ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈಶಾಲಿ ಹೆಗ್ಡೆ ಬರೆದ ಎರಡು ಕವಿತೆಗಳು

ವೈಶಾಲಿ ಹೆಗ್ಡೆ

ಮನಣಿಸರದ ಹರಳು


ಕಪ್ಪು ಕಪ್ಪು ನಡುವೆ ನೀಲಿ ಕೆಂಪು
ಬೆವರಹನಿಗಳ ಹೆಪ್ಪು
ಕೊರಳಪ್ಪಿ ಹೊರಳೊರಳಿ ಸರ್ಪಸುಳಿ
ಸುರುಳಿ ಸಾಲಾಗಿ ಸ್ಫುಟಗೊಂಡ ಮಣಿಸರ-
ದ ಮೂಲೆಯಲಿ ಜಗ್ಗಾಡಿ ಜಗ್ಗಿ ಹಿಡಿದೊಂದು ಹಗ್ಗದೆಳೆ
ಮೊಣಕಾಲ ಮೇಲೆ ಮುಲುಗುವ ನೂಲರಾಶಿ-
ಯಾ ಚುಂಗೊಂದು ಅಡವಿಡಲು ಪರದಾಡಿ
ಹೆಣ್ತನ, ತಾಯ್ತನ, ಕೌಮಾರ್ಯ ಕಾತರ
ಸೊಂಟ ಬಗ್ಗಿದ ಭಾರ
ಭುಜದಿಂದಿಳಿವ ಮಣಿಸರದ ಭಾರ
ಮೂಗಿನೆಸಳಿಂದ ಸುರಿವ ಹನಿಮಳೆಯ ಭಾರ
ಗದ್ದೆನೆಟ್ಟಿಯ ಹಾಡು ಹ್ನೂಗುಡುವ ಕಾಡು
ದಿಕ್ಕೆಟ್ಟ ದುಷ್ಯಂತ ಕಾಲ್ಬೆರಳ ಕೆಸರಲ್ಲಿ ಹೆಜ್ಜೆಗುರುತು
ಕಳಚಿ ಕುಶಲದ ಘಾಟು
ಎಸಳೆರಡು ಬೆಸೆದಂತ ಬೆಳ್ಳಕ್ಕಿ ಸಾಲು
ನೊಸಲೇರಿ ನಸುನಕ್ಕು ಕುಟುಕಿದಾ ಗೀಟು
ಕೆಸರುಗದ್ದೆಯ ಪೈರು ನಾಚಿ ತಾನೇ ಕೆಸರು
ಚುಚ್ಚಿಬಿಟ್ಟ ಹುಲ್ಲುಭತ್ತ ಮುಳಿಹುಲ್ಲು ಮಳೆಬಿಲ್ಲು
ತಾ
ನಡೆದಂತೆ ನಡುವೆ ಸುರಿವ ಕಪ್ಪು ಕಪ್ಪು ನೀಲಿ ಕೆಂಪು
ಮಣಿಸರದ ಹರಳು

***

ಸಿಕ್ಕಿದ್ದು ಸೀರುಂಡೆ


ಸಿಕ್ಕಿದ್ದು ಸೀರುಂಡೆ ಎಂಬಂತೆ
ಬಗೆದುಕೊಳ್ಳುವ ತವಕದಲ್ಲಿ
ಕೊಡಲೇನೂ ಉಳಿದಿಲ್ಲ
ಎಂದು ಅರಿವಾಗುವ ತನಕ ಬದುಕು ಖಾಲಿ
ಪ್ರೇಮದ ಹರಿವಿಗೆ ಪರಿವೆ ಬೇಕಿಲ್ಲ
 
 
ಸರಿ
ಅರುಹುವುದೂ ಬೇಕಿಲ್ಲವೇ?
ಮೌನಗೌರಿಯ ಮಿದುಳ ಮಡಿಕೆಗಳ ನಡುವೆ
ಸಿಕ್ಕಿ ಸಾಯುವ ನೂರೆಂಟು ಪ್ರಶ್ನೆಗಳು
ಅರವಳಿಕೆಗಳ ಪರಿಧಿಯ ಒಳಹೊರಗಿನ
ಹೊಯ್ದಾಟದಲ್ಲಿ
ಅರಿವೆ ಅರಿವುಗಳ ನಡುರೇಖೆಯಲ್ಲಿ ಅವಳೀಗ

‍ಲೇಖಕರು G

12 February, 2015

2 Comments

  1. mmshaik

    uttama kavana..

  2. mahesh kalal

    fine

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading