ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಂಖ ಘೋಷ ಕವಿತೆಗಳು

2016 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪಶ್ಚಿಮ ಬಂಗಾಲದ ಹಿರಿಯ ಸಾಹಿತಿ

ಶಂಖ ಘೋಷ ಅವರ ಮೂರು ಕವಿತೆಗಳ ಅನುವಾದ ಇಲ್ಲಿದೆ.

(ಉತ್ಪಲ ಬ್ಯಾನರ್ಜಿಯವರು ಮಾಡಿದ ಹಿಂದಿ ಅನುವಾದವನ್ನು ಆಧರಿಸಿ)

ಕನ್ನಡಕ್ಕೆ : ಗಿರೀಶ ಚಂದ್ರಕಾಂತ ಜಕಾಪುರೆ

ಮೋಡಮನುಜ

ಹಾದು ಹೋಗುತ್ತಾನೆ ಆತ
ನನ್ನೆದುರಿನಿಂದ ಮೋಡದಂತೆ
ಸ್ಪರ್ಶಿಸಿದರೆ ಅವನ ದೇಹಕ್ಕೆ
ಬಹುಶಃ ನೀರು ಚಿಮ್ಮಬಹುದು

ಸರಿದುಹೋಗುತ್ತಿದ್ದಾನೆ ಆತ
ನನ್ನೆದುರಿನಿಂದ ಕಾರ್ಮೋಡದಂತೆ
ಹೋಗಿ ಕುಳಿತರೆ ಅವನ ಸಾನಿಧ್ಯದಲ್ಲಿ
ತಂಪು.. ನೆರಳು ಇಳಿದುಬರಬಹುದು

ಅವನು ಕೊಡುತ್ತಾನೋ ಅಥವಾ
ಪಡೆಯುತ್ತಾನೋ ಗೊತ್ತಿಲ್ಲ
ಅವನೇ ಆಶ್ರಯದಾತನೋ ಅಥವಾ
ಅವನಿಗೇ ಆಸರೆ ಬೇಕಿದೆಯೋ?

ಆದರೆ ಆತ ಮಾತ್ರ ಹಾಯುತ್ತಿದ್ದಾನೆ
ನನ್ನೆದುರಿನಿಂದ ಮೋಡದಂತೆ
ಹೋಗಿ ನಿಂತರೆ ಅವನೆದುರಿಗೆ ಬಹುಶಃ
ನಾನೂ ಎಂದಾದರೂ ಮೋಡವಾಗುತ್ತೇನೆ

* * *

ಹುಟ್ಟು-ಹಬ್ಬ

ನಿನ್ನ ಜನ್ಮದಿನದಂದು
ನಾನೇನು ಕೊಡಬಲ್ಲೆ ನಿನಗೆ?
ಮುಂದೊಮ್ಮೆ ನಮ್ಮ ಭೇಟಿ
ಆಗಿಯೇ ಆಗುತ್ತದೆ ಎಂಬ
ಭರವಸೆಯ ಹೊರತು..!

ಸಿಗೋಣ ತುಳಸೀವನದಲ್ಲಿ
ಭೇಟಿಯಾಗೋಣ ಬಿದಿರಿನ
ಆ ಸೇತುವೆಯ ಮೇಲೆ
ಕೂರೋಣ ಅಡಿಕೆತೋಟದ
ಬದುವಿನಲಿ ಬೆರಳು ಹೆಣೆದು

ಬಿಸಿಲಿರದ ಮಧ್ಯಾಹ್ನ ಅಥವಾ
ಬೆಳದಿಂಗಳ ರಾತ್ರಿಯಲಿ
ಅಲೆಯೋಣ ಊರಿನ
ಡಾಂಬರ್ ಕಿತ್ತಿದ ಬೀದಿಗಳಲಿ
ಆಗಲೂ ನಮ್ಮನ್ನು ಸುತ್ತಿಕೊಂಡಿರಲಿ
ತುಳಸೀವನದ ಗಂಧ ಅಥವಾ
ಸೇತುವೆ ಕೆಳಗಿನ ತೋಟದ ಒಳಗಿನ
ಹಿತವಾದ ಗಾಳಿ

ಎರಡೂ ಕೈ ಮೇಲೆತ್ತಿ ಹೇಳುವೆ
ನೋಡು, ಈಗ ಉಳಿದಿವೆ
ಬರೀ ಒಂದೆರಡು ದುಃಖಗಳು.. ಅಷ್ಟೇ
ಬೇರಾಗುವ ಹೊತ್ತಲ್ಲಿ ನೋಡುವೆ
ನಿನ್ನತ್ತ ಕಣ್ತುಂಬಿ ಬರುವಂತೆ
ಹೆಣೆದ ಬೆರಳು ಬಿಡಿಸಿಕೊಳ್ಳುವಾಗ
ಹೃದಯ ಕಿತ್ತುಬರಬಹುದು
ಈ ವಿರಹಕ್ಕಿಂತ
ದೊಡ್ಡ ಅಪಘಾತವೇ ಇಲ್ಲ
ದಿಗಂತದವರೆಗೆ ಮೃತ್ಯುವೂ..

ನಿನ್ನ ಹುಟ್ಟು-ಹಬ್ಬದ ಕಾಣಿಕೆಯಾಗಿ
ಇನ್ನೇನು ಕೊಡಬಲ್ಲೆ..? ಬರೀ
ಇದೊಂದು ವಚನದ ಹೊರತು
ಆಗಿರಲಿದೆ ನಾಳೆಯಿಂದ ನನ್ನ
ಪ್ರತಿಯೊಂದು ದಿನವೂ.. ಜನ್ಮದಿನ..!

* * *

ದೇಹ

ಡಾಕ್ಟರ್, ದೇಹದೊಳಗೆ ಅದೇನೋ
ಕಡಿಮೆಯಾಗುತ್ತಿದೆ ಕ್ಷಣಕ್ಷಣಕ್ಕೆ
ನಿರ್ದಿಷ್ಠವಾಗಿ ಅದಕ್ಕೆ ಏನೆನ್ನುತ್ತಾರೆ ಎಂಬುದು
ನನಗೆ ಸರಿಯಾಗಿ ಗೊತ್ತಿಲ್ಲ

ಕನ್ನಡಿಯ ಎದುರು ಕುಳಿತರೆ
ನೋಡುವಂತೆನಿಸುವುದಿಲ್ಲ
ಕರಗುತ್ತಿದೆ ಜೀವಕೋಶಗಳೊಳಗೆ
ಇಂಗುತ್ತಿದೆ ನರನಾಡಿಗಳೊಳಗೆ
ಪಸರಿಸುತ್ತಿದೆ ಯಾವುದೋ
ಹಳದೀಬೆಳಕು ದೇಹದ ತುಂಬೆಲ್ಲ

ಇದೇನು ಗೋಧೂಳಿ ಸಮಯದ ಪ್ರಭೆಯೇ?
ಸಂಧಿಪ್ರಕಾಶವೆಂಬುದು
ರಕ್ತದೊಳಗೂ ಇರುತ್ತದೆಯೇನು?
ಹಾಗಿದ್ದರೆ, ಇನ್ನು..
ಹೊರಟುಬಿಡುವುದು ಸೂಕ್ತವೇನು?

ಡಾಕ್ಟರ್, ದೇಹದೊಳಗೆ ಅದೇನೋ
ಇಲ್ಲವಾಗುತ್ತಿದೆ ಪ್ರತಿ ಉಸಿರಿಗೂ
ನಿಖರವಾಗಿ ಅದು ಏನೆಂಬುದು
ಕೊಂಚವೂ ತಿಳಿಯುತ್ತಿಲ್ಲ..!

* * *

‍ಲೇಖಕರು admin

7 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading