ಶಂಕರ್ ನಾಗ್ ಹಾಗು ಸುಂದರಕೃಷ್ಣ ಅರಸ್ ಅವರ ನೆನಪಿಗಾಗಿ..

ಗೋಪಾಲ ವಾಜಪೇಯಿ

ಇಂದು ನವೆಂಬರ್ 9 – ಶಂಕರ್ ನಾಗ್ ಹುಟ್ಟುಹಬ್ಬ ಮತ್ತು ಸುಂದರ ಕೃಷ್ಣ ಅರಸ್ ಪುಣ್ಯತಿಥಿ. ಅವರ ನೆನಪಿಗಾಗಿ ಗೋಪಾಲ್ ವಾಜಪೇಯಿ ಅವರು ಬರೆದ ಲೇಖನ ನಿಮಗಾಗಿ

ಶಂಕರ್-ಸುಂದರ್…!

ನಾನೀಗ ಬರೆಯುತ್ತಿರುವುದು ಈ ಹೆಸರಿನ ಸಿನೆಮಾ ಬಗ್ಗೆ ಅಲ್ಲ. ಈ ಹೆಸರಿನ ಇಬ್ಬರು ಮಹಾನ್ ನಟರ ಬಗ್ಗೆ. ಹೌದು. ಅವರಿಬ್ಬರೂ ತಮ್ಮ ಅಭಿನಯದಿಂದ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಕುಂತವರು. ಶಂಕರ್ ನಾಗ್ ಮತ್ತು ಸುಂದರ ಕೃಷ್ಣ ಅರಸ್.

ನಿಮಗೆ ಗಿರೀಶ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಚಿತ್ರ ನೆನಪಿರಬಹುದು. ಅದರಲ್ಲಿ ಈ ಇಬ್ಬರದೂ ಅಸಮಾನವೆನಿಸುವಂಥ ಅಭಿನಯ. ಒಬ್ಬ ‘ಗಂಡುಗಲಿ’, ಇನ್ನೊಬ್ಬ ‘ಪೆರ್ಮಾಡಿ.’ ಆ ವರ್ಷದ ರಾಷ್ಟ್ರೀಯ ಪ್ರಶಸ್ತಿ ಸಮಿತಿಯಲ್ಲಿ ಈ ಇಬ್ಬರ ಅಭಿನಯವನ್ನೂ ಮತ್ತೆ ಮತ್ತೆ ಅಳೆದು ತೂಗಿ ನೋಡಲಾಯಿತಂತೆ. ಯಾರಿಗೆ ಪ್ರಶಸ್ತಿ ಕೊಡಬೇಕೆಂಬ ಗೊಂದಲದಲ್ಲಿ ಸಿಲುಕಿದರಂತೆ ಪ್ರಶಸ್ತಿ ಸಮಿತಿಯ ಸದಸ್ಯರು. ಕೊನೆಗೆ ‘ಇಡೀ ಚಿತ್ರವನ್ನು ಆವರಿಸಿರುವ’ ಕಾರಣದಿಂದ ಶಂಕರ ನಾಗ್ ಆ ಪ್ರಶಸ್ತಿಗೆ ಭಾಜನರಾದರಂತೆ.

ಈ ಇಬ್ಬರೂ ನನಗೆ ಪರಿಚಯವಾದದ್ದು ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಸಂದರ್ಭದಲ್ಲಿಯೇ ; ಕಿತ್ತೂರಿನ ಬಳಿಯ ತೂರಮರಿಯ ವಾಡೆಯಲ್ಲಿ.

ಸುಂದರ ಕೃಷ್ಣ ಅರಸ್ ನಾಟಕ ಕಂಪನಿಗಳಲ್ಲಿ ಪಳಗಿದವರು. ಆ ಹೊತ್ತಿಗಾಗಲೇ ಪುಟ್ಟಣ್ಣ ಅವರ ಸಹಾಯಕ ನಿರ್ದೇಶಕನಾಗಿಯೂ ಕೆಲವು ಚಿತ್ರಗಳಲ್ಲಿ ನಟಿಸಿಯೂ ಅನುಭವ ಪಡೆದಿದ್ದವರು. ಶಂಕರ್ ಮುಂಬಯಿಯ ರಂಗಭೂಮಿಯಲ್ಲಿ ಕೆಲಸ ಮಾಡಿ ಹೆಸರು ಮಾಡಿದ್ದವರು.

ಇಬ್ಬರನ್ನೂ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡಿಗರೆದುರು ನಿಲ್ಲಿಸಿದ ಕೀರ್ತಿ ಗಿರೀಶರದು.

ಆಗ ಪರಿಚಯವಾದ ಈ ಇಬ್ಬರೂ ಪ್ರತಿಭಾವಂತರೊಂದಿಗೆ ಸ್ವಲ್ಪ ಕಾಲ ಕೆಲಸ ಮಾಡುವ ಅವಕಾಶ ನನಗೆ ಪ್ರಾಪ್ತವಾಯಿತು. ಗಿರೀಶರ ‘ನಾಗಮಂಡಲ’ ನಾಟಕವನ್ನು ಶಂಕರ್ ನಾಗ್ 1989ರಲ್ಲಿ ತಮ್ಮ ಸಂಕೇತ್ ನಾಟಕ ತಂಡಕ್ಕೆ ನಿರ್ದೇಶಿಸುತ್ತಿದ್ದಾಗ ಜಾನಪದ ಶೈಲಿಯಲ್ಲಿ ಕೆಲವು ಹಾಡುಗಳನ್ನು ಬರೆದುಕೊಡಲು ಕೇಳಿದರು. ಅವಕ್ಕೆ ಸಿ. ಅಶ್ವಥ್ ರಾಗ ಸಂಯೋಜಿಸಿದರು. (ಇದು ಅಶ್ವಥ್ ರಾಗ ಸಂಯೋಜನೆಯ ಕೊನೆಯ ನಾಟಕ.) ಆಮೇಲಂತೂ ಶಂಕರ್ ನನ್ನನ್ನು ಮೊದಲಿಗಿಂತ ಹೆಚ್ಚು ಹಚ್ಚಿಕೊಂಡುಬಿಟ್ಟರು.

ಸುಂದರ ಕೃಷ್ಣ ಅರಸರ ಅಭಿನಯವನ್ನು ರಂಗಭೂಮಿಯ ಮೇಲೆ ನಾನು ಆ ಮೊದಲೇ ನೋಡಿದ್ದೆ. ಎಚ್.ಕೆ. ಯೋಗಾನರಸಿಂಹ ಅವರ ಕಂಪನಿ ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದಾಗ ಸುಂದರ್ ಅಲ್ಲಿ ನಟನಾಗಿ ಕಂಗೊಳಿಸುತ್ತಿದ್ದರು. ಗಂಡು ದನಿ, ಉಚ್ಚಾರದಲ್ಲಿಯ ಸ್ಪಷ್ಟತೆ, ದನಿಯ ಏರಿಳಿತ ಮತ್ತು ಪರಿಣಾಮಕಾರಿ ಅಭಿನಯ ಸಾಮರ್ಥ್ಯದಿಂದಾಗಿ ಅವರು ಉಳಿದವರಿಗಿಂತ ಭಿನ್ನವಾಗಿ ಕಂಡು. ನನ್ನ ಗಮನವನ್ನು ಸೆಳೆದಿದ್ದರು. ಚಿತ್ರ ನಿರ್ಮಾಣ ಸಂಸ್ಥೆ 1991-92ರಲ್ಲಿ ಹುಬ್ಬಳ್ಳಿಯ ಒಂದು ಚಿತ್ರ ನಿರ್ಮಾಣ ಸಂಸ್ಥೆ ‘ಸಂಗ್ಯಾ ಬಾಳ್ಯಾ’ ಕಥೆಯನ್ನು ಸಿನೆಮಾ ಮಾಡಲು ನಿರ್ಧರಿಸಿ ಸುಂದರ ಕೃಷ್ಣ ಅರಸ್ ಅವರನ್ನು ನಿರ್ದೆಶಕರಾಗಲು ಕೇಳಿತು. ನನ್ನ ‘ದೊಡ್ಡಪ್ಪ’ ನಾಟಕವನ್ನು ನೋಡಿ, ಓದಿ ಮೆಚ್ಚಿಕೊಂಡಿದ್ದ ಅರಸ್ ನನ್ನನ್ನೇ ಆ ಚಿತ್ರಕ್ಕೆ ಸಂಭಾಷಣೆ ಹಾಗೂ ಮೂರು ಗೀತೆಗಳನ್ನು ಬರೆಯಲು ಕೇಳಿದರು. ಗೀತಕಾರನಾಗಿ-ಸಂಭಾಷಣಕಾರನಾಗಿ ನಾನು ಕೆಲಸ ಮಾಡಿದ ಮೊದಲ ಚಿತ್ರ ಈ ‘ಸಂಗ್ಯಾ ಬಾಳ್ಯಾ.’ ಆ ವರ್ಷದ ಭಾರತೀಯ ಪನೋರಮಾದಲ್ಲಿ ‘ಸಂಗ್ಯಾ ಬಾಳ್ಯಾ’ ಏಕೈಕ ಕನ್ನಡ ಚಿತ್ರವಾಗಿ ಆಯ್ಕೆಯಾಯಿತು. ಮರುವರ್ಷ ಅದೇ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿ ದ ‘ಸೂಪರ್ ನೋವಾ 459’ ಎಂಬ ಚಿತ್ರಕ್ಕೂ ಸುಂದರ ಕೃಷ್ಣ ಅರಸ್ ಅವರೇ ನಿರ್ದೇಶಕ. ನಾನು ಅದಕ್ಕೂ ಸಂಭಾಷಣೆ ಬರೆದೆ. ಜತೆಗೆ ಅದರಲ್ಲೊಂದು ಚಿಕ್ಕ ಪಾತ್ರವನ್ನೂ ಮಾಡಿದೆ. ನಮ್ಮ ಜಾನಪದ ಮಹರ್ಷಿ ಎಸ್. ಕೆ. ಕರೀಂ ಖಾನರು ಈ ಚಿತ್ರಕ್ಕೆ ಕೆಲವು ಗೀತೆಗಳನ್ನು ಬರೆದರು. (ಬಹುಶಃ ಇದು ಅವರು ಗೀತೆಗಳನ್ನು ಬರೆದ ಕೊನೆಯ ಚಿತ್ರ.)

1993ರ ನವೆಂಬರ್ 9… ಶಂಕರ್ ನಾಗ್ ಅವರ 39ನೆಯ ಹುಟ್ಟುಹಬ್ಬದ ಸಂದರ್ಭ. ‘ನಾಗಮಂಡಲ’ ನಾಟಕ ಪ್ರಯೋಗಕ್ಕಾಗಿ ನಾನು ಬರೆದಿದ್ದ ಹಾಡುಗಳ ಧ್ವನಿಸುರಳಿಯ ಬಿಡುಗಡೆ, ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಂದ. ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ. ಅಶ್ವಥ್-ಅರುಂಧತಿ ನಾಗ್ ಕಾರ್ಯಕ್ರಮಕ್ಕೆ ಬರಲೇಬೇಕೆಂದು ಒತ್ತಾಯ ಮಾಡಿದರು. ಅಂದು ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದರೆ, ಸುಂದರ ಕೃಷ್ಣ ಅರಸ್ ಅಸುನೀಗಿದ ಅಪ್ರಿಯ ವಾರ್ತೆ ಕಿವಿಗಪ್ಪಳಿಸಿತು.

ಬೆಳಿಗ್ಗೆ ‘ಪೆರ್ಮಾಡಿ’ಯ ಅಂತಿಮ ದರ್ಶನ, ಸಂಜೆ ‘ಗಂಡುಗಲಿ’ಯ ಹುಟ್ಟುಹಬ್ಬದ ಸಂಭ್ರಮ…

ಇದುವೇ ಜೀವ ಇದು ಜೀವನ…

 

‍ಲೇಖಕರು G

November 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. bharathi bv

    Iduve jeeva idu jeevana ! Entha chendakke bardidira wajapeyi sir … nanna preethiya shankara avnu !

    ಪ್ರತಿಕ್ರಿಯೆ
  2. Nataraju S M

    ಶಂಕರ್ ನಾಗ್ ರವರ ಕುರಿತು ಏನು ಬರೆದರೂ ನಾವು ಓದಲು ರೆಡಿ.. ಸುಂದರ್ ಕೃಷ್ಣ ಅರಸ್ ರವರಂತಹ ಕಂಚಿನ ಕಂಠ ಈ ದಿನಗಳಲ್ಲಿ ಸಿಗೋದು ಕಷ್ಟ. “ಶಂಕರ್-ಸುಂದರ್” ಒಳ್ಳೆಯ ಲೇಖನ ಸರ್.. ಧನ್ಯವಾದಗಳು..

    ಪ್ರತಿಕ್ರಿಯೆ
  3. umesh desai

    ಖರೆ, ಅವರ ಜುಗಲಬಂದಿ ಆ ಸಿನೇಮಾದಾಗ ಅದ್ಭುತವಾಗಿತ್ತು..
    ನೀವು ಅಂದಂಗ ಇದ ಜೀವನ…

    ಪ್ರತಿಕ್ರಿಯೆ
  4. SunilHH

    “ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ”

    ಏಷ್ಟು ಸಲ ನೋಡಿದರೂ ಬೇಜಾರ ಆಗದೇ ಇರೋ ಸಿನೆಮಾ,

    ಪ್ರತಿಕ್ರಿಯೆ
  5. pravara kottur

    ಕನ್ನಡದ ಶ್ರೇಷ್ಠ ನಟನೊಂದಿಗಿನ ಅಷ್ಟು ದೊಡ್ಡ ಒಡನಾಟವನ್ನು ಚಿಕ್ಕ ಲೇಖನದಲ್ಲಿಯೇ ಅಚ್ಚುಕಟ್ಟಾಗಿಸಿದ್ದೀರಿ,,,,, ಆತ ಮತ್ತೆ ಮತ್ತೆ ಕಾಡುವುದು “ಒಂದಾನೊಂದು ಕಾಲದಲ್ಲಿ”……. ಆತನಿದ್ದಿದ್ದರೆ ಕನ್ನಡ ಚಿತ್ರರಂಗ ಪ್ರಜ್ವಲಿಸದೇ ಇರುತ್ತಿರಲಿಲ್ಲ,……

    ಪ್ರತಿಕ್ರಿಯೆ
  6. SavitaInamdar

    “ಶಂಕರ್-ಸುಂದರ್” ಮಾಗದ- ಮಾಸದ ನೆನಪುಗಳು…

    ಪ್ರತಿಕ್ರಿಯೆ
  7. s.s.chandrashekar

    ನಿಮ್ಮ ಲೇಖನ ತು೦ಬಾ ಚನ್ನಾಗಿದೆ ಗುರುವೇ…:)

    ಪ್ರತಿಕ್ರಿಯೆ
  8. hipparagi Siddaram

    ಸರ್, ಸಾಂದರ್ಭೀಕ ಮತ್ತೂ ಸಾರ್ವಕಾಲಿಕ ಲೇಖನ. ಜೊತೆಗೆ ಪ್ರತಿಭಾವಂತರಿಬ್ಬರ ಅಪರೂಪದ ಪೋಟೋಗಳು…ಹಾಗಯೇ ನಿಮ್ಮ ಪದಪುಂಜಗಳ ಸುಂದರ ಜೋಡಣೆ…ಎಲ್ಲವೂ ಹದವಾಗಿ ಬೆರೆತು ನುಡಿನಮನವೆಂದೆನಿಸದೇ ಇತಿಹಾಸದ ದಾಖಲೆಯಂತೆ ಗೋಚರಿಸಿತು. ಯಾವತ್ತೂ ಕರುನಾಡಿನ ಪ್ರತಿಭಾನ್ವಿತ ನಕ್ಷತ್ರದ್ವಯರಿಗೆ ಇದೋ ಸಾವಿರ ನಮನಗಳು….ನಮಸ್ಕಾರಗಳು ಸರ್….

    ಪ್ರತಿಕ್ರಿಯೆ
  9. apara

    ನೆನಪುಗಳನ್ನು ಕಲಕಿದಂಥ ಬರಹ…ಇಬ್ಬರೂ ಮರೆಯದಂಥ ನಟರು. ಥ್ಯಾಂಕ್‌ ಯು ಗೋಪಾಲ್‌ ಸರ‍್.

    ಪ್ರತಿಕ್ರಿಯೆ
  10. Rekha Nataaraj

    ಶಂಕರನಾಗ್ ಕರ್ನಾಟಕ ಕಂಡ ಪಾದರಸದಂತ , ಬಹುಮುಖ ಪ್ರತಿಭೆಯ ಚೈತನ್ಯ ! ಅಂತಹವರನ್ನು ಕಳೆದುಕೊಂಡ ಮೇಲೆ ಮತ್ತೆ ಯಾರೂ ಅವರನ್ನು ನೆನಪಿಸುವಂತೆ ಮಾಡಿಲ್ಲ….ಇನ್ನು ಸುಂದರಕೃಷ್ಣ ಅರಸರ ಕಂಚಿನ ಕಂಠ ಇನ್ನೂ ಮಾರ್ದನಿಸುತ್ತಿದೆ ….ಇನ್ನೇನಿದ್ರೂ ಅವರ ನೆನಪಷ್ಟೇ ನಮಗೆ ಲಭ್ಯ… ಅವರ ಒಡನಾಟಕ್ಕೆ ಸಿಕ್ಕ ನೀವು ಬಹಳ ಲಕ್ಕಿ .. ನಿಮ್ಮ ಲೇಖನ ಅವರಿಬ್ಬರನ್ನೂ ಮತ್ತೆ ನಮ್ಮ ಹೃದಯದಾಳಕ್ಕೆ ಇಳಿಸಿತು..

    ಪ್ರತಿಕ್ರಿಯೆ
  11. D.RaviVarma

    ಸರ್,
    ನಮಸ್ಕಾರ.. ನಿಮಗೆ ನೂರೊಂದು ನಮಸ್ಕಾರ….
    ಅಂದಿಗೂ ಇಂದಿಗೂ, ಎಂದೆಂದಿಗೂ ,ಕಾಡುವ ಕಾಡುತ್ತಲೇ ಇರುವ ಈ ಶಂಕರ್ ನನ್ನ ಮೆಚ್ಚಿನ ನಟ ..ನಾನು ಕಾಲೇಜು ಅವರ ದ್ವನಿಯನ್ನು ಇಮಿಟೇಟ್ ಮಾಡುತ್ತಿದ್ದೆ..ಅದರಿಂದಲೇ ಬಹಳಷ್ಟು ಗೆಳೆಯ,ಗೆಳತಿಯರ ಪ್ರಶಂಸೆ ಪಡೆದಿದ್ದೆ.ಅವರೊಬ್ಬ ಕೇವಲ ನಟರಾಗಿರಲಿಲ್ಲ.. ಒಬ್ಬ ಮಹಾ ಕನಸುಗಾರ .. ಈದಿನದ ಮೆಟ್ರೋ ಕೂಡ ಅವರ ಕನಸಿನ ಕುಡಿ , ಅವರೊಬ್ಬ ಭಾವನಾ ಜೀವಿ, ಈ ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತ, ಇಲ್ಲಿಯ ಸಾಮಾಜಿಕ ಬದುಕಿನೊಡನೆ ಬೆರೆತು, ಒಂದಿಸ್ತು ಹೊಸ ಬದುಕಿನತ್ತ, ಹೊಸ ಕನಸಿತ್ತ ನಮ್ಮನ್ನು ಕರೆದೊಯ್ಯಲು ನಿರಂತರವಾಗಿ ಶ್ರಮಿಸಿದ ಜೀವಿ.. ಅವರ ನಿರ್ದೇಶನದ ಸಿನೆಮಾಗಳಲ್ಲಿ ಅವರ ಬದ್ದತೆ ಕಳಕಳಿ ಎದ್ದು ಕಾಣುತ್ತಿತ್ತು…

    ಸುಂದರ ಕೃಷ್ಣ ಅರಸು ಕೂಡ. ಬಾಲಿ ವಿಸಿಸ್ತವಾದ ನಟ.. ಅವರ ಆ ದ್ವನಿ ..ಅವರ ನಟನೆ ನನಗೆ ಮರೆಯಲು ಸಾದ್ಯವೇ ಇಲ್ಲ..

    ಶಂಕರನಾಗ್ ಹಾಗೊಮ್ಮೆ ಕಾರಂತರ ನಾಟಕದಲ್ಲಿ ಹೊಸಪೇಟೆಯಲ್ಲಿ ನೋಡಿದ ಮಾತನಾಡಿದ ಅದ್ರುಸ್ಟ ನನ್ನದು… ಅವರ ಹಿಂದೆಯೇ ಇಳಕಲ್ ವರೆಗೂ ಹೋಗಿ ಮತ್ತೆ ನಾಟಕ ನೋಡಿ ಹಿಂದುರಿಗಿದ್ದೆ..

    ಈ ಹಿಂದೆ ಅವಧಿಯಲ್ಲಿ ಶಂಕರ್ ಬಗ್ಗೆ ನೀವು ಬಲು ಪ್ರೀತೀಂದ ಬರೆದಿದ್ರಿ.. ಈಗಲೂ ಅಸ್ತೆ.. ನಿಮ್ಮ ಬರಹದಲ್ಲಿ ಆದ್ರತೆ,ಇದೆ, ಪ್ರೀತಿ ಇದೆ, ಅದಕ್ಕೂ ಮಿಗಿಲಾಗಿ ಓದುಗನ ಮನ ಮುಟ್ಟುವ ಜೀವಂತ ಭಾಷೆ ಇದೆ..
    ವಂದನೆಗಳು……
    ರವಿ ವರ್ಮ ಹೊಸಪೇಟೆ

    ಪ್ರತಿಕ್ರಿಯೆ
  12. ishwar Bidarannavar

    Nive Adrustavantharu gurugale nimage Shankarnaag avaranthaha mahaan vyaktigal jote kelasa maaduva melaagi avarannu noduva soubhagya sikkide nijakku savi nenapugal saagaradalli ondu haninirannu kuda bidade ellavannu nenapittu kondu namage avara parikalpane maaduttiddiri…. Dannyavaadagalu Gurugale

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: