ವೈದೇಹಿ ಅಂದರೆ ಥೇಟ್ ಅವರ ಕಥೆಗಳಿದ್ದಂತೆ. ನೇರ, ಸರಳ, ಅಷ್ಟೇ ನಿಗೂಢ. ಹೆಣ್ಣಿನ ಸಂಕಟ, ತುಮುಲ, ದ್ವಂದ್ವಗಳನ್ನು ಅವರು ಕಥೆಯಲ್ಲಿ ಎಷ್ಟು ಆಳವಾಗಿ ಹೇಳುತ್ತಾರೋ ಮಾತನಾಡುವಾಗಲೂ ಆ ನೋವನ್ನು ಅಷ್ಟೇ ಢಾಳಾಗಿ ಹೊರಗೆಡವುತ್ತಾರೆ.
ವೈದೇಹಿಯವರ ‘ಇರುವಂತಿಗೆ’ಯೊಳಗೆ The Sunday Indian( ಟಿಎಸ್‌ಐ ) ಪ್ರವೇಶಿಸಿದಾಗ ಕರಾವಳಿಯ ಸುಡುವ ಧಗೆ. ಆದರೆ ವೈದೇಹಿ ಹರಟಲು ಆರಂಭಿಸಿದಾಗ ಧಗೆ ಮಾಯವಾಗಿ ಆತ್ಮೀಯತೆಯ ತಂಪು ಹರಡಿತು. ಇಲ್ಲಿ ವೈದೇಹಿ ತಮ್ಮ ಅನುಭವಕ್ಕೆ ಬಂದ ಭಯದ ವಿವಿಧ ಮುಖ ಅನಾವರಣಗೊಳಿಸಿದ್ದಾರೆ.
–ಡಿ.ಎಸ್. ಶ್ರೀಕಲಾ
ಬಹಳ ಹಿಂದಿನ ಮಾತು. ನಮ್ಮ ಹತ್ತಿರದ ಬಂಧು ಒಬ್ಬರಿಗೆ ಚಿಕ್ಕಂದಿನಲ್ಲಿ ಕಾಯಿಲೆ ಆಗಿ ಮೆದುಳಿನ ಚುರುಕುತನ ಹೋಗಿಬಿಟ್ಟಿತ್ತು. ಮದುವೆ ಆದರೂ ದಾಂಪತ್ಯ ಸರಿ ಬರದೆ ಪತಿ ಇನ್ನೊಂದು ಮದುವೆ ಆದ. ಇನ್ನೊಂದು ಮದುವೆ ಆದರೂ ಮೊದಲಿನವಳನ್ನು ಬಿಟ್ಟು ಹಾಕಲಿಲ್ಲ. ಅವಳು ಸ್ವಲ್ಪ ಕಾಲ ಗಂಡನ ಮನೆಯಲ್ಲಿ, ಸ್ವಲ್ಪ ಕಾಲ ತಾಯಿಯ ಮನೆಯಲ್ಲಿ ಕಳೆಯುತ್ತ ಇಡೀ ಜೀವನ ಸವೆಸಿ ಹೊರಟು ಹೋದಳು. ನನಗೆ ಸದಾಕಾಲ ನೆನಪಿರೋದು ಅವಳಲ್ಲಿನ ಭಯ. ಕತ್ತಲೆಯ ಭಯ, ಮೆಟ್ಟಿಲಿಳಿಯಲು ಹತ್ತಲು ಭಯ, ತನ್ನ ಸಂಗಡ ಯಾರೂ ಇಲ್ಲವಾದರೆ ಭಯ, ತನ್ನಿಂದ ಯಾವ ಕೆಲಸ ಮಾಡಲೂ ಆಗದೆಂಬ ಭಯ. ಒಟ್ಟಾರೆ ಯಾವುದಕ್ಕೂ ಮೊದಲು ಅವಳಿಗೆ ಅಡ್ಡ ಬರುತ್ತಿದ್ದುದು ಏನೋ ಒಂದು ಬಗೆಯ ಭಯ. ಕೊನೆ ತನಕವೂ ಅದು ಅವಳನ್ನು ಬಿಟ್ಟು ಹೋಗಲಿಲ್ಲ.
ಈ ಭಯ ಹೇಗಿತ್ತೆಂದರೆ ನಿತ್ಯದ ಬದುಕಿನ ಒತ್ತಡದಲ್ಲಿ ಮುಳುಗಿಕೊಂಡಿರುವವರಿಗೆ ಬೇಕೆಂದೆ ಅವಳು ಭಯ ನಟಿಸುತ್ತಾಳೋ ಅಂತ ಅನಿಸುವ ಹಾಗೆ. ಅವಳು ಹೊಕ್ಕು ಹೊರಡುವ ಮನೆಯವರಿಗೆ ಅವಳು ಬರುತ್ತಾಳೆ ಎಂದರೆ ಅವಳಿಗೆ ಬೇಸರ ಮಾಡಿಸದೆ, ಮನೆಮಂದಿಗೂ ಕಿರಿಕಿರಿಯಾಗದಂತೆ ಅಷ್ಟು ದಿನಗಳನ್ನು ನಿಭಾಯಿಸೋದು ಹೇಗೆ, ತಮ್ಮಿಂದಾದೀತೆ ಅದು ಎಂಬ ದೊಡ್ಡ ಭಯಾತಂಕ ಆವರಿಸುತಿತ್ತು. ಎಂದರೆ ಒಂದು ಭಯದಿಂದ ಉತ್ಪಾದಿತವಾದ ಇನ್ನೊಂದು ಬಗೆಯ ಭಯ ಅದು. ಅವಳ ಕಡೆಗೆ ತಮ್ಮ ವರ್ತನೆ ಹೇಗೆ ತಿರುಗೀತೆಂದು ತಮಗೇ ತಿಳಿಯಲಾರದೆ ಆವರಿಸುವ ಅವ್ಯಕ್ತ ಭಯ. ಎಷ್ಟೋ ಸಲ ಅವಳು ನಟಿಸುತ್ತಿದ್ದಾಳೋ, ಸಹಾನುಭೂತಿಗಾಗಿ ಹಪಹಪಿಸುತ್ತಾಳೊ ಅಂತ ಚರ್ಚೆಯಾಗಿದ್ದಿದೆ, ಭಯದ ನೆಪದಲ್ಲಿ ಉಂಟುಮಾಡುವ ಕಿರಿಕಿರಿಗಳ ಸುಖ-ದುಃಖ ವಿನಿಮಯವಾಗಿದ್ದಿದೆ. ಅದೊಂದು ನಗೆಯ ವಿಷಯವಾಗಿಯೂ ವಿಷಾದದ ವಿಷಯವಾಗಿಯೂ ಅವಳ ಕಾಲಾನಂತರವೂ ಸಸೆಯಲ್ಪಡುತ್ತಿದೆ. ಮನುಷ್ಯನ ದೈನಂದಿನ ಬದುಕು ಎಷ್ಟು ಕಠಿಣವಾಗಿರುತ್ತದೆ!
ಇನ್ನೊಬ್ಬರನ್ನು ಒಂದು ಮಿತಿಗಿಂತ ಹೆಚ್ಚು ಹೊತ್ತು ತಾಳಿಕೊಳ್ಳಲು ಎಡೆ ಕೊಡದೆ, ಅದಕ್ಕೆ ಬೇಕಾಗುವ ಮಾನಸಿಕ ವ್ಯವಧಾನವನ್ನೂ ನೀಡದೆ ಇರುವ ಬದುಕಿನ ಇಕ್ಕಟ್ಟಿನಿಂದಾಗಿಯೇ ವ್ಯಕ್ತಿಯ ಗುಣಕ್ಕೆ ವಿವಿಧ ಬಣ್ಣ ಬರುತ್ತದಷ್ಟೆ. ಯಾರಿಗೂ ಯಾವುದಕ್ಕೂ ವ್ಯಕ್ತಿಜೀವನದಲ್ಲಿ ಒಂದು ಅಗೋಚರವಾದ ನಿಗದಿತ ಗೆರೆಮೀರಿ ಜಾಗವೇ ಇಲ್ಲ. ತಂತಮ್ಮ ಬದುಕಿನ ಒಳಗೆ ಹೋದಂತೆಲ್ಲ ಅವಳಂಥ ಅಸಹಜ ವ್ಯಕ್ತಿತ್ವಗಳನ್ನು ಬಿಡಿ, ಸಹಜ ವ್ಯಕ್ತಿಗಳನ್ನೂ ನಿಭಾಯಿಸುವ ಧೈರ್ಯ ಕುಸಿಯುತ್ತ ಹೋಗುವ ಕ್ರಮವೇ ವಿಚಿತ್ರ ಅಲ್ಲವೆ. ಅಂಥ ಭಯದ ಆಕೆ ತನ್ನನ್ನು ಬೇಕೆಂದೇ ಕೆಣಕಲು ಬಂದವರಿಗೆ ಅವರು ಹಿರಿಯರಾಗಲೀ, ಗಂಡಸರೇ ಆಗಲೀ ಯಾವ ಭಯವಿಲ್ಲದೆ ವಾಚಾಮಗೋಚರ ಬಯ್ಯುತಿದ್ದಳು, ನಿರ್ಭಯವಾಗಿ!
ಆಕೆಯಂಥವರು ಹೇಗಿರುತ್ತಾರೆಂದರೆ ಲೋಕಜ್ಞಾನ ಇಲ್ಲವೆಂದು ಅಲಕ್ಷಿಸುವ ಹಾಗೂ ಇಲ್ಲ, ಥಟ್ಟನೆ ಲೋಕಜ್ಞಾನ ಇದೆಯೆಂದು ತೋರಿಸುವರು, ಅಭಿಮಾನ ಇಲ್ಲವೆಂದು ಕಡೆಗಣಿಸುವ ಹಾಗೂ ಇಲ್ಲ, ಮರುಕ್ಷಣವೇ ಅಭಿಮಾನದ ಮೊಟ್ಟೆಯಂತೆ ಕಂಡು ಬಿಡುವರು, ಧೈರ್ಯಸ್ಥರೆಂದು ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುವ ಹಾಗಿಲ್ಲ, ತಮ್ಮನ್ನು ಹಾಗೆಣಿಸಿದರೆಂದೂ ತಾವೇನು ಹೆದರುಪುಕ್ಕರಲ್ಲವೆಂದೂ ರಾದ್ಧಾಂತ ಮಾಡುವರು. ಆದರೆ ಸಣ್ಣದೊಂದು ಸದ್ದಿಗೂ ಭಯಬಿದ್ದು ಮನೆ ಬಾಗಿಲನ್ನೂ ಹಾಕದೆ ಹೊರಗೋಡಿ ಬಂದು ಗದಗುಡುತ್ತ ನಿಲ್ಲುವರು. ಇಲ್ಲವೆಂದುಕೊಂಡರೆ ಇರುವ ಗುಣಗಳು, ಇದೆ ಎನ್ನುತ್ತ ಇಲ್ಲದಿರುವ ಗುಣಗಳು, ಮಂಕು ಎಂದರೆ ಮಂಕಲ್ಲದ, ಎಲ್ಲರಂತೆ ಎಂದುಕೊಂಡರೆ ಎಲ್ಲರಂತಲ್ಲದ ಜನರು ಅವರು. ಎದುರೆದುರೇ ಜೊತೆಜೊತೆಗೇ ಒಡನಾಡುತಿರುವಾಗ ಹಲವೊಮ್ಮೆ ಅದು ನಾವೆ ಎಂದೂ ಭಾಸವಾಗಿ ಭಯದಿಂದ ಬೆಚ್ಚಿ ಬೀಳುವೆವು. ಅದು ಯಾರೀಗ, ನಾನೆ ಅವಳೆ? ಇವಳೊಳಗಿನ ನಾನು ಎಷ್ಟು ಅವಳೆಷ್ಟು? ಇದೆಲ್ಲ ಏನು, ಹೇಗೆ? ನಮ್ಮೊಳಗಿನ ನಮ್ಮ ಪಾಲು ಸಮಾಜಕ್ಕೆ ಎಷ್ಟು? ನಾವೆಂಬುದು ಕೇವಲ ನಮಗೇ ಎಷ್ಟು? ಮುಂತಾಗಿ ಅನೇಕ ಪ್ರಶ್ನೆಗಳು ತಲೆ ಎತ್ತುತ್ತವೆ. ಯಾರೂ ಕೆಟ್ಟವರಲ್ಲದ ಎಲ್ಲರೂ ಒಳ್ಳೆಯವರೇ ಇರುವ ಸಂದರ್ಭದಲ್ಲಿಯೂ ತನ್ನಿಂದ ತಾನೇ ಅಪಘಟನೆಗಳು ಘಟಿಸಿಬಿಡುವವಲ್ಲ, ಘಟಿಸಕೂಡದು ಎಂಬ ಜಾಗರೂಕತೆಯ ನಡುವೆಯೆ! ಚೋದ್ಯವೆಂದರೆ, ಈಗ ಇದೀಗ ಘಟಿಸುತ್ತದೆ ಎಂಬ ಭಯದ ಮೂಲಕವೇ ಅವನ್ನು ತಡೆಯಲಿಕ್ಕೆ ಆಗದೆಯೇ ಹೋಗುತ್ತದೆ! ಇಂಥದರ ದರ್ಶನವಾದಾಗೆಲ್ಲ ಕೆಲ ಜವಾಬ್ದಾರಿಗಳ ಬಗ್ಗೆ ಸೀದ ತೀರ್ಮಾನ ಒಗೆದು ಬಿಡುವ ಮೊದಲು ನಾಲಗೆ ತಡೆಯುತ್ತದೆ. ಒಳ್ಳೆಯವರ ನಡುವೆಯೇ ಎಂತೆಂತಹ ಕ್ರೂರ ಸಂಗತಿಗಳು ನಡೆದು ಬಿಡುತ್ತವೆ; ಅಪರಾಧ ಯಾರದೆಂದು ಕಿಂಚಿತ್ತೂ ತಿಳಿಯದಂತೆ! ಅಥವಾ ಯಾರ ಅಪರಾಧವೂ ಇಲ್ಲದೆಯೆ!
ಭಯದ ಇನ್ನೊಂದು ರೂಪ ಹೇಳುತ್ತೇನೆ. ನಮ್ಮಲ್ಲಿ ಒಬ್ಬರು ವಿಧವೆ ಇದ್ದರು, ಅವರಿಗೆ ಏಕೊ ಏನೊ, ಪೋಲೀಸರ ಭಯ. ಅವರ ಬಳಿ ಯಾರಾದರೂ ಸುಮ್ಮನೆ ತಮಾಷೆಗೆ ‘ಅಕ, ಪೋಲೀಸರು ಬಂದರು’ ಅಂತಲೋ, ‘ಹೋ ಬಂದು ಬಿಟ್ಟೆಯ? ಪೋಲೀಸರು ನಿನ್ನನ್ನೇ ಕೇಳುತ್ತ ಇದ್ದರು, ಎಲ್ಲಿ ಅಂತ, ನಾವು ನೀನು ಇಲ್ಲಿಲ್ಲ ಎಂದು ಬಿಟ್ಟಿದ್ದೆವು. ಈಗ ಏನಪ್ಪ ಮಾಡುವುದು?’ ಅಂತ ಮುಖ ಗಂಭೀರ ಇಟ್ಟುಕೊಂಡು ಹೇಳಿದರೆ, ಸೈ ಸಾಕು ಅಷ್ಟೇ, ಅವರು ‘ಓ ರಾಮ, ನಾನೀಗ ಏನು ಮಾಡಲಿ, ಎಲ್ಲಿ ಅಡಗಲಪ್ಪಾ’ ಅಂತ ಓಡುತೋಡುತ್ತ ಮನೆಯ ಅಡಗು ಮೂಲೆ ಹುಡುಕುತ್ತ ಗಾಳಿಹನಿಯೂ ಓಡದ ಸೆಕೆಯಲ್ಲಿ ಬೇಯುವ ತೆಂಗಿನಕಾಯಿ ಕೂಡಿಡುವ ಕೋಣೆಯಲ್ಲಾದರೂ ಸರಿಯೆ, ‘ಇಲ್ಲಿದ್ದೇನೆ ಅಂತ ಮತ್ತೆ ಹೇಳಿಬಿಡಬೇಡಿ ಮತ್ತೆ’ ಎಂದು ಕೂಗಿ ಹೇಳುತ್ತ ಅಡಗಿ ಕುಳಿತು ಕೊಳ್ಳುವುದು; ‘ಪೋಲಿಸರು ಬಂದರು, ನಾವು ಬಿಟ್ಟುಕೊಡುತ್ತೇವೆಯೆ ನಿಮ್ಮನ್ನು? ನೀವು ಇಲ್ಲಿಲ್ಲ ಎಂದೆವು, ಬಂದ ದಾರಿಗೆ ಸುಂಕವಿಲ್ಲದಂತೆ ಅವರು ಹೊರಟು ಹೋದರು, ಬನ್ನಿ ಬನ್ನಿ, ಹೊರಗೆ ಬನ್ನಿ’ ಎಂದ ಮೇಲೆಯೇ ಸರಿ, ಮೆಲ್ಲ ಬಾಗಿಲು ಅರ್ಧ ತೆರೆದು ನೋಡಿ ಪೋಲಿಸರು ಹೋದರೆಂದು ಗಟ್ಟಿ ಮಾಡಿಕೊಂಡು ಅವರು ಹೊರಬರುವುದು… ಇದು ಮತ್ತು ಇಂತಹ ಸಂಗತಿಗಳು ಕೇಳಿದ್ದೋ ಕಂಡದ್ದೋ ವ್ಯತ್ಯಾಸ ಅಳಿಸಿಕೊಂಡು ಮನದಲ್ಲಿ ಕುಳಿತು ಬಿಟ್ಟಿವೆ. ನಾಟಕಕಾರ ಸಂಸರಿಗೆ ಪೋಲೀಸರ ಭಯವಿತ್ತೆಂದು ಕೇಳಿದ್ದೆ. ಆದರೆ ಅವಳಿಗೇಕೆ ಪೋಲೀಸರ ಭಯ? ಅವಳ ಬದುಕಿಗೂ ಇದಕ್ಕೂ ಸಂಬಂಧವೇ ಕಾಣದೆ? ಅವಳ ಪೋಲೀಸರಾದರೂ ಯಾರು? ಕಗ್ಗಂಟು.
ಇನ್ನೊಬ್ಬಳು, ಹೆಸರು ಮಾಚು ಅಂತಿಟ್ಟುಕೊಳ್ಳೋಣ, ಎಷ್ಟು ವೇಗವಾಗಿ ಕೆಲಸ ಮಾಡೋಳು. ಅವಳು ಕೆಲಸ ಮಾಡುವುದಲ್ಲ, ಮಾಡಿ ಬಿಸಾಕುವುದು, ಅದೂ ಹೇಗೆ? ವೀರಾಧಿವೀರರ ಗತ್ತಿನಲ್ಲಿ. ಅವಳ ವೇಗವೇ ಅವಳು ‘ಸರಿಯಿಲ್ಲ’ ಎನ್ನುವುದರ ನಿದರ್ಶನ ಎಂದು ಜನರೆನ್ನುತಿದ್ದರು. ಎಲ್ಲ ಸರಿ, ಸುಮ್ಮನೆ ತಮಾಷೆಗೆ ಎಂದು ಮೈ ಮೇಲೆ ಒಂದು ಹಗ್ಗ ಎಸೆದರೂ ಸರಿ, ಯಾರಿದ್ದಾರೆ ಯಾರಿಲ್ಲ ನೋಡದೆ ಉಟ್ಟ ಬಟ್ಟೆ ಬಿಚ್ಚಿ ಕೊಡವಿ ಅಯ್ಯಯ್ಯೊ ಎಂದು ಬೊಬ್ಬಿಡುತ್ತ ಸುತ್ತಾ ಸುತ್ತ ಓಡುತ್ತಿದ್ದಳು. ಓಡಿ ಆಯಾಸವಾಗಿ ಒಂದೆಡೆ ಕುಸಿದು ಕುಳಿತು ತನ್ನನ್ನು ಬೆದರಿಸಿದವರಿಗೆ ಬೈಗಳದ ಸರಮಾಲೆ ತೊಡಿಸುತ್ತಿದ್ದಳು. ಅವಳ ಬೈಗಳ ಆರಂಭವಾಗುವುದೇ ‘ಯಾವನವ ಗುಲಾಮ’ದಿಂದ. ಅವಳು ನೋಡಲು ಎಷ್ಟು ಧೈರ್ಯಸ್ಥೆಯಂತೆ ಇದ್ದಳು. ಕೈ ಬೀಸಿಕೊಂಡು ಅವಳು ರಸ್ತೆಯ ಮೇಲೆ ಹೋಗುತ್ತಿದ್ದರೆ ಆಚೀಚಿನವರು ಹೆದರಿ ಸರಿದು ಜಾಗ ಬಿಡಬೇಕು ಅಷ್ಟು ಬೀಸು. ಅವಳ ಬೀಸೇ ಅವಳ ಭಯದ ಸಂಕೇತವಾಗಿತ್ತೆ? ಕೊನೆಗೂ ಚರಂಡಿಯಲ್ಲಿ ಬಿದ್ದು ಹುಳು ಮುತ್ತಿ ಸತ್ತ ಅವಳ ಅಂತ್ಯವನ್ನು ನೆನೆದಾಗೆಲ್ಲ ವಿಲಕ್ಷಣ ಭಯವುಂಟಾಗುತ್ತದೆ. ಯಾಕೆ ಹಾಗಾಯಿತು ಪ್ರಶ್ನೆ ಪ್ರಶ್ನೆಯಾಗಿಯೆ ಉಳಿದಿದೆ.
ನಾನು ಶಿವಮೊಗ್ಗೆಯಲ್ಲಿದ್ದಾಗ ನಮ್ಮನೆಗೆ ಅಕ್ಕಿ ಕೇರಲು ಒಬ್ಬ ಮಹಿಳೆ ಬರುತ್ತಿದ್ದಳು. ಎತ್ತರಾ ಅಂದರೆ ಅಷ್ಟೆತ್ತರ, ದಪ್ಪಾ ಅಂದರೆ ದಪ್ಪ. ಒಂಟಿ, ಯಾವಾಗಲೋ ತನ್ನೂರು ಬಿಟ್ಟು ಶಿವಮೊಗ್ಗೆ ಸೇರಿ ಅವರಿವರ ಮನೆ ಅಕ್ಕಿ ಕೇರುತ್ತ ಜೀವನ ಸಾಗಿಸಿಕೊಂಡಿದ್ದಳು. ಅಕ್ಕಿ ಸುರಿದು ಮೊರ ಕೈಗೆತ್ತಿಕೊಂಡಳೆಂದರೆ ಅವಳು ಒಮ್ಮೆಗೆ ಹೃದಯ ಹಗುರಾದಂತೆ ತಾನು ಹುಟ್ಟಿಬೆಳೆದ ಮೈಸೂರಿನ ನೆನಪಿಗೆ ಹೋಗಿಬಿಡುತ್ತಿದ್ದಳು. ಮೈಸೂರು ಮಹಾರಾಜರನ್ನು ತಾನು ಹತ್ತಿರದಿಂದ ಕಂಡವಳು. ತನ್ನ ಮನೆಯವರು ಅರಮನೆಗೆ ಹೂ ಕೊಡುತ್ತಿದ್ದರು, ಹಾಲು ಕೊಡುತ್ತಿದ್ದರು, ಮುಂತಾಗಿ ಅವಳು ಹೇಳುತ್ತ ಇದ್ದಂತೆ ನಾವು ಹೂಂಗುಡುತ್ತ ಅಲ್ಲೇ ಪೇಪರು ಓದುತ್ತಲೋ ಅಕ್ಕಿ ಆರಿಸುತ್ತಲೋ ಇರುತ್ತಿದ್ದೆವು. ಮಾತುಸಾಗುತ್ತ ಇದ್ದಂತೆ ಅದು ನಡುನಡುವೆ ನಿಲ್ಲುತಿತ್ತು. ಮತ್ತೆ ಶುರುವಾಗುತ್ತಿತ್ತು. ನಾವೂ ಅದಕ್ಕನುಸಾರ ಮೌನವಾಗುತ್ತಿದ್ದೆವು, ಮತ್ತೆ ಹೂಂಗುಡುತ್ತ ಇದ್ದೆವು. ಆಯಾಸವಾದಾಗ ಮಾತು ಒಮ್ಮೊಮ್ಮೆ ಆಡುವವರ ಅಪ್ಪಣೆ ಕೇಳದೆಯೆ ತಾನಾಗಿ ಸುಮ್ಮನಾಗುವುದಿದೆ, ಆಯಾಸ ಕಳೆದು ಮತ್ತೆ ತಾನಾಗಿ ಸುರುವಾಗುವುದಿದೆ, ಗೊತ್ತಲ್ಲ? ಆದರೆ, ಅವಳ ಮಾತು ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಇನ್ನು ಸುತರಾಂ ಮುಂದರಿಯಲಾರೆ ಎಂಬಂತೆ, ಸಾಗುವ ಹಡಗಿಗೆ ಬೃಹತ್‌ಬಂಡೆ ಎದುರಾದಂತೆ ಗಕ್ಕನೆ ನಿಂತೇ ಬಿಡುತ್ತಿತ್ತು. ಆಗ ಕೋಣೆಯಲ್ಲಿ ಮಧ್ಯಾಹ್ನದ ನೀರವಕ್ಕೆ ನಾದ ತುಂಬುವಂತೆ ಅಕ್ಕಿ ವನೆಯುವ ‘ನಾನಕ್ಕ ನೀ ತಂಗಿ’ ನಿನಾದ ಮಾತ್ರ. ಅಂತಹ ಕೆಲ ಮಧ್ಯಾಹ್ನಗಳಲ್ಲಿ ಮೌನವಾಗಿಯೇ ಅಕ್ಕಿ ವನೆಯುತ್ತಿದ್ದ ಆಕೆ ಕೆಲಸ ನಿಲ್ಲಿಸಿ ಮೊರವನ್ನು ಅತ್ತ ದೂಡಿ ಅಲ್ಲೇ ಗೋಡೆಗೊರಗಿ ನಿಡುಸುಯ್ಯುವಳು. ಹತ್ತಿರದಲ್ಲಿ ಇಟ್ಟುಕೊಂಡಿರುವ ನೀರಿನ ತಂಬಿಗೆಯನ್ನೆತ್ತಿ ಸಶಬ್ದ ಕುಡಿದು ಸುಧಾರಿಕೊಳ್ಳುವುದರೊಳಗೆ ಮೈ ಬೆವರಿ ಮಿಂದ ಹಾಗಾಗುವುದು.
ಏನು? ಏನಾಯಿತು?
“ಏನಿಲ್ಲವ್ವಾ, ಏನೋ ನೆಪ್ಪಾಯಿತು ನೋಡು”
ಯಾವ ನೆನಪು? ಕಡೆಗೂ ಅವಳು ಹೇಳಲೇ ಇಲ್ಲ. ಹೇಳಲು ಹೋಗಿ ಭಯ ಬೀಳುವಳು. ಗೋಡೆಗಳಿಗೂ ಕಿವಿಯಿದೆ ಎನ್ನುವಳು. ಅದನ್ನಾದರೂ ಹೇಳುವುದು ಯಾರೋ ಅಡ್ಡಮರೆ ನಿಂತು ಕೇಳುತ್ತಿದ್ದಾರೆ ಎಂಬಂಥ ಪಿಸು-ಹಸಕು ದನಿಯಲ್ಲಿ. ಅವಳು ಊರು ಬಿಟ್ಟು ಬಂದ ಕತೆಯೇ ಅದರ ಹಿನ್ನೆಲೆಯಲ್ಲಿದೆ ಅಂತ ನಾವು, ಅಲ್ಲ ಅರಮನೆಯಲ್ಲಿ ಅವಳು ಏನೋ ಕಂಡಿದ್ದಾಳೆ, ಹೇಳಲಾರಳು, ಬಿಡಲಾರಳು, ಭಯ ಅಂತ ಇನ್ನೊಬ್ಬರು, ನಾವು ನಮ್ಮೊಳಗೇ ಬಗೆಬಗೆಯ ಕತೆಗಳನ್ನು ಅವಳ ಭಯದ ಬಗ್ಗೆಯೇ ಸೃಷ್ಟಿಮಾಡಿಕೊಂಡೆವು. ಕತೆ ಕಟ್ಟುತ್ತ ಹೋದಂತೆ ನಮಗೆ ಅವೆಲ್ಲವೂ ಸತ್ಯವೆಂಬಂತೆ ಅನಿಸತೊಡಗಿತು. ಮತ್ತು ಬಾಯಿಂದ ಬಾಯಿಗೆ ಸಾಗಿಸುವ ಸಮಯದಲ್ಲಿ ನಮ್ಮ ದನಿಯೂ ಭಯಗೊಂಡಂತೆ ತಂತಾನೇ ಹಸಕಾಗುತಿತ್ತು. ಅಡ್ಡಮರೆ ನಿಂತು ಆಲಿಸುವ ಯಾರೂ ಇಲ್ಲವೆಂದು ಗಟ್ಟಿ ಗೊತ್ತಿದ್ದೂ.
ನನ್ನೊಳಗೆ ಸದಾ ಮರಳುತ್ತಿರುವ ಒಂದು ವಿಷಯವೇ ನಾನು ಕಂಡ ನಿರಂತರ ಭಯ. ಅವ್ಯಕ್ತ ಭಯ. ಸಂಜೆ ಹೊತ್ತಾಗಿ ಬರಲು ಪಡುವ ಭಯ, ಬರುವವರಿಗೆ ಧೈರ್ಯವಿದ್ದರೂ ಮನೆ ಮಂದಿಗೆ ‘ಯಾಕಿನ್ನೂ ಬಂದಿಲ್ಲ?’ ಎಂಬ ಭಯ, ‘ಹೇಳಿಕೊಳ್ಳಲು’ ಹೇಳಿಕೊಳ್ಳಲಾರದಂಥ ಭಯವೇ ಎಷ್ಟೋ ಸಲ ಇನ್ನಿತರ ಭಯಗಳಿಗೆ ಮೂಲ ಕಾರಣವೂ ಆಗಿಬಿಡುವ ಅವಸ್ಥೆ. ಭಯ ಭಕ್ತಿ ಎಂಬ ಒಂದು ಜೋಡು ಶಬ್ದವಿದೆಯಲ್ಲ, ಅವುಗಳಂತಲ್ಲದ ಇವು ಒಳ ಚೇತನವನ್ನೇ ಹನನ ಮಾಡಿಬಿಡುತ್ತವೆ. ಅಂದಿನ ಕೆಲ ಉದಾಹರಣೆ ಕೊಟ್ಟಿರುವುದು, ಉದಾಹರಣೆಯ ದೃಷ್ಟಿಯಿಂದ ಮಾತ್ರ. ಯಾಕೆಂದರೆ ವಿದ್ಯೆ, ಉದ್ಯೋಗ, ಆತ್ಮವಿಶ್ವಾಸ ಎಲ್ಲವಿದ್ದೂ ಇವತ್ತಿಗೂ ಈ ಮಾದರಿ ಭಯದ ಉಚ್ಚಾಟನೆ ಮಾತ್ರ ಸಾಧ್ಯವಾಗಿಲ್ಲ. ತೀರ ಇತ್ತೀಚೆಗಷ್ಟೆ ಗೆಳತಿಯೊಬ್ಬಳು ಸ್ತ್ರೀ ಪ್ರಪಂಚದ ಕುರಿತು ಅಧ್ಯಯನ, ಅಧ್ಯಾಪನ ಮಾಡಿದವಳು, ಸಖತ್ ಆತ್ಮವಿಶ್ವಾಸದವಳು ತಾನು ಪಯಣಿಸುತ್ತಿದ್ದ ಬಸ್ಸು ಹಳ್ಳಿ ಹಾದಿಯಲ್ಲಿ ಕೆಟ್ಟುಹೋಗಿ ರಾತ್ರಿಯಿಡೀ ರಸ್ತೆಬದಿಯಲ್ಲಿ ಗಂಟೆಗಳ ಕಾಲ ಮೊಬೈಲಿಗೆ ಸಿಗ್ನಲ್ ಕೂಡ ಸಿಗದೆ ಅನಿವಾರ್ಯವಾಗಿ ಸುಮ್ಮನೆ ನಿಲ್ಲಬೇಕಾಗಿ ಬಂದ ಕತೆ ಹೇಳುತ್ತ ಆಗ ತನಗಾದ ಭಯದ ಅನುಭವವನ್ನು ನುಡಿದಳು. ಕೊನೆಗೆ ‘ಕೆಲಭಯಗಳು ಮನುಷ್ಯರೆಲ್ಲರಲ್ಲೂ ಇರುವುದೇ. ಆದರೆ ಕೆಲವುಂಟಲ್ಲ, ಅದು ನಮಗೆ, ನಮಗೆ ಮಾತ್ರವೆ ಎಂಬಂತೆ ಆ ಕ್ಷಣಕ್ಕೆ ಉದ್ಭವವಾಗುತ್ತವೆ. ಸಮಾಜದ ವ್ಯವಸ್ಥೆಯೊಂದಿಗೆ ವಿಕೃತ ಮಾತ್ರವಲ್ಲ, ಸಾತ್ವಿಕ ಮನಸ್ಸುಗಳೂ ಹುಟ್ಟು ಹಾಕಿದ ‘ಕೇಸ್ ಹಿಸ್ಟರಿ’ಗಳು ಐನ್ ಟೈಮಿನಲ್ಲಿ ಹೇಗೆ ಎದ್ದು ‘ಭಯೋತ್ಪಾದನೆ’ ಮಾಡುತ್ತವೆ ಅಂತ ನನಗರ್ಥವಾಗಿದ್ದು ಆಗಲೇ. ಎಂಥ ಸೋಜಿಗ ನೋಡು, ಇರುಳಲ್ಲಿ ಕರೆಂಟ್ ಹೋಯಿತೆಂದರೆ ನಾವು ಹೆಂಗಸರು ಮನೆಯಲ್ಲಿ ಒಬ್ಬರೇ ಇದ್ದೇವೆಂದರೆ ಪರಾವರ್ತನ ಪ್ರತಿಕ್ರಿಯೆಯಂತೆ ಮೊದಲು ಮಾಡುವ ಕೆಲಸ ಮುಂದಿನ ಮತ್ತು ಹಿಂದಿನ ಬಾಗಿಲು ಹಾಕಿದೆಯ ಅಂತ ನೋಡುವುದು, ಹಾಕಿಲ್ಲವಾದರೆ ತಕ್ಷಣ ಹಾಕುವುದು. ಪ್ರತಿಸಲವೂ ಯಾರೋ ದುಷ್ಟರು ಒಳನುಗ್ಗಿ ಯಾರೆಂಬುದೇ ಕಾರಣವಾಗಿರುವುದಿಲ್ಲ. ನಮ್ಮೊಳಗೇ ಹೆಣೆದುಕೊಂಡ ಅಭದ್ರತೆಯ ಒಂದು ಸ್ವರೂಪವೂ ಹೌದು ಅದು. ಎಲ್ಲಿಯವರೆಗೆ ಈ ಅಭದ್ರತೆಯ ಭೂತ ಕತ್ತಲುಗಳಲ್ಲಿ ನಿರ್ಜನ ರಸ್ತೆಗಳಲ್ಲಿ ಕಾಡುತ್ತಿರುವುದೋ ಅಲ್ಲಿಯವರೆಗೆ ಯಾವ ದೇಶ ಏನು ಸಾಧಿಸಿದರೂ ಫಲವೇನು? ಹೆಸರಿಸಲಾರದ ಆ ಭಯ ಮನೆಯಲ್ಲಿ ಇತರರೂ ಇದ್ದಾರೆಂದರೆ ಎಲ್ಲಿ ಮಾಯವಾಗುತ್ತದೆ?’ ಎಂದಳು.
ನನ್ನೊಳಗೆ ಮರಳಿ ಮರಳಿ ಮಗುಚಿಕೊಳ್ಳುತ್ತಲೇ ಇರುವ ಇಂಥ ಸಂಗತಿಗಳು. ಮತ್ತು ಈಗಂತೂ ಇವುಗಳ ಜೊತೆಗೆ ಈ ಮೂಲದಿಂದಲೇ ಹುಟ್ಟಿಕೊಂಡವೋ ಎಂಬಂತೆ ಕಾಣುವ ಆಧುನಿಕ, ನಾಗರಿಕ ಮುಂತಾದ ಶಬ್ದಾಡಂಬರಗಳ ಯುಗದಲ್ಲಿ ಜಾತಿ, ಮತ, ಸಮುದಾಯ, ಧರ್ಮ ಎಲ್ಲವನ್ನೂ ಸುತ್ತಿಕೊಂಡ ಸರ್ವನಾಶಕ ವಿರಾಟ್ ವಿಕರಾಳ ಸ್ವರೂಪಿ ಭಯಗಳು ಮತ್ತು ಅವುಗಳ ಒತ್ತಿನಲ್ಲೇ ಇರುವ ಹಾಗೂ ಬದುಕುವ ನಿರ್ಭಯಗಳು






” Bahu mukhi bayada sutta ” danta barahagalindale vaidehi namage aptaraguvudu. Hennina ola tumalagalannu anavaranagolisuva pariye avara barahada shakti. Avara niradamabara vyaktitva manaseliyetu.