’ಶಂಕರ ನೀನು ಶಚೀತೀರ್ಥದಲ್ಲಿ ನಾವು ಕಳೆದುಕೊಂಡ ಉಂಗುರ..’ – ಸಂಧ್ಯಾರಾಣಿ

ಎನ್ ಸಂಧ್ಯಾರಾಣಿ

’ಶಂಕರ್ ನಾಗ್’ – ಶಂಕರ್ ನಾಗ್ ಒಬ್ಬ ಕಲಾವಿದ, ಒಬ್ಬ ಅದ್ಭುತ ನಿರ್ದೇಶಕ, ಒಬ್ಬ ವಿಶನರಿ, ರಾಜಕೀಯ ಪ್ರಜ್ಞೆ ಇದ್ದ ಯುವಕ, ಅಪ್ರತಿಮ ರಂಗ ಕರ್ಮಿ, ಕನಸುಗಾರ, ಸರಳ ಜೀವಿ, ಎಲ್ಲರಿಗೂ ’ನನ್ನವನು’ ಅನಿಸುವ ಆತ್ಮೀಯ…. ಹೀಗೆ ಹೇಳುತ್ತಾ ಹೋಗಬಹುದು.
ಒಂದನ್ನು ಗಮನಿಸಿ : ಶಂಕರನ ಬಗ್ಗೆ ಯಾರೇ ಬರೆದರು, ಆತ ನನ್ನನ್ನು ಎಷ್ಟು ಹತ್ತಿರದವನಂತೆ ನಡೆಸಿಕೊಂಡಿದ್ದ ಎಂದೇ ಬರೆಯುತ್ತಾರೆ. ಎಲ್ಲರಿಗೂ ಆತ ಹಾಗೇ ಕಾಣಿಸಿರುತ್ತಾನೆ. ಶಂಕರನ ಬಗ್ಗೆ ಓದಿದಾಗೆಲ್ಲಾ, ಕೇಳಿದಾಗೆಲ್ಲಾ ಈ ವಿಷಯ ನನ್ನನ್ನು ಕಾಡುತ್ತಲೇ ಇತ್ತು, ಅದು ಹೇಗೆ ಎಲ್ಲರೂ ಇದೊಂದು ಮಾತನ್ನು ತಪ್ಪದೇ ಹೇಳುತ್ತಾರಲ್ಲ ಅಂತ. ಮೊನ್ನೆ ಈಟಿವಿ ಸುದ್ದಿವಾಹಿನಿಗಾಗಿ ಅರುಂಧತಿ ಜಿ ಎನ್ ಮೋಹನ್ ರೊಂದಿಗೆ ಮಾತನಾಡುತ್ತಾ ಇದ್ದಾಗ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ಅರುಂಧತಿ ಹೇಳಿದ್ದರು, ’ಶಂಕರ ಯಾರೊಂದಿಗೆ ಮಾತನಾಡಲಿ, ಯಾರ ಜೊತೆ ಸಮಯ ಕಳೆಯಲಿ ಆಗ ತನ್ನ ೧೦೦ % ಅನ್ನು ಅವರಿಗೆ ಕೊಡುತ್ತಿದ್ದ. ಅವನು ಎಷ್ಟೇ ಕಡಿಮೆ ಸಮಯ ಇದ್ದರೂ, ಇದ್ದಷ್ಟು ಹೊತ್ತೂ ಅವನು ಸಂಪೂರ್ಣ ನಮ್ಮವನು ಅಂತ ಎಲ್ಲರಿಗೂ ಅನ್ನಿಸುತ್ತಿತ್ತು’ ಅಂತ. ಶಂಕರನ ಪ್ರೀತಿಯ ಬಲೆ ಎಂದರೆ ಹಾಗೆ. ಕಿಂದರಿ ಜೋಗಿಯ ಮೋಡಿಯ ಹಾಗೆ, ಪುಂಗಿಯ ನಾದದ ಹಾಗೆ, ಗೆಳೆಯನ ಕರೆಯ ಹಾಗೆ.

ಶಂಕರ ನಾಯಕ ನಟನಾಗಿದ್ದ ದಿನಗಳಲ್ಲೇ ಹಲವಾರು ನಾಯಕರಿದ್ದರು, ರಾಜ್ ಕುಮಾರ್, ವಿಷ್ಣು ವರ್ಧನ್, ಅಂಬರೀಶ್, ಅನಂತ್ ನಾಗ್, ಅಶೋಕ್, ಲೋಕೇಶ್…. ಹಾಗೆ ನೋಡಿದರೆ ಶಂಕರ ನಟನಿಗಿಂತಾ ಹೆಚ್ಚಾಗಿ ಅದ್ಭುತ ನಿರ್ದೇಶಕ. ನೋಡಲು ಸುರ ಸುಂದರನಲ್ಲ. ಒರಟ, ಸೊಟ್ಟಗೆ ನಗುತ್ತಿದ್ದ, ಅಡ್ಡಾದಿಡ್ಡಿ ನಡೆಯುತ್ತಿದ್ದ, ನೀಟುಗಾರನೇನಲ್ಲ, ಅವನ ಕ್ರಾಪು ಥೇಟ್ ಅವನಂತೆಯೇ! ಆದರೂ ಈತನಲ್ಲಿ ಏನೋ ಇತ್ತು. ಅದೊಂದು ಸೆಳೆತ. ಹಾಗೆ ನೋಡಿದರೆ ಅಣ್ಣ ತಮ್ಮಂದಿರಿಬ್ಬರದೂ ಅಗಾಧವಾದ ಪ್ರತಿಭೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಶಂಕರ್ ನಾಗ್ ರಲ್ಲಿ ಒಂದು ಅಂತರ್ಗತವಾದ ಒರಟುತನ, ಒಂದು ಸೆಕ್ಶುವಲ್ ಸೆಳೆತ ಇತ್ತು. ಆತನ ವೇಗದ ನಡಿಗೆ, ಬಿರುಸಿನ ಮಾತು, ಚುರುಕು ಕಣ್ಣು, ನೋಡಿದರೆ ಒಮ್ಮೆ ಎದೆ ’ಝಲ್’ ಅನ್ನಬೇಕು! ಆದರೆ ಅನಂತ ಹಾಗಲ್ಲ, ನಾಜೂಕಾಗಿ ಸಂಜೆ ವಾಕಿಂಗ್ ಗೆ ಕರೆದೊಯ್ದು, ಮಲ್ಲಿಗೆ ಹೂ ಕೊಡಿಸಿ, ಜೋಪಾನವಾಗಿ ಕರೆತಂದು ಮನೆಗೆ ಬಿಡುವ ಗೆಳೆಯ. ಅನಂತ್ ಫ್ರೇಂನೊಳಗಣ ಚಿತ್ರ, ಶಂಕರ್ ಜೊತೆಗಿದ್ದು ಕಾಡುವ, ಕಾಡಿಸಿಕೊಳ್ಳುವ, ಒಡನಾಡಿ.
ಅವನು ನೆಗಟಿವ್ ಪಾತ್ರದಲ್ಲಿ ನಟಿಸಿದರೂ ಇಷ್ಟವಾಗಿಬಿಡುತ್ತಿದ್ದ. ನನ್ನ ನೆನಪಿರುವಂತೆ ಅವನು ಹಾಗೆ ನೆಗಟಿವ್ ಪಾತ್ರ ಮಾಡಿದ ಒಂದು ಚಿತ್ರ ’ಐ ಲವ್ ಯೂ’, ಸಾಲು ಸಾಲಾಗಿ ಹೆಣ್ಣುಗಳನ್ನು ಬಯಸುವ, ಬಳಸುವ, ಆಮೇಲೆ ಕೈಬೀಸುವ ಲಂಪಟನ ಪಾತ್ರ. ಆದರೆ ಆಗಲೂ ಆತನನ್ನು ದ್ವೇಷಿಸಲು ಆಗಿರಲಿಲ್ಲ! ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಹಾವಾಡಿಗನ ಪಾತ್ರದಲ್ಲಿ, ಹೊಸ ಹೆಂಡತಿಯ ಮೋಹಕ್ಕೆ ಬಿದ್ದು, ಮಾಸ್ಟರ್ ಮಂಜುನಾಥ್ ನಂತಹ ಮುದ್ದು ಮಗನನ್ನು ಬಿಟ್ಟು ಹೋಗುವ ಕಟುಕ ತಂದೆಯ ಪಾತ್ರ ಮಾಡಿದ್ದಾಗಲೂ, ಆ ಕಂದನನ್ನು ಕಂಡು ಮನಸು ಒದ್ದಾಡಿತ್ತೇ ಹೋರತು, ಇವನನ್ನು ಮನಸ್ಸಿನಿಂದ ದೂರ ತಳ್ಳಲು ಆಗಿರಲಿಲ್ಲ!
ಶಂಕರನ ಆ ಚಾರ್ಮ್ ಇದ್ದುದ್ದೆಲ್ಲಿ? ಅವನ ಮಾತಿನಲ್ಲಾ, ಸಿಗರೇಟು ಸುಟ್ಟು ಕಪ್ಪಾದ ತುಟಿಗಳಲ್ಲಿದ್ದ ಓರೆ ನಗುವಿನಲ್ಲಾ, ನಡಿಗೆಯಲ್ಲಾ, ಮಿಂಚಿನ ಓಟ ಚಿತ್ರದಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳುವ ಯೋಜನೆ ಹಾಕುವಾಗ ಥೇಟ್ ಜೋಡಿ ಮಿಂಚುಗಳಂತೆ ಹೊಳೆಯುತ್ತಿದ್ದ ಅವನ ಕಣ್ಣುಗಳಲ್ಲಾ ಅಥವಾ ಇವೆಲ್ಲಕ್ಕೂ ಮೀರಿ ಆತನಲ್ಲಿದ್ದ ಮಗುತನ ಮತ್ತು ಪ್ರಾಮಾಣಿಕತೆಯಲ್ಲಾ? ಗೊತ್ತಾಗುತ್ತಿಲ್ಲ ನನಗೆ.
ಅನಂತ್, ಶಂಕರ್ ಇಬ್ಬರಿಗೂ ರಾಜಕೀಯ ಪ್ರಜ್ಞೆ ಮತ್ತು ಬದ್ಧತೆ ಎರಡೂ ಇದ್ದವು, ಒಂದೇ ಪ್ರಾಂತ್ಯದವರೆಂಬ ಕಾರಣಕ್ಕೋ ಅಥವಾ ಸಮಾನ ಮೌಲ್ಯಗಳ ಕಾರಣಕ್ಕೂ ಇಬ್ಬರೂ ರಾಮಕೃಷ್ಣ ಹೆಗಡೆಯವರನ್ನು ಬೆಂಬಲಿಸಿದ್ದರು. ಹೆಗಡೆ ಸಂಪುಟದ ಪೋಸ್ಟರ್ ಬಾಯ್ಸ್ ಎಂದು ಸಹಾ ಇವರನ್ನು ಕರೆಯುತ್ತಿದ್ದರು.
ಇವೆಲ್ಲದರ ನಡುವೆಯೂ ಶಂಕರ್ ಸಿನಿಮಾಗಳನ್ನು ಮಾಡಿದ, ನಾಟಕ ಮಾಡಿದ, ಸಂಕೇತ್ ಕಟ್ಟಿದ, ಕಂಟ್ರಿ ಕ್ಲಬ್ ನ ಸಸಿ ನೆಟ್ಟ. ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ. ಮಾಲ್ಗುಡಿ ಡೇಸ್ ನಂತಹ ಕಲಾತ್ಮಕವಾಗಿ ಮತ್ತು ಜನಪ್ರಿಯವಾಗಿ ಗೆದ್ದ ಧಾರಾವಾಹಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ನಿರ್ದೇಶಿಸಿ ಗೆದ್ದ. ಒಂದು ಮುತ್ತಿನ ಕಥೆಯಲ್ಲಿ ತಾಂತ್ರಿಕವಾಗಿ ಎಷ್ಟೆಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳಬಹುದೋ ಎಲ್ಲವನ್ನೂ ಬಳಸಿಕೊಂಡ. ಎಷ್ಟೊಂದು ಕನಸು ಆ ಕಣ್ಣುಗಳಲ್ಲಿ, ತನಗಿರುವುದು ಸ್ವಲ್ಪವೇ ಸಮಯ ಎಂದು ಗೊತ್ತಿತ್ತೇನೋ ಅನ್ನುವ ಹಾಗೆ ಬದುಕಿದವನು ಆತ. ಬಹುವಚನದಲ್ಲಿ ಕರೆಯಲಾಗದ ಆತ್ಮೀಯ ಆತ.

ಈಗ ಆತ ಇದ್ದಿದ್ದರೆ ಹೇಗಿರುತ್ತಿದ್ದ? ಅವನಿಗೆ ಇವತ್ತಿಗೆ ೬೦ ವರ್ಷಗಳಂತೆ. ಊಹಿಸಿಕೊಳ್ಳಬಲ್ಲೆವೇ ಅವನನ್ನು ೬೦ ರ ಹಿರಿಯನಾಗಿ? ಇಲ್ಲ. ನಮ್ಮ ಮನಸ್ಸಿನಲ್ಲಿ ಅವನು ಈಗಲೂ ಅದೇ ಶಂಕರ. ಅವನಿಗೆ ವಯಸ್ಸಾಗುವುದಿಲ್ಲ, ಅವನದು ಕಾಲವಳಿಸದ ಅಂದ. ಅವನ ವೇಗವನ್ನು ವಯಸ್ಸು ಕುಗ್ಗಿಸುವುದಿಲ್ಲ, ಅವನ ನಗುವನ್ನು ಏರುತ್ತಿರುವ ದಿನಗಳು ಸುಕ್ಕಾಗಿಸುವುದಲ್ಲ. ಸೀತಾರಾಮುವಿನ ರಾಮು ಅವನು, ನಾಲ್ಕು ಸಲ ನೋಡಿನ ಮೂಗನ ಸೇಡು ಚಿತ್ರದ ಒರಟ, ನೋಡಿ ಸ್ವಾಮಿ, ನಾವಿರೋದು ಹೀಗೆ ಚಿತ್ರದ ಥೇಟ್ ಶಂಕರ್ ನಾಗ್ ಸ್ವಭಾವದ ಯುವಕ, ಇಂದಿಗೂ ಯಾರೇ ಆಟೋ ಡ್ರೈವರ್ ಪಾತ್ರ ಮಾಡಿದರೂ, ಆ ಯೂನಿ ಫಾರ್ಮ್ ನಲ್ಲಿ ಒಬ್ಬ ಹೀರೋ ನೆನೆಪಾದರೆ ಅದು ಶಂಕರನೇ. ಅವನು ಅಮೃತವನ್ನಲ್ಲ, ಸಾವನ್ನು ಕುಡಿದು ಚಿರಂಜೀವಿಯಾದವನು.
ಶಂಕರ ನೀನು ಶಚೀತೀರ್ಥದಲ್ಲಿ ನಾವು ಕಳೆದುಕೊಂಡ ಉಂಗುರ, ನಮ್ಮನ್ನು ಮರೆತು ಕಾಡುತ್ತೀಯ, ನಾವು ನಿನ್ನನ್ನು ಮರೆಯಲಾಗದೆ ಆಗಲೂ ಕಾಡುತ್ತೀಯ…
ಇಂದಿನ ’ಅವಧಿ’ ನಿನ್ನ ನೆನಪಿನಲ್ಲಿ..
 

‍ಲೇಖಕರು G

November 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. Prabhakar M. Nimbargi

    ಅವನು ಅಮೃತವನ್ನಲ್ಲ, ಸಾವನ್ನು ಕುಡಿದು ಚಿರಂಜೀವಿಯಾದವನು. Neevu baredaddu sampoorna satya. Eshtu janarige ee bhagya siguttade? Bahala hrudayasparshiyaada lekhana.Kannu tumbi baruttave.

    ಪ್ರತಿಕ್ರಿಯೆ
  2. Manasinamaneyavanu

    avaru kannada nela bittu nenapina sthaana seridaaga naaninnu janisiye iralilla. Avaru nenapaagi ulida mele huttida nannanta eshto janaru avaranna nenapu maadkotivi avara bagge tilkolloke maatadoke hogaloke khushi padteevi andre, ellarigoo inspiration anta ankoteevalla, ishtondu prabhaavavannu ee mannalli beerabekaadare aata saamanya manushyanaagiralikkilla aata shakti, energy. Anta nanage yaavagaloo anisuttirutte.

    ಪ್ರತಿಕ್ರಿಯೆ
  3. hema

    ಅವನು ಅಮೃತವನ್ನಲ್ಲ, ಸಾವನ್ನು ಕುಡಿದು ಚಿರಂಜೀವಿಯಾದವನು. well said

    ಪ್ರತಿಕ್ರಿಯೆ
  4. ಅಕ್ಕಿಮಂಗಲ ಮಂಜುನಾಥ

    ಕಾಡುತ್ತಿದ್ದ, ಕಾಡುತ್ತಿರುವ, ಕಾಡುತ್ತಲೇ ಇರುವ ವ್ಯಕ್ತಿ ಶಂಕರ.ಅವನ ಬಗ್ಗೆ ಯಾರು ಎಷ್ಟೇ ಬರೆದರೂ ಅಪೂರ್ಣ ಹಾಗೆಯೇ ಅಪೂರ್ವವೆನಿಸುತ್ತದೆ.

    ಪ್ರತಿಕ್ರಿಯೆ
  5. Anuradha.B.Rao

    ಶಂಕರನ ಪ್ರೀತಿಯ ಬಲೆ ಎಂದರೆ ಹಾಗೆ. ಕಿಂದರಿ ಜೋಗಿಯ ಮೋಡಿಯ ಹಾಗೆ, ಪುಂಗಿಯ ನಾದದ ಹಾಗೆ, ಗೆಳೆಯನ ಕರೆಯ ಹಾಗೆ. ಈ ಸಾಲುಗಳು ತುಂಬಾ ಇಷ್ಟವಾಯಿತು . ಶಂಕರನಾಗ್ ಬಗ್ಗೆ ತುಂಬಾ ಒಳ್ಳೆಯ ಬರಹ . ಅಭಿನಂದನೆಗಳು ಸಂಧ್ಯಾ .

    ಪ್ರತಿಕ್ರಿಯೆ
  6. lakshmishankarjoshi.

    BHALA BHALA CHENNAGIDE.BAHU VACHANADALLI KAREYALAGADA AATMEEYA.ENTHA MATU.

    ಪ್ರತಿಕ್ರಿಯೆ
  7. vishwanath Hebballi

    eshtondu kanasugalu aathana kannugalli, thanagiruvudu swalpawe swalpa samaya endu gottitteno enno haage badukidavanu aatha…..
    Nija sara sarane banda enikegoo baardashtu, ooheguu nilukadashtu sara sarane kottu hoda cenema rangakke.
    nammanthavara kannugalige kanasugalu mattu hudukidashtoo hosa hosa haadigalanna.
    Minchina otadante heege bandu, hage hoda aa minchina kannugalu.. mattashtu…innashtoo!….
    Baraha ondu sundara anubhavada pravasa !…..

    ಪ್ರತಿಕ್ರಿಯೆ
  8. Gopal Wajapeyi

    ಸಂಧ್ಯಾ, ನೀವು ಬರೆದದ್ದೆಲ್ಲ ನನ್ನ ಕಣ್ಣಮುಂದೆ ಕಂಡಿತು. ಆತನ ನಗೆ, ನಡೆ, ನುಡಿ, ನೇಹ ಎಲ್ಲ ಅಂದರೆ ಎಲ್ಲ…
    ಇಲ್ಲ, ಆತ ಎಲ್ಲೂ ಹೋಗಿಲ್ಲ ; ಇಲ್ಲೇ ನಮ್ಮೊಳಗೇ ಇದ್ದಾನೆ. ಆತ ಚಿರಂಜೀವಿ.

    ಪ್ರತಿಕ್ರಿಯೆ
  9. ಸುಗುಣ ಮಹೇಶ್

    ಅದ್ಭುತ… ಶಂಕರ್ ನಾಗ್ ನೀನಿರಬೇಕಿತ್ತು ಇಂತಹ ಅಭಿಮಾನಿಗಳ ಪ್ರೀತಿ ಸವಿಯಲು

    ಪ್ರತಿಕ್ರಿಯೆ
  10. ಶಮ, ನಂದಿಬೆಟ್ಟ

    ಅವನು ಅಮೃತವನ್ನಲ್ಲ, ಸಾವನ್ನು ಕುಡಿದು ಚಿರಂಜೀವಿಯಾದವನು.
    ನೀ ಮಾತ್ರ ಬರೆದೀಯ ಹೀಗೆ.. ಲವ್ ಯೂ

    ಪ್ರತಿಕ್ರಿಯೆ
  11. Piyar

    ಅಬ್ಬಾ!! ಅದ್ಭುತ! ಕಣ್ತುಂಬಿ ಬಂತು. ಧನ್ಯವಾದ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: