು ತೋಳ್ಬಲವನ್ನು ಉಪಯೋಗಿಸಲಾರ. ಸಾಹಿತ್ಯದ ಅಂತರಂಗವನ್ನು ಬಲ್ಲವನು ಮಿದುವಾಗಿರುತ್ತಾನೆ; ಚಿಂತಿಸಬಲ್ಲವನಾಗಿರುತ್ತಾನೆ.

ಒಳಗಣ್ಣನ್ನು ತೆರೆಸುವ ಕೆಲಸವನ್ನು ಸಾಹಿತ್ಯ ಕೃತಿಗಳು ನಿರಂತರವಾಗಿ ಮಾಡುತ್ತಲೇ ಬಂದಿವೆ. ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡು ಮನುಷ್ಯ ಮನುಷ್ಯನ ಜೊತೆ ಸಂಬಂಧವನ್ನು ಕಟ್ಟಿಕೊಳ್ಳಬಹುದು. ಇದನ್ನು ಸಾಹಿತ್ಯ ತೋರಿಸಿಕೊಡುತ್ತದೆ. ಯಜಮಾನ ಮತ್ತು ಗುಲಾಮ ಇಬ್ಬರೂ ತಮ್ಮ ಅಂತಸ್ತು ಮರೆತು, ಸುರಿಯುವ ಹಿಮದಲ್ಲಿ, ಬೀಸುವ ಚಳಿಗಾಳಿಯ ಬಯಲಿನಲ್ಲಿ ಬದುಕಿ ಉಳಿಯುವ ಪ್ರಯತ್ನ ಮಾಡುತ್ತ ಅಪ್ಪಟ ಮನುಷ್ಯರಾಗಿ ವರ್ತಿಸುವ ರೀತಿಯನ್ನು ಮನಮುಟ್ಟುವ ಹಾಗೆ ಹೇಳುವ ಟಾಲ್ ಸ್ಟಾಯ್ ಅವರ ಒಂದು ಕತೆ, ಕಾಲದ ಪರೀಕ್ಷೆಯನ್ನು ಗೆದ್ದು ಉಳಿದಿರುವುದು ಯಾಕಾಗಿ?

ದೊಸ್ತೊವಸ್ಕಿ, ಟಾಲ್ ಸ್ಟಾಯ್, ಗಾರ್ಕಿ, ಚೆಕಾಫ್, ಷೇಕ್ಸ್ ಪಿಯರ್, ಕಾಳಿದಾಸ, ವ್ಯಾಸ ಸೇರಿದಂತೆ ಜಗತ್ತಿನ ಸಾಲು ಸಾಲು ಬರಹಗಾರರು ಕಟ್ಟಿರುವ ಸಾಹಿತ್ಯ ಕೃತಿಗಳು ಇಂಥ ಕೆಲಸವನ್ನು ಒಂದಲ್ಲ ಒಂದು ರೀತಿಯಲ್ಲಿ ಮಾಡುತ್ತಲೇ ಇರುತ್ತವೆ. ಮನುಷ್ಯ ಕೊನೆಗೂ ಮನುಷ್ಯನಾಗಿಯೇ ಉಳಿಯುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಸವಾಲನ್ನು ನಾವು ಒಪ್ಪಿಕೊಳ್ಳುವುದು ಸಾಧ್ಯವಾದರೆ, ಆಗ ನಮ್ಮ ರಾಜಕಾರಣ ಬೇರೆಯಾಗಿರುತ್ತದೆ; ನಮ್ಮ ಕಲಿಕೆಯ ಕ್ಯಾಂಪಸ್ ಗಳು ಬೇರೆಯಾಗಿರುತ್ತವೆ. ನ್ಯಾಯಾಲಯ, ಪೊಲೀಸು ಎಲ್ಲವೂ ಬೇರೆಯಾಗಿರುತ್ತವೆ. ಹಾಗಾದಾಗ ನಮ್ಮ ಸಮಾಜ ನಾಗರಿಕ ಸಮಾಜವಾಗಿರುತ್ತದೆ; ಮೌಲ್ಯಗಳ ಮಟ್ಟ ಬಹಳ ಎತ್ತರದಲ್ಲಿದ್ದು, ಮನುಷ್ಯರು ನಿರಾತಂಕವಾಗಿ ಉಸಿರಾಡುವಂತಿರುತ್ತದೆ.

Mojarto/RicStultz/

‍ಲೇಖಕರು Admin

February 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: