‘ವೆಂಡರ್ ಕಣ್ಣು ‘ಮಿನುಗಿತು ಶಿವು ಕಣ್ಣು ಅರಳಿತು …

-ಶಿವು.ಕೆ.

ಛಾಯಾ ಕನ್ನಡಿ

ನಾಳೆ ವೆಂಡರ್ ಕಣ್ಣಿನ ಶಿವೂ ಗೆ ಧಾರವಾಡದಲ್ಲಿ ಬಹುಮಾನ ವಿತರಣೆ. ಈ ಅಂಗವಾಗಿ ಶಿವೂ ಮನದ ಉಯಾಲೆ ಇಲ್ಲಿದೆ.

ಮೊನ್ನೆ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದಾಗ ಏನೋ ಒಂಥರ ಉಲ್ಲಾಸ. ಏಕೆಂದರೆ ಇದು ನಮಗೆ ಮೂರನೇ ಅಧಿಕೃತ ರಜ. ನಾವು ಅಧಿಕೃತವಾಗಿ ಮತ್ತು ನೆಮ್ಮದಿಯಾಗಿ  ನಿದ್ರಿಸಿದ್ದು ಈ ವರ್ಷದಲ್ಲಿ ಮೂರನೇ ಭಾರಿ. ಅವತ್ತು ನನ್ನ ಕನಸಿನಲ್ಲೂ ಸುಖವಾಗಿ ನಿದ್ರಿಸುತ್ತಾ ಅಕಾಶದಲ್ಲಿ ತೇಲಿಹೋಗುತ್ತಿರುವ ಚಿತ್ರಗಳೇ!.

ನಾನು ಮಾತ್ರವಲ್ಲ ನನ್ನ ಹುಡುಗರು, ನನ್ನ ಎಲ್ಲಾ ವೆಂಡರ್ ಗೆಳೆಯರು, ಅವರ ಹುಡುಗರೂ ಕೂಡ ಸುಖವಾಗಿ ನಿದ್ರಿಸಿದ ದಿನವದು. ಅವತ್ತು  ಭಾನುವಾರವಾಗಿತ್ತಾದ್ದರಿಂದ ಏನು ಕೆಲಸವಿರಲಿಲ್ಲ. ಇಡೀ ದಿನ ಎಲ್ಲಿಯೂ ಹೋಗದೇ ಅರಾಮವಾಗಿ ಮನೆಯಲ್ಲಿಯೇ ಕಳೆದೆ. ಒಂಥರ ಏನು ಮಾಡದೇ ಸುಮ್ಮನಿದ್ದುಬಿಡುವುದು ಅಂತಾರಲ್ಲ ಹಾಗೆ. ಮಾನಸಿಕವಾಗಿ ತುಂಬಾ ರಿಲ್ಯಾಕ್ಸ್ ಆಗಿದ್ದ ದಿನವದು.

ಮರುದಿನ ಮುಂಜಾನೆ ನಾಲ್ಕು ಖುಷಿಯಿಂದಲೇ ಹೋದೆ.  ನನ್ನ ಒಂಬತ್ತು ಹುಡುಗರಲ್ಲಿ ಇಬ್ಬರು ತಿರುಪತಿಗೆ ಹೋಗಿಬಿಟ್ಟಿದ್ದಾರೆ, ಫೋನ್ ಮಾಡಿದರೆ ಒಬ್ಬನದು ಸ್ವಿಚ್ ಆಪ್ ಮತ್ತೊಬ್ಬ ದರ್ಶನಕ್ಕಾಗಿ ನಿಂತಿದ್ದೇವೆ ಅಂತ ಹೇಳಬೇಕೆ!  ಇನ್ನೊಬ್ಬ ಅಕ್ಕನ ಮಗನ ನಾಮಕರಣಕ್ಕೆ ಅಂತ ಚಕ್ಕರ್. ಮಗದೊಬ್ಬನ ಮೊಬೈಲ್ ಸ್ವಿಚ್ ಆಪ್.  ಆಗ ತಾನೆ ಹೊಸದಾಗಿ ಸೇರಿದ್ದ ಹುಡುಗ ಜೊತೆಗಿದ್ದರೂ ಅವನಿಗೆ ಯಾವ ರೂಟಿನ ಪೇಪರುಗಳು ಗೊತ್ತಿಲ್ಲ. ಆತ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ.

ಸಪ್ಲಿಮೆಂಟರಿಗಳನ್ನು ಹಾಕಿ ಸಿದ್ದಗೊಳಿಸಲು ಸಹಕರಿಸಿದನಷ್ಟೆ.  ಉಳಿದ ಐದು ಹುಡುಗರು ಬಂದಿದ್ದರಿಂದ ಏಳುರೂಟುಗಳಲ್ಲಿ ಎರಡು ರೂಟುಗಳಿಗೆ ನಾನು ಹೋಗಲೇಬೇಕಿತ್ತು.   ಇದರ ನಡುವೆ ಟೈಮ್ಸ್ ಆಪ್ ಇಂಡಿಯ ಭಾನುವಾರದ ಸಪ್ಲಿಮೆಂಟರಿಗಳು ಸೋಮವಾರ ಬಂದು ಪೇಪರುಗಳು ದಪ್ಪವಾಗಿ ಊದಿಕೊಂಡಿದ್ದವು. ಇಷ್ಟೆಲ್ಲಾ ಟೆನ್ಷನ್ನು ಗಳ ನಡುವೆ ಉರಿಯುವ ಬೆಂಕಿಗೆ ಉಪ್ಪುಕಾರ ಹಾಕುವಂತೆ ಕನ್ನಡ ಪ್ರಭ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ಪೇಪರುಗಳ ಪ್ರಿಂಟಿಂಗ್‍ನಲ್ಲಿ ತೊಂದರೆಯಾಗಿ ಆರುವರೆಯಾದರೂ ಬಂದಿರಲಿಲ್ಲ. ಕಾಲೇಜಿಗೆ ಹೋಗುವ ಹುಡುಗರೆಲ್ಲಾ “ಅಣ್ಣ ಅದು ಬಂದಮೇಲೆ ನೀವೇ ಹಾಕಿಕೊಂಡು ಬಿಡಿ” ಎನ್ನುತ್ತಿದ್ದಾರೆ. ಇಂಥ ಸಮಯದಲ್ಲಿ ನನ್ನ ಸ್ಥಿತಿ ಹೇಗಿರಬಹುದು.

ನೆನ್ನೆಯಲ್ಲಾ ಖುಷಿಯಿಂದ ಆಕಾಶದಲ್ಲಿ ತೇಲಾಡುತ್ತಿದ್ದವನನ್ನು ನೇರವಾಗಿ ನೆಲಕ್ಕೆ ಬಿಸಾಡಿದಂತೆ ಆಗಿತ್ತು.  ನಮ್ಮ ಎಲ್ಲಾ ವೆಂಡರುಗಳ ಸ್ಥಿತಿ ಹೀಗಾದರೆ, ನಮ್ಮ ಬೀಟ್ ಹುಡುಗರ ಪ್ರಕಾರ ವರ್ಷಕ್ಕೆ ಒಂದು ಹಬ್ಬ ರಜ ಅದರ ಜೊತೆಗೆ ಮತ್ತೊಂದು ದಿನ ರಜ ತೆಗೆದುಕೊಂಡು ಊರಿಗೆ ಹೋದರೆ ತಪ್ಪೇನು? ಎನ್ನುವುದು ಅವರ ಮಾತು.  ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಮಾಡುವ ಜನರ ಕಣ್ಣಿಗೆ ಮತ್ತೊಂದು ಮುಂಜಾನೆ ಸಂತೆ. ಬಿಟ್ಟಿ ಸಿನಿಮಾ. ಇದೆಲ್ಲರಿಂದ ಹೊರಗೆ ಬಂದು ನನ್ನ ಪಾತ್ರ ಬದಲಾಗಿ ಒಬ್ಬ ಛಾಯಾಗ್ರಾಹಕನಾಗಿ ಅಥವ ಬರಹನಾಗಿಬಿಟ್ಟರೆ ನನಗೂ ಮತ್ತು ನಿಮಗೆಲ್ಲರಿಗೂ ಮತ್ತೊಂದು “ವೆಂಡರ್ ಕಣ್ಣು”ವಿನ ಕತೆ.

ಕೊನೆಗೂ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ಬೆಳಿಗ್ಗೆ ಒಂಬತ್ತು ಗಂಟೆ. ಸೋಮವಾರ ಕೆಲವು ಆಫೀಸುಗಳಿಗೆ ಹೋಗಬೇಕಾಗಿದ್ದರಿಂದ ಬೇಗ ಸಿದ್ದನಾಗಿ ಹೊರಟೆ.  ಮನೆಗೆ ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಕೈಕಾಲು ಮುಖ ತೊಳೆದು ಊಟಕ್ಕೆ ಕುಳಿತುಕೊಳ್ಳುವಷ್ಟರಲ್ಲಿ ಬಂತು ಪೋಸ್ಟ್.  ತೆಗೆದು ಓದಿದೆ ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ. ನನ್ನ “ವೆಂಡರ್ ಕಣ್ಣು” ಪುಸ್ತಕಕ್ಕೆ ಲಲಿತ ಪ್ರಬಂಧ ವಿಭಾಗದಲ್ಲಿ ಡಾ.ದ.ರಾ.ಬೆಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ],ಧಾರವಾಡದ ಸಂಸ್ಥೆಯಿಂದ ಬಹುಮಾನ ಬಂದಿತ್ತು. “ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದಿದೆ” ನಾನು ಜೋರಾಗಿ ಹೇಳಿದಾಗ ನನ್ನ ಕೈಯಿಂದ ಪತ್ರವನ್ನು ಕಿತ್ತುಕೊಂಡು ನಿದಾನವಾಗಿ ಓದಿದಳು ಹೇಮಶ್ರೀ. ನಮ್ಮಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಮತ್ತೆ ಅಕಾಶ ಹಾರಿ ಮೋಡಗಳ ನಡುವೆ ತೇಲುತ್ತಿದ್ದೆ. ಊಟ ಬೇಕಿಲ್ಲವಾಗಿತ್ತು.

ಇದಕ್ಕೆಲ್ಲಾ ಕಾರಣ ಮತ್ತದೇ ನನ್ನ ಮುಂಜಾನೆ ಚುಮುಚುಮು ಬೆಳಕಿನ ಮುಂಜಾನೆ ಸಂತೆ. ಅದರಲ್ಲಿನ ಬೀಟ್ ಹುಡುಗರು. ಇವರೊಂಥರ ನೀರಿದ್ದಂತೆ. ಯಾವ ಆಕಾರಕ್ಕೆ ಬೇಕಾದರೂ ಒಗ್ಗಿಕೊಳ್ಳುತ್ತಾರೆ. ಓಲೈಸಿಬಿಟ್ಟರೆ ಮುದ್ದಿನ ಅರಗಿಣಿಗಳು, ಶಿಸ್ತಿನ ಸಿಪಾಯಿಗಳು. ಕೋಪದಿಂದ ಬೈದರೇ….ಚಕ್ಕರ್ ಮೇಲೆ ಚಕ್ಕರುಗಳು…ಲಾಂಗ್ ಲೀವುಗಳು…ಮೊಬೈಲ್ ಸ್ವಿಚ್ ಆಪ್‍ಗಳು…ನಾಟ್ ರೀಚಬಲ್ಲುಗಳು………..ಆದರೂ…….

ಚಳಿ ಗಾಳಿ ಮಳೆ ಎನ್ನದೇ….

ತಣ್ಣನೆ ಮುಂಜಾವಿನಲ್ಲಿ….
ಬೆಚ್ಚನೇ ಬೆಳಗು ತರುವ….
ಅಸಂಖ್ಯಾತ, ಅನಾಮಿಕ….
ದಿನಪತ್ರಿಕೆ ಹಂಚುವ….

 

ಹುಡುಗರಿಗೆ…..

ವೆಂಡರ್ ಕಣ್ಣು ಪುಸ್ತಕಕ್ಕೆ ಬಂದ ಬಹುಮಾನ ಅರ್ಪಣೆ.

ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಇವರೊಂಥರ ಪ್ಲಾಸ್ಟರ್ ಆಪ್ ಪ್ಯಾರಿಸ್ ಇದ್ದಂತೆ. ಬೇಕಾದ ಆಕಾರದಲ್ಲಿ ಅಚ್ಚಾಗುವ ಮೂಲ ದ್ರವ್ಯಗಳು. ಇದನ್ನೆಲ್ಲಾ ಬರಹದ ಮೂಲಕ ಹೊರಹಾಕಲು ಒಂದು ಮಾಧ್ಯಮ ಬೇಕಿತ್ತು ಮೊದಲಾದರೆ ಪೆನ್ನು ಪೇಪರ್ ಹಿಡಿದು  ನಿದಾನವಾಗಿ ಬರೆಯುವಾಗ ಈ ವೇಗವಿರಲಿಲ್ಲ. ಅದ್ಯಾವಾಗ ಜಿ.ಎನ್.ಮೋಹನ್ ನನಗೆ ತಗುಲಿಕೊಂಡರೋ ನನ್ನಲ್ಲಿ ಕಂಫ್ಯೂಟರಿನಲ್ಲಿ ಬರೆಯುವ ಉಮೇದು ಹತ್ತಿಸಿ ಬರೆದಿದ್ದನ್ನು ತೋರಿಸಲು ಬ್ಲಾಗ್ ಲೋಕವೆನ್ನುವ ವೇದಿಕೆಯ ನಡುವೆ ನಿಲ್ಲಿಸಿ ಮುಂದೆ ನೀನುಂಟು ನಿನ್ನ ಬ್ಲಾಗ್ ಬಳಗವುಂಟು ಅಂತೇಳಿ ನಡೆದೇ ಬಿಟ್ಟರು.

ಅಮೇಲೆ ನಡೆದಿದ್ದೆಲ್ಲಾ ಇತಿಹಾಸ. ಬ್ಲಾಗ್ ನನಗೊಂದು ಹೊಸಲೋಕವನ್ನು ತೋರಿಸಿತು. ಇಲ್ಲಿ ಬರೆದಿದ್ದನ್ನು ಪ್ರೀತಿಯಿಂದ ಓದುವವರು ಇದ್ದಾರೆ. ತಪ್ಪುಗಳನ್ನು ತಿದ್ದಿ ಬೆನ್ನುತಟ್ಟುವ ಹಿರಿಯರಿದ್ದಾರೆ. ಬರಹದ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿದ್ದಾರೆ. ಬೇರೆಲ್ಲಾ ಮಾದ್ಯಮಗಳು  ಹದಗೆಟ್ಟುಹೋಗಿ ಒಳಗೊಂದು ಹೊರಗೊಂದು ಅಂತಿರುವ ಕಾಲದಲ್ಲಿ ನಮ್ಮ ಬ್ಲಾಗ್ ಲೋಕ ಪರಿಶುಧ್ಧವಾಗಿದೆ.

ಅದಕ್ಕೇ ಸಾಕ್ಷಿಯಾಗಿ ಪೇಪರ್ ಹುಡುಗ ವಿಶ್ವನಾಥನ ಅಪಘಾತ ಪರಿಸ್ಥಿತಿಯಲ್ಲಿ ಸ್ಪಂದಿಸಿದ ರೀತಿ,  ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ನಮ್ಮದೇ ಮನೆಯ ಕಾರ್ಯಕ್ರಮ, ಪುಸ್ತಕವೆನ್ನುವಷ್ಟರ ಮಟ್ಟಿಗೆ ಅಪ್ಪಿಕೊಂಡು ಯಶಸ್ವಿಗೊಳಿಸಿದ್ದು, ಬ್ಲಾಗ್ ವನಕ್ಕೆ ಹೋಗಿ ಗಿಡನೆಟ್ಟಿದ್ದು…ಹೀಗೆ ಅನೇಕ ಉದಾಹರಣೆಗಳು. ಇಂಥ ಪರಿಸರದಲ್ಲಿ ನನ್ನ ಬರಹಕ್ಕೆ ಮೊದಲು ಒಂದು ಚೌಕಟ್ಟು ಹಾಕಿಕೊಟ್ಟು ಒಂದೇ ವಿಷಯದ ಬಗ್ಗೆ ಬರಿ ಅಂತ ಒಂದು ಕಡೆ ಕೂರಿಸಿ   ಪ್ರೋತ್ಸಾಹಿಸಿದವರು ಹಿರಿಯರಾದ ನಾಗೇಶ್ ಹೆಗೆಡೆ.

ಅವರನ್ನು ಈ ಕ್ಷಣದಲ್ಲಿ ನಾನು ನೆನೆಯಲೇಬೇಕು. ಬಹುಮಾನ ಬಂದ ತಕ್ಷಣ “ನನ್ನ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿಯಾಯ್ತು” ಎಂದ ಹಾಲ್ದೊಡ್ಡೇರಿ ಸುಧೀಂದ್ರ ಸರ್, “ನೀನಿನ್ನು ಅರಾಮವಾಗಿ ಕೂರುವಂತಿಲ್ಲ” ಎಂದ ಶೇಷಾಶಾಸ್ತ್ರಿಗಳು,  ದೂರದ ಕುವೈಟಿನಿಂದ ಪೋನ್ ವಿಶ್ ಮಾಡಿದ ಗೆಳೆಯ ಡಾ.ಅಜಾದ್, ಸುಗುಣಕ್ಕ, ಮಹೇಶ್ ಸರ್, ಡಾ.ಕೃಷ್ಣಮೂರ್ತಿ, ಪರಂಜಪೆ, ಎಂ ವಿಶ್ವನಾಥ್, ಮಲ್ಲಿಕಾರ್ಜುನ್, ಶಿವಶಂಕರ್ ಎಳವತ್ತಿ….. ಇನ್ನಿತರರು ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿ ಪಟ್ಟಿದ್ದಾರೆ.

ಇದಲ್ಲದೇ ದೂರದೂರಿನಲ್ಲಿರುವ ವನಿತಾ, ರಂಜಿತ, ಚೇತನ ಭಟ್, ಪೂರ್ಣಿಮ ಭಟ್, ಮಾನಸ ಮಾತ್ರವಲ್ಲದೇ ವಸುದೇಶ್, ಶಿವಪ್ರಕಾಶ್, ಶಶಿಅಕ್ಕ, ವಿಕಾಶ್ ಹೆಗಡೆ, ಸುಶ್ರುತ, ಸುಮನ್ ವೆಂಕಟ್, ಪ್ರಕಾಶ್ ಹೆಗಡೆ, ಚಂದ್ರುಸರ್, ಮಹೇಶ್ ಕಲ್ಲರೆ, ಪ್ರಗತಿ ಹೆಗಡೆ, ವಿಜಯಶ್ರೀ, ಚಿನ್ಮಯ್, ಬಾಲಸುಬ್ರಮಣ್ಯ ಶಾಸ್ತ್ರಿ, ವಿನಯ್, ನಾಗರಾಜ್, ಶ್ಯಾಮಲ ಮೇಡಮ್, ಶ್ರೀನಿಧಿ, ದಿವ್ಯ, ದೊಡ್ಡಮನಿ ಮಂಜು,………………ಇನ್ನೂ ಎಷ್ಟೋ ಬ್ಲಾಗ್ ಗೆಳೆಯರು ನನಗಿಂತ ಮೊದಲೇ ತಿಳಿದು ವಿಷ್ ಮಾಡುತ್ತಾ ಸಂತೋಷ ಪಟ್ಟಿದ್ದಾರೆ.

“ವೆಂಡರ್ ಕಣ್ಣು” ಬರೆದಿದ್ದು ನಾನು ಎನ್ನುವ ನೆಪವಾದರೂ ಅದರಲ್ಲಿನ ಎಲ್ಲಾ ಘಟನೆಗಳು, ಪಾತ್ರಗಳು, ಅದರಲ್ಲಿ ನೋವು ನಲಿವುಗಳನ್ನು ನಮ್ಮ ಬ್ಲಾಗ್ ಗೆಳೆಯರು ತುಂಬು ಹೃದಯದಿಂದ ಅನುಭವಿಸಿದ್ದಾರೆ. ಪ್ರೋತ್ಸಾಹಿಸಿದ್ದಾರೆ.

ಬ್ಲಾಗ್ ಬಳಗ ಪ್ರೋತ್ಸಾಹಿಸದಿದ್ದಲ್ಲಿ ಇಂಥ ವೆಂಡರ್ ಕಣ್ಣು ರೂಪುಗೊಳ್ಳುತ್ತಿರಲಿಲ್ಲ.  ಇಂಥ ಸಮಯದಲ್ಲಿ ಬ್ಲಾಗ್ ಬರಹದ ಪುಸ್ತಕವಾದ “ವೆಂಡರ್ ಕಣ್ಣು”ಗೆ ಸಿಕ್ಕ ಬಹುಮಾನ ಎಲ್ಲಾ ಬ್ಲಾಗಿಗರಿಗೂ ಸಲ್ಲುತ್ತದೆ.

“ಬ್ಲಾಗ್ ಬರಹಕ್ಕೂ ಬಹುಮಾನ ಬಂತ?” ಈ ಪ್ರಶ್ನೆ ಮೂಡಿ ನನ್ನೊಳಗೆ ಅಚ್ಚರಿ ಮೂಡಿಸಿದಂತೆ ನನ್ನ ಇತರ ಬ್ಲಾಗ್ ಗೆಳೆಯರಲ್ಲೂ ಇದೇ ಪ್ರಶ್ನೆಯ ಜೊತೆಗೊಂದು ಆಶ್ಚರ್ಯ, ಅದರಾಚೆಗೊಂದು ಆಸೆಯೂ ಮೂಡುತ್ತಿದೆ.  ಹೀಗೆ  ನಮ್ಮ ಎಲ್ಲಾ ಬ್ಲಾಗ್ ಗೆಳೆಯರು  ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಸಂತೋಷ ಪಡುತ್ತಿರುವುದರಿಂದ ಈ ಬಹುಮಾನವನ್ನು ನಮ್ಮ ದಿನಪತ್ರಿಕೆ ಹುಡುಗರ ಜೊತೆಗೆ ಬ್ಲಾಗ್ ಲೋಕದ ಗೆಳೆಯರಿಗೂ ಅರ್ಪಿಸುತ್ತಿದ್ದೇನೆ.

 

‍ಲೇಖಕರು avadhi

October 25, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Manjunatha HT

    ಶುಭವಾಗಲಿ ಶಿವು, ಮತ್ತಷ್ಟು ಸದಭಿರುಚಿಯ ಲೇಖನಗಳು ನಿಮ್ಮಿ೦ದ ಹೊರಬರಲಿ, ಬ೦ದಿರುವ ಪ್ರಶಸ್ತಿ, ಉತ್ತು೦ಗಶೃ೦ಗಕ್ಕೆ ದಾರಿ ದೀಪವಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: