ವೀರೇಂದ್ರ ರಾವಿಹಾಳ್ ಕಂಡಂತೆ ‘ಹಾಲು ಚಲ್ಲಿದ ಹೊಲ’

ವೀರೇಂದ್ರ ರಾವಿಹಾಳ್

ಹರಿದ ಹಾಲಿನ ಹೊನಲು

‘ಕಾವ್ಯವೆಂಬುದು ಅಮೃತಕ್ಕೆ ಹಾರುವ ಗರುಡ’ ಎಂಬ ಡಿ ಆರ್ ನಾಗರಾಜ ಅವರ ಮಾತು ಡಾ. ಅರವಿಂದ ಪಟೇಲರ ಹಾಲು ಚಲ್ಲಿದ ಹೊಲ ಕವನ ಸಂಕಲನದ ಕವಿತೆಗಳನ್ನು ಓದುವಾಗ ಮತ್ತೆ ನನ್ನೊಳಗೆ ಅನುರಣಿಸಿದಂತಾಯ್ತು. ನೆಲದ ಮೂಲ ಸೆಲೆಗಳ ಕುರಿತ ಕಾಳಜಿ, ವರ್ತಮಾನದ ತಲ್ಲಣಗಳಿಗೆ ತೋರುವ ಸಿಂಪೆಥೆಟಿಕ್ ಪ್ರತಿಕ್ರಿಯೆ ಹಾಗೆಯೇ ನಿಸರ್ಗ, ಮನುಷ್ಯರ ಸಹಸಂಬಂಧದ ಆಪ್ಯಾಯಮಾನ ಮಾತುಗಳು ಇವು ಈ ಸಂಕಲನದ ಪ್ರಧಾನ ಧಾರೆಗಳಾಗಿ ನಿಂತು ಸೆಳೆಯುತ್ತವೆ.

ಕವಿ ವೃತ್ತಿಯಲ್ಲಿ ಶಸ್ತ್ರ ಚಿಕಿತ್ಸಕರಾಗಿ ಖ್ಯಾತಿ ಹೊಂದಿದವರು. ಅವರ ಯಾವತ್ತೂ ಬಿಡುವಿಲ್ಲದ ಕಾಯಕದ ಮಧ್ಯೆ ಕಾವ್ಯಕ್ಕೂ, ಕಥೆಗೂ ಜಾಗ ನೀಡಿರುವುದು ಅವರೊಳಗಿನ ಸಹೃದಯ, ಸೃಜನಶೀಲ ಬರಹಗಾರನೇ ಮೇಲುಗೈ ಸಾಧಿಸಿದ ದ್ಯೋತಕವಾಗಿದೆ. ಇವರು ವೈದ್ಯರೂ, ಕತೆಗಾರರೂ, ಕವಿಗಳೂ ವನ್ಯಜೀವಿ ಛಾಯಾಗ್ರಾಹಕರೂ ಆಗಿದ್ದಾರೆ. ಬಹುಶಃ ಇಂಥಾ ಅವರ ಬಹುಮುಖಿ ನಡೆಗೆ ಸೃಜನಶೀಲ ಕ್ರಿಯೆಗಳೊಡನೆ ಅವರು ಯಾವತ್ತೂ ಇಟ್ಟುಕೊಂಡಿರುವ ಸಾವಯುವ ಸಂಬಂಧಗಳೇ ಕಾರಣವಿರಬಹುದೆಂದು ಕವಿತೆಗಳು, ಅವರ ಮಾತುಗಳೂ ಸಾಕ್ಷೀಕರಿಸುತ್ತವೆ.

ಇದು ಇವರ ಮೂರನೇ ಕವಿತಾ ಸಂಕಲನ. ಈಗಾಗಲೇ ಎರಡು ಕಾವ್ಯ ಕೃತಿಗಳನ್ನು ಹೊರ ತಂದಿರುವ ಅವರು ಪ್ರಸ್ತುತ ಕೃತಿಯ ಮೂಲಕ ಕಳೆದೆರಡು ಸಂಕಲನಗಳ ಮಿತಿಗಳನ್ನು ದಾಟಿ ಕಾವ್ಯ ಕಟ್ಟುವಿಕೆಯ ಹದ ಕೈಗೆ ಒದಗಿ ಬಂದಂತಿದೆ. ಇಡೀ ಸಂಕಲನದ ತುಂಬಾ ಹರಿದಿರುವ ಈ ಕಾವ್ಯಗಳಲ್ಲಿ ಜೀವಪರ ಮತ್ತು ಸಮಸಮಾಜದ ಪರ ದನಿಭರಿತ ಆರೋಗ್ಯಕರವಾದ ನಿಲುವುಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಅರ್ಪಣೆಯ ನುಡಿಗಳಲ್ಲೇ ಈ ಸಮಾಜದಲ್ಲಿ ಕವಿಯಾದವನು ಯಾರ ಪರವಹಿಸಬೇಕು ಎಂಬುವ ತಮ್ಮ ಸದಾಶಯವನ್ನು ಓದುಗರ ಮನಗಳಿಗೆ ದಾಟಿಸಿಬಿಡುತ್ತಾರೆ. ಹಿರಿಯ ಕವಿಗಳಾದ ಬರಗೂರರ ಮುನ್ನುಡಿಯು ಕಾವ್ಯದ ನಿಲುವುಗಳನ್ನು ಗ್ರಹಿಸುವಲ್ಲಿ ಸಹಕಾರಿಯಾದ ಮತ್ತು ಪಟೇಲರ ಕಾವ್ಯದ ಪ್ರವೇಶಿಕೆಗೆ ಪೂರಕವಾದ ಮಾತುಗಳನ್ನು ಆಡಿರುವುದೇ ಕವಿಯ ಅರ್ಧ ಯಶಸ್ಸೆಂದು ಭಾವಿಸಬಹುದು.

ವೈಯಕ್ತಿಕವಾಗಿ ಇಲ್ಲಿನ ಹಲವಾರು ಕವನಗಳು ಮತ್ತು ಅದರ ರಚನೆ ಮತ್ತು ಸಮಾಜಪರ ನಿಲುವುಗಳು ಕಾವ್ಯಾಸಕ್ತರನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅಂತಹ ಕೆಲವು ಉದಾಹರಣೆಗಳನ್ನು ನೋಡುವುದಾದರೆ ‘ಆಯ್ದ ಬಟ್ಟೆ’ ಕವನವು ಕೇವಲ ನಾವು ಹೊರಮೈ ತೊಡುವ ಬಟ್ಟೆಯ ಬಗ್ಗೆ ಅಲ್ಲದೆ ಜೀವನದಲ್ಲಿ ಮನುಷ್ಯ ಆಯ್ಕೆ ಮಾಡಿಕೊಳ್ಳಬಹುದಾದ ದಾರಿಯ ಬಗ್ಗೆಯೂ ತುಂಬಾ ರೂಪಕಾತ್ಮಕವಾಗಿ ಹೇಳುತ್ತದೆ.“ಕೊರಳಿಗೆ ಉರುಳೆನಿಸದಿರಬೇಕು
ಬದುಕು ಮೂರಾಬಟ್ಟೆಯಾಗದಿರಲು
ಬಟ್ಟೆ ಮನಸಿಗೆ ಮುದನೀಡುವಂತಿರಬೇಕು.
ಹದವಾಗಿರಬೇಕು.”

ಹೀಗೆ ಆರಂಭಗೊಳ್ಳುವ ಕವಿತೆ ಕ್ರಮೇಣ ಬಿಚ್ಚಿಕೊಳ್ಳತ್ತಾ ಅರ್ಥವಿಸ್ತಾರ ಪಡೆಯುತ್ತಾ ಸಾಗುತ್ತದೆ. ಬಟ್ಟೆ ಎಂಬ ಪದಕ್ಕೆ ದಾರಿ ಎಂಬ ಅರ್ಥವೂ ಇರುವುದನ್ನೂ ನಾವಿಲ್ಲಿ ಗಮನಿಸಿದಾಗ ಕವಿಗಳ ಕಾವ್ಯ ಚಮತ್ಕಾರ ಓದುಗನ ಅರಿವಿಗೆ ದಕ್ಕುತ್ತಾ ಸಾಗುತ್ತದೆ. ಇಲ್ಲಿ ಉಲ್ಲೇಖಿಸಬಹುದಾದ ಮತ್ತೊಂದು ಗಮನಾರ್ಹ ಪದ್ಯವೆಂದರೆ ಸಂಕಲನದ ಶೀರ್ಷಿಕೆಯ ಪದ್ಯ ಅದು ಹೀಗಿದೆ ;
“ಹಸನಾದ ಹೊಲವಿದುವು
ವಿಷವ ಬಿತ್ತಲು
ಸ್ಥಳವಿಲ್ಲವಿಲ್ಲಿ,
ಕಲ್ಲು ಕಸ ಕಡ್ಡಿಯನು ತೆಗೆದು
ಕಳೆಗಳೆಲ್ಲವ ಕಿತ್ತು ಉತ್ತಿಹೆವು,
ದ್ವೇಷಬೀಜಗಳ ಬಸಿರಿಗೆ
ನೀಡೆವೆಂದೂ ಹಸಿನೆಲವನು.”
ಹೀಗೆ ಇಡೀ ವ್ಯವಸ್ಥೆಯನ್ನು ಅಥವಾ ಆರೋಗ್ಯಯುತ ಸಮಾಜವನ್ನು ಹಸನಾದ ಹೊಲಕ್ಕೆ ಉಪಮೆಯಾಗಿಸಿ ಇಲ್ಲಿ ದ್ವೇಷದ ಬೀಜಗಳ ಬಿತ್ತಲು ಬಿಡೆವು ಎಂದು ಘೋಷಿಸುತ್ತಾ ತಮ್ಮ ಗಟ್ಟಿಯಾದ ತಾತ್ವೀಕ ನಿಲುವನ್ನು ಸ್ಪಷ್ಟಪಡಿಸುತ್ತಾರೆ. ಪದ್ಯದ ಕೊನೆಯ ಸಾಲುಗಳಲ್ಲಿ,
“ಶರಣ ಬಂಧುಗಳ ಎನ್ನೆದೆಯ ಬೀಡಲಿ
ಶಾಂತಿ ಸೌಹಾರ್ದದ ಬಳ್ಳಿ ಚಿಗುರು
ಮನಕೆ ಮನ ಬೆಸೆವ ನಗುವ ಹಂಚುವೆವು
ಎಂಬ ಶರಣರ ಸಮಸಮಾಜದ ಕನಸನ್ನು ಮತ್ತು ನೆಮ್ಮದಿಗೆ ಕಾರಣವಾದ ಶಾಂತಿ ಸೌಹಾರ್ದತೆ ಮತ್ತು ಮನಸುಗಳನ್ನು ಬೆಸೆಯಲು ಕಾರಣವಾದ ನಗುವನ್ನು ಕಸಿಯಲು ಬಿಡುವುದಿಲ್ಲ ಎಂದಿಗೂ…ಎನ್ನುವ ಅಚಲ ನಿಲುವಿನೊಂದಿಗೆ ತಾರ್ಕಿಕ ಅಂತ್ಯವನ್ನು ತಳೆಯುತ್ತಾರೆ. ಇದು ಓದುಗ ಮಹಾಶಯರ ಮನ ತಣಿಸುವಲ್ಲಿ ಯಶಸ್ವಿಯಾದ ಪದ್ಯವಾಗಿ ನಿಲ್ಲುವುದರಲ್ಲಿ ಸಂಶಯವಿಲ್ಲ. ಪ್ರಸ್ತುತ ಪದ್ಯದಲ್ಲಿ ಕಾವ್ಯಕಟ್ಟುವಿಕೆಯ ಕುಸುರಿತನವೂ ಓದುಗನನ್ನು ಹಿಡಿದಿಟ್ಟುಕೊಳ್ಳುವುದು ಈ ಪದ್ಯದ ಗೆಲುವು.

‘ಇನ್ನು ಒಂದಾಗಿ ಹೋದವು’ ಎನ್ನುವ ಕವನದಲ್ಲಿ ಪ್ರಕೃತಿ ವಿಕೋಪಗೊಂಡರೆ ಏನೆಲ್ಲಾ ಅನಾಹುತ ಆಗಬಹುದು ಎಂಬುದನ್ನು ಮತ್ತು ಅದರ ಪರಿಣಾಮವನ್ನು ತುಂಬಾ ಮಾರ್ಮಿಕವಾಗಿ ಕಟ್ಟಿಕೊಡುತ್ತಾರೆ.
“ಅಲೆ ಸೊಕ್ಕಿದಮಲಿಗೆ
ಕೊಚ್ಚಿದವು ಬಂಗಲೆ ಗುಡಿಸಲು
ಗುಡಿ ಮಸೀದಿ ಇಗರ್ಜಿಗಳು
ದಿಕ್ಕಿಲ್ಲದೆ ಉರುಳಿ
ಒಂದಾಗಿ ತೇಲಿ ಹೋದವು”
ಈ ಸಂಕಲನದಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಮತ್ತೊಂದು ಅದ್ಭುತವಾದ ಕವಿತೆಯೆಂದರೆ ಕವಲೂರ ಕತ್ತಲು. ಇಲ್ಲಿ ವಸ್ತು ಮತ್ತು ಗಟ್ಟಿಯಾದ ಕಾವ್ಯಬಂಧ ಗಮನ ಸೆಳೆಯುತ್ತದೆ. ತನ್ನ ವಿಷಯ ಪ್ರತಿಪಾದನೆಯಿಂದ ಓದುಗನನ್ನು ಒಮ್ಮೆ ಬೆಚ್ಚಿಬೀಳಿಸುತ್ತದೆ ಮತ್ತು ಗಾಢವಾದ ವಿಷಾದಕ್ಕೆ ನೂಕಿ ಚಿಂತೆಗೆ ಹಚ್ಚುತ್ತದೆ. ಇಂಥಾ ಮತ್ತಷ್ಟು ರಚನೆಗಳು ಕವಿ ಅರವಿಂದ ಪಟೇಲ್ ಅವರ ಲೇಖನಿಯಿಂದ ಹೊಮ್ಮಲಿ ಎಂಬ ನಿರೀಕ್ಷೆ ಓದುಗರೊಟ್ಟಿಗೆ ನನ್ನದ್ದೂ. ಈ ಕವನದ ಸಾಲುಗಳನ್ನು ಗಮನಿಸಬಹುದದರೆ..

“ನೆನಪಾಗುವುದು ಕವಲೂರ ಕತ್ತಲು
ಕಾಡುವುದು ಕಾರ್ಗತ್ತಲ ಬೆತ್ತಲು..”
ಎಂದು ಆರಂಭಗೊಳ್ಳುವ ಕವಿತೆಯು ಅಮಾಯಕ ಹೆಣ್ಣುಮಕ್ಕಳ ಮೇಲೆ ಅವಿರತವಾಗಿ ನಡೆಯುತ್ತಿರುವ ಮಾನಭಂಗದ ಅಮಾನವೀಯ ಘಟನೆಯನ್ನು ಸಮರ್ಥವಾದ ಮತ್ತು ಗಟ್ಟಿಯಾದ ಉಪಮೆಗಳೊಂದಿಗೆ ಸಾಗಿ ಓದುಗನ ಮನದಲಿ ಗಾಢವಾದ ವಿಷಾದವೊಂದನ್ನು ಹುಟ್ಟು ಹಾಕುತ್ತದೆ. ಮುಂದಿನ ಸಾಲುಗಳು ಹೀಗಿವೆ,
ಊರಾಚೆ ಕೇರಿಯ ಬಾಲೆ ಹಸಿಮಣೆಯನೇರಿದ ದಿನವೇ
ಮುಸುಕು ವೇಷದಿ ಮಸಿಯೊರೆಸಿ
ಮದ್ದಾನೆಯಂತೆ ಮೆರೆದವನ ಪರಿಯು
ನೆನಪಾಗಿ ಮತ್ತೆ ಮತ್ತೆ ಕಾಡುವುದು
ಕವಲೂರ ಕತ್ತಲ ಕಾರ್ಗತ್ತಲ ಬೆತ್ತಲು.

ಪ್ರಸ್ತುತ ಸಂಕಲನದಲ್ಲಿ ಇಲ್ಲಿನ ಓದಿನಲ್ಲಿ ಗಮನ ಸೆಳೆದ ಸಾಲುಗಳು ಮೂಢತನ ಎಂಬ ಕವಿತೆಯಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಯಾವ ಅಂಜಿಕೆ ಸಂಕೋಚಗಳಿಲ್ಲದೆ ಪ್ರಶ್ನಿಸುವ ಸಾಲುಗಳನ್ನು ಈ ಕೆಳಗೆ ಗಮನಿಸಬಹುದು.

ಮಲಹೊರುವುದನೆ ಕರ್ಮವೆನ್ನುವ ಧರ್ಮ
ತಲೆ ಎತ್ತಿ ಮೆರೆದು ದಯೆಯ ಕೊಂದಾಗ
ಧರ್ಮದ ಮತ್ತೇ ಅಧಿಕಾರದ ಗಮ್ಮತ್ತೆಂದು
ನಂಬಿದ ಕಾಲಕ್ಕೆ ಕರುಳೆಂಬುದಿದೆಯೆ.
ಎಂದು ಪ್ರಶ್ನಿಸುವ ಮೂಲಕ ಸಮಾಜದ ಢಾಂಬಿಕತನಗಳಿಗೆ ಶೋಷಣೆಗಳಿಗೆ ಕನ್ನಡಿ ಹಿಡಿಯುತ್ತಾರೆ. ‘ಇನ್ನು ಗಡಿ ಇಲ್ಲದ ಬಾಳು’ ಎನ್ನುವ ಕವಿತೆಯಲ್ಲಿ ಗಡಿಗಳನ್ನು ನಿರ್ಮಿಸಿಕೊಂಡು ಬಾಳುವ ಮನುಷ್ಯನ ಸಂಕುಚಿತತೆಯನ್ನು
ಬೀಸು ಗಾಳಿಗೆಲ್ಲುಂಟು
ಗಡಿಮೇರೆ ಸೀಮೆಗಳು
ಓಡುವ ಮೋಡಗಳೆಂದಾದರೂ
ನಿಂತಿವೆಯೆ ಗಡಿಯ ಕಂಡು
ಎಂದು ಕೇಳುವುದರ ಮೂಲಕ ಬಯಲು ಮಾಡುತ್ತಾರೆ. ಮತ್ತೂ ಮುಂದುವರೆದು..
ಬಿರುಗಾಳಿ ಚಂಡಮಾರುತ
ಗಡಿಗೆಂದೂ ನಿಲ್ಲವು
ಸುಳಿವ ತಂಗಾಳಿಯೂ ಲೆಕ್ಕಿಸದು ಗಡಿಮೇರೆ ಗುರುತನು
ಎನ್ನುವ ಸಾಲುಗಳಂತೂ ಕಾವ್ಯಪ್ರೇಮಿಯ ಎದೆಯನ್ನೊಮ್ಮೆ ತಾಕದೆ ಬಿಡವು. ಇನ್ನು ಸಂಗಾತ ಕವನದಲ್ಲಿ ಮಸೀದಿ ಮಂದಿರ ಇಗರ್ಜಿಗಳ ಕಚ್ಚಾಟದಲಿ ಮುಳುಗಿರುವ ಧರ್ಮಾಂಧರಿಗೆ ದೇವರು ಪ್ರಕಟಗೊಳ್ಳುವ ಬಗೆಯನ್ನು ಅರ್ಥಪೂರ್ಣ ಮತ್ತು ಕಡುಸತ್ಯವನ್ನು ಸಾರುತ್ತಾರೆ.
ಮಂದಿರ ಮಸೀದಿ ಇಗರ್ಜಿಗಳ
ಕದಗಳನು ಬಿಡದೆ ಸುಟ್ಟು ಬೇಯಿಸಿದ ಪಾತ್ರೆಯಲಿ
ಬೆಂದ ಅನ್ನದಗುಳಲಿ
ಮಿಳಿತವಾಗಿವೆ ಬಗೆಬಗೆಯ ದೇವರು
ಎಂದು ಶುರುವಾಗುವ ಕವಿತೆಯು..

ಮಂದಿರ ಮಸೀದಿ ಇಗರ್ಜಿ ಬಾಗಿಲೊಳಗೆ
ದೇವನಿರದುದ ಅರಿತು
ತನುವಿನೊಳಗೆ ಕೂತ ತನ್ನಾತ್ಮ ದೇವನ ಸಂಗಾತ ಬಯಸಿ
ಸರ್ವರೊಳೊಂದಾಗಿ ಸರ್ವಸ್ವವಾದರು.
ಎನ್ನುವ ಅದ್ಭತವಾದ ಸಾಲುಗಳೊಂದಿಗೆ ಮಕ್ತಾಯಗೊಳ್ಳುತ್ತದೆ.

ಇಡೀ ಸಂಕಲನದ ತುಂಬಾ ಇಂಥಹ ಅನೇಕ ಸಾಲುಗಳು ಗಮನ ಸೆಳೆಯುತ್ತವೆ. ಹೀಗೆ ಉಲ್ಲೇಖ ಮಾಡಬಹುದಾದ ಕೆಲವೊಂದು ಸಾಲುಗಳು ಹೀಗಿವೆ;
ಎಲ್ಲ ಗಡಿಗಳ ಕಳಚಿ, ಹೂಬನವು ಉಸುರಿದರೆ
ಹಳಸಿದ ಬಂಧಗಳು ಬೆಸೆದು
ಮಸೆದ ಗಾಳಿಯಲಿ ಕಂಡೀತು
ವಿಶ್ವಮಾನವ ರೂಪ .
(ಗಡಿ ಇಲ್ಲದ ಬಾಳು)
ಮನುಜನೊಳಗೇ ದೇವ ಮನುಷ್ಯತ್ವವೇ ಧರ್ಮ
ಕಂಡರಿವಪಡೆದರೆ ಶಾಂತಿ ತೋಟವು ತೂಗೀತು
ಹೂಮನವು ಅರಳೀತು
(ಇದ್ದಾರೆ ಇರಲಿ ಬಿಡಿ)
ಹಸಿವು ಹೆಚ್ಚಾದಾಗ
ಅನ್ನದಗುಳಲಿ, ಕದ ಭೇದ ಹುಡುಕದೆ
ಹೊಟ್ಟೆ ಕದ ತೆರೆದು ತಿಲಕ ಫಲಕಗಳ ಮರೆತು
ಹಸಿನಾಜ್ಞೆಯಲಿ ಎಲ್ಲರೂ ಒಂದಾಗಿ
ತುಂಬಿಕೊಂಡರು, ಭೇಜಾನ್ ಹಸಿದವರು

(ಸಂಗಾತ)

ಕೌದಿಯೆಂಬುದೊಂದು ಸಂಸ್ಕ್ರತಿ
ಕೌದಿಯೆಂಬುದೊಂದು ಅಸ್ಮಿತೆ
ಹಲವಾರು ಪೀಳಿಗೆಗಳ
ಕಳ್ಳುಬಳ್ಳಿಗಳ ಬಳುವಳಿ
( ಕೌದಿಯೆಂಬ ಸಂಸ್ಕೃತಿ)

ಒಟ್ಟಾರೆಯಾಗಿ ಈ ದುರಿತ ಕಾಲದಲ್ಲಿ ಓದಿನ ಸುಖ ಕೊಡುವ ಒಂದು ಸದಭಿರುಚಿಯ ಕಾವ್ಯ ಸಂಕಲನವಿದು ಎಂಬುದಕ್ಕೆ ಎರಡು ಮಾತಿಲ್ಲ ಎನ್ನುವುದು ಇಲ್ಲಿನ ಕವಿತೆಗಳನ್ನು ಕಾವ್ಯದ ಒಟ್ಟು ಆಶಯ ಮತ್ತು ವೈಯಕ್ತಿಕ ಕಾವ್ಯ ಆಸ್ವಾದದ ಹಿನ್ನೆಲೆಗಳೆರಡಲ್ಲೂ ಪಟೇಲರ ಕಾವ್ಯ ವಸ್ತು, ವಿಷಯ, ಆಶಯಗಳ ದೃಷ್ಟಿಯಿಂದ ತನ್ನ ಗಟ್ಟಿತನವನ್ನು ಸಾಬೀತುಪಡಿಸಿಕೊಂಡಿತು. ಸಮಕಾಲೀನ ಕಾವ್ಯದ ಪಟ್ಟುಗಳ ಕಲಿಕೆ, ವಾಚ್ಯದ ವ್ಯಸನದಿಂದ ಮುಕ್ತವಾಗುವುದು, ತತ್‌ಕ್ಷಣದ ಸಂಗತಿಗಳಿಗೆ ಕಲಾತ್ಮಕ ಚೌಕಟ್ಟು ಬರುವವರೆಗು ಕಾಯುವುದು ಇಷ್ಟನ್ನು ತುಂಬಾ ಸೀರಿಯಸ್ ಆಗಿ ಕವಿ ಮಾಡುವುದಾದರೆ; ಅರವಿಂದ ಪಟೇಲರು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಮರೆಯದೆ ನಿಲ್ಲುತ್ತಾರೆ.

‍ಲೇಖಕರು avadhi

February 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Jyoti B Devanagaav

    ಕಾವ್ಯ ಸಂಕಲನದ ವಿಮರ್ಶೆ ತುಂಬಾ ಚೆನ್ನಾಗಿ ಮೂಡಿಬಂದಿದೆ

    ಪ್ರತಿಕ್ರಿಯೆ
  2. ಸಂಗೀತ ರವಿರಾಜ್

    ಕವಿತೆಗಳ ಕುರಿತು ಚೆನ್ನಾಗಿ ಗ್ರಹಿಸಿ ಬರೆದಿದ್ದೀರ sir
    ಅಭಿನಂದನೆಗಳು ಇಬ್ಬರಿಗೂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: