ವೈಶಾಲಿ ಹೆಗ್ಡೆ
1.
ಬೆಳಬೆಳಗೆ
ನೇರ ಕಿಟಕಿಯನು ಹಾರಿ
ಹೊದಿಕೆಯೊಳ ತೂರಿ
ಲಲ್ಲೆಗರೆದು ಎಬ್ಬಿಸುವ
ನಾನೋ ಶತಮೊಂಡಿ ಬಜಾರಿ
ಅವನ ಕೆಂಪುಕಿರಣಗಳ ನಸು ಬಿಸಿಗೆಲ್ಲ
ಎದ್ದುಬಿಡುವ ಸುಕುಮಾರಿ-
ಅಲ್ಲ
ವ್ಯರ್ಥ ಪ್ರಯತ್ನಿಸುವ
ಅಯ್ಯೋ ಸೂರ್ಯಾ
ನನ್ನ ಉರಿಯೆದುರು ನಿಂದೆಂತ ಉರಿಯೋ
ಮುತ್ತಿಟ್ಟು ನೋಡೊಮ್ಮೆ
ಅದಲು ಬದಲಿಯಾಗಿಬಿಟ್ಟೇವು

೨.
ಆಗಲಿಂದ ಕುಳಿತಿರುವೆ
ನೀ ಬೆನ್ನ ಮೇಲೆ ಬರೆದದ್ದನ್ನೆಲ್ಲ
ನಾನೂ ಇಳಿಸಿಡಬೇಕೆಂದು
ಹಾಳೆಯ ಮೇಲೆ
ಹಾಳಾದ ಮರೆವು ಮತ್ತೊಮ್ಮೆ ಬರೆದು ತೋರಿಸು !
೩.
ಎಲ್ಲ ಸುಳ್ಳು
ಈ ಹೊಳೆಯ ಹಾಡು
ಸುತ್ತಲಿನ ಕಪ್ಪು ಕಾಡು
ಕಾಲಿಗೆಡಚುವ ಬಿಳಿ ಬೆಣಚುಗಲ್ಲು
ಅಂಗಾಲ ಮುಕುರಿ ಮುಕ್ಕುವ ಮೀನಹಲ್ಲು
ಹಾಸುಬಂಡೆಯ ಎದೆಯಗುಂಟ ಇಳಿವ ಹೊತ್ತಲ್ಲಿ
ಚೆಲ್ಲಿ ಖಾಲಿಯಾದ ಬಾನಂಚಿನ ಬಣ್ಣಕ್ಕೆ
ನೀರಲ್ಲಾಡುವ ಬೆರಳ ಉಗುರುಬಣ್ಣ ಕಾರಣವಂತೆ
ಎಲ್ಲ ಸುಳ್ಳು
ಹೊಸಿಲಿಗೆ ಬಿದ್ದ ಹನಿಯ ಕೇಳು
ಪಿಸುಗುಡುತ ಹೇಳೀತು
ಬಿಸಿಲೂ ಬೆವತು ಹೊಳೆಯಾದ ಕತೆಯ
೪.
ನನ್ನ ಕೊಂದುಬಿಡುವ ನಿನ್ನ ಪ್ರೀತಿ,
ನನ್ನ ಜೀವಂತವಿಡುವುದೂ ಅದೇ
ದೀಪಾವಳಿ ಮುಗಿಸಿ ಹಬ್ಬಕಳಿಸಿ ಬಂದಂತೆ
ಒಳಗೆಲ್ಲ ಬೆಳಕು
ಹೊರಗೆಲ್ಲ ಖಾಲಿ, ಅರೆಸುಟ್ಟ ಮತಾಪು






TUMBA chagide ilike it
1. Kavana nannanne describe madida hagide loved it
VERY GOOD POEM.
Nice