’ಖುಷಿಯಾಗಿರಬೇಕು ಅಂದರೆ ಹುಡುಗಿಯರನ್ನು ಅರ್ಥ ಮಾಡಿಕೊಳ್ಳಬಾರದು’!

ತಿರುವನಂತಪುರದಿಂದ ಫೇಸ್ ಬುಕ್ ವರೆಗೆ

ಭಾರತೀಯ ವಿಜ್ಞಾನ ಕಾಂಗ್ರೇಸ್ ಸಂಸ್ಥೆ ಪ್ರತಿ ವರ್ಷ ಜನವರಿಯ ಮೊದಲ ವಾರದಲ್ಲಿ ಅಖಿಲ ಭಾರತ ವಿಜ್ಞಾನ ಸಮ್ಮೇಳನವನ್ನು ಆಯೋಜಿಸುತ್ತದೆ. ಪ್ರತಿ ವರ್ಷ ಸಮ್ಮೇಳನವು ಭಾರತದ ಮುಖ್ಯ ಪಟ್ಟಣವೊಂದರಲ್ಲಿ ನಡೆಯುತ್ತದೆ. ನಮ್ಮ ದೇಶದ ಪ್ರಧಾನ ಮಂತ್ರಿಯವರೇ ಬಂದು ಆ ಸಮ್ಮೇಳನವನ್ನು ಉದ್ಘಾಟಿಸುವುದು ಆ ಸಮ್ಮೇಳನದ ವಿಶೇಷ. ಸರ್ ಎಂ ವಿಶ್ವೇಶ್ವರಯ್ಯ, ಸರ್ ಸಿ ವಿ ರಾಮನ್ ರವರಂತಹ ದಿಗ್ಗಜರು ಒಂದಾನೊಂದು ಕಾಲದಲ್ಲಿ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದರೆ ಆ ಸಮ್ಮೇಳನಕ್ಕೆ ತನ್ನದೇ ಆದ ವಿಶೇಷತೆ ಇದೆ ಎಂದರ್ಥ. ಕೃಷಿಯಿಂದ ಹಿಡಿದು ಇಂಜಿನಿಯರ್ ವಿಷಯಗಳ ಕುರಿತ ಸಂವಾದ, ಮಾತುಕತೆ, ವಿಚಾರ ಸಂಕಿರಣ ಮುಂತಾದುವುಗಳು ಈ ಸಮ್ಮೇಳನದಲ್ಲಿ ನಡೆಯುತ್ತವೆ. ಈ ಸಮ್ಮೇಳನಕ್ಕೆ ನಮ್ಮ ದೇಶದ ವಿವಿಧ ಭಾಗಗಳಿಂದ ತಮ್ಮ ಪ್ರಬಂಧ ಮಂಡಿಸಲು, ವಿಜ್ಞಾನ ಸಂಬಂಧಿತ ಸಂಶೋಧನೆಗಳ ಕುರಿತು ಮಾತುಗಳನ್ನು ಹಂಚಿಕೊಳ್ಳಲು ವಿಜ್ಞಾನದ ವಿಧ್ಯಾರ್ಥಿಗಳು, ಯುವ ವಿಜ್ಞಾನಿಗಳು, ವಿಜ್ಞಾನಿಗಳು ಆಗಮಿಸುತ್ತಾರೆ. ಜೊತೆಗೆ ಹೊರ ದೇಶಗಳ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಂದ, ಸಂಶೋಧನ ಕೇಂದ್ರಗಳಿಂದ ಸಹ ವಿಜ್ಞಾನಿಗಳನ್ನು ಈ ಸಮ್ಮೇಳನಕ್ಕೆ ಆಹ್ವಾನಿಸಲಾಗಿರುತ್ತದೆ.

ವಿಜ್ಞಾನ ವಿಷಯಗಳು ಜನ ಸಾಮಾನ್ಯರಿಗೆ ಹೆಚ್ಚು ಸಲ ತಲುಪಲು ವಿಫಲವಾಗುವುದರಿಂದ 2009ರಲ್ಲಿ ಮೊದಲ ಬಾರಿಗೆ ಭಾರತೀಯ ವಿಜ್ಞಾನ ಕಾಂಗ್ರೇಸ್ ಸಂಸ್ಥೆ ತನ್ನ ಸಮ್ಮೇಳನದಲ್ಲಿ ಸೈನ್ಸ್ ಕಮ್ಮುನಿಕೇಷನ್ ಕುರಿತ ಒಂದು ವಿಶೇಷ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಆ ವರ್ಷ ಸೈನ್ಸ್ ಕಮ್ಮುನಿಕೇಷನ್ ವಿಚಾರ ಸಂಕಿರಣ ಯಶಸ್ಸು ಕಂಡ ಕಾರಣ ಪ್ರತಿ ವರ್ಷ ಭಾರತೀಯ ವಿಜ್ಞಾನ ಕಾಂಗ್ರೇಸ್ ಸಂಸ್ಥೆ ತನ್ನ ಸಮ್ಮೇಳನದಲ್ಲಿ ಸೈನ್ಸ್ ಕಮ್ಮುನಿಕೇಷನ್ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸುವ ನಿರ್ಧಾರಕ್ಕೆ ಬಂದಿತ್ತು. ನನಗೆ ಒಂಚೂರು ಬರವಣಿಗೆಯ ಮೇಲೆ ಒಲವಿದೆ ಎಂದು ನಮ್ಮ ಸಂಶೋಧನ ಸಂಸ್ಥೆಯ ವಿಜ್ಞಾನಿಯೊಬ್ಬರಿಗೆ ತಿಳಿದಿದ್ದರಿಂದ 2010ರ ಸೈನ್ಸ್ ಕಮ್ಯುನಿಕೇಷನ್ ನ ವಿಚಾರ ಸಂಕಿರಣಕ್ಕೆ ನನ್ನ ಹೆಸರನ್ನು ಆ ವಿಜ್ಞಾನಿ ಶಿಫಾರಸ್ಸು ಮಾಡಿದ್ದರು. ಮೊದಲಿಗೆ ಕೋಲ್ಕತ್ತಾದಲ್ಲಿ ಒಂದು ಪುಟ್ಟ ತೀರ್ಪುಗಾರರ ತಂಡದ ಮುಂದೆ ನಮ್ಮ ಪ್ರಬಂಧಗಳನ್ನು ಮಂಡಿಸಿದ ಮೇಲೆ ಪ್ರಬಂಧ ಮಂಡಿಸಿದ್ದ ಏಳೆಂಟು ಜನಗಳಲ್ಲಿ ಇಬ್ಬರನ್ನು ತಿರುವನಂತಪುರದಲ್ಲಿ 2010ರ ಜನವರಿ 3-7 ರ ವರೆಗೆ ನಡೆಯಲಿದ್ದ ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಿದ್ದರು. ಆ ಇಬ್ಬರು ಪುಣ್ಯಾತ್ಮರಲ್ಲಿ ನಾನೂ ಸಹ ಒಬ್ಬನಾಗಿದ್ದೆ. 🙂

ಕೋಲ್ಕತ್ತಾದಿಂದ ರೈಲಿನಲ್ಲಿ ಬೆಂಗಳೂರಿಗೆ ಎಷ್ಟೊಂದು ಸಲ ಪಯಣ ಬೆಳೆಸಿದ್ದರೂ ಹವಾ ನಿಯಂತ್ರಿತ ಬೋಗಿಯಲ್ಲಿ ಯಾವತ್ತಿಗೂ ಪಯಣಿಸಿರಲಿಲ್ಲ. ಆ ಸಮ್ಮೇಳನದ ದೆಸೆಯಿಂದ ಹವಾ ನಿಯಂತ್ರಿತ ಬೋಗಿಯಲ್ಲಿ ಪಯಣಿಸುವ ಅವಕಾಶ ನನಗೆ ಒದಗಿತ್ತು. ಕೋಲ್ಕತ್ತಾದಿಂದ ತಿರುವನಂತಪುರ ಒಂಚೂರು ದೂರ ಅಂತಲೇ ಹೇಳಬಹುದು. ಸುಮಾರು ಎರಡು ದಿನಗಳ ಪಯಣದಲ್ಲಿ ಮಾರ್ಗ ಮಧ್ಯೆ ಹೊಸ ಮುಖವೊಂದು ನಾನಿದ್ದ ಕಂಪಾರ್ಟ್ ಮೆಂಟ್ ನಲ್ಲಿ ಕಂಡಿತ್ತು. ಮೊದ ಮೊದಲಿಗೆ ಅಪರಿಚಿತನೆಂದು ಆ ವ್ಯಕ್ತಿಯೊಡನೆ ಮಾತನಾಡಲು ಹಿಂಜರಿದರೂ ನಂತರ ಒಬ್ಬನೇ ಕುಳಿತು ಬೇಸರಗೊಂಡಿದ್ದರಿಂದ ಆ ವ್ಯಕ್ತಿಯನ್ನು ಮಾತಿಗೆ ಎಳೆದಿದ್ದೆ. ಆತ ಮೂಲತಃ ಬೆಂಗಾಳಿ ಆದರೂ ಮೇಘಾಲಯ ರಾಜ್ಯದ ಶಿಲಾಂಗ್ ನಲ್ಲಿ ಶಿಕ್ಷಕ ಎಂದು ತಿಳಿಯಿತು. ಖುಷಿಯ ಸಂಗತಿ ಎಂದರೆ ನಾನು ಹೋಗುತ್ತಿದ್ದ ಸೈನ್ಸ್ ಕಮ್ಮುನಿಕೇಷನ್ ವಿಚಾರ ಸಂಕಿರಣಕ್ಕೆ ಆತನೂ ಸಹ ಶಿಲಾಂಗ್ ನಿಂದ ಆಯ್ಕೆ ಯಾಗಿದ್ದ. ಆತನ ಇಂಗ್ಲೀಷ್ ಎಷ್ಟು ಚಂದವಿತ್ತು ಎಂದರೆ “ತಪ್ಪಾಗಿ ತಿಳಿಯಬೇಡಿ ನಾನು ಎಷ್ಟೊಂದು ಬೆಂಗಾಳಿ ಮಿತ್ರರ ಜೊತೆ ಇಂಗ್ಲೀಷ್ ನಲ್ಲಿ ಮಾತನಾಡಿದ್ದರೂ ಯಾಕೋ ನಿಮ್ಮ ಇಂಗ್ಲೀಷ್ ಸಿಂಪ್ಲಿ ಸೂಪರ್ಬ್” ಎಂದಿದ್ದೆ. “ಥ್ಯಾಂಕ್ ಯೂ” ಎನ್ನುತ್ತಲೇ ಆತ ತಾನು ದೂರದರ್ಶನದಲ್ಲಿ ಮತ್ತು ಆಕಾಶವಾಣಿಯಲ್ಲಿ ವಾರ್ತೆಯನ್ನು ಓದುತ್ತೇನೆ ಎಂದಾಗ ನನಗೆ ಯಾಕೋ ತುಂಬಾ ಖುಷಿಯಾಗಿತ್ತು.

ಮಾರ್ಗ ಮಧ್ಯದಲ್ಲಿ ಆ ವ್ಯಕ್ತಿಯ ಪರಿಚಯವಾಗಿದ್ದರಿಂದ ಉಳಿದ ದಾರಿಯ ಪಯಣ ಬರೀ ಮಾತಿನಿಂದಲೇ ತುಂಬಿದ್ದವು . ತನ್ನ ವಿಷಯ ಭೌತ ಶಾಸ್ತ್ರ ಎನ್ನುತ್ತಲೇ ನಕ್ಷತ್ರಗಳ ಕುರಿತು, ಉಪಗ್ರಹಗಳ ಕುರಿತು, ಡಿಜಿಟಲ್ ರೇಡಿಯೋಗಳ ಕುರಿತು, ಡಿಶ್ ಟೀವಿಗಳ ಕುರಿತು ಎಷ್ಟೊಂದು ವಿಷಯಗಳನ್ನು ಆ ದಾದ (ಅಣ್ಣ) ನನಗೆ ತಿಳಿಸಿಕೊಟ್ಟಿದ್ದ. ನಮ್ಮ ಮಾತು ಬರೀ ವಿಜ್ಞಾನಕ್ಕೆ ಸಂಬಂಧಿಸದೇ ವೈಯಕ್ತಿಕ ವಿಷಯಗಳ ಕುರಿತೂ ಸಹ ನಡೆದಿತ್ತು. ಶಿಲಾಂಗ್ ಬಗ್ಗೆ, ತನ್ನ ಮನೆಯವರ ಬಗ್ಗೆ ಮಾತನಾಡುತ್ತಾ ಮದುವೆಯಾಗಿ ಹದಿಮೂರು ವರ್ಷಗಳಾಯಿತು ಮಗಳೊಬ್ಬಳಿದ್ದಾಳೆ ಎಂದಿದ್ದ ಆ ದಾದಾ. ನಾನು “ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರಿಯಲು ಕನಿಷ್ಠ ಪಕ್ಷ 25 ವರ್ಷ ಬೇಕಂತೆ. ನೀವು ಮದುವೆಯಾಗಿ 13 ವರ್ಷ ಆಗಿದೆ ಅಂತೀರ. ಹಾಗಾದರೆ ಸಂಸಾರದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರ ಬಗ್ಗೆ ನಿಮ್ಮ ಅಭಿಪ್ರಾಯ” ಎಂದು ಸಂದರ್ಶಕಾರನ ಹಾಗೆ ಪ್ರಶ್ನಿಸಿದ್ದೆ. ನನ್ನ ಮಾತಿಗೆ ಆ ದಾದಾ ನಗುತ್ತಾ “ನಟ್ಟು, ಜೀವನದಲ್ಲಿ ನೀನು ಖುಷಿಯಾಗಿರಬೇಕು ಎಂದರೆ ಹುಡುಗಿಯರನ್ನು ಅರ್ಥ ಮಾಡಿಕೊಳ್ಳೋಕೆ ಹೋಗಬೇಡ. ನಿನ್ನ ಭಾವನೆಗಳಿಗೆ ಯಾವಾಗಲೂ ವಿರುದ್ಧವಾಗಿ ಅವರ ಭಾವನೆಗಳಿರುತ್ತವೆ. ನೀನು ಅವರನ್ನು ತುಂಬಾ ಕೇರ್ ಮಾಡ್ತಾ ಇದ್ದೀಯ ಅಂದುಕೋ ಅವರು ಇನ್ನೂ ಕೇರ್ ಮಾಡಲಿ ಅಂತ ನಾಟಕ ಮಾಡ್ತಾರೆ. ಅದಕ್ಕೆ ಯಾವತ್ತಿಗೂ ಅರ್ಥ ಮಾಡಿಕೊಳ್ಳೋ ಗೋಜಿಗೆ ಹೋಗಬೇಡ” ಅಂದಿದ್ದ ಆ ದಾದಾ.

ಯಾಕೋ ಆ ಅಣ್ಣನ ಮಾತುಗಳು ಇವತ್ತಿಗೂ ಅಚ್ಚಳಿಯದೆ ನನ್ನ ಮನಸ್ಸಿನಲ್ಲಿ ನಿಂತಿವೆ. ಹುಟ್ಟಿದ್ದು ದಕ್ಷಿಣದಲ್ಲೇ ಆದರೂ ನಮ್ಮ ದೇಶದ ಪೂರ್ವ ಭಾಗದಲ್ಲಿ ಸದ್ಯ ವಾಸವಾಗಿರುವ ನಾನು ಈಶಾನ್ಯ ಭಾಗದಿಂದ ಬಂದಿದ್ದ ಆ ಅಣ್ಣನಂತಹನ ಜೊತೆ ಪಯಣಿಸಿದ್ದು ಒಂದೇ ದಿನವಾದರೂ ಯಾಕೋ ಆತನಿಂದ ಏನೆಲ್ಲವನ್ನು ಕಲಿತ ಹಾಗೆ ಭಾಸವಾಗಿತ್ತು. ನಮ್ಮಿಬ್ಬರ ಅಂದಿನ ಪಯಣ ಮುಗಿಯುತ್ತಿದ್ದಂತೆ ಮಾತುಗಳೂ ಮುಗಿದು ನಾವು ರೈಲಿನಿಂದ ಇಳಿದು ಸಮ್ಮೇಳನದ ಆಯೋಜಕರು ಏರ್ಪಡಿಸಿದ್ದ ಹೋಟೆಲ್ ಒಂದನು ತಲುಪಿದಾಗ ರಾತ್ರಿ ಎಂಟಾಗಿತ್ತು ಎನಿಸುತ್ತೆ. ಆಗ ಹೋಟೆಲ್ ನ ವರಾಂಡದಲ್ಲಿ ನಮ್ಮ ಕರ್ನಾಟಕದ ಕಾರವಾರ ರೇಡಿಯೋ ಸ್ಟೇಷನ್ ನಿಂದ ಬಂದಿದ್ದ ನಾರಾಯಣ ಭಟ್ ಎಂಬುವವರು ಪರಿಚಯವಾದರು. ಅವರ ಜೊತೆ ಮತ್ತೊಬ್ಬ ಪಂಜಾಬಿ ಗೆಳೆಯ ಪರಿಚಿತನಾಗಿದ್ದ. ಶಿಲಾಂಗ್ ದಾದಾ ತನ್ನ ಲ್ಯಾಪ್ ಟಾಪ್ ನೊಂದಿಗೆ ರೂಮು ಸೇರಿ ಬಾಗಿಲು ಹಾಕಿಕೊಂಡ ಮೇಲೆ, ನಾನು, ನಾರಾಯಣ್ ಭಟ್ಟರು, ಮತ್ತು ಪಂಜಾಬಿ ಗೆಳೆಯ ಮೂವರೂ ಊಟ ಮುಗಿಸಿ ಹೋಟೆಲ್ ನ ವರಾಂಡದಲ್ಲಿ ಕುಳಿತು ಅವತ್ತು ತುಂಬಾ ಹರಟಿದ್ದೆವು. ನಾರಯಣ ಭಟ್ಟರು ಅವರ ಜೋಕ್ ಗಳಿಂದ ನಮ್ಮನ್ನು ಸಿಕ್ಕಾಪಟ್ಟೆ ನಗಿಸಿದ್ದರು. ಅವರ ರೇಡಿಯೋ ದಿನಗಳ ಅನುಭವಗಳು, ಅದರಲ್ಲೂ ಸಂದರ್ಶನಕ್ಕೆ ಬಂದ ಅತಿಥಿಗಳು ಕೇಳಿದ ಪ್ರಶ್ನೆಗಳಿಗೆ ಚುಟುಕು ಉತ್ತರಗಳನ್ನಷ್ಟೇ ಹೇಳೋದು, ಇಲ್ಲ ಅಂದ್ರೆ ಹೂಂ ಅನ್ನೋದು, ಅಥವಾ ಉಹೂಂ ಅನ್ನೋದು ಎಲ್ಲವನ್ನು ನೆನೆಸಿಕೊಂಡು “ನಟರಾಜ್, ಅರ್ಧ ಗಂಟೆ ಮಾಡಬೇಕಾದ ಕಾರ್ಯಕ್ರಮವನ್ನು ಮಾತನಾಡಲು ಬಂದ ಅತಿಥಿಗಳು ಮಾತನಾಡುವ ಬದಲು ಬರೀ ಹೂಂ ಉಹೂಂ ಅಂದುಬಿಟ್ರೆ ನಮಗೆ ಎಷ್ಟು ಕಷ್ಟವಾಗುತ್ತೆ ಗೊತ್ತಾ” ಎಂದು ಅವರು ತಮ್ಮ ಅನುಭವಗಳನ್ನು ಜೋಕ್ ಗಳ ತರಹ ಹೇಳಿದ್ದರು.

ಹಾಗೆ ನಾರಾಯಣ ಭಟ್ಟರು ಜೋಕ್ ಗಳನ್ನು ಹೇಳುತ್ತಾ ಇರಬೇಕಾದರೆ ಅವರ ಜೋಕಿಗೆ ನಾನು ನಕ್ಕರೆ ನನ್ನ ಜೊತೆ ಮತ್ತೊಂದು ದನಿ ಎತ್ತರದ ದನಿಯಲ್ಲಿ ನಗುತ್ತಿತ್ತು. ಆ ಎತ್ತರದ ದನಿಯ ಪಂಜಾಬಿ ಗೆಳೆಯನ ಕುರಿತು ಮತ್ತೊಂದು ದಿನ ಬರೆಯುವೆ. ಅವತ್ತು ನನಗೆ ಸಿಕ್ಕ ಶಿಲಾಂಗ್ ನ ರಾಹುಲ್ ದಾ, ನಮ್ಮ ಕರ್ನಾಟಕದ ನಾರಾಯಣ್ ಭಟ್ಟರು, ಪಂಜಾಬಿನ ಸಿಂಗ್, ಈ ಮೂವರ ನಂಬರ್ ಗಳು ಈ ಮೇಲ್ ಗಳು ಇಂದಿಗೂ ನನ್ನ ಬಳಿಯಿವೆ. ಈ ಮೂವರಿಂದಲೂ ನಾನು ಆ ಒಂದೆರಡು ದಿನಗಳಲ್ಲಿ ತುಂಬಾ ಕಲಿತಿರುವೆ. ನಾರಾಯಣ ಭಟ್ಟರು ತಾವು ಸಮ್ಮೇಳನ ಮುಗಿಸಿ ಮನೆಗೆ ಹೊರಡುವಾಗ ತಮ್ಮ ವಿಜ್ಞಾನ ಬರಹಗಳಿರುವ ಪುಸ್ತಕವೊಂದನ್ನು ನನ್ನ ಕೈಗಿತ್ತಿದ್ದರು. ಅವರು ಕನ್ನಡ ಪುಸ್ತಕವೊಂದನ್ನು ನನ್ನ ಕೈಗಿತ್ತ ತಕ್ಷಣ ಒಂತರಾ ಖುಷಿಯಾಗಿತ್ತು. ಎಷ್ಟೋ ತಿಂಗಳುಗಳ ನಂತರ ಒಂದು ದಿನ ಅವರಿಗೆ ಕರೆ ಮಾಡಿ ಅದೂ ಇದೂ ಮಾತನಾಡುವಾಗ ತಮಾಷೆಗೆ “ಸರ್ ಒಂದು ಪುಸ್ತಕ ಬರೆಯಬೇಕು ಎಂದಿದ್ದೇನೆ” ಎಂದು ತಿಳಿಸಿದ್ದೆ. “ಸರಿ ಬರೆಯಿರಿ ಒಳ್ಳೆಯದಾಗಲಿ ಬರೆದಾದ ಮೇಲೆ ತಿಳಿಸಿ ಪ್ರಕಟಣೆಗೆ ಏನಾದರು ಒಂದು ವ್ಯವಸ್ಥೆ ಮಾಡೋಣ” ಎಂದಿದ್ದರು. ಬಹುಶಃ ಆ ಸ್ಪೂರ್ತಿಯ ಮಾತೇ ಅನಿಸುತ್ತೆ ಪುಸ್ತಕವೊಂದನು ಬರೆಯುವ ಮನಸ್ಸು ಮಾಡಲು ನನಗೆ ಸಹಾಯವಾಗಿದ್ದು. ಟೈಪಿಂಗ್ ಬರದಿದ್ದ ದಿನಗಳಲ್ಲಿ ಲಾಂಗ್ ನೋಟ್ ಬುಕ್ ಒಂದರಲ್ಲಿ ಎಂಬತ್ತು ಪುಟಗಳ ಒಂದು ಕಾದಂಬರಿಯನ್ನು ಅರ್ಧ ಬರೆದಿದ್ದೆ. ಬೆಂಗಳೂರಿಗೆ ಹೋದಾಗ ಕೈಯಿಂದ ಬರೆದಿದ್ದ ಆ ಬರಹಗಳನ್ನು ಕೊಂಡೊಯ್ದು ನಾರಾಯಣ್ ಭಟ್ ಅವರು ಹೇಳಿದ್ದ ಗೆಳೆಯರೊಬ್ಬರ ಬಳಿ ಟೈಪಿಂಗ್ ಗಾಗಿ ಕೊಟ್ಟಿದ್ದೆ. ಮಂಜುನಾಥ್ ಉಪಾಧ್ಯಾಯ ಎಂಬ ಆ ಗೆಳೆಯ ನನಗೆ ಮೂರ್ನಾಲ್ಕು ತಿಂಗಳುಗಳ ಅಂತರದಲ್ಲಿ ನುಡಿಯಲ್ಲಿ ಟೈಪ್ ಮಾಡಿದ್ದ ನಾಲ್ಕು ವರ್ಡ್ ಫೈಲ್ ಗಳನ್ನು ಕಳುಹಿಸಿಕೊಟ್ಟಿದ್ದರು. ಮಂಜುನಾಥ್ ರವರಿಗೆ ತಮ್ಮದೇ ಆದ ಕೆಲಸದ ಒತ್ತಡ ಇರುವುದನ್ನು ಮನಗಂಡ ನಾನು ಕೊನೆಗೆ ನುಡಿ ತಂತ್ರಾಂಶ ಡೌನ್ ಲೋಡ್ ಮಾಡಿಕೊಂಡು ಸ್ವತಃ ಟೈಪಿಂಗ್ ಅಭ್ಯಾಸ ಮಾಡಿದ್ದೆ.

ಮಂಜುನಾಥ್ ರವರ ಜೊತೆ ಒಮ್ಮೆ ಪುಸ್ತಕ ಕುರಿತು ಮಾತನಾಡುವಾಗ ಅವರು “ನೀವೇ ಪುಸ್ತಕ ಪ್ರಕಟಿಸುತ್ತೀರ ಅಥವಾ ಯಾರಾದರೂ ಪ್ರಕಾಶಕರನ್ನು ಕಂಟಾಕ್ಟ್ ಮಾಡಿದ್ದೀರ” ಎಂದು ಕೇಳಿದ್ದರು. ನಾನು ಇನ್ನೂ ಡಿಸೈಡ್ ಮಾಡಿಲ್ಲ ಎಂದಿದ್ದೆ. ಅದಕ್ಕೆ ಅವರಿತ್ತ ಸಲಹೆ ಎಂದರೆ “ಮೊದಲು ಎಲ್ಲಾದರು ಒಂದಷ್ಟು ಲೇಖನಗಳನ್ನು ಬರೆದು ಜನರಿಂದ ಗುರುತಿಸಿಕೊಳ್ಳಿ. ನಂತರ ಪುಸ್ತಕ ಪ್ರಕಟಣೆಗೆ ಮನಸ್ಸು ಮಾಡಿ” ಎಂದಿದ್ದರು. ಅವರಿತ್ತ ಸಲಹೆ ಮೇರೆಗೆ ನಾನು ದೂರದೂರಿನಲ್ಲಿ ಇರುವ ಕಾರಣ ಪೇಪರ್ ಗಳಲ್ಲಿ ಬರೆಯಲು ಸ್ವಲ್ಪ ಕಷ್ಟವೇ ಎಂದರಿತು ಅಂತರ್ಜಾಲ ಲೋಕದಲ್ಲಿ ಕನ್ನಡದ ಕೊಂಡಿಗಳನ್ನು ಹುಡುಕುತ್ತಾ ಕುಳಿತ್ತಿದ್ದೆ. 2010 ರ ಜನವರಿಯಲ್ಲಿ ಫೇಸ್ ಬುಕ್ ಅಕೌಂಟ್ ತೆರೆದಿದ್ದರೂ ಅಲ್ಲಿ ಯಾಕೋ ಯಾವ ಕನ್ನಡದ ಕೊಂಡಿಗಳು ನನ್ನ ಕಣ್ಣಿಗೆ ಕಂಡಿರಲಿಲ್ಲ. ಆದರೆ ಕನ್ನಡದ ಬರಹಗಳೇ ತುಂಬಿರುವ ಒಂದೆರಡು ಪ್ರೊಫೈಲ್ ಗಳು ಕಣ್ಣಿಗೆ ಬಿದ್ದಿದ್ದವು. ಆ ಪ್ರೊಫೈಲ್ ಗಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರು ನನ್ನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಮೇಲೆ ಅವರ ಇ ಮೇಲ್ ಐಡಿ ಪಡೆದು ನಾನು ಬರೆದಿದ್ದ ಕವನವೊಂದನು ಅವರ ಮೇಲ್ ಐಡಿಗೆ ಕಳುಹಿಸಿದ್ದೆ. ಯಾಕೋ ನಾನು ಕಳುಹಿಸಿದ ಕವನಗಳಿಗೆ ಆ ಫೇಸ್ ಬುಕ್ ಗೆಳೆಯರಿಂದ ಯಾವುದೇ ಉತ್ತರ ಬಂದಿರಲಿಲ್ಲ. “ಫೇಸ್ ಬುಕ್ ನಲ್ಲಿ ಹೆಚ್ಚಿಗೆ ಫ್ರೆಂಡ್ಸ್ ಇರೋರ ಕತೇನೆ ಇಷ್ಟು. ಏನೋ ಆಸೆಯಿಂದ ನಾವು ಕವನ ಕಳಿಸಿದರೆ ಓದಿ ಒಂದೆರಡು ಮಾತು ಹೇಳುವುದಿಲ್ಲ” ಎಂದು ಬಯ್ದುಕೊಂಡು ಸುಮ್ಮನಿರುವ ಬದಲು ಮತ್ತಷ್ಟು ಕನ್ನಡ ವೆಬ್ ತಾಣಗಳ ಹುಡುಕಿಕೊಂಡಿದ್ದೆ.

ಆಗ ಸಿಕ್ಕ ತುಂಬಾ ಪ್ರಸಿದ್ದವಾಗಿರುವಂತೆ ಕಂಡ ವೆಬ್ ತಾಣವೊಂದಕ್ಕೆ ಮೊದಲಿಗೆ ಒಂದು ಬ್ಲಾಂಕ್ ಮೇಲ್ ಕಳುಹಿಸಿದ್ದೆ. ಅತ್ತಲಿಂದ ನಿಮ್ಮ ಲೇಖನ ಸಿಗಲಿಲ್ಲ ಎಂಬ ಉತ್ತರ ಬಂದಿತ್ತು. ಇ ಮೇಲ್ ಐಡಿ ಸರಿ ಇದೆ ಎಂದು ಖಾತರಿ ಮಾಡಿಕೊಂಡು ನಂತರ ಆ ಮೇಲ್ ಐಡಿಗೆ ಕವನವೊಂದನು ಕಳುಹಿಸಿದ್ದೆ. ಅತ್ತಲಿಂದ ಯಾವುದೇ ಉತ್ತರ ಬರಲಿಲ್ಲ. ನನ್ನ ಕವನ ಬಹುಶಃ ಪ್ರಕಟವಾಗಿರಬಹುದು ಎಂದು ಹತ್ತು ದಿನಗಳವರೆಗೆ ಪ್ರತಿ ದಿನ ಬೆಳಿಗ್ಗೆ ಮಧ್ಯಾಹ್ನ ಸಂಜೆ ರಾತ್ರಿ ಹೀಗೆ ಹತ್ತಾರು ಸಲ ಆ ವೆಬ್ ತಾಣ ತೆರೆದು ನೋಡುತ್ತಿದ್ದೆ. ಬಹುಶಃ ನನ್ನ ಕವನ ಇಷ್ಟವಾಗಲಿಲ್ಲವೇನೋ ಎಂದು ಮತ್ತೊಂದು ಬರಹ ಕಳಿಸಿದ್ದೆ. ಆಗಲೂ ಅತ್ತಲಿಂದ ಉತ್ತರ ಬರಲಿಲ್ಲ. ಛಲ ಬಿಡದ ವಿಕ್ರಮನಂತೆ ಮತ್ತೊಂದು ಕವಿತೆ ಕಳುಹಿಸಿದೆ ಉತ್ತರ ಬರಲೇ ಇಲ್ಲ. ನನ್ನ ಬ್ಲಾಂಕ್ ಮೇಲ್ ಗೆ ಉತ್ತರ ನೀಡಿದ್ದ ವ್ಯಕ್ತಿಯ ಫ್ರೊಫೈಲ್ ಫೇಸ್ ಬುಕ್ ನಲ್ಲಿ ಹುಡುಕಿ ಫ್ರೆಂಡ್ ಮಾಡಿಕೊಂಡು ಅಲ್ಲಿಯೂ ಸಹ ಒಂದು ಮೆಸೇಜ್ ಮಾಡಿದ್ದೆ. ಫೇಸ್ ಬುಕ್ ಮೆಸೇಜ್ ನಲ್ಲಿಯೂ ಉತ್ತರ ಬರಲಿಲ್ಲ. ಕಾದು ಕಾದು ಬೇಸರವಾಗಿ ಗೂಗಲ್ ನಲ್ಲಿ ಅದೂ ಇದೂ ಹುಡುಕುತ್ತಾ ಕುಳಿತಾಗ ಸಂಪದ ಕಣ್ಣಿಗೆ ಬಿತ್ತು. ಯಾರಿಗೂ ಕಾಯದೆ ನಾವೇ ಲೇಖನಗಳನ್ನು ಪ್ರಕಟಿಸಬಹುದಾದ ತಾಣ ಅದಾಗಿತ್ತು. ಅಲ್ಲಿ ಒಂದು ಅಕೌಂಟ್ ತೆರೆದು ನುಡಿಯಿಂದ ಟೈಪ್ ಮಾಡಿದ್ದ ನನ್ನ ಕವನವನ್ನು ಅಲ್ಲಿ ಪೋಸ್ಟ್ ಮಾಡಲು ಪೇಸ್ಟ್ ಮಾಡಿದಾಗ ಯಾವುದೋ ಫಾರಿನ್ ಭಾಷೆಯ ತರಹ ನನ್ನ ಕವನ ಕಾಣುತ್ತಿತ್ತು. ನಂತರ ಅಂತರ್ ಜಾಲದಲ್ಲಿ ಕನ್ನಡದಲ್ಲಿ ಪ್ರಕಟಿಸಬೇಕೆಂದರೆ ನುಡಿಯಲ್ಲಿ ಟೈಪ್ ಮಾಡಿದ ಬರಹಗಳನ್ನು ಯೂನಿಕೋಡ್ ಗೆ ಪರಿವರ್ತಿಸಿ ಆಮೇಲೆ ಪೇಸ್ಟ್ ಮಾಡಿ ಪ್ರಕಟಿಸಬೇಕು ಎಂಬುದನ್ನು ಸಂಪದ ವೆಬ್ ತಾಣದ ಮೂಲೆಯೊಂದರಲ್ಲಿ ನೋಡಿ ತಿಳಿದಿದ್ದೆ. ನಂತರ ನಾನು ಟೈಪ್ ಮಾಡಿದ್ದ ನುಡಿ ಫೈಲ್ ಅನ್ನು ಯೂನಿಕೋಡ್ ನಂತೆ ಉಳಿಸಿ ನನ್ನ ಕವನಗಳನ್ನು ಸಂಪದದಲ್ಲಿ ಪ್ರಕಟಿಸಿದಾಗ ಯಾಕೋ ತುಂಬಾ ಖುಷಿಯಾಗಿತ್ತು. ಮತ್ತೊಂದು ಖುಷಿಯ ಸಂಗತಿ ಎಂದರೆ ಆ ಕವನ ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಮೂರ್ನಾಲ್ಕು ಚಂದದ ಕಾಮೆಂಟ್ ಗಳನ್ನು ಸಹ ಪಡೆದಿತ್ತು. ಯಾಕೋ ನಾನು ಅವತ್ತು ತುಂಬಾ ಸಂಭ್ರಮಿಸಿದ್ದೆ. ಆ ಸಂಭ್ರಮಕ್ಕೆ ಬರೋಬ್ಬರಿಯಾಗಿ ಇವತ್ತು ಒಂದು ವರ್ಷ. 🙂 ಥ್ಯಾಂಕ್ ಯೂ ಸಂಪದ..

ಕೊನೆಯ ಪಂಚ್ : ಸುಮ್ಮ ಸುಮ್ಮನೆ ಸಾವಿರಾರು ಗೆಳೆಯರನ್ನು ಫೇಸ್ ಬುಕ್ ನಂತಹ ತಾಣಗಳಲ್ಲಿ ಗೆಳೆಯರನ್ನಾಗಿ ಮಾಡಿಕೊಂಡು ಯಾರಾದರು ಹಾಯ್ ಎಂದರೆ ಅದಕ್ಕೆ ಪ್ರತಿಯಾಗಿ ಉತ್ತರಿಸಲಾಗದಷ್ಟು ಯಾರೂ ಬ್ಯುಸಿ ಇರಲ್ಲ. ಆದರೆ ಅಂತಹ ಸಂದೇಶಗಳಿಗೆ ಉತ್ತರಿಸಲಾಗದಿದ್ದರೆ ಫೇಸ್ ಬುಕ್ ನಲ್ಲಿ ಸುಮ್ಮನೆ ಗೆಳೆಯರನ್ನು ಸೇರಿಸಿಕೊಳ್ಳೋದರಲ್ಲಿ ಅರ್ಥವಿಲ್ಲ..ನೆನಪಿರಲಿ, ಗೆಳೆಯರ ಮೊಬೈಲ್ ನ ಸಂದೇಶಗಳಿಗೆ, ಈ ಮೇಲ್ ನ ಪತ್ರಗಳಿಗೆ, ಫೇಸ್ ಬುಕ್ ನ ಮೆಸೇಜ್ ಗಳಿಗೆ ಉತ್ತರ ನೀಡೋದು ಒಂದು ಕರ್ತವ್ಯ.

‍ಲೇಖಕರು G

November 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. SunilHH

    “ಜೀವನದಲ್ಲಿ ನೀನು ಖುಷಿಯಾಗಿರಬೇಕು ಎಂದರೆ ಹುಡುಗಿಯರನ್ನು ಅರ್ಥ ಮಾಡಿಕೊಳ್ಳೋಕೆ ಹೋಗಬೇಡ. ನಿನ್ನ ಭಾವನೆಗಳಿಗೆ ಯಾವಾಗಲೂ ವಿರುದ್ಧವಾಗಿ ಅವರ ಭಾವನೆಗಳಿರುತ್ತವೆ. ನೀನು ಅವರನ್ನು ತುಂಬಾ ಕೇರ್ ಮಾಡ್ತಾ ಇದ್ದೀಯ ಅಂದುಕೋ ಅವರು ಇನ್ನೂ ಕೇರ್ ಮಾಡಲಿ ಅಂತ ನಾಟಕ ಮಾಡ್ತಾರೆ. ಅದಕ್ಕೆ ಯಾವತ್ತಿಗೂ ಅರ್ಥ ಮಾಡಿಕೊಳ್ಳೋ ಗೋಜಿಗೆ ಹೋಗಬೇಡ”

    Super 🙂

    ಪ್ರತಿಕ್ರಿಯೆ
  2. Swarna

    ಚೆನ್ನಾಗಿದೆ.ನಿಮಗೆ ಇಂತಹ ಗೆಳೆಯರು ಇನ್ನೂ ಹೆಚ್ಚು ಸಿಗಲಿ.
    ಹೆಣ್ಣು ಅಷ್ಟು ಸುಲಭದಲ್ಲಿ ಅರ್ಥವಾಗುವಂತಿದ್ದರೆ ಸಾಹಿತ್ಯದ ಒಂದು ಅಂಗ ಇರುತ್ತಿರಲಿಲ್ಲ 🙂 ಅಲ್ಲವೇ ?
    ಸ್ವರ್ಣಾ

    ಪ್ರತಿಕ್ರಿಯೆ
  3. Srinidhi Rao

    ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರಿಯಲು ಕನಿಷ್ಠ ಪಕ್ಷ 25 ವರ್ಷ ಬೇಕಂತೆ. idu artha aaglilla…:(

    kone panch thumbaa ista aithu ..nimge olle vyaktigalu sigtha irali haag nimminda olle lekhana odo bhagyavoo namge sigali….

    dhanyavaadagalu Dr.NSM

    ಪ್ರತಿಕ್ರಿಯೆ
  4. poornima

    konae punch maathu bhahala esta aythu… chanda bharitira rajuji…. odoru navidiwi.. neev bharitha ogi…..

    ಪ್ರತಿಕ್ರಿಯೆ
  5. Rukmini Nagannavar

    ಹೌದು ನಟಣ್ಣ… ಇತ್ತೀಚೆಗಷ್ಟೇ ನನಗೂ ಅದರ ಅನುಭವವಾಗಿದೆ. ಅವರು ನನ್ನ ಸಂದೇಶ ನೋಡಿದಾರೆ ಅಂತ ನನಗೆ ಗೊತ್ತು ಕೂಡ ಆಗುತ್ತೆ. ಆದ್ರೆ ಅತ್ತ ಕಡೆಯಿಂದ ಪ್ರತಿಕ್ರಿಯೆ ಮಾತ್ರ ಇನ್ನುವರೆಗೂ ಬಂದಿಲ್ಲ. ತುಂಬಾ ಬೇಸರ ಮೂಡಿಸಿದೆ.

    ಹಾಗೆಯೇ ಹುಡುಗಿಯರನ್ನ ಅರ್ಥ ಮಾಡಿಕೊಳ್ಳುವುದಕ್ಕೆ ೨೫ ವರ್ಷ ಬೇಕ? ಹಾಗೇನಿಲ್ಲಪ್ಪಾ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: